ದಲಿತ ಚಳವಳಿಯ ಗೀತೆಗಳಾಗಿವೆ…

ಸಿ ಎಸ್ ಭೀಮರಾಯ

ಸಿದ್ಧಲಿಂಗಯ್ಯವರನ್ನು ನಾನು ಕಳೆದ ಇಪ್ಪತ್ತು ವರ್ಷಗಳಿಂದ ಬಲ್ಲೆ. ಅವರ ಪ್ರೀತಿ, ಸ್ನೇಹ, ವಿಶ್ವಾಸಗಳಿಗಾಗಿ ನನ್ನ ಮನಸ್ಸು ಹಾತೊರೆಯುತ್ತಿತ್ತು. ನಾನು ಬೆಂಗಳೂರಿಗೆ ಹೋದಾಗ ಅವರನ್ನು ಭೇಟಿಯಾಗುತ್ತಿದ್ದೆ. ಅವರೊಂದಿಗೆ ಸಾಹಿತ್ಯದ ಕುರಿತು ನಾನು ಚರ್ಚಿಸುತ್ತಿದ್ದೆ. ನನ್ನ ಬರವಣಿಗೆಯ ಬಗ್ಗೆ ಅವರಿಗೆ ತುಂಬಾ ಪ್ರೀತಿಯಿತ್ತು. ನಾನು ಅವರ ಅನೇಕ ಕೃತಿಗಳನ್ನು ವಿಮರ್ಶಿಸಿದ್ದೇನೆ. ಆದರೆ ಇತ್ತೀಚೆಗೆ ನಮ್ಮಿಬ್ಬರ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದವು. ಅವೆಲ್ಲ ಈಗ ಬರಿಯ ನೆನಪು. ಎಪ್ಪತ್ತರ ದಶಕದಿಂದ ೨೦೧೦ರವರೆಗೆ ಅಸಾಧಾರಣ ಜನಪ್ರಿಯತೆಯನ್ನು ಗಳಿಸಿ, ಅನಂತರ ತೀವ್ರ ಟೀಕೆಗೆ ಗುರಿಯಾದ ಕವಿ ಸಿದ್ಧಲಿಂಗಯ್ಯ.

‘ಹೊಲೆ ಮಾದಿಗರ ಹಾಡು’ ಕವನ ಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ ‘ದಲಿತ ಕವಿ’ ಡಾ. ಸಿದ್ಧಲಿಂಗಯ್ಯ. ಇದು ಕನ್ನಡ ಕಾವ್ಯ ಕ್ಷೇತ್ರಕ್ಕೆ ಶಾಕ್ ನೀಡಿದಂತಹ ಕವನಸಂಕಲನ. ಅವರು ಈ ಕವನಸಂಕಲನದ ಮೂಲಕ ಸಾಹಿತ್ಯಿಕ ಮತ್ತು ಸಾಮಾಜಿಕ ವಲಯಕ್ಕೆ ಹೊಸ ಆಲೋಚನೆ ಹಾಗೂ ಅಭಿವ್ಯಕ್ತಿಯನ್ನು ನೀಡಿದರು.

ಸಿದ್ಧಲಿಂಗಯ್ಯನವರು ನೊಂದವರನ್ನು ಕಾವ್ಯದ ವಸ್ತುವಾಗಿಸುವ ಜನಪರ ಆಶಯದಿಂದ ಜನಪದ ಛಂದಸ್ಸಿನಲ್ಲಿ ಕಾವ್ಯ ಕಟ್ಟಿದ್ದು ಗಮನಾರ್ಹ. ಅವರು ದಲಿತ ಹೋರಾಟ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಾಮಾಜಿಕ ಸಮಾನತೆಗಾಗಿ ಎತ್ತರದ ದನಿಯಲ್ಲಿ ಕಾವ್ಯವನ್ನು ಹಾಡನ್ನಾಗಿ ಮಾರ್ಪಡಿಸಿದರು.

೧೯೭೫ರಿಂದ ಈಚೆಗೆ ದಲಿತರು ಹೊಸ ಪ್ರಜ್ಞಾವಂತ ಜನಾಂಗವಾಗಿ ಕರ್ನಾಟಕದಲ್ಲಿ ಸಿದ್ಧಲಿಂಗಯ್ಯನವರ ಕಾವ್ಯದ ಎರಕದಲ್ಲಿ ರೂಪುಗೊಂಡರು. ದಲಿತರ ಮೆರವಣ ಗೆ ಬೀದರ್‌ನಿಂದ ಕೋಲಾರದವರೆಗೆ ಯಾವುದೇ ಮೂಲೆಯಲ್ಲಿ ನಡೆದರೂ ಅಲ್ಲಿ ಸಿದ್ಧಲಿಂಗಯ್ಯನವರ ಹಾಡುಗಳು ಸಹಜವಾಗಿ ಇಂದಿಗೂ ಕೇಳಿಬರುತ್ತವೆ. ಇದು ಸಿದ್ಧಲಿಂಗಯ್ಯನವರ ಸಾರ್ವಜನಿಕ ಕಾವ್ಯದ ಅಂತಿಮ ಯಶಸ್ಸು.

ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ೦೩-೦೨-೧೯೫೪ರಂದು ಜನಿಸಿದರು. ತಂದೆ ದೇವಯ್ಯ, ತಾಯಿ ವೆಂಕಟಮ್ಮ. ಬಡತನದ ಕುಟುಂಬದಲ್ಲಿ ಜನಿಸಿದ ಸಿದ್ಧಲಿಂಗಯ್ಯ ವಿದ್ಯಾರ್ಥಿ ದೆಸೆಯಲ್ಲಿಯೇ ಕವಿತೆ ರಚನೆ, ಭಾಷಣ ಮಾಡುವುದು ಅವರ ಹವ್ಯಾಸವಾಗಿತ್ತು. ಅವರು ಮಂಚನಬೆಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಪ್ರೌಢಶಾಲಾ ಶಿಕ್ಷಣ, ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕನ್ನಡ ಉಪನ್ಯಾಸಕರಾಗಿ ನೇಮಕವಾದರು. ಸಿದ್ಧಲಿಂಗಯ್ಯನವರು ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಲೇ ಪಿಎಚ್. ಡಿ. ಪದವಿ ಪಡೆದರು.

ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ೧೯೮೪ರಲ್ಲಿ ಅಂತರ್‌ಜಾತಿ ವಿವಾಹವಾಗಿರುವ ಸಿದ್ಧಲಿಂಗಯ್ಯನವರ ಪತ್ನಿ ಸಿ. ರಮಾಕುಮಾರಿ, ಮಗಳು ಡಾ. ಮಾನಸ, ಮಗ ಗೌತಮ್.

ಡಾ. ಸಿದ್ಧಲಿಂಗಯ್ಯನವರು ಬುದ್ಧ, ಅಂಬೇಡ್ಕರ್, ಬಸವಣ್ಣ, ಪೆರಿಯಾರ್, ಕಾರ್ಲ್ಮಾರ್ಕ್ಸ್, ಲೋಹಿಯಾ, ಕುವೆಂಪು, ಶಿವರುದ್ರಪ್ಪ ಮುಂತಾದ ದಾರ್ಶನಿಕರೆಲ್ಲರ ತತ್ವ-ಚಿಂತನೆಗಳಿಂದ ಆಕರ್ಷಿತರಾಗಿದ್ದರು. ಅವರು ಕರ್ನಾಟಕದ ಎಲ್ಲ ಪ್ರಗತಿಪರ ಚಳವಳಿಗಳೊಂದಿಗೆ ಆಪ್ತವಾಗಿ ಗುರುತಿಸಿಕೊಂಡಿದ್ದರು. ತಮ್ಮ ಬದುಕು, ಬರಹ, ಆಲೋಚನೆ ಮತ್ತು ಗ್ರಹಿಕೆಗಳಲ್ಲಿ ಅನನ್ಯತೆಯನ್ನು ಪಡೆದಿದ್ದರು.

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಪ್ರಜಾಸತ್ತಾತ್ಮಕ ನೀತಿಯನ್ನು ಆಧರಿಸಿದ ಹೊಚ್ಚ ಹೊಸ ಸಾಮಾಜಿಕ-ಸಾಂಸ್ಕೃತಿಕ ಬದುಕಿನ ಹಂಬಲವು ಅವರ ಪ್ರಧಾನ ಕಾಳಜಿಯಾಗಿತ್ತು. ದಲಿತ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕರಲ್ಲಿ ಪ್ರೊ. ಸಿದ್ಧಲಿಂಗಯ್ಯ ಅವರು ಒಬ್ಬರು. ೧೯೭೪ರಲ್ಲಿ ಪ್ರೊ. ಬಿ. ಕೃಷ್ಣಪ್ಪ, ದೇವನೂರು ಮಹಾದೇವ ಮತ್ತು ಕೆ. ಬಿ. ಸಿದ್ದಯ್ಯ ಅವರೊಂದಿಗೆ ದಲಿತ ಸಂಘರ್ಷ ಸಮಿತಿಯ ಸಹ-ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಇವರು ಕಳೆದ ನಾಲ್ಕು ದಶಕಗಳಿಂದಲೂ ಅಧಿಕ ಕ್ರಿಯಾಶೀಲರಾಗಿದ್ದರು.

ಅಪಾರ ಅಂತಃಕರಣದ ಕವಿಯಾಗಿ, ಜೀವನಪ್ರೀತಿಯ ನಾಟಕಕಾರರಾಗಿ, ಅನನ್ಯ ಸಾಮಾಜಿಕ ಕಾಳಜಿಯ ವಿಮರ್ಶಕ ಮತ್ತು ಜಾನಪದ ತಜ್ಞರಾಗಿ ಸೃಜನಶೀಲತೆಯ ಬಹುಮುಖೀ ಆಯಾಮಗಳಲ್ಲಿ ತೊಡಗಿಸಿಕೊಂಡು ಬಂದಿದ್ದರು. ದಲಿತ ಬಂಡಾಯ ಸಾಹಿತ್ಯದ ಪ್ರಮುಖ ಕವಿ-ಲೇಖಕರಲ್ಲಿ ಒಬ್ಬರಾದ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ.

ಕಾವ್ಯ: ‘ಹೊಲೆ ಮಾದಿಗರ ಹಾಡು’ (೧೯೭೫), ‘ಸಾವಿರಾರು ನದಿಗಳು’ (೧೯೭೯), ‘ಕಪ್ಪು ಕಾಡಿನ ಕಾಡು’ (೧೯೮೩), ‘ಆಯ್ದ ಕವಿತೆಗಳು’ (೧೯೯೭), ‘ಮೆರವಣಿಗೆ’ (೨೦೦೦), ‘ಅಲ್ಲೆ ಕುಂತವರೆ’ (೨೦೦೩), ‘ನನ್ನ ಜನಗಳು ಮತ್ತು ಇತರ ಕವಿತೆಗಳು’ (೨೦೦೫) ಸಿದ್ಧಲಿಂಗಯ್ಯನವರ ಕವನಸಂಕಲನಗಳು. ಅವರ ಈ ಕೃತಿಗಳು ನವ್ಯ ಸಾಹಿತ್ಯದ ಕೊನೆಯಲ್ಲಿ ಹೊಸ ತಿರುವಿನ ಸೂಚನೆಗಳಾಗಿ ಕಂಡುಬಂದವು.

ದಲಿತ-ಬಂಡಾಯ ಕಾವ್ಯ ಚಿಗುರೊಡೆಯುವ ಸಂದರ್ಭದಲ್ಲಿ ಹೊರಬಂದ ಸಿದ್ಧಲಿಂಗಯ್ಯನವರ ಕವನಸಂಕಲನಗಳು ದಲಿತ ಬಂಡಾಯ ಕಾವ್ಯದ ಲಕ್ಷಣಗಳನ್ನು ಪಡೆದುಕೊಂಡೇ ಸ್ಫೋಟವಾಗಿರುವುದು ಕಂಡುಬರುತ್ತದೆ. ಅವರ ಕಾವ್ಯದಲ್ಲಿ ಸಿಟ್ಟು, ವ್ಯಂಗ್ಯ, ದಿಕ್ಕಾರ, ನಿಟ್ಟುಸಿರು, ವಿಡಂಬನೆ,ಆರ್ಭಟ ಮತ್ತು ಆಕ್ರೋಶಗಳಿವೆ. ‘ಹೊಲೆ ಮಾದಿಗರ ಹಾಡು’ (೧೯೭೫) ಸಂಕಲನದಿಂದ ‘ಮೆರವಣಿಗೆ’ (೨೦೦೦) ಕವನಸಂಕಲನಕ್ಕೆ ಬರುವಷ್ಟರಲ್ಲೆ ಸಿದ್ಧಲಿಂಗಯ್ಯನವರಲ್ಲಿ ಹಲವು ಬದಲಾವಣೆಗಳಾಗಿವೆ.

ಪಿಎಚ್.ಡಿ. ಸಂಶೋಧನಾ ಪ್ರಬಂಧ: ‘ಗ್ರಾಮ ದೇವತೆಗಳು’ (೧೯೯೭).
ನಾಟಕ: ‘ಪಂಚಮ’ (೧೯೮೦), ‘ನೆಲಸಮ’ (೧೯೮೦), ‘ಏಕಲವ್ಯ’ (೧೯೮೬).
ವಿಮರ್ಶೆ: ‘ಹಕ್ಕಿನೋಟ’ (೧೯೯೦), ‘ರಸಗಳಿಗೆಗಳು’ (೧೯೯೬), ‘ಎಡಬಲ’(೨೦೦೦), ‘ಉರಿಕಂಡಾಯ’(೨೦೦೯).
ಪ್ರಬಂಧ: ‘ಅವತಾರಗಳು’ (೧೯೯೧), ‘ಸದನದಲ್ಲಿ ಸಿದ್ಧಲಿಂಗಯ್ಯ ಭಾಗ-೧’ (೧೯೯೬), ‘ಸದನದಲ್ಲಿ ಸಿದ್ಧಲಿಂಗಯ್ಯ ಭಾಗ-೨’ (೨೦೦೪), ‘ಜನಸಂಸ್ಕೃತಿ’ (೨೦೦೭) ಕೃತಿಗಳಲ್ಲಿ ತಮ್ಮ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಬದುಕಿನ ಅನುಭವಗಳನ್ನು ಹೇಳಿಕೊಂಡಿದ್ದಾರೆ.
ಆತ್ಮಕಥೆ: ‘ಊರು ಕೇರಿ -ಭಾಗ-೧’ (೧೯೯೭), ‘ಊರು ಕೇರಿ-ಭಾಗ-೨’(೨೦೦೬), ‘ಊರು ಕೇರಿ ಭಾಗ-೩’ (೨೦೧೪). ಅವರು ಈ ಮೂರು ಆತ್ಮಕಥೆಗಳಲ್ಲಿ ತಮ್ಮ ವಿಶಿಷ್ಟ ಅನುಭವಗಳನ್ನು ದಾಖಲಿಸಿದ್ದಾರೆ.

ಈ ಕೃತಿಗಳು ಸಿಟ್ಟು, ಹಾಸ್ಯ ಮತ್ತು ವ್ಯಂಗ್ಯದ ಬಳಕೆಗಾಗಿ ದೇಶದ ದಲಿತ ಆತ್ಮಚರಿತ್ರೆಗಳ ನಿಯಮದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿವೆ. ಅವರು ತಮ್ಮ ಬದುಕಿನ ನೋವು-ನಲಿವುಗಳನ್ನು ಪ್ರಾಮಾಣ ಕವಾಗಿ ಮತ್ತು ಕಲಾತ್ಮಕವಾಗಿ ಕಟ್ಟಿಕೊಟ್ಟು ಕನ್ನಡದಲ್ಲಿ ದಲಿತ ಸಾಹಿತ್ಯದ ಆತ್ಮಚರಿತ್ರೆ ಪ್ರಕಾರವನ್ನು ಬೆಳೆಸಿದ್ದಾರೆ. ಸಿದ್ಧಲಿಂಗಯ್ಯನವರ ಕಾವ್ಯವನ್ನು ಹೆಚ್ಚು ಇಷ್ಪಪಡುವ ನಾನು ಅವರ ಕೆಲವು ಕವಿತೆಗಳ ಸಾಲುಗಳನ್ನು ಈ ಸಂದರ್ಭದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಗುಡಿಸಲುಗಳು ಗುಡುಗುತಿವೆ ಬಂಗಲೆಗಳು ನಡುಗುತಿವೆ
ಎಲ್ಲೆಲ್ಲಿಯೂ ಮೊಳಗುತ್ತಿದೆ ನವಕ್ರಾಂತಿಯ ಗಾನ
(ಕ್ರಾಂತಿಪದ)

ಕಾಳ ನೀಲ ಬೆಳ್ಳಿ ಗುರುವ ಚೆನಿಯ
ಚೋಮನ ಮಕ್ಕಳು ನಾವುಗಳು
(ಚೋಮನ ಮಕ್ಕಳ ಹಾಡು)

ಪಾರ್ಲಿಮೆಂಟಿನ ಕುರ್ಚಿಯ ಮೇಲೆ
ವರ್ಷಗಟ್ಟಲೆ ಚರ್ಚೆಗೆ ಕೂತು
ಬಡವರ ಬೆವರು ರಕ್ತವ ಕುಡಿದು
ಏಳಲೆ ಇಲ್ಲ ಸ್ವಾತಂತ್ರ್ಯ
ನಲವತ್ತೇಳರ ಸಾತಂತ್ರ್ಯ
(ನಲವತ್ತೇಳರ ಸ್ವಾತಂತ್ರ್ಯ)

ಎಲ್ಲಿದ್ರೋ ಅವರು ಯಂಗಿದ್ದರೊ ಅವರು
ಎಚ್ಚೆತ್ತ ಸಿಂಹಗಳು ನನ್ನ ಜನರು
(ಕೆಂಪು ಸೂರ್ಯ)

ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು
ವದೆಸಿಕೊಂಡು ವರಗಿದೋರು ನನ್ನ ಜನಗಳು
(ನನ್ನ ಜನಗಳು)
ಸಿದ್ಧಲಿಂಗಯ್ಯನವರ ಹಲವಾರು ಕವಿತೆಗಳು ಕರ್ನಾಟಕದ ದಲಿತ ಚಳವಳಿಯ ಗೀತೆಗಳಾಗಿವೆ. ಅವರದು ವಿಶಿಷ್ಟವಾದ ವ್ಯಕ್ತಿತ್ವ. ವ್ಯವಸ್ಥೆಯ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯದ ಪ್ರಶ್ನೆಗಳು ಸಿದ್ಧಲಿಂಗಯ್ಯನವರ ಬರವಣ ಗೆಯ ಆದ್ಯತೆಗಳಾಗಿವೆ.

ಡಾ. ಸಿದ್ಧಲಿಂಗಯ್ಯನವರ ಸಾಹಿತ್ಯಿಕ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಉತ್ತಮ ಚಲನಚಿತ್ರಗೀತ ರಚನೆಗಾಗಿ ಕರ್ನಾಟಕ ಸರಕಾರ ಪ್ರಶಸ್ತಿ, ಡಾ. ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಶ್ರವಣಬೆಳಗೋಳದಲ್ಲಿ ಜರುಗಿದ ಅಖಿಲ ಭಾರತ ೮೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷತೆ, ಎರಡು ಬಾರಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯತ್ವ, ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ –ಮೊದಲಾದ ಪ್ರಶಸ್ತಿ, ಸನ್ಮಾನ ಮತ್ತು ಗೌರವಗಳು ಸಂದಿವೆ. ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಅವರು ಹುಡುಕಿಹೋದವರಲ್ಲ. ಆದರೆ ಅವು ಅವರನ್ನು ಹುಡುಕಿ ಬಂದಿವೆ.

‍ಲೇಖಕರು Avadhi

June 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: