ಕವೀಶ್ವರರ ‘ಗೋರಿಯೊಳಗಿನ ಉಸಿರು’

ಅಶ್ಫಾಕ್ ಪೀರಜಾದೆ

‘ವಯಸ್ಸಾಗಿದೆ ಈಗ ಅವ್ವಳ ಜೊತೆ ತಾನೊಬ್ಬನೆ ಏಕಾಂತ/
ಮೊಮ್ಮಕ್ಕಳ ಕಂಡಾಗಲೆಲ್ಲ ಅಪ್ಪಿ ಮುದ್ದಿಸುತ್ತಿದ್ದಾನೆ ನನ್ನಪ್ಪ//…

ಈಶ್ವರನ ಅನುಗ್ರಹದಿಂದ ಇಂದಿಗೂ ಸಧೃಢ ಸ್ವಾಭಿಮಾನಿ/
ಭೇಟಿಯಾದಾಗಲೊಮ್ಮೆ ಅದೇ ಪ್ರೀತಿಯೊರತೆಯಲ್ಲಿ ಎತ್ತಿಕೊಳ್ಳುತ್ತಿದ್ದಾನೆ ನನ್ನಪ್ಪ//’

ಎಂದು ಕಳೆದ ವರ್ಷವಷ್ಟೆ ತನ್ನ ತಂದೆಯ ಬಗ್ಗೆ ಅತ್ಯಂತ ಆಪ್ತವಾಗಿ ಆರ್ದ್ರವಾಗಿ ಗಝಲ್ ಬರೆದುಕೊಂಡ ಕವಿ ಈಶ್ವರ ಮಮದಾಪೂರ ಅವರು ಇತ್ತಿಚಿಗಷ್ಟೆ ಕೊರೊನಾ ಮಹಾ ಮಾರಿಯಿಂದಾಗಿ ತನ್ನ ತಂದೆಯನ್ನು ಕಳೆದುಕೊಂಡು ರೋಧಿಸುತ್ತಿರುವುದು ಅದೆಂಥ ದುರಂತ.! ಕೊರೊನಾದ ಈ ವಿಷಮ ಕಾಲ ನಮ್ಮ ಬಂಧು ಬಳಗವನ್ನು ಸ್ನೇಹಿತರನ್ನು ದೂರ ಮಾಡಿ ಅಟ್ಟಹಾಸ ಮೆರೆಯುತ್ತಿರುವುದು. ಸಾವಿನ ಸಮಯದಲ್ಲಿ ಕೂಡ ಆತ್ಮೀಯರ ಒಂದು ಕೊನೆದರ್ಶನ ಕೂಡ ಲಭ್ಯವಾಗದಿರುವುದು ಮನುಷ್ಯ ಬದುಕಿನ ಒಂದು ಘೋರ ದುರಂತ.

ಇದೇ ಕೊರೊನಾ ಈಗ ಕವೀಶ್ವರರ ತಂದೆಯನ್ನು ಕಸಿದುಕೊಂಡು ಕೊನೆಯವರೆಗೂ ಬಾಳ ಹಂಚಿಕೊಂಡ ಅವ್ವಳನ್ನು, ಪ್ರೀತಿಸುವ ಮೊಮ್ಮಕ್ಕಳನ್ನು ಅಪಾರ ಬಂಧು ಬಳಗವನ್ನು ಬಿಟ್ಟು ಹೋಗಿರುವುದು ತುಂಬಾ ನೋವಿನ ಸಂಗತಿಯೇ ಆದರೂ ಕಾಲದ ನಿರ್ಣಯದ ಮುಂದೆ ಯಾರದು ಏನೂ ನಡೆಯದು ಎನ್ನುವ ಸತ್ಯದ ಅರಿವು ಕವಿ ಹೃದಯಕೂ ಇರುವುದರಿಂದ ಕಾಲಾಂತರದಲ್ಲಿ ಈ ನೋವು ಹೆಪ್ಪುಗಟ್ಟಿ ಇನ್ನಷ್ಟು ಗಝಲ್ ಗಳ ಕಲರವಕ್ಕೆ ಕಾರವಾಣಗಲಿ ಎಂದು ಹಾರೈಸೋಣ. ಏಕೆಂದರೆ ಕಾವ್ಯ ಕಾಲದ ಆಗು ಹೋಗುಗಳಿಗೆ ತಲ್ಲಣಗಳಿಗೆ  ಮುಖಾಮುಖಿಯಾಗಿ ಸ್ಪಂದಿಸದೆ ಇದ್ದರೆ ಅದು ಕೇವಲ ಕವಿಯ ಬದುಕಿನ ಆಲಾಪನೆಯಾಗಿ ಉಳಿದು ವಿಶಾಲವಾದ ಸಾಮಾಜಿಕ ಆಯಾಮವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗುತ್ತದೆ.

ಗಝಲ್ ನ ಮೂಲ ಅರ್ಥ ನೋಡುವುದಾದರೆ ಗಝಲ್ ಅಂದರೆ ಹೆಂಗಸರೋಡನೆ ಸಂಭಾಷಿಸುವುದು ಅಥವಾ ಪಿಸು ಮಾತಾಡುವುದು ಆಗಿದೆ. ಆದರೆ ಕವಿ ಸಮಾಜದ ಜ್ವಲಂತ ಸಮಸ್ಯೆಗಳಿಗೆ, ಆಗು ಹೋಗುಗಳಿಗೆ ಸ್ಪಂದಿಸದೆ ಹೋದರೆ ಅದು ಕೇವಲ ಪ್ರೀತಿ ಪ್ರೇಮ ವಿರಹ ಕಾಮಗಳ ವಿಪ್ರಲಂಭವಾಗಿ ಉಳಿದು ಬಿಡುವ ಅಪಾಯವಿದೆ. ಹೀಗಾಗಿ ಇತ್ತೀಚಿನ ಕನ್ನಡ ಗಝಲ್ ಲೋಕ ಸಮಾಜದ ಹೊರಳು ದಾರಿಯಲ್ಲಿದೆ ಎಂದು ಹೇಳಬಹುದು. ಕನ್ನಡದ ಹೊಸ ತಲೆಮಾರಿನ ಗಝಲ್ಕಾರರು ಸಮಾಜ ಮುಖಿಯಾಗಿ ಗಝಲ್ ಒಂದು ವಿಶಾಲವಾದ ಅರ್ಥವ್ಯಾಪ್ತಿಯನ್ನು ಕಟ್ಟಿ ಕೊಡುತ್ತಿರುವುದು ಸಂತಸದ ಸಂಗತಿ.

ಈ ಹಿನ್ನೆಲೆಯಲ್ಲಿ ಈಶ್ವರ ಅವರ ‘ನನ್ನೊಳಗಿನ ಉಸಿರು’ ನೋಡಿದಾಗ ಕವೀಶ್ವರ ಎಂಬ ತಖಲ್ಲುಸ್ (ಕಾವ್ಯನಾಮ)ದಿಂದ ಬರೆಯುತ್ತಿರುವ ಗಝಲ್ಕಾರರಾದ ಈಶ್ವರ ಮಮದಾಪುರ ಅವರು ಸಮಾಜಿಕ ಸಮಸ್ಯೆಗಳಿಗೆ ಮುಖಾ ಮುಖಿಯಾಗಿ ಗಝಲ್ ರಚಿಸುವುದರ ಮೂಲಕ ಸಾಮಾಜಿಕ ಕಳಕಳಿಯ ಕವಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಇದಕ್ಕೆ ಪೂರಕವಾಗಿ ಬೆನ್ನುಡಿ ಬರೆದು ಬೆನ್ನು ತಟ್ಟಿರುವ ಹಿರಿಯ ಕವಿ ಡಾ. ಸರಜೂ ಕಾಟ್ಕರ್ ಅವರು ‘ಮಮದಾಪೂರರ ಗಝಲ್ ಯಾಕೆ ವಿಶಿಷ್ಟವಾಗುತ್ತವೆ ಎಂದರೆ ಅವರು ಬರೀ ಪ್ರೀತಿ, ಪ್ರೇಮ, ವಿರಹ, ಸಾಕಿ, ಚಂದ್ರ, ಚಕೋರಿಗಳನ್ನು ಮಾತ್ರ ತಮ್ಮ ಗಝಲ್ ಗಳಲ್ಲಿ ತರುವುದಿಲ್ಲ.

ಸಾಮಾಜಿಕ ಅನಿಷ್ಟಗಳಾದ ಬಡತನ, ಪರಿಸರ ಮಾಲಿನ್ಯ, ನಗರೀಕರಣ, ಜಾತಿಮತ, ವರ್ಣಭೇದ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆಯೂ ಗಜಲ್ ಮೂಲಕ ಧ್ವನಿ ಎತ್ತಿದ್ದಾರೆ. ಅವರ ಕಾವ್ಯವು ನೊಂದವರ ಬೆಂದವರ ಧ್ವನಿಯಾಗಿ ಹೊರ ಹೊಮ್ಮಿದೆ.’ ಎಂದು ಹೇಳುತ್ತಾರೆ. ಅದರಂತೆ ಅವರ ಗಝಲ್ ಗಳು ಪ್ರಸ್ತುತ ಕೊರೊನಾ ಕಾಲದ ದುರಂತದ ಕ್ಷಣಗಳಿಗೆ ತಲ್ಲಣಗಳಿಗೆ ಕೂಡ ನೋವಿನ  ಧ್ವನಿಯಾಗಿರುವುದನ್ನು ನಾವು ಗಮನಿಬಹುದಾಗಿದೆ. ‘ಕಾಣದ ವೈರಾಣು ಸಂಬಂಧಗಳನ್ನೂ ಕೊಚ್ಚಿ ಹಾಕಿದೆ ಕವೀಶ್ವರ/ ಶವಕ್ಕೆ ಸಂಸ್ಕಾರ ನೀಡದೆ ದಫನ್ ಮಾಡುವಂತಾಯಿತಲ್ಲ… ಎಂದು ಬೇಸರ ವ್ಯಕ್ತ ಪಡಿಸುತ್ತಾರೆ.

ದುಡಿಯುವ ವರ್ಗಕ್ಕೆ ಆಸರೆಯೇ ಇಲ್ಲದಂತಾಗಿದೆ/ಮಾಲೀಕರು ಹೊರ ದಬ್ಬಿದಾಗ ನೆಲೆಗಳು ಕುಸಿಯುತ್ತಿವೆ//ಸಾವಿರಾರು ಕಿಲೋಮಿಟರಗಳ ಪಯಣದ ಅವಿಶ್ರಾಂತ ನಡಿಗೆ/ ದಾರಿಯಲ್ಲಿ ಸತ್ತರೆಷ್ಟೋ ಸಂಜೀವಿನಿಯಿಲ್ಲದೆ ದೇಹಗಳು ಕುಸಿಯುತ್ತವೆ// ಎಂದು ಕೊರೊನಾ ಮಹಾಮಾರಿ ಸೃಷ್ಟಿಸಿರುವ ಆವಾಂತರ ಅರಾಜಕತೆಯನ್ನು ತುಂಬಾ ನೋವಿನಿಂದ ಹೃದ್ಯವಾಗಿ ಕಣ್ಣಿಗೆ ಕಟ್ಟುವಂತೆ ಕಟ್ಟಿ ಕೊಡುತ್ತಾರೆ. ಮಮದಾಪೂರರ ಗಝಲ್ ಗಳನ್ನು ಮುಖ್ಯವಾಗಿ ಅವರ ಆತ್ಮಶೋಧನೆಯಲ್ಲಿ ಹುಟ್ಟಿರುವುದನ್ನು ಗುರುತಿಸುವಂತೆ ಸಮಾಜಕ್ಕೆ ಎಚ್ಚರಿಸುವ, ಪ್ರಶ್ನಿಸುವ ಒಂದು ಮನೋ ಭೂಮಿಕೆಯಲ್ಲಿ ಹುಟ್ಟಿದ ಒಂದು ಸವಾಲಾಗಿಯೂ ನೋಡಬಹುದು.

‘ದೇವ ದೇವತೆಗಳು ನನ್ನಲ್ಲಿಹರು ಎನ್ನುವಿಯಲ್ಲ ನೀನು/ಮತ್ತೇಕೆ ಮಾರುವೆ ಹಣದಾಸೆಗೆ ಜೀವ ಸವೆಸಿದ್ದೇನೆ ನಿಮಗೆ//’ ಎಂದು ಒಂದು ಕಡೆ ಗೋವನ್ನು ಪೂಜಿಸುವ ಇನ್ನೊಂದು ಕಡೆ ಅದು ಅನುಪಯುಕ್ತವಾದಾಗ ಮಾರುವ ಸ್ವಾರ್ಥಿ ಮನುಷ್ಯನ ಇಬ್ಬಗೆಯ ನೀತಿಯನ್ನು ಪ್ರಶ್ನಿಸುವ ಧೈರ್ಯ ತೋರುತ್ತಾರೆ.ಅದೇ ರೀತಿ ‘ಬೆಟ್ಟದೊಡಲ ಸೀಳಿಕೊಂಡ ಹೆಬ್ಬಾವಿನ ದಾರಿಯಾಗಿದೆ/ ಅದೆಷ್ಟು ಗಿಡ ಮರ ನುಂಗಿದೆ ಬಕಾಸುರನ ದಾರಿಯಾಗಿದೆ//’ ಎಂದು ನಾಗರಿಕತೆಯ ಹೆಸರಿನಲ್ಲಿ ಪರಿಸರ ನಾಶ ಮಾಡುವುದನ್ನು ಬಲವಾಗಿ ಖಂಡಿಸುತ್ತಾರೆ. ‘ಮರಳನ್ನು ನೆಡದೆ ನೆರಳನ್ನು ಬಯಸುವ ಸ್ವಾರ್ಥಿಗಳು ನಾವು/ ಉಸಿರು ನೀಡುವ ಮರವನ್ನು ಆರಾಧಿಸುವುದಿಲ್ಲ ಏಕೆ ಮಿತ್ರ’ ಎಂದು ಪ್ರಶ್ನಿಸುತ್ತಾರೆ.

ಹಾಗೆಯೇ ಜಾತಿ ಕುಲಗೋತ್ರಗಳ ವಿರುದ್ಧ ಸಿಡಿದೇಳುವ ಗಝಲ್ ಕೂಡ ಮಮದಾಪೂರರ ಜ್ಯಾತ್ಯಾತೀತ ಮನಸ್ಸಿನ ಆತಂಕವಾಗಿ ಮನಗಾಣಬಹುದು. ‘ಕುಲ ಬಣ್ಣಗಳು ಶತಮಾನದ ಗುಲಾಮಗಿರಿಯಲ್ಲಿ ನರಳುತ್ತಿರುವುದೇಕೆ/ ಸಾಕು ಮಾಡಿ ಇನ್ನಾದರೂ ವರ್ಣ ಮುಸುಕಿನ ಗುದ್ದಾಟವನ್ನು//’ ಎಂದು ಆತಂಕ ವ್ಯಕ್ತ ಪಡಿಸುವ ಕವಿ. ‘ಹಸಿವಿಗೆ ಬಡತನಕ್ಕೆ ಜಾತಿಯ ಹಂಗು ಇದೆಯೆ?/ ಹಂಚಿಕೊಂಡು ಬದುಕು ಬೆಳೆಸಬೇಕು ಮನವೆ//’ ಎಂದು ಉದ್ಗರಿಸುತ್ತಾರೆ.

ಹಾಗೇ ಮುಂದವರೆಯುತ್ತ ‘ಬಾಲ್ಯಕ್ಕೆ ಇಲ್ಲದ ಭಾವ ಹರೆಯಕ್ಕೆ ಏಕೆ ಬಂತು/ನಿಷ್ಕಲ್ಮಶ ಮನದಿ ಎಲ್ಲರೊಂದಿಗೆ ಬದುಕುಬೇಕು ಮನವೆ//’ ಎಂದು ಬೋಧಿಸುವ ಕವಿ ವೃತ್ತಿಯಲ್ಲಿ ಶಿಕ್ಷಕರಾಗಿರುದರಿಂದ ಮಕ್ಕಳ ನಿರ್ಮಲ ಅಮಾಯಕ ಮನಸ್ಸಿಗೆ ಮನಸೋತಿದ್ದಾರೆ. ಹಾಗಾಗಿ ಬಾಲ್ಯ ಅನ್ನುವುದು ಅವರ ಗಝಲ್ ಗಳಲ್ಲಿ ದೊಡ್ಡವರ ತಪ್ಪುಗಳಿಗೆ ಕನ್ನಡಿಯಾಗಿದೆ. ‘ಭೇದ ಭಾವ ಅರಿಯದ ವಯಸ್ಸು ಇದಲ್ಲವೇ/ ಜಾತಿ ಗೀತಿ ಹಂಗಿಲ್ಲದ ಭಾವ ಪ್ರೇಮದ ಬಲವಿದು//’ ಎಂದು ಹಾಡುತ್ತಾರೆ.

ಇನ್ನು ಆತ್ಮಶೋಧದ ಹಿನ್ನಲೆಯಲ್ಲಿ ಹುಟ್ಟಿರುವ ಇವರ  ಗಜಲ್ ಗಳು ನೋಡುವದಾದರೆ. ಗಜಲ್ ಇವರ ಆತ್ಮ ಸಂಗಾತವೆಂದೇ ಹೇಳಬಹುದು. ತನ್ನೊಳಗಿನ ರಾಗದ್ವೇಷಗಳನ್ನು, ದೌರ್ಬಲ್ಯಗಳನ್ನು ಆಂತರ್ಯದಲ್ಲಿ ಪರಾಮರ್ಶಿಸಿಕೊಳ್ಳುವ ಮತ್ತು ತನ್ನನ್ನು ತಾ ತಿದ್ದಿಕೊಳ್ಳುವ ದಾರ್ಶನಿಕ ನೆಲೆಯನ್ನು ವಿಸ್ತರಿಸುವ ಆಯಾಮವಾಗಿ ಕಂಡು ಬರುವಂಥದ್ದು. ‘ಕೋಪ ಇದ್ದವನಿಗೆ ಬೇರೆ ಶತ್ರುವಿಲ್ಲ ಇನ್ನೇನು ಬೇಕು/ ತನಗೆ ತಾನೆ ವೈರಿ ಇನ್ನಾರು ಇಲ್ಲ ಇನ್ನೇನು ಬೇಕು/’ ‘ದ್ವೇಷದ ಹುತ್ತವೇಕೆ ಬೆಳೆಯುತ್ತಿದೆ ನನ್ನಲ್ಲಿ/ಪ್ರೀತಿಯ ಸಸಿಯನ್ನು ನೆಡಬೇಕಿದೆ ನನ್ನೊಳಗಿಂದು// ಇಲ್ಲಿರುವಷ್ಟು ದಿನ ಇರಬೇಕು ಒಮ್ಮನದಿಂದೆಲ್ಲರು ಅರಿವಿಲ್ಲವೆಂದರೆ ಅರಿತುಕೊಳ್ಳಬೇಕಲ್ಲವೆ ಮಿತ್ರ// ‘ಸತ್ಯ ದರ್ಶನ ಎಂದರೆ ಏನೆಂದು ಗೊತ್ತೆ/ಗೊತ್ತಿದ್ದೂ ತನ್ನೊಳಗೆ ತಾನಿಲ್ಲದೆ ಹೋದೆ// ಮೇಣ ಕರಗುತ್ತದೆ ತ್ಯಾಗದ ಪ್ರತಿರೂಪವದು ಗೊತ್ತೆ/ನಾವೂ ಕರಗಬೇಕಾಗಿದೆ ಇನ್ನೊಬ್ಬರ ಒಳಿತಿಗಾಗಿ ಮಿತ್ರ//ಎನ್ನುವಂಥ ಮಾರ್ಮಿಕ ಉದ್ಬೋಧ ನೀತಿ ಸಾರುವ ಸಾಲುಗಳು ಇಲ್ಲಿ ಪ್ರತಿ ಪುಟದಲ್ಲಿ ಪ್ರತಿಬಿಂಬಿತವಾಗಿವೆ.

ಮೊದಲೇ ಪ್ರೇಮ ಕವಿಯಾಗಿ ಗುರುತಿಸಿಕೊಂಡಿರುವ ಕವೀಶ್ವರರು ಪ್ರೇಮ ಭಾವದ ಗಝಲ್ ಗಳು ರಚನೆ ಮಾಡದೇ ಇರುತ್ತಾರೆಯೇ?. ಅವರ ಪ್ರೇಮ ಭಾವದ ಗಝಲ್ ಗಳ ಬಗ್ಗೆ ಹೇಳದೇ ಇದ್ದರೆ ಈ ಕೃತಿ ಪರಿಚಯ ಅಪೂರ್ಣವಾದಂತೆ. ‘ಜೀವಂತ ಕೊಲ್ಲದಿರು ದೂರವಿಟ್ಟು ಪ್ರೀತಿಯನ್ನು/ಸತ್ತರೂ ಮುಳ್ಳಿರದ ಗುಲಾಬಿ ನೀಡುವೆ ಮುದ್ದಿಸು ಗೆಳತಿ//’ ಎಂದು ಆರ್ದ್ರವಾಗಿ ತನ್ನ ಗೆಳತಿಗೆ ಮನವಿ ಒಪ್ಪಿಸುವ ಕವಿ ‘ಈಶ್ವರನ ಸಾಕ್ಷಿ ನೀನಿಲ್ಲದೆ ಬದುಕುಲಾರೆ ಹುಡುಗಿ/ನಿನ್ನೆದೆಯಲ್ಲಿ ಒಂಚೂರು ಜಾಗ ಅನುಗ್ರಹಿಸು ಗೆಳತಿ// ಎಂದು ಪ್ರೀತಿಯ ಹುಡುಗಿಗೆ ಪ್ರೇಮದ ಹಕ್ಕೊತ್ತಾಯ ಮಾಡುತ್ತಾರೆ. ಒಟ್ಟಿನಲ್ಲಿಎನ್ನುವುದು ಈ ಗಝಲ್ಕಾರನ ಅಂತಿಮ ಸತ್ಯ ಮತ್ತು ಧೃಢ ನಂಬಿಕೆಯಾಗಿದೆ. ಪ್ರೇಮವೆನ್ನುವುದು ಇಲ್ಲಿಹಲವಾರು ರೂಪಗಳಲ್ಲಿ ಈ  ಅನುರುಣಿಸಿದೆ.

ಕೊನೆಯದಾಗಿ ಇಲ್ಲಿನ ಗಝಲ್ ಗಳು ಪಕ್ಕಾ ಗಝಲಿನ ನಿಯಮಕ್ಕನುಸಾರವಾಗಿ ಇದ್ದರೂ ಗಝಲ್ ದ ವಿಷಯ ಏನೇ ಇದ್ದರೂ ಮಧುರವಾಗಿ ಇಂಪಾಗಿ ಹಾಡುವಂತೆ ಹೃದಯಕ್ಕೆ ತಲುಪುವಂತೆ ಇರಬೇಕು ಎನ್ನುತ್ತಾರೆ. ಈ ಕವಿ ತಮ್ಮ ಗಝಲ್ ಗಳನ್ನು ಹಾಡುಗಬ್ಬವಾಗಿಸುವ ನಿಟ್ಟಿನಲ್ಲಿ ಸಾಲುಗಳಲ್ಲಿ ಸಮಾನ ಪದಬಳಕೆ ಮತ್ತು ವಾಚ್ಯವನ್ನು ಮೀರುವ ಪ್ರಯತ್ನದಲ್ಲಿ ಇನ್ನಷ್ಟು ಮಾಗಬೇಕಾದ ಅವಶ್ಯಕತೆ ಇದೆ ಎನಿಸುತ್ತದೆ. ಇದು ಅವರ ಮೊದಲ ಗಝಲ್ ಕೃತಿಯಾಗಿರುವುದರಿಂದ ಮುಂದಿನ ಗಝಲ್ ಗಳಲ್ಲಿ ಬೆಳವಣಿಗೆಯನ್ನು ನಿರೀಕ್ಷಿಸಬಹುದಾಗಿದೆ. ಒಟ್ಟಾರೆಯಾಗಿ ಗೋರಿಯೊಳಗಿನ ಉಸಿರು ಕವಿ ಈಶ್ವರ ಮಮದಾಪೂರರ ಉಸಿರೊಳಗಿನ ಪ್ರೇಮವಾಗಿದೆ ಎಂದು ಹೇಳಬಹುದು.

‍ಲೇಖಕರು Avadhi

June 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: