ದಲಿತನೊಬ್ಬ ಕವನ ಬರೆದಾಗ…

ಮೂಲ : ಸುಧೀರ್ ರಾಜ್ (ಮಲಯಾಳಂ)


ರಾ ಶಾ (ಇಂಗ್ಲಿಷ್)

ಕನ್ನಡಕ್ಕೆ : ಪ್ರತಿಭಾ ನಂದಕುಮಾರ್ 

ದಲಿತನೊಬ್ಬ ಕವನ ಬರೆದಾಗ
ಜಟೆಗಟ್ಟಿದ ಕೂದಲ ಆತನ ಪುರಾತನನೊಬ್ಬ
ಉನ್ಮಾದದಲ್ಲಿ ತನ್ನ ದುಡಿ ಬಾರಿಸುತ್ತಾನೆ
ಕಾಳಿ ದೇವಿಯಂತೆ ಕರ್ರಗಿನ ಕುರುಡಿ ಅಜ್ಜಿ
ನೆಲದ ಗುಂಡಿಗೆ ಸೀಳುವಂತಹ
ಹಾಡೊಂದನ್ನು ಊಳಿಡುತ್ತಾಳೆ

ಸಿಡುಬಿನ ಬೀಜಗಳನ್ನು ನೆಟ್ಟಂತೆ ಪದಗಳು
ಕೊಳೆಯುತ್ತವೆ ವೃಣವಾಗಿ ದೇಹಗಳ ಮೇಲೆ
ಬೆನ್ನ ಮೇಲಿನ ಗುಬುಟು ಗೂನಿನ
ಒಂಟಿ ಮೊಲೆಯ ಗೂನು ಬೆನ್ನ ದೇವತೆಯಂತೆ
ನೆಲದ ಮೇಲೆ ತೆವಳುವ ಗೆರೆಗಳು ಗರ್ಜಿಸುತ್ತವೆ

ನಡುಮಧ್ಯಾಹ್ನದ ಹುಚ್ಚುಗಳು ಪ್ರಖರ ಸೂರ್ಯನಂತೆ ಕುದಿಯುತ್ತವೆ
ಮತ್ತೆ ಭೋರಿಡುತ್ತವೆ – ನಮ್ಮನ್ನು ಕರೆದುಕೊಂಡು ಹೋಗು,
ದೂರ ಕರೆದುಕೊಂಡು ಹೋಗು
ಕೊನೆಯಿರದ ನೋವುಗಳ ಚಿಕ್ಕ ಮಣ್ಣಿನ ಕುಡಿಕೆಗಳಲ್ಲಿ
ಒಂದರ ಮೇಲೊಂದು ಶಾಪ ಸರಣಿಗಳು ಬಡಬಡಿಸುತ್ತವೆ
ಕೊನೆಗೆ ಅವನ್ನು ಕವಿತೆಯ ಕಡೆಗೆ ಎಸೆದು
ಅವು ಛಿದ್ರಗೊಳ್ಳುತ್ತವೆ

ದಲಿತನೊಬ್ಬನಿಗೆ ಕವಿತೆಯ ಗರ ಬಡಿದು
ಅವನು ಮತಿಗೆಟ್ಟು ಕುಣಿದಾಗ ದೇವರು ದಿಗ್ಭ್ರಮೆಗೊಳ್ಳುತ್ತಾನೆ
ನೆಲದಲ್ಲಿ ಹಳ್ಳ ಕೊರೆದು
ಮುಖ್ಯ ಹೊಲೆಯನ ಅಂಗೈಗಾಗಿ ಕಾಯುತ್ತ ಮಲಗುತ್ತಾನೆ
ಕೈಗಳಲ್ಲಿ ಚಿಗುರೊಡೆಯುವ ಬೀಜ
ಕೊನೆಗೆ ವ್ಯರ್ಥವಾಗಿ ಹೋಗುವವರೆಗೂ
ಉಣಿಸುವುದನ್ನು ನಿಲ್ಲಿಸದ ಕೈಗಳು

ದಲಿತನೊಬ್ಬ ಕವನ ಬರೆಯುವಾಗ
ಸಮಯ ಸ್ಥಬ್ಧವಾಗುತ್ತದೆ
ಸಮಯ ಅಂಗಲಾಚುತ್ತದೆ ‘ದಯವಿಟ್ಟು ನನಗೊಂದು ಪದ ಕೊಡು’
ಪದ, ಭೂಮಿ, ಆಕಾಶ, ಪಾತಾಳ ಲೋಕ
ಪ್ರಾಚೀನತೆ, ಭವ್ಯತೆ, ಜಗತ್ತು ಮತ್ತು ಬದುಕು
ಗಾಳಿಯಲ್ಲಿ ನೆಟ್ಟಗೆ ನಿಮಿರಿ ನಿಲ್ಲುತ್ತದೆ
ಭತ್ತದ ಒಂದು ಪೈರಿನಂತೆ
ಒಂಟಿ ತಾಯಿಯ ಗರ್ಭದಲ್ಲಿ ಜನಿಸಿದ ಪೈರಿನಂತೆ.

‍ಲೇಖಕರು Admin

October 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: