ದರ್ಶನ್ ಜಯಣ್ಣ ಸರಣಿ – ವೈದ್ಯ, ರೋಗಿ ಮತ್ತು ಸಮಾಜ

ದರ್ಶನ್ ಜಯಣ್ಣ

10

ಕೆಲವು ವೈದ್ಯರಿಗೆ ಮುಂದಿನ ರೋಗಿಯದ್ದೇ ಚಿಂತೆ. ರಾಜಕಾರಣಿಗೆ ಮುಂದಿನ ಚುನಾವಣೆಯ ಚಿಂತೆಯ ಹಾಗೆ! ಈ ಮಾತನ್ನು ಯಾಕೆ ಇಲ್ಲಿ ಹೇಳುತ್ತಿರುವೆನೆಂದರೆ, ಅಪ್ಪನ ಖಾಯಿಲೆ ಮೆದುಳಿಗೆ ಸಂಬಂಧ ಪಟ್ಟಿದ್ದರಿಂದ ಅವರಲ್ಲಾಗುತ್ತಿದ್ದ ಬದಲಾವಣೆಗಳು ನಮಗೆ ಆತಂಕ ಮತ್ತು ದಿಗ್ಭ್ರಮೆಯನ್ನು ಉಂಟುಮಾಡುತ್ತಿದ್ದವು. ಇದರ ಬಗ್ಗೆ ನಾವು ಮತ್ಯಾರನ್ನು ಕೇಳುವುದು? ಅದರಲ್ಲೂ ಎರಡನೆಯ ಬಾರಿಗೆ ಸ್ಟ್ರೋಕ್ ಆದಮೇಲೆ ಅವರ ಮಾತು, ಚಲನವಲನ, ಜ್ಞಾಪಕ ಶಕ್ತಿ ಎಲ್ಲವೂ ವ್ಯಾಪಾಕವಾಗಿ ಕುಂಟಿತವಾಯಿತು. ಅವರಿಗೆ ನೇರ ನಿಲ್ಲಲೂ ಆಗುತ್ತಿರಲಿಲ್ಲ. ಕುಂತರೆ ಅಥವಾ ಮಲಗಿದರೆ ಸಹಾಯವಿಲ್ಲದೆ ಸರಿಯಾಗಿ ಏಳಲೂ ಆಗುತ್ತಿರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಅವರ ನಗು ಮಾಸಿತ್ತು. ಯಾವುದಕ್ಕೂ ಮನಸ್ಸು ಅಥವಾ ಮೂಡು ಇರುತ್ತಿರಲಿಲ್ಲ. 

ಆಂತಹ ದಿನಗಳಲ್ಲಿ ವೈದ್ಯರು ಅವರಿಗೆ Syndopa ಕೊಡಲು ಶುರುವಿಟ್ಟರು. ಈ ಮಾತ್ರೆ ದೇಹದಲ್ಲಿ ಸಹಜವಾಗಿ ಆನಂದ  ಮತ್ತು ಮೆದುಳಿನ ಕಣಗಳ ಮರು ಉತ್ಪತ್ತಿಗೆ ಸಹಾಯಕವಾಗುವ dopamine ಅನ್ನು ಉತ್ಪಾದಿಸುತ್ತದೆ. ಅಪ್ಪನಿಗೆ ಸಹಜವಾಗಿ ಇದರ ಉತ್ಪಾದನೆ ಕುಂಟಿತವಾಗಿದ್ದುದರಿಂದ ಹೊರಗಿನಿಂದ ಇದನ್ನು ಕೊಡಬೇಕಾಯಿತು. Syndopa ಸಾಮಾನ್ಯವಾಗಿ Parkinson, Alzeimer ಮತ್ತು Dementia ಖಾಯಿಲೆಯವರಿಗೆ ಕೊಡುತ್ತಾರೆ ಕಾರಣ ಇವೆಲ್ಲವುಗಳಿಗೂ ಕಾರಣ ಸಾಮಾನ್ಯವಾಗಿ ಒಂದೇ, ಸ್ವರೂಪ ಬೇರೆ ಬೇರೆ ಅಷ್ಟೇ. 

ಅಷ್ಟರೊಳಗಾಗಿ ಅಪ್ಪನ ಖಾಯಿಲೆ Parkinson ಎಂದು ದೃಢ ಪಟ್ಟಿತ್ತು. ಕಾರಣ ಅವರ ಮೈ ಕೈ ಆಗಾಗ ನಡುಗುತ್ತಿತ್ತು. ಅವರು ನಡೆಯುವಾಗ ಆಗಾಗ ಕುಸಿದು ಬೀಳುತ್ತಿದ್ದರು. ಮಾತು ತಡವರಿಸುತ್ತಿತ್ತು. ದೇಹದ ಸ್ವಾದೀನ ತಪ್ಪಿತ್ತು. ಏನನ್ನೂ ನುಂಗಲು ಸುಲಭವಾಗಿ ಆಗುತ್ತಿರಲಿಲ್ಲ…. ಮಾತ್ರೆಗಳನ್ನೂ ಸಹ. ಇದರ ಮಧ್ಯೆ ಒಂದು ಮತ್ತು ಎರಡರ ಮಧ್ಯೆ ಹಿಡಿತವಿರಲಿಲ್ಲವಾದ್ದರಿಂದ ಅಡಲ್ಟ್ ಡೈಪೆರ್ ಹಾಕುವ ಪರಿಸ್ಥಿತಿ ಬಂದೊದಗಿತ್ತು. 

ಅಪ್ಪನಿಗೆ ಮೊದಲಿಗೆ ಇವೆಲ್ಲಾ ಅರ್ಥವಾಗುತ್ತಿದ್ದರೂ ಬಹುಬೇಗ ತಾನೇನು ಮಾಡುತ್ತಿದ್ದೀನಿ ಎಂಬುದರ ಅರಿವು ಹೋಗಿಬಿಟ್ಟಿತು. ಕೆಲವೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ‘ನಾನು ಡಾಕ್ಟರ್ ಹತ್ರ ಏನು ಹೇಳಬೇಕು!’ ಎಂದು ಕೇಳುತ್ತಿದ್ದರು. ನಾವು ‘ನಿಮಗೆ ಏನನಿಸುತ್ತೋ ಅದನ್ನ ಹೇಳಿ’ ಅಂದರೆ ‘ನನಗೆ ಏನೂ ಗೊತ್ತಾಗಲ್ಲ ಏನು ಹೇಳಲಿ?’ ಎನ್ನುತ್ತಿದ್ದರು. 

ಆಗ ನಾವೇ ‘ನಮ್ಮಲ್ಲಿ ಹೇಳಿದನ್ನು ಹೇಳಿ’ ಅಂದರೆ ‘ನಿಮ್ಮಲ್ಲಿ ನಾನು ಏನು ಹೇಳಿದೆ?’ ಎಂದು ಕೇಳುತ್ತಿದ್ದರು. ಅಪ್ಪನಿಗೆ Parkinson ನೊಟ್ಟಿಗೆ Dementia (ಮರೆಗುಳಿತನ) ಕೂಡ ಬಂದಾಗಿದ್ದದ್ದು ನಮಗೆ ನಿಧಾನವಾಗಿ ಮನದಟ್ಟಾಯಿತು. ದುರ್ದೈವವೆಂದರೆ ನಾವು ಭೇಟಿಮಾಡುತ್ತಿದ್ದ ವೈದ್ಯರು ಇವಾವುದರ ಬಗ್ಗೆಯೂ ನಮ್ಮನ್ನು ಕೂರಿಸಿಕೊಂಡು ಮಾತನಾಡಲಿಲ್ಲ, ಎಚ್ಚರಿಸಲಿಲ್ಲ! ಅವರು ಐದು ನಿಮಿಷದಲ್ಲಿ ಅಪ್ಪನನ್ನು ನೋಡಿ ಮೂರು ಮಾತ್ರೆ ಬದಲಿಸಿ ಕಳಿಸಿಬಿಡುತ್ತಿದ್ದರು. ಅದಕ್ಕೆ ಹೇಳಿದೆ ‘ಕೆಲವು ವೈದ್ಯರಿಗೆ ಮುಂದಿನ ರೋಗಿಯದ್ದೇ ಚಿಂತೆ’ ಎಂದು.

ಅಪ್ಪನಿಗೆ ಕೊಡುತ್ತಿದ್ದ Syndopa ಮಾತ್ರೆ ಊರ್ಜಿತವಾಗಲು ತಿಂಗಳುಗಳೇ ಬೇಕಾಯಿತು ಅದರ ಮಧ್ಯೆ ಹೊಸದಾಗಿ ಉತ್ಪತ್ತಿಯಾಗುತ್ತಿದ್ದ Dopamine ನಿಂದಾಗಿ ಅವರಿಗೆ ರಾತ್ರಿಯ ಹೊತ್ತು hallucinations (ಬ್ರಾಮಾಕ ಪರಿಸ್ಥಿತಿ) ಉಂಟಾಗುತ್ತಿತ್ತು. ಇದರಿಂದಾಗಿ ನಾವೆಲ್ಲಾ ಶುರುವಿನಲ್ಲಿ ಅತ್ಯಂತ ಕಳವಳಗೊಂಡೆವು. ನಂತರ ಅದು Dopamine ನ ಅಡ್ಡ ಪರಿಣಾಮವೆಂದು ತಿಳಿದು ಸ್ವಲ್ಪ ಸಮಾಧಾನವಾಯಿತು. 

ಇವೆಲ್ಲವುಗಳ ಮಧ್ಯೆ ಅಪ್ಪ ಹಾಸಿಗೆ ಹಿಡಿದರು. ಆದಕಾರಣ ತಿಂದದ್ದು ಜೀರ್ಣವಾಗುತ್ತಿರಲಿಲ್ಲ. ಅದರ ಜೊತೆಗೆ ಒಂದು ಹಿಡಿ ಮಾತ್ರೆಯನ್ನು ಬೇರೆ ನುಂಗಬೇಕು. ಆದರೆ Parkinson ನಿಂದ ನುಂಗಲು ಮಾಡಬೇಕಾದ ಗಂಟಲಿನ muscle action ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿಯೇ ಊಟವನ್ನು ದ್ರವದ ರೂಪದಲ್ಲಿ ಕೊಡಬೇಕಾಗಿತ್ತು ಮತ್ತು ಅದನ್ನು ನುಂಗಲೂ ಕೆಲವೊಮ್ಮೆ ಕಷ್ಟವಾಗುತ್ತಿತ್ತು.

Dementia ತೀವ್ರವಾಗಿದ್ದುದ್ದರಿಂದ ಕಡೆಯ ದಿನಗಳಲ್ಲಿ ಅಮ್ಮನ ಹೆಸರನ್ನು ಮಾತ್ರ ಅವರು ನೆನಪಿನಲ್ಲಿ ಇಟ್ಟುಕೊಂಡಿದ್ದರು. ಇದೆಲ್ಲದಕ್ಕೆ ಕಾರಣ ಮೆದುಳಿನ Neuron ಕಣಗಳು ಬೇಕಾದ ವೇಗದಲ್ಲಿ ಉತ್ಪತ್ತಿಯಾಗದೆ ಇರುವುದು. Syndopa (Carbidopa & Levidopa) ಇದನ್ನು ಕೊಂಚಮಟ್ಟಿಗೆ ಸುಧಾರಿಸಲು ಹೆಣಗಾಡುತ್ತದೆಯಾದರೂ ಅದು ಎಲ್ಲರಲ್ಲೂ ಸಮರ್ಪಕವಾಗಿ ಕೆಲಸ ಮಾಡುವ ಬಗ್ಗೆ ನಿಖರವಾದ ಮಾಹಿತಿ ಇಲ್ಲ! ಇದರ ಹೊರತಾಗಿಯೂ Parkinson, Dementia, Alzheimer’s ನ ಎಲ್ಲ ರೋಗಿಗಳಿಗೂ Syndopa ಮಾತ್ರೆಗಳನ್ನು ಕೊಡುತ್ತಾರೆ. 

ವಿದೇಶಗಳಲ್ಲಿ (ಅಮೇರಿಕಾ, ಯುರೋಪ್ ಮತ್ತು ಇಸ್ರೇಲ್ etc) ಈ ಖಾಯಿಲೆಗಳಿಗೆ ಹಲವು ಬಗೆಯ ಪರಿಣಾಮಕಾರಿ ಚಿಕಿತ್ಸೆಗಳಿವೆ ಮತ್ತು ಇವುಗಳ ಬಗ್ಗೆ ವ್ಯಾಪಾಕವಾದ ಸಂಶೋಧನೆ ನಡೆಯುತ್ತಿದೆ. ಇತ್ತೀಚೆಗಷ್ಟೇ ಅಮೇರಿಕಾದ FDA, Syndopa (Levidopa & Carbidopa)ದ ಜೊತೆಗೆ Nourianz ಎಂಬ ಹೊಸದೊಂದು ಟ್ಯಾಬ್ಲೆಟ್ ಅನ್ನು ಚಿಕಿತ್ಸೆಗೆ ಉಪಯೋಗಿಸಲು ಅನುಮತಿಸಿದೆ. ಇಷ್ಟೇ ಅಲ್ಲದೆ ಆ ದೇಶಗಳಲ್ಲಿ Parkinson, Alzheimer’s ನ ಸೊಸೈಟಿಗಳಿವೆ.

ಇವು ಪ್ರತಿ ಊರಿನಲ್ಲೂ ಇವೆ. ಅಲ್ಲಿಗೆ ಪೀಡಿತರು ಬಂದು ತಮ್ಮ ಅನುಭವಗಳನ್ನು, ಅಭಿಪ್ರಾಯಗಳನ್ನು, ತುಮುಲ -ತಲ್ಲಣಗಳನ್ನು ಹೇಳಿಕೊಳ್ಳಲು ಅವಕಾಶವಿದೆ. ಇದರಿಂದಾಗಿ ಮನಸ್ಸಿನ ಎಷ್ಟೋ ಭಾರ ಕಡಿಮೆಯಾಗುವ ಸಾಧ್ಯತೆ ಇದೆ. ಸುಮಾರು ರೋಗಿಗಳು ಇದರಿಂದ ಹೊಸ ಜೀವನಶೈಲಿಯನ್ನು ರೂಡಿಸಿಕೊಂಡಿದ್ದಾರೆ. ಈ ಖಾಯಿಲೆಗಳೊಟ್ಟಿಗೆ ಬದುಕುವುದ ಕಲಿತಿದ್ದಾರೆ. ಆಶ್ಚರ್ಯಕರ ರೀತಿಯಲ್ಲಿ ಹಲವಾರು ಗುಣಮುಖರಾಗಿದ್ದಾರೆ! 

ನಮ್ಮಲ್ಲಿ ಇಂತಹ ವಿಷಯಗಳ ಬಗ್ಗೆ, ವ್ಯವಸ್ಥೆಗಳ ಬಗ್ಗೆ ಅಸಡ್ಡೆ ಮತ್ತು ಕೀಳರಿಮೆಯಿದೆ ಮತ್ತದು ಬದಲಾಗಬೇಕು. ವಿಜ್ಞಾನ ಮುಂದುವರಿದ ಹಾಗೆ ಈಗಿನ De-generative ಖಾಯಿಲೆಗಳಾದ ಇವು ಮುಂದೊಂದು ದಿನ Re-generative ಆಗಿ ಪರಿವರ್ತನೆಗೊಳ್ಳಬಹುದು. ಈ ಖಾಯಿಲೆಗಳಿಂದ ದಿನ ನಿತ್ಯ ಕಷ್ಟ ಅನುಭವಿಸುವವರು ರೋಗಿಗಳು ಮಾತ್ರವಲ್ಲ ಅವರ ಮನೆಗಳವರೂ ಸಹ. ಅವರಲ್ಲಿ ಮುಖ್ಯವಾದವರು ಅವರ ಸಂಗಾತಿಗಳು (ಗಂಡ ಅಥವಾ ಹೆಂಡತಿ). 

ನಾವು ಇವತ್ತಿನ ದಿನಮಾನದಲ್ಲಿ ರೋಗಿಯನ್ನು ನೋಡಿಕೊಳ್ಳಬೇಕಷ್ಟೆ, ಗುಣಪಡಿಸಲಾಗುವುದಿಲ್ಲ. ಆದರೆ ರೋಗಿಯನ್ನು ನೋಡಿಕೊಳ್ಳುವವರು ಅವರ ಸಂಗಾತಿಯಾಗಿದ್ದರೆ ಅಂತಹವರನ್ನು ಸುತ್ತಮುತ್ತಲಿನವರು (ಮಕ್ಕಳು, ಕುಟುಂಬದವರು ಇತ್ಯಾದಿ) ನೋಡಿಕೊಳ್ಳಬೇಕು. ಅವರಿಗೆ ಬೇಕಾದ ಸಹಾಯ, ಮಾನಸಿಕ ಬೆಂಬಲ ಕೊಡುವುದು ಅತ್ಯಗತ್ಯ. ಇದನ್ನು ಪಶ್ಚಿಮದವರು Taking care of the care taker ಎನ್ನುತ್ತಾರೆ. 

ಅಪ್ಪನನ್ನು ನಾನಾ ಆಸ್ಪತ್ರೆಗಳಿಗೆ ಸುತ್ತಾಡಿಸಿದಾಗ ಅಲ್ಲಿ ಬರುತ್ತಿದ್ದ ಹಲವಾರು ರೋಗಿಗಳು, ಅವರ ಪರಿಸ್ಥಿತಿ, ಅವರ ಮನೆಯವರ ಪರಿಸ್ಥಿತಿ, ನಮ್ಮದೇ ಮನೆಯಲ್ಲಿ ನಮ್ಮ ಪರಿಸ್ಥಿತಿ ಇವೆಲ್ಲವನ್ನ ನೋಡಿದ ನನಗೆ ಅನ್ನಿಸುವುದು ನಾವು ಒಂದು ಸಮಾಜವಾಗಿ ಇದನ್ನು ಎದುರಿಸಬೇಕಲ್ಲದೆ ವಿಧಿ ಇಲ್ಲ. 

ಇದರಲ್ಲಿ ಬಹುಮುಖ್ಯ ಪಾತ್ರ ವೈದ್ಯರದ್ದು. ಅವರು ಇಂತಹ ರೋಗಿಗಳಿಗೆ ಹೆಚ್ಚು ಹೆಚ್ಚು ಮಾನಸಿಕ ಸ್ಥೈರ್ಯ ತುಂಬಬೇಕು. ಅವರ ಮನೆಯವರಿಗೆ ಔಷಧಿಗಳ ನೇರ ಮತ್ತು ಅಡ್ಡ  ಪರಿಣಾಮಗಳ ಬಗ್ಗೆ ವಿವರಿಸಬೇಕು. Caretaker ಗಳು ಕುಟುಂಬ ಸದಸ್ಯರಾದಾಗ ಅವರಿಗಾಗಿ ಕೆಲವು Support Programs (ಬೆಂಬಲ ಕಾರ್ಯಕ್ರಮಗಳು) ಇರಬೇಕು. ಆಗ ಮಾತ್ರ ಸ್ವಲ್ಪ ಸುಧಾರಣೆಯಾಗಲು ಅಥವಾ ಪರಿಸ್ಥಿತಿಯನ್ನು ಯಥಾವತ್ ಸ್ವೀಕರಿಸಿ ಮುನ್ನಡೆಯಲು ಸಾಧ್ಯ. 

Hope it happens some day soon ! 

| ಮುಕ್ತಾಯ |

‍ಲೇಖಕರು Admin

August 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ನಿಜ. ನಾವೂ ಈ ಸಂಬಂಧಿಸಿದಂತೆ ಹೆಣಗಿದ್ದೇವೆ. ಇಂತಹ ರೋಗಿಗಳನ್ನು ನೋಡಿಕೊಳ್ಳುವವರಿಗೆ ಅದೆಷ್ಟು ಸಹನೆಯಿದ್ದರೂ ಸಾಲದು. ದೈಹಿಕವಾಗಿ ಅಪಾರ ಕ್ಷಮತೆ ಬೇಕು. ನಮ್ಮ ಮಾವನವರಿಗೆ ಇದೇ ಸಮಸ್ಯೆ ಇತ್ತು. ಅದರಲ್ಲೇ ಹೋಗಿಯೂ ಬಿಟ್ಟರು.

    ಅವರ ಮಗ ಅವರ ಶೇವಿಂಗ್ ಸ್ನಾನ ತಿಂಡಿ ಎಲ್ಲಾ ಮುಗಿಸಿ ಶಾಲೆಗೆ ಹೋಗುತ್ತಿದ್ದರು. ಮತ್ತೆ ಸಂಜೆಯವರೆಗೆ ನಾನು ನೋಡಿಕೊಳ್ಳುತ್ತಿದ್ದೆ. ಹೊರಗಿನಿಂದ ಮೂತ್ರ ಸಂಗ್ರಹಿಸುವ ಪೈಪ್ ಹಾಕಿದ್ದರಿಂದ ಚೀಲ ತುಂಬಿದಾಗ ಅದನ್ನು ಬದಲಾಯಿಸುತ್ತಿದ್ದೆ. ಒಂದೊಂದು ಸಾರಿ ಅವರ ಅರಿವಿಗೇ ಬರದೆ
    ಪೈಪನ್ನು ಕಿತ್ತು ಹಾಕಿಬಿಡುತ್ತಿದ್ದರು. ಕೋಣೆಯ ತುಂಬ ಮೂತ್ರ ಕೆರೆಯ ಹಾಗೆ ನಿಲ್ಲುತ್ತಿತ್ತು. ಮತ್ತೆ ಅವರ ಬಟ್ಟೆಗಳನ್ನು ಬದಲಿಸಿ ,ರೂಮು ಒರೆಸಿ , ಆ ಬಟ್ಟೆಗಳನ್ನು ಪ್ರತ್ಯೇಕವಾಗಿ ಒಗೆದು ಹಾಕುವ ಕೆಲಸ . ಪೈಪ್ ಹಾಕಿ ಕಿತ್ತು ಎಸೆಯದಂತೆ ಅಲ್ಲೇ ನಿಲ್ಲಬೇಕಾದ ಜರೂರತ್ತು,, ಆಗ ಸಿಟ್ಟೂ ಅಳುವೂ ಒಟ್ಟಿಗೆ ಬರುತ್ತಿತ್ತು.

    ಮಕ್ಕಳು ಮೊಮ್ಮಕ್ಕಳನ್ನು ನೆಲಕ್ಕೆ ಬಿಟ್ಟರೆ ಸವೆಯುತ್ತವೆ ಎನ್ನುವ ಹಾಗೆ ಸಾಕಿದ್ದ ಜೀವವದು. ಕಾಯಕಯೋಗಿಯಂತಿದ್ದವರ ಆ ಅವಲಂಬನೆ , ಅಸಹಾಯಕತೆ ಬಹಳ ಸಂಕಟ ಉಂಟು ಮಾಡುತ್ತಿತ್ತು. ಮರೆವಿನ ಕಾಯಿಲೆ ಇಳಿವಯಸ್ಸಿನಲ್ಲಿ ಬರುವುದು, ಈ ಲಕ್ವ ಹೊಡೆಯುವುದು ಇವುಗಳೆಲ್ಲ ಅನುಭವಿಸುವವರಿಗೂ ,ಅವರನ್ನು ನೋಡಿಕೊಳ್ಳುವವರಿಗೂ ಬಹು ಕಷ್ಟ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: