ಒಂದು ಮೊಲದ ಕಥೆ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ʻಒಂದೂರಿನಲ್ಲಿ ಒಬ್ಬ ಪುಟಾಣಿ ಹುಡುಗನಿದ್ದ. ಈ ಹುಡುಗನಿಗೆ ದೊಡ್ಡ ದೊಡ್ಡ ಮರಗಳು, ಕಾಡು, ಹಿಮಬೆಟ್ಟ, ಆ ಬೆಟ್ಟದಿಂದ ಹರಿದು ಬರುವ ತೊರೆ, ಕಾಡಿನ ಮೌನ ಹುಟ್ಟಿಸುವ ವಿಚಿತ್ರ ಭಾವ, ಎಲ್ಲಿಂದಲೋ ಅಚಾನಕ್ಕಾಗಿ ಬಂದು ಜೊತೆಯಾಗಿ ಕಾಡಿನುದ್ದಕ್ಕೂ ಹಿಂಬಾಲಿಸುವ ನಾಯಿ, ಕಾಡು ಕಳೆದು ಇದ್ದಕ್ಕಿದ್ದ ಹಾಗೆ ಸಿಕ್ಕುವ ಬಯಲಿನಲ್ಲಿ ಮೇಯುವ ಕುರಿಗಳು ಇಂಥವೆಲ್ಲ ಭಾರೀ ಇಷ್ಟ. ಯಾವತ್ತೂ ಶಾಲೆಯಿಂದ ಮನೆ, ಹೋಂವರ್ಕು, ಒಂದಿಷ್ಟು ಚಿತ್ರ ಗೀಚಿ, ಆಟ ಆಡಿ, ಕಾಲಿಗೆ ಚಕ್ರ ಕಟ್ಟಿದರೆ, ಈ ಪುಟಾಣಿಯ ಪ್ರಪಂಚವೇ ಬೇರೆ. ಆದರೆ, ಒಂದು ದಿನ ಅದೇನಾಯಿತು ಗೊತ್ತಾ?ʼ

ʻಏನಾಯಿತು?ʼ ಮಗ ಕೇಳಿದ.

ʻಕೊರೋನಾ ಬಂತು. ಜಗತ್ತಿಡೀ ಲಾಕ್‌ ಡೌನ್‌ ಹೆಸರಿನಲ್ಲಿ ಬಂದ್‌ ಆಯಿತು. ಇವನ ಹಾಗೆ ಎಲ್ಲ ಪುಟ್ಟ ಪುಟಾಣಿ ಮಕ್ಕಳನ್ನೂ ಅವರವರ ಅಪ್ಪ ಅಮ್ಮಂದಿರು ಒಳಗೆ ಹಾಕಿ ತಾವೂ ಒಳಗೆ ಕುಳಿತರು. ಶಾಲೆ ನಿಂತಿತು. ಆನ್‌ಲೈನು ಶುರುವಾಯಿತು. ಈ ಹುಡುಗನೂ ಹೊರಗೆ ಹೋಗಲಾಗದೆ ಮನೆಯಲ್ಲೇ ಉಳಿದ. ನಾಲ್ಕು ಗೋಡೆಯೊಳಗೆ ಎಷ್ಟೆಲ್ಲ ತಿರುಗಬಹುದು ತಿರುಗಾಡಿದ.ʼ

ನಾಲ್ಕು ಗೋಡೆಯೊಳಗೆ ಹೇಗಮ್ಮ ತಿರುಗಾಡೋದು? ಮತ್ತೆ ಪ್ರಶ್ನೆ. ನಾನು ನಕ್ಕೆ.

ʻಹುಂ, ಅದೇ, ಹೇಗೆ ಅಂದರೆ, ನಾಲ್ಕು ಗೋಡೆಯೊಳಗೆ ಟೆಂಟು ಹಾಕಿ, ಕ್ಯಾಂಪಿಂಗ್‌ ಮಾಡಿ, ಬಾಲ್ಕನಿಯಲ್ಲಿ ಗಿಡದ ಬುಡದಲ್ಲಿದ್ದ ಮಣ್ಣು ಒಕ್ಕಿ ಹಾಕಿ ಒಳಗೆ ತಂದು ರಾಶಿ ಹಾಕಿ, ಅದಕ್ಕೆ ನೀರೆರೆದು, ಕಲಸಿ ಮೆತ್ತಿ ಹೇಗೆಲ್ಲ ಆಡಬಹುದು ಆಡಿದ.ʼ

ʻನಾನೂ ಹಾಗೇ ಅಲ್ವಾ ಆಡೋದುʼ ಮಧ್ಯೆ ಬಾಯಿ ಹಾಕಿದ.

ʻಹುಂ, ಪೂರ್ತಿ ಕಥೆ ಕೇಳು ಫಸ್ಟುʼ ಎಂದೆ. ಮತ್ತೆ ಗಂಭೀರವಾಗಿ ಕುಳಿತ. ʻಹಾಗೇ ತಿಂಗಳುಗಳು ಕಳೆಯಿತು. ಎಷ್ಟು ದಿನ ಅದೇ ಆನ್‌ಲೈನು ಕ್ಲಾಸು, ಅಲ್ಲೇ ಸಣ್ಣ ವಾಕಿಂಗು, ಮನೆಯೊಳಗೇ ಆಟ! ಹುಡುಗನಿಗೆ ಬೋರಾಯಿತು. ಅಪ್ಪ, ಅಮ್ಮನ ಜೊತೆ ತಿರುಗಿ ತಿರುಗಿ ಅಭ್ಯಾಸವಾಗಿ ಈಗ ಒಮ್ಮೆಲೆ ಒಳಗೆ ಕೂರಬೇಕೆಂದರೆ ಆಗುವ ಮಾತಾ! ಆಗಲಿಲ್ಲ. ಆದರೂ ಕಷ್ಟ ಪಟ್ಟು ಕೂತಿದ್ದೇನೋ ಆಗಿತ್ತು. ಮನೆಯೊಳಗೆಯೇ ಬೆಟ್ಟ ಗುಡ್ಡ, ಕಣಿವೆ, ಹರಿವ ನೀರು ಎಲ್ಲ ಬಂದು, ರಟ್ಟು ಕತ್ತರಿಸಿ, ಅಂಟಿಸಿ, ಸಿಕ್ಕಿದ್ದಕ್ಕೆಲ್ಲ ಬಣ್ಣ ಮೆತ್ತಿ ಅವನಮ್ಮನಿಗೂ ಇದೆಲ್ಲ ಕ್ಲೀನು ಮಾಡಿ ಮಾಡಿ ಸಾಕುಸಾಕಾಗಿ, ಮತ್ತೆ ಮತ್ತೆ ಹರವಿಬೀಳುತ್ತಿದ್ದ ವಸ್ತುಗಳ ಬಗ್ಗೆ ತಲೆಕೆಡಿಸುವುದನ್ನು ಬಿಟ್ಟುಬಿಟ್ಟಳು.

ಜೋರು ನಗು. ಜೊತೆಗೆ ʻಆಮೇಲೆ?ʼ ಮತ್ತೆ ಪ್ರಶ್ನೆ.

ಈ ಹುಡುಗನಿಗೆ ಕಾರುಗಳೆಂದರೂ ಭಾರೀ ಇಷ್ಟ. ಒಂದ್ರಾಶಿ ಕಾರುಗಳೆಲ್ಲ ಇವನ ಆಟಿಕೆಗಳು. ಇದನ್ನು ಬಿಟ್ಟರೆ ಒಂದು ನಾಯಿ, ಒಂದು ಪಾರಿವಾಳ, ಮೊಲ ಇವನ ದೋಸ್ತುಗಳು. ಶಾಲೆಗೆ ಹೋಗುವಾಗ ಇದ್ದ ಗೆಳೆಯರು, ದಿನವೂ ಸಿಗುತ್ತಿದ್ದ ಮನೆಯ ಪಕ್ಕದ ಗೆಳೆಯರ ಪ್ರಪಂಚ ಕೊರೋನಾ ಹೆಸರಿನಲ್ಲಿ ಬೇರೆಯಾದ ಮೇಲೆ, ಈ ಹುಡುಗನಿಗೆ ರಾಕಿ ನಾಯಿ, ಪಾರಿವಾಳ ಮತ್ತು ಮೊಲ ಜೀವದ ಗೆಳೆಯರಾಗಿಬಿಟ್ಟವು. ಊಟ, ನಿದ್ದೆ, ಟಿವಿ ಸಮಯ ಎಲ್ಲದಕ್ಕೂ ಪಕ್ಕ ಈ ಮೂರು ಮಂದಿ ಅವನ ಜೊತೆಗಿರಬೇಕು. ಹೀಗೇ ದಿನ ಮುಂದೆ ಹೋಗ್ತಾ ಹೋಗ್ತಾ ಪರಿಸ್ಥಿತಿ ಸ್ವಲ್ಪ ಸುಧಾರಿಸಿತೆಂದಾಗ, ಈ ಹುಡುಗನ ಅಮ್ಮ ಅಪ್ಪ ಆಗಿದ್ದಾಗಲಿ ಅಂತ ಒಂದು ಚಾರಣಕ್ಕೆ ಹೊರಟರು. ಬಹಳ ದಿನದ ನಂತರ ಮತ್ತೆ ಚಾರಣಕ್ಕೆ ಹೊರಟ ಈ ಪುಟಾಣಿ ಹುಡುಗನಿಗೆ ಖುಷಿಯೋ ಖುಷಿ. ತಾನೇ ಖುದ್ದಾಗಿ ಬ್ಯಾಕ್‌ಪ್ಯಾಕು ರೆಡಿ ಮಾಡಿ ಅದರಲ್ಲಿ ಒಂದೆರಡು ಕಥೆ ಪುಸ್ತಕ, ಡ್ರಾಯಿಂಗ್‌ ಪುಸ್ತಕ, ಪೆನ್ಸಿಲು- ಕ್ರೇಯಾನು ಡಬ್ಬಿ, ಒಂದೈದಾರು ಹಾಟ್‌ವೀಲು ಕಾರುಗಳು, ಜೊತೆಗೆ ತನ್ನ ನಾಯಿ, ಪಾರಿವಾಳ, ಮತ್ತು ಮೊಲ ತುಂಬಿಸಿ ಪ್ಯಾಕು ಮಾಡಿ ತಾನು ರೆಡಿ ಎಂದನು. ಹಾಕಲು ಅಂಗಿ ಚಡ್ಡಿ ಜ್ಯಾಕೆಟ್ಟುಗಳೆಲ್ಲ ಅಮ್ಮ ತುಂಬಿಸಿರುತ್ತಾಳೆಂಬ ಧೈರ್ಯ.

ʻಇದು ನಂದೇ ಕಥೆ, ಇದು ಬೇಡ, ಬೇರೆ ಕಥೆ ಹೇಳುʼ ಮಗ ಕೊಂಯ್‌ ಕೊಂಯ್‌ ಶುರು ಮಾಡಿದ.

ʻಅರೆ, ಯಾರ ಕಥೆ ಆದರೆ ಏನಂತೆ, ಫಸ್ಟ್‌ ಕಥೆ ಕೇಳು. ನನ್ನ ಅಪ್ಪನೂ ನಂಗೆ ಹಿಂಗೇ ಕಥೆ ಹೇಳ್ತಾ ಇದ್ರು ಗೊತ್ತಾʼ ಅಂದೆ. ಮತ್ತೆ ಆಸಕ್ತಿ ಬಂದು ʻಹುಂ ಹೇಳುʼ ಅಂದ.

ʻಈ ಪುಟಾಣಿ ಮುದ್ದುಮರಿ ಆಮೇಲೇನು ಮಾಡಿದ ಗೊತ್ತಾ? ಅವನ ಬ್ಯಾಕ್‌ ಪ್ಯಾಕು ಹೆಗಲಿಗೇರಿಸಿ ಚಾರಣಕ್ಕೆ ಹೊರಟ. ಹಿಮಾಲಯದ ಹಳ್ಳಿಯೊಂದಕ್ಕೆ ಒಂದ್ಹತ್ತು ಕಿಮೀ ಕಾಡಿನ ಹಾದಿಯ ನಡಿಗೆ. ದಟ್ಟ ಕಾಡು. ಎತ್ತರೆತ್ತರ ದೇವದಾರು ಮರಗಳ, ಹಸಿರು ಹಸಿರು ಪ್ರಶಾಂತ ಕಾಡಿನಲ್ಲಿ ಅವರು ಮೂರೇ ಮಂದಿ. ಬಹಳ ದಿನದ ನಂತರ ಬೆಟ್ಟ, ಕಣಿವೆ, ತೊರೆ ಎಲ್ಲ ಸಿಕ್ಕಿ, ಶೂ ಒದ್ದೆ ಮಾಡಿಕೊಂಡರೂ ತೊಂದರೆಯಿಲ್ಲ ಎಂದು ನೀರಲ್ಲಿ ಪಚ್‌ ಪಚ್‌ ಮಾಡಿಕೊಂಡು ಪರ್ವತ ಏರುತ್ತಿದ್ದ. ಒಂದರ್ಧ ಮುಕ್ಕಾಲು ಗಂಟೆ ನಡೆದ ಮೇಲೆ ಹುಡುಗನಿಗೆ ಏನಾದರೂ ತಿನ್ನಬೇಕು ಅನಿಸಿತು. ಅಮ್ಮನ ಬಳಿ ಚಾಕ್ಲೇಟು ಇದೆ ಎಂದೂ ಮೊದಲೇ ಗೊತ್ತಿತ್ತಲ್ಲ! ಬ್ಯಾಗಲ್ಲೇಕೆ, ಕಿಸೆಯಲ್ಲೇ ಇಡುತ್ತೇನೆ ಎಂದು ಇನ್ನೂ ಒಂದಷ್ಟು ದೂರ ನಡೆದದ್ದಾಯಿತು. ಇದೊಂಥರಾ ಮಂಗನ ಉಪವಾಸವೇ. ಕಿಸೆಯಲ್ಲಿದ್ದ ಚಾಕ್ಲೇಟು ಖಾಲಿ ಆಗಬೇಕಲ್ಲ. ಕೈಯಲ್ಲೇತಕೆ ಬಾಯೊಳಗೆ ಇಡುತ್ತೇನೆ ಎಂದು ಹುಡುಗ ಕೂತ. ನೀರು ಕುಡಿದು, ಚಾಕ್ಲೇಟೂ ಹೊಟ್ಟೆಗಿಳೀತು ಎಂಬಲ್ಲಿಗೆ ನೆಮ್ಮದಿಯಾಯ್ತು.ʼ

ʻನಂಗೊತ್ತು, ನಂಗೀ ಕಥೆ ಬೇಡʼ ಎಂದ ಮಗ.

ಈಗ್ಲೇ ಇರೋದು ಕಥೆ ಎಂದೆ. ಮುನಿಸಿ ಕೂತವನಿಗೆ ಮತ್ತೆ ಇಂಟ್ರೆಸ್ಟು ಬಂತು.

ಒಂದರ್ಧ ಗಂಟೆ ಮುಂದೆ ನಡೆದಾಗಿತ್ತು. ಸಿಕ್ಕ ಸಿಕ್ಕ ಚೆಂದದ ಕಲ್ಲು, ಎಲೆ ಹೀಗೆಲ್ಲ ಹೆಕ್ಕಿ ನೋಡುವ ಹುಡುಗನಿಗೆ ತನ್ನ ಕಿಸೆಯಿಂದ ಇಣುಕುವ ಹಾಗೆ ಇಟ್ಟುಬಿಟ್ಟಿದ್ದ ಮೊಲ ಮಾತ್ರ ಕಾಣೆ!ʼ
ಅಯ್ಯೋ, ಈಗ ಮೊಲ ಎಲ್ಲೋ ಕಾಡದಾರಿಯಲ್ಲಿ ಕಳೆದು ಹೋಗಿದೆ ಅಂತ ಗೊತ್ತಾದದ್ದೇ ತಡ, ಆ ಪುಟಾಣಿ ಹುಡುಗ ಹೋ ಎಂದು ಅಳತೊಡಗಿದ. ನನ್ನ ಪ್ರೀತಿಯ ಮೊಲ ಬಿದ್ದು ಹೋಯ್ತು, ಅದೂ ಈ ಕಾಡಲ್ಲಿ! ನಂಗೆ ಅದು ಬೇಕೇ ಬೇಕು ಅಂತ ಕಣ್ಣಲ್ಲಿ ವರ್ಷಧಾರೆ.

ಅಪ್ಪನಿಗೂ ಅಮ್ಮನಿಗೂ ಸಂಕಟವಾಯ್ತು. ಎಲ್ಲಿ ಬಿದ್ದಿದೆ ಅಂತ ಈ ದಟ್ಟಾರಣ್ಯದಲ್ಲಿ ಹೆಂಗೆ ಹುಡುಕೋದು ಹೇಳು. ಅದೂ ಇಷ್ಟು ದೂರ ನಡೆದು ಹತ್ತಿದ್ದಾಗಿದೆ. ಇನ್ನು ಮತ್ತೆ ಇದೇ ದಾರಿಯಲ್ಲಿ ವಾಪಾಸು ಹೋಗುವುದೆಂದರೆ ಸುಲಭವೇನು? ಅದೂ ಸಿಕ್ಕೇ ಸಿಗುತ್ತದೆ ಎಂಬ ಗ್ಯಾರೆಂಟಿ ಇಲ್ಲವಲ್ಲ. ವಾಪಾಸು ನಾಡಿದ್ದು ಬರುವಾಗ ಸಿಗಬಹುದು ಅಂತ ಅಮ್ಮ ಸಮಾಧಾನ ಮಾಡಲು ನೋಡಿದ್ದಾಯಿತು. ಊಹೂಂ, ಹುಡುಗನಿಗೆ ಸಮಾಧಾನವಾಗಲಿಲ್ಲ. ಇನ್ನೆರಡು ದಿನ ಆಗುವಷ್ಟರಲ್ಲಿ ಅದನ್ಯಾರಾದರೂ ಎತ್ತಿಕೊಂಡು ಹೋಗಿ ಬಿಡ್ತಾರೆ, ಸಿಗಲ್ಲ ನಂಗೊತ್ತುʼ ಅಂತ ಮತ್ತೆ ಅಳು.

ಅಪ್ಪನಿಗೆ ಪಾಪ ಅನಿಸಿತು. ಇರು ನಾನು ಹುಡುಕಿಕೊಂಡು ಬರುತ್ತೇನೆ, ನೀವಿಲ್ಲೇ ಇರಿ ಎಂದು ಬೆನ್ನಿನ ಮಣಭಾರದ ಬ್ಯಾಗನ್ನು ಅಲ್ಲಿಯೇ ಇಟ್ಟು ಬಂದ ದಾರಿಯಲ್ಲೇ ಮತ್ತೆ ಹುಡುಕಲು ಹೊರಟೇ ಬಿಟ್ಟ. ಅಮ್ಮನೂ ಈ ಪುಟಾಣಿಯೂ ಆ ಕಾಡ ಮಧ್ಯದಲ್ಲಿ ಇಬ್ಬರೇ.

ಅಪ್ಪ ಹೋಗಿ ಹತ್ತು ನಿಮಿಷ ದಾಟಿತು, ವಾಪಾಸು ಬರುವ ಸೂಚನೆ ಇಲ್ಲ. ಮಗನಿಗೂ ಅಮ್ಮನಿಗೂ ಒಳಗೆ ಸಣ್ಣ ಹೆದರಿಕೆ ಶುರುವಾಯ್ತು. ಕಾಡಿನ ದೊಡ್ಡ ದೊಡ್ಡ ಮರಗಳೆಡೆಯಲ್ಲಿ ಚಿತ್ರವಿಚಿತ್ರ ಸದ್ದುಗಳು ಇನ್ನೂ ಚಿತ್ರವಿಚಿತ್ರವಾಗಿ ಕೇಳತೊಡಗಿದವು. ಹೋದ ಅಪ್ಪ ಎಲ್ಲಿಗೆ ಹೋದ ಅಂತ ಚಿಂತೆ ಶುರುವಾಯ್ತು. ಫೋನು ಮಾಡಮ್ಮ ಅಂತ ಮಗ ಮೆಲ್ಲನೆ ಜಗ್ಗಿದ. ಈ ಕಾಡಿನಲ್ಲಿ ಸಿಗ್ನಲ್‌ ಇದ್ರೆ ತಾನೇ ಫೋನು ಮಾಡೋದು ಅಂತ ಅಮ್ಮ. ಹುಡುಗನಿಗೆ ಭಯ ಜಾಸ್ತಿಯಾಗಿ ಮತ್ತೆ ಹೋ ಅಳು. ನೀ ಹಾಗೆ ಅತ್ತಿದ್ದಕ್ಕೇ ನೋಡು ಅಪ್ಪ ಹೋಗಿದ್ದು, ಈಗ ಅಪ್ಪನನ್ನು ಹುಡುಕಿಕೊಂಡು ಹೋದರೆ, ಅಪ್ಪ ಇಲ್ಲಿ ಬಂದು ನಮ್ಮನ್ನು ಹುಡುಕಿಕೊಂಡು ದಾರಿ ತಪ್ಪಿದರೆ ಮಾಡೋದೇನು ಹೇಳು ಅಂತ ಬೈದಳು. ಹೋಗುವ ಹಾಗೂ ಇಲ್ಲ, ನಿಲ್ಲುವ ಹಾಗೂ ಇಲ್ಲʼ ಅಮ್ಮನಿಗೂ ವಿಚಿತ್ರ ಸಂಕಟ.

ಒಂದರ್ಧ ಗಂಟೆ ಕಳೆಯುವಷ್ಟರಲ್ಲಿ ಏನೋ ಹೆಜ್ಜೆ ಸಪ್ಪಳ. ಅಪ್ಪನೇ ಬಂದಿರಬೇಕು ಎಂದು ಅಮ್ಮ-ಮಗ ಇಬ್ಬರೂ ಕತ್ತುದ್ದ ಮಾಡಿದರು. ಇನ್ಯಾರೋ ನಾಲ್ಕೈದು ಚಾರಣಿಗರು. ನಮ್ಮನ್ನು ನೋಡಿ ಮೊಲ ಹುಡುಕ್ತಾ ಹೋದವರಿಗೆ ಕಾಯ್ತಾ ಇದೀರಾ ಎಂದರು. ಬರ್ತಾರೆ ಬರ್ತಾರೆ ಸ್ವಲ್ಪ ಹೊತ್ತಲ್ಲಿ, ದಾರಿ ಮಧ್ಯೆ ಸಿಕ್ರುʼ ಎಂದು ಅವರು ಮುಂದೆ ಹೋದರು. ಇಬ್ಬರಿಗೂ ಸ್ವಲ್ಪ ನೆಮ್ಮದಿಯಾಯ್ತು. ಹತ್ತು ನಿಮಿಷದಲ್ಲಿ ಮೊಲದ ಹಿಂದೆ ಹೋದ ಅಪ್ಪ ಹಿಂದೆ ಕೈಕಟ್ಟಿ ಮೊಲದ ಸರ್ಪ್ರೈಸು ಕೊಟ್ಟಾಗ ಪುಟಾಣಿಗೆ ಖುಷಿಯೋ ಖುಷಿ. ಮತ್ತೆ ಮೊಲ ಸಿಕ್ಕಿದ ಖುಷಿಯಲ್ಲಿ ಅಪ್ಪನಿಗೆ ಅಪ್ಪುಗೆ, ಮುತ್ತಿನ ಸುರಿಮಳೆಯಾಯ್ತು. ಎಲ್ಲಿ ಸಿಕ್ತು ಹುಡುಗನ ಪ್ರಶ್ನೆ. ಅದೇ, ಚಾಕ್ಲೇಟು ತಿನ್ನಲು ಕೂತಿದ್ದೆ ಅಲ್ಲಾ, ಅಲ್ಲೇ ಬೀಳಿಸ್ಕೊಂಡಿದ್ದೆ ನೋಡು ನೀನು ಎಂದ ಅಪ್ಪ. ಅಷ್ಟರವರೆಗೆ ಪಾಕೆಟ್ಟಿನಲ್ಲಿ ಇಣುಕಿಕೊಂಡಿರುತ್ತಿದ್ದ ಮೊಲ ಈಗ ಸೀದಾ ಬ್ಯಾಗಿನೊಳಗೆ ಬಂಧಿಯಾಯಿತು. ಮತ್ತೆ ಕಳೆದುಹೋಗಬಾರಲ್ಲ!

ನನ್ನದೇ ಕಥೆ ಬೇಡ ಎಂದು ಆಗಾಗ ಮುಖ ಸೊಟ್ಟಗೆ ಮಾಡುತ್ತಿದ್ದ ಹುಡುಗನ ಕಣ್ಣಲ್ಲಿ ಮಿಂಚು. ʻ ಅರೆ ಅಮ್ಮಾ, ಆ ದಿನ ಮೊಲ ಕಾಡಲ್ಲಿ ಮತ್ತೆ ವಾಪಸ್‌ ಸಿಕ್ಕಿದ ಈ ನಮ್ಮ ಕಥೆ ಎಷ್ಟು ಚಂದ ಇದೆಯಲ್ಲಾ! ಎಂದ.

ಹುಂ ಅಂದೆ. ʻಅದೆಲ್ಲಾ ಸರಿ, ಈ ಕಥೆಗೆ ಹೆಸರಿಡೋದಾದ್ರೆ ಏನಂತ ಹೆಸರಿಡುವʼ ಅಂದೆ. ಸ್ವಲ್ಪ ಹೊತ್ತು ಯೋಚನೆ ಮಾಡಿದ ಹುಡುಗ ಥಟ್ಟನೆ ʻlost in the mountainsʼ ಅಂತ ಇಡ್ತೇನೆ ಅಂದ. ಅದ್ಯಾವುದೋ ಪುಟ್ಟ ಮಕ್ಕಳ ಆಕ್ಟಿವಿಟಿ ಪುಸ್ತಕದಲ್ಲಿ ನಿಮ್ಮ ಪುಸ್ತಕಕ್ಕೆ ಕವರ್‌ ಪೇಜ್‌ ಹೇಗೆ ಮಾಡ್ತೀರಿ ಮಕ್ಳೇ ಅಂತ ಖಾಲಿ ಬಿಟ್ಟ ಜಾಗದಲ್ಲಿ, ಇದೇ ʻಲಾಸ್ಟ್‌ ಇನ್‌ ದ ಮೌಂಟೆನ್ಸ್‌ʼ ಅಂತ ಹೆಸರಿಟ್ಟು, ಅದಕ್ಕೊಪ್ಪುವ ಚಿತ್ರವನ್ನೂ ಗೀಚಿ ಬಿಟ್ಟ. ಇದೇ ಖುಷಿಗೆ ಪುಸ್ತಕಕ್ಕೆ ನಾನೇ ಚಿತ್ರ ಬಿಡಿಸ್ತೇನೆ ಎಂದು ಒಂದೆರಡು ಚಿತ್ರವೂ ಬಿಡಿಸಿದ.

ಅಂದಹಾಗೆ, ಈ ಮೊಲ ಕಳೆದುಹೋದ ಈ ಪ್ರಸಂಗಕ್ಕೆ ಸ್ವಲ್ಪ ಹೊತ್ತಿನ ಮೊದಲಷ್ಟೆ ಈ ಹುಡುಗ, ಚಾರಣದ ನೆನಪಿಗೆ ಬರೀ ತನ್ನ ಫೋಟೋ ಇದ್ದರೆ ಸಾಲದು ಅಂತ ನನ್ನ ಕೈಯಿಂದ ಕ್ಯಾಮರಾ ಇಸಕೊಂಡು ನದೀ ದಂಡೆಯ ಮೇಲೆ ಪಾರಿವಾಳವನ್ನೂ ಮೊಲವನ್ನೂ ಬೇರೆ ಬೇರೆ ಭಂಗಿಯಲ್ಲಿ ಕೂರಿಸಿ ಫೋಟೋಶೂಟ್‌ ಕೂಡಾ ಮಾಡಿದ್ದಾನೆ. ಮೊಲ ಸಿಕ್ಕಿರದೇ ಇದ್ದಿದ್ದರೆ ಈಗ ನಾನು ಬರೀ ಆ ಫೋಟೋ ನೋಡಿಕೊಂಡಿರಬೇಕಿತ್ತಲ್ಲಮ್ಮಾ ಎಂದ.

ಇಷ್ಟು ದಿನ ದೊಡ್ಡವರದೇ ಕಥೆ ಕೇಳಿ ಹೇಳಿ, ಮಕ್ಕಳ ಕಥೆಗೂ ಸ್ವಲ್ಪ ಜಾಗ ಕೊಡುವ ಅಂತನಿಸಿ ಈ ಕಥೆ ನೆನಪಿನ ಜೋಳಿಗೆಯಿಂದ ಹೊರಬಂತು. ಪುಟ್ಟ ಮಕ್ಕಳ ಜೊತೆ ತಿರುಗಾಟ ಕಷ್ಟ ಎಂದು ಅಳಲು ತೋಡಿಕೊಳ್ಳುವ ಸುಮಾರು ಮಂದಿ ನೋಡಿದ್ದೇನೆ. ಹಲವರು ಇದಕ್ಕಾಗಿಯೇ ತಿರುಗಾಟವನ್ನೇ ನಿಲ್ಲಿಸಿದ್ದನ್ನೂ ನೋಡಿದ್ದೇನೆ. ʻಪುಟ್ಟ ಮಕ್ಕಳನ್ನು ಚಾರಣ, ತಿರುಗಾಟಕ್ಕೆಲ್ಲ ಕರಕೊಂಡು ಹೋಗ್ತೀರಲ್ಲ, ಅವರಿಗೂ ಕಷ್ಟ, ನಿಮಗೂ ಕಷ್ಟ ಅಲ್ವಾ? ಅಷ್ಟಕ್ಕೂ ಮಕ್ಕಳಿಗೆ ಈ ವಯಸ್ಸಲ್ಲಿ ನೋಡಿದ್ದೆಲ್ಲ ಹೆಂಗೆ ನೆನಪಾಗತ್ತೆ?ʼ ಅಂತೆಲ್ಲ ಕೆಲವರು ವಿಚಿತ್ರವಾಗಿ ಪ್ರಶ್ನೆ ಮಾಡುವಾಗ ಏನು ಹೇಳುವುದೋ ತೋಚುವುದಿಲ್ಲ. ಬಹುಶಃ ಉತ್ತರ ಬೇಕಿಲ್ಲ. ಈಗವನು ಮತ್ತೆ ಕೇಳುತ್ತಿದ್ದಾನೆ, ʻಅಮ್ಮಾ ಬಹಳ ದಿನ ಆಯ್ತು, ಎಲ್ಲಾದರೂ ಬೆಟ್ಟ/ಕಾಡಿಗೆ ಟ್ರೆಕ್‌ ಹೋಗುವ ಅಲ್ವಾ.ʼ ಪುಟ್ಟ ಮಕ್ಕಳ ತಲೆಯಲ್ಲಿ ಹೀಗೊಂದು ಕಾಡು ಸುತ್ತುವ ಯೋಚನೆ ಬರುತ್ತದೆಯಲ್ಲ ಅಷ್ಟು ಸಾಕು, ಅದು ಇಷ್ಟರವರೆಗೆ ಬೆನ್ನಿಗೆ ಕಟ್ಟಿಕೊಂಡು ತಿರುಗಾಡಿದ್ದರ ಸಾರ್ಥಕತೆ.

‍ಲೇಖಕರು Admin

August 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: