ದರ್ಶನ್ ಜಯಣ್ಣ ಸರಣಿ – ಗುಲ್ಕನ್ ಸಿಹಿ ಮತ್ತು ಫ್ಯಾಕ್ಟರಿ ಕಹಿ!

ದರ್ಶನ್ ಜಯಣ್ಣ 

2

ಅಪ್ಪನ ಬಗ್ಗೆ ಯಾವಾಗಲೂ ನನಗೆ ಅನ್ನಿಸೋದು ‘ಭುಜಂಗಯ್ಯನದ್ದು ದಶಾವತಾರವಾದರೆ ಅಪ್ಪನದ್ದು ಅಪರಾವತಾರ’ ಎಂಬುದು. ಇದಕ್ಕೆ ಆತ ಮಾಡಿದ್ದ ಕಸುಬುಗಳೇ ಕಾರಣ. ಪಟಾಕಿಯಿಂದ ಸ್ಪಿರಿಟ್ಟು, ಗಿಡಮೂಲಿಕೆಯಿಂದ ಗಿರ್ಮಿಟ್ಟು (ಪುರಿ ಮಂಡಕ್ಕಿಅಥವಾ ಚುರುಮುರಿ). ಹೀಗೆ ಆತ ಮಾಡಿದ ಹಲವು ಬಿಸ್ನೆಸ್ಸುಗಳಲ್ಲಿ ಒಂದು ಕಾಲದಲ್ಲಿ ಬಹುಮುಖ್ಯವಾದುದೆಂದರೆ ಅದು ‘ಗುಲ್ಕನ್’ ವ್ಯಾಪಾರ!

ನನಗೆ ನೆನಪಿರುವಂತೆ ನಾನು ಚಿಕ್ಕವನಾಗಿರುವಾಗ ನಮ್ಮ ಮನೆಯ ಅಡುಗೆ ಮನೆಯ ನೆಲದ ಮೇಲಿದ್ದ ಒಳಕಲ್ಲಿನಲ್ಲಿ ಅಮ್ಮ ಗುಲಾಬಿ ದಳಗಳನ್ನು ಒಟ್ಟುಮಾಡಿ ಕುಟ್ಟುತ್ತಿದ್ದಳು. ಬಗೆಬಗೆಯ ಬಣ್ಣದ ಗುಲಾಬಿ ದಳಗಳು ಅದರದ್ದೇ ಆದ ಘಮಲು, ಕುಟ್ಟಿಸಿಕೊಂಡೊಡನೆ ಬಜ್ಜಿಯಾಗಿ ಮಂಕಾಗುತ್ತಿದ್ದವು. ಈ ರೀತಿ ಜಜ್ಜಿದ ಗುಲಾಬಿಯನ್ನು ಸಕ್ಕರೆ ಪಾಕದಲ್ಲಿ ಕುದಿಸಿ ಏಲಕ್ಕಿಯನ್ನು ಹಾಕಿ ತಣ್ಣಗೆ ಮಾಡಿ ಬಗೆಬಗೆಯ ಪಿಂಗಾಣಿಯ ಜಾಡಿಗಳಲ್ಲಿ ತುಂಬಿ ಮುಚ್ಚಿ, ಕತ್ತ ಕಟ್ಟುತ್ತಿದ್ದರು. ಹೀಗೆ ತಿಂಗಳಾನುಗಟ್ಟಲೆ ಇಟ್ಟು ಕಾಪಾಡಿದಮೇಲೆ ‘ಗುಲ್ಕನ್’ ತಯಾರಾಗುತ್ತಿತ್ತು. ನಾವು ಬಳಸಿದ ಗುಲಾಬಿ ದಳಗಳ ಗುಣಮಟ್ಟದ  ಮೇಲೆ, ಜಾಡಿಯಲ್ಲಿ ಅದು ಹುದುಗಿದ್ದ ತಿಂಗಳುಗಳ ಅಥವಾ ವರ್ಷಗಳ  ಮೇಲೆ ಮತ್ತು ಗಿರಾಕಿಗಳ (ಕೊಳ್ಳುವವರ) ನಿರೀಕ್ಷೆಗಳ  ಮೇಲೆ ಅದರ ಬೆಲೆ ನಿರ್ಧಾರವಾಗುತ್ತಿತ್ತು. 

ಅಪ್ಪ ಹೇಳುತ್ತಿದ್ದುದು ನನಗೆ ಈಗಲೂ ನೆನಪಿದೆ. ‘ನಮ್ಮಲ್ಲಿ ೪೦ ರೂ ಕೆ.ಜಿ ಇಂದ ೨೫೦ ರೂ ಕೆ. ಜಿ ಯ ವರೆವಿಗೆ ಗುಲ್ಕನ್ ಇದೆ, ದುಬಾರಿ ಗುಲ್ಕನ್ ಗೆ ಗುಲಾಬಿ ‘ಕಾಬುಲ್ ‘ನಿಂದ ಬರುತ್ತದೆ’ ಎಂದು! ನನಗೋ ಕಾಬುಲ್ ಎಲ್ಲಿದೆಯೆಂದೂ ತಿಳಿಯದ ವಯಸ್ಸು ಅಪ್ಪನನ್ನು ಕೇಳಿದಾಗ ಅದು ಅಫ್ಘಾನಿಸ್ತಾನದ ರಾಜಧಾನಿಯೆಂದು ಅಲ್ಲಿ ಗುಲಾಬಿ ಗಿಡಗಳು ಹೇರಳವಾಗಿವೆಯೆಂದೂ ಅದಕ್ಕೆ ತುಂಬಾ ಬೇಡಿಕೆ ಇರುವುದಾಗಿಯೂ ಅದಕ್ಕೆ ಅದನ್ನು ಮಧ್ಯಪ್ರಾಚ್ಯದಲ್ಲೆಲ್ಲಾ ಗುಲಾಬಿ ಸೆಂಟಿಗೆ ಬಳಸುತ್ತಾರೆಂದೂ ಏನೇನೋ ಹೇಳುತ್ತಿದ್ದರು. 

ನನಗೆ ನೆನಪಿರುವ ಹಾಗೆ ನಾವು ಎರಡು ಬಗೆಯ ಗುಲಾಬಿಯನ್ನು ಒಂದು ದಳ ಮತ್ತೊಂದು ಪುಡಿ ಯನ್ನು  ಬಳಸುತ್ತಿದ್ದೆವು. ಒಂದು ಅಪ್ಪ ಬೆಂಗಳೂರಿನಿಂದ ಖರೀದಿಸುತ್ತಿದ್ದ, ಒಣಗಿಸಿದ ಗುಲಾಬಿ ಮೂಟೆಗಳು (ಕಾಬೂಲಿನದ್ದು !) ಇನ್ನೊಂದು ನಮ್ಮೊರಿನ ಹೂವಾಡಿಗರು ಒಟ್ಟು ಮಾಡುತ್ತಿದ್ದ ಬಗೆಬಗೆಯ ಗುಲಾಬಿ ದಳಗಳು.

ಮೊದಲನೆಯದ್ದು ಒಣಗಿಸಿದ್ದರಿಂದ ಅದರ ವಾಸನೆಯಿಂದಲೇ ಅದರ ಗುಣಮಟ್ಟವನ್ನ ಅರಿಯಬೇಕಾಗಿತ್ತು. ಎರಡನೆಯದು ಗುಲಾಬಿಹಾರಗಳನ್ನು ಕಟ್ಟುವಾಗ ಉದುರಿಬಿದ್ದ ದಳಗಳನ್ನು ಒಟ್ಟುಮಾಡಿದ್ದು. ಕೆಲವೊಮ್ಮೆ ಒಣಗಿದ ಕಾಬುಲಿ ಗುಲಾಬಿಗೆ ಬೆಲೆ ಹೆಚ್ಚಿದ್ದರೆ ಕೆಲವು ಬಾರಿ ಹೂವಾಡಿಗರ ಗುಲಾಬಿಗೆ ಬೆಲೆ ಹೆಚ್ಚಿರುತ್ತಿತ್ತು. ಇದು ಸೀಸನ್ ನಿಂದ ಸೀಸನ್ ಗೆ ವ್ಯತ್ಯಾಸವೂ ಆಗುತ್ತಿದ್ದು ಬೆಲೆ ಹೆಚ್ಚಿದ್ದರೂ ಅಪ್ಪ ಹೂವಾಡಿಗರಿಂದ ಯಾವಾಗಲೂ ಕೊಳ್ಳುತ್ತಿದ್ದುದಕ್ಕೆ ಕಾರಣ ಅದು ತಾಜಾ ಆಗಿರುತ್ತಿತ್ತು. ಹಸಿ ಗುಲಾಬಿಯನ್ನು ಜೆಜ್ಜಿ ಬಳಸುತ್ತಿದ್ದೆವು. ಒಣಗಿದ್ದನ್ನು ಸ್ವಲ್ಪ ಹರಡಿಕೊಂಡು ಕಸಕಡ್ಡಿಗಳನ್ನು ತೆಗೆದುಹಾಕಿ ನೇರವಾಗಿ ಕುದಿಸುತ್ತಿದ್ದೆವು. 

ಅಪ್ಪ ಎಂದಿಗೂ ಎರಡು ಬಗೆಯ ಗುಲಾಬಿಯನ್ನ ಒಂದು ಬಗೆಯ ಗುಲ್ಕನ್ ಗೆ ಬಳಸಿದ್ದನ್ನು ನಾಕಾಣೆ. ಈ ಮೇಲಿನ ಆಧಾರದಮೇಲೆ ಮತ್ತು ಅದನ್ನು ಶೇಖರಿಸಿದ್ದ ತಿಂಗಳು ( ವರ್ಷಗಳ) ಆಧಾರದಮೇಲೆ ಅದರ ದರ ನಿಗದಿಪಡಿಸುತ್ತಿದ್ದರು. ಸಾಮಾನ್ಯವಾಗಿ ಬೀಡಾ ಸ್ಟಾಲುಗಳಿಗೆ ಹೋಗುತ್ತಿದ್ದ ಗುಲ್ಕನ್ನು ಅತ್ಯಂತ ಕಡಿಮೆ ಬೆಲೆಯದ್ದಾಗಿರುತ್ತಿತ್ತು. ಅಂಗಡಿಯ ಡಬ್ಬಿಗಳಲ್ಲಿ ತುಂಬಿ ಮಾರುತ್ತಿದ್ದುದು ಮತ್ತು ಮನೆಗಳಿಗೆ ಹೋಗುತ್ತಿದ್ದ ಮುಂಗಡ ಆರ್ಡರ್ ಗುಲ್ಕನ್  ದುಬಾರಿಯಾಗಿರುತ್ತಿತ್ತು. ಇವೆರೆಡರ ಮಧ್ಯದ್ದು ಬನ್ನು-ಬೆಣ್ಣೆ-ಗುಲ್ಕನ್ ಗೆ ಹೋಗುತ್ತಿತ್ತು.

ಅಪ್ಪನಿಗೆ ಬಣ್ಣ-ಸುಗಂಧ ಮತ್ತು ಗುಣಮಟ್ಟಗಳ ಬಗ್ಗೆ ಗಾಢವಾದ ಅನುಭವವಿದದ್ದು ನನಗೆ ತಿಳಿದದ್ದು ತುಂಬಾ ತಡವಾಗಿ, ಅದೂ ನಾನು ನಮ್ಮ ಗ್ರಂಥಿಗೆ ಅಂಗಡಿಗೆ ಬೆಂಗಳೂರಿನಲ್ಲಿ ಸಾಮಾನು ಸರಂಜಾಮು ಖರೀದಿಸಿಸಲು ಶುರುಮಾಡಿದಮೇಲೆಯೇ. ಆಗೆಲ್ಲಾ  (೨೦೦೦ ದಲ್ಲಿ) ಬೆಂಗಳೂರಿನ ಹಳೆ ತರಗುಪೇಟೆ, ಅವೆನ್ಯೂ ರಸ್ತೆಯ ಆಸುಪಾಸುಗಳಲ್ಲೇ (ಭಾಗಶಃ ಈಗಲೂ) ಸಗಟು ವ್ಯಾಪಾರಿಗಳಿದ್ದುದ್ದು (ಷರಾಫ್ ಚನ್ನಬಸಪ್ಪ & ಸನ್ಸ್, ವಾಸವಿ ಟ್ರೇಡಿಂಗ್ ಕಂಪನಿ, ಸುಗಂಧಿ ಗ್ರಂಥಿಗೆ ಅಂಗಡಿ ಇತ್ಯಾದಿ) ಮತ್ತು ಈ ವ್ಯಾಪಾರ ಅನುವ೦ಶಿಕವೂ ಸಹ. ಆ ಅಂಗಡಿಯ ಕೆಲವರಿಂದ ಅಪ್ಪನ ಕೌಶಲದ ಬಗ್ಗೆ ನನಗೆ ತಿಳಿದಾಗ ಎಷ್ಟು ಹೆಮ್ಮೆಯಾಯಿತೋ ಅಷ್ಟೇ ಬೇಜಾರು ಅಪ್ಪ ಅನಿವಾರ್ಯ ಕಾರಣಗಳಿಂದ ತಮ್ಮ ಗುಲ್ಕನ್ ಫ್ಯಾಕ್ಟರಿಯನ್ನ ಮುಚ್ಚಬೇಕಾಗಿ ಬಂದ ಪರಿಸ್ಥಿತಿ ಕೇಳಿ ಆಯಿತು. ಆಗ ನನಗೆ ನಮ್ಮದೂ ಒಂದು ಫ್ಯಾಕ್ಟರಿ ಇತ್ತಾ ಎಂಬ ವಿಚಾರವೇ ತಿಳಿದಿರಲಿಲ್ಲ ! 

೧೦ X ೧೫ ರ ನಮ್ಮ ಪುಟ್ಟ ಅಂಗಡಿ ಎಲ್ಲಿ ಗುಲ್ಕನ್ ಫ್ಯಾಕ್ಟರಿ ಎಲ್ಲಿ ? ಈ ಬಗ್ಗೆ ಅಪ್ಪನನ್ನು ಕೇಳುವ ಮುಂಚೆ ಅವರು ಯಾವ ಕಾರಣಕ್ಕೆ ಇದನ್ನು ಮುಚ್ಚಿಟ್ಟಿರಬಹುದೆಂಬುದರ ಬಗ್ಗೆ ಯೋಚಿಸಿದೆ. ನನಗೆ ಏನೂ ಹೊಳೆಯದ ಕಾರಣ ರಜೆಯಲ್ಲಿ ಮನೆಗೆ ತೆರಳಿದಾಗ ಮೊದಲು ಅಜ್ಜಿಯನ್ನು ಕೇಳಿದೆ. ಇದರಿಂದ ಕಸಿವಿಸಿಗೊಂಡ ಅಜ್ಜಿ ಕೈ ನೆಟ್ಟಿಗೆ ಮುರಿದು ಯಾರನ್ನೋ ಶಪಿಸಿದಳು ! ಅವಳಿಗೆ ಅದರ ಬಗ್ಗೆ ಹಂಚಿಕೊಳ್ಳುವ ಆಸೆ ಮತ್ತು ಆಸಕ್ತಿ ಇರಲಿಲ್ಲ. ಅಮ್ಮನನ್ನು ಕೇಳಿದೆ ಆದರೆ ಅವಳಿಗೆ ಈ ವಿಷಯ ಮದುವೆಯ ಮುಂಚಿನದ್ದಾದ್ದರಿಂದ ಅದರ ಬಗ್ಗೆ  ಹೆಚ್ಚಾಗಿ ತಿಳಿದಿರಲಿಲ್ಲ. ನಾನಾದರೋ ಬಿಡದೆ ಮೂಡು ನೋಡಿ ಒಂದು ದಿನ ಅಪ್ಪನನ್ನು ಕೇಳಿಯೇ ಬಿಟ್ಟೆ. 

ಅಪ್ಪ ಮಾತಿನ ಲಹರಿಯಲ್ಲಿದ್ದವರು ಒಮ್ಮೆಗೇ ಧೀರ್ಘವಾಗಿ ಉಸಿರೆಳೆದುಕೊಂಡು ತಾನು ಸೌದೆ ಕಂಟ್ರಾಕ್ಟರ್ ಕೆಲಸ ಬಿಟ್ಟಮೇಲೆ ಆಯುರ್ವೇದ ಪದ್ದತಿಯ ಬಗ್ಗೆ ಕಲಿಯುತ್ತಿದ್ದಾಗ ಜೊತೆಜೊತೆಗೆ ಗುಲ್ಕನ್ ಮಾಡುವುದನ್ನು ಕಲಿತಿದ್ದಾಗಿಯೂ ಆಗ ಕಾಬುಲ್ ಮತ್ತು ಬೇರೆಡೆಯಿಂದ ಗುಲಾಬಿ ಪುಡಿಯನ್ನು ಖರೀದಿಸುತ್ತಾ ಆಗಾಗ ಪ್ರಯೋಗಮಾಡಿ ‘ಗುಲ್ಕನ್’ತಾಯಾರಿಕೆಯ ಹದ ಮತ್ತು ಒಳಹುಗಳನ್ನು ತಿಳಿದಿಕೊಂಡಿದ್ದು, ಬಣ್ಣ, ಮಾಗುವಿಕೆ, ಗುಲಾಬಿಯ ಜಾಡು ಇವೆಲ್ಲವೂ ಹೇಗೆ ‘ಗುಲ್ಕನ್’ ನ ಮೇಲೆ ಪರಿಣಾಮ ಬೀರುತ್ತದೆ ಎಂಬುದಾಗಿ ಅರಿತುಕೊಂಡಿದ್ದನೆಲ್ಲ ಬಿಡಿಯಾಗಿ ಹೇಳಿದರು. ನಾನು ಮೈಯೆಲ್ಲಾ ಕಿವಿಯಾಗಿದ್ದೆ !

ಅಪ್ಪ ಗುಲ್ಕನ್ ತಯಾರಿಸುವುದನ್ನು ಪ್ಯಾಶನ್ ಆಗಿ ತೆಗೆದುಕೊಂಡರು. ಮೂಲತಃ ಬೇಸಾಯದ ಹಿನ್ನೆಲೆ ಇದ್ದವರು ಗೊಬ್ಬರ, ಬೀಜ ಇಂತಹವುಗಳಲ್ಲಿ ಪ್ರಯೋಗ ಮಾಡಿದವರು, ಮಾಡಿದ್ದನ್ನು ನೋಡಿದವರು ಸೌದೆ ಕಂಟ್ರಾಕ್ಟರ್ ಆದಮೇಲೆ ಏನು ತಾನೆ ಪ್ರಯೋಗ ಮಾಡಿಯಾರು! ಅದಕ್ಕೋ ಏನೋ ‘ಗುಲ್ಕನ್’ ತರರಿಕೆಯಲ್ಲಿ ತಮ್ಮನ್ನು ತಾವು ಪೂರ್ಣವಾಗಿ ತೊಡಗಿಸಿಕೊಂಡರು. ಶುರುವಿನಲ್ಲಿ ಹತ್ತಾರು ಕೆಜಿ ತಯಾರಿಸಿ ಮಾರಿ ಅನುಭವ ಪಡೆದು ಬಂದ ಪ್ರತಿಕ್ರಿಯೆಯನ್ನು ಜತನದಿಂದ ಪರಾಮರ್ಶಿಸಿ ಚಿಕ್ಕದಾದ ಫ್ಯಾಕ್ಟರಿ ಒಂದನ್ನ ಆರಂಭಿಸಿದರು. ಇದಕ್ಕೆ ಆಗ (೧೯೮೦) ಅವರಲ್ಲಿದ್ದ ೫೦-೬೦ ಸಾವಿರ ರೂಪಾಯಿಗಳನ್ನು ಮೊದಲಿಗೆ ವ್ಯಯಿಸಿ ನಾಲ್ಕಾರು ಕೆಲಸಗಾರರನ್ನು ನೇಮಿಸಿಕೊಂಡರು. ಶುರುವಿನಲ್ಲಿ ಎಲ್ಲಾ ಚೆನ್ನಾಗಿಯೇ ನೆಡೆಯುತ್ತಿತ್ತು.

ಆಗೆಲ್ಲ ಅಪ್ಪನೇ ತನ್ನ ಸೈಕ್ಲಲಿನ ಮೇಲೆ ಸುತ್ತಾಡಿ ಆರ್ಡರ್ ಪಡೆದು ಸರಬರಾಜು ಮಾಡಿ ಹಣವನ್ನೂ ಸ್ವತಃ ತಾವೇ ಪಡೆಯುತ್ತಿದ್ದರು. ಬರಬರುತ್ತಾ ತುಮಕೂರಿನ ಹೃದಯಭಾಗದಲ್ಲಿ ಅಪ್ಪ ಗ್ರಂಥಿಗೆ ಅಂಗಡಿ ಆರಂಭಿಸಿದ ಮೇಲೆ ಎರಡು ದೋಣಿಯ ಪಯಣ ಆದ್ದರಿಂದ ಫ್ಯಾಕ್ಟರಿ ನೋಡಿಕೊಳ್ಳಲು ಒಬ್ಬರನ್ನು ನೇಮಿಸಿಕೊಂಡರು. ಹಾಗೆ ಬಂದವರು ಕೆಲವೇ ದಿನಗಳಲ್ಲಿ ಸಂಪೂರ್ಣ ಜವಾಬ್ಧಾರಿ ಪಡೆದುಕೊಂಡರು. ತಪ್ಪದದ್ದು ಅಲ್ಲೇ! ಅಪ್ಪ ಆತನಿಗೆ ಖರೀದಿ, ಸರಬರಾಜು, ವಸೂಲಿ ಎಲ್ಲ ಜವಾಬ್ಧಾರಿ ವಹಿಸಿದ್ದರಿಂದ ಆತ ಬರಬರುತ್ತಾ ತೂಕಗಳಲ್ಲಿ ವ್ಯತ್ಯಾಸ ಮಾಡುವುದು, ಕಡಿಮೆ ಬೆಳೆಯ ಗುಲ್ಕನ್ ಅನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಬೆರಕೆ ಮಾಡುವುದು, ಹೇಳದೆ ಕೇಳದೆ ಬೆಲೆ ಏರಿಸಿ ಮಿಕ್ಕ ಹಣವನ್ನು ನುಂಗಿಹಾಕುವುದು ಇದೆಲ್ಲ ಮಾಡತೊಡಗಿದರು. ಇದರ ಮಧ್ಯೆ ಕೆಲಸದವರನ್ನು ಆತ ಹಾಳುಮಾಡತೊಡಗಿದ್ದು, ಶುಚಿತ್ವದ ಬಗ್ಗೆ ಗಮನ ಕೊಡದೆ ಹಲವಾರು ಬ್ಯಾಚುಗಳನ್ನು ಹಾಳುಗೆಡವಿದ್ದು ಎಲ್ಲ ನಡೆಯಿತು.

ಶುರುವಿನಲ್ಲಿ ಅಪ್ಪ ಹೊಸ ಜನ ಬಂದಾಗ ಇದೆಲ್ಲಾ ಸಾಮಾನ್ಯ ಎಂದುಕೊಂಡರಾದರೂ, ಇನ್ನೊಂದೆರಡು ಫ್ಯಾಕ್ಟರಿಗಳು ತಲೆಯೆತ್ತಿದ ಮೇಲೆ ಪೈಪೋಟಿ ಹೆಚ್ಚಾಗಿ ನೂಕ್ಸಾನಾಗತೊಡಗಿತು. ಇದು ಆರ್ಥಿಕ ಪರಿಸ್ಥಿತಿಯ ಮೇಲೆ ಭಾರಿ ಪರಿಣಾಮಬೀರಿತು. ಫ್ಯಾಕ್ಟರಿ ಚೆನ್ನಾಗಿ ನಡೆಯುತ್ತಿದೆಯೆಂದು ತಿಳಿದು ಇನ್ನಷ್ಟು ಬಂಡವಾಳವನ್ನು ಹಾಕಿದ ಅಪ್ಪ ಕೆಲಸದವರ ಮೋಸಕ್ಕೆ, ಅತಿ ಆಸೆಗೆ ಮತ್ತು ತನ್ನ ಪೆದ್ದುತನಕ್ಕೆ ಲಕ್ಷಾಂತರ ರೂಪಾಯಿ ಕಳೆದುಕೊಳ್ಳಬೇಕಾಯಿತು. ಹೀಗೆ ಫ್ಯಾಕ್ಟರಿ ಮುಚ್ಚಿತು ನಂತರ ಅಪ್ಪನ ಮದುವೆಯಾಯಿತು !

ಅಪ್ಪ ಇಷ್ಟೆಲ್ಲಾ ಆದರೂ ತನ್ನದೇ ಹೊಣೆ ಅಂದರು. ದೊಡ್ಡ ವ್ಯವಹಾರಕ್ಕೆ ಕೈ ಹಾಕಿದಾಗ ಎಡಗೈ -ಬಲಗೈ ನಂಬಬಾರದು. ಶೆಟ್ಟರುಗಳನ್ನ -ಮಾರ್ವಾಡಿಗಳನ್ನ ನೋಡಿ ನಾವು ಕಲಿಬೇಕು. ಒಬ್ಬರು ಎಲ್ಲವನ್ನೂ ಅಳೆದು ತೂಗಿ ವ್ಯವಹರಿಸಿದರೆ ಇನ್ನೊಬ್ಬರು ಅಂಗಡಿಯಿಂದ ಕದಲದೇ ಎಲ್ಲವನ್ನು ತಮ್ಮ ಹತೋಟಿಯಲ್ಲೇ ಇಟ್ಟುಕೊಳ್ಳೋದರಿಂದಲೇ ಲಕ್ಷ್ಮೀ ಅವರ ಮನೆಯಲ್ಲೇ ಇರುತ್ತಾಳೆ ಎಂಬುದು ಅವರ ಸಮಜಾಯಿಷಿ. ನಾನೋ, ನಮ್ಮ ಫ್ಯಾಕ್ಟರಿಯಾದ್ರು ಇದ್ದಿದ್ದರೆ ಶಾಲೆಯಲ್ಲಿ ನಿಮ್ಮ ಅಪ್ಪನ ಕೆಲಸ ಏನು ಎಂದು ಕೇಳಿದ್ದಾಗಲೆಲ್ಲ ‘ಫ್ಯಾಕ್ಟರಿ ಓನರ್’ ಎನ್ನಬಹುದಿತ್ತೆಲ್ಲ ಎಂದು ಬೇಜಾರು ಮಾಡಿಕೊಂಡಿದ್ದೆ !

ಇದಾದ ಎಷ್ಟೋ ವರ್ಷಗಳ ನಂತರ ಒಂದು ಸಂಜೆ ನಮ್ಮ ಅಂಗಡಿಯಲ್ಲಿ (ಜ್ಯೂಸು ಸೆಂಟರ್) ತುಂಬಾ ಜನಸಂದಣಿಯಿದ್ದ ಹೊತ್ತು, ವ್ಯಕ್ತಿಯೊಬ್ಬ ಬಂದು ಮೂಲೆಯಲ್ಲಿ ನಿಂತಿದ್ದರು. ಎಲ್ಲ ಗಿರಾಕಿಗಳನ್ನು ಕ್ಷಣಮಾತ್ರದಲ್ಲಿ ವಿಚಾರಿಸುತ್ತಿದ್ದ ಅಪ್ಪ ಅವರ ಕಡೆ ಕಣ್ಣಾಡಿಸಲಿಲ್ಲವಾದ್ದರಿಂದ ಗಲ್ಲಾಪೆಟ್ಟಿಗೆಯ ಮೇಲಿದ್ದ ನಾನೇ ‘ಏನು ಬೇಕು ಇವ್ರೇ?’ ಎಂದೆ. ಅದಕ್ಕೆ ಆತ ಮಾತನಾಡದೆ ಅಪ್ಪನ ಕಡೆಗೆ ಬೊಟ್ಟುಮಾಡಿದರು. ನಾನು ಅಪ್ಪನನ್ನ ಕರೆದೆ…. ಅಪ್ಪ ಆತನನ್ನು ‘ಏನಯ್ಯ ನಿಂದು’ ಎಂದು ಕೇಳಿದರು. ಅವರ ಧ್ವನಿ ಸಂಪೂರ್ಣ ಬದಲಾಗಿತ್ತು! ಆತ ಅದೇನೋ ಕಷ್ಟ ಹೇಳಿಕೊಂಡದನ್ನು ಕೇಳಿದ  ಅಪ್ಪ ತಲೆಯಾಡಿಸಿ ಒಂದಷ್ಟು ಬುದ್ಧಿ ಹೇಳಿ ನನ್ನ ಕಡೆ ತಿರುಗಿ ‘ದರ್ಶನ ಐನೂರು ರೂಪಾಯಿ ಕೊಡೊ ಅವ್ನಿಗೆ’ ಅಂದರು. ನಾನು ಕೊಟ್ಟ ನಂತರ ಅಮ್ಮನ ಕಡೆ ತಿರುಗೆ ಅವ್ನಿಗೆ ಒಂದು ಗಸ ಗಸೆ ಹಾಲು ಕೊಡಲು ಹೇಳಿದರು. ಆತ ಹಾಲು ಕುಡಿದು ಹೊರಟುಹೋದ.

ಜನಸಂದಣಿ ಕಡಿಮೆಯಾದಮೇಲೆ ಅಮ್ಮ, ಆತ ಯಾರೆಂದು ಕೇಳಿದಳು. ಅಪ್ಪ ನಿರಾಳವಾಗಿ ‘ಒಂದು ಕಾಲದ ನಮ್ಮ ಗುಲ್ಕನ್ ಫ್ಯಾಕ್ಟರಿ ಮ್ಯಾನೇಜರ್’ ಅಂದರು. ನನಗೆ ಮೈಯೆಲ್ಲಾ ಉರಿದು ಹೋಯಿತು. ನಮ್ಮ ದಿನದ ವ್ಯಾಪಾರವೇ ಹೆಚ್ಚೆಂದರೆ ಒಂದು ಸಾವಿರವಾಗುತ್ತಿತ್ತು, ಅದೂ ಬೇಸಿಗೆಯಲ್ಲಿ ಮಾತ್ರ! ಅದರಲ್ಲಿ ಅಪ್ಪ ಆ ಮನುಷ್ಯನಿಗೆ ೫೦೦ ರೂ ಕೊಟ್ಟಿದ್ದರು. ಅಮ್ಮ ರಾತ್ರಿ ಊಟ ಬಡಿಸುವಾಗಲೂ ಅಪ್ಪನ ಬಳಿ ಮಾತನಾಡಲಿಲ್ಲ. ಹೀಗೆ ಅತ್ಯಂತ ಸಿಹಿಯಾದ ‘ಗುಲ್ಕನ್’ ನಮ್ಮಗಳ ನಡುವೆ ಕಹಿಯನ್ನು ತಂದು ಹಾಕಿತ್ತು. 

‍ಲೇಖಕರು Admin

August 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: