ಸಂಕಲ್ಪ..

ಮೂಲ : ತಾರೀಖ್ ಖಮರ್

ಕನ್ನಡಕ್ಕೆ: ನೂರುಲ್ಲಾ ತ್ಯಾಮಗೊಂಡ್ಲು

ಬಹಳ ಬೆರಗಿನ ದೃಶ್ಯ
ಅದೊಂದು ಅನುಪಮ ಇರುಳು
ಸಮೀರನ ಆತಂಕ, ನಿಶ್ಶಬ್ಧವಾಗಿ ಉರಿಯುತಿಹ ದೀಪ
ಪ್ರತಿ ನೆಲೆಯ ನಿಗ್ರಹ ನೀರವ-
ನಿಸರ್ಗವೂ ಖಿನ್ನ ಸ್ಮಶಾನ ಮೌನವತೆಯಲಿ

ಇರುಳ ಶಾಂತ ಸಂಚಿತತೆ, ವಿಪ್ಲವದ ಸಂಜೆ ಸುಳಿಯುತ್ತಿತ್ತು
ಬಾನಂಗಳದಲಿ ಮಹಾಸಭಾ ಘನವಂತರಿಂದ ಸಿಂಗಾರಗೊಂಡಿತ್ತು
ಬಹಳಷ್ಟು ವಿಚಾರಗಳಿದ್ದವು, ಯಾವೊಂದು ಮಾತಿರಲಿಲ್ಲ
ಮತ್ತಿದರ ಹೊರತು ಇರುಳು ಇರುಳೇ ಆಗಿರಲಿಲ್ಲ

ಆ ಇರುಳು ಮತ್ತೆ ಯಾವಾಗ ನೆನಪಿಗೆ ಬರುವುದೋ ಆಗ
ದಿವ್ಯಕಾಂತಿ ದಿಕ್ಪಥ-

ಆ ಇರುಳಲಿ ಪ್ರತಿಜ್ಞೆ ಪದಾತಿಯಾಗಿತ್ತು
ಆ ಇರುಳಲೇ ಪ್ರತಿಜ್ಞಾ ಪುಸ್ತಕ ಬರೆಯಲ್ಪಟ್ಟಿತ್ತು
ಆ ಇರುಳ ವರ್ಣನೆ ಯಾರು ಹೇಗೆ ತಾನೆ ಮಾಡಿಯಾರು ?
ಆ ಆಲೋಚನೆಯ ಬಂಧಿ ಯಾರು ತಾನೆ ಮಾಡಿಯಾರು ?
ರುಧಿರ ಸ್ವಪ್ನದ ವಿವರಣೆ ಯಾರು ತಾನೆ ಮಾಡಿಯಾರು ?
ಎಂತಹ ಇರುಳ ಪಯಣವಿತ್ತದು!
ಯಾರಾದರೂ ನುಡಿಯುವರೇ ಆ ಇರುಳ ಕಾಲವನು ?

‘ಶರಾ’ ದ ಬೇಡಿಕೆ ಬಹಳವಿದ್ದವು
ಆ ಒಂದು ಇರುಳಲಿ ಎಷ್ಟೊಂದು ಕಾಯಕಗಳಿದ್ದವು
ಆದರೆ,
ಕೇವಲ ಒಂದು ರಾತ್ರಿಯ ಕಾಲಾವಕಾಶವಿತ್ತು
ಮನುಷ್ಯನಿಗೆ ಉಪಾಸನ ಪ್ರಜ್ಞೆ ಮೂಡಿಸುವುದಿತ್ತು
ಓದಿನ ಶಿಷ್ಟಾಚಾರ, ಕಲಿಕೆಯ ಅರಿವು ಮೂಡಿಸುವುದಿತ್ತು

ಆ ಇರುಳು ಹೇಗಿತ್ತೆಂದರೆ
ದಿಟ್ಟಿ ಕೂಡಿಸಿದ್ದು ಮತ್ತೆ ತಿರುಗಿಸಲೇ ಇಲ್ಲ

ಆ ಮರುಭೂಮಿಯ ಎದೆಯಲ್ಲೊಂದು ಡೇರೆ ನಿರ್ಮಾಣವಾಗಿತ್ತು
ನೆತ್ತರಿನಿಂದ ತಾಳ್ಮೆಯ ತಾರೀಖು ಬರೆಯುವವನಿದ್ದ ಅವನು
ನಂದುತ್ತಿರುವ ದೀಪದ ಹಾಗೆ ಕಾಯುತ್ತಾ ನಿಂತಿದ್ದರೂ
ಅವನೊಳಗೆ ದೇದಿಪ್ಯತೆ ಬೆಳಗಿತ್ತು

ಆತನಿಗೆ ಗೊತ್ತಿತ್ತು ಸಂಗಡಿಗರ ಪ್ರಾಮಾಣಿಕತೆ
ಅವರು ತಲೆ ದಂಡಿಸುವರೇ ಹೊರತು ಜೊತೆ ಬಿಡಲೊಲ್ಲರೆಂದು
ಗುಡಿಸಲ ದೀಪ ನಂದಿಸುವ ಉದ್ದೇಶವಾಗಿರಲಿಲ್ಲ
ಬದಲು ‘ಅಂಸಾರ’ ರ ಸಹಾಯ ಪರೀಕ್ಷಿಸುವುದಾಗಿತ್ತು
ಅವರಿಗೆ ಬೆಳಕಲ್ಲಿ ತರುವುದಾಗಿತ್ತು

ಆತ ದೇವರ ಸಂಜ್ಞೆ ತಿಳಿಯುತಲಿದ್ದ
ಸೃಷ್ಟಿಯ ಸಂಪದ ಆತನ ಸಮ್ಮತಿಯೊಂದಿಗಿತ್ತು
ಎಲ್ಲಿಯ ತಾಳ್ಮೆ, ಎಲ್ಲಿಯ ಜಗದ್ಭವ್ಯತೆಯ ನಿರ್ಬಂಧ ?
ಆಕಾಶದಿಂದ ಧ್ವನಿ ನಿರ್ವಾಚಿಸಲ್ಪಡುತ್ತಿತ್ತು
‘ಏನು ಆಕಾಶದ ಆಸೆ, ದೇವರಿಗೆ ಪರೀಕ್ಷೆ ಬೇಕಿದೆ…
ರೇಗಿಸ್ಥಾನದತ್ತ ಯಾರೊ ಹೆಜ್ಜೆ ಹಾಕುತ್ತಿದ್ದಾನೆ
ನೆತ್ತರು ನೆತ್ತರ ನದಿಯ ದಿಶೆ ನಡೆಯುತ್ತಿದ್ದಾನೆ
ಆ ಬೆಳಕಿನ ಚಿನ್ಹೆ..,
ಆ ದೀಪಗಳ ಸಂಗಮ..,
ಈ ವಂಶದ ದೀಪ ಆರಿ ಹೋಗುವುದೇ! ? ‘
ಅರಿಯುತಲಿದ್ದ
ಆ ಬೆಳಕಿನ ವಂಶಜರನು
ಅವರೆಲ್ಲರ ಹಿಂಸೆಯ ವಿರುದ್ಧದ ಒಗ್ಗಟ್ಟನ್ನು

ಬಹಳ ಸಾವಧಾನವಾಗಿ ಎಲ್ಲರ ಚಹರೆಗಳನ್ನು
ಓದುತಲಿದ್ದರು ಹುಸೈನ್
ಆ ಒಂದು ಇರುಳು ನೋಡಿ ಮುಗಿದು ಹೋಗುತ್ತದೆ
ಮುಂಜಾವು ಕದನ ಏರ್ಪಡುತ್ತದೆ
ಸತ್ಯ-ಅಸತ್ಯಗಳ ನಡುವೆ
ನೆತ್ತರ ನದಿಯಿಂದ ಕುಟುಂಬ-ವರ್ಗ ಹರಿದು ಹೋಗುತ್ತದೆ
ನಿಗಧಿತ ಸಮಯಕ್ಕೆ ಮರಳುಗಾಡಿನಲಿ ಅಜಾ಼ ಮೊಳಗುತ್ತದೆ
ಸ್ವತಃ ನಮಾಜ಼್ ಚಾದರ ಹಾಸಲಿಕ್ಕೆ ಬರುತ್ತದೆ
ಹುಸೈನ್ ಶಿರ ಪ್ರಣಿತವಾಗಿಸಿ ಕೃತಜ್ಞರಾಗಿದ್ದಾರೆ ಸಜ್ದೆಯಲಿ
ಶುಷ್ಕ ಕುತ್ತಿಗೆಯ ಮೇಲೆ ಕಠಾರಿ ಹರಿತವಾಗಿ ಸಾಗುತ್ತದೆ
ಯಾರೊ ಎಂದೋ ಓದಿದ್ದರು
‘ಸೃಷ್ಟಿಯ ಎಲ್ಲವೂ ಅಳಿದು ಹೋಗುತ್ತದೆ…’
ರಕ್ತದಿಂದ ಹುಸೈನ್ ಬರೆದರು
‘ಲಾ ಇಲಾಹ ಇಲ್-ಲಲ್ಲಾಹ್’

‍ಲೇಖಕರು Admin

August 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: