ದರ್ಶನ್ ಜಯಣ್ಣ ಸರಣಿ – ಇಂಥವರ ಮಗ…

ದರ್ಶನ್ ಜಯಣ್ಣ

4

ಅಪ್ಪ ತೀರಿಹೋದಾಗ ಮನೆಯ ಮುಂದೆ ಶಾಮಿಯಾನ ಹಾಕಿಸಿ ಒಂದಷ್ಟು ಚೇರುಗಳನ್ನು ಬಿಡಿಸಿದ್ದೆವು. ಅಲ್ಲಿ ಬಂಧು ಮಿತ್ರರು ಕುಳಿತಿದ್ದರು. ನಾವು ಒಳಗೂ ಹೊರಗೂ ವ್ಯವಸ್ಥೆ ನೋಡುತ್ತಿದ್ದಾಗ ನಡೆದ ಘಟನೆ ಇದು. 

ಸಾಮಾನ್ಯವಾಗಿ ತೀರಿಕೊಂಡವರ ಬಗ್ಗೆ ಜನ ಒಳ್ಳೆಯದು ಮಾತಾಡುವುದು ವಾಡಿಕೆ. ಕೆಲವೊಮ್ಮೆ ತೀರಾ ಮುಂದು ಹೋಗಿ, ಜನ ಎಂಥವರನೂ ಹೊಗಳಿ ಬಿಡುವ ಪರಿಯೂ ಉಂಟು. ನಮ್ಮಪ್ಪನೂ ಅದಕ್ಕೆ ಹೊರತಲ್ಲವಾದರೂ ಅಂದು ನಡೆದ ಒಂದು ಘಟನೆ ಮಾತ್ರ ನನ್ನನ್ನು ಬಹುವಾಗಿ ಅಳ್ಳಾಡಿಸಿತು. ಅದರ ಬಗ್ಗೆ ಈಗ ನೆನೆಸಿಕೊಂಡರೂ ನೋವಾಗುತ್ತದೆ. 

ಅದೇನೆಂದರೆ, ಅಲ್ಲಿ ಅಂದು ಕುಳಿತಿದ್ದ ಬಂಧು ಮಿತ್ರರಲ್ಲಿ ಕೆಲವರು ಅಪ್ಪನ ಬಗ್ಗೆ ತೀರಾ ಲಘುವಾಗಿ ಮಾತನಾಡಿದ್ದು!ಅವರ ಪ್ರಕಾರ ಅಪ್ಪನಿಗೆ ಮಾತಿನ ಅಥವಾ ಬಾಯಿಯ ಮೇಲೆ ಹಿಡಿತವಿರಲಿಲ್ಲ ಅವರು ಕೆಟ್ಟದಾಗಿ ಮಾತನಾಡುತ್ತಿದ್ದರು (ಅಪ್ಪ ಅತ್ಯಂತ ನೇರ, ನಿಷ್ಟುರವಾದಿ).

ಸಿಟ್ಟು ಬಂದರೆ ಯಾರೂ ತಡೆಯಲು ಆಗುತ್ತಿರಲಿಲ್ಲ. ಹಾಗೆ ಒಂದು ವೇಳೆ ನಮ್ಮ ಅಮ್ಮ ತಡೆಯಲು ಬಂದರೆ ಅವಳ ಮೇಲೂ ಅದೇ ಓಘದಲ್ಲಿ ಪದಪ್ರಯೋಗ ಮಾಡುತ್ತಿದ್ದರು ಎಂಬುದು. ನನಗೆ ತಿಳಿದು ಬಂದ ಸಂಗತಿ ಏನೆಂದರೆ, ಈ ರೀತಿ ಮಾತನಾಡಿದವರು ನಮ್ಮ ಮನೆಯ ಅಕ್ಕ ಪಕ್ಕದವರಲ್ಲ ಬದಲಾಗಿ ಬೇರೆಯ ಬೀದಿಯವರು. ಆದರೂ ಅವರ ಮಾತಿನ ವೈಖರಿ ಹೇಗಿತ್ತು ಎಂದರೆ ಅದು ಅಲ್ಲಿದ್ದ ನಮ್ಮ ಕೆಲವು ನೆಂಟರನ್ನ ಕಸಿವಿಸಿ ಗೊಳಿಸಿತ್ತು. ಕೆಲವರನ್ನ ಖುಷಿ ಪಡಿಸಿರಲೂಬಹುದು. ತುಂಬಾ ಬೇಸರದ ಸಂಗತಿಯೆಂದರೆ ಕೆಲವು ದಿನಗಳ ನಂತರ ನನ್ನ ತುಂಬಾ ಹತ್ತಿರದ ಬಂಧುಗಳೊಬ್ಬರೊಡನೆ ಏನೋ ಭಿನ್ನಾಭಿಪ್ರಾಯವಾಗಿ ನನಗೂ ಅವರಿಗೂ ಸ್ವಲ್ಪ ಮಾತಾದಾಗ ಅವರು ಅಂದು ಯಾರೋ ಬೀದಿಯಲ್ಲಿ ಆಡಿದ ಮಾತನ್ನು ಉಲ್ಲೇಖಿಸಿ ನನ್ನನ್ನು ಹೀಯಾಳಿಸಲು ನೋಡಿದ್ದು. 

ಸಾಮಾನ್ಯವಾಗಿ ಕೆಲವರು ವಾದಮಾಡಲು ಅಸಮರ್ಥರಾದಾಗ ತೀರಾ ವೈಯಕ್ತಿಕ ನೆಲೆಗೆ ಪ್ರವೇಶ ಮಾಡುವುದು ಹೊಸತೇನಲ್ಲ. ಇದೊಂದು ಪುರಾತನ ಖಾಯಿಲೆ ಅಥವಾ tactic. ನನಗೆ ಬೇಸರವಾದದ್ದು ಯಾರೋ ಆಡಿದ ಮಾತನ್ನ ನನಗೆ ಬೇಕಾದವರೇ ಎತ್ತಾಡಿ ಅದರಿಂದ ನನ್ನನ್ನು ನಿಯಂತ್ರಣದಲ್ಲಿಡುವ ತುಚ್ಚ ಪ್ರಯತ್ನ ಮಾಡಿದ ಮನಸ್ಥಿತಿಯ ಬಗ್ಗೆ. ಇದರಲ್ಲಿ ಅಮ್ಮನ ಪಾತ್ರವೇನು? ಅವಳನ್ನು ಎಳೆದು ತಂದದ್ಯಾಕೆ? 
ಅಪ್ಪ ಅಮ್ಮನನ್ನು ಒಂದು ದಿನವೂ ಬಿಟ್ಟಿದ್ದದ್ದು ನಾನು ಕಾಣೆ. ಇದರಿಂದ ಅಮ್ಮನೂ ಹೆಚ್ಚಾಗಿ ತನ್ನ ತವರಿಗೆ ಹೋಗುತ್ತಿರಲಿಲ್ಲ. ಹೋದರೂ ಬೆಳಿಗ್ಗೆ ಹೋಗಿ ಸಂಜೆಯ ಹೊತ್ತಿಗೆ ಅಥವಾ ಮರುದಿನ ಬೆಳಿಗ್ಗೆಯ ಹೊತ್ತಿಗೆ ಬಂದುಬಿಡುತ್ತಿದ್ದಳು.

ಅಪ್ಪ, ಅಮ್ಮನಿಗೆ ಕೈನೋವು, ಮಂಡಿ ನೋವು ಇದ್ದಾಗೆಲ್ಲ ತನ್ನ ಬಟ್ಟೆ ತಾವೇ ಒಗೆದುಕೊಳ್ಳುತ್ತಿದ್ದರು. ಅಮ್ಮ ಅಂಗಡಿಗೆ ಹೋದರೂ ಮನೆಗೆ ವಾಪಸ್ ಕಳಿಸುತ್ತಿದ್ದರು. ಮನೆಯ ಎಷ್ಟೋ ಕೆಲಸ ಅವರೇ ಮಾಡುತ್ತಿದ್ದರು. ಅಪ್ಪನ ಕಡೆಯ ದಿನಗಳಲ್ಲಿ ಅವರಿಗೆ ನೆನಪಿದ್ದ ಒಂದೇ ಒಂದು ಹೆಸರು ಅಮ್ಮನದು. ಅವರದ್ದು ಪ್ರೀತಿಯ ಬಂಧ-ಬಡತನದ ಬಾಂಧವ್ಯ. ಅವರ ದಾಂಪತ್ಯ ಎಲ್ಲರ ಹಾಗೆಯೇ ಇತ್ತು ! 

ಇಷ್ಟೆಲ್ಲಾ ಹೇಳಬೇಕಾದುದು ಈಗ ಅನಗತ್ಯ ಅಂತ ಕೆಲವೊಮ್ಮೆ ಅನಿಸುತ್ತದೆ. ಪ್ರಪಂಚಕ್ಕೆ ನಾವು ಯಾಕೆ ಸಾಬೂಬು ಕೊಡಬೇಕು? ಆದರೂ ಮನಸು ಒಪ್ಪುವುದಿಲ್ಲ. ಒಟ್ಟಾರೆ ಜನಕ್ಕೆ ಏನು ಬೇಕು? ಅವರ್ಯಾಕೆ ಬೇರೆಯವರ ವಿಚಾರದಲ್ಲಿ judgmental ಆಗುತ್ತಾರೆ? ಅವರಿಗೆ ಸಮಯ ಸಂಧರ್ಭದ ಅರಿವು ಇರುವುದಿಲ್ಲವಾ? ಮನುಷ್ಯ ನೂರು ಒಳ್ಳೆಯದು ಮಾಡಿದ್ದು ಬಿಟ್ಟು ಸ್ವಭಾವತಃ ಮಾಡಿದ ಒಂದು ವಿಷಯವನ್ನು ಎತ್ತಾಡುವುದು ಯಾವ ನ್ಯಾಯ? ಅದಕ್ಕೆ ಮನೆ ಮಂದಿಯನ್ನ ಎಳೆಯುವುದು ಯಾವ ಥರದ  ಮನಸ್ಥಿತಿ.

ಈ ವಿಕೃತ ಮನಸ್ಸಿನಿಂದ ಯಾರಿಗೆ ಲಾಭ? ಅಪ್ಪ ಅಥವಾ ಅಮ್ಮ ಅಂದು ಹಾಗೆ ಮಾತಾಡಿದವರಿಗೆ ಏನು ಅನ್ಯಾಯ ಮಾಡಿದ್ದರು? ಹಾಗೆಯೇ ಅದನ್ನು ನನ್ನ ಜೊತೆಯ ಜಾಟಾಪಟಿಯಲ್ಲಿ ಅಸ್ತ್ರವಾಗಿ ಬಳಸಿ ನನ್ನ ಹತ್ತಿರದ ಬಂಧುಗಳು ಏನನ್ನು ಮಾಡಲು ಹೊರಟಿದ್ದರು? ಯಾಕೋ ಹೀಗೆಲ್ಲಾ ಯೋಚಿಸಿದಾಗ ಬೇಸರವಾಗುತ್ತದೆ. 

ನಾನು ಚಿಕ್ಕಂದಿನಲ್ಲಿ, ಶಾಲೆಯಲ್ಲಿ ಟೀಚರ್ ‘ನಿಮ್ಮ ಅಪ್ಪ ಏನು ಮಾಡ್ಕೊಂಡಿದ್ದಾರೆ?’ ಅಂಥ ಕೇಳಿದಾಗಲೆಲ್ಲ ‘ಗ್ರಂಥಿಗೆ ಅಂಗಡಿ’ ಅನ್ನುತ್ತಿದ್ದೆ. ಅದು ಹಲವರಿಗೆ ಅರ್ಥವಾಗದಾದಾಗ ‘ನಮ್ಮದು ಪೂಜೆ ಸಾಮಗ್ರಿಗಳ ಅಂಗಡಿ, ಜ್ಯೂಸು ಅಂಗಡಿ, ಗಿಡಮೂಲಿಕೆ ಅಂಗಡಿ, ಸಂಜೆ ಮಾತ್ರ ಕಾಂಡಿಮೆಂಟ್ಸ್’ ಎಲ್ಲಾ ಒಂದೇ ಅಂಗಡಿಯಲ್ಲಿ ಇದೆ ಎಂದು ಬಿಡಿಬಿಡಿಸಿ ಹೇಳುತ್ತಿದ್ದೆ. ಆಗ ಮಾತ್ರ ಎಲ್ಲರಿಗೂ ಅರ್ಥವಾಗುತ್ತಿತ್ತು! 
ಇಷ್ಟಾದರೂ ಬಂಧು ಬಳಗದಲ್ಲಿ ನನ್ನನ್ನು ಪರಿಚಯಿಸುವಾಗ ‘ಇವನು ಜಯಣ್ಣನ ಮಗ, ಅದೆ ಖಾರ, ಚಿರುಮುರಿ ಎಲ್ಲ ಮಾರುತ್ತಾರಲ್ಲ ಬಾರ್ ಲೈನ್ ರೋಡ್ ನಲ್ಲಿ, ಅವರ ಮಗ’ ಅನ್ನುತ್ತಿದ್ದರು.

ನನಗೆ ಆಗ ಈ ವ್ಯಂಗ್ಯ ಅರ್ಥವಾಗುತ್ತಿರಲಿಲ್ಲ. ನಾನೋ ನಮ್ಮ ಚುರುಮುರಿ ಊರಿಗೆ ಫೇಮಸ್ ಅಂದುಕೊಂಡಿದ್ದೆ! ಬಹುಷಃ ಇದೆಲ್ಲ ಅರ್ಥವಾಗಿ ಅಪ್ಪನ ಬಳಿ ಏನಾದರೂ ಅಂದು ನಾನು ಹೇಳಿದ್ದಿದ್ದರೆ ಅವರು ಅದನ್ನ ಕೇಳಿ ‘ಅದ್ರಲ್ಲಿ ಏನಪ್ಪಾ ತಪ್ಪು ಅದೂ ನಮ್ಮ ಕಾಯಕ ತಾನೇ? ಇಂಥವನ್ನೆಲ್ಲ ಜಾಸ್ತಿ ಕಿವಿಮೇಲೆ ಹಾಕೋಬಾರ್ದ’ ಅಂತ ಹೇಳುತ್ತಿದ್ದರು! 

ಈಗ ಅದರ ಬಗ್ಗೆ ಮಾತನಾಡಲು ಅಪ್ಪನೂ ಇಲ್ಲ, ನಾನೂ ಬರೀ ಚಿರುಮುರಿಯವರ ಮಗನಾಗಿ ಉಳಿದಿಲ್ಲ! 

| ಇನ್ನು ನಾಳೆಗೆ |

‍ಲೇಖಕರು Admin

August 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: