ಜಯಲಕ್ಷ್ಮಿ ಪಾಟೀಲ್ ಅಂಕಣ- ಅದಮ್ಯ ಬಯಕೆ ಹುಟ್ಟಿಕೊಂಡುಬಿಟ್ಟಿತು!

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

14

ಶಾಂತಾ, ಆಕೆಯ ಒಬ್ಬ ಅಕ್ಕ, ಅಮ್ಮ ಇವರೆಲ್ಲ ಆ ವೃತ್ತಿಯನ್ನು ಖುಷಿಯಿಂದಲೇ ಒಪ್ಪಿಕೊಂಡಿದ್ದರಂತೆ. ಅವಳ ಇನ್ನೊಬ್ಬ ಅಕ್ಕನಿಗೆ ಇದು ಸುತಾರಾಂ ಇಷ್ಟವಿಲ್ಲದ ಕಾರಣ ಆ ಬಗ್ಗೆ ಅವರ ಮನೆಯಲ್ಲಿ ತಾಯಿ ಮಗಳಿಗೆ ಜಗಳಗಳಾಗಿ ಕೊನೆಗೆ ಆಕೆ ಸೋಲದೆ ಆಕೆಯ ತಾಯಿ ಒತ್ತಾಯಿಸುವುದನ್ನು ಬಿಟ್ಟಳೆಂದೂ ತಿಳಿಯಿತು. ಅವಳ ಬಗ್ಗೆ ಕೇಸೂರಿನ ಜನರಲ್ಲಿ ಗೌರವವಿತ್ತು. ಇದೆಲ್ಲವನ್ನು ನನಗೆ ಹೇಳಿದವಳು ರೇಣುಕಾ. ಅವರ ವೃತ್ತಿಯ ಬಗ್ಗೆ ನನಗೆ ಹೇಳಿದವಳೂ ಅವಳೇ.

ಮೈ ಮಾರಿಕೊಳ್ಳುವುದು ಎಂದರೇನು ಎನ್ನುವುದು ನಮ್ಮಿಬ್ಬರಿಗೂ ಸ್ಪಷ್ಟವಿರಲಿಲ್ಲವಾದರೂ ಎಂಥದ್ದೋ ನಮಗೆಲ್ಲವೂ ಗೊತ್ತು ಅನ್ನುವಂಥ ಭ್ರಮೆ ಇತ್ತು! ಯಾಕೆ ಭ್ರಮೆ ಇತ್ತು ಅನ್ನುತ್ತಿರುವೆ ಎಂದರೆ ಮುಂದೆ ನಾನು ಎಂಟನೇತ್ತೆ ಓದುವಾಗ ಅಶೋಕ (ಬಾದರದಿನ್ನಿ) ಮಾಮಾ ಬಿಜಾಪುರದ ಕಲಾಮಾಧ್ಯಮ ತಂಡಕ್ಕೆ ಚಂಪಾ ಅವರ ಅಸಂಗತ ನಾಟಕಗಳಲ್ಲೊಂದಾದ ‘ಅಪ್ಪ’ ಮಾಡಿಸಿದ್ದ. ಇಳಕಲ್ಲಿನಲ್ಲಿ ಅದರ ಪ್ರದರ್ಶನವಿತ್ತು.

ಚಂಚಲ ಸ್ವಭಾವದ ಹೆಣ್ಣೊಬ್ಬಳು ಆರ್ಷಿತರಾದವರೆಲ್ಲರೊಂದಿಗೆ ಬೆರೆಯುತ್ತಾ, ಒಂದು ಮಗುವಾಗಿ, ಆ ಹುಡುಗ ಬೆಳೆಯುತ್ತಾ ಜನರ ಕುಹಕಗಳನ್ನು ಮೊದಲಿಗೆ ಮುಗ್ಧವಾಗಿ ಅದು ಅವರೆಲ್ಲ ತನಗೆ ತೋರುವ ಪ್ರೀತಿ ಎಂದು ಭಾವಿಸುತ್ತಾ, ಬೆಳೆದಂತೆಲ್ಲ ನೋವಿನಿಂದ ನರಳುವ ಕಥಾ ಹಂದರವುಳ್ಳ ನಾಟಕವದು. ಸಣ್ಣವನಿದ್ದಾಗಿನ ಬಸು(ಮಗ) ಆಗಿ ಸಂಗಮೇಶ್ ಪಾಟೀಲ್ ಮತ್ತು ದೊಡ್ಡವನಾದ ಬಸು ಆಗಿ ಈರಣ್ಣ ಮಾಮಾ ಅಭಿನಯಿಸಿದ್ದರು. ಇಬ್ಬರೂ ಅದ್ಭುತ ನಟರಾದರೂ ನನಗೆ ನನ್ನ ವಯೋಮಾನಕ್ಕೆ ತಕ್ಕಂತೆ ಸಹಜವಾಗಿ ಸಣ್ಣ ಬಸೂನ ಪಾತ್ರ ಇಷ್ಟವಾಗಿ ನಾನೂ ನಾಟಕ ಮಾಡಲೇಬೇಕು ಎಂಬ ಅದಮ್ಯ ಬಯಕೆ ಹುಟ್ಟಿಕೊಂಡುಬಿಟ್ಟಿತು!

ನಂತರ ಆ ಬಯಕೆ ಅಪ್ಪ ಅವ್ವನ ನಿರಾಕರಣೆಯೊಂದಿಗೆ ಮನಸಿನ ಭರಣಿಯಲ್ಲಿ ಬೆಚ್ಚಗೆ ಹುದುಗಿಕೊಂಡಿತು. ನಾನು ಹೇಳ್ತಾ ಇದ್ದ ವಿಷಯ ಇದಲ್ಲ. ಈ ನಾಟಕ ನೋಡಿದ ಮೇಲೂ ನಮ್ಮ ಪಕ್ಕದ ಮನೆಯವರ ಉದ್ಯೋಗ ಮತ್ತು ‘ಅಪ್ಪ’ ನಾಟಕದ ಅವ್ವನ ಉದ್ಯೋಗ ಎರಡೂ ಒಂದೇ ಅನ್ನುವುದು ಗೊತ್ತಾಗಿರಲಿಲ್ಲ! ನನಗೆ ಪಕ್ಕದ ಮನೆಯ ಶಾಂತಾಳ ಲವಲವಿಕೆಯ ಸ್ವಭಾವ ಮತ್ತು ‘ಅಪ್ಪ’ ನಾಟಕದಲ್ಲಿನ ಸಣ್ಣ ಬಸೂನ ಚುರುಕಾದ ನಟನೆ, ತಮಾಷೆ ಮಾತುಗಳು ಗಮನ ಸೆಳೆದಿದ್ದವೇ ವಿನಹ ನಾಟಕ ಮತ್ತು ಪಕ್ಕದ ಮನೆಯವರಲ್ಲಿನ ಸಾಮ್ಯತೆ ಅರ್ಥವೇ ಆಗಿರಲಿಲ್ಲ.

ಶಾಂತಾಳಿಗೆ ಇಳಕಲ್ಲಿಗೆ ಹೋಗಿ ಸಿನಿಮಾ ನೋಡುವ ಮತ್ತು ಅಲಂಕಾರ ಮಾಡಿಕೊಳ್ಳುವ ಆಸೆ ಇತ್ತು. ನನಗದು ಅಂದೂ ತಪ್ಪೆನಿಸಿರಲಿಲ್ಲ, ಇಂದೂ ತಪ್ಪೆನಿಸುವುದಿಲ್ಲ. ಸಹಜ ಬಯಕೆಗಳವು. ಆದರೆ ಮುಂದೆ ಶಾಂತಾ ಮತ್ತವಳ ಅಕ್ಕ, ಹೆಚ್ಚಿನ ಸಂಖ್ಯೆಯಲ್ಲಿ ಹರೆಯದ ಗಿರಾಕಿಗಳು ಸಿಗುತ್ತಾರೆ, ಕೈ ತುಂಬಾ ದುಡ್ಡು ಮಾಡಬಹುದು ಎಂದು ಇಳಕಲ್ಲಿಗೆ ಹೋಗಿ ಕಾಲೇಜೊಂದರ ಎದುರು ಮನೆ ಮಾಡಿದ್ದರೆಂದೂ, ಹೆಚ್ಚುಕಮ್ಮಿ ಈಗೊಂದು ದಶಕದ ಹಿಂದೆ ಏಡ್ಸ್ ಆಗಿ ಶಾಂತಾ ಅಲ್ಲಿಯೇ ತೀರಿಕೊಂಡಳೆಂದೂ ತಿಳಿಯಿತು.

ಪಕ್ಕದ ಮನೆಯವರು ಮೈಮಾರಿಕೊಳ್ಳುವ ಜನ ಎಂದು ಗೊತ್ತಾದ ಮೇಲೆ ಅಪ್ಪಾ ಮತ್ತು ಅವ್ವ ಇಬ್ಬರಿಗೂ ಆತಂಕವಾಗಿರಲು ಸಾಕು. ಬೇರೆ ಮನೆ ಹುಡುಕತೊಡಗಿದರು. ಎಲ್ಲೂ ಸಿಗದ ಕಾರಣ ಮತ್ತೆ ಕೆಲವು ತಿಂಗಳು ಅದೇ ಮನೆಯಲ್ಲಿದ್ದೆವು, ಮಕ್ಕಳ್ಯಾರೂ ಆ ಮನೆಯವರ ಜೊತೆಗೆ ಮಾತನಾಡಕೂಡದು ಎನ್ನುವ ಹಿರಿಯರ ತಾಕೀತಿನೊಂದಿಗೆ.

ಕೇಸೂರಿನಲ್ಲಿದ್ದಷ್ಟು ಕಾಲ ಸಂಜೆಯಾಗುತ್ತಿದ್ದಂತೆಯೇ ಅವ್ವ ಸೋಸಿದ ಒಲೆಯ ಬೂದಿ, ರಂಗೋಲಿ ಪುಡಿಗಳನ್ನಿಟ್ಟುಕೊಂಡು ಕಂದೀಲು, ಲ್ಯಾಂಪುಗಳ ಪಾವುಗಳ (ಪಾವು = ಗಾಳಿಗೆ ಬೆಳಕು ನಂದದಿರಲು ಕಂದೀಲಿನಲ್ಲಿ ಅಳವಡಿಸುವ ಕೊಳಗಂತಹ ಗಾಜು) ಒಳಬದಿಯಲ್ಲಿ ಹಿಂದಿನ ದಿನ ಮೆತ್ತಿದ್ದ ಕಾಡಿಗೆಯನ್ನೆಲ್ಲ ಉಜ್ಜಿ ತೆಗೆದು ನಂತರ ಸ್ವಚ್ಛವಾದ ಬಟ್ಟೆಯಿಂದ ಒರೆಸಿ ಪಾವುಗಳನ್ನು ಫಳ ಫಳ ಹೊಳೆಯುವಂತೆ ಮಾಡಿಡುತ್ತಿದ್ದರು. ಹಾಗೆ ಹೊಚ್ಚ ಹೊಸತರಂತೆ ಪಾವು ಹೊಳೆಯುವುದು ನನಗೆ ತುಂಬಾ ಇಷ್ಟವಾಗುತ್ತಿತ್ತು.

ಒಮ್ಮೊಮ್ಮೆ ಆ ಕೆಲಸ ನನ್ನ ಪಾಲಿಗೆ ಬರುತ್ತಿತ್ತಾದರೂ ಕೈಗೆ ಗಾಜು ಹತ್ತಿದರೇನು ಗತಿ ಎಂದು (ಒಂದೆರಡು ಬಾರಿ ಹಾಗೆ ಆಗಿತ್ತು ಕೂಡಾ) ಅವ್ವ ಮತ್ತೆ ತಾನೇ ಉಜ್ಜಿ, ಕಂದೀಲಿಗೆ ಚಿಮಣಿ ಎಣ್ಣಿ ಹಾಕಿ, ಬತ್ತಿಯ ಮೇಲಿನ ಕುಡಿ ತೆಗೆದು, ದೀಪ ಹಚ್ಚಿ, ಪಾವೇರಿಸಿ ಕೂರಿಸಿದಳೆಂದರೆ, ಅದರಿಂದ ಜೀರೊ ಬಲ್ಬಿನಷ್ಟು ಬೆಳಕು ಬೀಳುತ್ತಿತ್ತು. ಅದರ ಸುತ್ತಲೂ ಕುಳಿತು ನಾವೆಲ್ಲ ಓದುತ್ತಿದ್ದೆವು, ಉಣ್ಣುತ್ತಿದ್ದೆವು. ಇನ್ನೊಂದು ಕಂದೀಲು, ಮೇಲೆ ಮುಚ್ಚಳ ಇಲ್ಲದಂತಹ, ತುಸು ಉಬ್ಬಿದ ಹೊಟ್ಟೆ, ಉದ್ದ ಕತ್ತಿನ ಪಾವಿರುವ, ಅತ್ತಿತ್ತ ತೆಗೆದುಕೊಂಡು ಹೋಗಲಾಗದ, ಹಿಡಿಕೆ ಇರದ ಮಾಡರ್ನ್ ಕಂದೀಲು. ಅದನ್ನು ನಾವು ಲ್ಯಾಂಪ್ ಅನ್ನುತ್ತಿದ್ದೆವು. ಅದು ಕೋಣೆಯ ಇನ್ನೊಂದು ಬದಿಯಲ್ಲಿ ಸ್ಟೂಲಿನ ಮೇಲೆ ತುಸು ಗತ್ತಿನಿಂದಲೇ ಕೂರುತ್ತಿತ್ತು.

ಅಡಿಗೆ ಮನೆಯಲ್ಲಿ ಹೆಚ್ಚು ಕೆಲಸವಿದ್ದರೆ ಮಾತ್ರ ಅಲ್ಲೊಂದು ಕಂದೀಲು. ಇಲ್ಲವಾದರೆ ಚಿಮಣಿಬುಡ್ಡಿ. ಈ ಮೊದಲು ಕರೆಂಟಿಲ್ಲದಾಗ ಮಾತ್ರ ಕಂದೀಲು ಚಿಮಣಿಗಳನ್ನು ಬಳಸುತ್ತಿದ್ದ ಅವ್ವ, ಕೇಸೂರಿಗೆ ಬಂದ ಮೇಲೆ ನಿತ್ಯ ಮಸಿಯೊಡನೆ ಗುದ್ದಾಡುವ ಈ ಕೆಲಸ ಮಾಡಿ ಬೇಸತ್ತಿರಲೇಬೇಕು. ಅಂತೂ ದೋಟಿಹಾಳದಲ್ಲಿ ನರ್ಸ್ ಕ್ವಾರ್ಟರ್ಸ್ ಒಂದು ರೆಡಿಯಾಗಿ, ಅಲ್ಲಿ ವಾಸಿಸಬೇಕಿದ್ದ ನರ್ಸ್, ಪತಿಯ ಉದ್ಯೋಗದಿಂದಾಗಿ ಬೇರೆ ಊರಲ್ಲಿ ಮನೆ ಮಾಡಿದ್ದರಿಂದ, ಅವರ ಒಪ್ಪಿಗೆಯೊಡನೆ ನಾವು ಆ ಕ್ವಾರ್ಟರ್ಸ್ ಗೆ ಬಂದು ನೆಲೆಸಿದೆವು. ಅಲ್ಲಿ ಕರೆಂಟು ಮತ್ತು ಪಾಯಿಖಾನೆ ಎರಡೂ ಇದ್ದವಾದ್ದರಿಂದ ಮತ್ತೆ ನಾವು ಸಹಜ ಜೀವನಕ್ಕೆ ಮರಳಿದಷ್ಟು ನೆಮ್ಮದಿ ನಮಗೆಲ್ಲ.

ಆರು ಮತ್ತು ಏಳನೇ ತರಗತಿ ಓದುವಾಗ ನನ್ನ ಪಾಲಿಗೆ ಒಳ್ಳೊಳ್ಳೆ ಮೇಷ್ಟ್ರು ಸಿಕ್ಕರೆಂದೇ ಹೇಳಬೇಕು. ಅದರಲ್ಲೂ ಶಿವಶಂಕ್ರಪ್ಪ ಮಾಷ್ಟ್ರು ಮತ್ತು ಶಕುಂತಲಾ ಟೀಚರ್ ತುಂಬಾ ಶಿಸ್ತಿನ ಜನ. ಇವರು ಮಕ್ಕಳಿಗೆ ನಿಜವಾದ ಆಸ್ಥೆಯಿಂದ ಪಾಠ ಮಾಡುತ್ತಿದ್ದರು. ನಮಗೆಲ್ಲ ಇವರಿಬ್ಬರನ್ನು ಕಂಡರೆ ಎಷ್ಟು ಹೆದರಿಕೆ ಇತ್ತೋ ಅಷ್ಟೇ ಪ್ರೀತಿಯೂ ಇತ್ತು. ದೋಟಿಹಾಳದಲ್ಲಿ ಮುಖ್ಯರಸ್ತೆಗೆ ಅಂಟಿಕೊಂಡಿದ್ದ ನಮ್ಮ ಈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ಆಗಿದ್ದ ಕಂದಕೂರ್ ಸರ್ ಕನ್ನಡ ಪಂಡಿತರು.

ಈಗ ೪೦ ವರ್ಷಗಳ ನಂತರ ಇವರ ಇಬ್ಬರು ಹೆಣ್ಣುಮಕ್ಕಳಾದ ರಹಿನಾ ಮತ್ತು ರೇಶ್ಮಾ ನನ್ನ ಸಂಪರ್ಕದಲ್ಲಿದ್ದಾರೆ ಮತ್ತು ಚೆಂದದ ಕವನಗಳನ್ನು ಬರೆಯುತ್ತಾರೆ. ನಾನು ಏಳನೇ ತರಗತಿಯಲ್ಲಿದ್ದಾಗ, ನಮ್ಮ ಶಾಲೆಯ ಆವರಣದಲ್ಲಿಯೇ, ಶಾಲೆಯ ಎರಡು ಕೋಣೆಗಳಲ್ಲಿ ಹೈಸ್ಕೂಲೂ ಆರಂಭವಾಯಿತು. ಪಕ್ಕದಲ್ಲೇ ಹೈಸ್ಕೂಲಿನ ಕಟ್ಟಡ ನಿರ್ಮಾಣ ಆರಂಭಗೊಂಡಿತ್ತು. ಹೈಸ್ಕೂಲಿಗೆ ಜಮಖಂಡಿ ಸರ್ ಹೆಡ್ ಮಾಸ್ಟರ್ ಆಗಿದ್ದರು. ಅವರ ಮಗ ಪಾರೀಶ್ ನನ್ನ ಓರಿಗೆಯವ. ಅವನು ಏಳನೇ ತರಗತಿಯನ್ನು ಇಲಕಲ್ಲಿನಲ್ಲಿ ಓದುತ್ತಿದ್ದವನು, ವಾರ್ಷಿಕ ಪರೀಕ್ಷೆಯ ವೇಳೆಗೆ ದೋಟಿಹಾಳದ ನಮ್ಮ ಶಾಲೆಗೆ ಬಂದ.

ಪರೀಕ್ಷೆಯಲ್ಲಿ ಅವನು ಶಾಲೆಗೆ ಮೊದಲಿಗನಾಗಿ ನಾನು ಎರಡನೇಯವಳಾಗಿ ಪಾಸಾದೆವು. ಇದರಿಂದ ಶಕುಂತಲಾ ಟೀಚರಿಗೆ ತುಂಬಾ ಅಸಮಧಾನವಾಯಿತು. ಉತ್ತಮ ಸೌಲಭ್ಯ ಮತ್ತು ಶಿಕ್ಷಣವಿರುವ ಇಳಕಲ್ಲಿನಂಥ ಪಟ್ಟಣದಲ್ಲಿ ಓದಿದ ತಮ್ಮ ಮಗನನ್ನು ಜಮಖಂಡಿಯವರು ಪರೀಕ್ಷೆಯ ವೇಳೆಯಲ್ಲಿ ದೋಟಿಹಾಳಕ್ಕೆ ಕರೆತಂದು ಪರೀಕ್ಷೆ ಬರೆಸಿದ್ದರಿಂದ ಅವನು ಮೊದಲಿಗನಾಗಿದ್ದು. ಅದು ಸರಿ ಅಲ್ಲ, ಮೊದಲಿಂದ ಅದೇ ಶಾಲೆಯಲ್ಲಿ ಓದಿದ ನಾನೇ ಶಾಲೆಗೆ ಮೊದಲು ಅನ್ನುವುದು ಶಕುಂತಲಾ ಟೀಚರ್ ನಿಲುವಾಗಿತ್ತು. ಇದರಿಂದಾಗಿ ನನಗೆ ಶಕುಂತಲಾ ಟೀಚರ್ ಮೇಲೆ ಗೌರವ, ಪ್ರೀತಿ ಹೆಚ್ಚಾದವು.

ನಮ್ಮ ಎಂಟನೇ ತರಗತಿಯ ಪಾಠಗಳು ಪ್ರಾಥಮಿಕ ಶಾಲೆಯಲ್ಲೇ ಆರು ತಿಂಗಳುಗಳ ಕಾಲ ನಡೆದವು. ಅಷ್ಟರಲ್ಲಿ ಹೈಸ್ಕೂಲಿನ ಕಟ್ಟಡದ ಮೂರು ಕೋಣೆಗಳು ಸಂಪೂರ್ಣಗೊಂಡಿದ್ದರಿಂದ ನಮ್ಮ ಪಾಠಗಳು ಅಲ್ಲಿ ಆರಂಭಗೊಂಡವು. ಇದು ಇಷ್ಟು ಸ್ಪಷ್ಟಾಗಿ ನೆನಪಿರಲು ಕಾರಣ, ಅದೇ ವರ್ಷ ನಾನು ಸೆಪ್ಟಂಬರಿನಲ್ಲಿ ಋತುಮತಿಯಾಗಿದ್ದು, ಒಮ್ಮೆ ಕ್ಲಾಸಿನಲ್ಲಿದ್ದಾಗ, ಮಧ್ಯಾಹ್ನ ಊಟದ ವಿರಾಮದ ವೇಳೆಗೆ ನಾನು ಕುಳಿತಿದ್ದಲ್ಲಿ ಬೆಂಚು ಕಲೆಯಾಗಿಹೋಯ್ತು. ಸಹಜವಾಗಿಯೇ ನಾನುಟ್ಟ ಹಸಿರು ಲಂಗವೂ ಕಲೆಯಾಗಿತ್ತು, ನನಗದು ಗೊತ್ತಿರಲಿಲ್ಲ.

ನನ್ನ ಜೊತೆಗಿದ್ದ ಬಂದಮ್ಮ ಮತ್ತು ಗಾಯತ್ರಿಗೂ ಅದರತ್ತ ಗಮನವಿಲ್ಲ. ಆದರೆ ಹುಡುಗನೊಬ್ಬ ಗಮನಿಸಿಬಿಟ್ಟಿದ್ದ! ಮೊದಲು ಅವನು ಸೂಕ್ಷ್ಮವಾಗಿ ಹೇಳಲು ನೋಡಿದ ಪಾಪ. ನನಗದು ಅರ್ಥವಾಗದೆ ಕೊನೆವನು ಅನಿವಾರ್ಯವಾಗಿ ಸಣ್ಣ ದನಿಯಲ್ಲಿ, ‘ಬೇ, ಕ್ಲಾಸ್ ರೂಮಿಂದ ಹೊರಗ ಹೋಗಬ್ಯಾಡ, ಹಿಂದ ನಿನ್ನ ಬಟ್ಟಿ ಕಲಿ ಆಗೇತಿ’ ಅಂದವನೇ ಹಿಂದೆ ಉಳಿದ ಹುಡುಗರನ್ನ ಕ್ಲಾಸ್ರೂಮಿಂದ ಆಚೆ ಕರೆದುಕೊಂಡು ಹೋದ. ಹೆಣ್ಣಿನ ತೀರಾ ಖಾಸಗಿ ವಿಷಯ ಎಂದು ನಾನು ಭಾವಿಸಿದ್ದ ಅದನ್ನು, ಹುಡುಗನೊಬ್ಬ ಹಾಗೆ ನೇರ ಹೇಳಿದ್ದು ಅರಗಿಸಿಕೊಳ್ಳುವುದು ಕಷ್ಟವಾಗಿತ್ತು.

ತುಟಿಕಚ್ಚಿ ಅಳು ಬಿಗಿಹಿಡಿದು ಓಡಿ ಹೋಗಿ, ಕ್ಲಾಸ್ ರೂಮಿನ ಬಾಗಿಲು ಹಾಕಿದವಳೇ, ಲಂಗ ಮುಟ್ಟಿ ನೋಡಿಕೊಂಡೆ, ಒದ್ದೆ ಕೈಗೆ ಹತ್ತಿತು. ತಿರುಗಿ ಬೆಂಚಿನತ್ತ ನೋಡಿದೆ. ರೂಪಾಯಿ ನಾಣ್ಯದಷ್ಟಗಲ ಕಲೆಯಾಗಿತ್ತಲ್ಲಿ. ಹಾಗಾಗಿದ್ದು ಮತ್ತು ಹುಡುಗನೊಬ್ಬ ಅದನ್ನು ಗಮನಿಸಿದ್ದು, ತುಂಬಾ ಅವಮಾನವಾದಂತಾಗಿ ಅಳು ಬಂದುಬಿಟ್ಟಿತು. ಕಂಪಾಸ್ ಬಾಕ್ಸಿನಲ್ಲಿ ಪೆನ್ಸಿಲ್ ಚೂಪು ಮಾಡಲೆಂದು ಇಟ್ಟುಕೊಂಡಿದ್ದ ಬ್ಲೇಡನ್ನು ತೆಗೆದವಳೇ, ಅಳುತ್ತಾ ಬೆಂಚನ್ನು ಕೆರೆದು ಕೆರೆದು ಕಲೆಯನ್ನು ತೊಲಗಿಸಲು ನೋಡಿದೆ. ಕೆರೆದಿದ್ದರಿಂದ ಕಲೆಯಿದ್ದ ಜಾಗದಲ್ಲಿನ ಕಲೆ ಮತ್ತು ಕಟ್ಟಿಗೆಯ ಪಾಲೀಶ್ ಕೂಡ ಹೋಗಿ ಅಲ್ಲೊಂದು ಹೊಸದಾಗಿ ಕಟ್ಟಿಗೆ ಕೆತ್ತಿದ ಕಲೆ ಶಾಶ್ವತವಾಗಿ ಉಳಿದುಕೊಂಡು ಬಿಟ್ಟಿತು.

ನಂತರ ರೂಮಿಂದ ಹೊರಗೆ ಹೋಗುವುದು ಹೇಗೆ ಎಂದು ಪರದಾಡುತ್ತಿರುವಾಗ, ಶಾಲೆಯ ಆಯಾ ನನ್ನನ್ನು ಕರೆದುಕೊಂಡು ಶಾಲೆಯ ಹಿಂಬದಿಗೆ ಹೋಗಿ, ಲಂಗಕ್ಕೆ ಅರ್ಧ ಚೊಂಬು ನೀರು ಹನಿಸಿ, ಉಜ್ಜಿ ತೊಳೆದುಕೊಳ್ಳಲು ಹೇಳಿದಳು. ಅಷ್ಟಕ್ಕೆಲ್ಲ ಕಲೆ ಹೊರಟುಹೋಗಲು ಸಾಧ್ಯವೇ? ಆ ಅವಸ್ಥೆಯಲ್ಲಿ ಮತ್ತೆ ಶಾಲೆಯಲ್ಲಿ ಕೂರುವುದಾದರೂ ಹೇಗೆ? ಜೀವವನ್ನೇ ಮುಷ್ಟಿಯಲ್ಲಿ ಹಿಡಿದುಕೊಂಡಂತೆ, ಕಲೆಯಾದ ಲಂಗದ ಭಾಗವನ್ನು ಪಕ್ಕಕ್ಕೆಳೆದುಕೊಂಡು ಬಲಗೈ ಮುಷ್ಟಿಯಲ್ಲಿ ಹಿಡಿದುಕೊಂಡು, ಎಡಗೈಯಲ್ಲಿ ಪುಸ್ತಕಗಳನ್ನು ಎದೆಗಾನಿಸಿಕೊಂಡು, ತಲೆ ತಗ್ಗಿಸಿ, ಬಿರಬಿರನೆ ಮನೆಯ ಕಡೆಗೆ ನಡೆಯತೊಡಗಿದೆ.

ಶಾಲೆಯಿಂದ ನಮ್ಮನೆ ಅಂದಾಜು ಮುನ್ನೂರು ಮೀಟರಿನಷ್ಟು ದೂರ. ಬಿಗಿಹಿಡಿದ ಉಸಿರು ಸಡಿಲಗೊಂಡಿದ್ದು ಮನೆಯ ಬಚ್ಚಲುಮನೆ ತಲುಪಿದಾಗಲೇ! ಮುಂದೆರಡು ದಿನ ಶಾಲೆಗೆ ಹೋಗಲಿಲ್ಲ. ನಂತರ ಅಳುಕುತ್ತಲೇ ಹೋದೆ. ಅಂದಿನಿಂದ ಮುಂದೆ ವಾರಗಟ್ಟಲೇ ಕ್ಲಾಸಿನಲ್ಲಿದ್ದ ಅಷ್ಟೂ ಕಣ್ಣುಗಳು ನನ್ನನ್ನು ನೋಡುತ್ತಾ ಒಳಗೊಳಗೇ ನಗುತ್ತಿವೆ ಎನ್ನುವಂತೆ ಭಾಸವಾಗುತ್ತಿತ್ತು. ಅದರಿಂದಾಗಿ ಕುಗ್ಗಿಹೋಗಿದ್ದೆ. ಆದರೆ ಮುಂದೆ ಸದಾ ತುಂಬಾ ಎಚ್ಚರಿಕೆಯಲ್ಲಿರುತ್ತಿದ್ದೆ. ಈ ಘಟನೆ ನಡೆದ ಎರಡು ತಿಂಗಳಿಗೆ ಹೊಸ ಕಟ್ಟಡದಲ್ಲಿ ನಮ್ಮ ಪಾಠಗಳು ನಡೆದವಾದ್ದರಿಂದ ನನಗೆ ಕಟ್ಟಡದ ಬಗ್ಗೆ ಇಷ್ಟು ಚೆನ್ನಾಗಿ ನೆನಪಿದೆ.

ಈಗಿನಂತೆ ಸ್ಯಾನಿಟರಿ ಪ್ಯಾಡುಗಳಿಲ್ಲದ ಕಾಲವದು. ಮನೆಯಲ್ಲಿನ ಹಳೆಯ ಮೆತ್ತನೇಯ ಕಾಟನ್ ಸೀರೆಗಳನ್ನು ಹರಿದು ನಾಲ್ಕಾರು ತುಂಡು ಮಾಡಿ, ಅವುಗಳನ್ನು ಹಲವಾರು ಮಡಿಕೆ ಮಾಡಿ ಬಳಸಬೇಕಿತ್ತು. ಎಷ್ಟೇ ದಪ್ಪ ಮಾಡಿದರೂ ರಕ್ತಸ್ರಾವ ತುಸು ಹೆಚ್ಚಾದರೆ ಹೀಗೆ ಹಿಂಸೆಪಡುವುದು ತಪ್ಪುತ್ತಿರಲಿಲ್ಲ ಹೆಣ್ಣುಮಕ್ಕಳಿಗೆ. ಇದೊಂದು ರೀತಿಯ ಆವಾಂತರವಾದರೆ, ಹಿಡಿದ ಬಟ್ಟೆಗಳನ್ನು ತೊಳೆದು, ಯಾರ ಕಣ್ಣಿಗೂ ಬೀಳದಂತೆ ಅವುಗಳನ್ನು ಒಣಗಿಸುವುದು ಇನ್ನೊಂದು ಆವಾಂತರ! ಅವು ಒಣಗುವ ತನಕ ಯಾರ ಕಣ್ಣಿಗೂ ಬೀಳದಿರಲಿ ದೇವರೇ ಎನ್ನುವ ಮೊರೆ ಅನೇಕ ಸಲ ದೇವರ ಕಿವಿಗೆ ತಲುಪುತ್ತಲೇ ಇರುತ್ತಿರಲಿಲ್ಲ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ನಮ್ಮ ಅಜ್ಜಿ, ಅಮ್ಮ , ಮತ್ತು ನಮ್ಮ ನಿಮ್ಮ ಕಾಲದಲ್ಲೂ ಈ ತಿಂಗಳ ಬಟ್ಟೆಗಳಿಂದಾಗಿ ಉಂಟಾದ ಕಿರಿಕಿರಿ, ಅಳು, ಜಿಗುಪ್ಸೆ, ರೇಜಿಗೆ ಅವಮಾನ ಹೇಳತೀರದ್ದು. ಜೊತೆಗೆ ಅದರಿಂದುಂಟಾಗುತ್ತಿದ್ದ ಸೋಂಕುಗಳು, ಜೊತೆಗೆ ಬರುತ್ತಿದ್ದ ದೈಹಿಕ ನೋವುಗಳು
    ,,, ಸದ್ಯ ಈಗ ಸಿದ್ಧ ನ್ಯಾಪ್ಕಿನ್ನುಗಳು ಎಲ್ಲೆಲ್ಲೂ ದೊರೆಯುವಂತಾಗಿರುವುದು ಮತ್ತು ಅದಕ್ಕೆ ಅಂಟಿದ್ದ ಮೈಲಿಗೆಯು ವಿಮೋಚನೆ ಯಾಗಿರುವುದು ಒಂದು ನಿರಾಳ. ನಮ್ಮ ತರುಣಿಯರಾದರೂ ಈ ಸೌಲಭ್ಯ ಭಾಜನರಾದರಲ್ಲ.

    ಈಗ ಸರ್ಕಾರಿ ಶಾಲೆಯ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳೂ ಉಚಿತ ಸರಬರಾಜಾಗುತ್ತಿರುವುದು, ಅನೇಕ ಸಂಘ ಸಂಸ್ಥೆಗಳು ಈ ನ್ಯಾಪ್ಕಿನ್ನುಗಳ ಮಹತ್ವ ಅರಿತು ಅವುಗಳನ್ನು ಉಚಿತವಾಗಿ ಹಂಚುತ್ತಿರುವುದು ಬಡ ಹೆಣ್ಣುಮಕ್ಕಳಿಗೊಂದು ಬಿಡುಗಡೆ.

    ಈ‌ ಕುರಿತು ತಿಳುವಳಿಕೆ ಮೂಡಿಸಲು ಪ್ರಯತ್ನಿಸಿದ ಅದೆಷ್ಟು ಜನರನ್ನು ಇಂದು ನೆನೆಯಬೇಕೋ. ಸಮಾಜದ ಕುಚೇಷ್ಟೆ ಕೀಟಲೆಗಳನ್ನು ತಾಳಿಕೊಂಡು, ನಿವಾರಿಸಿಕೊಂಡು ಅವರುಗಳು ಮಾಡಿದ ಪ್ರಯತ್ನದಿಂದಾಗಿ ಇಂದು ಈ ಮಾಸಿಕವು ಮಾತನಾಡಲೇ ಬಾರದ, ಲಜ್ಜಾದಾಯಕವಾದ ವಿಷಯವಲ್ಲವೆಂಬುದು ಜನಕ್ಕೆ ಅರಿವಾಗಿದೆ.

    ಪ್ರತಿಕ್ರಿಯೆ
  2. ಜಯಲಕ್ಷ್ಮಿ ಪಾಟೀಲ್

    ಥ್ಯಾಂಕ್ಸ್ ಲಲಿತಾ ಮೇಡಂ. ಹೌದು ಸ್ಯಾನಿಟರಿ ಪ್ಯಾಡುಗಳು ಇಂದಿನ ಜನರೇಶನ್ ಹುಡುಗಿಯರಿಗೆ ವಾರದಾನವೇ ಸೈ. ಆದ್ರೆ ಬಡವರಿಗೂ, ಕೂಲಿಕಾರರಿಗೂ ತಲುಪುವಂತಾಗುವುದು ಅತ್ಯಗತ್ಯವಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: