ದರ್ಶನ್ ಜಯಣ್ಣ ಸರಣಿ – ಅಪ್ಪನ Rallys ಸೈಕಲ್

ದರ್ಶನ್ ಜಯಣ್ಣ

3

ಅಪ್ಪಂದಿರಲ್ಲಿ ಮೂರು ವಿಧ!
ಮೊದಲನೆಯ ಥರದವರು ನಿಮ್ಮ ಪರಿಸ್ಥಿತಿಯ ಬಗ್ಗೆ ಹೀಯಾಳಿಸಿದ ನಿಮ್ಮ ಗೆಳೆಯನ ಬಗ್ಗೆ ನೀವು ಬೇಜಾರಿನಿಂದ ಹೇಳಿಕೊಂಡಾಗ ಸಾಂತ್ವನ ಹೇಳುವವರು. ಎರಡನೆಯ ವಿಧ ಆ ಪರಿಸ್ಥಿತಿಗೆ ನಿಮ್ಮ ಜೊತೆಗೆ ಅವರೂ ಮರುಗಿ ನಿಮಗೆ ವಾಸ್ತವದ ಅರಿವು ಮಾಡಿಸುವವರು. ಮೂರನೆಯವವರು ಆ ವಾಸ್ತವತೆಯನ್ನು ಬದಿಗೊತ್ತಿ ನಿಮ್ಮ ಪರಿಸ್ಥಿತಿಯನ್ನು ನಿಮಗೆ ಆಶ್ಚರ್ಯವಾಗುವಂತೆ ವಿಭಿನ್ನವಾಗಿ ವರ್ಣಿಸಿ ಮಾಯಾ ವಾಸ್ತವವನ್ನು ಸೃಷ್ಟಿಸಿ ನಿಮ್ಮಲ್ಲಿ ಖುಷಿಯ ಅಥವಾ ಹೆಮ್ಮೆಯ ಭಾವ ಮೂಡಿಸುವಂಥವರು. ನಮ್ಮಪ್ಪ ಇವುಗಳಲ್ಲಿ ಮೂರನೆಯ ಸಾಲಿಗೆ ಸೇರಿದವರು!

ಅದು ಹೇಗೆಂದರೆ…. ನಾನು ಆಗಷ್ಟೇ ಪ್ರಾಥಮಿಕ ಶಾಲೆ ಮುಗಿಸಿ ಐದನೇ ಕ್ಲಾಸ್ಸಿಗೆ ಸೇರಿದ್ದೆ. ನನ್ನ ಗೆಳೆಯರಲ್ಲನೇಕರು ಶಾಲೆಗೆ ಸೈಕಲ್ ನಲ್ಲಿ ಬರುತ್ತಿದ್ದರು. ನಾನು ನಡೆದೇ ಹೋಗುತ್ತಿದ್ದೆ. ಸೈಕಲ್ ಕೊಡಿಸಬೇಕೆಂದು ಅಮ್ಮನ ಕಡೆಯಿಂದ ಶಿಫಾರಸ್ಸು ಮಾಡಿಸಿದಾಗಲೆಲ್ಲ ಅಪ್ಪ ನನ್ನ ಹೈಟ್ ನ ಬಗ್ಗೆ ಹೇಳಿ ‘ಸ್ವಲ್ಪ ಏತ್ತರ ಆಗು ಇವಾಗ ಕಾಲೇ ತಲುಪಲ್ಲ, ಆಮೇಲೆ ನೋಡೋಣ’ ಎನ್ನುತ್ತಿದ್ದರು! ನಾನೂ ಓಡಿದೆ, ಜಿಗಿದೆ, ನೇತಾಡಿದೆ ಆದರೂ ಒಂದಿಚೂ ಉದ್ದವಾಗಲಿಲ್ಲ! ಮತ್ತೆ ಮತ್ತೆ ಶಿಫಾರಸ್ಸು, ಗೋಗರೆತ ಮತ್ತೆ ನಿರಾಶೆ.

ಆಗೊoದು ದಿನ ಅಪ್ಪ ‘ನೀನು ಆರನೇ ಕ್ಲಾಸಿನಲ್ಲಿ ರಾಂಕ್ ಪಡೆದರೆ ಏಳಕ್ಕೆ ಹೊಸ ಸೈಕಲ್ ಕೊಡಿಸುವೆ’ ಎಂದರು. ನಾನು ಉಬ್ಬಿದೆ, ಕೊಬ್ಬಿದೆ ಆದರೆ ಓದಲು ಮರೆತುಬಿಟ್ಟು ಮಿಡ್ ಟರ್ಮ್ ಪರೀಕ್ಷೆಯಲ್ಲಿ ರಾಂಕ್ ಬರಲಿಲ್ಲ. ಅಪ್ಪ ಕಟುವಾಗಿ ಹೇಳಿದರು ‘ರಾಂಕ್ ಬಂದಿಲ್ಲ ಅಂದ್ರೆ ಸೈಕಲ್ ಇಲ್ಲ ಅಷ್ಟೇ!’ ನಾನು ಪುನಃ ಕಷ್ಟು ಪಟ್ಟು ಓದಲಾರಾಂಭಿಸಿದೆ. ಇದರ ಮಧ್ಯೆ ಸೈಕಲ್ ಕೊಡಿಸಿದಮೇಲೆ ತುಳಿಯಲು ಬರಬೇಕಲ್ಲ? ಅದರ ತಾಲೀಮು ಮಾಡಬಾರದೇ? ಪುನಃ ಈ ಕುರಿತು ಅಪ್ಪನಲ್ಲಿ ಹೋಗಿ ‘ಗಂಟೆ ಬಾಡಿಗೆ’ ಸೈಕಲ್ ನ ಬಗ್ಗೆ ಹೇಳಿದಾಗ ಅಪ್ಪ ಗದರಿ ಕಳುಹಿಸಿದರು.

ಅವರಿಗೆ ನಾನು ಕೂಸು ಹುಟ್ಟುವ ಮುಂಚೆ ‘ಲಾವಿ’ ಹೊಲೆ ಯುವುದು ಇಷ್ಟವಿರಲಿಲ್ಲ. ಮುಖ್ಯವಾದ ವಿಷಯ ಏನೆಂದರೆ ಅವರಿಗೆ ವೃತಾ ನನಗೆ ಕಾಸು ಕೊಡಲು ಮನಸ್ಸಿರಲಿಲ್ಲ ಅಷ್ಟೇ! ಆದರೂ ನಾನು ಸೋಲುವ ಅಸಾಮಿಯಲ್ಲ. ಪ್ರತಿ ನಿತ್ಯ ಅವರ ಮುಂದೆ ಹೋಗಿ ನಿಂತು ಸೈಕಲ್ ಬಾಡಿಗೆಗೆ ಕಾಸು ಕೇಳುತ್ತಿದ್ದೆ. ನನ್ನ ತಂಟೆ ತಾಳಲಾರದೇ ಹಣ ಕೊಟ್ಟರೂ ನಾನು ಅದನ್ನೇ ರೂಢಿ ಮಾಡಿಕೊಂದ ಮೇಲೆ ಸ್ಥಗಿತಗೊಳಿಸಿದರು. ನನಗೆ ಇದು ಒಂದು ರೀತಿಯಲ್ಲಿ ಲೈಫ್ ಲೈನ್ ಕಳೆದುಕೊಂಡ ಅನುಭವ. ಪುನಃ ಅಮ್ಮನ ಅಜ್ಜಿಯ ಮೂಲಕ ಶಿಫಾರಸ್ಸು ಮಾಡಿದರೂ ಅಪ್ಪ ಮನಸು ಮಾಡಲಿಲ್ಲ. ಈ ಸಾರಿ ಅವರು ಅಚಲವಾಗಿದ್ದರೂ ನಾನು ಹಠಮಾರಿಯಾಗಿದ್ದೆ.

ಹಾಗೊಂದು ದಿನ ಅಪ್ಪ ನನ್ನನ್ನು ಕರೆದು ತನ್ನ ಗ್ರಂಥಿಗೆ ವ್ಯಾಪಾರದ ಬಗ್ಗೆ, ಗುಲ್ಕನ್ ಫ್ಯಾಕ್ಟರಿ ಬಗ್ಗೆ ಹೇಳತೊಡಗಿದರು. ತಾವು ಬೆಂಗಳೂರಿನ ಲಾರಿ ಆಫಸಿನಲ್ಲಿ ಹಾಕಿದ ಸರಕು ಹೇಗೆ ತುಮಕೂರಿಗೆ ಬರುತ್ತದೆ. ಅದು ಎಷ್ಟಿದ್ದರೂ ತಾನು ಹೇಗೆ ಅದನ್ನು ತನ್ನ 24 ಇಂಚಿನ ರಾಲಿಸ್ ಸೈಕಲ್ನ ಮೇಲಿರಿಸಿ ತರುತ್ತೇನೆ. ಆಟೋಗೆ ಅಥವಾ ಕುದರೆ ಗಾಡಿಗೆ ಚಾರ್ಜ್ ಕೊಡಬೇಕಾದ ಅವಶ್ಯಕತೆ ಇರದೆ ಹೇಗೆ ತನ್ನ ಸೈಕಲ್ ತನ್ನನ್ನು ಸಲಹುತ್ತದೆ. ಯಾಕೆ ಅದು ಒಂದು ದಿನವೂ ಪಂಚರ್ ಆಗುವುದಿಲ್ಲ. ಯಾಕೆ ಈಗ ಆ ಉನ್ನತ ಗುಣ ಮಟ್ಟದ ಸೈಕಲ್ ಗಳೇ ಬರುವುದಿಲ್ಲ. ತನ್ನ ಸೈಕಲ್ ಡೈನಮೋ ಬೆಳಕು ಹೇಗೆ ಇವತ್ತಿನ ಹೊಸ ರೇಂಜರ್ ಅಥವಾ ಬೇರೆ ಸೈಕಲ್ ಗಳಿಗಿಂತ ಪ್ರಖರವಾಗಿದೆ, ಹೀಗೆಲ್ಲ ಹೇಳುತ್ತಾ ನನಗೆ ಅವರ ಸೈಕಲ್ ನ ಮೇಲೆ ಏಕಕಾಲಕ್ಕೆ ಹೆಮ್ಮೆ, ಪ್ರೀತಿ, ಅಭಿಮಾನ, ಗರ್ವ ಹುಟ್ಟಿಸಿ ಬಿಟ್ಟರು!

ಕಡೆಗೆ ನಾನು ‘ಅಪ್ಪಾಜಿ ಹಾಗಿದ್ದಮೇಲೆ ನಮ್ಮ ಸೈಕಲ್ಲು ಸೂಪರ್’ ಅಂದುಬಿಟ್ಟಿದ್ದೆ. ಅವರಿಗೆ ಭಯಂಕರ ಖುಷಿಯಾಗಿತ್ತು. ನಂತರ ಅವರೇ ‘ಇನ್ನು ಮೇಲೆ ಬಾಡಿಗೆ ಯಾಕೆ ಹೊಡಿತೀಯ? ನನ್ನ ಸೈಕಲ್ನಲ್ಲೇ ಅಭ್ಯಾಸ ಮಾಡು!’ ಅಂದರು. ನನಗೆ ಖುಷಿಯಾಯಿತಾದರೂ ಅಷ್ಟು ಎತ್ತರದ ಸೈಕಲ್ನ ಮೂರುವರೆ ಅಡಿಯ ಮಾನವ ನಾನು ಹೇಗೆ ಪಳ ಗಿಸುವುದೆಂದು ಯೋಚಿಸುತ್ತಿದ್ದೆ.

ಅದನ್ನು ಅವರೊಡನೆ ಹಂಚಿಕೊಂಡರೆ ಆ ಅಪರೂಪದ ಸೈಕಲ್ ನಲ್ಲಿ ಚಲಿಸುವ ಅವಕಾಶ ಕಳೆದುಹೋಗಬಹುದೆಂದು ಸುಮ್ಮನಿದ್ದೆ. ಆದರೂ ಮರುದಿನದಿಂದಲೇ 24 ಇಂಚಿನ ಆ ಸೈಕಲ್ ಅನ್ನು ಪಳಗಿಸಲು ಶುರುವಿಟ್ಟೆ. ಆದೋ ಯಣಭಾರ ಮತ್ತು ಏತ್ತರ. ಬಿದ್ದಿದ್ದು, ಎದ್ದಿದ್ದು ಮತ್ತೆ ಮತ್ತೆ ಬಿದ್ದಿದ್ದು ಲೆಕ್ಕವಿಲ್ಲ! ಕಡೆಗೆ ಹೇಗೋ ಮಾಡಿ ನಿಧಾನವಾಗಿ ಕತ್ತರಿಯಲ್ಲಿ ಬ್ಯಾಲೆನ್ಸ್ ಮಾಡುವುದನ್ನು ಕಲಿತೆ. ಭೇಷ್ ಅನ್ನಿಸಿತು. ಆದರೂ ಸ್ವಲ್ಪವಾದರೂ ಬೀಳುವ ಮುಂಸೂಚನೆ ಕಂಡೊಡನೆ ತಟ್ಟನೆ ಏಗರಿ ಇಳಿದುಬಿಡುತ್ತಿದ್ದೆ. ಹೀಗೇ ಒಂದು ವರ್ಷ ಕೆಳೆಯಿತು.

ಆರನೇ ಕ್ಲಾಸಿನಲ್ಲಿ ನಾಕನೇ ರಾಂಕ್ ಬಂದಿದ್ದರಿಂದ ಅಪ್ಪನಿಗೇನು ಅಷ್ಟು ಖುಷಿಯಾಗದಿದ್ದರೂ ಮಾತಿಗೆ ಕಟ್ಟುಬಿದ್ದು (ನನ್ನದಲ್ಲ ಅಮ್ಮನದ್ದು !) ಹೊಸದೊಂದು ‘ಹೀರೋ ರೇಂಜರ್’ ಸೈಕಲ್ ಕೊಡಿಸಿದರು.

ನಾನು ಪೀಡಿಸಿ ಹ್ಯಾಂಡಲ್ಗೆ ಗ್ರಿಪ್ ಹಾಕಿಸಿಕೊಂಡೆ ಮತ್ತು ರೇಡಿಯಂ ಸ್ಟಿಕರ್ ನಲ್ಲಿ ನಾನೇ ನನ್ನ ಹೆಸರು ಕಟ್ ಮಾಡಿ ಅಂಟಿಸಿಕೊಂಡೆ. ನನ್ನ ಖುಷಿಗೆ ಪಾರವೇ ಇರಲಿಲ್ಲ. ಅಪ್ಪನ ಆಳೆತ್ತರದ ಎತ್ತರದ, ಭಾರವಾದ ಸೈಕಲ್ನಲ್ಲಿ ಕಲಿತಿದ್ದರಿಂದ ನನ್ನ ಹೊಸ ಸೈಕಲ್ ತುಳಿಯುವುದು ಬಹಳ ಸುಲಭವಾಗಿತ್ತು.

ನಮ್ಮ ಮನೆಯ ಮುಂದೆ ಎರಡೂ ಸೈಕಲ್ ಗಳನ್ನು ಪಕ್ಕ ಪಕ್ಕ ನಿಲ್ಲಿಸಿದಾಗ ಯಾಕೋ ಅಪ್ಪನ ಸೈಕಲ್ ಮಂಕು ಮಾಂಕಾಗಿ ಕಾಣುತ್ತಿತ್ತು! ಅಪ್ಪ ವರ್ಣಿಸಿದಾಗ ನನ್ನನ್ನು ಮಾಯಾಪ್ರಪಂಚಕ್ಕೆ ಕರೆದೋಯ್ದ ಸೈಕಲ್ ಇದೇನಾ ಎಂದು ಆಶ್ಚರ್ಯವಾಗುತ್ತಿತ್ತು.

ನಾನು ದಿನಾಲು ಸ್ಕೂಲಿಗೆ ಹೋಗುವ ಮುಂಚೆ ಅಪ್ಪ ನನ್ನ ಸೈಕಲ್ ಒರೆಸುತ್ತಿದ್ದರು. ನಾನೇ ಒರೆಸಿದ ದಿನವೂ ಸುಮ್ಮನಿರದೆ ‘ನೋಡು ಅಲ್ಲಿ ಸರಿಯಿಲ್ಲ, ಇಲ್ಲಿ ಒರೆಸಿಲ್ಲ, ಸೋಂಬೇರಿ ನೀನು’ ಎನ್ನುತ್ತಾ ಮತ್ತೆ ಒರೆಸಿ ಕೊಡುತ್ತಿದ್ದರು.

ಬಹಳ ದಿನಗಳನಂತರ ತಿಳಿದದ್ದೇನೆಂದರೆ ಅಪ್ಪನ ರಾಲಿ ಸೈಕಲ್ ಅನ್ನು ಅವರು ನಮ್ಮ ಜಮೀನಿದ್ದ ದುರ್ಗದ ಹಳ್ಳಿಯ ವಿಲೇಜ್ ಛೇರ್ಮನ್ ರಿಂದ 250 ರೂಗೆ ಖರೀದಿಸಿದ್ದಂತೆ. ನಾವಿದ್ದ ಮನೆಯ ಬಾಡಿಗೆ ಆಗ 200 ಇತ್ತು, ಇಂತಹ ಸಂದರ್ಭದಲ್ಲಿ ಅಪ್ಪ ನನಗೆ 1800 ರೂಪಾಯಿಯ ‘ಹೀರೋ ರೇಂಜರ್’ ಸೈಕಲ್ ಕೊಡಿಸಿದ್ದರು.

ಈಗ ಇದೆಲ್ಲವನ್ನು ನೆನೆಸಿಕೊಂಡರೆ ಹಿಂದಿಯಲ್ಲಿ ಒಂದು ಮಾತು ನೆನಪಾಗುತ್ತದೆ ‘ಬಾಪ್ ಬಾಪ್ ಹೋತಾಹೇ ಔರ್ ಬೇಟಾ ಬೇಟಾ ಹೋತಾಹೇ!’

| ಇನ್ನು ನಾಳೆಗೆ |

‍ಲೇಖಕರು Admin

August 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: