‘ಕವಿತೆ ಬಂಚ್‌’ನಲ್ಲಿ ಡಾ ಸದಾಶಿವ ದೊಡಮನಿ

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಡಾ ಸದಾಶಿವ ದೊಡಮನಿ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬೂದಿಹಾಳ ಗ್ರಾಮದವರಾದ ಡಾ. ಸದಾಶಿವ ದೊಡಮನಿಯವರು ಜನಿಸಿದ್ದು, ೧೯೭೭ ರಲ್ಲಿ, ಬಸವನ ಬಾಗೇವಾಡಿ ತಾಲೂಕಿನ ಗೊಳಸಂಗಿಯಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಹಾಗೂ ‘ಧಾರವಾಡ ಮತ್ತು ಹಲಸಂಗಿ ಗೆಳೆಯರ ಗುಂಪು : ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಕೈಗೊಂಡು, ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾವ್ಯ, ಸಂಶೋಧನೆ, ವಿಮರ್ಶೆ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಕೊಂಡಿರುವ ಡಾ. ಸದಾಶಿವ ದೊಡಮನಿಯವರು ಇದೂವರೆಗೆ ‘ಧರೆ ಹತ್ತಿ ಉರಿದೊಡೆ’ , ‘ನೆರಳಿಗೂ ಮೈಲಿಗೆ’, ದಲಿತ ಸಾಹಿತ್ಯ ಸಂಚಯ’, ‘ಪ್ರತಿಸ್ಪಂದನ’ ), ‘ಧಾರವಾಡ ಮತ್ತು ಹಲಸಂಗಿ ಗೆಳೆಯರ ಗುಂಪು : ಒಂದು ಸಾಂಸ್ಕೃತಿಕ ಅಧ್ಯಯನ’ ಪ್ರಕಟಿಸಿದ್ದಾರೆ. ಅಲ್ಲದೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಫೆಲೋಶಿಪ್ ಅಡಿಯಲ್ಲಿ ‘ಗದಗ ಜಿಲ್ಲೆಯ ಸುಗಮ ಸಂಗೀತ ಬೆಳವಣಿಗೆ ಹಾಗೂ ಕೊಡುಗೆ’ ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಕೈಗೊಂಡು, ಪ್ರಬಂಧವನ್ನು ಸಲ್ಲಿಸಿದ್ದಾರೆ’.

1. ಇರುವುದು ಒಂದೇ ರೊಟ್ಟಿ

ಇರುವುದು ಒಂದೇ ರೊಟ್ಟಿ
ವಣಗಿ ಇಲ್ಲ
ತಮ್ಮ, ತಂಗಿ ಇಬ್ಬರೂ ಅರ್ಧ ಅರ್ಧ ತಿಂದರು!
ನಾನು ಗುಟುಕು ನೀರು ಕುಡಿದೆ
ಅಕ್ಕ ಚರಗಿ ತಳದಲ್ಲಿಯ
ಹನಿ ನೀರಿಗೆ ನಾಲಿಗೆ ಒಡ್ಡಿದಳು
ಅವ್ವ, ಅಪ್ಪ ಒಣ ಉಗುಳು ನುಂಗಿ ಮಲಗಿದರು!

ಇರುವುದು ಒಂದೇ ಕೌದಿ
ಮಿಕ್ಕ ಹಾಸಲಿಲ್ಲ ಹೊದಿಯಲಿಲ್ಲ
ಅಕ್ಕ, ತಂಗಿಯರ ಕೈ, ತಲೆಗೆ ಬಂದರೆ
ನನ್ನ, ತಮ್ಮನ ಕಾಲಿಗೆ ಬಾರದು
ಅವ್ವ, ಅಪ್ಪಗೆ ಉಟ್ಟ ಅರಿವೆಯೇ
ಹಾಸಿಗೆ, ಹೊದಿಕೆ
ಹಕ್ಕಳೆ ಕಿತ್ತಿದ ನೆಲ
ಬರೀ ಕಸ ಉಡುಗಲಿಕ್ಕೆ

ಮುಂಜ-ಮುಂಜಾನೆಯೇ
ಹೊಟ್ಟೆಯಲ್ಲಿಯೇ ಸರ‍್ಯ ಉರಿಯುತ್ತಿದ್ದ
ಸಲಕೆ, ಬುಟ್ಟಿ ಅಪ್ಪನ ಹೆಗಲೇರಿ ಕುಣಿಯುತ್ತಿದ್ದವು!
ಅವ್ವ ಗಿದ್ದನ ಹಿಟ್ಟಿಗಾಗಿ
ಮನೆ-ಮನೆ ತಿರುಗುತ್ತಿದ್ದಳು
ನಾವು ಖಾಲಿ ತಾಟಿಗಾಗಿ ಕಿತ್ತಾಡುತ್ತಿದ್ದೇವು!

ಕಿತ್ತೋದ ಉಂಗುಟಕೆ
ಬಾಳೆಯ ಬಚ್ಚಿಯನು ಜೋಡಿಸಿ
ಆ ಈ ಹೊಲಗಳನು ಆನೆಗಾಲಲ್ಲಿ ಅಲೆದು
ಹೆಕ್ಕಿದ ಸೇಂಗಾ ಬುಡ್ಡಿಯನು
ಅವರಿವರಿಗೆ ಹಂಚುತ್ತಲೇ ಮನೆ ಮುಟ್ಟುವ ಅಪ್ಪ
ಉರಿವ ಎದೆಯ ಒಲೆಯ ಮೇಲೆ
ಕನಸುಗಳ ರೊಟ್ಟಿ ಸುಟ್ಟು,
ಕರುಳ ಕುಡಿಗಳನು ಸಲುಹುತ್ತ
ನಗುನಗುತ್ತಲೇ ಬಾಳುವ ಅವ್ವ
ಯಾವ ದೇವರುಗಳಿಗೂ ಕಮ್ಮಿ ಅಲ್ಲ
ಅಪ್ಪ, ಅವ್ವನ ಹೊರತು ಅನ್ಯ ದೇವರುಗಳು
ನನಗೆ ಕಾಣುವುದೇ ಇಲ್ಲ

2. ಅಪ್ಪ

ಅಪ್ಪನ ಕೈಯ ಮ್ಯಾಲೆ
ಎಷ್ಟೊಂದು ಕೆರೆ-ಬಾವಿಗಳು, ಒಡ್ಡು-ಬಾಂದಾರ
ಗಳು ತಲೆ ಎತ್ತಿದವು!

ಅಪ್ಪ ತೋಡಿದ ಕೆರೆ-ಬಾವಿ ಎಂದೂ ಬತ್ತಲಿಲ್ಲ
ಹಾಕಿದ ಒಡ್ಡು-ಬಾಂದಾರಗಳು ಎಂದೂ ಒಡೆಯಲಿಲ್ಲ
ಇಡೀ ಊರಿಗೆ ಊರೇ ಅಪ್ಪ ತೋಡಿದ ಕೆರೆ-ಬಾವಿಯ ನೀರು
ಕುಡಿಯುತ್ತಾರೆ
ಅಪ್ಪ ಮಾತ್ರ ಕೆರೆ-ಬಾವಿ ಮುಟ್ಟಾಂಗಿಲ್ಲ,
ಮುಟ್ಟಿ ನೀರು ಕುಡಿಯಾಂಗಿಲ್ಲ

ಅಪ್ಪ ಬಿತ್ತಿದ ಬೀಜ ಎಂದೂ ಹುಸಿ ಹೋಗಲಿಲ್ಲ
ಒಂದು ಎರಡಾಗಿ, ಎರಡು ಮೂರು, ನಾಲ್ಕಾಗಿ
ನೆಲ ತುಂಬ ಹಸಿರು ಮೂಡಿ
ದವಸ, ಧಾನ್ಯ ಹುಲುಸಾಗಿ ಬೆಳೆದರೂ
ಅಪ್ಪನಿಗೆ ಕಡಗಣದ ಮಣ್ಕಾಳೇ ಕೊಡುಗೆ!

ಅಪ್ಪ ಕಟ್ಟಿದ ಮನೆ-ಮಹಲು, ಗುಡಿ-ಗುಂಡಾರ
ಅಪ್ಪನ ಬೆವರ ಹನಿಯ ಫಲ
ಒಂದು ಕಲ್ಲು, ಹಿಡಿ ಮಣ್ಣು ಉದಿರಿಲ್ಲ
ಇಂದಿಗೂ ಗಟ್ಟಿಮುಟ್ಟಾಗಿ ನಿಂತಿವೆ
ಉಳ್ಳವರಿಗೆ ಆಶ್ರಯ ತಾಣವಾಗಿವೆ
ಅಪ್ಪನ ಶ್ರಮಕ್ಕೆ ಭಾಷ್ಯ ಬರೆಯುತ್ತಿವೆ
ಅಪ್ಪ ಮಾತ್ರ ಇಂದಿಗೂ ಅದೇ ಮುರುಕು ಗುಡಿಸಲಲ್ಲಿ
ಸೂರ್ಯ, ಚಂದ್ರರ ಜೊತೆಯಲ್ಲಿ ಹೈರಾಣದ ಕತೆ
ಹೇಳುತ್ತಲೇ ಇದ್ದಾನೆ
ತೊಡೆಯ ಮೇಲಿನ ಮೊಮ್ಮಗಳು ಹೂಂಗುಟ್ಟುತ್ತಲೇ
ಇದ್ದಾಳೆ

3. ಮನಸ್ಸುಗಳು ತುಂಬಾ ಮಲಿನವಾಗಿವೆ ಗೆಳೆಯಾ

ಮನಸ್ಸುಗಳು ತುಂಬಾ
ಮಲಿನವಾಗಿವೆ ಗೆಳೆಯಾ
ಶುಚಿಗೊಳಿಸಬೇಕು
ಕೆರೆ-ಬಾವಿ ಹುಡುಕುತ್ತಿದ್ದೇನೆ
ಪುಣ್ಯ ಜಲವಿದ್ದರೆ ನೋಡಿ ಹೇಳು
ಕಾಯುತ್ತಿರುತ್ತೇನೆ

ಮಾತುಗಳು ತುಂಬಾ
ಆಶುದ್ಧವಾಗಿವೆ ಗೆಳೆಯಾ
ಶುದ್ಧಗೊಳಿಸಬೇಕು
ಕಡಲು-ಕಿನಾರೆ ಹುಡುಕುತ್ತಿದ್ದೇನೆ
ಪುಣ್ಯ ಜಲವಿದ್ದರೆ ನೋಡಿ ಹೇಳು
ಕಾಯುತ್ತಿರುತ್ತೇನೆ

ಕಣ್ಣುಗಳು ತುಂಬಾ
ಹೇಸಿಗೆಯಾಗಿವೆ ಗೆಳೆಯಾ
ತೊಳೆಯಬೇಕು
ಹಳ್ಳ-ಕೊಳ್ಳಗಳ ಹುಡುಕುತ್ತಿದ್ದೇನೆ
ಪುಣ್ಯ ಜಲವಿದ್ದರೆ ನೋಡಿ ಹೇಳು
ಕಾಯುತ್ತಿರುತ್ತೇನೆ

ವಿಚಾರಗಳು ತುಂಬಾ
ಮೊಂಡವಾಗಿವೆ ಗೆಳೆಯಾ
ಹರಿತಗೊಳಿಸಬೇಕು
ವಿವೇಕದ ಸಾಣಿ ಹುಡುಕುತ್ತಿದ್ದೇನೆ
ನಂಬಿಕೆ ಇದ್ದರೆ ನೋಡಿ ಹೇಳು
ಕಾಯುತ್ತಿರುತ್ತೇನೆ

4. ಮದ್ದು ಯಾವುದು?

ಕುಡಿ ಬಿಟ್ಟ ಹಾಲ ಬಳ್ಳಿಯ ಎದೆಯ
ಕೆಲ ದಾರಿ ಹೋಕರು
ತುಳಿ-ತುಳಿದು ಹೋದರು
ಇನ್ನೂ ಕೆಲವರು
ಕುಡಿಯ ಕೊರಳ ಚಿವುಟಿ ಹೋದರು

ಈ ಒಡಲ ಗಾಯ, ನೋವಿಗೆ ಮದ್ದು ಯಾವುದು?
ಎಲ್ಲಿ ಹುಡುಕುವುದು? ಹೇಳು

ವಿಷದ ಹುಳುಗಳು
ಮುಖವಾಡ ಧರಿಸಿ ಒಳ ನುಸುಳುವವು
ಹೂಗನಸು, ಹೂಮನಸುಗಳ ಹೊಸಕಿ ಹಾಕಿದ ಗುರುತೂ
ಬಿಡದೇ ನುಂಗಿ, ನೀರು ಕುಡಿದು
ಮೈ ಮುರಿಯುವವು

ಮುಖ ತೋರದ ಕುಶಕ್ತಿಗಳು
ರಕ್ಷಣೆಗೆ ಕೊಡೆ ಹಿಡಿದು
ಸಾಹಸ ಮೆರೆಯುವವು
ಇಲ್ಲದ ದಾಖಲೆ ಪುರಾವೆಗಳ ಸೃಷ್ಟಿಸಿ
ಇದ್ದುದನ್ನು ತಿರುಚಿ
ಉಘೇ! ಉಘೇ! ಎಂದು
ಜೈಕಾರ ಹಾಕಿ ನಿಜವ ಮರೆಸುವವು

5. ಪ್ರೇಮ ಭಿಕ್ಷೆ

ಏನು ಕೇಳಿದೆ ನೀನು
‘ಹಿಡಿ ಪ್ರೀತಿ’ಯೇ?
‘ಹಿಡಿ’ ಹಾಗಾದರೆ
ಹೃದಯ ಕಡಲಲ್ಲಿ ಹಾಕಿ
ಅದೇ ಪ್ರೀತಿ ಕಡಗೋಲಿಲೆ ಮಥಿ-ಮಥಿಸಿ
ಹಂಚು ಮನ-ಮನೆಗೆ

ಏನು ಕೇಳಿದೆ ನೀನು
‘ಹಿಡಿ ಪ್ರೀತಿ’ಯೇ?
ಹೃದಯ ತುಂಬಿ ತಂದಿರುವೆ
ಅಳೆಯದೇ ತೆಗೆದುಕೋ ಅದೇ ಉಣ್ಣು,
ಅದೇ ಉಣಿಸು ಮುಚ್ಚಿಡಬೇಡ
ಗೆದ್ದಲು ಹತ್ತುತ್ತದೆ
ಹಂಚು ಪರರಿಗೆ
ಅಳತೆ ಮಾಡದೆ

ಏನು ಕೇಳಿದೆ ನೀನು
‘ಹಿಡಿ ಪ್ರೀತಿ’ಯೇ
‘ಹಿಡಿ’ ತೆಗೆದುಕೋ
ಅನ್ನ, ಧನಕ್ಕೆ ಇರಬಹುದು ಬಡತನ
ಉಂಟೇ ಪ್ರೀತಿಗೆ?
ಎಂದೂ ಇರದು
ಹಂಚಿದಷ್ಟು ಬೆಳೆಯುವುದು
ಅದೇ ಪ್ರೀತಿಯ ಗುಣವು
ಪ್ರೀತಿಯೇ ಬೇಡಿ, ಪ್ರೀತಿಯೇ ಹಂಚು
ಎಂದೆಂದಿಗೂ
ಜಗದಲ್ಲಿ ಸಿಗುವುದು
ಎಂದೆಂದಿಗೂ ಒಂದೇ
ಅದೇ ಪ್ರೀತಿಯ ಹುಡಿ
ಅದರಲ್ಲಿಯೇ ಹೃದಯ ಹೊರಳಾಡಲಿ
ಬಿಟ್ಟು ಬಿಡು
ಹೃದಯಕ್ಕೆ ಅಂಟಿದ ಪ್ರೀತಿ ಹುಡಿಯ
ಪ್ರತಿ ಹೃದಯಕ್ಕೆ
ಮುಡಿಸುತ್ತಲೇ ನೀ ಸಾಗು
ಆಗುವೆ ಕೊನೆಗೆ ನೀ ಪ್ರೇಮ ಭಿಕ್ಷೆ
ಜಗದ ಅಕ್ಷ!

6. ಉಸಿರಿನ ಮಾತು

ನನ್ನ ಉಸಿರಿನ ಮಾತು ನಿನಗ ಅರ್ಥ ಆದಷ್ಟು
ಬ್ಯಾರೆ ಯಾರಿಗರ ಅರ್ಥ ಆಕೈತೇನ ಹೇಳು
ಅರಳಿದ ಹೂವಿನ ವಾಸನಿ ತೊಗೊಳ್ದ ಮಾರಿ ತಿರುವಿ ನಿಂತವರು
ಎಷ್ಟು ಮಂದಿ ಎಣಿಸಿ ಹೇಳು

ತಗಡದಂತಹ ಮಾತ ಆಡಿ ಈ ಹೃದಯ ಚೂರು ಚೂರು ಮಡಿದವರನ್ನು
ನಾ ಹ್ಯಾಂಗ ನಂಬಲಿ
ಅವರೀ ಹೂವಿನಂತಹ ಮನಸ್ಸು ಘಾಸಿಗೊಂಡಿದ್ದನ್ನು
ತುಸು ಅವರಿಗೆ ತಿಳಿಸಿ ಹೇಳು

ಸಣ್ಣ ಕಣ್ಣಿನ ಸಂಪ್ಗಿ ಮೂಗಿನ ಚೆಲುವಿ ನೀನ ಅಂತ
ಹೃದಯ ಸಾರಿ ಸಾರಿ ಹೇಳತೈತಿ
ಉಣ್ಣದ ಹರಳುಹೂವಿನಾಂಗ ಅರಳಿದರೂ
ಹೃದಯ ಸುಡುವ ಸತ್ಯ ಮರೆ ಮಾಚದೇ ಹೇಳು

ಪಿರೂತಿ ಹುಡಿಯಲ್ಲಿ ಈ ಹೃದಯ, ಮನಸು
ಹೊರಳಡಲಿ ಬಿಟ್ಟು ಬಿಡು
ದ್ವೇಷ-ದಳ್ಳುರಿಯ ಸನಿಹ ಅಪ್ಪ-ತಪ್ಪಿಯೂ ಸುಳಿಯದಂತೆ
ಮನಸಿಗೆ ತಿಳಿಸಿ ಹೇಳು

7. ಭೂಮಿ ತೂಕದ ನಡಿಗೆ

ಅವ್ವ ಅಲ್ಲಿ ನೋಡೇ
ದೊಂಬರಾಟ ಆಡುವ ಬಾಲೆ
ಹನ್ನೆರಡರೂ ತುಂಬಿಲ್ಲ
ಪಣಕ್ಕಿಟ್ಟು ಜೀವ
ಹಗ್ಗ-ಗಾಲಿಯ ಮೇಲೆ
ನಡೆಯುತ್ತಿದ್ದಾಳೆ
ಉಸಿರು ಬಿಗಿ ಹಿಡಿದು
ಕಾತರತೆಯ ಮೊಟ್ಟೆ
ಎದೆಯಲೊಡೆದು
ನಮ್ಮ ಕೈ ಹಿಡಿದು ನಡೆಸುತ್ತಿದ್ದಾಳೆ

ನನಗೂ ಹನ್ನೆರಡೇ
ನೀ ನೋಡು
ನನ್ನ ಕೈ ಹಿಡಿದು ಶಾಲೆಗೆ
ಕರೆದೊಯ್ಯುತ್ತಿಯೇ
ಮನೆಗೆ ಕರೆದು ತರುತ್ತಿಯೆ
ಅವ್ವ
ಅಲ್ಲಿ ನೋಡೇ

ಕಲಿಸದ ನಾಲ್ಕಕ್ಷರ
ಒಪ್ಪಿಸಲು ನಾನು ತೊದಲುತ್ತೇನೆ
ಸಣ್ಣಗೆ ನಡುಗುತ್ತೇನೆ
ಅವಳೋ
ಜಗವ ಹೊತ್ತು ಹಗ್ಗ-ಗಾಲಿಯ ಮೇಲೆ
ಬಿಮ್ಮನೆ ನಡೆಯುತ್ತಿದ್ದಾಳೆ
ಅವ್ವ
ಅಲ್ಲಿ ನೋಡೇ

ಬಟ್ಟೆಗೆ ಒಂದು ಎಳೆ ದಾರ ಹಾಕಲು
ಅಲ್ಲಲ್ಲ ಸೂಜಿಗೆ ದಾರ ಪೋಣಿಸಲೂ
ನನಗೆ ಬೇಕು ನೀನು
ಅವಳು ಹರಿದ ಬದುಕನ್ನೇ
ಹೊಲಿಯುತ್ತಿದ್ದಾಳೆ
ಹಸಿದ ಒಡಲಿಗೆ ಅನ್ನವೀಯುತ್ತಿದ್ದಾಳೆ
ಅವ್ವ
ಅವ್ವ ನೋಡೇ

ಕಲಿಯಲು ಶಾಲೆ
ಕಲಿಸಲು ಗುರು
ತಿರುಗಾಡಲು ಗಾಡಿಯೂ ನನಗೆ
ಅವಳಿಗೇನಿದೆ
ಜಗವೇ ಪಾಠಶಾಲೆ ಅರಿವೆ ಗುರು
ನಡೆದದ್ದೇ ದಾರಿ
ಕಲಿತದ್ದೇ ಬಿಜ್ಜೆ
ಅವಳದು ‘ಭೂಮಿ ತೂಕದ ನಡಿಗೆ’
ಅವಳಂಗೆ ಯಾರಿಹರೆ?
ಈ ಜಗವ ನಡೆಸುತ್ತಿಹಳೇ
ಅವ್ವ
ಅಲ್ಲಿ ನೋಡೆ

‍ಲೇಖಕರು Admin

August 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಭೂಮಿತೂಕದ ನಡಿಗೆ , ಅಪ್ಪ, ಪ್ರೀತಿ ಕವನಗಳು ಇಷ್ಟವಾದುವು. ಎಲ್ಲಾ ‌ಕವನಗಳೂ‌ ಚೆನ್ನಾಗಿವೆ.

    ಪ್ರತಿಕ್ರಿಯೆ
  2. ನೂತನ ದೋಶೆಟ್ಟಿ

    ಬದುಕು ಜಂಜಾಟವನ್ನು ಹೃದಯ ಸ್ಪರ್ಶಿಯಾಗಿ ಹೇಳಿದ ಈ ಕವಿತೆಗಳು ಭರವಸೆಯನ್ನು ಕಳೆದುಕೊಳ್ಳುವುದಿಲ್ಲ.

    ಪ್ರತಿಕ್ರಿಯೆ
  3. ಕೊಟ್ರೇಶ್ ಅರಸೀಕೆರೆ

    ಎದೆಗೆ ತಾಕಿದ ಕವಿತೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: