ದರ್ಶನ್ ಜಯಣ್ಣ ಸರಣಿ – ಅಕ್ಟೋಬರ್ ನಾಲ್ಕು!

ದರ್ಶನ್ ಜಯಣ್ಣ

6

ಅವತ್ತು ಅಕ್ಟೋಬರ್ ನಾಲ್ಕು 2014. ಅತ್ತಿಬೆಲೆಯ ನನ್ನ ಅಪಾರ್ಟ್ಮೆಂಟ್ ನಿಂದ ವೈಟ್ ಫೀಲ್ಡ್ ನ ಒಂದು ಕಂಪನಿಗೆ ಇಂಟರ್ವ್ಯೂಗೆ ಹೊರಡಲು ಸಿದ್ದನ್ನಾಗಿದ್ದೆ. ಮನೆಯಿಂದ ಅಮ್ಮನ ಫೋನು ಬಂದು ಅವರು ಗಾಬರಿಯ ಧ್ವನಿಯಲ್ಲಿದ್ದರು. ಅಪ್ಪನಿಗೆ ರಾತ್ರಿ ಮಲಗಿದ್ದಲ್ಲೆ ಎಡಗಡೆಯ ಭಾಗ ಸ್ವಾದೀನ ತಪ್ಪಿರುವುದಾಗಿ ಹೇಳಿದರು. ಇದರಿಂದಾಗಿ ಅಪ್ಪನಿಗೆ ಎಡಗಾಲು ಮತ್ತು ಎಡಗೈ ಕೊಂಚ ಹತೋಟಿ ತಪ್ಪಿತ್ತು.

ಆರು ತಿಂಗಳ ಹಿಂದೆ ಅಪ್ಪ ಹೀಗೆಯೇ ಹೇಳಿದ್ದರು. ಎಡಗಡೆಯ ಭಾಗ ಸ್ವಲ್ಪ ನಿತ್ರಾಣವಾಗಿರುವಂತೆ ಕೈ ಕಾಲುಗಳಲ್ಲಿ ಶಕ್ತಿ ಕುಂದಿರುವಂತೆ. ಆಗ ಅವರನ್ನು ಬೆಂಗಳೂರಿಗೆ ಕರೆತಂದು ಸಂಪೂರ್ಣ ತಪಾಸಣೆ ಮಾಡಿಸಿದಾಗ ಅವರಿಗೆ BP, ಸಕ್ಕರೆ ಮತ್ತು ಕೊಬ್ಬಿನ ಸಮಸ್ಯೆ ಹೆಚ್ಚಾಗಿರುವುದಾಗಿ ಹೀಗೆಯೇ ಮುಂದುವರಿದರೆ ತೊಂದರೆಯಾಗುವುದಾಗಿ ಹೇಳಿದ್ದರು. ಆಗಲೇ ಸಕ್ಕರೆ ಖಾಯಿಲೆಯ ಮಾತ್ರೆಗಳನ್ನು ಬದಲಾಯಿಸಿ, ಹೊಸದಾಗಿ BP ಮತ್ತು ಕೊಬ್ಬಿಗೆ ಮಾತ್ರೆಗಳನ್ನು ಕೊಟ್ಟು, ಊಟ ತಿಂಡಿಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆ, ಸಮಯಕ್ಕೆ ನಿದ್ದೆಯ ಅನುಸರಣೆ ಮತ್ತದರ ಮಹತ್ವಗಳನ್ನೆಲಾ ಹೇಳಿ ತಪ್ಪದೇ ಮಾತ್ರೆಗಳನ್ನು ತೆಗೆದುಕೊಳ್ಳಬೇಕೆಂದು ತಾಕೀತು ಮಾಡಿದ್ದರು. 

ಆಯುರ್ವೇದ ಗೊತ್ತಿದ್ದ ಅಪ್ಪ ಒಂದೆರಡು ತಿಂಗಳು ಚಾಚೂ ತಪ್ಪದೆ ಇದನ್ನೆಲ್ಲಾ ಪಾಲಿಸಿ ನಂತರ ಕೊಂಚ ಚೇತರಿಕೆ ಕಂಡ ಮೇಲೆ ಇವನ್ನೆಲ್ಲಾ ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದರು. ಇದಾದ ಕೆಲವು ತಿಂಗಳುಗಳಲ್ಲೇ ಹೀಗೆ ಆದದ್ದರಿಂದ ನಾವು ಮುಂಚಿನ ಪರಿಸ್ಥಿತಿಯೇ ಮರುಕಳಿಸಿರಬೇಕೆಂದುಕೊಂಡೆವು! ಆ ಪರಿಸ್ಥಿತಿಯಲ್ಲೂ ಅಪ್ಪ ಅವರ ಕೆಲಸವನ್ನು ಅವರೇ ಮಾಡಿಕೊಂಡಿದ್ದರಿಂದ ಅಮ್ಮನಿಗೂ ನನಗೂ ಅದೊಂದು ಎಮರ್ಜೆನ್ಸಿಯಾಗಿ ಕಾಣಿಸಲಿಲ್ಲ. ಬಹುಷಃ ನಾವು ಅಲ್ಲಿ ಎಡವಿದೆವಾ ಎಂದೊಮ್ಮೊಮ್ಮೆ ಅನ್ನಿಸುತ್ತದೆ. 

ಇಂಟರ್ವ್ಯೂ ಗೆ ಸಿದ್ಧನಾಗಿದ್ದ ನಾನು ಕೀಲು ಮತ್ತು ಮೂಳೆ ತಜ್ಞನ್ನಾಗಿದ್ದ ಡಾಕ್ಟರ್ ಗೆಳೆಯನೊಬ್ಬನಿಗೆ ಫೋನ್ ಮಾಡಿದೆ. ಅಪ್ಪನ ಕೇಸ್ ಹಿಸ್ಟರಿ ಹೇಳಿದಮೇಲೆ ಆತ ಯಾವುದಕ್ಕೂ ಒಮ್ಮೆ ಒಳ್ಳೆಯ ಫಿಸಿಷಿಯನ್ ಗೆ ತೋರಿಸಲು ಹೇಳಿದ. ನಾನು ಅಮ್ಮನಿಗೆ ಹಾಗೆಯೇ ಹೇಳಿ ನೆಟ್ಟಗೆ ಇಂಟರ್ವ್ಯೂಗೆ ಹೊರಟುಬಿಟ್ಟೆ! 

ಅಪ್ಪ ತಿಂಡಿ ತಿಂದು ಮಾತ್ರೆ ತೆಗೆದುಕೊಂಡು ಮೇಲೆ ಕೆಳಗೆ ಹತ್ತಿ ಇಳಿದು ಮನೆಯ ಮುಂದಿನ ರಸ್ತೆಯಲ್ಲಿ ಓಡಾಡಿ ಬಿಸಿಲಿಗೆ ಮೈಒಡ್ಡಿ ಊಟಬೈಸ್ ಹೊಡೆದು ಏನೇನೋ ಮಾಡಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಇದು ಮೊದಲಿನಂತಲ್ಲ ಅನಿಸಿದೆ. ಕಳವಳಗೊಂಡು ಇಬ್ಬರೂ ನನಗೆ ಮತ್ತೆ ಫೋನ್ ಮಾಡಿದಾಗ ನಾನು ಆಗಷ್ಟೇ ಇಂಟರ್ವ್ಯೂ ಮುಗಿಸಿ ಹೊರಬರುತ್ತಿದ್ದೆ. ಅವರು ಇನ್ನೂ ಡಾಕ್ಟರ್ ಬಳಿ ಹೋಗದಿರುವುದನ್ನು ನೋಡಿ ಅವರ ಮೇಲೆ ಕೂಗಾಡಿದೆ.

ಅಮ್ಮ ನಿಗೆ ಏನನಿಸಿತೋ ಏನೋ ಅಳುವ ದನಿಯಲ್ಲಿ ‘ನಿಮ್ಮ ಅಪ್ಪಂಗೆ ಏನೋ ಆಗಿದೆ ಕಣೋ ಮಧ್ಯಾಹ್ನದಿಂದ ಮಾತೂ ಸರಿಯಾಗಿ ಆಡುತ್ತಿಲ್ಲ ತುಂಬಾ ತಡವರಿಸುತ್ತಿದ್ದಾರೆ’ ಅಂದಳು. ಕೂಡಲೇ ಹೆಂಡತಿಗೆ ಫೋನಾಯಿಸಿ ಊರಿಗೆ ಹೊರಡಲು ಸಿದ್ದವಿರಬೇಕೆಂದು ಹೇಳಿದೆ. ವೈಟ್ ಫೀಲ್ಡ್ ನಿಂದ ಅತ್ತಿಬೆಲೆಗೆ ಧಾವಂತದಿಂದ ಬಂದು ಕಾರು ತೆಗೆದುಕೊಂಡು ತುಮಕೂರಿಗೆ ಹೊರಟೆ. ಅವತ್ತು ಕ್ರಮಿಸಿದ ಇಡೀ ದಾರಿಯಲ್ಲಿ ಒಂದಿನಿತೂ ಮುಂಬರುವ ದಿನಗಳ ಕರಾಳತೆಯ ಬಗ್ಗೆ ಎಳ್ಳಷ್ಟೂ ಸೂಚನೆ ಇರಲಿಲ್ಲ. 

ಊರಿಗೆ ಬರುವ ಮುಂಚೆಯೇ ನನ್ನ ಡಾಕ್ಟರ್ ಗೆಳೆಯನ ಸೂಚನೆಯ ಮೇರೆಗೆ, ನಮ್ಮ ಊರಿನವರೇ ಆದ ಮತ್ತು ಈಗ ನಿಮ್ಹಾನ್ಸ್ ನಲ್ಲೂ, ಬೆಂಗಳೂರಿನ ಇತರೆ ಆಸ್ಪತ್ರೆಗಳಲ್ಲೂ ಪ್ರಾಕ್ಟೀಸ್ ಮಾಡುತ್ತಿದ್ದ, ವಾರಕ್ಕೆ ಎರಡು ದಿನ ತುಮಕೂರಿಗೂ ಬರುತ್ತಿದ್ದ ನರರೋಗ ತಜ್ಞರೊಬ್ಬರ ಶಾಪಿಗೆ ನೇರವಾಗಿ ಹೋದೆ,  ಅವರಿರಲಿಲ್ಲ. ಅವರ ಜೂನಿಯರ್ ಡಾಕ್ಟರ್ ಇದ್ದರು ಮತ್ತು ಇನ್ನರ್ಧ ಗಂಟೆಯಲ್ಲಿ ಅವರೂ ಬೆಂಗಳೂರಿಗೆ ಹೊರಡುವವರಿದ್ದರು. ನಾನು ಕೂಡಲೇ ಅಪ್ಪನನ್ನು ಕರೆತರುವೆನೆಂದು ಹೇಳಿ ಹಾಗೆಯೇ ಮಾಡಿದೆ. 

ಅಪ್ಪನನ್ನು ನೋಡಿದ ಡಾಕ್ಟರ್ ಅವರಿಗೆ ಎಡಗಾಲು-ಎಡಗೈ, ಬಲಗಾಲು- ಬಲಗೈ ಎತ್ತಿ ಆಡಿಸಲು, ಹಾಗೇ ಹೋಲ್ಡ್ ಮಾಡಲು ಹೇಳಿದರು. ಅವರು ಹಾಗೆ ಮಾಡಿದಾಗಲೆಲ್ಲ ಲಘುವಾಗಿ ಅದರಮೇಲೆ ಭಾರ ಹಾಕಿ ಕ್ಷಮತೆ ನೋಡುತ್ತಿದ್ದರು. ತಮ್ಮ ಬಳಿ ಇದ್ದ ಕಬ್ಬಿಣದ ಕೀ ನಿಂದ ಅವರ ಕೈ ಕಾಲುಗಳ ಮೇಲೆ ಏನೋ ಬರೆದು ಫೀಲ್ ಆಗುತ್ತಾದಾ ಎಂದೆಲ್ಲ ಕೇಳಿದರು. ತದನಂತರ ಏನನ್ನೋ ಹೇಳಿಕೊಟ್ಟು ಬೇಗಬೇಗ ಮರು ಹೇಳಿಸಿದರು.

ಅಪ್ಪ ಆಗಾಗ ತಡಬಡಾ ಯಿಸಿದರು. ಎಡಗಡೆ ಭಾಗ ಬಲಗಡೆಯಷ್ಟು ಚುರುಕಾಗಿರಲಿಲ್ಲ ಅನ್ನಿಸಿತು ನನಗೆ. ಇದಾದಮೇಲೆ ಅಪ್ಪನಿಗೆ ಇರುವ ಇತರೆ ಖಾಯಿಲೆಗಳ ಮೇಲೆ ಗಮನ ಹರಿಸಿ ಬಹುಷಃ ಏನೂ ಹೆಚ್ಚು ತೊಂದರೆ ಆಗಿಲ್ಲ, ಯಾವುದಕ್ಕೂ ಒಂದು CT ಸ್ಕ್ಯಾನಿಂಗ್ ಮಾಡಿಸಿ ಆಮೇಲೆ ನೋಡೋಣ ಅಂದರು. ನಾವು ಅದನ್ನು ಮಾಡಿಸಿ ತಂದಾಗ ಸುಮಾರು ಹೊತ್ತು ನೋಡಿ ಹಾಗೆಯೇ ಒಂದು MRI ಮಾಡಿಸಿರೆಂದರು. ನನಗೆ ಕೊಂಚ ಕಸಿವಿಸಿಯಾಯಿತು ಕಾರಣ CT ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ಮೆದುಳಿನ ಅಲ್ಲಲ್ಲಿ ರಕ್ತ ಹೆಪ್ಪು ಕಟ್ಟುವಿಕೆ ಎಂದಿತ್ತು. ಆಗ ಅಂದರೆ 2014 ರಲ್ಲಿ ತುಮಕೂರಿನಲ್ಲಿ MRI ಇರದಿದ್ದ ಕಾರಣ ಬೆಂಗಳೂರಿನ ‘ಕಣ್ವ’ದಲ್ಲಿ ಸಂಜೆ ಟೆಸ್ಟ್ ಮಾಡಿಸಿ ಬೆಳಿಗ್ಗೆ ರಿಪೋರ್ಟ್ ತಂದು ತೋರಿಸಿದೆವು. 

ಡಾಕ್ಟರ್ ಆ ರಿಪೋರ್ಟ್ ಅನ್ನೊಮ್ಮೆ ಸವಿಸ್ತಾರವಾಗಿ ನೋಡಿ ಅಪ್ಪನನ್ನೊಮ್ಮೆ ನೋಡಿ ‘ಇವರಿಗೆ ಲೈಟ್ ಆಗಿ ಸ್ಟ್ರೋಕ್ ಆಗಿದೆ. ತೀವ್ರತೆ ಕಡಿಮೆಯಿರುವುದರಿಂದ ಮಾತ್ರೆಗಳನ್ನು ಬರೆದುಕೊಡುತ್ತೀನಿ ಒಂದು ವಾರ ಬಿಟ್ಟು ಬಂದು ನೋಡುವುದು ಎಂದರು. ನಾವು ಅವರಿಗೊಂದು ನಮಸ್ತೆ ಹೇಳಿ ಹೊರಬರುತ್ತಿರುವಾಗ, ಅಪ್ಪ ಆಯತಪ್ಪಿ  ನನ್ನ ಕೈಯನ್ನೊಮ್ಮೆ ಗಟ್ಟಿಯಾಗಿ ಹಿಡಿದು ನಿಂತುಬಿಟ್ಟರು. ಎಂಥಾ ಗಟ್ಟಿಯಾಳು ಅಪ್ಪ ಒಮ್ಮೆಲೇ ಗಳಗಳನೆ ಅಳತೊಡಗಿ ‘ದರ್ಶನಾ ಎಲ್ಲಾರಿಗೂ ಒಳ್ಳೇದೇ ಮಾಡಿದೆ, ನನಗೇ ಲಕ್ವ ಹೊಡೀತಲ್ಲೋ’ ಎಂದು ಕುಸಿಯ ತೊಡಗಿದರು.

ನನಗೂ ಅಳು ಉಮ್ಮಳಿಸಿ ಬಂದರೂ ತಡೆದು ‘ಹೇ, ಏನೂ ಆಗಿಲ್ಲ! ಅವ್ರೆ ಹೇಳಲ್ಲವಾ ಸ್ವಲ್ಪ ಅದೂ ಲೈಟ್ ಆಗಿ ಆಗಿರೋದು ಅಂತಾ? ಇಲ್ಲ ಅಂದಿದ್ರೆ ಅಡ್ಮಿಟ್ ಮಾಡ್ಕೋತಿದ್ರು ತಾನೇ?’ ಎಂದು ಅಪ್ಪನಿಗೆ ಸಂಜಾಯಿಷಿ ಕೊಟ್ಟು ಕಾರಿನಲ್ಲಿ ಕೂರಿಸಿ ಮಾತ್ರೆಗಳನ್ನು ತರಲು ಹೋದಾಗ ಅವುಗಳ ರಾಶಿಯನ್ನು ನೋಡಿಯೇ ವೃತ್ತಿಯಿಂದ ಕೆಮಿಸ್ಟ್ ಆದ ನನಗೇ ಎಲ್ಲವೂ ಸರಿಯಿಲ್ಲವೆಂದು ಸ್ಪಷ್ಟವಾಗಿ ಮನದಟ್ಟಾಗಿತ್ತು. 

ಈ ಘಟನೆಯಾದ ಎಷ್ಟೋ ದಿನಗಳ ನಂತರ ಬೇರೆ ಬೇರೆಯವರು ಹೇಳುತ್ತಿದ್ದ ಪ್ರಕಾರ ಸ್ಟ್ರೋಕ್ ಆದ ಯಾವುದೇ ವ್ಯಕ್ತಿಗೆ ಕೆಲವು ಗಂಟೆಗಳ ಒಳಗೆ ಸೂಕ್ತ ಚಿಕಿತ್ಸೆ ದೊರೆತರೆ ಅದು ಅತ್ಯಂತ ಪರಿಣಾಮಕಾರಿ ಯಾಗಿರುತ್ತದೆಂಬುದು. ಆದರೆ ಅಪ್ಪನಿಗೆ ಹೀಗಾಗಿದ್ದು ನಿದ್ದೆಯಲ್ಲಿಯಾದರೂ ಬೆಳಿಗ್ಗೆ ಎದ್ದ ಒಡನೆ ಅವರಾದ್ರೂ ಡಾಕ್ಟರ್ ನ ಬಳಿ ಹೋಗಬಹುದಿತ್ತು, ಅವರು ಹೋಗಲಿಲ್ಲ. ಅವರ ಜವಾಬ್ದಾರಿಯನ್ನ ಪೂರ್ಣವಾಗಿ ನಿಭಾಯಿಸಬೇಕಾಗಿದ್ದ ಮಗನಾದ ನಾನು ಆ ಸಮಯಕ್ಕೆ ದೊಡ್ಡ ಕಂಪನಿಯೊಂದರ ಬಾಗಿಲು ಬಡಿಯುತ್ತಿದ್ದೆ! 

| ಇನ್ನು ನಾಳೆಗೆ |

‍ಲೇಖಕರು Admin

August 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: