ಅಮೃತಾ ಹೆಗಡೆ ಅಂಕಣ- ಎಂಥ ಅಸಹಾಯಕ ಪರಿಸ್ಥಿತಿ ಇದು..!

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

14

ಕೂತಲ್ಲಿ ಕೂರೋಕಾಗದ ಚಡಪಡಿಕೆ. ಎಲ್ಲವೂ ಹೊಸತು, ಎಲ್ಲರೂ ಹೊಸಬರು..! ಮಗನನ್ನ ಅದೇ ಮೊದಲ ಬಾರಿಗೆ ಅಪರಿಚಿತರ ಕೈಗೆ ಒಪ್ಪಿಸಿ ಕುಳಿತಿದ್ದೇನೆ ಎಂಬ ಕಾರಣಕ್ಕೋ, ಅವನು ಆ ಶಾಲೆಯೊಳಗೆ ಎಲ್ಲಿದ್ದಾನೆ ಎಂಬುದೇ ಗೊತ್ತಿಲ್ಲದಕ್ಕೋ ಅಥವಾ ಇದೆಲ್ಲವೂ ಮೊದಲ ಅನುಭವವಾಗಿರುವುದಕ್ಕೋ ತಿಳಿಯೆ. ಕಳವಳಗೊಂಡಿದ್ದೆ. 10.45ರಿಂದ 12.30ರ ತನಕ ನಡೆಯುವ ಪಾಠದಲ್ಲಿ ಯಾರ ಮಗುವೂ ಅದರ ತಾಯಿಯೊಂದಿಗೆ ಇರುವುದೇ ಇಲ್ಲ. ಎಲ್ಲರೂ ತಮ್ಮ ಮಕ್ಕಳನ್ನ ಕಳುಹಿಸಿ ಆರಾಮಾಗಿಯೇ ಇದ್ದರಲ್ವಾ..? ನನಗ್ಯಾಕೆ ಈ ತಳಮಳ..? ನನ್ನಷ್ಟಕ್ಕೆ ನಾನೇ ಸಮಾಧಾನ ಮಾಡಿಕೊಂಡೆ. 

ಆಬ್ಜೆಕ್ಟ್​ಲೆವೆಲ್​ (ಮೊದಲ ಹಂತ)ಲ್ಲಿಯೇ ಇದ್ದ ಮಗುವಿಗೆ ಪಾಠ ನಡೆಯುತ್ತಿದ್ದ ಒಬ್ಬ ತಾಯಿಯ ಬಳಿ ಕುಳಿತುಕೊಳ್ಳಿ ಅಂತ ಮುಖ್ಯಾಧ್ಯಾಪಕಿ ಗಾಯತ್ರಿ ಆಂಟಿ ಹೇಳಿದ್ದರು. ಅಥರ್ವನಿಗೆ ಕಾಣಿಸಿಕೊಳ್ಳಬಾರದು ಅಂದಿದ್ದಾರಲ್ವಾ..? ಅವನೆಲ್ಲಿದ್ದಾನೆಂದು ತಿಳಿದಿರಲಿಲ್ಲ ನನಗೆ. ಮಕ್ಕಳಿಗೆ ಪಾಠ ಮಾಡುತ್ತ ಸಾಲಾಗಿ ಕುಳಿತಿದ್ದ ತಾಯಂದಿರನ್ನೆಲ್ಲ ಗಮನಿಸುತ್ತಾ ಕಾರಿಡಾರ್​ನಲ್ಲಿ ನಡೆಯತೊಡಗಿದೆ. ತಮ್ಮೆದುರು ಪಾಠಕ್ಕೆ ಕುಳಿತ ಮಗುವಿಗೆ ಅವರೆಲ್ಲ ತುಂಬು ಆಸಕ್ತಿಯಿಂದ, ನಿಷ್ಠೆಯಿಂದ ಪಾಠ ಮಾಡುತ್ತಿದ್ದರು. ನಿಜಕ್ಕೂ ಇಲ್ಲಿರುವ ಎಲ್ಲ ತಾಯಿಯರೂ ಉತ್ತಮ ಶಿಕ್ಷಕಿಯರೇ ಅಂತೆನಿಸಿತು ನನಗೆ. ದೂರದಲ್ಲಿ ಅಮೃತಾ ಕುಳಿತಿದ್ದು ಕಾಣಿಸಿತು. ಬೆಳಗ್ಗೆಯಷ್ಟೇ ನಾನವಳ ಬಳಿ ಮಾತನಾಡಿದ್ದೆನಲ್ವಾ..? ಯಾಕೋ ಅವಳ ಬಳಿಯೇ ಹೋಗಿ ಕೂರೋಣ ಅಂತೆನಿಸಿತು. 

ಅವಳಿಗೂ ಆಗ ಕ್ಯಾಲೆಂಡರ್​ ಪಾಠ ನಡೆಯುತ್ತಿತ್ತು. ನಿನ್ನೆಯ ದಿನಾಂಕದ ಹಾಳೆಯನ್ನ ಅವಳ ಬಳಿಯೇ ಹರಿದು ಹಾಕಿಸಿ, ನಿನ್ನೆ ಆಗೋಯ್ತು. ಅನ್ನುತ್ತಿದ್ದರು ಪಾಠದ ತಾಯಿ. ಕ್ಯಾಲೆಂಡರ್​ ಕೈಯಲ್ಲಿ ಹಿಡಿದು ಅದನ್ನ ತೋರಿಸಿ, ಪರಿಚಯಿಸಿ, ಅದರ ಬಣ್ಣ, ಆಕಾರಗಳನ್ನೆಲ್ಲ ಹೇಳಿ, ಅಂದಿನ ವಾರ ದಿನಾಂಕ ತಿಂಗಳು ವರ್ಷಗಳನ್ನೆಲ್ಲ ಮಗುವಿನ ಬಾಯಲ್ಲಿ ಹೇಳಿಸಿದ್ದರು. ಆಮೇಲೆ ಆ ಕ್ಯಾಲೆಂಡರ್​ ಮೇಲೆ ಬರೆದಿದ್ದ ವಾರ, ತಾರೀಖು, ತಿಂಗಳುಗಳ ಹೆಸರುಗಳನ್ನ ತೋರಿಸಲು ಹೇಳುತ್ತಿದ್ದರು, ಆ ಚೂಟಿ ಮಗು ಎಲ್ಲವನ್ನೂ ತೋರಿಸುತ್ತಿತ್ತು. ಮಗು ಅವನ್ನೆಲ್ಲ ತೋರಿಸುತ್ತಿದೆ ಅಂತಾದರೆ ಅದಕ್ಕೆ ಪಾಠ ಅರ್ಥವಾಗಿದೆ ಎಂದರ್ಥ. 

ಕ್ಯಾಲೆಂಡರ್​ ಪಾಠ ಮುಗಿದ ಮೇಲೆ ಸ್ವರಗಳ ಅಭ್ಯಾಸ. ದೀಪಾ ಅಕ್ಕಾ ಮಾಡಿಸಿದಂತೆಯೇ, ಅ, ಆ ದಿಂದ ಅಂ ಅಃ ತನಕ ಸ್ವರಗಳನ್ನ ದೀರ್ಘವಾಗಿ ಹೇಳಿಸಿದ ಮೇಲೆ ಪ್ರತ್ಯೇಕವಾಗಿ ಅ, ಇ, ಉ, ಮ್​, ಶ್​, ಸ್​, ರ್​ಎಂಬ ಸ್ವರಗಳನ್ನು ಉಚ್ಛಾರ ಮಾಡಿಸಿದರು. ಮಗುವನ್ನು ಆಂಟಿಯ ಮುಖ ಕಾಣದಂತೆ ತಿರುಗಿಸಿ ಕೂರಿಸಿ ಹಿಂದಿನಿಂದ ಸ್ವರಗಳನ್ನ ಹೇಳಿದರು. ಆ ಮಗು ಕೇಳಿಸಿಕೊಂಡು ಸ್ವರಗಳನ್ನ ನಿಚ್ಛಳವಾಗಿ ಹೇಳುತ್ತಿತ್ತು.  ನನಗೇನೋ ರೋಮಾಂಚನವಾದಂತಾಯ್ತು. ‘ವಾಹ್​ಮಗು ಎಷ್ಟು ಚೆನ್ನಾಗಿ ಕೇಳಿಸ್ಕೊತ್ತಿದ್ದಾಳೆ ಅಲ್ವಾ..? ಅಂದೆ.’ ಆಗ ಪಾಠ ಮಾಡುತ್ತಿದ್ದ ಆ ತಾಯಿ ‘ಹಾಂ. ಅವಳಿಗೆ ಕಾಕ್ಲೀಯರ್​ ಇಂಪ್ಲಾಂಟ್ ​ಆಗಿದೆಯಲ್ಲ.. ಹೀಗಾಗಿ ಚೆನ್ನಾಗಿ ಕೇಳಿಸ್ಕೊತ್ತಿದ್ದಾಳೆ.’ ಎಂದರು. ಮತ್ತೊಮ್ಮೆ ಆ ಮಗು ಧರಿಸಿದ್ದ ಶ್ರವಣ ಸಾಧನವನ್ನ ಹತ್ತಿರದಿಂದ ಗಮನಿಸಿದೆ. 

ಅಲ್ಲಿ ನಡೆಯುತ್ತಿದ್ದ ಪಾಠವನ್ನ ನೋಡುತ್ತಾ ಸುಮ್ಮನೆ ಕುಳಿತಿದ್ದರೂ ನನ್ನ ಕಣ್ಣುಗಳು ಕೈಗಡಿಯಾರದತ್ತ ಆಗಾಗ ಹೊರಳುತ್ತಿದ್ದವು. ಮನಸ್ಸಲ್ಲೇನೋ ತಾಕಲಾಟ, ಮೊದಲ ದಿನ ಅಥರ್ವ ಎಷ್ಟು ಕಷ್ಟಪಟ್ಟನೋ ಗೊತ್ತಿಲ್ಲ, ನಾನಂತೂ ಅವನನ್ನ ಒಂದು ಗಂಟೆ ಕಾಣದೇ ತಳಮಳಿಸಿದ್ದೆ. ಅಂತೂ ೧೨.೩೦ರ ಗಂಟೆ ಬಾರಿಸಿತ್ತು. ಎಲ್ಲ ತಾಯಂದಿರೂ ತಮ್ಮ ಪಾಠದ ಮಕ್ಕಳನ್ನ  ಅವರವರ ತಾಯಿಯರಿಗೆ ಒಪ್ಪಿಸಿ, ತಾವು ಮಾಡಿದ ಪಾಠದ ಬಗ್ಗೆ, ಮಗುವಿನ ಕಲಿಕೆಯ ಬಗ್ಗೆ ಮಕ್ಕಳ ತಾಯಿಯರಿಗೆ ವಿವರಿಸುತ್ತಿದ್ದರು. ಕೆಲ ಅಮ್ಮಂದಿರು, ಗಡಿಬಿಡಿಯಲ್ಲಿ ತಮ್ಮ ಮಗುವನ್ನ ಕರೆದು ಏನೇನು ಓದಿದೆ? ಏನು ಬರೆದೆ ? ಎಂಬ ಬಗ್ಗೆ ವಿಚಾರಿಸುತ್ತಿದ್ದರು.

ಕಣ್ಣಮುಂದೆ ನಡೆಯುತ್ತಿದ್ದ ಇವನ್ನೆಲ್ಲ ನಾನು ಗಮನಿಸುತ್ತಲೇ ಇದ್ದರೂ ಕೂಡ, ಮನಸ್ಸು ಮಗನನ್ನ ನೋಡಲು ಹಾತೊರೆಯುತ್ತಿತ್ತು. ಪಾಠಕ್ಕೆ ತೆಗೆದುಕೊಂಡ ತಾಯಿ ಅಥರ್ವನ್ನ ಎತ್ತಿಕೊಂಡು ಬರುತ್ತಿರುವುದನ್ನ ಕಂಡೆ. ದೂರದಿಂದಲೇ ನನ್ನ ಗುರುತಿಸಿದ್ದ ನನ್ನ ಕಂದ ಅಲ್ಲಿಂದಲೇ ಖುಷಿಯಿಂದ ಕಿರುಚಿಕೊಂಡಿದ್ದು ಕೇಳಿಸಿತು. ಹತ್ತಿರ ಬಂದಿದ್ದೇ ಅವರಿಂದ ಗಡಬಡಿಸಿ ಓಡಿಬಂದು ನನ್ನ ಬಿಗಿದಪ್ಪಿಕೊಂಡುಬಿಟ್ಟ. ‘ಮಗೂಗೆ ಹಿಯರಿಂಗ್​ ಏಡ್​ ಯಾಕೆ ಹಾಕಿಲ್ಲ..? ಹಿಯರಿಂಗ್​ ಏಡ್​ ಇಲ್ಲದೆ ಮಗು ಏನು ಕೇಳಿಸಿಕೊಳ್ಳುತ್ತೆ..?’ ಪ್ರಶ್ನಿಸುತ್ತಲೇ ಬ್ಯಾಗ್​ ನನಗೆ ಕೊಟ್ಟ ಅವರು, ‘ಮಗು ಕೂರುತ್ತಾನೆ. ಪರವಾಗಿಲ್ಲ. ಮೊದಲ ದಿನ ಆದ್ರೂ, ಸುಮ್ಮನೆ ಕೂತಿದ್ದಾನೆ ಪಾಪ. ಅವನಿಗೆ ಬರೆಯೋಕೆ ಒಂದು ನೋಟ್​ ಬುಕ್​, ಕ್ರೆಯಾನ್ಸ್, ಪೆನ್ಸಿಲ್​ ತೆಗೆದುಕೊಂಡು ಬನ್ನಿ ನಾಳೆ’ ಎಂದಿದ್ದೇ ಹೊರಟರು. ತಕ್ಷಣ ಏನೋ ನೆನಪಿಸಿಕೊಂಡು ವಾಪಾಸ್​ ಬಂದು. ‘ಹಾಂ, ನಾಳೆ ಬರುವಾಗ, ಒಂದು ಬಾಲ್​, ಪ್ಲಾಸ್ಟಿಕ್​ಎಲೆ, ಹೂವು ತೊಗೊಂಡ್​ ಬನ್ನಿ ಆಯ್ತಾ..’ ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿ, ನನ್ನ ಉತ್ತರಕ್ಕೂ ಕಾಯದೇ, ಅವರ ಮಗುವಿದ್ದ ದಿಕ್ಕಿಗೆ ಓಡಿದ್ದರು.    

‘ಬಾಲ್​, ಎಲೆ, ಹೂವು’ ತರುವುದಕ್ಕೆ ಅವರ್ಯಾಕೆ ಹೇಳಿದರು ಎಂಬುದು ಅರ್ಥವಾಗಿತ್ತು ನನಗೆ. ಏಕೆಂದರೆ, ಆಗಷ್ಟೇ ಅಮೃತಾಗೆ ಪಾಠ ಮಾಡಿದ್ದನ್ನೆಲ್ಲ ನೋಡಿದ್ದೆನಲ್ಲ.., ೨೦ಕ್ಕೂ ಹೆಚ್ಚು ವಸ್ತುಗಳನ್ನು (ಆಬ್ಜೆಕ್ಟ್​ಗಳನ್ನು) ಅವಳು ಗುರುತಿಸುತ್ತಿದ್ದಳು, ಮುದ್ದಾಗಿ ಅದರ ಹೆಸರುಗಳನ್ನೆಲ್ಲ ಹೇಳಿದ್ದಳು. ಅವಳಿಗೆ ಪಾಠ ಮಾಡುತ್ತಿದ್ದ ತಾಯಿಯ ಬಳಿಯೇ ಇದರ ಬಗ್ಗೆ  ಕೇಳಿದ್ದೆ. ಈ ವಸ್ತುಗಳನ್ನೆಲ್ಲ ಏಕೆ ತರಲು ಹೇಳುತ್ತಾರೆ..? ಅಂತ.’ ಮಗುವಿಗೆ ಹೆಚ್ಚು ಹೆಚ್ಚು ವಸ್ತುಗಳ ಪರಿಚಯಿಸುವುದಕ್ಕಾಗಿಯೇ ಇರುವ ಹಂತ ಇದು. 

ಮೊದಲ ಹಂತದಲ್ಲಿ ನಾವು ಮಗುವಿನ ತಲೆಯಲ್ಲಿ ಎಷ್ಟು ಶಬ್ಧಗಳನ್ನ ತುಂಬುತ್ತೇವೋ ಅಷ್ಟು ಮುಂದಿನ ಹಂತಗಳಲ್ಲಿ ಒಳ್ಳೇದು. ಈ ವಸ್ತುಗಳನ್ನೇ ಬಳಸಿಕೊಂಡು, ಅದರ ಸುತ್ತವೇ ಮಾತನಾಡಿಸುತ್ತಾ, ವಾಕ್ಯಗಳ ಪರಿಚಯವನ್ನೂ ಮಾಡಿಸಲಾಗುತ್ತದೆ. ಹೀಗಾಗಿ ಈ ಸ್ಕೂಲ್​ನಲ್ಲಿ ಆಬ್ಜೆಕ್ಟ್​ಲೆವೆಲ್ ​(ಮೊದಲ ಹಂತದ)ನ ಮಕ್ಕಳಿಗೆ ಅದೆಷ್ಟು ಸಾಧ್ಯವೋ ಅಷ್ಟು ವಸ್ತುಗಳನ್ನ ಪರಿಚಯ ಮಾಡಿಸಲಾಗುತ್ತದೆ. ‘ಚೆಂಡು, ಎಲೆ, ಹೂವು’ ಈ ಮೂರು ಆಬ್ಜೆಕ್ಟ್​ಗಳಿಂದ ಮಗುವಿಗೆ ಪಾಠ ಆರಂಭವಾಗುತ್ತದೆ. 

ವಸ್ತುಗಳನ್ನ ಮಗುವಿನ ಮುಂದೆ ಹರಡಿಟ್ಟು, ಮೊದಲು ಅದನ್ನ ಮಗುವಿಗೆ ಪರಿಚಯ ಮಾಡಿಸಬೇಕು. ‘ಇದು ಬಾಲ್ ​ಇದು ಹೂವು, ಇದು ಎಲೆ’ ಎಂದು ಪರಿಚಯ ಮಾಡಿಸಿ, ಅದರ ಬಳಿ ಹೇಳಿಸಿ, ಪುನಃ ಆ ವಸ್ತುಗಳನ್ನು ಕೊಡಲು ಹೇಳಬೇಕು. ಆಮೇಲೆ ಅದನ್ನ ತೋರಿಸಲು, ಮುಟ್ಟಲು ಹೇಳಬೇಕು. ಕೇಳಿಸಿಕೊಳ್ಳುವ ಮಕ್ಕಳು ಕೇಳಿಸಿಕೊಂಡು ವಸ್ತುಗಳನ್ನ ಗುರುತಿಸಿದರೆ, ಕೇಳಿಸಿಕೊಳ್ಳದ ಮಕ್ಕಳು ತುಟಿ ಚಲನೆಯನ್ನ ನೋಡಿಯೇ ವಸ್ತುಗಳನ್ನ ಗುರುತಿಸಲು ಕಲಿತುಬಿಡುತ್ತಾರೆ. ಆ ಮೂರು ವಸ್ತುಗಳನ್ನ ಗುರುತಿಸಲು, ಹೇಳಲು, ತೋರಿಸಲು, ಮುಟ್ಟಲು ಮಗು ಕಲಿತ ಮೇಲೆ ಮತ್ತೆ ಎರಡು ಹೊಸ ಆಬ್ಜೆಕ್ಟ್​ಗಳನ್ನ ಸೇರಿಸಲಾಗುತ್ತದೆ. ಹೀಗೆ ಮಕ್ಕಳು ನಿಧಾನವಾಗಿ ಹೆಚ್ಚು ಹೆಚ್ಚು ವಸ್ತುಗಳನ್ನ ಗುರುತಿಸಲು ಕಲಿಯುತ್ತಾರೆ. ನೀವೂ ನಾಳೆ ಬಾಲ್​, ಎಲೆ, ಹೂವು ತನ್ನಿ ಅಂತ ಅವರೇ ನನಗೆ ಹೇಳಿದ್ದರು.  

ಅಥರ್ವನಿಗೆ ಹಸಿವಾಗಿತ್ತು. ತಿಂಡಿ ಬೇಕು ಎಂಬಂತೆ ಸನ್ನೆ ಮಾಡುತ್ತಿದ್ದ. ಮಗುವಿಗೆ ಊಟ ಮಾಡಿಸೋದೆಲ್ಲಿ..? ಯಾರನ್ನಾದರೂ ಕೇಳಬೇಕು ಎಂದುಕೊಳ್ಳುವಷ್ಟರಲ್ಲಿ, ಎಲ್ಲರೂ ಊಟದ ಡಬ್ಬಿ ಹಿಡಿದುಕೊಂಡು ಒಂದು ಕ್ಲಾಸ್​ರೂಮ್​ನ ಒಳಗೆ ಹೋಗಿದ್ದನ್ನ ಕಂಡೆ. ಅಥರ್ವನನ್ನ ಸೊಂಟದಮೇಲೆ ಕೂರಿಸಿಕೊಂಡು, ನಾನೂ ಅವರನ್ನೇ ಹಿಂಬಾಲಿಸಿದೆ. ಅಲ್ಲಿಯೂ ಎಲ್ಲ ತಾಯಿಯರು ಮತ್ತು ಮಕ್ಕಳು ಎದುರು ಬದುರಾಗಿಯೇ ಕುಳಿತು ಶ್ಲೋಕ ಹೇಳುತ್ತಿದ್ದರು. ಅವರನ್ನೇ ಅನುಕರಿಸಿದೆ.  

ಪಕ್ಕದಲ್ಲಿ ಕುಳಿತ ತಾಯಿ ನನ್ನ ನೋಡಿ ನಸು ನಕ್ಕಳು. ನನ್ನ ನಾನು ಪರಿಚಯಿಸಿಕೊಂಡೆ. ಅವರ ಹೆಸರು ಮಾನಸಾ. ಮಗ ಅರ್ಜುನ್​ಗೆ 4 ವರ್ಷ.  ಅವರ ಊರಿನ ಹೆಸರು ಕೇಳಿದ್ದೇ ನನ್ನ ಮುಖ ಇಷ್ಟಗಲ ಅರಳಿತ್ತು. ಅವರೂ ನಮ್ಮೂರಿನವರೇ..! ಖುಷಿಯಾಯ್ತು ನನಗೆ. ಅಲ್ಲಿ ಮಗುವಿಗೆ ಊಟ ಮಾಡಿಸುವುದು ಹೇಗೆ ಅನ್ನೋದನ್ನ ಮಾನಸಾ ನನಗೆ ಹೇಳಿಕೊಟ್ಟರು. ‘ಊಟದ ಡಬ್ಬಿ ತೋರಿಸು. ಇದು ಊಟದ ಡಬ್ಬಿ. ಮುಚ್ಚಳ ತೆಗೆಯೋಣವಾ..? ಹಾಂ. ಅಮ್ಮ ಊಟದ ಡಬ್ಬಿಯ ಮುಚ್ಚಳ ತೆಗೆದರು. ಡಬ್ಬದ ಒಳಗೆ ಏನಿದೆ..? ಚಿತ್ರಾನ್ನ ಇದೆ. ಚಿತ್ರಾನ್ನ ಯಾವ ಬಣ್ಣ..? ಹಳದಿ ಬಣ್ಣ. ಇದು ಚಮಚ. ಚಮಚದಿಂದ ಅರ್ಜುನ್​ ಚಿತ್ರಾನ್ನ ತಿನ್ನುತ್ತಾ ಇದ್ದಾನೆ’ ವಿವರಿಸುತ್ತಿದ್ದರು.

ಆ ಮಗು ಒಂದು ತುತ್ತು ನುಂಗುವಷ್ಟರಲ್ಲಿ ನಾಲ್ಕು ವಾಕ್ಯ ಅದರ ಕಿವಿಗೆ ಬಿದ್ದಿರಬೇಕು. ಮಾತು ಮಾತು ಮಾತು. ಎಲ್ಲ ತಾಯಿಯರೂ ತಮ್ಮ ಮಕ್ಕಳ ಹತ್ತಿರ ಮಾತನಾಡುತ್ತಲೇ ಊಟ ಮಾಡಿಸುತ್ತಾ, ತಾವೂ ಉಟ ಮಾಡುತ್ತಿದ್ದರು. ‘ಊಟ ಮಾಡುವಾಗ ಮಾತನಾಡಬಾರದು’ ಎಂಬ ನಿಯಮ ಇಲ್ಲಿ ತಿರುಗಾಮುರುಗಾಗಿತ್ತು. ಮಕ್ಕಳು ಕೈಗೆ ಸಿಕ್ಕಿದಷ್ಟು ಹೊತ್ತೂ ಸಮಯ ಹಾಳು ಮಾಡದೇ ತಾಯಿ ಮಾತನಾಡಬೇಕು. ಎಂಬ ನಿಯಮವನ್ನ ಇಲ್ಲಿ ಎಲ್ಲರೂ ಚಾಚೂ ತಪ್ಪದೇ ಪಾಲಿಸುತ್ತಿದ್ದರು. 

ಡಬ್ಬದಲ್ಲಿ ತಂದಿದ್ದನ್ನು ಅಥರ್ವ ಸ್ವಲ್ಪ ತಿಂದಿದ್ದ. ಊಟದ ನಂತರ ಮಲಗುವ ಅಭ್ಯಾಸವಿತ್ತಲ್ಲ ನಿದ್ದೆ ಅವನ ಕಣ್ಣು ಎಳೆಯುತ್ತಿತ್ತು. ನನ್ನ ಹೆಗಲ ಮೇಲೆ ಒರಗಿದ. ಹಿರಿಯ ತಾಯಿಯೊಬ್ಬರು ಬಂದು. ಮಗುವನ್ನ ಮಲಗಿಸಬೇಡಿ. ಈಗ ಪದ್ಯ ಹೇಳಿಸಬೇಕು ಎಂದರು. ಅವನನ್ನೆತ್ತಿಕೊಂಡು ಹೋಗಿ ಮುಖ ತೊಳೆಸಿದೆ. ಕಣ್ಣು ಬಿಟ್ಟ. ನಾನು ಗುಂಪು ಸೇರಿಕೊಂಡೆ. ಗುಂಪಿನ ಮಕ್ಕಳನ್ನೆಲ್ಲ ಸಾಲಾಗಿ ನಿಲ್ಲಿಸಿ, ಒಬ್ಬರು ತಾಯಿ ಪದ್ಯಗಳನ್ನ ಹೇಳಿಕೊಡುತ್ತಿದ್ದರು. ಒಂದು ಎರಡು ಬಾಳೆಲೆ ಹರಡು, ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೆ, ಆನೆ ಬಂತು ಆನೆ, ನಾಯಿಮರಿ ಪದ್ಯಗಳನ್ನೆಲ್ಲ ಹೇಳಿಸಿದರು. ಆ ಎಲ್ಲ ಮಕ್ಕಳ ಜತೆ ತಾನೂ ನಿಂತು ಅವರನ್ನೇ ಅನುಕರಿಸಿ ಖುಷಿಪಟ್ಟ ಅಥರ್ವ. ಮಧ್ಯಾಹ್ನ ಎರಡು ಗಂಟೆಗೆ ಗಂಟೆ ಬಾರಿಸಿದ ನಂತರ ಚಿಕ್ಕಮಕ್ಕಳ ತಾಯಂದಿರೆಲ್ಲ, ತಮ್ಮ ತಮ್ಮ ಮಕ್ಕಳ ಜತೆ ಮನೆಗೆ ಹೊರಟರು. ನಾನೂ ಹೊರಟೆ. 

ಅಲ್ಲೇ ಹತ್ತಿರವಿದ್ದ ಸ್ಟೇಶನರಿ ಅಂಗಡಿಗೆ ಹೋಗಿ ಪ್ಲಾಸ್ಟಿಕ್​ ಎಲೆ, ಹೂವು, ಬಾಲ್​ ಮತ್ತು ನಾಲ್ಕೈದು ಪೆನ್ಸಿಲ್​, ಕ್ರೆಯಾನ್ಸ್​ ನೋಟ್​ಬುಕ್​ಗಳನ್ನ ಖರೀದಿಸಿ,  ನಿದ್ದೆ ಮಾಡಿದ್ದ ಅಥರ್ವನನ್ನ ಎತ್ತಿಕೊಂಡು, ಆಟೋ ಹತ್ತಿದೆ. ಭೋಗಾದಿ ಜನತಾನಗರದಿಂದ ಹಳ್ಳಿಭೋಗಾದಿಯಲ್ಲಿ ನಾನು ಇದ್ದ ಮನೆಗೆ ಹೋಗಲು  ನೂರು ರೂಪಾಯಿ!. ‘ಹೀಗೆ ಮನೆ – ಸ್ಕೂಲ್​ ಓಡಾಟಕ್ಕಾಗಿಯೇ ದಿನಕ್ಕೆ 200 ರೂಪಾಯಿ ಬೇಕಾಯಿತಲ್ಲ..’ ಬೇಜಾರಾಯಿತು. ಶಾಲೆಯ ಹತ್ತಿರದಲ್ಲೇ ಎಲ್ಲಾದರೂ ಮನೆ ಹುಡುಕಬೇಕು, ಸ್ಕೂಲ್​ನಲ್ಲಿಯೇ ಯಾರನ್ನಾದರೂ ಕೇಳಬೇಕು ಎಂದುಕೊಂಡೆ.  

ಆವತ್ತು ರಾತ್ರಿ, ಅಥರ್ವನಿಗೆ ಊಟ ಮಾಡಿಸಿ, ಅವನ ಮುಂದೆ  ಒಂದಷ್ಟು ಆಟಿಕೆಗಳನ್ನು ಹರಡಿಟ್ಟಿದ್ದೇ, ಖುಷಿಯಿಂದ ಆಡಲು ಶುರು ಮಾಡಿದ್ದ. ನನಗೆ ಶೌಚಕ್ಕೆ ಹೋಗಲೇಬೇಕಿತ್ತು.  ಅಥರ್ವ ಆಟಿಕೆಗಳ ಜತೆ ಆಡುತ್ತಿದ್ದದನ್ನು ನೋಡಿ, ನಾನು ಬಾತ್​ರೂಮ್​ನ ಒಳಹೊಕ್ಕೆ. ಒಂದೇ ನಿಮಿಷವಾಗಿದ್ದಿರಬಹುದು. ಒಮ್ಮೆಲೆ ಮನೆಯ ಬೆಳಕೆಲ್ಲ ಆರಿತ್ತು. ಅಥರ್ವ ಕಿಟಾರನೆ ಕಿರುಚಿದ್ದು ಕೇಳಿಸಿತ್ತು. ಆತ ಕತ್ತಲೆಗೆ ಹೆದರುತ್ತಿದ್ದಾನೆ ಎಂಬುದು ನನಗೆ ಗೊತ್ತಾಗುತ್ತಿತ್ತು. ಬಾತ್​ರೂಮ್​ನ ಒಳಗಿಂದಲೇ, ‘ಪುಟ್ಟಾ… ಬಂದೆ ಕಂದಾ.., ಅಳಬೇಡ. ಹೆದರಬೇಡ ಅಮ್ಮ ಬರ್ತಾ ಇದೀನಿ’ ಅಂತ ಹೇಳುತ್ತಲೇ ಇದ್ದೆ, ನನ್ನ ಸಮಾಧಾನಕ್ಕೆ..! ನಾನೆಷ್ಟೇ ಜೋರಾಗಿ ಹೇಳಿದರೂ ನನ್ನ ಮಗುವಿಗೆ ಕೇಳಿಸುವುದಿಲ್ಲ ಎಂಬುದು ಗೊತ್ತಿದ್ದರೂ ಕೂಗುತ್ತಲೇ ಇದ್ದೆ.! ಅವನು ಭಯದಿಂದ ಅಳುತ್ತಲೇ ಇದ್ದ. ಒಂದು ನಿಮಿಷದೊಳಗೆ ಹೊರಬಿದ್ದೆ. ನೋಡುತ್ತೀನಿ.. ಗೌಂವೆಂಬ ಕತ್ತಲು. 

ಹೊರಗಿನ ಬೀದಿ ದೀಪ ಕೂಡ ಇರದ ಕರಿಗತ್ತಲು ಅದು. ಅಥರ್ವ ನನ್ನನ್ನೇ ಹುಡುಕುತ್ತ ಕತ್ತಲಲ್ಲೇ ಮನೆ ತುಂಬಾ ಓಡಾಡುತ್ತಿದ್ದ. ಕತ್ತಲೆಯಲ್ಲಿ ನಾನು ಬಂದಿದ್ದು ಅವನಿಗೆ ಕಾಣಿಸುತ್ತಿಲ್ಲ. ಶ್ರವಣದೋಷವಿರೋ ಅವನಿಗೆ ನಾನು ಮಾತನಾಡಿದ್ದು ಏನೂ ಕೇಳಿಸುತ್ತಲೂ ಇಲ್ಲ. ಅಮ್ಮಾ ಅಂತ ಕರೆಯೋಕೆ ಮಾತೂ ಇಲ್ಲ. ಎಂಥ ಅಸಹಾಯಕ ಪರಿಸ್ಥಿತಿ ಇದು..! ಕಿವಿ, ಕಣ್ಣು, ಬಾಯಿ ಮೂರು ಇಲ್ಲದ ಅಯೋಮಯ ಸ್ಥಿತಿ. ನಾನೇ ಹೋಗಿ ಅಥರ್ವನನ್ನ ತಬ್ಬಿ ಎತ್ತಿಕೊಂಡೆ. ಭಯದಿಂದ ಅವನ ಮೈ ಬೆವೆತಿತ್ತು. ಅಳುತ್ತಲೇ ನನ್ನ ಗಟ್ಟಿಯಾಗಿ ಹಿಡಿದುಕೊಂಡ. ಕೇವಲ 10 ನಿಮಿಷದ ಒಂದು ಸಹಜ ವಿದ್ಯುತ್​ ವ್ಯತ್ಯಯ ಅದಾಗಿದ್ದರೂ..! ಆ ಘಟನೆ ನನ್ನ ಮಗುವಿನ ನೈಜ ಸ್ಥಿತಿಯನ್ನ ನನಗೆ ಗಾಢವಾಗಿ ಅರ್ಥ ಮಾಡಿಸಿತ್ತು. 

ಕತ್ತಲೆಗೆ ಹೆದರಿದ್ದ ಅಥರ್ವ ನನ್ನ ಬಿಟ್ಟು ಕದಲುತ್ತಿರಲಿಲ್ಲ. ‘ಇಲ್ಲ ಸಾಧ್ಯವಿಲ್ಲ. ಇನ್ನೂ ಕಾಯುವುದಕ್ಕೆ ನನ್ನಿಂದಾಗುವುದೇ ಇಲ್ಲ’ ನಿಶ್ಚಯಿಸಿದೆ.   ಪ್ರವೀಣ್​ ಸರ್​ ನೆನಪಾದರು. ಸಮಯ ರಾತ್ರಿ 9.30 ಆಗಿತ್ತು.  ಫೋನ್​ ಕೈಗೆತ್ತಿಕೊಂಡು ದೀಪಾ ಅಕ್ಕ ಕೊಟ್ಟ ಅವರ ನಂಬರ್​ಗೆ ಫೋನ್​ಮಾಡಿದ್ದೆ.  ಮಾತನಾಡಿದರು. ನನ್ನನ್ನ ಪರಿಚಯಿಸಿಕೊಂಡೆ. ಆಯಿಶ್​ನಲ್ಲಿ ಬುಕ್​ಮಾಡಿದ್ದ ಹಿಯರಿಂಗ್​ ಏಡ್​ ಎರಡು ತಿಂಗಳುಗಳಾದರೂ ಇನ್ನೂ ಸಿಕ್ಕಿಲ್ಲ, ಏನು ಮಾಡುವುದು..? ಸಲಹೆ ಕೇಳಿದೆ. ಬುಕ್​ ಮಾಡಿದ್ದನ್ನ ಕ್ಯಾನ್ಸಲ್​ ಮಾಡಬಹುದು. ಅಲ್ಲಿಗೆ ಹೋಗಿ ವಿಚಾರಿಸಿ. ನೀವು ಕ್ಯಾನ್ಸಲ್​ ಮಾಡಿದಮೇಲೆ, ನಮ್ಮಲ್ಲಿಯೇ ಬೇರೆ ಹಿಯರಿಂಗ್​ ಏಡ್​ ಕೊಳ್ಳಬಹುದು. ನಾಲ್ಕೇ ನಾಲ್ಕು ದಿನಗಳಲ್ಲಿ ನಿಮಗೆ ಹಿಯರಿಂಗ್​ ಏಡ್​ಸಿಗುತ್ತದೆ. ನೋ ಪ್ರಾಬ್ಲಮ್​ ನಾಳೆಯೇ ನಿಮ್ಮ ಮಗುವಿಗೆ ನಮ್ಮಲ್ಲಿರುವ ಸ್ಪೇರ್​ ಹಿರಯರಿಂಗ್​ ಏಡ್​ ಹಾಕಿಕೊಡುತ್ತೇನೆ. ಬೆಳಿಗ್ಗೆ ಸ್ಕೂಲ್​ಗೆ ಬರುತ್ತೇನೆ ಅಂದುಬಿಟ್ಟರು. ಬೆಟ್ಟದಂಥ ಸಮಸ್ಯೆ  ಬೆಣ್ಣೆಯಂತೆ ಕರಗಿಹೋಗಿತ್ತು. ನಿರಾಳವಾಯ್ತು. ಆಗಲೇ ಅಥರ್ವ ನನ್ನ ಕಾಲಮೇಲೇಯೇ ನಿದ್ದೆ ಮಾಡಿಬಿಟ್ಟಿದ್ದ. ನಿಧಾನವಾಗಿ ಅವನನ್ನ ಹಾಸಿಗೆಯ ಮೇಲೆ ಮಲಗಿಸಿ, ನಾನೂ ಅಲ್ಲೇ ಒರಗಿದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: