ದರ್ಶನ್‌ ಜಯಣ್ಣ ಸರಣಿ- ಧನ್ವಂತರಿಯ ಹುಡುಕುತ್ತಾ..

ದರ್ಶನ್ ಜಯಣ್ಣ

ಅಪ್ಪ ಒಂದಷ್ಟು ವಿಷಯಗಳಲ್ಲಿ ಸುತರಾಂ ರಾಜಿಯಾಗುತ್ತಿರಲಿಲ್ಲ. ನಾವೇನಾದರೂ ಮನ ಒಲಿಸಲು ಹೋದರೆ ಕೇಳುತ್ತಿರಲಿಲ್ಲ. ಅತಿಯಾಗಿ ಏನಾದರೂ ಹೇಳಲು ಹೋದರೆ ನಮ್ಮ ಮೇಲೆ ಎಗರಿ  ಬೀಳುತ್ತಿದ್ದರು. ಆಗ ಆದದ್ದೂ ಹಾಗೆಯೇ. ಆಯುರ್ವೇದದ ದೈವ ‘ ಧನ್ವಂತರಿ ‘ ಮಹಾ ವಿಷ್ಣುವಿನ ಅವತಾರ. ವೈದ್ಯೋ ನಾರಾಯಣೋ ಹರಿಃ ಎಂಬುದು ಯಾರಿಗೆ ತಾನೇ ಗೊತ್ತಿಲ್ಲ. 

ಹಲವು ವರ್ಷಗಳಿಂದ ಆಯುರ್ವೇದ ಔಷಧಿಗಳನ್ನು ತಯಾರಿಸುತ್ತಿದ್ದ ಅಪ್ಪನಿಗೆ ಇದ್ದಕ್ಕಿದ್ದ ಹಾಗೇ ತಮ್ಮ ಅಂಗಡಿಗೆ ಧನ್ವಂತರಿಯ ದೊಡ್ಡ ಫೋಟೋ ಒಂದು ಬೇಕಾಯ್ತು. ಅದಕ್ಕಾಗಿ ಹುಡುಕಿದ ಜಾಗವಿಲ್ಲ ಕೇಳಿದ ಫೋಟೋ ಅಂಗಡಿಯಿಲ್ಲ. ಕಡೆಗೆ ಎಲ್ಲೂ ಸಿಗದಾಗ ಅಮ್ಮಾ ” ಅದ್ಯಾಕೆ ಅಷ್ಟು ಹುಡುಕಾಡ್ತೀರಾ, ವಿಷ್ಣುವಿನ ಫೋಟೋ ತಂದು ಹಾಕಬಾರದೇ? ” ಎಂದಾಗ ಅಪ್ಪ ವ್ಯಗ್ರನಾದ. 

ಅಮ್ಮನ ಜೊತೆ ನನ್ನನ್ನು ಸೇರಿಸಿ ” ಸೋಂಬೇರಿಗಳು ನೀವು, ನಾಲಕ್ಕು ಕಡೆ ಸಿಗಲಿಲ್ಲವೆಂದು ಒಡನೆಯೇ ಕೈ ಚೆಲ್ಲುವವರು. ಅದರಲ್ಲೂ ನೀನು ಹುಡುಗ ಹಿಂಗೇ ಆದರೆ ಜೀವನ ಹೇಗೆ ಮಾಡ್ತೀಯೋ? ” ಎಂದು ಫಿಲಾಸಫಿಕಲ್ ಆಗಿ ರೇಗಿದ್ದರು. 

ಹೀಗೇ ಹುಡುಕುತ್ತಿರುವಾಗ, ಚಿಕ್ಕಪೇಟೆಯ ಒಂದು ಫೋಟೋ ಫ್ರೇಮ್ ಅಂಗಡಿಯಲ್ಲಿ ಪೋಸ್ಟ್ ಕಾರ್ಡ್ ಸೈಝಿನ ‘ ಧನ್ವಂತರಿ ಫೋಟೋ ‘ ಸಿಕ್ಕಿತು. ಅದು ಸಾಗರದ ಮೇಲಿಂದ ಕಮಲ ಪುಷ್ಪದಮೇಲೆ ಉದ್ಭವಿಸಿ ತನ್ನ ಕರತಲಗಳಲ್ಲಿ ಔಷಧಿಯನ್ನು (ಅಮೃತ ) ಹಿಡಿದ ಮಹಾವಿಷ್ಣು. ಇದನ್ನು ನೋಡಿದ ಅಪ್ಪನ ಖುಷಿಗೆ ಪಾರವೇ ಇರಲಿಲ್ಲ.

ನಾನು ಶೇಷಶಯನ ಮಹಾವಿಷ್ಣುವನ್ನು ನೋಡಿದ್ದೆ ಆದರೆ ಧನ್ವಂತರಿಯನ್ನು ನೋಡಿದ್ದು ಅದೇ ಮೊದಲು. ಒಮ್ಮೆಗೆ ಬ್ರಹ್ಮನನ್ನು ನೋಡಿದೆನೇನೋ ಅನ್ನಿಸಿತ್ತು. ಅಪ್ಪ ಇದರ ದೊಡ್ಡ ಅವತರಣಿಕೆ ಇಲ್ಲವೇ ಎಂದು ಕೇಳಿದಾಗ ಅಂಗಡಿಯವರು ” ನೋಡಿ ಸ್ವಾಮಿ ಇಷ್ಟೆಲ್ಲಾ ಹುಡುಕಿ ಸಿಕ್ಕಿದ್ದು ಇದೇ, ಬೇಕಾದರೆ ತಗೊಳ್ಳಿ ಇಲ್ಲವಾದರೆ ಇಟ್ಟು ಹೋಗಿ ” ಎಂದರು. 

ಅಪ್ಪ ಬೇಸರಮಾಡಿಕೊಳ್ಳಲಿಲ್ಲ ಬದಲಾಗಿ ನೂರು ರೂಪಾಯಿಯನ್ನು ಅಂಗಡಿಯವನ ಜೇಬಿನಲ್ಲಿಟ್ಟು (ಅವನು ಕೇಳಿದ್ದು ಐವತ್ತು ) ಹೊರಡುವಾಗ ಅಂಗಡಿಯವನಿಗೆ ಏನನಿಸಿತೋ ಏನೋ ” ಸ್ವಾಮಿ ನಿಮಗೆ ದೊಡ್ಡ ಫೋಟೋ ಬೇಕೇ ಬೇಕು ಅಂದರೆ ಒಂದು ದಾರಿ ಇದೆ. ಈ ಫೋಟೋವನ್ನು ಆಧಾರವಾಗಿಟ್ಟುಕೊಂಡು ಬೇಕಾದ ಸೈಝಿನ ಪಟವನ್ನ ಬರೆಸಿಕೊಂಡು ಬಿಡಿ ” ಎಂದರು. 

ಅಪ್ಪನ ಕಣ್ಣುಗಳು ಅಚಾನಕ್ಕಾಗಿ ಬಂದ ಈ ಉಪಾಯದಿಂದ ಹೊಳೆದವಾದರೂ 

” ಈಗ ಅಷ್ಟು ಚೆನ್ನಾಗಿ ಯಾರು ಬರೆದು ಕೊಡುತ್ತಾರೆ ಈ ಕಾಲದಲ್ಲಿ ” ಎಂದರು. 

ಅದಕ್ಕೆ ಅಂಗಡಿಯವನು ” ಇದೇನು ಹೀಗಂತೀರಿ ನಮ್ಮ ಭಾಸ್ಕರಾಚಾರ್ರು ಇಲ್ಲವೇ? ” ಅಂದರು. ಅಪ್ಪನಿಗೆ ಅವರ ತಮ್ಮ,  ಕೈದಾಳದ ( ಅಮರಶಿಲ್ಪಿ ಜಕ್ಕಣಾಚಾರಿಯ ಊರು) ಶ್ರೀಧರಾಚಾರ್ರು ಗೊತ್ತಿದ್ದರು. ಅಂಗಡಿಯಲ್ಲಿ ನಾವು ಮಾರುತ್ತಿದ್ದ ಬೇರೆಬೇರೆ ಪಂಚಲೋಹದ ವಿಗ್ರಹಗಳನ್ನು ಎರಕ ಹೊಯ್ದು ಮಾಡಿಕೊಡುತ್ತಿದ್ದವರು ಇದೇ ಶ್ರೀಧರಾಚಾರ್ರು. ಅಪ್ಪನಿಗೆ ಭಾಸ್ಕರಾಚಾರ್ರ ಪರಿಚಯವಿರದಿದ್ದರೂ ತಮ್ಮನ ಬಳಿ ಕೇಳೋಣವೆಂದುಕೊಂಡು ಕೈದಾಳದ ಬಳಿ ಬಂದೆವು. 

ನಮ್ಮನ್ನು ಬರಮಾಡಿಕೊಂಡು ಅವರ ಹೆಂಡತಿ ಕುಡಿಯಲು ಕಾಪಿ ಕೊಟ್ಟರು. ಶ್ರೀಧರಾಚಾರ್ರು ಮಲಗಿರುವುದಾಗಿಯೂ ಅವರನ್ನು ತಾನು ಎಬ್ಬಿಸಿ ಕಳುಹಿಸುವುದಾಗಿಯೂ ಹೇಳಿ ಒಳ ಹೊರಟರು. ನಾವು ಮತ್ತೊಂದಷ್ಟು ಪಂಚಲೋಹದ ವಿಗ್ರಹಗಳ ಆರ್ಡರ್ ಕೊಡಲು ಬಂದಿರಬೇಕು ಅಂದುಕೊಂಡಿದ್ದರು. ಇಲ್ಲವಾದರೆ ನಮ್ಮನ್ನು ಮುಂಚೆಯೇ ಎಚ್ಚರಿಸುತ್ತಿದ್ದರೇನೋ.

ಆದದ್ದಿಷ್ಟೇ. ನಿದ್ದೆಯಿಂದ ಎದ್ದು ಬಂದಿದ್ದ ಶ್ರೀಧರಾಚಾರ್ರು ಒಳ್ಳೆಯ ಮೂಡಿನಲ್ಲಿರಲಿಲ್ಲ. ಕಣ್ಣುಗಳು ಕೆಂಪಾಗಿದ್ದವು ( ಇದು ಅವರ ದೈನಂದಿನ ಅಭ್ಯಾಸದ ಗುರುತು). ಆದರೂ ಅಪ್ಪನ ಮೇಲಿನ ಗೌರವದ, ವ್ಯಾಪಾರದ ಮರ್ಜಿಗೆ ಎದ್ದು ಬಂದಿದ್ದರು. 

ಯಾವಾಗ ಅಪ್ಪ ಬಂದ ವಿಷಯವನ್ನು ಹೇಳಿದರೋ ಆಗ ಸಿಟ್ಟುಗೊಂಡ ಅವರು ” ಜಯಣ್ಣಾವ್ರೇ ಬೇರೆಯಾರಾದ್ರು ಆಗಿದ್ರೆ….. ” ಎನ್ನುತ್ತಾ ಸಿಟ್ಟುಮಾಡಿಕೊಂಡು ಒಳಗೆ ಹೊರಟು ಹೋದರು. ನನಗೂ ಅಪ್ಪನಿಗೂ ಏನೂ ಅರ್ಥವಾಗಲಿಲ್ಲ. ಅಪ್ಪನ ಮುಖ ಮ್ಲಾನವಾಗಿತ್ತು. ಒಳಗಿನಿಂದಲೇ ಬಹುಷಃ ಇದನೆಲ್ಲ ಆಲಿಸಿದ ಅವರ ಪತ್ನಿ ಹೊರಬಂದು ” ಅಣ್ಣಾ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ ಇವರು ಹೀಗೆಯೇ ಅಣ್ಣನ ಮಾತೆತ್ತಿದರೆ ಎಗರಿ ಬೀಳುತ್ತಾರೆ. ಕಷ್ಟದಲ್ಲಿದ್ದಾಗ ಏನೂ ಸಹಾಯಮಾಡದ ಅಣ್ಣನ ಮೇಲೆ ಇವರಿಗೆ ಎಲ್ಲಿಲ್ಲದ ಕೋಪ ” ಎಂದರು. 

ಅಪ್ಪನಿಗೆ ತಲೆಬಿಸಿಯಾಯ್ತು. ಕಾರಣ ಭಾಸ್ಕರಾಚಾರ್ರು ಮುಂಗೋಪಿ. ಸಿಡುಕಿನ ಮನುಷ್ಯ. ಆದರೆ ತಮ್ಮನಂತೆ ಕುಡುಕನಲ್ಲ. ಅವರು ಸಿದ್ಧಗಂಗೆಯಲ್ಲಿ ಸ್ವಾಮಿಗಳ ಮತ್ತವರ ಪಂಥದವರ ನಾನಾ ಚಿತ್ರಗಳನ್ನು ಆಗಲೇ ರಚಿಸಿ ಹೆಸರು ಮಾಡಿದ್ದರು. ಅಷ್ಟೇ ಅಲ್ಲದೆ ರಾಜ್ಯದ ನಾನಾ ಕಡೆ ಅವರ ಕೈ ಚಮತ್ಕಾರ ಮಾಡಿತ್ತು. ಅಂಥಹಾ ದೊಡ್ಡ ಕಲಾವಿದ ಇಂಥಹಾ ಚಿಕ್ಕ ಕೆಲಸ ಮಾಡಿಕೊಡುತ್ತಾರಾ ಅದೂ ತನ್ನ ಪರಿಚಯವೇ ಇಲ್ಲದಿರುವಾಗ? 

ಶ್ರೀಧರಾಚಾರ್ರ ಮನೆಯಿಂದ ವಾಪಸು ಬಂದಮೇಲೆ ಒಂದೆರಡು ದಿನ ಬಿಟ್ಟು ಅಪ್ಪ ನಾನು ಭಾಸ್ಕರಾಚಾರ್ರ ಆರ್ಟ್ಸ್ ಅಂಗಡಿಯ ಕಡೆಗೆ ಹೋದೆವು. ಆಗಷ್ಟೇ ಅವರು ಊರಿನ ಗಣೇಶ ಪೆಂಡಾಲಿಗೆ ಯಾವುದೋ ಚಿತ್ರವನ್ನು ಬರೆಯುತ್ತಿದ್ದರು. ನಾವು ಬಂದ್ದದ್ದನ್ನು ವಾರೆಗಣ್ಣಿನಿಂದ ನೋಡಿದರೂ ಮಾತನಾಡಿಸಲಿಲ್ಲ. ಹೀಗೆ ಒಂದಷ್ಟು ಹೊತ್ತು  ಕಳೆದ ನಂತರ ನಾವು ಬಂದ ವಿಷಯ ಕೇಳಿದರು. ಹೇಳಿದೆವು. ಅದರ ಜೊತೆಗೇ ಅಪ್ಪ ತಾನು ಶ್ರೀಧರಾಚಾರ್ರು ಸ್ಕೂಲಿನಿಂದ ಸ್ನೇಹಿತರೆಂದೂ ಅವರ ಬಳಿ ಅಂಗಡಿಗೆ ಬೇಕಾದ ಪಂಚಲೋಹದ ವಿಗ್ರಹಗಳನ್ನು ಮಾಡಿಸಿಕೊಳ್ಳುತ್ತೇವೆಂದು ಹೇಳಿದರು. ಆಚಾರ್ರು ಎಲ್ಲವನ್ನೂ ಸಮಚಿತ್ತದಿಂದ ಆಲಿಸಿದರು. ಅವರಿಗೆ ತಮ್ಮನ ಮೇಲೆ ಕೊಂಚವೂ ಸಿಟ್ಟು ಇದ್ದದ್ದು ತೋರಲಿಲ್ಲ. 

ಅವರು ಹೇಳಿದರು. ” ನೋಡಿ ಈಗ ತುಂಬಾ ಬ್ಯುಸಿ ಇದ್ದೇನೆ ನಿಮ್ಮಲ್ಲಿನ ಧನ್ವಂತರಿ ಫೋಟೋವನ್ನು ಕೊಟ್ಟು ಹೋಗಿ ರೆಡಿ ಆದಾಗ ಹೇಳಿಕಳಿಸುತ್ತೇನೆ ಆದರೆ ದುಡ್ಡಿನಬಗ್ಗೆ ಚೌಕಾಸಿ ಮಾಡಬಾರದು ! ” 

ಅಪ್ಪನಿಗೆ ಚೌಕಾಸಿ ಮಾಡುವುದು ಬೇಕಿರಲಿಲ್ಲ ಆದರೂ ” ಎಷ್ಟಾಗುತ್ತೆ ಸ್ವಾಮಿ? ” ಎಂದು ಕೇಳಿದರು. 

” ಒಂದು ಸಾವಿರ ರೂಪಾಯಿ !” 

” ಆಗಲಿ ಸ್ವಾಮಿ ತಗೊಳ್ಳಿ 200 ರೂ ಅಡ್ವಾನ್ಸು ” 

ಭಾಸ್ಕರಾಚಾರ್ರು ಅದನ್ನು ಪಡೆದು ಹಾಳೆಹರಿದು ರಸೀತಿ ಬರೆದು ಕೊಟ್ಟರು. ನಾವು ಮನೆಗೆ ಮರಳಿದೆವು. 

ಇದಾದಮೇಲೆ ತಿಂಗಳು ಕಳೆದರೂ ಏನೂ ಸುದ್ದಿ ಬರಲಿಲ್ಲ. ಅಪ್ಪ ಹಲವಾರುಬಾರಿ ಹೋಗಿ ವಿಚಾರಿಸೋಣ ಎಂದುಕೊಂಡಾಗಲೆಲ್ಲ ಅದೇನೋ ಹೊಳೆದವರಂತೆ ಸುಮ್ಮನಾಗುತ್ತಿದ್ದರು. ನಾನು ಒಂದು ದಿನ ಕೇಳಿದೆ 

” ಅಲ್ಲ ಅಪ್ಪಾಜಿ ನಾವು ಅಡ್ವಾನ್ಸ್ ಕೊಟ್ಟಿದ್ದೇವಲ್ಲ? ಕೇಳೋಣ ಬಾ,  ಅದು ನಮ್ಮ ಹಕ್ಕಲ್ವಾ? ” 

ಅದಕ್ಕೆ ಅಪ್ಪ ನಕ್ಕು ” ನೋಡು ಕಲಾವಿದರನ್ನ ಹಾಗೆಲ್ಲ ಹಣದಿಂದ ಅಳೆಯಬಾರದು. ಅವರು ಆರಾಮವಾಗೇ ಮಾಡಿಕೊಡಲಿ ಆಗಲೇ ಬೆಲೆ. ನಮ್ಮ ಕೆಲಸಾನೂ ಆಗ ಚೆನ್ನಾಗಿ ಆಗುತ್ತೆ ” ಅಂದರು. 

ನನಗೆ ಆವಯಸ್ಸಿನಲ್ಲಿ ಎಷ್ಟು ಅರ್ಥವಾಯಿತೋ ಏನೋ ಗೊತ್ತಿಲ್ಲದ ವಿಚಾರ. ಹೀಗಿರುವಾಗ ಒಂದು ದಿನ ಅವರ ಆರ್ಟ್ಸ್ ಅಂಗಡಿಯ ಹುಡುಗನೊಬ್ಬ ಬಂದು ಪಟ ರೆಡಿ ಆಗಿರುವುದಾಗಿ ಹೇಳಿದ. ಅಪ್ಪನ ಖುಷಿಗೆ ಪಾರವೇ ಇರಲಿಲ್ಲ. ಒಡನೆಯೇ ನನ್ನನ್ನು ಕರೆದುಕೊಂಡು ಕೈನಟಿಕ್ ಹೋಂಡಾ ಸ್ಟಾರ್ಟ್ ಮಾಡಿಕೊಂಡು ಹೊರಟೆವು. 

ಧನ್ವಂತರಿಯ ಚಿತ್ರಪಟ ತುಂಬಾ ಚೆನ್ನಾಗಿತ್ತು. ಭಾಸ್ಕರಾಚಾರ್ರು ಎಂಥಾ ಕಲಾವಿದರೆಂದರೆ ಪೋಸ್ಟ್ ಕಾರ್ಡ್ನಲ್ಲಿದ್ದ ಚಿತ್ರಕ್ಕೆ ಇಲ್ಲಿ ಜೀವ ಬಂದಿತ್ತು. ಅಪ್ಪನ ಕಣ್ಣುಗಳು ಒದ್ದೆಯಾದವು. ಚಪ್ಪಲಿ ಬಿಟ್ಟು ಒಮ್ಮೆ ಪಟಕ್ಕೆ ನಮಸ್ಕರಿಸಿದರು. ಭಾಸ್ಕರಾಚಾರ್ರಿಗೂ ಒಮ್ಮೆ ಶಿರಬಾಗಿ ನಮಸ್ಕರಿಸಿ ಉಳಿದ ಹಣ ಕೊಟ್ಟು ಚಿತ್ರಪಟವನ್ನು ತಬ್ಬಿಕೊಂಡು ಗಾಡಿಯಮುಂದೆ ಇಟ್ಟುಕೊಂಡು ಅಂಗಡಿಗೆ ತಂದೆವು. 

ಹತ್ತಾರು ವರ್ಷಗಳ ಕಾಲ ಅಪ್ಪ ದಿನದಲ್ಲಿ ಮೊದಲ ಗಿರಾಕಿಗೆ ಔಷಧಿಯೋ, ಜ್ಯೂಸೋ ಕೊಡುವಾಗಲೆಲ್ಲಾ ಒಮ್ಮೆ ಧನ್ವಂತರಿಯ ಪಟಕ್ಕೆ ನಮಸ್ಕರಿಸುವುದ ಮರೆಯುತ್ತಿರಲಿಲ್ಲ. ಈಗ ಅಪ್ಪ, ಆಚಾರ್ ಯಾರೂ ಇಲ್ಲ. ಆದರೂ ಆ ನೆನಪುಗಳು, ಪಂಚಲೋಹದ ವಿಗ್ರಹಗಳು, ಚಿತ್ರಪಟ ಮನೆಯಲ್ಲಿ ಜೋಪಾನವಾಗಿ ಹಾಗೆಯೇ ಉಳಿದಿವೆ. 

‍ಲೇಖಕರು Avadhi

October 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ದರ್ಶನ್ , ಭಾಸ್ಕರಾಚಾರ್ ಕೃತಿ ಆ ಧನ್ವಂತರಿಯ ಚಿತ್ರವನ್ನು ಹಾಕಿದ್ದರೆ ಚೆನ್ನಾಗಿರುತ್ತಿತ್ತು. ನಾವು ಅನೇಕ ಸಲ ಮಂಡಿಪೇಟೆಯ ನಿಮ್ಮ ಅಂಗಡಿಗೆ ಬಂದಿದ್ದೇವೆ. ಈ ವಿಷಯಗಳ ಕಲ್ಪನೆಯೇ ಇರಲಿಲ್ಲ. ಗ್ರಂಧಿಗೆ ವ್ಯಾಪಾರಿಯೊಬ್ಬರ ಬದುಕಿನ ಕಥಾನಕ ಕನ್ನಡದಲ್ಲಿ ತೆರೆದುಕೊಳ್ಳುತ್ತಿರುವುದು ಇದೇ ಮೊದಲಿರಬೇಕು. ಮಾಲಿಕೆ ಚೆನ್ನಾಗಿ ಬರುತ್ತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: