ಕನ್ನಡಕ್ಕೆ ಬಂತು ‘ಹಲ್ಲಾ ಬೋಲ್’

‘ಹಲ್ಲಾ ಬೋಲ್’ ನಾಟಕ ಮಾಡುವಾಗ ಕಾಂಗ್ರೆಸ್ ಗೂಂಡಾಗಳಿಂದ ಹಲ್ಲೆಗೊಳಗಾದ ಸಫ್ದರ್ ಹಷ್ಮಿ ಸಾವಿಗೀಡಾದರು. ದೇಶದಲ್ಲಿ ಬೀದಿ ರಂಗಭೂಮಿಯ ಮೂಲಕ ಸಮಾಜದ ಸಮಸ್ಯೆಯನ್ನು ಎತ್ತಿ ತೋರಿಸಿದವರು. ಸಮಸಮಾಜಕ್ಕಾಗಿ ಕನಸಿದವರು.

ಜನಮ್ ತಂಡದ ಸ್ಥಾಪಕ ಹಷ್ಮಿ ಅವರ ಬದುಕು ಹೋರಾಟವನ್ನು ಅವರ ಒಡನಾಡಿ ಸುಧನ್ವ ದೇಶಪಾಂಡೆ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.

ಸಮುದಾಯ ರಂಗ ತಂಡದ ಮುಖ್ಯರಲ್ಲೊಬ್ಬರಾದ ಎಂ ಜಿ ವೆಂಕಟೇಶ್ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕ್ರಿಯಾ ಮಾಧ್ಯಮ ಪ್ರಕಾಶನ ಪ್ರಕಟಿಸಿರುವ ಈ ಕೃತಿಯ ಆಯ್ದ ಭಾಗ ಇಲ್ಲಿದೆ-

ಸುಧನ್ವ ದೇಶಪಾಂಡೆ

ಹಲ್ಲಾಬೋಲ್ – ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕು 

ಸುಧನ್ವ ದೇಶಪಾಂಡೆ 

ಅನುವಾದ ಎಂ.ಜಿ.ವೆಂಕಟೇಶ್ 

ಪ್ರಕಾಶನ : ಕ್ರಿಯಾ ಮಾಧ್ಯಮ ಪ್ರೈ.ಲಿ. 

ಪುಟಗಳು: 280 ಬೆಲೆ ರೂ. 200

೧೯೮೦ರ ದಶಕದ ಮಧ್ಯಾವಧಿ. ಕೋಮು ಸೌಹಾರ್ದತಾ ಸಮಿತಿ

ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಅಕ್ಟೋಬರ್ ೩೧, ೧೯೮೪ರಂದು ತಮ್ಮ ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾದರು. ಆ ನಂತರ ಸಿಖ್ ವಿರೋಧಿ ಹತ್ಯಾಕಾಂಡ ಪ್ರಾರಂಭವಾಗಿ ಸುಮಾರು ಮೂರು ಸಾವಿರ ಜೀವಗಳನ್ನು ಬಲಿತೆಗೆದುಕೊಳ್ಳುವುದು ಅಲ್ಲದೇ ನಮ್ಮ ಸಮಾಜ, ಹಿಂದೂ-ಸಿಖ್ ಬಾಂಧವ್ಯ, ದೆಹಲಿ ನಗರದ ಬಗ್ಗೆ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಬಹಳ ಕಾಲದಿಂದ ಇದ್ದ ನಂಬಿಕೆಗಳು ನುಚ್ಚುನೂರಾದವು.

ಈ ಮಾರಣ ಹೋಮಕ್ಕೆ ತತ್ತರಿಸಿದ ಸಾವಿರಾರು ಸಿಖ್ಖರು ನಗರದ ತಮ್ಮ ಪ್ರೀತಿಯ ಬಂಧುಗಳನ್ನು, ಮನೆ, ವ್ಯವಹಾರಗಳನ್ನು ಕಳೆದುಕೊಂಡು ನಗರದ ವಿವಿಧ ಕಡೆಗಳಲ್ಲಿ ರಚಿಸಲಾದ ಕ್ಯಾಂಪ್‌ಗಳಿಗೆ ಹೋಗಬೇಕಾಯಿತು. ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್ಸಿನಲ್ಲಿ ಮೊದಲು ಶಾಂತಿ ಮೆರವಣಿಗೆ ನಡೆದಾಗ ಉರಿದಿದ್ದ ಕೆಂಡ ಹೊಗೆಯಾಡುತ್ತಲೇ ಇತ್ತು. ಗಾಯ ಹಸಿಯಾಗಿಯೇ ಇತ್ತು.

ಶಾಂತಿ ಮೆರವಣಿಗೆ ಕ್ಯಾಂಪಸ್‌ನ ಎಲ್ಲ ಕಾಲೇಜುಗಳನ್ನು ಮತ್ತು ಮುಖ್ಯ ವಿಭಾಗಗಳನ್ನು ಮುಟ್ಟುತ್ತಲೇ ಸಾಗಿತು. ಶಾಲಾ ಕಾಲೇಜಿನಲ್ಲಿ ಮೆರವಣಿಗೆ ಕೊನೆಗೊಂಡು ಸಾರ್ವಜನಿಕ ಸಭೆ ನಡೆಯಿತು. ಕೆಲವು ಭಾಷಣಕಾರರು ಸಭೆಯನ್ನು ಉದ್ದೇಶಿಸಿ ಮಾತನಾಡುವವರಿದ್ದು ಆ ವೇಳೆಗೆ ಅತಿಥೇಯ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಸೇರಿದ್ದರು.

ಅವರಲ್ಲಿ ಬಹುತೇಕರು ಯುವಜನರು. ಅವರು ಕೋಪಗೊಂಡಿದ್ದು ಪ್ರತೀಕಾರಕ್ಕಾಗಿ ಕುದಿಯುತ್ತಿದ್ದರು. ಅವರ ಕಣ್ಣುಗಳು ನೋವಿನಿಂದ ಉರಿಯುತ್ತಿದ್ದು, ದ್ವೇಷ ಮತ್ತು ದುಃಖಭರಿತವಾಗಿದ್ದವು. ಪ್ರತೀಕಾರದ ವಾತಾವರಣವಿತ್ತು.

ಭಾಷಣಗಳ ಮೊದಲು ‘ಪರ್ಚಮ್’ ಗುಂಪಿನಿಂದ ಹಾಡುಗಳ ಕಾರ್ಯಕ್ರಮವಿತ್ತು. ಹಾಡುವುದು ಅಸಾಧ್ಯವಾಗಿತ್ತು. ಅವರ ಬಹಳಷ್ಟು ಕೋಪ ಅಲ್ಲಿ ಬಹುಸಂಖ್ಯೆಯಲ್ಲಿ ನೆರೆದಿದ್ದ ಪೋಲಿಸರ ವಿರುದ್ಧವಿತ್ತು. ವಿದ್ಯಾರ್ಥಿಗಳು ಉದ್ರಿಕ್ತರಾಗಿದ್ದರು. ಹಿಂದಿನ ದಿನಗಳಲ್ಲಿ ನಡೆದ ಆಸ್ತಿಹಾನಿಯಲ್ಲಿ ರಕ್ತ ಹರಿಯುತ್ತಿದ್ದಾಗ ದುಷ್ಕೃತ್ಯದಲ್ಲಿ ಪೊಲೀಸರು ಶಾಮೀಲಾಗಿದ್ದರು. ಒಂದು ಅಪಾಯಕಾರಿ ಸನ್ನಿವೇಶ ಪ್ರಾರಂಭವಾಗುತ್ತಿತ್ತು. ಶಾಂತಿ ಮೆರವಣಿಗೆ ಸಂಘಟಕರಿಗೆ ಮುಂದಿನ ಆಗುಹೋಗುಗಳ ಬಗ್ಗೆ ಆತಂಕವಿತ್ತು.

ಸಫ್ದರ್ ‘ಪರ್ಚಮ್’ನ ಅತ್ಯಂತ ಕಿರಿಯ ಸದಸ್ಯಳಾದ, ತೆಳ್ಳಗಿನ ಪದವಿಪೂರ್ವ ವಿದ್ಯಾರ್ಥಿನಿ ಸುಮಂಗಲಾ ದಾಮೋದರನ್  (ಇಎಂಎಸ್ ಅವರ ಮೊಮ್ಮಗಳು) ಕಡೆಗೆ ತಿರುಗಿದನು. ಅವನು ಮೈಕ್ ಕೈಗೆತ್ತಿಕೊಂಡು ‘ಜಾನೆವಾಲೇ ಸಿಪಾಯಿ’ ಹಾಡನ್ನು ಹಾಡಲು ಹೇಳಿದ. ೧೯೪೦ರಲ್ಲಿ ಈ ಯುದ್ಧ ವಿರೋಧಿ-ಗೀತೆಯನ್ನು ರಚಿಸಿದ್ದು ಹೈದರಾಬಾದ್‌ನ ಕಮ್ಯೂನಿಸ್ಟ್ ಕವಿ ಮಕ್ದೂಮ್ ಮೋಹಿಯುದ್ದೀನ್.

ಅದನ್ನು ಸಲೀಲ್ ಚೌಧರಿ ೧೯೬೦ರಲ್ಲಿ ’ಉಸ್ನೇ ಕಹಾ ಥಾ’ ಚಿತ್ರಕ್ಕೆ ಅಳವಡಿಸಿ ಸಂಗೀತ ನೀಡಿದ್ದರು. ಅಲ್ಲಿವರೆಗೆ ‘ಪರ್ಚಮ್’ ಯಾವಾಗಲೂ ಗುಂಪು ಗಾಯನ ಮಾಡುತ್ತಿದ್ದರು. ತಂಡದಿಂದ ಒಬ್ಬರೇ ಹಾಡಿದ ಮೊದಲ ಗೀತೆ ಇದಾಗಿತ್ತು. ಅದನ್ನು ಅವರು ಹಿಂದೆ ಎಂದೂ ಹಾಡಿರಲಿಲ್ಲ. ಯುವ ಗಾಯಕಿ ತಬ್ಬಲಿಯಂತೆ ಭಯಭೀತಳಾಗಿದ್ದಳು.

‘ಹಾಡು, ಹೆದರಬೇಡ ಹಾಡು’

ಸಫ್ದರ್ ಉತ್ತೇಜಿಸಿದನು. ಸುಮಂಗಲ ಹಿಂಜರಿಯುತ್ತಿದ್ದಳು. ಸಫ್ದರ್ ಅವಳ ಹಿಂದೆಯೇ ಇದ್ದ. ಅವಳು ಮತ್ತೆ ಹಾಡಲು ಪ್ರಾರಂಭಿಸಿದಳು. ಅವಳ ಮಧುರ ಧ್ವನಿ ಇದ್ದಕ್ಕಿದಂತೆ ಶಕ್ತಿಶಾಲಿಯಾಯಿತು. ಅವಳ ಅಂತರಂಗದ ಆಳದಿಂದ ಹೊರಟ ಆ ಪೂರ್ಣಧ್ವನಿ ಅವಳ ಸಣ್ಣ ಆಕಾರವನ್ನು ಮುಚ್ಚಿತ್ತು. ಅದು ಅಲ್ಲಿದ್ದ ಎಲ್ಲರನ್ನೂ ತಲುಪಿ ಶಾಂತವಾಗಿಸಿತು.

ಹಾಡು ಮುಂದುವರೆದಂತೆ ಯುವಕ ಯುವತಿಯರು ಸ್ತಂಭಿತರಾಗಿದ್ದರು. ಸಿಪಾಯಿ ಯುದ್ಧಕ್ಕೆ ಹೊರಡುವಾಗ ಅವನ ದುಃಖಿತ ಹೆಂಡತಿ ಮತ್ತು ಹಸಿದ ಮಕ್ಕಳ ಕುರಿತಾದ ಹಾಡು, ಸುಡುತ್ತಿದ್ದ ಹೆಣಗಳ ವಾಸನೆ – ಎಲ್ಲಾ ಕಡೆಯಿಂದ ಎದ್ದು ಬದುಕೇ ಅಳುತ್ತಿರುವಂತೆ ಭಾಸವಾಗುತ್ತಿತ್ತು.

ಪ್ರೇಕ್ಷಕರಲ್ಲಿ ಯಾರೋ ಒಬ್ಬರು ಅಳತೊಡಗಿದರು. ಮುಂದಿನ ಕೆಲವು ನಿಮಿಷಗಳಲ್ಲಿ ಸುಮಾರು ಜನ ಅಳುತ್ತಿದ್ದರು. ಅಳದಿದ್ದವರೂ ಉಕ್ಕಿಬರುತ್ತಿದ್ದ ಭಾವನೆಯನ್ನು ತಡೆಯಲು ಯತ್ನಿಸುತ್ತಿದ್ದರು. ಅಲ್ಲಿ ಒದ್ದೆಯಾಗದಿದ್ದ ಕಣ್ಣುಗಳೇ ಇರಲಿಲ್ಲ. ಸಂಪೂರ್ಣವಾಗಿ ಕಾರ್ಯಾಚರಣೆಗಾಗಿ ಸಿದ್ಧರಾಗಿದ್ದ ಪೋಲಿಸರು, ಅಲ್ಲಿ ಬದಲಾದ ಮನಸ್ಥಿತಿಯನ್ನು ನೋಡಿ ಆಶ್ಚರ್ಯಚಕಿತರಾದರು.

ಅಸಾಧ್ಯವೆನಿಸಿದ್ದು ನಡೆದಿತ್ತು. ೧೯೪೦ರಲ್ಲಿ ಮುಸ್ಲಿಂ ಹೆಸರಿನ ಹೈದರಾಬಾದಿ ಕಮ್ಯುನಿಸ್ಟ್ ಕವಿಯಿಂದ ರಚಿತವಾದ ಒಂದು ಹಾಡು, ೧೯೬೦ರ ಒಂದು ಚಲನಚಿತ್ರಕ್ಕೆ ಒಬ್ಬ ಬಂಗಾಳಿ ಅಳವಡಿಸಿದ್ದ, ಪದವಿಪೂರ್ವ ತರಗತಿಯ ಹಿಂದು ಹೆಸರಿನ ಮಲೆಯಾಳಿ ಯುವತಿ ಹಾಡಿದ ಹಾಡು, ಹತ್ಯಾಕಾಂಡದಿಂದ ಕುದಿಯುತ್ತಿದ್ದ ಕೋಪೋದ್ರಿಕ್ತರಾಗಿದ್ದ ನೂರಾರು ಸಿಖ್ ಯುವಕರಲ್ಲಿ ಬದಲಾವಣೆ ತಂದಿತ್ತು.

ಇಲ್ಲಿ ಹೋಲಿಸಬಹುದಾದ್ದು, ಹೊಂದಿಕೆಯಾಗಬಹುದಾದ್ದು ಏನೂ ಇಲ್ಲ. ಆದರೂ ಈ ಹಾಡು, ಭಾವಪೂರ್ಣ ಮತ್ತು ಮನಕಲಕುವ ಹಾಡು-ನೊಂದವರ ಎರಡು ಗುಂಪುಗಳನ್ನು, ಪೀಳಿಗೆಗಳು, ಭೂಗೋಳ ಮತ್ತು ಹಿಂಸಾಚಾರದ ಎಲ್ಲೆಗಳನ್ನೂ ಮೀರಿ ಜೋಡಿಸಿತ್ತು.

‍ಲೇಖಕರು Avadhi

October 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. D.M.NADAF.

    ಹಲ್ಕಾ ಬೋಲ್ ಇದುವರೆಗೆ ಕನ್ನಡಕ್ಕೆ ಅನುವಾದ ಆಗಿರಲಿಲ್ಲ ವೆ?
    ಹಲ್ಕಾ ಬೋಲ್ ದಿಲ್ಲಿಯನ್ನು zakzore ಮಾಡಿದ ಕೃತಿ. ಪರಿಚಯಿಸಿದ್ದಕ್ಕೆ ಧನ್ಯವಾದ.
    ಡಿ. ಎಂ. ನದಾಫ ಅಫಜಲಪುರ

    ಪ್ರತಿಕ್ರಿಯೆ
    • avadhi

      ಇದು ಹಲ್ಲಾ ಬೋಲ್ ನಾಟಕದ ಅನುವಾದವಲ್ಲ
      ಸಫ್ದರ್ ಹಷ್ಮಿ ಅವರ ಜೀವನ ಕಥನ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: