ಗೌಹರ್ ಬಂದು ಭುಜ ತಟ್ಟಿದಳು.. ಆಮೇಲೆ…

ಈಕೆ ‘ಜಯನಗರದ ಹುಡುಗಿ’.ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ.

ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ ಎಂಜಿನಿಯರ್ ತಂದೆ ಸುಧೀಂದ್ರ ಹಾಲ್ದೊಡ್ಡೇರಿ, ತಾತ, ಖ್ಯಾತ ಪತ್ರಕರ್ತ ಎಚ್ ಆರ್ ನಾಗೇಶರಾವ್ ಅವರಿಂದ ಪಡೆದದ್ದು ಬಹಳಷ್ಟು.

ಪ್ರಸ್ತುತ ಬಾರ್ಸಿಲೋನಾದಲ್ಲಿ ತಾವು ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಕಂಡ ನೋಟಗಳ ಚಿತ್ರಣ ಇಲ್ಲಿದೆ.

ಹುಡುಗಿ ಅವತ್ತು ಯಾವೋನೋ ಅವನು ಕೇಕ್ ನನ್ನ ಮೇಲೆ ಹಾಕಿದ್ದು ಎಂದು ಕೋಪ ಮಾಡಿಕೊಂಡು ಮನೆಯ ಆಚೆ ಬಂದಳು. ಹೆಣ್ಣುಮಕ್ಕಳು ಮೈ ಮರೆತು ಪಾರ್ಟಿ ಮಾಡೋವಾಗ ಮನೆಯ ಬಾಗಿಲು ಅಕಸ್ಮಾತ್ ತೆರೆದಿದ್ದರೆ ಇಂತಹ ತಲೆಹರಟೆ ಮಾಡುವ ಹುಡುಗರು ಜಾಸ್ತಿಯಾಗಿದ್ದಾರೆ ಎಂಬ ಸುದ್ದಿ ಆಗಾಗ ಇಂಡಿಯನ್ ಗ್ರೂಪ್ ಗಳಲ್ಲಿ ಹರಿದಾಡುತ್ತಿತ್ತು.

“ಥೂ ಇಲ್ಲಿ ಬಂದ್ರೂ ಇದೇನಾ, ಇದಕ್ಕೂ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಬೇಕಾ, ಎಂಬೆಸ್ಸಿಯಲ್ಲಿ ಅತಿ ಹೆಚ್ಚು ದೂರು ಕೊಟ್ಟಿರುವ ಹುಡುಗಿ ಎಂದು ನನ್ನನ್ನ ಎಲ್ಲಿ ಕಡೆಗಣಿಸುತ್ತಾರೋ ಎಂದು ಭಯ ಪಟ್ಟು ಅಪಾರ್ಟ್ಮೆಂಟಿನ ಸೊಸೈಟಿಯಲ್ಲಿ ದೂರು ಕೊಡೋದಕ್ಕೆ ಹೋದಳು.

ಅದರ ಅಧ್ಯಕ್ಷ, “ಈ ಅಪಾರ್ಟ್ಮೆಂಟಿನಲ್ಲಿ ಪಾರ್ಟಿ ಮಾಡೋಕೂ ಮುಂಚೆ ಅನುಮತಿ ಪಡೆದಿರಬೇಕು, ಹಾಗಿದ್ದರೂ ಮನೆಯ ಬಾಗಿಲು ಯಾಕೆ ತೆರೆದಿದ್ದೀರಿ ಅದು ಇದು” ಎಂದು ಥೇಟ್ ಬೆಂಗಳೂರಿನಲ್ಲಿ ಅಂಕಲ್ಲುಗಳು ಹೆಣ್ಣುಮಕ್ಕಳು ರಾತ್ರಿ ರಸ್ತೆಗಿಳಿದಿದ್ದಕ್ಕೆ ಈವ್ ಟೀಸಿಂಗ್ ಆಗ್ತಾ ಇದೆ ಎಂದು ಹೇಳುವ ಹಾಗೆ ಹೇಳಿ ಹುಡುಗಿಗೆ ಇನ್ನೂ ಕೋಪ ತರಿಸಿ , “ಇವರ ಕರ್ಮವೇ ಬೇಡ” ಎಂದು ಪಾರ್ಕಿಗೆ ದಬದಬ ನಡೆದುಕೊಂಡು ಹೋಗಿ ಅಲ್ಲಿ ಕಲ್ಲಿನ ಬೆಂಚಿನ ಮೇಲೆ ಕೂತಳು.

ಅಲ್ಲಿ ಒಂದು ಕೆಂಪು ಹೂಲಾ ಹೂಪ್ ಹಿಡಿದುಕೊಂಡು ಒಂದು ಹುಡುಗಿ ತನ್ನ ಕಲಾ ಪ್ರದರ್ಶನ ಮಾಡುತ್ತಿದ್ದಳು. ಅಲ್ಲಿ ಒಂದಷ್ಟು ಜನ ನಿಂತು ನೋಡುತ್ತಿದ್ದರು. ಈ ಥರದ ಅದೆಷ್ಟೋ ಕಲಾಕಾರರಿಗೆ ಈ ಪಾರ್ಕು, ರಸ್ತೆಗಳು ವೇದಿಕೆ. ಭಾರತದ ಕೆಲವು ನಗರಗಳಲ್ಲಿ ಇದು ಒಂದು ಮಾಫಿಯಾ ಅಥವಾ ಭಿಕ್ಷಾಟನೆ ಎಂದು ಅಂದುಕೊಂಡು ಅವರನ್ನೆಲ್ಲಾ ತೋರಿಸಿ ಶಾಲೆಯ ಮಕ್ಕಳಿಗೆ ಓದಲ್ಲಿಲ್ಲವಾದರೆ ಹೀಗೆ ಪಾರ್ಕಿನಲ್ಲಿ ಪ್ರತಿಭಾ ಪ್ರದರ್ಶನ ಮಾಡಬೇಕಾದೀತು ಎಂದು ಭಯ ಪಡಿಸಿ ಅದೆಷ್ಟೋ ಪ್ರತಿಭೆಗಳನ್ನ ಹೊಸಕಿ ಹಾಕಿರುವ ಉದಾಹರಣೆಗಳು ತುಂಬಾ ಇವೆ.

ಇಂಥದ್ದು ಇಲ್ಲಿ ನಡೆದಿಲ್ಲ ಎಂಬುದು ಖುಷಿಯ ವಿಚಾರ ಎಂದು ಅಂದುಕೊಂಡು ಹೂಲಾ ಹೂಪ್ಸಿನ ಆಟವನ್ನ ತದೇಕಚಿತ್ತದಿಂದ ನೋಡಿದಳು.

ಹುಡುಗಿಯಷ್ಟೇ ವಯಸ್ಸಿನವಳು, ಒಂದು ಪಿಂಕ್ ಫ್ರಾಕ್ ಹಾಕಿಕೊಂಡು ಥೇಟ್ ಬ್ಯಾಲರೀನಾ ಹಾಗೆ ಕಾಣುತ್ತಿದ್ದಳು, ಮತ್ತೆ ಮತ್ತೆ ಅಲ್ಲೇ ನೋಡಿದಾಗ, “ಅರೇ ಈ ಹುಡುಗಿ ವೆಜ್ ಪೀಜ್ಗಾ ಅಂಗಡಿಯ ಮಾಲಕಿ ಅಲ್ವಾ” ಎಂದು ನೆನೆಸಿಕೊಂಡು ಹೌಹಾರಿದಳು. ಹೊರದೇಶದಲ್ಲಿ ಪೀಝಾ ಅದೂ ವೆಜ್ ಪೀಝಾ ತುಂಬಾ ಚೆನ್ನಾಗಿ ಮಾಡುವ ಜಾಗಗಳು ಸಿಗುವುದು ಕಷ್ಟ ಅಂಥದರಲ್ಲಿ ಈ ಹುಡುಗಿ ತನಗೆ ಬೇಕಾದ ಹಾಗೆ ಪನ್ನೀರನ್ನೂ ಸೇರಿಸಿ ಮಾಡಿಕೊಟ್ಟ ಪೀಝಾವನ್ನ ಆಕೆ ಮರೆಯೋದಕ್ಕೆ ಸಾಧ್ಯ ಇರಲ್ಲಿಲ್ಲ.

ಇದ್ಯಾಕೆ ಹೀಗೆ ಹೂಲಾ ಹೂಪ್ಸ್ ಮಾಡಿಕೊಂಡು ನಿಂತಿದ್ದಾಳೆ ಎಂದು ನೋಡುವಷ್ಟರಲ್ಲಿ ಆಕೆ ಅದನ್ನ ತೆಗೆದಿಟ್ಟು “ಹಿಯರ್ ಮಿ ಹಿಯರ್ ಮಿ” ಎಂದು ಥೇಟ್ ಹನುಮಂತನಗರದ ಬಿಂಬ ತಂಡದವರು ಬ್ಯೂಗಲ್ ರಾಕ್ ಮತ್ತು ಲಾಲ್ ಭಾಗಿನಲ್ಲಿ “ನಾಟಕ, ನಾಟಕ, ಬೀದಿ ನಾಟಕ” ಎಂದು ಕೂಗಿದ ಹಾಗಾಯ್ತು. ನಾಲ್ಕೈದು ಜನ ಕೆಂಪು ಶಾಲ್ ಮತ್ತು ಹಳದಿ ಶಾಲ್ ಹಿಡಿದುಕೊಂಡು ಬಂದು ನಿಂತರು.

“ನಮ್ಮ ಟೌನ್ ಹಾಲಿನ ಮುಂದೆ ಹಲವು ವರ್ಷಗಳ ಕಾಲ ಕಂಡಿದ್ದ ಕೆಂಪು ಹಳದಿ ಶಾಲಿನವರ ಪ್ರತಿಭಟನೆಯೇ ನೆನಪು ಬಂತು” ಎಂದು ನಕ್ಕು ಇವರೇನು ಮಾಡುತ್ತಿದ್ದಾರೆ ಎಂದು ನೋಡಲು ನಿಂತಳು.

ಅಷ್ಟೂ ಜನ ನಿಂತು ಕತಲಾನಿನ ಭಾಷೆಯಲ್ಲಿ ಒಂದು ಪ್ರಾರ್ಥನೆ ಮಾಡಿದರು. ಅದು ದೇವರಿಗೆ ಅಲ್ಲ, ನಾಟಕದ ಗುರುವಿಗೆ. ಥೇಟ್ ನಮ್ಮ ಬೆನಕದ , “ಗಜವದನ ಹೇರಂಬ” ಎಂದು ಹಾಡಿದಂತೆಯೇ ಇತ್ತು. “ಯಾರಾದರೂ ಹಾಡ್ತೀರಾ” ಎಂದು ಇಂಗ್ಲೀಷಿನಲ್ಲಿ ಕೇಳಿದಾಗ, ಹುಡುಗಿಗೆ ತಡೆಯೋಕೆ ಆಗದೆ, “ಓ ಆದಿ ಪ್ರೇಕ್ಷಕನೆ ನಾಟಕದ ಮಾಲಿಕನೆ, ಆದಿ ಪ್ರೇಕ್ಷಕನೆ ಕನೆ ಕನೆ ನೆ ನೆ ನೆ” ಎಂದು ಹುಮ್ಮಸ್ಸಿನಿಂದ ಧ್ವನಿಗೂಡಿಸಿ ಎಲ್ಲರ ಹತ್ತಿರ ಚಪ್ಪಾಳೆ ಗಿಟ್ಟಿಸಿಕೊಂಡಳು.

ಅದಾದ ನಂತರ ಆ ಹೂಲಾ ಹೂಪ್ಸ್ ಹುಡುಗಿ , “ಈಕೆಯ ಭಾಷೆ ನನಗೆ ಅರ್ಥವಾಗಲೇ ಇಲ್ಲ ಆದರೂ ನಾವು ಬೆಸೆದುಕೊಂಡಿದ್ದೇವೆ ಅಂದರೆ ನಾವು ಕತಲನ್ನರು ಅದೆಷ್ಟು ಹೃದಯ ವೈಶ್ಯಾಲ್ಯತೆ ಉಳ್ಳವರು ಹೀಗಿದ್ದಾಗ ಸ್ಪೇನಿನವರ ದಬ್ಬಾಳಿಕೆಯನ್ನು ಸಹಿಸದಿರುವ ಮಟ್ಟಕ್ಕೆ ಬಂದಿದ್ದೇವೆ ಅಂದರೆ ನಮಗೆ ಅದೆಷ್ಟು ಗೊಂದಲಗಳನ್ನು ತೊಂದರೆಗಳನ್ನು ಕೊಟ್ಟಿದ್ದಾರೆ ನೋಡಿ “ ಎಂದು ಡಬಡಬ ತಮಟೆ ಬಡಿಯೋಕೆ ಶುರು ಮಾಡಿದರು.

“ಓಹ್ ಇದು ಏನೋ ಸಿಕ್ಕಾಪಟ್ಟೆ ಆಸಕ್ತಿದಾಯಕವಾಗಿದೆಯಲ್ಲಾ” ಎಂದು ಹುಡುಗಿ ತನ್ನ ಜೇಬು ತಡಕಾಡಿದಳು. ಫೋನ್ ಇರಲ್ಲಿಲ್ಲ. ಎಲ್ಲಿ ಹೋದರೂ ಮೊದಲು ಫೋನ್ ಇಟ್ಟುಕೊಳ್ಳದೇ ಬರದೇ ಇರುವ ಹುಡುಗಿಗೆ ತಬ್ಬಿಬ್ಬಾಯಿತು. ಎಲ್ಲಿಯಾದರೂ ಫೋನ್ ಕಳೆದುಕೊಂಡನಾ ಎಂಬ ಸಂದೇಹವೆಲ್ಲಾ ಬಂದು ನಂತರ ತನ್ನ ಮನೆಯ ಗೌಹಾರಿಗೆ ಕೊಟ್ಟು ವಿಡಿಯೋ ಅದು ಇದು ತೆಗಿ ಎಂದು ಹೇಳಿದ್ದು ನೆನಪಾಗಿ “ಚೇ ಎಂತಹ ಒಳ್ಳೆ ಸೀನ್ ಮಿಸ್ ಆಯಿತಲ್ಲ” ಎಂದು ಬೇಜಾರು ಪಟ್ಟಿಕೊಂಡು ಇವರ ನಾಟಕವನ್ನ ನೋಡೋಕೆ ನಿಂತಳು.

“ಇದು ನಾಟಕವಲ್ಲ ಹೆಣ್ಣುಮಕ್ಕಳ ಕಥೆ, ಇದು ಫೆಮಿನಿಸಮ್ ಇನ್ ಕತಲೂನ್ಯಾ” ಎಂದು ಹೇಳಿ ಮತ್ತೆ ಬಡಬಡ ಎಂದು ತಮಟೆ ಬಡಿದರು. “ಹಾಗಿದ್ದರೆ ಇದು ಸಕ್ಕತ್ ಆಸಕ್ತಿದಾಯಕೆ” ಎಂದು ಇನ್ನೂ ಮುಂದೆ ಹೋಗಿ ನಿಂತಳು. ನಮ್ಮ ಕತಲೂನ್ಯ ಫೆಮಿನಿಸ್ಟ್ ರಿಪಬ್ಲಿಕ್ ಮೊದಲು ಆಗಬೇಕು “ ಎಂದು ಜೋರಾಗಿ ಹೇಳಿದಳು. ಈ ನಾಟಕ ತುಂಬಾ ಬೋರ್ ಎಂದು ಕೆಲವು ಅಂಕಲ್ಲುಗಳು, ಹುಡುಗರು ಮತ್ತು ಕೆಲವು ಆಂಟಿಯರು ಕಾಲುಕಿತ್ತಿದರು.

“ಸ್ವತಂತ್ರ್ಯ ಅಗೋದು ಅಲ್ಲದೇ ಫೆಮಿನಿಸಮ್ ಅದು ಇದು ಎಂದು ಬೇರೆ ಬೊಬ್ಬೆ ಹೊಡೆಯುತ್ತಿದ್ದಾರಲ್ಲ , ಅವರಿಗೇನಾದರೂ ತಲೆ ಇದೆಯಾ ಕರ್ಮ ಇವರದ್ದು” ಎಂದು ಬೈದುಕೊಂಡೇ ಒಂದಷ್ಟು ಜನ ಹೋದರು. “ಗಂಡು ಮತ್ತು ಹೆಣ್ಣು ಸಮಾನಾಗಿ ಈ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ , ಇದರಲ್ಲಿ ಹುಳಿ ಹಿಂಡಿ ಇರೋ ಒಂದು ರೆಫರೆಂಡಮ್ಮನ್ನು ಹಾಳು ಮಾಡಿಕೊಳ್ಳಲು ನಮಗೆ ಇಷ್ಟ ಇಲ್ಲ” ಎಂದು ಒಬ್ಬಳು ಹುಡುಗಿ ಮತ್ತು ಹೂಲಾ ಹೂಪ್ಸ್ ಹುಡಗಿಯಷ್ಟೇ ವಯಸ್ಸವಳು ಸಹ 50 ಸೆಂಟ್ಸ್ ಎಸೆದು ಹೋದಳು.

“ಆರ್ಟಿಕಲ್ 155 ಬರೀ ಕತಲೂನ್ಯಾಗೆ ಹಾನಿಕಾರಕ ಅಲ್ಲ ಇಲ್ಲಿನ ಹೆಣ್ಣುಮಕ್ಕಳಿಗೂ ಹಾನಿಕಾರಕ” ಎಂದು ಕಿರುಚುವ ಸನ್ನಿವೇಶವನ್ನ ಅಲ್ಲಿ ಅಭಿವ್ಯಕ್ತ ಪಡಿಸಿದರು. ಆರ್ಟಿಕಲ್ 155 ಸ್ಪೇನಿನ ಸಂವಿಧಾನದಲ್ಲಿರುವ 2 ಪ್ಯಾರಾಗ್ರಾಫಿನ ಆರ್ಟಿಕಲ್. ಇದರಲ್ಲಿ ಸ್ಪೇನಿನ ವಿರುದ್ಧ ಹೋಗುವ ಅಥವಾ ಅವರ ಸಾರ್ವಭೌಮತ್ವಕ್ಕೆ ಧಕ್ಕೆ ಬರುವ ಯಾವುದೇ ವಿಷಯ, ವಸ್ತು, ಪ್ರಾಂತ್ಯ ಮತ್ತು ಮನುಷ್ಯರನ್ನ ಯಾವುದೇ ಕಾರಣಕ್ಕೂ ಬಿಡದೆ ಸಂವಿಧಾನವನ್ನ ಉಲ್ಲಂಘನೆ ಮಾಡಿದ್ದಾರೆ ಎಂದು ಘನಘೋರ ಶಿಕ್ಷೆ ಕೊಡುವ ಎಲ್ಲಾ ವಿಷಯಗಳು ಇಲ್ಲಿವೆ.

ಈ ಆರ್ಟಿಕಲ್ ವಿರುದ್ಧ ಹೋದವರನ್ನ ಅಥವಾ ಅದನ್ನ ಬೆಂಬಲಿಸುವ ಗುಂಪುಗಳಿಗೆ ಬೇಲ್ ಇಲ್ಲದ ಶಿಕ್ಷೆ ಕೊಡುವ ಹುನ್ನಾರವೂ ಅಲ್ಲಿದೆ.

ಇದರ ವಿರುದ್ಧ ಹೋರಾಡುವವರಲ್ಲಿ ಜಾಸ್ತಿ ಇರೋದು ಹೆಣ್ಣುಮಕ್ಕಳೇ. ಹೆಣ್ಣುಮಕ್ಕಳ ಸ್ವಸಹಾಯ ಗುಂಪುಗಳನ್ನ ಚದುರಿಸಿ ಅವರಿಗೆ ಬೇಕಾದ ಸರ್ಕಾರದ ಸವಲತ್ತುಗಳನ್ನ ಕಟ್ ಮಾಡಿ , ಅಲ್ಲಿನ ಹೆಣ್ಣುಮಕ್ಕಳ ಬೆನ್ನು ಮೂಳೆ ಮುರಿದು ದೇಶದ್ರೋಹದ ನೆವದಲ್ಲಿ ಅವರನ್ನ ಬಂಧಿಸಿ ಕೆಲವೊಮ್ಮೆ ಲೈಂಗಿಕ ಕಿರುಕುಳವನ್ನೂ ನೀಡಿದ್ದಾರೆ. ಈ ಅಧಿಕಾರಶಾಹಿಯ ವಿರುದ್ಧ ನಾವು ಹೋರಾಡಬೇಕು , ಅದರ ಅವಶ್ಯಕತೆ ಇದೆ ಎಂಬುದರ ಬಗ್ಗೆಯೇ ಈ ನಾಟಕ ನಿಮ್ಮ ಪ್ರಸ್ತುತಿಗೆ ಎಂಬ ಕಾಂಟೆಕ್ಷ್ಟ್ ಕೊಟ್ಟು ಹೂಲಾ ಹೂಪ್ಸ್ ಹುಡುಗಿ ನಿಂತಳು.

1928ರಲ್ಲೇ ಎಲ್ ಕ್ಲಬ್ ಫ಼ೆಮಿನಿ ದೆ ಎಸ್ಪೋರ್ತ್ಸೆ ಬಾರ್ಸಿಲೋನಾ ಎಂಬ ಮಹಿಳೆಯರ ಕ್ರೀಡಾ ಕ್ಲಬ್ ಶುರುವಾಗಿತ್ತು, ಅದರಲ್ಲಿ ಪುರುಷರು ಮಾತ್ರ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಾರೆ, ಹೆಣ್ಣುಮಕ್ಕಳಿಗೆ ಆ ಸವಲತ್ತು ಇಲ್ಲ ಆ ಕಾರಣಕ್ಕೆ ಇದನ್ನ ಶುರುಮಾಡಲಾಯಿತು. ಲಯೆಸೆಮ್ ಕ್ಲಬ್ ಎಂಬ ಸೋಶಿಯಲ್ ಕ್ಲಬಿಗಿಂತ ಇದು ತುಂಬ ಸವಲತ್ತುಗಳನ್ನ ಹೊಂದಿತ್ತು.

ಇಲ್ಲಿ ಹೆಣ್ಣುಮಕ್ಕಳು ಸಂಘಟಿತರಾಗಿ ಕತಲೂನ್ಯಾದ ಹೋರಾಟಕ್ಕೋಸ್ಕರ ರೂಪುರೇಷಗಳನ್ನ ಸಿದ್ಧ ಪಡಿಸುತ್ತಿದ್ದರು. 1928ರಿಂದ ಹೆಣ್ಣುಮಕ್ಕಳಿಗೆ ಸ್ವತಂತ್ರ್ಯ ಪಡಯಬೇಕು ಎಂಬ ಅರಿವಿತ್ತು, ಅಂತಹ ಸಂಸ್ಥೆಗಳನ್ನ ಸಹ ಬಹಳ ವ್ಯವಸ್ತಿತವಾಗಿ ನಾಶಮಾಡಿ ಹೆಣ್ಣುಮಕ್ಕಳಿಗೆ ಈ ಹೋರಾಟದಲ್ಲಿ ಯಾವ ಭಾಗವೂ ಇಲ್ಲದ ಹಾಗೆ ಮಾಡುತ್ತಿರುವವರ ಫ್ಯಾಸಿಸಮ್ ಗೆ ಧಿಕ್ಕಾರ ಎಂದು ಹೇಳಿ ಹಾಡುಗಳನ್ನ ಹಾಡಲು ಶುರು ಮಾಡಿದಳು.

ಆದರೆ ಆ ಸಮಯದಲ್ಲಿ ಇನ್ನೂ ಅವರಿಗೆ ಮತದಾನದ ಹಕ್ಕಿರಲ್ಲಿಲ್ಲ. ಎನ್ರಿಕೆಟಾ ಗಿಲಾನೆಟಾ ಎಸ್ಕೆರಾ ರಿಪಬ್ಲಿಕನ್ ದೆ ಕತಲೂನ್ಯ ಅರ್ಧ ಮಿಲಿಯನ್ ಹೆಣ್ಣುಮಕ್ಕಳ ಸಹಿಯನ್ನು ಸಂಗ್ರಹಿಸಿ ಹೆಣ್ಣುಮಕ್ಕಳಿಗೆ ಮತದಾನದ ಹಕ್ಕು ಬೇಕು ಎಂದು ಆಗ್ರಹ ಪಡಿಸಿ ಕತಲೂನ್ಯದ ಸ್ವಾಯತ್ತತೆಗೆ ಮತ್ತು ನೂರಿಯಾಳ ವಿಗ್ರಹ ಪ್ರತಿಷ್ಟಾಪನೆಗ ಈ ಮತದಾನದ ಹಕ್ಕು ಬೇಕು ಎಂದು ಗಲಾಟೆ ಎಬ್ಬಿಸಿದ್ದರು.

ಇಷ್ಟೆಲ್ಲಾ ಆದಾಗ ಆಕೆ ಇದ್ದಕಿದ್ದಂತೆ ಒಮ್ಮೆ ನಾಪತ್ತೆ ಆದಳು, ಅದು ಫ್ರಾಂಕೋ ಸರ್ಕಾರದ್ದೇ ಕೆಲಸ ಎಂದು ಅನ್ನುವಾಗ ಹುಡುಗಿಗೆ , “ಮರಳು ಮಾಡಕ ಹೋಗಿ ಮರುಳ ಸಿದ್ಧನ ರಾಣಿ ಮರುಳಾಗಿ ಹೋದಳು ಜಂಗಮಯ್ಯನಿಗ……..” ಎಂಬ ರಂಗಗೋತೆ ನೆನಪಾಯಿತು… ಗೌಹರ್ ಬಂದು ಭುಜ ತಟ್ಟಿದಳು.. ಆಮೇಲೆ…

October 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: