­ಮಂಗಾಟೆ ಹಕ್ಕಿಗಳ ­ಗಲಾಟೆ ­ಸಂಸಾರ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿಗೆ ವಲಸೆ ಬರುವ ಮಂಗಾಟೆ ಹಕ್ಕಿಗಳ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

। ಕಳೆದ ಸಂಚಿಕೆಯಿಂದ ।

­ಒಂದು ­ಸಂಜೆ ­ಸುಮಾರು ­ನಾಲ್ಕು ­ಗಂಟೆ ­ಸಮಯ. ­ಕುಪ್ಪಳಿ ­ಕಾಡಿನ ­ತುಂಬ ವಿಚಿತ್ರತರ ವಾದ ­ಸಮೂಹ ­ಶಬ್ದ. ­ನಾಲ್ಕಾರು ­ಮಕ್ಕಳು ­ಒಟ್ಟಿಗೇ ­ಸೇರಿ ಅಳುತ್ತಿರುವಂತೆ ಭಾಸ­ವಾಗುವ ­ಸದ್ದು.

ಹೇಮಾಂಗ­ಣದ ­ನನ್ನ ಕೊಠ­ಡಿಯಲ್ಲಿ ಮಲ­ಗಿದ್ದ ­ನನಗೆ ­ಈ ವಿಚಿತ್ರತರ ­ಸದ್ದು ­ದಿಗಿಲು ಹುಟ್ಟಿಸಿತು. ­ಎದ್ದು ಕೊಠ­ಡಿ­ಯಿಂದ ­ಈಚೆ ­ಬಂದೆ. ­ಗುಂಡ ಕಾಣ­ಲಿಲ್ಲ. ಹೇಮಾಂಗ­ಣದ ಹಿಂಭಾಗದಲ್ಲಿ ­ಅರಣ್ಯ ­ಇಲಾಖೆಯ ­ಪುಟ್ಟ ವನ­ವಿದೆ. ­ಅಲ್ಲಿ ­ಎತ್ತರದ ಮರಗಳೂ, ಮರಗಳ ನಡುವೆ ­ಒಂದು ­ನೀರಿನ ­ಸಹಜ ­ಕೊಳವೂ ­ಇದೆ. ­ಅಲ್ಲಿಂದ ­ಈ ­ಸದ್ದು ­ಹೊರ ಹೊಮ್ಮುತ್ತಿತ್ತು.

­ಕುವೆಂಪು ಪ್ರತಿಷ್ಠಾ­ನದ ­ನೌಕರ ಸುರೇಶ ­ಆಚೆ ನಿಂತಿದ್ದವನು ‘ನಮಸ್ಕಾರ ­ಸಾರ್’ ­ಅಂದ. ­ಅವನನ್ನು ­ಒಮ್ಮೆ ­ದಿಟ್ಟಿಸಿ ­ನೋಡಿದೆ. ಸಹ­ಜ­ವಾ­ಗಿದ್ದ, ನನ್ನತರ ­ಯಾವುದೇ ದಿಗಿಲುಗೊಂಡ­ವ­ನಂತೆ ­ಇರಲಿಲ್ಲ. ಯೋಚಿ­ಸಿದೆ, ­ಇದು ­ಯಾವುದೋ ­ಹಕ್ಕಿಯ ಸದ್ದಿರಬೇಕು, ­ಆದರೂ ಖಚಿತಪಡಿ­ಸಿಕೊಳ್ಳಲು ‘­ಏನೋ ­ಮಾರಾಯ ಈ ­ವಿಚಿತ್ರ ­ಸದ್ದು? ­ಮಕ್ಕಳು ­ಅತ್ತಂತಿದೆ ­ಎಂದೆ. ‘­ಸಾರ್ ­ಅದು ­ಮಂಗಾಟೆ ಹಕ್ಕಿಗಳ ­ಸದ್ದು, ವರ್ಷಕ್ಕೊಮ್ಮೆ ­ಈ ತಿಂಗಳಲ್ಲಿ ಎಲ್ಲಿಂದಲೋ ­ಬಂದು ಬಿಡುತ್ತವೆ. ­ಅಯ್ಯೋ ­ಅವುಗಳ ­ರಂಪಾಟ ಹೇಳತೀರದು’ ­ಎಂದ.

­ಈ ­ರೀತಿಯ ­ಹಕ್ಕಿಯ ­ಕೂಗನ್ನು ­ನಾನು ­ಎಂದೂ ಕೇಳಿರ­ಲಿಲ್ಲ. ­ಕಳೆದ ­ಮೂವತ್ತು ವರ್ಷಗ­ಳಿಂದ ­ಪಶ್ಚಿಮ ಘಟ್ಟಗಳಲ್ಲಿ ಅಡ್ಡಾಡಿದ್ದೆ­ನಾದರೂ ­ಈ ಬಗೆಯ ­ವಿಚಿತ್ರ ­ಸದ್ದಿನ ­ಹಕ್ಕಿ ನೋಡಿರ­ಲಿಲ್ಲ. ‘­ಇನ್ನೂ ­ಎಷ್ಟು ­ದಿನ ಇಲ್ಲಿರುತ್ತವೆ?’ ­ಎಂದು ­ಕೇಳಿದೆ. ­‘­ಇನ್ನೂ ತಿಂಗಳುಗಟ್ಟಲೆ ­ಇರ್ತವೆ ­ಸಾರ್‌’ ­ಎಂದು ಅವನು ­ಹೊರಟ. ­ನಾಳೆ ­ಗುಂಡನ ­ಜೊತೆ ­ಹೋಗಿ ­ಈ ಹಕ್ಕಿಗಳನ್ನು ಹತ್ತಿರ­ದಿಂದ ­ನೋಡಬೇಕು ­ಎಂದು ನಿಶ್ಚ­ಯಿಸಿದೆ. ­ಸಂಜೆಯ ­ನಂತರ ಹಕ್ಕಿಗಳ ಗಲಾಟೆ ಕಡಿಮೆಯಾಗಿ ­ಸ್ತಬ್ಧವಾಯಿತು.

­ಬೆಳಿಗ್ಗೆ ­ಮತ್ತೆ ಹಕ್ಕಿಗಳ ­ಕೂಗಾಟ ಆರಂಭವಾಯಿತು. ­ಗುಂಡ ಏಳುವುದನ್ನೇ ­ಕಾಯುತ್ತ ­ಕೂತಿದ್ದ ­ನಾನು ಬೆಳ­ಗಿನ ವಾಕಿಂಗ್‌ಗೆ ­ಅವನನ್ನೂ ಕರೆದುಕೊಂಡು ­ಹೊರಟೆ. ­ಕುಪ್ಪಳಿ ಪರಿ­ಸರದ ಮರಗಳ ­ತೋಪಿನ ­ಅನೇಕ ಕಡೆಗಳಲ್ಲಿ ­ಆ ­ಮಂಗಾಟೆ ­ಹಕ್ಕಿಗಳು ಗುಂಪುಗೂ­ಡಿಕೊಂಡು ತೀವ್ರತರದ ಸಂಭಾ­ಷಣೆಯಲ್ಲಿ ತೊಡಗಿದ್ದವು. ­ನಮಗೆ ­ಅದು ಅಳುವಿ­ನಂತೆ ಭಾಸ­ವಿದ್ದರೂ ಅವುಗ­ಳಿಗೆ ­ಅದು ­ಸುಗಮ ಸಂಭಾ­ಷಣೆಯೇ ­ಇರಬಹುದು.

‘­ಎಷ್ಟು ವರ್ಷಗ­ಳಿಂದ ­ಈ ­ಮಂಗಾಟೆ ಹಕ್ಕಿಗಳನ್ನು ­ನೋಡಿದ್ದೀಯ ­ಗುಂಡ?’ ­ಎಂದು ಪ್ರಶ್ನಿ­ಸಿದೆ. ‘­ಹೇ ­ನಾನು ಹುಟ್ಟಾ­ಗಿಂದ ­ವರ್ಷ ­ವರ್ಷ ­ಬತ್ತನೇ ಇರ್ತವೆ’ ­ಎಂದ. ­ನಾನು ­ಅಲ್ಲಲ್ಲಿ ­ನಿಂತು ­ಅವುಗಳ ­ಪೋಟೋ ­ತೆಗೆಯಲು ­ನೋಡಿದೆ. ­ಎತ್ತರದ ಮರಗಳ ­ತುದಿಯಲ್ಲಿ ­ಕೂರುವ ­ಹಕ್ಕಿಗಳು ಕ್ಷಣ­ಕ್ಷ­ಣಕ್ಕೆ ರೆಂಬೆ­ಯಿಂದ ­ರೆಂಬೆಗೆ ಹಾರಾಡುತ್ತಲೇ ­ಇರುತ್ತವೆ. ­ಆದರೆ ­ಅವುಗಳ ಗಂಟ­ಲಿಗಂತೂ ­ಬಿಡುವೇ ­ಇಲ್ಲ. ­ನನ್ನಲ್ಲಿ ­ಇರುವುದು ­ಸಾಮಾನ್ಯ ­ಮಟ್ಟದ ಕ್ಯಾನನ್ ­ಕ್ಯಾಮೆರಾ. ­ಅದಕ್ಕೆ ­ಜೂಂ ಅಳವ­ಡಿಸಲು ಸಾಧ್ಯ­ವಿಲ್ಲ. ­ಜೊತೆಗೆ ­ನಾನು ಹೇಳಿಕೊಳ್ಳುವಂಥ ­ನುರಿತ ಛಾಯಾಗ್ರಾ­ಹ­ಕನೂ ­ಅಲ್ಲ.

ಸ್ಪಷ್ಟ­ವಾದ ­ಪೋಟೋ ­ತೆಗೆಯಲು ಸಾಧ್ಯ­ವಾಗ­ಲಿಲ್ಲ. ­ಆದರೆ ­ಅವುಗಳ ­ಆಕಾರ, ­ಬಣ್ಣ, ಚಲ­ನ­ವ­ಲನ ಚೆನ್ನಾ­ಗಿಯೇ ಗೋಚರವಾಯಿತು. ­ಅವುಗಳ ದೊಡ್ಡ ­ಗಂಟಲು ­ಸದ್ದು ­ಕೇಳಿ ­ಇವು ­ಬಾರಿ ­ಗಾತ್ರದ ­ಹಕ್ಕಿ ­ಇರಬಹುದು ­ಎಂದುಕೊಂಡಿದ್ದೆ. ­ನೋಡಿ ­ನನಗೆ ನಿರಾ­ಸೆಯಾಯಿತು. ­ಅಷ್ಟೇನೂ ­ದೊಡ್ಡ ಹಕ್ಕಿಯಲ್ಲ. ಹೆಚ್ಚೆಂದರೆ ಪುಟ್ಟ ಹದ್ದಿನಷ್ಟು ­ಗಾತ್ರ ­ಇರಬಹುದು.

ಬೂದು ಬಣ್ಣದ ರೆಕ್ಕೆಗಳು, ಹಿಂದೆ ಉದ್ದನೆಯ ಕಪ್ಪು ಪುಕ್ಕ ­ಈ ಹಕ್ಕಿಗಳ ವಿಶೇ­ಷ ವೆಂದರೆ ­ಅವುಗಳ ಶರೀರವನ್ನು ­ಮೀರಿದ ­ದೊಡ್ಡ ­ಕೊಕ್ಕುಗಳು! ­ಹಳದಿ ­ಬಣ್ಣದ ­ಆ ­ಕೊಕ್ಕುಗಳು ­ತುಂಬಾ ಗುಡುಸಾ­ಗಿಯೇ ­ಇದ್ದಂತೆ ­ಕಂಡಿತು.

ಅವುಗಳ ­ವಿಕಾರ ­ಧ್ವನಿ ­ಮತ್ತು ­ದೊಡ್ಡ ­ಕೊಕ್ಕು ಅವುಗ­ಳಿಗೊಂದು ವಿಶೇ­ಷತೆ ­ತಂದುಕೊಟ್ಟಿದೆ. ­ಬೆಳಿಗ್ಗೆ ಆರ­ರಿಂದ ­ಎಂಟು ಗಂಟೆಯವರೆಗೂ ಗುಂಡನ ­ಜೊತೆ ­ಅಡ್ಡಾಡಿ ­ಮಂಗಾಟೆ ಹಕ್ಕಿಗಳ ­ಗಲಾಟೆ ಸಂಸಾರವನ್ನು ­ನೋಡಿ ಬರುತ್ತಿರುವಾಗ ತೇಜಸ್ವಿಯವರು ­ಈ ಹಕ್ಕಿಗಳ ­ಬಗ್ಗೆ ಬರೆ­ದಿರ ಬಹುದಲ್ಲವೇ? ­ಎಂಬ ­ವಿಷಯ ­ಹೊಳೆಯಿತು.

ಕಚೇ­ರಿಗೆ ಬಂದ­ವನೆ ­ಲೈಬ್ರರಿಯ ­ಬೀಗ ­ತೆಗೆದು ತೇಜಸ್ವಿಯವರ ‘­ಕನ್ನಡ ­ನಾಡಿನ ­ಹಕ್ಕಿಗಳು’ ಪುಸ್ತ ಕವನ್ನು ಹೊರತೆಗೆದೆ. ಪೂರ್ಣಚಂದ್ರ ತೇಜಸ್ವಿಯವರು ­ಮುಟ್ಟದ ವಿಷಯವೇ ­ಇಲ್ಲವೇನೋ! ­ಮಂಗಾಟೆ ಹಕ್ಕಿಗಳ ­ಬಗ್ಗೆ ­ಅವರು ­ಹೀಗೆ ಬರೆ­ದಿದ್ದಾರೆ.

­ನಮ್ಮ ­ತೋಟದ ­ಬಳಿಯ ­ಕಾಡಿನ ನಿಃಶ­ಬ್ದದಲ್ಲಿ ­ನೀವು ­ಸುಮ್ಮನೆ ಕೆಲಕಾಲ ಕುಳಿ­ತಿದ್ದರೆ ­ನಿಮಗೆ ­ಆಗೀಗ ಕಾಡೊಳಗೆ ­ಯಾರೋ ಗಹಗ­ಹಿಸಿ ­ನಕ್ಕಂತೆ ಸದ್ದು ಕೇಳುತ್ತದೆ. ಹೊಸ­ಬರಾದರೆ ಇದ್ದಕ್ಕಿದ್ದ­ಹಾಗೆ ಸಾಮೂಹಿ­ಕ­ವಾಗಿ ­ಕೇಳುವ ನಗುವಿನ ­ಶಬ್ದಕ್ಕೆ ಕಕ್ಕಾ­ಬಿಕ್ಕಿ­ಯಾಗಿ ಹೆದ­ರಿಯೇ ಬಿಡುತ್ತಾರೆ. ವಾಸ್ತ ವ­ವಾಗಿ ­ಕಾಡಿನ ­ಮಂಗಟ್ಟೆ ­ಹಕ್ಕಿಗಳು ­ಕೂಗುವ ­ಸದ್ದು ­ಇದು. ­ಮಂಗಟ್ಟೆ ­ಹಕ್ಕಿಗಳು ನಮ್ಮೂರಿನ ­ಬಳಿ ಅಪರೂಪವಾಗೇ ­ಇದ್ದುವು. ­

ಬಹುಶಃ ­ಅವು ­ದೊಡ್ಡ ಹಕ್ಕಿಗಳಾದ್ದ­ರಿಂದ ­ಇಲ್ಲಿನ ಶಿಕಾ­ರಿದಾರರು ­ಯಾವ ಶಿಕಾ­ರಿಯೂ ಆಗ­ದಿದ್ದರೆ ­ಇವುಗಳನ್ನೇ ­ಹೊಡೆದು ­ತೆವಲು ತೀರಿಸಿಕೊಳ್ಳುತ್ತಿದ್ದುದು ­ಕಾರಣ ­ಇರಬೇಕು. ­ಇದಲ್ಲದೆ ­ನಮ್ಮ ಕಾಡಿ­ನಲ್ಲಿ ­ಮಂಗಟ್ಟೆ ಹಕ್ಕಿಗ­ಳಿಗೆ ಅಗತ್ಯ­ವಾದ ­ಗೋಣಿ, ­ಆಲ, ­ಬಸರಿ ಮೊದಲಾದ ಹಣ್ಣಿನ ಮರಗಳ ಕೊರತೆಯೂ ­ಒಂದು ಕಾರ­ಣ­ವಿರಬಹುದು.

ದಿನಗಳೆದಂತೆ ­ಕೋವಿಯ ­ತೋಟಾ ­ಬೆಲೆ ­ಏರಿ ಕೋವಿಯಲ್ಲಿ ­ಮಂಗಟ್ಟೆ ಹಕ್ಕಿಗಳನ್ನು ­ಶಿಕಾರಿ ­ಮಾಡುವುದು ­ನಷ್ಟದ ಬಾಬತ್ತಾದುದ­ರಿಂದ ಶಿಕಾರಿದಾರರು ­ಇವುಗಳ ­ಮೇಲೆ ಕೋವಿಯೆತ್ತುವುದನ್ನು ನಿಲ್ಲಿ­ಸಿದರು. ­ಅಲ್ಲದೆ ­ನಾನು ­ಕಾಫಿ ­ತೋಟದಲ್ಲಿ ನೆರ­ಳಿಗೆಂದು ಮಿಸಾಪ್ಸಿಸ್ ­ಎಂಬ ­ಒಂದು ­ಬಗೆಯ ­ಮರ ­ತಂದು ­ನೆಟ್ಟೆ. ಪರದೇ­ಶದ ­ಈ ­ಮರ ­ಬಹು ­ಬೇಗ ಬೆಳೆಯುತ್ತದೆ. ­ಜೊತೆಗೆ ­ನೇರಿಳೆ ­ಹಣ್ಣಿನ ­ಗಾತ್ರದ ಹಣ್ಣುಗಳನ್ನೂ ಬಿಡುತ್ತದೆ. ­

ಈ ­ಮರಗಳು ­ನಮ್ಮ ­ತೋಟದ ಆಸುಪಾಸಿ­ನಲ್ಲಿ ­ತುಂಬಾ ಆದಮೇಲೆ ವರ್ಷ­ವೀಡೀ ­ದೊರೆಯುವ ­ಇವುಗಳ ಹಣ್ಣಿಗಾಗಿ ­ಈಗ ­ಮಂಗಟ್ಟೆ ­ಹಕ್ಕಿಗಳು ಸದಾ ­ನಮ್ಮ ­ತೋಟದಲ್ಲಿ ಬಿದ್ದುಬಿದ್ದು ನಗುವಂತೆ ­ಸದ್ದು ­ಮಾಡುತ್ತಾ ಹಾರಾಡುತ್ತಿರುತ್ತವೆ. ಬೆಳ­ಗಿನ ­ಹೊತ್ತಂತೂ ­ಮಿಕ್ಕೆಲ್ಲಾ ಹಕ್ಕಿಗಳ ­ಕೂಗನ್ನೂ ­ಮೀರಿಸಿ ­ಮಂಗಟ್ಟೆ ­ಹಕ್ಕಿಗಳು ­ಕೇಕೆ ­ಹಾಕುವುದು ­ಕೇಳಬಹುದು.

ನಮ್ಮಲ್ಲಿಗೆ ­ಬರುವ ­ಎಲ್ಲಾ ಅತಿಥಿಗಳೂ ­ಕಾಡಿನ ನಿಃಶ­ಬ್ದದಲ್ಲಿ ಹಠಾತ್ತಾಗಿ ಕೇಳಿ­ಬರುವ ­ಇವುಗಳ ­ನಗು ಕೇಕೆಗ­ಳಿಗೆ ಚಕಿತರಾಗಿ ಕಾಡಿ­ನಲ್ಲಿ ­ಯಾರೋ ಕೂಗುತ್ತಿದ್ದಾರೆಂದು ­ನನ್ನನ್ನು ಒಮ್ಮೆಯಾದರೂ ಎಚ್ಚರಿ­ಸದೆ ಇರುವು­ದಿಲ್ಲ.

ಮಿಂಚುಳ್ಳಿಗಳ ­ಉದ್ದನೆಯ, ನಡುಭಾಗ ­ಚಪ್ಪಟೆ ­ಇರುವ ­ಕೊಕ್ಕುಗಳು ­ಅವಕ್ಕೆ ­ಮೀನು ­ಹಿಡಿಯಲು ಅನುಕೂ­ಲ­ವಾಗುವಂತೆ ­ಇವೆ. ­ಅದೇ ­ರೀತಿ ­ಜೇನು ಕುಟುರಗಳ ­ಉದ್ದನೆಯ ಭರ್ಜಿಯಂಥ ­ಕೊಕ್ಕುಗಳು ­ಜೇನು ­ಹಿಡಿದು ­ಅವುಗಳ ­ಕೈಲಿ ಕಚ್ಚಿ­ಸಿಕೊಳ್ಳದೆ ­ಕೊಂದು ತಿನ್ನುವುದಕ್ಕೆ ಅನುಕೂ­ಲ­ವಾಗುವಂತೆ ­ಇದೆ. ­ಆದರೆ ­ಮಂಗಟ್ಟೆ ಹಕ್ಕಿಗಳ ­ಮಹಾ ­ಕೊಕ್ಕುಗಲು ­ಅದರ ­ಯಾವ ಅನುಕೂ­ಲಕ್ಕಾಗಿ ­ಇವೆಯೋ ಹೇಳಲಾರೆ. ­

ಸದಾ ­ಹಣ್ಣಿನ ಮರಗಳಲ್ಲಿ ಗುಂಪುಕೂ­ಡಿಕೊಂಡು ­ಗಲಭೆ ­ಮಾಡುತ್ತಾ ­ಹಣ್ಣು ­ತಿನ್ನುವ ­ಇವಕ್ಕೆ ­ತಮ್ಮ ­ತಲೆಯ ­ಎರಡು ಮೂರರಷ್ಟು ದೊಡ್ಡದಿರುವ ಅಗಾಧ ಕೊಕ್ಕುಗಳ ಅಗತ್ಯವೇನೋ ­ಅವನ್ನು ಸೃಷ್ಟಿ­ಸಿದ ಬ್ರಹ್ಮ­ನನ್ನೇ ­ಕೇಳಬೇಕು. ತುತ್ತೂರಿಯಂತಿರುವ ­ಈ ­ಕೊಕ್ಕುಗಳು ­ಅವುಗಳ ­ಕೇಕೆ ­ಸದ್ದನ್ನು ಕಾಡಿ­ನಲ್ಲಿ ­ಎರಡು ­ಮೂರು ­ಪಟ್ಟು ಹೆಚ್ಚಿ­ಸ­ಬಹುದೇನೋ. ­ಇದು ­ಬಿಟ್ಟರೆ ­ಮಂಗಟ್ಟೆ ಹಕ್ಕಿಗ­ಳಿಗೆ ­ಆ ­ಮಹಾ ­ಕೊಕ್ಕುಗಳು ­ಯಾವ ­ವಿಶಿಷ್ಟ ಉಪಯೋಗಕ್ಕೆ ­ಇವೆಯೆಂದು ಹೇಳ­ಬರುವು­ದಿಲ್ಲ.

­ನಾನು ­ನಮ್ಮ ಬಯಲುಸೀಮೆಯಲ್ಲಿ ­ಅನೇಕ ­ಬಗೆಯ ಹಕ್ಕಿಗಳನ್ನು ನೋಡುತ್ತಲೇ ಬೆಳೆದವನು. ­ಮನೆಯ ಸೂರಿ­ನಲ್ಲೇ ವಾಸ­ವಿರುತ್ತಿದ್ದ ­ಗುಬ್ಬಚ್ಚಿ, ಊರಾಚೆಯ ­ತೋಪಿನಲ್ಲಿ ತಲೆಕೆಳಗಾಗಿ ­ನೇತು ಹಾಕಿಕೊಳ್ಳುತ್ತಿದ್ದ ಹಿರೇ­ಹಕ್ಕಿ (ದೊಡ್ಡ ಬಾವಲಿ), ನೆಲದಲ್ಲಿಯೇ ಬುಡಬುಡನೆ ಓಡುತ್ತಿದ್ದ ­ಗೌಜಲ ಹಕ್ಕಿಗಳು, ­ಎಲ್ಲೆಲ್ಲಿಯೂ ­ಅಡ್ಡ ಸಿಗುತ್ತಿದ್ದ ­ಕಾಡಕ್ಕಿ, ಮಾಳಿಗೆ­ಯಿಂದ ಮಾಳಿಗೆಗೆ ಹಾರುತ್ತಿದ್ದ ಪಾರಿ­ವಾಳಗಳು, ಹಸಿರೆಲೆಯ ­ನಡುವೆ ಹಸಿರಾ­ಗಿಯೇ ಕುಂತು ­ಹತ್ತಿರ ಹೋಗುತ್ತಿದ್ದಂತೆ ­ಗುಂಪಾಗಿ ಹಾರುತ್ತಿದ್ದ ­ಗಿಳಿಗಳು, ಸೋರೆ­ಹಕ್ಕಿ, ನೀರ­ಹಕ್ಕಿ, ­ತೀನೆ ­ಹಕ್ಕಿ, ­ಕೊಕ್ಕರೆ, ಬುಂಡುಬಳಕ, ­ನವಿಲು, ­ಹದ್ದು, ರಣ­ಹದ್ದು, ­ಗರುಡ, ­ಕಾಗೆ, ­ಕೋಗಿಲೆ… ­ಇತ್ಯಾದಿ ­ಇತ್ಯಾದಿ. ­ಕನ್ನಡ ವಿಶ್ವ­ವಿದ್ಯಾ­ಲಯದ ­ನಮ್ಮ ­ವಿಶಾಲ ವಿದ್ಯಾರಣ್ಯ ಆವರ­ಣವೂ ­ಕಡಿಮೆ ­ಏನಿಲ್ಲ. ನೂರಾರು ­ಬಗೆಯ ಹಕ್ಕಿಗಳ ­ತಾಣ ­ಅದು.

­ಆದರೆ ಮಲೆ­ನಾ­ಡಿನ ಹಕ್ಕಿಗಳ ­ವೈವಿಧ್ಯ ­ಇನ್ನೂ ­ಹೆಚ್ಚು. ಬೆಳ­ಗಿನ ­ಹೊತ್ತು ಕವಿಶೈ­ಲದಲ್ಲಿ ತಪಸ್ವಿಯಂತೆ ­ಕುಳಿತು ಕಿವಿಗೊಟ್ಟರೆ ­ಅದೆಷ್ಟು ಪಕ್ಷಿಗಳ ವೈವಿಧ್ಯಮಯ ­ಇಂಪು ­ದನಿಗಳು ನಿನಾ­ದಿಸುತ್ತವೆ. ­ಹಕ್ಕಿ ಪಕ್ಷಿಗಳ ­ದನಿ ­ಕೇಳಲು ­ನಾನು ­ಒಂದಿಷ್ಟು ಸ್ಥಳಗಳನ್ನು ­ಗುರುತು ಮಾಡಿಕೊಂ­ಡಿದ್ದೇನೆ. ಕವಿಶೈ­ಲದ ­ಬಂಡೆ, ­ಕವಿ ­ಮನೆಯ ­ಕಾಡಿನ ­ತಪ್ಪಲು, ಹೇಮಾಂಗ­ಣದ ­ಅರಣ್ಯ ­ಇಲಾಖೆಯವರು ನಿರ್ಮಿಸಿರುವ ­ವಿಶ್ರಾಂತಿ ­ಗೃಹ, ಹೇಮಾಂಗ­ಣದ ಹಿಂಭಾಗದಲ್ಲಿ ­ಇರುವ ­ಅರಣ್ಯ ­ಇಲಾಖೆಯ ಪರಿ­ದಿಯಲ್ಲಿರುವ ಮರಗಳ ­ತೋಪಿನ ­ಪುಟ್ಟ ­ಕೊಳದ ­ಅಂಚು.

­ಇಲ್ಲೆಲ್ಲ ­ಹೆಚ್ಚು ಜನ­ಸಂಚಾರ­ವಿಲ್ಲ. ನೀರ­ವತೆಯಲ್ಲಿ ­ಕುಂತು ­ಆ ಇಂಚರಗಳನ್ನು ಆಲಿ­ಸಬೇಕು. ­ಒಮ್ಮೆ ಹೇಮಾಂಗ­ಣದ ­ಒಂದು ­ಅಂಚಿನಲ್ಲಿ ಭೂಮಿಯಿಂದ ಮೇಲ್ಭಾಗಕ್ಕೆ ­ಎದ್ದು ಬಂದಂ­ತಿರುವ ­ಮರದ ಬೇರೊಂದರ ­ಬಳಿ ­ಸುಮ್ಮನೆ ­ಕುಂತಿದ್ದೆ. ­ಯಾವುದೋ ­ಅದೃಶ್ಯ ­ಪಕ್ಷಿಯೊಂದು ತಾಳಬದ್ಧ­ವಾಗಿ ­ಅತ್ಯಂತ ಆಪ್ಯಾಯಮಾನ ಸ್ವರದಲ್ಲಿ ಉಲಿಯತೊಡಗಿತು. ­ಒಂದೆರಡು ಸೆಕೆಂ­ಡಿ­ನಲ್ಲಿ ­ದೂರದಿಂದ ­ಮತ್ತೊಂದು ­ಅದೇ ­ಬಗೆಯ ಇಂಚರ? ­ಮರದ ­ಯಾವುದೋ ರೆಂಬೆಯಲ್ಲಿ ­ಎಲೆಗಳ ­ನಡುವೆ ಮರೆ­ಯಾ­ಗಿದ್ದ ­ಈ ­ಪಕ್ಷಿ ­ಏನೋ ­ಒಂದು ಸಂದೇ­ಶವನ್ನು ರವಾ­ನಿಸುತ್ತಿತ್ತು.

ಅತ್ತ ಕಡೆ­ಯಿಂದ ­ಇನ್ನೊಂದು ­ಪಕ್ಷಿ (ಗೆಳೆಯನೋ, ಗೆಳ­ತಿಯೋ?) ­ಇದಕ್ಕೆ ಉತ್ತರಿಸುತ್ತಿತ್ತು. ­ಬಹಳ ­ಹೊತ್ತು ­ಹೀಗೇ ­ನಡೆಯಿತು. ­ಅದು ­ಕೇವಲ ­ಆ ಹಕ್ಕಿಗಳ ಕೂಗಾಗಿರ­ಲಿಲ್ಲ. ­ಅವುಗಳ ಆಂತರ್ಯವನ್ನು ಬಿಚ್ಚಿಕೊಳ್ಳುವ ಹೃದಯದ ಸಂವಾದ­ವಾ­ಗಿತ್ತು. ­ನಾವು ­ಮನುಷ್ಯರು ­ನಮಗೆ ­ಮಾತ್ರ ­ಮಾತು ­ಬರುವುದು, ­­ಏನೆಲ್ಲ ವ್ಯಕ್ತಪಡಿ­ಸ­ಬಲ್ಲ ಚಾತುರ್ಯವಿರುವುದು ನಮಗೆ ಮಾತ್ರ ­ಎಂಬ ­ಅಹಂಕಾರ. ­ಆದರೆ ­ತಾಳ್ಮೆಯಿಂದ ­ಕುಳಿತು ­ಆ ಪಕ್ಷಿಗಳ ಎದೆಯ ­ದನಿಯನ್ನು ಆಲಿ­ಸಿದರೆ ­ನಮ್ಮ ­ಅಹಂಕಾರ ಖಂಡಿತ­ವಾ­ಗಿಯೂ ಕರಗುತ್ತದೆ.

। ಮುಂದಿನ ವಾರಕ್ಕೆ ।



October 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: