ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದರ್ವೇಶಿ

ಆಮಿರ್ ಬನ್ನೂರು

ನೀನು ಒಂದು ಪುಟವಷ್ಟೇ
ಜಗದ ಹೊತ್ತಿಗೆಯಲಿ
ನೀನೊಬ್ಬನೇ
ಒಂದು ಇಡೀ ಅಧ್ಯಾಯವಲ್ಲ
ನೆನಪಿರಲಿ…

ಮಸ್ತಕದೊಳಗಿರುವವರು
ಮತನಾಡುತ್ತಿಲ್ಲ ಇಲ್ಲಿ
ಹರಿದು ತೆಗೆಯುವ ಕಾಲ ಬಂದರೆ
ಉಳಿಗಾಲದ ಕಥೆ ಏನೋ?
ನೀನೊಂದು ವಿಸ್ಮಯವೇ ಸರಿ
ಅಧ್ಯಾಯದೊಳಗೆ ಸದ್ದಿಲ್ಲದೆ ಸೊರಗಿ
ತುಂಬಿರುವ ನಿನ್ನ ಕೊರಗಿನ ಗಂಟೆ
ಸಮಯವಲ್ಲದ ಸಮಯದಲ್ಲಿಯೂ
ನನ್ನ ಹೃದಯದೊಳಗೆ ಸದ್ದು ಮಾಡಿದೆ
ನನಗರಿವಾಗಿದೆ ದರ್ವೇಶಿ
ಮುಖವಾಡ ಧರಿಸಿದವಳ ಮೂಕ ಪ್ರೇಮಕ್ಕೆ
ನೀನು ಮಂಡಿಯೂರಬೇಕಾಯಿತು…

ಅರೆ ದರ್ವೇಶಿ…
ಪ್ರೀತಿಯೇ ಇಲ್ಲದ ನೀನು
ಹೇಗೆ ಪ್ರೇಮಿಯಾಗುವೆ..?
ನಾನಿಲ್ಲದ ನಿನ್ನ ಅಧ್ಯಾಯ
ಅಪೂರ್ಣವೇ ಸರಿ!
ನಿನಗನ್ನಿಸಿದೆಲ್ಲವೂ ನನಗೂ ಅನಿಸಿದೆ
ಹಾಗಾಗಿಯೇ……
ನಾ ನಿನ್ನ ಪ್ರೇಯಸಿ ಎಂದೇ ಬಣ್ಣಿಸಿರುವೆ..!

ನಿನ್ನೊಳಗಿನ ಪ್ರೀತಿ ಅರಿಯುವಲ್ಲಿ
ಸೋತು ಹೋದೆನು ನಾನು,
ಆದರೂ ಗಾಢವಾಗಿ ಅರಿಯಲು ಕುಳಿತೆ
ನಿನ್ನ ಪ್ರೀತಿಯ ಬಗ್ಗೆ ನಾ ಅರಿಯಲು!
ಎಷ್ಟು ವಿಚಿತ್ರ ಈ ಭಾವಬೆಸುಗೆ!

ನಿನ್ನ ಬಗ್ಗೆ ವಿಚಾರಿಸಿದೆ
ಎಲ್ಲರಿಗೂ ಹೇಳಕಿದ್ದದ್ದು
ನಿನ್ನೊಳಗಣದ ಪ್ರೀತಿ
ಕೇವಲ ಭ್ರಮೆಯಷ್ಟೇ!!!

ಅರೆ ದರ್ವೇಶಿ
ಪ್ರೇಮಿಯಾಗಬಯಸುವ
ನೀನು ಹೊರಡಬೇಕು ಭರವಸೆಯಿಂದ
ಜಟಕಾಬಂಡಿಯನ್ನೇರಿಯಾದರೂ ಸರಿ
ಸೂಫಿಗಳ ಬೀದಿಯಲಿ
ಪ್ರೇಮಿಯಾಗಲೆಂದು…
ನೀನು ಹೋಗುವಲ್ಲೊಂದು ಮೀಝಾನ್ ಕಲ್ಲಿದೆ,
ಅದರ ಸುತ್ತಲೂ ಕಾನನಗಳೇ ಕೂಡಿವೆ
ಕಾನನಗಳ ಕಾಲಡಿಯಲ್ಲಿ ಸಣ್ಣ ಪೊದೆ
ಕಾನನಗಳು ಕಾಣಿಕೆಯಾಗಿ ನೀಡುವ
ಎಲೆಗಳಿಗೆ ಫತ್ತರಿನ ಕಲ್ಪನೆ ಕಟ್ಟಿ
ಪೊದೆ ನೀರಿಗೆ ಅತ್ತರಿನ ಸುಗಂಧಕೊಟ್ಟು
ಹೃದಯದಂತರಾಳಕ್ಕಿಳಿದು ನೋಡು
ಮೀಝಾನಿನ ಬಳಿ ಪತ್ತರಿಗೂ-ಅತ್ತರಿಗೂ
ಕವಿತೆಯ ಕಟ್ಟಿ ಮೊನೆಗಾಲಿನಲ್ಲಿ
ಕುಣಿಯುವ ಸೂಫಿಗಳೊಂದಿಗೆ
ಕಾನನದೊಳಗೆ ಕಾಲವನ್ನು ಕಳೆದರೆ
ಕಾಣಬಹುದೇನೋ ನಿನ್ನೊಳಗಿನ ಅದಮ್ಯ ಪ್ರೀತಿಯನ್ನು!

‍ಲೇಖಕರು Admin

7 October, 2021

1 Comment

  1. ಸಂಗೀತ ರವಿರಾಜ್

    ಕವಿತೆ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading