‘ರಂಗಾಯಣ’ದಲ್ಲಿ ಭೋರ್ಗರೆದ ಬಯಲಾಟ..

ಡಾ ಲಕ್ಷ್ಮಿಶಂಕರ್‌ ಜೋಶಿ

ನಿನ್ನೆ ನನಗೆ ಅದೇ ಭಾವ.ಥೈ ತಕ ಥೈ ತಕ ಥೈ ತಕ,… ಧಿತ್ತಾ ಧಿಗಿ ಧಿಗಿ ಥೈ..ತಾ ಥೈ ತಕ ಥೈ…ತರಹೇವಾರಿ ತಿಹಾಯ್ ಗಳು, ತರಹ ತರಹದ ಜಾನಪಮಟ್ಟುಗಳು, ವಿಶಿಷ್ಟ ಡೋಲಕ್ ಬೋಲ್ ಗ ಳೊಂದಿಗೆ ಬೆಸೆದುಕೊಂಡಿರುವ ತುಂಬು ರಂಗೇರುವ ಧ್ವನಿಗಳ ಹಾಡುಗಬ್ಬ ಕಲಬುರ್ಗಿ ರಂಗಾಯಣದ ತುಂಬಾ ಚೆಲುವಿನ ಚಿತ್ತಾರ, ಒನಪು ಒಯ್ಯಾರದ ರಂಗು ರಂಗಿನ ಝೇಂಕಾರ ಮೂಡಿಸಿತ್ತು.

ನಾವು ಸಣ್ಣವರಿದ್ದಾಗ ಮನೆ ಮನೆಗೆ ವೇಷಗಾರರು ಬರುತ್ತಿದ್ದರು. ಅವರು ಬಂದರೆ ನಮಗೆ ಹಬ್ಬ. ಅವರು ಹಾಕುವ ರಾಮಲಕ್ಷ್ಮಣರ ವೇಷ, ಹನುಮಂತನ ಬಾಲದ ತುಂಟಾಟ. ಸೀತೆ ತನ್ನ ಪಾರ್ಟು ಮುಗಿದ ನಂತರ ಚುಟ್ಟಾ ಸೇದುವದು. ರಾಮ ಎಲೆ ಅಡಿಕೆ ತಂಬಾಕು ತಿನ್ನುವದು. ಅಮ್ಮ ಕೊಟ್ಟ ಸೀರೆ, ರೊಟ್ಟಿ, ಜೋಳ, ಗೋಧಿ ಇನ್ನೂ ಏನೇನೋ ಒಯ್ಯುವ ಅವರು ಮಧ್ಯಾಹ್ನ ಶಾಲೆಯಲ್ಲಿ, ಗುಡಿಗಳಲ್ಲಿ, ಪ್ರದರ್ಶನ ಏರ್ಪಡಿಸುತ್ತಿದ್ದರು. ನಾವು ಮೈಯೆಲ್ಲಾ ಕಣ್ಣಾಗಿ ಆ ಪ್ರದರ್ಶನನೋಡುತ್ತಿದ್ದೆವು.

ಎಂಥಾ ಬಾಲಿಶ ಭಾವವದು. ಎಲ್ಲರೂ ನಾಲ್ಕಾಣೆ ಪಟ್ಟಿ ಹಾಕಿ ಮಾಸ್ತರ ಕೈಯಲ್ಲಿ ಕೊಡುವದು. ಅವರು ತಮ್ಮದಿಷ್ಟು,ಸಿಬ್ಬಂದಿಗಳದಿಷ್ಟು ಸೇರಿಸಿ ಅವರಿಗೆ ಕೊಡುತ್ತಿದ್ದರು. ಇಡೀ ಊರಿನ ಹುಡುಗರು ಅವರು ಊರು ಬಿಟ್ಟು ಹೋಗುವವರೆಗೆ ಅವರ ಹಿಂದೆಯೇ ತಿರುಗುತ್ತಿದ್ದರು. ಅವರ ಹಾಡುಗಳೋ ಕರ್ಣಾನಂದ. ತಂದೆಯವರು ನಮ್ಮ ಕಟ್ಟೆಯ ಮೇಲೆ ಕುಳಿತು ಅವರಿಂದ ಹಾಡಿಸುತ್ತಿದ್ದರು. ನಾಲ್ಕಾರು ದಿನ ಆಹಾಹಾ ಸಾರಥಿ, ಅರೆರೆ, ಅಬಬಬ ಅವೇ ಮಾತುಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು. ಅದೊಂದು ತೆರನಾದರೆ..

ಕಳೆದ ನಾಲ್ಕು ದಿನಗಳಿಂದ ಸತತ ನಡೆದ ‘ರಾಮ ರಾವಣರ ಯುದ್ಧ’ ಎಂಬ ಬಯಲಾಟವನ್ನು ರಂಗಾಯಣದ ಕಲಾವಿದರು ಅದ್ಭುತವಾಗಿ ಪ್ರದರ್ಶಿಸಿದರು. ರಾಮ ರಾವಣರ ಕತೆ ಎಲ್ಲರಿಗೂ ಚಿರ ಪರಿಚಿತವಾದದ್ದೇ. ಆದರೆ ಈ ಬಯಲಾಟದ ಮೂಲಕ ನೋಡಿದಾಗ ಅದರ ಪರಿಣಾಮ ಬೇರೆಯದೇ. ಧಾರ್ಮಿಕ ಮನೋಭಾವದವರಿಗೆ ನಿತ್ಯ ಪಾರಾಯಣದ ಕೂಟ. ಜನಪದರಿಗೆ ಜನಪ್ರಿಯ ಆಟ. ರಂಗ ಮೇಳದವರಿಗೆ ಇಡೀ ರಾತ್ರಿ ಉತ್ಸವದ ಆಟ. ಆನಂದದ ಕೂಟ. ರಸಿಕರಿಗೆ ಝಲ್ಲೆನಿಸುವ ಆ ಕಣ್ಣೋಟ. ನಿಜವಾಗಿ ಅದ್ಭುತ ಪ್ರದರ್ಶನ.

ಜನಪದರ ಇಂಥ ಆಟಗಳು ಅಸಡ್ಡೆಗೆ ಒಳಗಾಗಿರುವ ಈ ಕಾಲಘಟ್ಟದಲ್ಲಿ ಕಲಬುರ್ಗಿ ರಂಗಾಯಣ ಜನ ಮೆಚ್ಚುವಂಥ ಕೆಲಸ ಮಾಡಿದೆ. ರಾಯಚೂರಿನ ಯಾಪಲದಿನ್ನಿಯ ವೆಂಕಟೇಶ ಮಾಸ್ತರರಿಂದ ಕಲಿತ ಈ ಬಯಲಾಟ ಜನಮನ ಸೂರೆಗೊಂಡಿತು. ತಬಲದಲ್ಲಿದ್ದ ರಾಜು ಉಪ್ಪಾರ, ಹಾರ್ಮೋನಿಯಂ ದಲ್ಲಿದ್ದ ಪ್ರಕಾಶ ಪೂಜಾರಿ, ಇನ್ನಿತರ ಪಾತ್ರಧಾರಿಗಳೂ ಕೂಡ ಉತ್ಸಾಹದಿಂದ ಹಾಡಿನಲ್ಲಿ ಭಾಗವಹಿಸಿದರು. ಇದನ್ನು ನಿರ್ದೇಶಿಸಿದವರು ಶ್ರೀ ವೆಂಕಟೇಶ ಮಾಸ್ತರ. ಯಾಪಲದಿನ್ನಿ, ಸಂಗೀತ ಸಂಯೋಜನೆ ಶ್ರೀಕುರುಮಯ್ಯ. ಯಾಪಲದಿನ್ನಿ, ರಂಗಾನುವಾದ ಮತ್ತು ಸಹ ನಿರ್ದೇಶನ ಶ್ರೀ ಮಹಾಂತೇಶ ರಾಯಚೂರ ಇವರದು. ರಂಗಾಯಣದ ನಿರ್ದೇಶಕರಾದ ಶ್ರೀ ಪ್ರಭಾಕರ ಜೋಶಿಯವರ ಶ್ರಮ ಸಾರ್ಥಕವಾದಗಳಿಗೆ ಇದು.

ರಾವಣನ ಪಾತ್ರಧಾರಿಯ ಉಮೇಶ ಪಾಟೀಲರ ವಸ್ತ್ರವಿನ್ಯಾಸ, ಕಾಸ್ಟ್ಯೂಮ್ಸ, ಭಾರವಾದ ಆಭರಣಗಳ ರಾಶಿ ಅವರು ಮೈಮೇಲಿದ್ದವು.ಅವರ ಅಭಿನಯ ಭಯಂಕರ ಮಟ್ಟ ಮೀರಿತ್ತು.ಇನ್ನು ಹುಡಿಗಿಯರಂತೂ ಅಪ್ಸರೆಯರು ನಾಚಬೇಕು. ರಂಭೆ, ತಿಲೋತ್ತಮೆಯರ ಹಾಗೆ ಕಂಗೊಳಿಸುತ್ತಿದ್ಜರು. ರಾಮ ಲಕ್ಷ್ಮಣರಂತೂ ರಾಮಾಯಣದ ರಾಮ ಲಕ್ಷ್ಮಣರೇ ಸೈ. ಇನ್ನು ಹನುಮಂತ. ಅವನ ಕುಣಿ ಕುಣಿದಾಟ,ಜಿಗಿದಾಟ ಮಕ್ಕಳಾದಿಯಾಗಿ ಎಲ್ಲರನ್ನೂ ರಂಜಿಸಿತು. ಲಂಕಿಣಿಯ ಭಾರವಾದ ನಿತಂಬ ಅಕ್ಷರಶಃ ನಗೆಗಡಲಲ್ಲಿ ತೇಲಿಸಿತು. ಉಳಿದ ಇಬ್ಬರು ನಿರೂಪಕರು ಪ್ರಸಂಗಕ್ಕೆ ತಕ್ಕಂತೆ ಮಾತುಗಳಿಂದ ಮಂಟಪ ಕಟ್ಟಿದರು.

ಯಾವ ಯಕ್ಷಗಾನಕ್ಕೂ ಕಡಿಮೆ ಇಲ್ಲದಂತೆ ಭೋರ್ಗರೆದ ಬಯಲಾಟವನ್ನು ಪ್ರೋತ್ಸಾಹಿಸುವದು ನಮ್ಮ ಆದ್ಯ ಕೆಲಸವಾಗಬೇಕು. ಅಲ್ಲಿಯ ಭಾಗವತರ ಹಾಗೆ ಇಲ್ಲಿ ನಿರೂಪಕರು. ನಮ್ಮ ಭಾಗದ ಕಲೆಯನ್ನು ಜೀವಂತವಾಗಿಡುವ ಕೆಲಸ ನಮ್ಮದಾಗಬೇಕು. ಮೊದಲು ಆಸ್ವಾದಿಸಲು ಕಲಿಯಬೇಕು. ಏನೂ ಕಡಿಮೆ ಇಲ್ಲದಂತೆ ಅದರಲ್ಲಿ ಅದೆಷ್ಟೋ ವಾದ್ಯಗಳು ಬಳಕೆಯಾದವು. ಮದ್ದಳೆ, ವಯೋಲಿನ್, ಝಾಂಜ್, ತಾಳ, ಚಳ್ಳಂ, ಹಲಗೆ, ಪೇಟಿ, ತಬಲ. ಹಿಮ್ಮೇಳದಲ್ಲಿ ತೀರಾ ತಾರ ಸ್ವರದಲ್ಲಿ ಹಾಡುವ ಹಿಂಡೇ ಅಲ್ಲಿತ್ತು.

ಶಾಸ್ತ್ರೀಯ ಸಂಗೀತದ ತೀರಾ ಪರಿಚಿತ ರಾಗಗಳಾದ ದೇಸ್, ಭೂಪಾಲಿ, ತಿಲಕಕಾಮೋದ, ಜೋಗ, ಖಮಾಜ್, ಶಿವರಂಜಿನಿ, ದುರ್ಗಾ, ತೋಡಿಗಳಲ್ಲಿ ಮನಸೂರೆಗೊಂಡ ಹಾಡುಗಳು ಹೃದಯ ತೋಯಿಸಿದವು. ವಯೋಲಿನ್ ನುಡಿಸುವ ಕಮಾನಿನಿಂದ ಪಕ್ಕ ವಾದ್ಯದವನನ್ನು ಲಯ ಜಾಸ್ತಿ ಮಾಡುವಂತೆ ಹೇಳುವ ಹಾಡುಗಾರ ವೆಂಕಟೇಶ್ ಮಾಸ್ತರ ಒಮ್ಮೊಮ್ಮೆ ಎಲ್ಲ ಬಿಟ್ಟು ಕೈ ಎತ್ತಿ ಹಾಡಿ ಬಿಡುತ್ತಿದ್ದರು. ಒಟ್ಟಿನಲ್ಲಿ ರಂಜನೀಯ ಸಭೆಯೇ ಅಲ್ಲಿ ನೆರೆದಿತ್ತು.

ಭಜನಾ ಪದ್ಧತಿಯಲ್ಲಿ ಬರುವ ತಾಳಗಳ ಗತ್ತು ಅಲ್ಲಿತ್ತು. ಭಜನೆ ಮುಗಿದ ನಂತರ ಶುರುವಾಗುವ ಧುನ್ ನಡಿಗೆ ಅಲ್ಲಿ ಕಂಡು ಬಂತು.ಇನ್ನೂ ಏನೇನೋ ಸೂಕ್ಷ್ಮತೆಗಳು ಅಲ್ಲಿದ್ದವು. ಇಂಥ ಬಯಲಾಟ ಎಲ್ಲರ ಮನೆ ಮನೆಗಳಲ್ಲಿ ಸ್ಥಾಪಿತವಾಗಲಿ. ಜಾನಪದ ಕಲಾವಿದರ ಬಾಳು ಬಂಗಾರವಾಗಲಿ. ಯಕ್ಷಗಾನಕ್ಕಾಗಿ ಗೆಜ್ಜೆ ಕಟ್ಟಿದ ಶಿವರಾಮ ಕಾರಂತರು, ಅವರ ಹೆಜ್ಜೆಗಳು ಕಣ್ಣೆದುರಿಗೆ ಬರುತ್ತಿವೆ. ಯಾಕೋ ಬೆಳಿಗ್ಗೆಯಿಂದ ಕಾರಂತರು ನೆನಪಾಗುತ್ತಿದ್ದಾರೆ…

‍ಲೇಖಕರು Admin

October 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: