ದಮಯಂತಿಯ ಸ್ವಯಂವರ
ಮುರಳಿ
ದಮಯಂತಿಯ ರೂಪವು
ಮಯ ಕಟ್ಟಿದರಮನೆಯಂತೆ
ಕಿರೀಟದಲ್ಲಿದ ರತ್ನವು
ಅವಳ ಆ ನಗುವ ಕಂಡು
ಮುನಿದುಕೊಂಡಂತೆ ಮಸುಕಾಗಿ,
ಅವಳ ಕೈಲಿರುವ ಬಳೆಗಳು,
ತನಗೆ ತಾನೇ ಹೆಮ್ಮೆಪಟ್ಟು,
ಹಾರಗಳ,
ತೋಳಬಂದಿಗಳ,
ಕಾಲಂದಿಗೆಗಳ
ಬಳಿ ಆಗಾಗ್ಗೆ ಜಗಳವಾಡಿ,
ಸದ್ದು ಮಾಡಿ,
ಗಮನ ಸೆಳೆಯುತಲಿತ್ತು
ಇವಳ ಅಪರೂಪದ
ಚೆಲುವಿಗೆ,
ರೂಪರಾಶಿಗೆ,
ಅಗ್ನಿಯೇ ಇವಳನ್ನು ಬಯಸಿ,
ಜೂತೆಗೆ ನಾಲ್ವರು ದೇವತೆಗಳೊಡನೆ
ಒಡಗೂಡಿ,
ಆ ನಳನ ನೆನದು,
ಅವನ ಖ್ಯಾತಿಗೆ ಬೆದರಿ,
ನಳ-ದಮಯಂತಿಯರ
ಪ್ರೇಮ ಕಾವ್ಯಕ್ಕೆ ಕರುಬಿ,
ಐವರೂ ನಳ ರೂಪವನ್ನು ತಾಳಿ,
ಅರಮನೆಯ ಹೂಕ್ಕಿದರು.

ಅಲ್ಲಿರುವ ಆರು ನಳರಲ್ಲಿ
ನನ್ನ ನಳನು ಯಾರು ?
ನಳನಳಿಸುವ ನಳರಲ್ಲಿ
ನನ್ನ ನಳನು ಯಾರು ?
ನನ್ನನಾಳುವ
ನನ್ನ ನಳನು ಯಾರು ?
ಇವರೊಳಗೆ
ನನ್ನ ಕಣ್ಣೊಳಗೆ ಕಣ್ಣಿಟ್ಟು,
ನನ್ನ ಮನದಾಳವ ಹೂಕ್ಕು
ಪ್ರೀತಿಯೆಂಬ ತಂತಿಯಿಂದ
ನಾದ ನುಡಿಸಿ,
ಬಾಳ ಬೆಳಗುವ
ನನ್ನ ನಳನು ಯಾರು ?
ಕೈಲಿ ಹಾರವ ಹಿಡಿದು
ಮನದಲ್ಲಿ ದೇವರ ನೆನೆದು
ಹಾರವ ಹಾಕಿ
ಉಸಿರು ಬಿಟ್ಟಳು
ಅಗ್ನಿಯೇ ಬೆರೆಗಾದ
ಅವಳ ನಳನ ಮೇಲಿನ ಪ್ರೀತಿಯ ನೋಡಿ
ನಿಜ ರೂಪದಿ
ಎದುರ ನಿಂತು ಕೇಳಿದನು
ಆ ಆರು ನಳರಲ್ಲಿ
ನಿನ್ನ ನಳನ ನೀ ಹುಡುಕಿದಾದರು ಹೇಗೆ ?
ಕಣ್ಣು ಮಿಟುಕಿಸದೆ,
ನಿಂತ ನೆಲವ ಸೋಕಲಾರದ
ನಿಮ್ಮ ಪಾದಗಳು
ದೇವತೆಗಳು ಧರೆಗೆ
ಬಂದಾಗ ಕಾಣುವ
ವಿಶೇಷತೆಗಳಲ್ಲವೇ ?
ನಿಂತ ನೆಲವ,
ಸೋಕಿ ನಿಂತ,
ನನ್ನ ಚೆಲುವ.
ಕಣ್ಣ ರೆಪ್ಪೆಯಲೆ,
ಕರೆದು ನನ್ನ ಸೆಳೆದು,
ಮನದಲ್ಲೇ ಬರಸಳೆದ ನಳ.
ಈ ನನ್ನ ನಳ.
ನಳ-ದಮಯಂತಿಯ
ಹರಸಲೆಂದೇ
ಅಗ್ನಿಯು ಆರತಿಯ
ತಟ್ಟೆಯಲಿ ದೀಪವಾದ.
***
ಪದ್ಮ ಮೇಡಂ, ಈ ಕವನ ನಿಮಗೆ ಅರ್ಪಿಸಿದ್ದೇನೆ ………..
(ನಾನು ಬೆಂಗಳೊರಿನ S L N S ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಪದ್ಮ ಮೇಡಂ ಹೇಳಿದ ಕತೆ ಇಂದು ಕವನವಾಗಿದೆ)






Nice
Such a nice poem Mr. Murali.