ದಡವ ನೆಕ್ಕಿದ ಹೊಳೆಯ ಹಾಡು

ಎಲ್ಲಿಯೋ ಓದಿದ ಸಾಲು ಇದು. ‘ದಡವ ನಾಲಗೆ ನೀಡಿ ನೆಕ್ಕುವ ಹೊಳೆ.’  ಹೊಳೆಯ ನಾಲಿಗೆ ದಡವನ್ನೂ ನೆಕ್ಕುತ್ತ ಅದನ್ನೂ ಹೊಳೆಯ ಭಾಗವಾಗಿಸಿಕೊಳ್ಳುವ ಈ ಚಿತ್ರ ಮತ್ತೆ ಮತ್ತೆ ನನಗೆ ಕಾಣುತ್ತಲೇ ಇರುತ್ತದೆ; ಬಣ್ಣದ ಹೊಳೆಯಾಗಿ. ನನ್ನೊಳಗಿನ ಈ ಬಣ್ಣದ ಹೊಳೆಯ ನಾಲಿಗೆ ನನ್ನ ದೈನಂದಿನ ಬದುಕಿನ ದಡವನ್ನೆಷ್ಟೋ ನೆಕ್ಕಿ ಬಿಟ್ಟಿದೆ… ಕೆಲವೊಮ್ಮೆ ದಡಕ್ಕೆ ದಡದ ಗುರುತಿಲ್ಲದಂತೆಯೂ… ಮಾಡಿದೆ. ಈ ಬಣ್ಣದ ಹೊಳೆಯೇ ಹಾಗೆ! ಅದರಲ್ಲಿ ಮುಳುಗಿದವರಿಗೆ ಬಣ್ಣದ್ದೇ ಚಹರೆ ಬರುತ್ತದೆ. ಹೊಸ ವಿಳಾಸ ದೊರೆಯುತ್ತದೆ. ಅದರಲ್ಲಿ ಮುಳುಗಿದವರೆಲ್ಲ ಪೂರ್ವವಾಸನೆ ಮರೆಯುತ್ತಾರೆ. ಹೊಸ ಕುರುಹು, ಹೊಸ ಸಂಬಂಧಗಳನರಸುತ್ತಾರೆ; ಗತಿರೂಪಿ ಸಂಬಂಧವದು. ನಾನು ನಾನಲ್ಲದ ಇನ್ನೊಂದಾಗುವ ಅವಕಾಶದಲ್ಲಿದೆ ಅದು. ಅದರದ್ದೇ ಒಂದು ಪ್ರಪಂಚ!

ಬಣ್ಣಕ್ಕೇ ಒಂದು ಪ್ರಪಂಚವಿದೆ, ಅದು ರಂಗಿನ ಪ್ರಪಂಚ; ರಂಗಪ್ರಪಂಚ. ದೇಹವನ್ನು ದೇಗುಲವಾಗಿಸಿಕೊಳ್ಳಲು ಬಯಸುವವರೆಲ್ಲ ಅದರೊಳಗೆ ಪ್ರವೇಶ ಪಡೆಯುತ್ತಾರೆ. ಅಲ್ಲಿ ಎಲ್ಲರೂ ಕಾಯಕ ಜೀವಿಗಳೇ. ವಾಸ್ತವ ಪ್ರಪಂಚದ ಹಲವು ನಿಯಮಗಳು ಅಲ್ಲಿ ಮುರಿಯಲ್ಪಡುತ್ತದೆ. ಕಾಲ ದೇಶಗಳ ಹಲವು ಸಂಗತಿಗಳು ಅಲ್ಲಿ ಕರಗಿ ಹೋಗುತ್ತವೆ… ಅಲ್ಲಿ ಲೋಕಾಂತವೇ ಏಕಾಂಂತ..! ಮನುಷ್ಯರ ಜತೆ ಮಾತ್ರವಲ್ಲ, ಅಕ್ಷರಗಳ ಜತೆ, ಚಿತ್ರಗಳ ಜತೆ, ಹಾಡುಕುಣಿತಗಳ ಜತೆಯೂ ಮಾತುಕತೆ ನಡೆಯುತ್ತದೆ… ಯಾರೊಡನೆ ಬೇಕಿದ್ದರೂ ಅಲ್ಲಿ ಮಾತುಕತೆ ನಡೆಸಬಹುದು… ಚಿಗಿತ ಎಲೆ, ಮುರಿದ ಕಾಂಡ, ಬಿರಿದ ನೆಲ, ಹಸಿದ ಕಣ್ಣು, ನಗುವ ಹೂವು ಹೀಗೆ… ಒಂಟಿ ಲೈಟಿನ ಕಂಬದ ಜತೆಗೂ.

ಒಮ್ಮೆ ಆ ಪ್ರಪಂಚದೊಳಗೆ ಸರಿಯಾದ ಪ್ರವೇಶ ದೊರೆತರೆ ಅದರ ಬಣ್ಣ ನಮ್ಮ ತೊಗಲ ಹೊರಗಷ್ಟೇ ಉಳಿಯುವದಿಲ್ಲ; ತೊಗಲೇ ಆಗಿಬಿಡುತ್ತದೆ. ಬಟ್ಟೆ ಕಳಚಿದಂತೆ ಕಳಚಿಕೊಳ್ಳಲಾಗದು ಅದರಿಂದ… ಅದು ಚರ್ಮದಂತೆ ನಿಮ್ಮನ್ನು ಹೊದ್ದುಕೊಂಡಿರುತ್ತದೆ. ಅದರ ಬೆಚ್ಚನೆಯ ಹೊದಿಕೆಗೆ ಆತ್ಮ ಹಸಿಯತೊಡಗುತ್ತದೆ. ವಿಸ್ಮಯ ಏನೆಂದರೆ ಅಲ್ಲಿ ನೀವು ಉಸಿರಾಡುತ್ತಿರುವುದು ಇನ್ಯಾರದೋ ಉಸಿರನ್ನ. ನೀವು ಬದುಕುತ್ತಿರುವುದು ಹಲವರ ಬದುಕನ್ನ… ಒಂಥರಾ ಆಟ ಅದು… ಆ ಆಟ ಮುಗಿಯುವುದೇ ಇಲ್ಲ… ಹೀಗಾಗಿ ನನ್ನನ್ನು ನಾನು ಹೊರಗೆ ನಿಂತು ನೋಡಿಕೊಂಡಾಗಲೆಲ್ಲ ಅನಿಸುತ್ತದೆ; ‘ನಾಟಕ ಮುಗಿದರೂ ಬಣ್ಣ ಒರೆಸದ ನಟ ನಾನು’ ಅಂತ.

ಅಲ್ಲಿಂದೆದ್ದು ನೀವು ಎಲ್ಲಿಯೇ ಹೆಜ್ಜೆ ಇಡಿ ಅದು ಬಣ್ಣದ ಹೆಜ್ಜೆಯೇ ಆಗಿರುತ್ತದೆ. ಹೊಸ ಮನುಷ್ಯನ ಹೆಜ್ಜೆ, ಹೊಸ ಸಂಬಂಧದ ಹೆಜ್ಜೆ, ಕಾಲ ದೇಶಗಳ ಗಡಿಮೀರಲು ಕಲಿಸುವ ಹೊಸ ಹೆಜ್ಜೆ!

ಢಣ್ ಢಣ್ ಢಣ್ ಢಣಾ ಢಣ್ ಢಣ್ ಢಣ್… ಭಂ ಭಂ ಭಂ ಭಂ ಭಂ ಭಂ ಭಂ… ಹಾಲಕ್ಕಿ ಸುಗ್ಗಿ ಮೇಳದವರ ಜಾಗಟೆ ಮತ್ತು ಗುಮಟೆಯ ಲಯಬದ್ಧ ನುಡಿತಕ್ಕೆ ತಕ್ಕಂತೆ ಕುಣಿತದವರು ಓ ಹೋ ಚೋ ಎನ್ನುತ್ತ ನಮ್ಮ ಮನೆಯ ತುಳಸಿ ಕಟ್ಟೆಯ ಮುಂದೆ ಸುಗ್ಗಿ ಕುಣಿಯುತ್ತಿದ್ದಾರೆ. ಬಿಳಿ ಪಾಯಿಜಾಮ, ಕೆಂಪು ಹಳದಿ ನಿಲುವಂಗಿ, ತಲೆಯ ರುಮಾಲಿನ ಮೇಲೆ ಸುಗ್ಗಿ ತುರಾಯಿ. ಬೆಂಡಿನ ಕಡ್ಡಿಗಳ ಮೇಲೆ ಚೆಂಡು, ಹಕ್ಕಿ, ಹಣ್ಣು, ಚಿಗುರು ಹೀಗೆ ಪ್ರಕೃತಿಯೇ ಅಲ್ಲಿ ಕೂತಿತ್ತು. ಕುಣಿಯುತ್ತಿದ್ದಾಗ ಬೆಂಡಿನ ಕಡ್ಡಿ ಓಲಾಡಿ ಅವೆಲ್ಲ ಮೇಲೆ ಕೆಳಗೆ ಆಚೆ ಈಚೆ ತೊಯ್ದಾಡುತ್ತಿದ್ದವು. ಅಲ್ಲಿ ತುರಾಯಿಯ ಕೆಳಗೆ ಹಣೆಯ ಮೇಲ್ಭಾಗದಲ್ಲಿ ಬಣ್ಣದ ಬೇಗಡೆಯ ಮಣಿಗಳು, ಕನ್ನಡಿ ಚೂರು, ಪತಂಗದ ರೆಕ್ಕೆಗಳನ್ನು ಅಂಟಿಸಿದ ಕಮಾನಿನಾಕಾರದ ಹಣೆಕಟ್ಟು. ಕುಣಿಯುವಾಗ ತಿರುಗಿದರೆ ಬೆನ್ನ ಮೇಲೆಲ್ಲ ಓಡಾಡುವ ಕಾಗದಗಳ, ಬೆಂಡಿನ ಹೂಗಳ ಮಾಲೆ ಮಾಲೆ… ಕೈಯಲ್ಲಿ ನವಿಲುಗರಿಯ ಕುಂಚದ ಕಟ್ಟು ಮತ್ತು ಕೋಲು. ಕಾಲಿಗೆ ಗಿಲಿ ಗಿಲಿ ಗುಡುವ ಗ್ಯಾಗ್ರ ಅನ್ನುವ ಕಡಗ. ಜಾಗಟೆ ಮತ್ತು ಗುಮಟೆಯವರು ಲಯಬದ್ಧವಾಗಿ ನುಡಿಸುತ್ತಿದ್ದರು…

ಢಣ್ ಢಣ್… ಭಂ… ಭಂ… 8 ಮಾತ್ರಾಕಾಲದಲ್ಲಿ ವಿನ್ಯಾಸಗೊಂಡ ತಾಳಕ್ರಮ ಅದು. 1-2-3-4/5-6-7-8… 4 ಮತ್ತು 5ನೇ ಮಾತ್ರೆಗಳನ್ನು ಕಾಲವಿಳಂಬವಿಲ್ಲದೇ ಒಟ್ಟಿಗೆ ನುಡಿಸುವರು. ಕುಣಿತವೆಂದರೆ ನೆಲದಮೇಲೆ ಕಾಲಿನಿಂದ ಬರೆಯುವ ಭಾಷೆ ಅಂತಾರೆ. ಅವರ ಕುಣಿತವಂತೂ ರಂಗೋಲಿಯ ತಾಂತ್ರಿಕ ವಿನ್ಯಾಸದ ವಿವಿಧ ಜ್ಯಾಮಿತಿ ರೇಖೆಗಳಂತಹ ಚಲನೆಯಿಂದಿತ್ತು.  ಕುಣಿತದ ಹೆಜ್ಜೆ ಮತ್ತು ವಿನ್ಯಾಸ ಬದಲಾದಾಗ ಸೂಚನೆ ಕೊಡುವಂತೆ ಹೊಯ್ಲು ಹೊಡೆವ ಹೋ ಹೋ ಚೋ ಅನ್ನುವ ಅವರ ದನಿ, ಕುಂಚದ ಬುಡಕ್ಕೆ ಕೋಲಿನ ಘಾತ ಮಾಡುವ ರೀತಿ, ಎದುರು ಬದುರು ಸಾಲು ಮಾಡಿ, ಸಾಲು ಸೀಳಿ, ವೃತ್ತ ಸುತ್ತಿ , ಹಾಸು ಹೊಕ್ಕು . . .  ಆಹ್ ಮಾಂತ್ರಿಕ ಕುಣಿತವದು..! ಕುಣಿತ ಮುಗಿಯಿತು. ನನ್ನ ಅಜ್ಜಿ ತಂಡದ ಮುಖಂಡನಿಗೆ ಕಾಯಿ ಅಕ್ಕಿ ಕೊಟ್ಟು ಜತೆಗಿದ್ದವರಿಗೆ ಚಿಲ್ಲರೆ ಹಂಚಿದಳು. ನನ್ನ ಕೈಗೂ 2 ಪೈಸೆ ಅವಳಿಟ್ಟಾಗ ಮುಖ ನೋಡಿದೆ… “ಥೋ! ಸುಗ್ಗಿ ಪೋರಾ ಅಂದ್ಕಬುಟ್ನಲೋ” ಅನ್ನುತ್ತಾ ಒಳನಡೆದರು. ಅಲ್ಲಿಯೇ ಇದ್ದ ಅಜ್ಜ “ಅವ ಒಂದಿನ ಅವ್ಕಳ ಸಂಗ್ಡ ಹೋಪವ್ನೇಯಾ” ಎಂದರು. ಮುಂದೆ ಅಜ್ಜ ಹೇಳಿದಂತೆಯೇ ಆಯ್ತು..! ನಾನು ಸುಗ್ಗಿಯ ಹಿಂಬಾಲಿಸಿ ಆಗಿತ್ತು!!

ನಾನಾಗ ಚಿತ್ರಾಪುರ ಶಾಲೆಯಲ್ಲಿ 7ನೇ ತರಗತಿ ಪರೀಕ್ಷೆ ಬರೆದು ಧಾರೇಶ್ವರಕ್ಕೆ, ನಮ್ಮ ಹುಟ್ಟೂರಿಗೆ ಅಜ್ಜ ಅಜ್ಜಿ ಇರುವ ಮನೆಗೆ ಬಂದಿದ್ದೆ. ವಸಂತದ ಹುಣ್ಣಿಮೆಯ ಆಸುಪಾಸು ಅದು. ಹಾಲಕ್ಕಿ ಗೌಡರು ಎಂದು ಕರೆಸಿಕೊಳ್ಳಲ್ಪಡುವ ಬುಡಕಟ್ಟು ಸಮೂಹದ ಒಕ್ಕಲಿಗರು ಈ ಸಂದರ್ಭದಲ್ಲಿ ಫಲವಂತಿಕೆಯ ಆಚರಣೆಯ ಕೃಷಿ ಕುಣಿತವನ್ನು ಮನೆ ಮನೆಗೆ ಹೋಗಿ ಪ್ರದರ್ಶಿಸುತ್ತಾರೆ. ನನಗೆ ಅವರ ಕುಣಿತ ಸೊಬಗು, ಅದರ ಹಿಮ್ಮೇಳದನಾದ ಇವೆಲ್ಲ ಎಷ್ಟು ಹಿಡಿಸಿಬಿಟ್ಟಿತ್ತು ಎಂದರೆ ನಾನು ಆ ತಂಡದ ಜತೆ ಅವರು ಕುಣಿಯುವ ಮನೆಗಳಿಗೆಲ್ಲ ಹೋಗಿದ್ದೆ. ಹೀಗೆ ಮನೆ ಮನೆ ಸುತ್ತಿ ತಂಡ ನಮ್ಮ ಮನೆಗೂ ಬಂದಾಗ ನಾನೂ ಗುಂಪಿನಲ್ಲೇ ಇದ್ದೆ. ಬೇಸಿಗೆಯ ಕರಾವಳಿ ಬಿಸಿಲು; ಮೊದಲೇ ತೆಳ್ಳಗೆ, ಕುಳ್ಳಗೆ ಹಾಣೆಗೆಂಡೆಯ ಹಾಗೆ ಇದ್ದ ನಾನು ಸುಗ್ಗಿ ತಂಡದೊಂದಿಗೆ ಊರೆಲ್ಲ ಅಲೆದು ಮನೆಮುಂದೆ ನಿಂತಾಗ ನಮ್ಮಜ್ಜಿಗೆ ನನ್ನ ಗುರುತು ತಿಳಿಯಲಿಲ್ಲ. ನಾನೂ ಸುಗ್ಗಿಕುಣಿಯುವ ತಂಡದ ಹುಡುಗ ಅಂತ ನನ್ನ ಕೈಗೂ ಕಾಸಿಟ್ಟಿದ್ದರು! ನನ್ನ ಕಾಲು  ಬಣ್ಣವಾಗಿತ್ತು! 

ನಿಜ, ನಾನು ಸುಗ್ಗಿ ಹುಡುಗನೇ. ಆ ಸುಗ್ಗಿ ನನ್ನ ಒಡಲಾಳದಲ್ಲಿ ಸದಾ ವಸಂತವನ್ನು ಸೃಷ್ಟಿಸಿತ್ತು. ಕುಣಿತ, ಸಂಗೀತ, ಕೀರ್ತನೆ, ಭಜನೆ, ಚಿತ್ರ, ಯಕ್ಷಗಾನ, ಸಾಹಿತ್ಯ, ನಾಟಕ ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಬಣ್ಣಗಳನ್ನು ಗುರುತಿಸುವದನ್ನು ಕಲಿಸಿತ್ತು! ಬ್ರಾಹ್ಮಣರ ಹುಡುಗ ಅವನಿಗರಿವಿಲ್ಲದೇ ಒಕ್ಕಲಿಗರ ಗುಂಪನ್ನು ಸೇರೋದು ಹೇಗೆ ಅಂತ ಕಲಿಸಿತ್ತು! ಹೊಸ ಸಂಬಂಧವನ್ನು ಅರಸುವುದನ್ನು ಕಲಿಸಿತ್ತು! ಜಾತಿ, ಪಥ, ಪಂಥ, ಹೀಗೆ ಎಲ್ಲ ಸೀಮೆಗಳ ಗೆರೆ ದಾಟಲು ಕಲಿಸಿತ್ತು!

ಪ್ರಜ್ಞಾಪೂರ್ವಕವಾಗಿ ಅಲ್ಲದಿದ್ದರೂ ನಿಮ್ಮನ್ನು ಹೀಗೆ ರೂಪಾಂತರಿಸುವುದು ಬಣ್ಣದ ತಾಕತ್ತು! ಅಂದು ಅದರ ರಂಗು ನನ್ನ ಹೊಕ್ಕುಳಾಳದಲ್ಲಿ ಯಾವ ಪುಳಕ ಎಬ್ಬಿಸಿತ್ತೋ ಇಂದಿಗೂ ಅಷ್ಟೇ ತೀವ್ರವಾಗಿ… ಅಥವಾ ತುಸು ಹೆಚ್ಚೇ ಕಲಕುತ್ತಿದೆ ಅದು ನನ್ನ.

‍ಲೇಖಕರು ಶ್ರೀಪಾದ್ ಭಟ್

August 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Kavya Kadame

    ಸರ್ ಬರಹ ಸೊಗಸಾಗಿ ಮೂಡಿಬಂದಿದೆ. ಬಣ್ಣದ ಪುಳಕ ನಿಮ್ಮನ್ನು ಸೆಳೆದ ಬಗೆಯನ್ನು ಚಿತ್ರವತ್ತಾಗಿ ಕಟ್ಟಿಕೊಟ್ಟಿದ್ದೀರಿ. ನಾಟಕ ಮುಗಿದರೂ ಬಣ್ಣ ಒರೆಸದ ನಟ ನಾನು ಎಂಬ ಮಾತು ರಂಗಭೂಮಿಯ ತೀಕ್ಷ್ಣವಾದ, ಗಾಢವಾದ ಪ್ರಭಾವವ ಧ್ವನಿಸುತ್ತದೆ. ಮುಂಬರುವ ಲೇಖನಗಳ ಬಗ್ಗೆ ಕುತೂಹಲವಿದೆ.

    ಪ್ರತಿಕ್ರಿಯೆ
  2. Manjukodagu

    ಶ್ರೀಪಾಧ್ ಸಾರ್ .. ಮೊದಲ ಸಲ ರಂಗಿನ ಬಣ್ಣ ಹಚ್ಚಿ ಮನೆಮನೇಲಿ ಕುಣಿದದ್ದು, ಅಜ್ಜಿ ಕೈಗೆ ಕಾಸಿತದ್ದು…. ಚೆನ್ನಾಗಿದೆ. ಮುಂದಿನ ನಿಮ್ಮ ಬರಹಗಳನ್ನು ಎದುರುನೋಡುತ್ತಿರುವೆ… ಚೆನ್ನಾಗಿದೆ ಲೇಖನ . ಶುಭವಾಗಲಿ. Subdcribe ಆಗೋದು ಹೇಗೆ ತಿಳಿಸಿ.

    ಪ್ರತಿಕ್ರಿಯೆ
  3. ಪ್ರೊ. ಆರ್. ಎಸ್. ನಾಯಕ, ಭಟ್ಕಳ

    ಒಬ್ಬ ಮನುಷ್ಯ ತನ್ನನ್ನು ತಾನು ಯಾವು ಆಡಂಬರವಿಲ್ಲದೆ ಎಷ್ಟು ಸಹಜವಾಗಿ ತೆರೆದುಕೊಳ್ಳಲು ಸಾಧ್ಯ ಎಂಬುದರ ಅರಿವಾಯಿತು. ಧನ್ಯವಾದಗಳು ಶ್ರೀಪಾದರೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: