“ಚರಿತ್ರೆ ನಿನ್ನನ್ನ ಬಿಡ್ತಿಲ್ವಲ್ಲೇ…”

“ಈ ಎಲೆನಾ ಅನ್ನೋ ಹುಡುಗಿ ಜೊತೆ ಇದ್ದು ಇದ್ದು ನಿನಗೆ ಬೋರ್ ಆಗೋದಿಲ್ವಾ, ನಿನ್ನ ವಯಸಿನಲ್ಲಿ ನಾನು ಈ ಚರಿತ್ರೆ ಅನ್ನೋ ಹುಳ  ಬಿಟ್ಟುಕೊಳ್ಳದೆ ನೆಮ್ಮದಿಯಾಗಿ ಬಾರ್ಸಾದ ಬೀಚಿನಲ್ಲಿ ಖುಷಿಯಾಗಿದ್ದೆ. ನಿನ್ನ ಕಥೆ ಒಂಥಾರಾ ಬೋರಿಂಗಪ್ಪ, ಗತಕಾಲದ ವೈಭವವನ್ನ ಎಷ್ಟು ಮೆರೆಸಬೇಕೋ ಅಷ್ಟೇ ಮೆರೆಸಬೇಕು. ಅದು ಮುಗಿದುಹೋದ ಅಧ್ಯಾಯ, ನಾನ್ಸೆನ್ಸ್” ಎಂದು ಬೆಳಗ್ಗೆ ಬೆಳಗ್ಗೆ ಶಾಂಪೇನ್ ಹಿಡಿದು ಡೈನಿಂಗ್ ಟೇಬಲ್ ಹತ್ತಿರ ಕೂತಿದ್ದಳು ಮನೆ ಒಡತಿ. “ಓಹ್  ಅಕ್ಕೋರು ಬೆಳಗ್ಗೆ ಬೆಳಗ್ಗೆನೇ ಟೈಟು ” ಎಂದುಕೊಂಡು ನಕ್ಕು ಕಾಫಿ ಮಾಡಲು ಕಾಫಿ ಮೇಕರ್ ಹತ್ತಿರ ಹೋದಳು. “no hay leche en la casa” ಸಹ ಬಡಬಡಿಸುತ್ತಿದ್ದಳು. ಮನೆ ಒಡತಿ ಒಮ್ಮೊಮ್ಮೆ ಹುಡುಗಿಗೆ ಸ್ನೇಹಿತೆಯಾಗಿ, ಒಮ್ಮೊಮ್ಮೆ ತಾಯಿಯಾಗಿ ಇಲ್ಲಾ ಥರಾವರಿ ಕಥೆ ಹೇಳುವ ರಂಗಬಿರಂಗಿ ಆಂಟಿಯಾಗಿದ್ದಳು. ಒಂದು ವಯಸ್ಸಿನಲ್ಲಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಿದ್ದವಳು ತಾನೇ ಎಲ್ಲವನ್ನು ಕಟ್ಟಿಕೊಂಡು ಬದುಕುತ್ತಿರುವ ಗಟ್ಟಿಗಿತ್ತಿಯಾಗಿದ್ದಳು. ಮನೆಗೆ ಬರಿ ಓದೋ ಮಕ್ಕಳನ್ನ ಮಾತ್ರ ಬಾಡಿಗೆಗೆ ಕರೆದು ಇಟ್ಟು ಕೊಳ್ಳುತ್ತಿದ್ದಳು. ಓದು ಅವಳಿಗೆ ಮರೀಚಿಕೆಯಾಗಿದ್ದಕ್ಕೇನೋ ಮಗಳಿಗೆ ಓದುವ ಹುಮ್ಮಸ್ಸು ಬರಲಿ ಎಂದು ಬಾಡಿಗೆಗೆ ಇರುವ ಮಕ್ಕಳನ್ನು ಮಗಳಿಗೆ ಆ ಪಾಠ ಹೇಳಿಕೊಡಿ ಈ ಪಾಠ ಹೇಳಿಕೊಡಿ ಎಂದೂ ದುಂಬಾಲು ಬೀಳುತ್ತಿದ್ದಳು.

“ಲೇ ನಮ್ಮ ಬಾರ್ಸಾದ ಮಾತೆ ನನಗೆ ಎಲೆನಾ ಜೊತೆ ಸೇರಿ ಅಜ್ಜಿಯ ಹಾಗೆ ಆಗಿದ್ದೀಯಾ ಅನ್ನುತ್ತಿದ್ದಾಳೆ ಏನ್ ಮಾಡೋದು” ಎಂದು ಕುಶಾಗ್ರನಿಗೆ ಫೋನ್ ಹಚ್ಚಿದಳು ಹುಡುಗಿ. “ಹಾಹಾ ಆಕೆ ಹೇಳಿದ್ದು ಸರಿಯಾಗಿದೆ, ನೀನು ಅದೇನು ಚರಿತ್ರೆ ಅದು ಇದು ಅಂತ ಹುಡುಕೊಂಡು ಹೋಗೋದು, ಅದೇನೋ ನೋಟ್ಸ್ ಮಾಡಿಕೊಳ್ಳೋದು, ಥೇಟ್ ಒಳ್ಳೆ ಸ್ಪೈ ಥರ ಆಡ್ತಿದ್ದೀಯಾ, ನಾವು ಭರ್ಜರಿಯಾಗಿ ಬೀದಿ ಸುತ್ತುತ್ತಿದ್ದೀವಿ, ಏನ್ ಬರ್ತ್ಯಾ ಏನ್ ಕಥೆ” ಎಂದು ಕುಶಾಗ್ರ ಮತ್ತು ಸಿಡ್ ಇಬ್ಬರೂ ಕರೆದರು.

ಬಾರ್ಸಾದ ಮೂಲೆ ಮೂಲೆಯಲ್ಲೂ  ಒಂದೊಂದು ಕಥೆಯಿದೆ ಅನ್ನೋದು ಎಲ್ಲರಿಗೂ  ಗೊತ್ತಿತ್ತು. ಆದರೆ ಮೂಲೆಮೂಲೆಯಲ್ಲೂ ಒಂದು ಪಬ್ ಮತ್ತು ಒಳ್ಳೆ ಸಂಗೀತ ಸಹ ಇದೆ ಅನ್ನೋದು ಗೊತ್ತಿರಲ್ಲಿಲ್ಲ. ಇವತ್ತು ಪಬ್ ಹಾಪಿಂಗ್ ಅಂದ ಮನಸ್ವಿ, “ಬೆಳಗ್ಗೆ ೧೦ ಘಂಟೆಗೆ ಯಾವ ಸೀಮೆ ಪಬ್ ತೆಗೆದಿರತ್ತೆ ಮಾರಾಯ, ನೀ ಬೇಗ ಎದ್ದಿದ್ರೆ ಜಗತ್ತೆಲ್ಲಾ ಬೇಗ ಎದ್ದಿರತ್ತಾ ಹೇಳು” ಎಂದು ಹುಡುಗಿ ನಗುತ್ತಾ ಇವರನ್ನ ರೇಗಿಸಿಕೊಂಡು ಬರುತ್ತಾ ಇದ್ದಳು.

“ಒಂದು ಲೋಟ ಕಾಫಿ ಮಾತ್ರ ಕುಡಿದಿರೋದು, ಅದು ಹಾಲಿಲ್ಲದೆ. ನನಗೆ ಹಸಿವು” ಎಂದು ಹುಡುಗಿ ಅಯ್ಯೋ ಪಾಪದ ಮುಖ ಮಾಡಿದಾಗ, ಅಬಲೆಯಾದ ಭಾರತೀಯ ಹೆಣ್ಣಿಗೆ ಅಭಯಹಸ್ತ ನೀಡುವ ಭಾರತೀಯ ಗಂಡಸರಾಗಿ ಕುಶಾಗ್ರ, ಮನಸ್ವಿ ಮತ್ತು ಸಿಡ್  ತಿಂಡಿ ಸಿಗುವ ಜಾಗವನ್ನ ಹುಡುಕುವುದಕ್ಕೆ ಹೊರಟರು. ಬೆಳಗ್ಗೆ ಹನ್ನೊಂದು ಘಂಟೆಗೆ ಅಂಗಡಿ ಓಪನ್ ಮಾಡುವ ಉಮೇದಿನಲ್ಲಿದ್ದ ಬಾರ್ಸಾ ಜನಕ್ಕೆ ಭಾರತೀಯರ ಬೆಳಗ್ಗೆ ಬೆಳಗ್ಗೆ ಬೇಗ ಬೀದಿ ತಿರುಗುವ ಹುಚ್ಚು ಸ್ವಲ್ಪ ಸ್ಟುಪಿಡ್ ಅನ್ನಿಸಿತ್ತು. ಮನೆ ಹತ್ತಿರ ಇದ್ದ ಎಸ ಎಲ್ ವಿ, ಪ್ರಸಿದ್ಧಿ ಹಾಗೂ ರಾಘವೇಂದ್ರ ಉಪಾಹಾರವನ್ನ ನೆನಪಿಸಿಕೊಂಡೆ ಬಾಯಲ್ಲಿ ನೀರೂರುತ್ತಿತ್ತು ಹುಡುಗಿಗೆ. “ಅಯ್ಯೋ ವಿಧಿಯೇ” ಥೇಟ್ ಕಂಪೆನಿ ನಾಟಕದ ಹಾಗೆ ಡೈಲಾಗ್ ಹೊಡೆಯೋಣ ಅಂದುಕೊಳ್ಳುವಷ್ಟರಲ್ಲಿ ಲಾ ಆಡಿಟೋರಿಯಲ್ಲಿ ದೊಡ್ಡ ಬ್ಯಾನರ್ ಕಟ್ಟುತ್ತಿದ್ದರು.

ಲಾ ಆಡಿಟೋರಿ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ಥರಹ. ಜಗತ್ತಿನ ದೊಡ್ಡ ಸಂಗೀತಗಾರರೆಲ್ಲಾ ಅಲ್ಲಿ ಬಂದು ಹಾಡುತ್ತಾರೆ, ತಮ್ಮ ಕಚೇರಿಗಳನ್ನ ಕೊಡುತ್ತಾರೆ. ಒಳ್ಳೆ ಸಿಂಫೋನಿ ಆರ್ಕೆಸ್ಟ್ರಾ, ಪ್ಲಾಮೆಂಕೋ ಸಂಗೀತ ಎಲ್ಲವೂ ಇಲ್ಲಿ ಬಹಳ ಉನ್ನತ ಮಟ್ಟದ್ದಾಗಿರುತ್ತದೆ. ಕಾಲೇಜಿಂದ ಮನೆಗೆ ಬರುವ ದಾರಿಯಲ್ಲೇ ಇರುವ ಈ ಜಾಗ ಕೆಲವೊಮ್ಮೆ ಹಳೆ ಬೆಂಗಳೂರಿನ ಸುಮಾರು ದೃಶ್ಯಾವಳಿಗಳನ್ನ ನೆನಪಿಸುತ್ತಿತ್ತು.

ಇಂಗ್ಲಿಷಿನಲ್ಲಿ ದೊಡ್ಡ ಬ್ಯಾನರ್ ಹಾಕಿ ಬರೆದ್ದದ್ದನ್ನ ನೋಡಿ, “ಝಾಕಿರ್ ಹುಸೇನ್ ಬಂದಿರಬೇಕು ಅಥವಾ ಎಸ ಪಿ ಬಿ, ಇಂಗ್ಲಿಷಿನಲ್ಲಿ ಬ್ಯಾನರ್ ಹಾಕುತ್ತಿದ್ದಾರೆ” ಎಂದು ೪ ಜನ ಗುಡುಗುಡು ಓಡಿಹೋಗಿ ನೋಡಿದರೆ, “ಕತಲೂನ್ಯ ಇನ್ ಸೆಕೆಂಡ್ ವರ್ಲ್ಡ್ ವಾರ್” ಎಂದು ರಕ್ತ ವರ್ಣದಲ್ಲಿ ಹಾಕಲಾಗಿತ್ತು. ಹುಡುಗಿಗೆ ಬೋರ್ ಆಗಿ, “ಆಯ್ತು ಬನ್ರೋ, ನಮ್ಮ ಕಥೆ ಇಷ್ಟೇ” ಎಂದು ಮುಂದಕ್ಕೆ ನಡೆದುಕೊಂಡು ಹೋಗೋದು ಎಂದು ಅಂದುಕೊಳ್ಳುವಷ್ಟರಲ್ಲಿ, “Free food” ಎಂಬ ಸಣ್ಣ ಫಲಕವನ್ನು ನೋಡಿ ಪುಳಕಿತಗೊಂಡ ಕುಶಾಗ್ರ. “ಏನಾದ್ರೂ ಆಗಲಿ ಇಲ್ಲಿಗೆ ಹೋಗೋಣ, ಸರಿಯಾಗಿ ಬಾರಿಸಬಹುದು” ಎಂದು ಮನಸ್ವಿ ಸಹ ಹೇಳಿದ. “೫ ಯುರೋದಲ್ಲಿ ಒಳ್ಳೆ ತಿಂಡಿ, ಹಣ್ಣಿನ ರಸ, ಹಣ್ಣು ಮತ್ತು ಚಾಕಲೇಟ್ ಸಿಗೋದಕ್ಕೆ ಸಾಧ್ಯಾನೇ ಇಲ್ಲ, ಇವರದೇನೋ ಕಥೆ ಕೇಳಬೇಕು ತಾನೇ, ಕೇಳೋಣ ಹೇಗಿದ್ದರೂ ಚೆನ್ನಾಗಿ ತೋಡಿರುತ್ತೇವೆ, ಸರಿಯಾಗಿ ನಿದ್ದೆ ಮಾಡಬಹುದು” ಎಂದು ಸಿಡ್ ಐಡಿಯಾ ಕೊಟ್ಟು ಕ್ಯೂನಲ್ಲಿ ನಿಲ್ಲಲ್ಲು ಹೋದ.

“ಚರಿತ್ರೆ ನಾ ನೀನು ಬಿಡ್ತೀನಿ ಅಂದ್ರು ಚರಿತ್ರೆ ನಿನ್ನನ್ನ ಬಿಡ್ತಿಲ್ವಲ್ಲೇ” ಎಂದು ಥೇಟ್ ಸಂಸ್ಕಾರದ ಸ್ಟೈಲಿನಲ್ಲಿ ಹೇಳಿ ನಕ್ಕು ಹುಡುಗರು ಸರತಿಗಾಗಿ ಕಾದರು. “ನನಗೆ ವಿಶ್ವಯುದ್ಧದ ಬಗ್ಗೆ ಆಸಕ್ತಿ ಇಲ್ಲ, ಅದು ನಮ್ಮ ಭಾರತದವರನ್ನ ಶೋಷಣೆ ಮಾಡಿದ ಬ್ರಿಟಿಷರ ಕಥೆ ಇರುತ್ತದೆ, ನಾವ್ಯಾಕೆ ಸಾಯಬೇಕು ಅವರ ಯುದ್ಧದಲ್ಲಿ” ಎಂದು ಹುಡುಗಿ ಪ್ರತಿಭಟಿಸಲು ಹೋದಾಗ, “ನೋಡು ನನ್ನ ಕಣ್ಣ ಮುಂದೆ ಹಾಮೋನ್, ಬ್ರೆಡ್ಡು, ಸೋಡಾ, ಬಾಳೆ ಹಣ್ಣು ಎಲ್ಲಾ ಬರುತ್ತಿದೆ, ರಸಭಂಗ ಮಾಡಬೇಡ, ನೀನು ಮನೆಗೆ ಹೋದರು  ಚಿಂತೆಯಿಲ್ಲ,ನಾವು ಇಲ್ಲಿ ಇದ್ದೆ ಇರುತ್ತೇವೆ” ಎಂದು ಹುಡುಗರು ಸೀರಿಯಸ್ಸಾಗಿ ನುಡಿದರು.

“ಸರಿ ಆಯ್ತು” ಎಂದು ಹುಡುಗಿ ಅಲ್ಲಿ ಚೆನ್ನಾಗಿ ತಿಂಡಿ ತಿಂದು, ಆಡಿಟೋರಿಯಮ್ಮಿನಲ್ಲಿ ಕೂತಳು. ಅದೊಂದು ತ್ರೀಡಿ  ಷೋ ಆಗಿತ್ತು. “ಇಲ್ಲಿ ನಮ್ಮ ದೇಶ ಸ್ವಾತಂತ್ರ್ಯಕ್ಕೆ ಹೋರಾಡುವಾಗ ವಿಶ್ವಯುದ್ಧದಲ್ಲೂ ಭಾಗವಹಿಸಿತು, ನಾವು ಯಾವತ್ತಿಗೂ ನ್ಯಾಯದ ಪರ” ಎಂದು ಡಿಸ್ಕಲೆಮರ್ ಹೇಳಿ ಶುರುಮಾಡಲಾಯಿತು. ಯುದ್ಧ ಮಾಡುವ ಎಲ್ಲರೂ  ತಾವು ಧರ್ಮದ ಪರ ಎಂದು ಹೇಳುವವರೇ. ಅವರ ಜಯಕ್ಕೆ ತಕ್ಕ ಹಾಗೆ ಧರ್ಮಗಳನ್ನ ಎಲ್ಲರಿಗು ತಿಳಿಸಿ ತಾವು ಎಷ್ಟು ಸರಿ ಎಂದು ವಾದಿಸುವವರು. ನನ್ನ ಶತ್ರುವಿನ ಶತ್ರು ನನ್ನ ಪ್ರಾಣ ಸ್ನೇಹಿತ ಅನ್ನುವ ಹಾಗೆ , ಸ್ಪೇನ್ ಎರಡನೇ ವಿಶ್ವಯುದ್ಧದ ಸಮಯದಲ್ಲಿ ನ್ಯೂಟ್ರಲ್ ಆಗಿತ್ತು ಆದರೆ ಮೆಲ್ಲಗೆ ತನ್ನ ಬೇಳೆಯನ್ನು  ಬೇಯಿಸಿಕೊಳ್ಳುತ್ತಿತ್ತು. ಇದನ್ನ ಗಮನಿಸಿದ ಇಟಲಿ, ಇವರು ನ್ಯೂಟ್ರಲ್ ಅಂದುಕೊಂಡು ನಮ್ಮ ವೈರಿಪಡೆಗೆ ಸಹಾಯ ಮಾಡುತ್ತಾರೆ ಎಂದು ಹೆದರಿ ಇವರ ದೇಶವನ್ನೇ ಸ್ವಲ್ಪ ಅಲ್ಲೋಲ ಕಲ್ಲೋಲ ಮಾಡೋಣ ಎಂದು ಕತಲನ್ನರ ಹೋರಾಟಕ್ಕೆ ಬಾಂಬು, ಟ್ಯಾಂಕರ್ ಗಳನ್ನ ಕೊಡಲು ಸಿದ್ಧಮಾಡಿಕೊಂಡಿತ್ತು. ಆಗಾಗ ಕೆಲವು ಮಾಹಿತಿಯನ್ನು ಹೋರಾಟಗಾರರಿಗೆ ರವಾನೆ ಮಾಡುತ್ತಿತ್ತು. ಸ್ಪೇನ್ ತಟಸ್ಥರಾಗಿ ಸುಮ್ಮನೆ ಕೂರುವ ಬದಲು ತನ್ನ  ಬುಡ ಅಲ್ಲಾಡುವ ಹಾಗೆ ಆಗಲಿ ಎಂದು ಈ ಥರಹದ  ಕುತಂತ್ರವನ್ನು ಮಾಡಿತ್ತು.

ಆದರೆ ಇವರಿಗೆ ಕತಲನ್ನರ ಸ್ವಾತಂತ್ರ್ಯದ ಮೇಲೆ ಆಸಕ್ತಿ ಏನು ಇರಲಿಲ್ಲ ಇದನ್ನ ಅರಿತ ಹೋರಾಟಗಾರರು ಇಟಲಿಯವರನ್ನ ಮೆಲ್ಲಗೆ ದೂರ ತಳ್ಳಲು ಶುರುಮಾಡಿದರು. ಇದು ಅವರಿಗೂ ಗೊತ್ತಾಗಿ ಸ್ಪೇನಿನವರ ಹತ್ತಿರವೇ ಹೋರಾಟಗಾರರ ಪಿತೂರಿಯನ್ನ ತಿಳಿಸಿದರು. ಅಷ್ಟರಲ್ಲಿ ಸಿವಿಲ್ ವಾರ್ ಬಹಳ ದೊಡ್ಡ ಮಟ್ಟದಲ್ಲಿ ಆಗುತ್ತಿದ್ದರಿಂದ ಮುಸಲೋನಿಯ ಆರ್ಮಿ ಬಾರ್ಸಿಲೊನಾಗೆ ಬಾಂಬ್ ಹಾಕಿತ್ತು, ಸ್ಪೇನಿಗೆ ಪರೋಕ್ಷ ಸಹಾಯ ಮಾಡಿ ತಟಸ್ಥವಾಗಿದ್ದ ದೇಶವನ್ನ ಯುದ್ಧಕ್ಕೆ ಕರೆತಂದರು. ಅಲ್ಲೂ ಇಲ್ಲ, ಇಲ್ಲೂ ಇಲ್ಲ ಸ್ಥಿತಿಯಲ್ಲಿ ಹೋರಾಟಗಾರರು ಇದ್ದರು.

ಒಂದಷ್ಟು ಜನ ಸೋವಿಯತ್ ಒಕ್ಕೂಟದ ಜೊತೆ ಸೇರಿ ಹೋರಾಡಲು ಶುರು ಮಾಡಿದರು. ಹೋರಾಟಗಾರದ್ದು ಬೇರೆ ಬೇರೆ ಭಾಗಗಳಾಯಿತು. ಆದರೆ ಒಬ್ಬ ಸ್ವಾರಸ್ಯಕರವಾದ ವ್ಯಕ್ತಿಯೊಬ್ಬನಿದ್ದ. ಯುವಾನ್ ಪ್ಯೂಜೊಲ್ ಗ್ರಾಸಿಯಾ ಎಂದು. ಇವನು ಸ್ಪೇನಿನ ಅತಿ ಬುದ್ಧಿವಂತ ಮನುಷ್ಯ ಎನ್ನುತ್ತಾರೆ. ಇವನು ಆಗಿನ ಕಾಲದಲ್ಲಿ ಬದ್ಧ ವೈರಿಗಳಾದ ಜರ್ಮನಿ ಮತ್ತು ಬ್ರಿಟಿಷರಿಗೆ ಡಬಲ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ.

ಮೊದಲು ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಮಾನವ ಜನಾಂಗಕ್ಕೆ ಒಳ್ಳೆಯದು ಮಾಡುತ್ತೇನೆ ಎಂದು ತಾನು ಮತ್ತು ತನ್ನ ಹೆಂಡತಿ ಬ್ರಿಟಿಷರಿಗೆ ಸಹಾಯ ಮಾಡುತ್ತೇನೆಂದು ಎರಡು ಮೂರೂ ಬಾರಿ ಮಿಲಿಟರಿಗೆ ಪತ್ರ ಬರೆದು ತಾನು ಬ್ರಿಟಿಷರಿಗೆ ಸ್ಪೈ ಆಗುತ್ತೇನೆಂದು ಹೇಳಿದ… ಅಷ್ಟು ಬಾರಿ ಬ್ರಿಟೀಷರು ಕ್ಯಾರೇ ಅನ್ನಲಿಲ್ಲ. ಸರಿ ಎಂದು ತಾನು ನಾಜ್ಹಿಗಳ ಬೆಂಬಲಿಗ ಎಂದು ಡಂಗುರ ಸಾರಿಕೊಂಡು ಸ್ಪೇನಿನಲ್ಲಿ ಕೆಲಸ ಮಾಡುತ್ತಿರುವ ನಾಜ್ಹಿ ಬೆಂಬಲಿತ ಸರ್ಕಾರಿ ಅಧಿಕಾರಿ ಎಂದು ಲಂಡನ್ನಿಗೆ ಹೋಗಿ ಪೋಸ್ ಕೊಟ್ಟ. ಅಲ್ಲಿ ಅದನ್ನ ನಂಬಿದ ಬ್ರಿಟೀಷರು ಅವನ್ನನ್ನ ಲಿಸ್ಬನ್ನಿಗೆ ಹೋಗಿ ಹೊಸ ಏಜೆಂಟ್ ರನ್ನ ನೇಮಕಾತಿ ಮಾಡಲು ಸುಮಾರು ದುಡ್ಡನ್ನ ಕೊಡಲಾಯಿತು.

ಇದೆ ನಾಟಕದ ಮತ್ತೊಂದು ಭಾಗವನ್ನು ಜರ್ಮನ್ನರಿಗೆ ಆಡಿ  ತೋರಿಸಿ ಅಲ್ಲೂ ತನ್ನ ಬೇಳೆಯನ್ನ ಬೇಯಿಸಿಕೊಳ್ಳುತ್ತಿದ್ದ. ಪೇಪರಿನ ಮೇಲೆ ಎಷ್ಟೊಂದು ಜನರನ್ನ ನೇಮಿಸಿಕೊಂಡಿದ್ದೇನೆ ಎಂದೆಲ್ಲಾ ಕಥೆ ಹೇಳಿ ದುಡ್ಡು ಕಿತ್ತುಕೊಂಡು ಹಾಯಾಗಿದ್ದ. ಜರ್ಮನಿಯವರನ್ನ ಒಂದು ಜಾಗದಲ್ಲಿ ಬ್ರಿಟೀಷರು  ದಾಳಿ ಮಾಡುತ್ತಾರೆಂದು ಸುಳ್ಳುಸುಳ್ಳೇ ಹಬ್ಬಿಸಿ ಬ್ರಿಟೀಷರು  ಸಹ ಅದನ್ನ ನಂಬಿ ಬಾಂಬ್ ದಾಳಿ ಮಾಡಿದ್ದರು. ಎರಡು ಕಡೆಯಿಂದ ಅವನಿಗೆ ಸನ್ಮಾನಗಳೂ  ಆಯ್ತು. ೧೯೪೪ರಲ್ಲಿ ಜರ್ಮನಿಯವರಿಂದ ಐರನ್ ಕ್ರಾಸ್ ಶೀಲ್ಡ್. ಅದೇ ವರ್ಷ ನವೆಂಬರಿನಲ್ಲಿ ಬ್ರಿಟಿಷರಿಂದ ಎಂ ಬಿ ಈ ಪಡೆದುಕೊಂಡು ಸುಖವಾಗಿದ್ದ….

“ಈಗ ಡ್ರಿಂಕ್ಸ್ ಬ್ರೇಕ್” ಎಂದು ನಿರೂಪಕಿ ಹೇಳಿದಾಗ, ಪಕ್ಕದ ಸೀಟಿನಲ್ಲಿ  ಗೊರಕೆ ಸಡ್ಡು ಕೇಳಿಸಿತ್ತು…

August 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: