ತೇಜಸ್ವಿಯವರಿಗೆ ‘ಗುಡ್ ಡೇ’ ಬಿಸ್ಕತ್ ಗಿಫ್ಟ್..

­ಎತ್ತಣಿಂದೆತ್ತ ಸಂಬಂಧವಯ್ಯಾ!

ಮೂಲತಃ ­ತುಮಕೂರು ­ಜಿಲ್ಲೆ ಕುಣಿಗಲ್ ­ತಾಲ್ಲೂಕಿನ ಹಿತ್ತ­ಲಪುರ­ವೆಂಬ ಕುಗ್ರಾಮದ­ವ­ನಾದ ­ನನಗೂ ­ದೂರದ ಮಲೆನಾ­ಡಿನ ಕುಪ್ಪಳಿಗೂ ­ಯಾವ ­ಸಂಬಂಧ? ­

ಬಾಲ್ಯವನ್ನು ಹಳ್ಳಿಯಲ್ಲಿ ­ಕಳೆದು, ವಿದ್ಯಾಭ್ಯಾ­ಸವನ್ನು ಬೆಂಗಳೂ­ರಿ­ನಲ್ಲಿ ಮುಗಿಸಿ, ­ಅಲ್ಲೇ ­ಉನ್ನತ ನೌಕರಿ ­ಹಿಡಿದು ಜಂಜಾ­ಟದ ­ಜೀವನ ­ಸಾಗಿಸಿ, ­ಕನ್ನಡ ವಿಶ್ವ­ವಿದ್ಯಾ­ಲಯದ ಹುಟ್ಟಿನೊಂ­ದಿಗೆ ಬಳ್ಳಾರಿಯ ಗಣಿದೂ­ಳಿನ ಪರಿ­ಸರವನ್ನು ­ಅಪ್ಪಿಕೊಂಡು, ­ಇದೀಗ ಆಕಸ್ಮಿಕ ­ಎನ್ನುವಂತೆ ­ಕುಪ್ಪಳಿಯ ­ಕುವೆಂಪು ­ಅಧ್ಯಯನ ಕೇಂದ್ರಕ್ಕೆ ­ಬಂದು ನಿಂತಿದ್ದೇನೆ! ­

ಹಾಗೆ ನೋಡಿದರೆ ­ಕುಪ್ಪಳಿಯ ಪರಿ­ಸರ ­ನನಗೆ ಹೊಸದೇನೂ ­ಅಲ್ಲ. ­ನನ್ನ ­ವಿದ್ಯಾರ್ಥಿ ದಿಸೆಯಿಂದಲೂ ­ಕುವೆಂಪು ಬರೆ­ಹವನ್ನು ­ಹಚ್ಚಿಕೊಂಡು ಓದಿದವನು. ­ಕನ್ನಡ ­ಎಂ.ಎ. ನಲ್ಲಿ ­ಕುವೆಂಪು ಪತ್ರಿ­ಕೆಗೆ ರಾಜರತ್ನಂ ಚಿನ್ನದ ­ಪದಕ ­ಪಡೆದ ಹೆಗ್ಗ­ಳಿಕೆ ­ನನ್ನದು. ಆ ಅಭಿಮಾನದಿಂದಲೇ ­ಹಲವು ­ಬಾರಿ ಕುಪ್ಪಳಿಗೆ ­ಬಂದು ­ಹೋಗಿದ್ದೆ. ಮೈಸೂರಿನಲ್ಲಿ ­ಕುವೆಂಪು ­ಅವರನ್ನು ಎರಡು ಬಾರಿ ­ಭೇಟಿ ­ಮಾಡಿಯೂ ­ಬಂದಿದ್ದೆ. ­

ಕಾಡು ಮೇಡುಗಳನ್ನು ­ಹಚ್ಚಿಕೊಂಡು ಮೂರು ದಶಕಗಳ ­ಕಾಲ ­ಇಡೀ ­ಪಶ್ಚಿಮ ­ಘಟ್ಟ ­ಮತ್ತು ಕರಾ­ವಳಿಯ ­ವನಪ್ರದೇ­ಶಗಳನ್ನು ­ಅಲೆದಾಡಿದ್ದೆ. ­ಕನ್ನಡ ವಿಶ್ವವಿದ್ಯಾಲಯದ ಬುಡ­ಕಟ್ಟು ­ಅಧ್ಯಯನ ವಿಭಾಗದ ಪ್ರಾಧ್ಯಾಪಕ­ನಾಗಿ ­ಮತ್ತಷ್ಟು ­ಅಲೆಯುವ ಸುಯೋಗವೂ ­ನನಗೆ ಲಭಿಸಿತ್ತು. ­ಆದರೆ ­ನನ್ನ ­ನೆಚ್ಚಿನ ­ಕವಿಯ ­ದೇಹ ಮಿಲ­ನ­ವಾದ ­ಈ ಮಣ್ಣಿ­ನಲ್ಲಿ ­ಕಾಯಕ ­ಮಾಡುವ ಸುಯೋಗವೊಂದು ಲಭಿಸುತ್ತದೆ ­ಎಂದು ­ನಾನು ­ಎಂದೂ ಎಣಿಸಿರ­ಲಿಲ್ಲ.

‘ಕನ್ನಡ ವಿಶ್ವ­ವಿದ್ಯಾ­ಲಯದ ­ಹಂಗಾಮಿ ಕುಲಪತಿಯೂ ಸೇರಿದಂತೆ ಹಲವು ­ಉನ್ನತ ಹುದ್ದೆಗಳನ್ನು ಅಲಂಕ­ರಿ­ಸಿದ ­ನೀನು ­ಕುಪ್ಪಳಿಯ ­ಪುಟ್ಟ ಕೇಂದ್ರದಲ್ಲಿ ಮಾಡುವುದಾದರೂ ­ಏನು? ­ಯಾಕೆ ಇಂಥ ­ಮೂರ್ಖ ­ನಿರ್ಧಾರ?’ ­ಎಂದು ­ಛೇಡಿಸಿ ಹೀಗೆಳೆದ ­ಮಿತ್ರರೂ ­ಉಂಟು. ­

ಆ ­ಮಹಾ ಕಾಡಿ­ನಲ್ಲಿ ­ಒಬ್ಬನೇ ­ಹೇಗೆ ಇರುತ್ತೀಯಾ ­ಎಂದು ಹೆದ­ರಿ­ಸಿದ­ವರೂ ­ಉಂಟು. ­ಊಟ ­ತಿಂಡಿ ­ಇಲ್ಲದೆ ­ಆರೋಗ್ಯ ­ಹಾಳು ಮಾಡಿಕೊಳ್ಳುತ್ತೀಯಾ ­ಎಂದು ಎಚ್ಚರಿ­ಸಿದ ­ಹೆಂಡತಿಯ ­ಮಾತನ್ನೂ ­ಬದಿಗೆ ­ತಳ್ಳಿ, ­ಕನ್ನಡ ವಿಶ್ವ­ವಿದ್ಯಾ­ಲಯದ ­ಪುಟ್ಟ ­ಅಧ್ಯಯನ ­ತಾಣ ­‘ಕುವೆಂಪು ­ಅಧ್ಯಯನ ­ಕೇಂದ್ರ’ದ ­ಹೊಣೆ ­ಹೊತ್ತು ­ಹೊರಟು ­ಬಿಟ್ಟಿದ್ದೆ.

ಕಾಕತಾ­ಳಿಯವೋ ­ಎಂಬಂತೆ ಕುಪ್ಪಳಿಯಲ್ಲಿ ­ಕನ್ನಡ ವಿಶ್ವ­ವಿದ್ಯಾಲಯದ ­ಕೇಂದ್ರ ­ಸ್ಥಾಪನೆ ಹಿಂದೆ ­ನನ್ನ ಒತ್ತಾ­ಸೆಯೂ ­ಇತ್ತು. ­ಪ್ರಥಮ ಕುಲಪತಿ ಕಂಬಾರರ ­ನಂತರ ­ಬಂದ ಕುಲಪತಿ ಕಲಬುರ್ಗಿ ­ಅವರು ­ಕುವೆಂಪು ­ಮತ್ತು ­ಬೇಂದ್ರೆ ­ಅವರ ­ಸಮಗ್ರ ಸಾಹಿತ್ಯವನ್ನು ­ಕನ್ನಡ ವಿಶ್ವ­ವಿದ್ಯಾ­ಲಯದಿಂದ ಹೊರತರಬೇಕೆಂದು ಆಸೆಪಟ್ಟಿದ್ದರು. ­

ಮೊದಲು ಬೇಂದ್ರೆಯವರ ­ಮಗನನ್ನು ­ಒಪ್ಪಿಗೆ ನೀಡುವಂತೆ ­ಕೇಳಿದರು. ­ಆದರೆ ಅವರು ಒಪ್ಪಲಿಲ್ಲ. ­ಕುವೆಂಪು ­ಸಾಹಿತ್ಯ ಪ್ರಕ­ಟಣೆಗಾಗಿ ­ಒಪ್ಪಿಗೆಯನ್ನು ಪೂರ್ಣಚಂದ್ರ ­ತೇಜಸ್ವಿ ­ಮತ್ತು ­ತಾರಿಣಿ ­ಅವರನ್ನು ­ಭೇಟಿ ­ಮಾಡಿ ಕೇಳಬೇಕಾ­ಗಿತ್ತು. ಖಂಡತುಂಡ ಅಭಿಪ್ರಾಯದ ­ತೇಜಸ್ವಿ ಏನನ್ನುತ್ತಾರೋ ­ಎಂಬ ­ಭಯ. ಯಾಕೆಂದರೆ ­ಈ ­ಹಿಂದೆ ­ಅಂಥ ಅನುಭ­ವವೊಂದು ­ನಮಗೆ ­ಆಗಿತ್ತು. ­ಕನ್ನಡ ವಿಶ್ವ­ವಿದ್ಯಾ­ಲಯದ ಪ್ರತಿಷ್ಠಿತ ‘­ನಾಡೋಜ’ ­ಪದವಿಯನ್ನು ­ಅವರಿಗೆ ನೀಡಬೇಕೆಂದು ತೀರ್ಮಾ­ನಿಸಿ, ­ಅವರನ್ನು ­ಒಪ್ಪಿಸಲು ­ಡಾ. ಕಲಬುರ್ಗಿಯವರು ­ನನ್ನನ್ನೂ ಹಾಗೂ ಡಾ. ಕರೀಗೌಡ ಬೀಚನಹಳ್ಳಿ ಅವರನ್ನು ಕಳಿ­ಸಿದ್ದರು.

ಆಗ ­ಇಂಥ ಪದ­ವಿಗಳು ­ನನಗೆ ­ಬೇಡವೇ ­ಬೇಡ, ­ನನಗೆ ಬಿಡುವಾದಾಗ ­ನಾನೇ ­ಕನ್ನಡ ವಿಶ್ವ­ವಿದ್ಯಾ­ಲಯಕ್ಕೆ ­ಬಂದು ನಿಮ್ಮೆಲ್ಲರೊಡನೆ ­ಕುಂತು ಹರಟುತ್ತೇನೆಯೇ ­ಹೊರತು, ­ಈ ­ಪದವಿ ­ಗಿದವಿ ­ಅಂತ ­ಬಂದರೆ ­ಇನ್ನು ­ಮುಂದೆ ­ನಿಮ್ಮನ್ನು ಮೂಡಿಗೆರೆಗೆ ತಲೆಹಾಕದಂತೆ ಮಾಡುತ್ತೇನೆ ­ಎಂದು ­ಬೈದು ಕಳಿ­ಸಿದ್ದರು.

­ಆದರೂ ­ಕುವೆಂಪು ­ಸಮಗ್ರ ಸಾಹಿತ್ಯವನ್ನು ಪ್ರಕ­ಟಿಸುವ ­ಹಂಬಲ ­ಹೊತ್ತು ­ಮತ್ತೆ ನನ್ನನ್ನೇ ಕಳಿ­ಸಿದ್ದರು. ­ಕನ್ನಡ ವಿಶ್ವ­ವಿದ್ಯಾ­ಲಯದ ­ಡೀನ್ ­ಆಗಿದ್ದ ­ನಾನು ­ಅತ್ಯಂತ ದೀನ­ನಾಗಿ, ­ನಮ್ಮ ಪ್ರಸಾರಾಂಗದ ಆಗಿನ ನಿರ್ದೇ­ಶ­ಕರಾ­ಗಿದ್ದ ­ಪ್ರೊ. ­ಎ.ವಿ. ­ನಾವಡ ­ಅವರನ್ನು ಕರೆದುಕೊಂಡು ಮೂಡಿಗೆರೆ ಹೊರ­ಟಿದ್ದೆ.

ನಾವು ­ಬರುವ ವಿಷಯವನ್ನು ­ಮೊದಲೇ ಫೋನ್‌­ನಲ್ಲಿ ತಿಳಿ­ಸಿದ್ದೆ­ನಾದ್ದ­ರಿಂದ ತೇಜಸ್ವಿಯವರು ಸಹ­ಜ­ವಾ­ಗಿಯೇ ಸ್ವಾಗ­ತಿ­ಸಿದರು. ­ಅದೂ ಇದೂ ಮಾತ­ನಾಡಿ ­ಕುವೆಂಪು ­ಸಮಗ್ರ ­ಕೃತಿ ಪ್ರಕ­ಟಣೆಯ ವಿಚಾರಕ್ಕೆ ­ಬಂದಾಗ ­ತಟ್ಟನೇ ಗಂಭೀರ­ವಾಗಿ, ­ಮುಖ ­ಬಿಗಿ ಮಾಡಿಕೊಂಡು, ­ತಮ್ಮ ­ಎಂದಿನ ಶೈಲಿಯಲ್ಲಿ ­ಎಡಗೈ ­ಹಸ್ತವನ್ನು ­ನನ್ನ ­ಮೂತಿಗೆ ನೇರ­ವಾಗಿ ­ತೋರಿಸುತ್ತಾ ‘­ನೀವು ಇದ್ದೀರಲ್ಲ, ಯೂನಿ­ವರ್ಸಿ­ಟಿಯವರು, ­ಮಹಾ ­ತರ್ಲೆಗಳು ­ಮಾರಾಯ, ­ನಿಮ್ಮ ಯೂನಿ­ವರ್ಸಿ­ಟಿಗಳ ಸಹ­ವಾ­ಸವೂ ­ಬ್ಯಾಡ, ಪ್ರೊಫೆಸರ್‌ಗಳ ಸಹ­ವಾಸ ­ಮೊದಲೇ ­ಬ್ಯಾಡ’ ­ಎಂದು ಹೂಂಕ­ರಿ­ಸಿದರು!

ಸನ್ನಿವೇಶ ­ಒಮ್ಮೆಲೇ ಗಂಭೀರವಾಯಿತು. ­ಐದು ­ನಿಮಿಷ ­ಮೌನ. ­ಅಷ್ಟರಲ್ಲಿ ­ಶ್ರೀಮತಿ ರಾಜೇಶ್ವರಿ ­ಅವರು ­ಕಾಫಿ ­ತಂದರು. ­ಮತ್ತೆ ­ತಣ್ಣನೆ ವಾತಾ­ವರ­ಣಕ್ಕೆ ಹಿಂತಿರುಗಿ ‘­ಕಾಫಿ ­ಕುಡೀರಿ ­ಮೊದ್ಲು ­ಆಮೇಲೆ ­ನೋಡೋಣ’ ­ಎಂದು ­ಹೇಳಿ ­ಮಾಮೂಲಿ ­ಮಾತಿಗೆ ­ಶುರು ­ಮಾಡಿದರು. ­

ತಮ್ಮ ­ಪುಸ್ತಕ ಪ್ರಕಾಶನದ ­ಹೊಣೆ, ­ಅದರ ­ಕಷ್ಟ ­ಸುಖಗಳು, ಇಡಬೇಕಾದ ­ಬೆಲೆ, ಸರ್ಕಾರದ ­ಖರೀದಿಯ ಅವ್ಯವ­ಹಾರ ­ಇತ್ಯಾದಿ ಮಾತುಕತೆಗಳು ನಡೆದವು. ನಡುನಡುವೆ ವಿಶ್ವ­ವಿದ್ಯಾ­ಲಯದ ಪ್ರಸಾರಾಂಗಗಳು ­ಹಾಗೂ ಆಡ­ಳಿತಗಳು ಕುಲಗೆಟ್ಟು ಹೋಗಿರುವ ­ಬಗ್ಗೆ ಖಾರ­ವಾಗಿ ಪ್ರಸ್ತಾಪಿಸುತ್ತಾ ­ಬೈದದ್ದೂ ­ಆಯಿತು. ­

ನಾವು ­ನಮ್ಮ ­ಕೆಲವು ಪ್ರಕ­ಟಣೆಗಳನ್ನು ­ಅವರಿಗೆ ತೋರಿಸುವುದಕ್ಕಾ­ಗಿಯೇ ­ತೆಗೆದುಕೊಂಡು ಹೋಗಿದ್ದೆವು. ­ಕನ್ನಡ ವಿಶ್ವ­ವಿದ್ಯಾ­ಲಯದ ಪ್ರಸಾರಾಂಗವು ­ಅದುವರೆಗೆ ಪ್ರಕ­ಟಿ­ಸಿದ್ದ ಪುಸ್ತ­ಕಗಳು ­ಮತ್ತು ­ಅವುಗಳ ಗುಣಮಟ್ಟ ­ಹಾಗೂ ­ಸುಂದರ ­ವಿನ್ಯಾಸ ­ಇವುಗಳ ­ಬಗ್ಗೆ ­ನಮಗೆ ­ಹೆಮ್ಮೆ ­ಇತ್ತು. ­ಬಹುಶಃ ತೇಜಸ್ವಿಯವರು ­ಇದೆಲ್ಲವನ್ನು ಮೊದ­ಲಿ­ನಿಂದಲೂ ಗಮನಿ­ಸಿಕೊಂಡೇ ­ಬಂದಿದ್ದರು ­ಎಂದು ಕಾಣಿಸುತ್ತದೆ. ಆದ್ದ­ರಿಂದಲೇ ನಮ್ಮ ಪ್ರಸಾರಾಂಗದ ­ವಿಚಾರ ­ಬಂದಾಗ ­ಅವರು ಮೆದುವಾಗುತ್ತಿದ್ದರು. ­

ಅಂತೂ ­ಅನೇಕ ಷರತ್ತುಗಳ ­ನಡುವೆ ­ಮತ್ತು ಪುಸ್ತಕಗಳ ಗುಣಮಟ್ಟ ­ಮತ್ತು ವಿನ್ಯಾ­ಸದ ­ಹೊಣೆಯನ್ನು ­ಅವರಿಗೇ ವಹಿ­ಸಿದ ­ನಂತರ ­ನಮ್ಮ ­ಹಾದಿ ಸುಗಮವಾಯಿತು. ಮೊದಲ ಹಂತದಲ್ಲಿ ­ಕುವೆಂಪು ­ಅವರ ­ಸಮಗ್ರ ­ಕಾವ್ಯ ಪ್ರಕ­ಟಿಸುವುದೆಂದು ತೀರ್ಮಾ­ನವಾಯಿತು.

ಸಮಗ್ರ ­ಕಾವ್ಯದ ಸಂಪಾದನಾ ­ಕಾರ್ಯವನ್ನು ­ಯಾರಿಗೆ ವಹಿ­ಸಬೇಕು ­ಎಂಬ ­ಜಿಜ್ಞಾಸೆ ­ಬಂದಾಗ ­ನಮ್ಮ ವಿಶ್ವ­ವಿದ್ಯಾ­ಲಯದಲ್ಲಿ ನವೋದಯದ ಸಾಹಿ­ತಿಗಳ ಬಹುತೇಕ ­ಹಳೇ ಪುಸ್ತ­ಕಗಳನ್ನು ಸಂಗ್ರ­ಹಿ­ಸಿಡುವ ­ಹಾಗೂ ಸಾಧ್ಯ­ವಿದ್ದಲ್ಲಿ ­ಮೊದಲ ಆವೃತ್ತಿಗಾಗಿ ಹುಡುಕಾಡಿ ­ಆ ­ಪ್ರತಿಯನ್ನು ­ಹೇಗೋ ಸಂಪಾದಿಸುತ್ತಿದ್ದ ­ಉತ್ತಮ ಹವ್ಯಾ­ಸದ ­ಡಾ. ­ಕೆ.ಸಿ. ಶಿವಾರೆ­ಡ್ಡಿಯವರೇ ಇದಕ್ಕೆ ­ಸೂಕ್ತ ­ಎಂದು ­ನಾನು ­ಡಾ. ಕಲಬುರ್ಗಿಯವ­ರಿಗೆ ­ಸಲಹೆ ­ನೀಡಿದೆ. ­ಅವರೂ ­ನನ್ನ ಪ್ರಸ್ತಾ­ವವನ್ನು ­ಒಪ್ಪಿದರು. ಶಿವಾರೆಡ್ಡಿಯವರೂ ಸಂತೋ­ಷ­ದಿಂದ ­ಕಾರ್ಯ ಆರಂ­ಭಿ­ಸಿದರು. ­

ಆದರೆ ­ಈ ಕೆಲ­ಸವನ್ನು ತೇಜಸ್ವಿಯವರ ಜೊತೆಗೂಡಿ ಕುಂತು ಮಾಡಬೇ­ಕಿತ್ತಾದ್ದ­ರಿಂದ ಶಿವಾರೆ­ಡ್ಡಿಯವರನ್ನು ­ಅವರಿಗೆ ಪರಿಚ­ಯಿಸಿಕೊಡಬೇ­ಕಿತ್ತು. ತೇಜಸ್ವಿಯವ­ರಿಗೆ ಶಿವಾರೆಡ್ಡಿಯವರನ್ನು ಪರಿಚ­ಯಿಸಿಕೊಟ್ಟಾಗ ­ಒಂದು ­ತಮಾಷೆಯ ­ಘಟನೆ ­ನಡೆಯಿತು. ತೇಜಸ್ವಿಯವರನ್ನು ­ದೂರದಿಂದ ಮಾತ್ರ ­ನೋಡಿದ್ದ ಶಿವಾರೆಡ್ಡಿ ­ಅವರ ­ಎಲ್ಲ ಪುಸ್ತ­ಕಗಳನ್ನು ಓದಿಕೊಂ­ಡಿದ್ದರು. ­ಆದರೂ ­ಅತ್ಯಂತ ­ಭಯ-­ಭಕ್ತಿ ಗೌರ­ವಗ­ಳಿಂದ ­ಅವರನ್ನು ­ನೋಡಲು ­ಉತ್ಸಾಹದಿಂದ ನನ್ನೊಡನೆ ­ಹೊರಟರು.

ಮೂಡಿಗೆರೆಯಲ್ಲಿ ಬಸ್ಸಿ­ಳಿದಾಗ ­ನಾಲ್ಕು ­ಪಾಕೆಟ್ ­’ಗುಡ್‌ ಡೇ’ ಬಿಸ್ಕೆಟ್‌ಗಳನ್ನು ­ಕೊಂಡುಕೊಂಡು ತೇಜಸ್ವಿಯವರ ­ತೋಟದ ­ಗೇಟು ­ಸರಿಸಿ ­ಒಂದಷ್ಟು ­ದೂರ ­ನಡೆದು ­ಮನೆಗೆ ಪ್ರವೇಶಿಸಿದಾಗ ­ಶ್ರೀಮತಿ ರಾಜೇಶ್ವರಿ ­ಅವರು ­ಬಾಗಿಲು ­ತೆಗೆದು ­ಒಳಗೆ ಕೂರಿ­ಸಿದರು. ­ತೋಟದ ಒಳಗೆಲ್ಲೋ ಕಾರ್ಯಮಗ್ನರಾ­ಗಿದ್ದ ­ತೇಜಸ್ವಿ ­ಹತ್ತು ನಿಮಿಷದಲ್ಲಿ ­ಬಂದರು. ಶಿವಾರೆಡ್ಡಿಯನ್ನು ­ಅವರಿಗೆ ಪರಿಚ­ಯಿಸಿ ­ಇವರೇ ­ಸಮಗ್ರ ಕಾವ್ಯದ ಸಂಪಾದಕರು ­ಎಂದಾಗ, ­­ಕುರುಚಲು ­ಗಡ್ಡ ­ಬಿಟ್ಟು, ಒರಟೊರಟಾಗಿ, ಮೇಲ್ನೋ­ಟಕ್ಕೆ ­ಮಹಾನ್ ಕುಡುಕ­ನಂತೆಯೂ, ­ಉಡಾಳನ ರೀತಿಯಲ್ಲೂ ಕಾಣುತ್ತಿದ್ದ ­ರೆಡ್ಡಿಯನ್ನು ­ಅಪಾದ ­ಮಸ್ತಕ ಗಮನಿಸಿ ­ಸುಮ್ಮನೆ ­ಕೂತರು. ­ಈ ­ವ್ಯಕ್ತಿ ­ಏನು ಮಾಡಬಲ್ಲ ­ಎಂಬ ­ಅನಾದರ ­ಅವರಿಗೆ. ­

ಯಾವ ­ಪ್ರತಿಕ್ರಿಯೆಯನ್ನು ­ನೀಡದೆ ­ಸುಮ್ಮನೆ ಕುಳಿ­ತಿದ್ದ ತೇಜಸ್ವಿಯವರನ್ನು ­ನಾನೇ ಮಾತಿಗೆಳೆದೆ. ­ಆದರೂ ­ಅವರಲ್ಲಿ ­ಮಾತಿನ ­ಉತ್ಸಾಹ ಕುದುರ­ಲಿಲ್ಲ. ­ಅಷ್ಟರಲ್ಲಿ ­ರೆಡ್ಡಿ ಕುವೆಂಪುರ­ವರ ­ಸುಮಾರು ­ಕವನ ಸಂಗ್ರ­ಹಗಳ ­ಮೊದಲ ­ಆವೃತ್ತಿಯನ್ನು ಸಂಗ್ರ­ಹಿ­ಸಿರುವುದಾಗಿ ­ತಿಳಿಸಿ ­ಒಂದೊಂದೇ ­ಪ್ರತಿಯನ್ನು ತಮ್ಮ ಬತ್ತ­ಳಿ­ಕೆ­ಯಿಂದ ತೆಗೆಯತೊಡ­ಗಿದರು. ಅಷ್ಟರ­ವರೆಗೆ ನೀರ­ಸ­ವಾಗಿ ಕುಳಿ­ತಿದ್ದ ತೇಜಸ್ವಿಯವ­ರಿಗೆ ­ಒಮ್ಮೆಲೇ ­ಉತ್ಸಾಹ ಮೂಡಿದಂತಾಯಿತು. ಕಣ್ಣುಗಳನ್ನು ­ಅರಳಿಸಿ ­ಆ ಕೃತಿಗಳ ಮುಖಪುಟವನ್ನೂ, ­ಅವುಗಳನ್ನು ಸಂಗ್ರ­ಹಿ­ಸಿದ ­ರೆಡ್ಡಿಯ ­ಒರಟು ­ಮುಖವನ್ನೂ ಕುತೂ­ಹ­ಲ­ದಿಂದ ನೋಡತೊಡ­ಗಿದರು. ­ರೆಡ್ಡಿಯ ಬತ್ತ­ಳಿ­ಕೆ­ಯಿಂದ ಹೊರ­ಬಿದ್ದ ­ಮೊದಲ ಮುದ್ರ­ಣದ ­ಅಪೂರ್ವ ರಕ್ಷಾಪುಟಗಳು ಹಾಗೂ ­ಸಂಕ­ಲ­ನಗಳನ್ನು ­ಮತ್ತೆ ­ಮತ್ತೆ ­ನೋಡುತ್ತಾ ­ಅದೇ ಕ್ಷಣದಲ್ಲಿ ಶಿವಾರೆಡ್ಡಿಯ ಅಭಿಮಾ­ನಿ­ಯಾಗಿ ­ಮಾರ್ಪಟ್ಟರು!

ಮಾತುಕತೆ ­ಊಟ ­ಎಲ್ಲವೂ ಆದ­ನಂತರ ­ಸ್ವತಃ ­ತಾವೇ ­ಡ್ರೈವ್ ­ಮಾಡಿಕೊಂಡು ­ಬಂದು ಮೂಡಿಗೆರೆಯ ­ಬಸ್ ಸ್ಟಾಪ್‌ನಲ್ಲಿ ಬಿಟ್ಟರು. ಶಿವಾರೆಡ್ಡಿ ­ಎಷ್ಟು ಭಾವು­ಕರಾ­ಗಿದ್ದರೆಂದರೆ ಕನ್ನಡದ ­ಸಮರ್ಥ ­ಲೇಖಕನ ­ಸಾನಿಧ್ಯ ­ದೊರೆತ ಖುಷಿಯಲ್ಲಿ ತೇಜಸ್ವಿಯವರ ಬಹುಕಾ­ಲದ ಪರಿ­ಚಿತ­ನಂತೆ ­ಹಾಗೂ ­ನವೋದಯ ಕಾಲದಲ್ಲೇ ಬದುಕಿದ್ದ ­ಒಬ್ಬ ­ಪುಸ್ತಕ ಪರಿಚಾರ­ಕ­ನಂತೆ ಉದ್ದುದ್ದ ­ಭಾಷಣ ­ಹೊಡೆದು ತೇಜಸ್ವಿಯವರನ್ನು ಮರಳುಗೊ­ಳಿ­ಸಿದ್ದರು.

ಬಸ್‌ಸ್ಟ್ಯಾಂ­ಡಿಗೆ ­ಬಿಟ್ಟು ಹಿಂತಿರುಗುವಾಗ ­ರೆಡ್ಡಿ ತಮ್ಮ ಬ್ಯಾಗಿ­ನಿಂದ ಪುಸ­ಕ್ಕನೆ ­ಎರಡು ­ಗುಡ್‌ ಡೇ ­ಬಿಸ್ಕೆಟ್ ­ಪ್ಯಾಕೆಟ್ ­ತೆಗೆದು ­ತೇಜಸ್ವಿ ­ಅವರಿಗೆ ಕೊಡಹೋದರು. ­ರೆಡ್ಡಿಯ ­ಈ ­ವರ್ತನೆ ­ಅತ್ಯಂತ ಮುಗ್ಧ­ವಾ­ಗಿತ್ತು. ಮಗುವಿನ ಮನಸ್ಸಿತ್ತು. ­ಎಷ್ಟು ಭಾವು­ಕರಾ­ಗಿದ್ದರೆಂದರೆ ­ತನ್ನ ­ಪ್ರೀತಿಯ ಸಂಕೇತವಾಗಿ ­ಏನಾದರೂ ­ಕೊಡಬೇಕು ಅನಿಸಿ­ಬಿಟ್ಟಿತ್ತು. ಆದರೆ ­ತೇಜಸ್ವಿಯರು ­ಅದನ್ನು ನಯವಾಗಿ ನಿರಾ­ಕ­ರಿ­ಸಿದರು. ರೆಡ್ಡಿ ಬಿಡ­ಲಿಲ್ಲ ‘­ಇಲ್ಲ ­ತಗೊಳ್ಳಿ ­ಸಾರ್ ­ಇದು ­ಮೊದಲ ­ಭೇಟಿ, ­ನೀವು ­ತಗೊಳ್ಳಲೇ ­ಬೇಕು’ ­ಎಂದು ಮಗುವಿನಂತೆ ಹಠ ಹಿಡಿದರು.

ರೆಡ್ಡಿಯ ­ವರ್ತನೆ ತಮಾಷೆ­ಯಾಗಿ ­ಕಂಡರೂ ­ಅವರು ­ಅತ್ಯಂತ ನಯವಾಗಿ ‘­ಬೇಡ ­ಮಾರಾಯ, ಬಸ್‌­ನಲ್ಲಿ ­ಪ್ರಯಾಣ ಮಾಡುವವ ­ನೀನು, ­ನೀನು ­ಇಟ್ಕೋ’ ­ಎಂದರೂ ­ರೆಡ್ಡಿ ­ಕೇಳದೆ ­ಚಂಡಿ ­ಹಿಡಿದು ‘­ಇಲ್ಲ ­ಸರ್ ­ತಗೊಳ್ಳೇಬೇಕು’ ಎಂದರು. ­ನನಗೋ ­ಗಾಬರಿ, ­ಎಲ್ಲಿ ­ತೇಜಸ್ವಿ ­ಸಿಟ್ಟುಗೊಂಡು ­ರೇಗಾಡಿ ‘­ಈ ಹಟ­ಮಾರಿ ಸಂಪಾದಕನಾಗಕೂಡದು’ ­ಎಂದು ­ಬೈದು ­ನಮ್ಮ ಒಪ್ಪಂದವನ್ನು ರದ್ದು ಮಾಡಿ ಬಿಡುತ್ತಾರೋ ­ಎಂದು. ­

ಆದರೂ ತೇಜಸ್ವಿಯವರು ­ಅತ್ಯಂತ ­ತಾಳ್ಮೆಯಿಂದ ಬಿಸ್ಕೆಟ್ ­ತೆಗೆದುಕೊಂಡು ­ಐದು ­ನಿಮಿಷ ಮಾತಾ­ಡಿದ ­ನಂತರ ­ರೆಡ್ಡಿ ­ಕೈಗೆ ­ಮತ್ತೆ ­ಅದನ್ನು ­ವಾಪಸ್ ­ಕೊಟ್ಟು, ಬಸ್ಸಿ­ನಲ್ಲಿ ­ತಿನ್ನಿ’ ­ಎಂದು ­ಬೀಳ್ಕೊಟ್ಟರು. ಆನಂತರದ ದಿನಗಳಲ್ಲಿ ­ರೆಡ್ಡಿ ಹೊಸಪೇಟೆ ಬೇಕ­ರಿ­ಯಿಂದ ­ಏನೇನೋ ­ತೆಗೆದುಕೊಂಡು ಹೋಗುವುದು, ತೇಜಸ್ವಿಯವರು ಮೂಡಿಗೆರೆ ಬೇಕ­ರಿ­ಯಿಂದ ‘­ರಸ್ಕ್’­ಗಳನ್ನು ­ಕೊಂಡು ­ಕೊಡುವುದು ­ಹೀಗೆ ಅವರಿಬ್ಬರ ವಿನಿಮಯ ­ನಡೆದೇ ­ಇತ್ತು. ­ಸಮಗ್ರ ­ಕಾವ್ಯ ಸಂಪಾದನೆಯ ­ಕೆಲಸ ತೇಜಸ್ವಿಯವರ ಮನೆಯಲ್ಲೇ ನಡೆಯುತ್ತಿತ್ತು. ­ನಾನೂ ಎರಡು ­ಮೂರು ­ಬಾರಿ ಮೂಡಿಗೆರೆಗೆ ­ಹೋಗಿ ­ಬಂದೆ. ­ಕುವೆಂಪು ­ಸಮಗ್ರ ­ಕಾವ್ಯದ ­ಎರಡು ಸಂಪುಟಗಳು ­ಕನ್ನಡ ವಿಶ್ವವಿದ್ಯಾ­ಲಯದಿಂದ ಪ್ರಕ­ಟಗೊಂಡವು.

ಕಲ್ಬುರ್ಗಿಯವರ ­ನಂತರ ­ಪ್ರೊ. ಲಕ್ಕಪ್ಪಗೌಡ ­ಅವರು ಕುಲಪತಿಗಳಾಗಿ ­ಬಂದರು. ­ಆಗ ­ಮತ್ತೆ ಕುವೆಂಪುರ­ವರ ­ಸಮಗ್ರ ಗದ್ಯ ಸಂಪುಟವನ್ನು ಹೊರತರಲು ತೀರ್ಮಾ­ನಿಸಿ ತೇಜಸ್ವಿಯವರನ್ನು ಒಪ್ಪಿಸುವ ಕೆಲ­ಸವನ್ನು ­ಮತ್ತೆ ­ನನಗೆ ಮತ್ತು ರೆಡ್ಡಿಯವರಿಗೆ ವಹಿ­ಸಿದರು. ­

ಅಷ್ಟರಲ್ಲಿ ­ನಾನೇ ಪ್ರಸಾರಂಗದ ನಿರ್ದೇ­ಶ­ಕ­ನಾಗಿ ಕಾರ್ಯಭಾರ ವಹಿ­ಸಿಕೊಂ­ಡಿದ್ದೆ. ­ಈ ಹೊತ್ತಿಗಾಗಲೇ ತೇಜಸ್ವಿಯವರ ­ಮಾನಸ ಪುತ್ರ­ನಂತೆ ­ಆಗಿದ್ದ ಶಿವಾರೆ­ಡ್ಡಿಯವರನ್ನು ಜೊತೆಯಲ್ಲಿ ಕರೆದುಕೊಂಡು ­ಮತ್ತೆ ಮೂಡಿಗೆರೆ ­ಬಸ್ಸು ಹತ್ತಿದೆ. ­

ಈ ­ಸಲ ­ಅವರನ್ನು ­ಒಪ್ಪಿಸಲು ­ಯಾವ ­ಕಷ್ಟವೂ ಆಗ­ಲಿಲ್ಲ. ­ಕನ್ನಡ ವಿಶ್ವ­ವಿದ್ಯಾ­ಲಯದ ಪ್ರಸಾರಾಂಗವು ­ಅತ್ಯುತ್ತಮ ಪ್ರಕ­ಟಣೆಗಳನ್ನು ಜಾಗ­ತಿಕ ಮಟ್ಟದಲ್ಲೂ ಹೊರತರುವ ­ಶಕ್ತಿ ಪಡೆ­ದಿದೆ ­ಎಂಬುದು ­ಅವರಿಗೆ ಮನದಟ್ಟಾ­ಗಿತ್ತು. ­ಅಲ್ಲದೆ ಶಿವಾರೆಡ್ಡಿ ಜೊತೆಗೆ ­ಇರುವಾಗ ­ಗದ್ಯ ಸಂಪುಟದ ಸಂಪಾದನೆ ­ಅಷ್ಟು ಕಷ್ಟ­ವಲ್ಲ ­ಎಂಬುದೂ ­ಗೊತ್ತಿತ್ತು. ­ಅಲ್ಲದೆ ಸಮಗ್ರ ­ಕಾವ್ಯಕ್ಕೆ ಕನ್ನ­ಡಿಗ­ರಿಂದ ­ಬಂದ ­ಬೇಡಿಕೆ ­ಆಶ್ಚರ್ಯ ಹುಟ್ಟಿಸುವಂ­ತಿತ್ತು. ­ಈ ಹಿನ್ನೆಲೆಯಲ್ಲಿ ತೇಜಸ್ವಿಯವರು ­ತಕ್ಷಣವೇ ­ಸಮಗ್ರ ­ಗದ್ಯ ಸಂಪುಟಗಳನ್ನು ­ತರಲು ಒಪ್ಪಿಕೊಂಡರು.

ಈ ­ನಡುವೆ ­ನಮ್ಮಲ್ಲಿ ­ಒಂದು ­ಹೊಸ ಆಲೋಚನೆ ­ಹುಟ್ಟಿತ್ತು. ಕುವೆಂಪುರ­ವರ ­ಜನ್ಮ ಸ್ಥಳ­ವಾದ ಕುಪ್ಪಳಿಯಲ್ಲಿ ­ಕನ್ನಡ ವಿಶ್ವ­ವಿದ್ಯಾ­ಲಯದ ­ಕೇಂದ್ರವನ್ನು ­ತೆರೆದರೆ ­ಹೇಗೆ? ­ಈ ­ಬಗ್ಗೆ ಆಸಕ್ತರಾ­ಗಿದ್ದ ಕುಲ­ಸ­ಚಿ­ವರಾದ ­ಡಾ. ­ಕೆ.ವಿ. ನಾರಾಯಣ ಅವರೊಡನೆ ­ಮೊದಲು ­ಪ್ರಸ್ತಾಪ ­ಮಾಡಿ, ­ನಂತರ ­ಕುಲಪತಿ ­ಡಾ. ಲಕ್ಕಪ್ಪಗೌಡರಲ್ಲಿ ಪ್ರಸ್ತಾಪಿಸಿದೆವು. ಲಕ್ಕಪ್ಪಗೌಡರು ಕುವೆಂಪು ವಿಶ್ವ­ವಿದ್ಯಾ­ಲಯದ ಪ್ರಾಧ್ಯಾಪಕರಾಗಿ, ಕುಲ­ಸ­ಚಿ­ವರಾಗಿ ­ಕೆಲಸ ಮಾಡಿದ್ದವರು. ­ಆ ಸಂದರ್ಭದಲ್ಲಿಯೇ ಕುಪ್ಪಳಿಯ ­ಕುವೆಂಪು ಪ್ರತಿಷ್ಠಾ­ನದ ಕಾರ್ಯದರ್ಶಿಗಳಾಗಿ ­ಕೂಡ ­ಕೆಲಸ ­ಮಾಡಿದ್ದರು. ­­

ಈ ­ಹಿಂದೆ ತೀರ್ಥ­ಹಳ್ಳಿಯ ದೇವಂಗಿಯಲ್ಲಿ ಕುವೆಂಪು ವಿಶ್ವ­ವಿದ್ಯಾ­ಲಯದ ವತಿ­ಯಿಂದ ­ಒಂದು ­ಕೇಂದ್ರವನ್ನು ­ಸ್ಥಾಪಿಸಿ, ­ಅದನ್ನು ಕ್ರಮವಾಗಿ ನಡೆಸಲಾಗದೆ ಮುಚ್ಚಿಹೋ­ಗಿತ್ತು. ­ನಮ್ಮ ­ಮಾತು ಲಕ್ಕಪ್ಪಗೌಡ­ರಿಗೆ ­ಹಿಡಿಸಿತು. ­ಕನ್ನಡ ವಿಶ್ವ­ವಿದ್ಯಾ­ಲಯದ ಕೇಂದ್ರವೊಂದನ್ನು ಸ್ಥಾಪಿಸುವುದು ­ನಮ್ಮ ­ಪರಮ ­ಕರ್ತವ್ಯ ­ಎಂಬಂತೆ ­ಅವರು ಪ್ರೋತ್ಸಾ­ಹಿ­ಸಿದರು. ­­ಕೆ.ವಿ. ನಾರಾಯಣ ಅವರು ­ಕೂಡ ­ಅಷ್ಟೇ ­ಉತ್ಸಾಹದಿಂದ ಕಾರ್ಯೋನ್ಮುಖರಾದರು. ­ನಾವೆಲ್ಲ ­ಸೇರಿ ­ಮತ್ತೆ ­ತೇಜಸ್ವಿ ಅವರೊಡನೆ ­ಮಾತಾಡಿ ಅವರನ್ನು ಒಪ್ಪಿಸಿದೆವು.

­ಕುವೆಂಪು ಪ್ರತಿಷ್ಠಾ­ನದ ಅಧ್ಯಕ್ಷರಾ­ಗಿದ್ದ ನ್ಯಾಯಮೂರ್ತಿ ­ಎನ್‌.ಡಿ. ವೆಂಕಟೇಶ್ ­ಅವರು ­ಈ ಕ್ರಮವನ್ನು ಸ್ವಾಗ­ತಿ­ಸಿದರು. ­ಅಲ್ಲಿನ ಚಟುವ­ಟಿ­ಕೆಗಳ ­ಕೇಂದ್ರ ಬಿಂದುವಾದ ಕ್ರಿಯಾಶೀಲ ವ್ಯಕ್ತಿತ್ವದ ಸಮಕಾರ್ಯದರ್ಶಿ ಕಡಿದಾಳ್ ­ಪ್ರಕಾಶ್ ಸ್ಥಳದಾ­ನವೂ ಮೊದಲ್ಗೊಂಡಂತೆ ­ಎಲ್ಲ ­ನೆರವನ್ನು ­ನೀಡಿ ­ಕನ್ನಡ ವಿಶ್ವ­ವಿದ್ಯಾ­ಲಯದ ­ಕೇಂದ್ರ ­ಅಸ್ತಿತ್ವಕ್ಕೆ ­ಬರಲು ಶ್ರಮಿಸಿದರು. ­ಆ ­ಕೇಂದ್ರದ ಜವಾಬ್ದಾರಿಯನ್ನು ­ಯಾರಿಗೆ ವಹಿ­ಸಬೇಕು ­ಎಂಬ ­ಜಿಜ್ಞಾಸೆ ­ಉಂಟಾದಾಗ ­ಡಾ. ಶಿವಾರೆಡ್ಡಿ ­ಅವರನ್ನೇ ಮಾಡುವಂತೆ ಲಕ್ಕಪ್ಪಗೌಡರಲ್ಲಿ ­ನಾನು ಬಲ­ವಾಗಿ ಪ್ರತಿಪಾದಿ­ಸಿದೆ. ­ಇದಕ್ಕೆ ಕೆ.ವಿ. ನಾರಾಯಣ ಅವರ ಬೆಂಬಲವೂ ಇತ್ತು. ಕೊನೆಗೆ ಶಿವಾರೆ­ಡ್ಡಿಯವರನ್ನು ­ಕೇಂದ್ರದ ಸಂಚಾ­ಲ­ಕರನ್ನಾಗಿ ­ಮಾಡಲು ನಿರ್ಣಯವಾಯಿತು.

ತಮ್ಮ ತನುಮನಗಳಲ್ಲಿ ­ಕುವೆಂಪು ­ಮತ್ತು ತೇಜಸ್ವಿಯವರನ್ನು ಆವಾ­ಹಿ­ಸಿಕೊಂ­ಡಿದ್ದ ಶಿವಾರೆ­ಡ್ಡಿಯವರು ­ತುಂಬ ಸಂತೋಷ­ದಿಂದ ­ಆ ಜವಾಬ್ದಾರಿ ಹೊತ್ತುಕೊಂಡರು.

­ಆರು ವರ್ಷಗಳ ­ಕಾಲ ­ಆ ಜವಾಬ್ದಾರಿಯನ್ನು ನಿರ್ವ­ಹಿ­ಸಿದ ಶಿವಾರೆಡ್ಡಿ ­ಕೆಲವು ­ತಾಂತ್ರಿಕ ಕಾರ­ಣಗ­ಳಿಂದಾಗಿ ­ಹಂಪಿಗೆ ಹಿಂತಿರುಗಬೇಕಾಯಿತು. ­ಆ ಸಂದರ್ಭದಲ್ಲಿ ­ಯಾರನ್ನು ಕುಪ್ಪಳ್ಳಿಗೆ ಕಳಿ­ಸಬೇಕು ­ಎಂಬ ­ಜಿಜ್ಞಾಸೆ ­ಉಂಟಾಯಿತು. ­ಆಗಿನ ಕುಲಪತಿ ಮುರಿಗೆಪ್ಪನವರು ­ಎಲ್ಲ ­ಅಧ್ಯಾಪಕರ ಗಮನಕ್ಕಾಗಿ ­ಒಂದು ­ಸುತ್ತೋಲೆ ಹೊರ­ಡಿಸಿ ‘ಯಾರಾದರೂ ­ಕುಪ್ಪಳಿಯ ಕೇಂದ್ರಕ್ಕೆ ಹೋಗುವ­ವ­ರಿದ್ದರೆ ಸಂಪರ್ಕಿ­ಸಬಹುದು’ ­ಎಂದು ­ಸೂಚನೆ ­ನೀಡಿದರು. ­

ಎಷ್ಟೋ ದಿನಗಳ ­ಕಾಲ ­ಯಾರೂ ಮುಂದೆ ಬರ­ಲಿಲ್ಲ. ­ತದನಂತರ ­ಹಿರಿಯ ಪ್ರಾಧ್ಯಾಪಕರೊಬ್ಬರು ­ತಾವು ಹೋಗುವುದಾಗಿ ­ಅರ್ಜಿ ­ಕೊಟ್ಟರು. ­ಅವರನ್ನು ಕಳಿಸಲು ತೀರ್ಮಾ­ನಿ­ಸಿದ ­ನಂತರ ಆಗುವು­ದಿಲ್ಲ ­ಎಂದು ಬರೆದುಕೊಟ್ಟರು. ­ಮತ್ತೊಮ್ಮೆ ­ಜಿಜ್ಞಾಸೆ ­ಶುರುವಾಯಿತು. ­ಆಗ ಕಾರ್ಯಾರ್ಥ­ವಾಗಿ ಬೆಂಗಳೂ­ರಿ­ನಲ್ಲಿದ್ದ ­ನನಗೆ ಮಾತ­ನಾ­ಡಿದ ಕುಲಪತಿ ಮುರಿಗೆಪ್ಪನವರು ­ನೀವು ಹೋಗುತ್ತಿರಾ? ಎಂದು ­ಕೇಳಿದರು. ­ನಾನು ­ತಕ್ಷಣವೇ ­ಒಪ್ಪಿಗೆ ಸೂಚಿ­ಸಿದೆ. ­

ಡೀನ್ ಸಮಿತಿಯಲ್ಲಿ ತೀರ್ಮಾ­ನಿಸಿ ­ನನ್ನನ್ನು ಕುಪ್ಪಳಿಗೆ ವರ್ಗಾಯಿಸಲಾಯಿತು. ­ನನ್ನ ­ಒಪ್ಪಿಗೆ ಅನೇಕ­ರಿಗೆ ­ಆಶ್ಚರ್ಯ ­ತಂದಿತ್ತು. ಶಿವಾರೆ­ಡ್ಡಿಯವರು ­ಮೊದಲು ಅಧ್ಯಾಪಕರಾ­ಗಿದ್ದು, ನಂತರ ಪ್ರವಾಚ­ಕರಾಗಿ ­ಬಡ್ತಿ ಪಡೆ­ದಿದ್ದರು. ­ಅವರಿದ್ದ ­ಸ್ಥಾನಕ್ಕೆ ಕುಲ­ಸ­ಚಿ­ವ­ನಾಗಿ, ­ಹಂಗಾಮಿ ಕುಲಪತಿ­ಯಾಗಿ ­ಕೆಲಸ ಮಾಡಿದವನು ಹೋಗ­ಬಹುದೆ? ­ಇದು ­ನಿಮ್ಮ ­ಘನತೆಯನ್ನು ಕುಂದಿಸುತ್ತದೆ ­ಎಂದೂ ­ಕೆಲವರು ­ಹೇಳಿದರು. ­

ಕಳೆದ ಹದಿನೇಳು ವರ್ಷಗಳ ­ಕನ್ನಡ ವಿಶ್ವ­ವಿದ್ಯಾ­ಲಯದ ಒಡ­ನಾ­ಟದಲ್ಲಿ ಆತ್ಮೀಯರಾ­ಗಿದ್ದ ­ಅನೇಕ ಸಹೋದ್ಯೋ­ಗಿಗಳು ­‘ನೀವು ಹೋಗಬೇಡಿ ­ಸಾರ್, ನಮಗೆಲ್ಲ ­ನೀವು ­ಬೇಕು ­ಇಲ್ಲೇ ­ಇರಿ’ ­ಎಂದು ವಿನಂ­ತಿ­ಸಿದರು. ­ಇದಕ್ಕೆ ಒಪ್ಪದಿದ್ದಾಗ ­ಕೆಲವರು ­ಸಿಟ್ಟು ಮಾಡಿಕೊಂಡರು. ­ಸ್ವತಃ ­ನನ್ನ ­ಹೆಂಡತಿ ­ಈ ತೀರ್ಮಾ­ನವನ್ನು ವಿರೋ­ಧಿ­ಸಿದಳು. ­ಆದರೂ ­ಇದಾವುದನ್ನೂ ­ಲೆಕ್ಕಿಸದೇ ಕುಪ್ಪಳಿಯಲ್ಲಿ ­ಕೆಲಸ ­ಮಾಡುವುದು ­ನನ್ನ ­ಭಾಗ್ಯ ­ಎಂದು ­ತಿಳಿದು ಕುಪ್ಪಳಿಗೆ ­ಹೋಗುವ ­ದೃಢ ­ನಿರ್ಧಾರ ತೆಗೆದುಕೊಂಡೆ.

ಕಾಕತಾಳೀಯವೆಂದರೆ ­ಈ ­ಕೇಂದ್ರದ ಸ್ಥಾಪನೆಗೆ ­ಒತ್ತಾಸೆ ನೀಡಿದ­ವರಲ್ಲಿ ಒಬ್ಬ­ನಾದ ­ನಾನೇ ­ಇದರ ನಿರ್ವ­ಹಣೆ ಹೊರಬೇಕಾದ ­ಪ್ರಸಂಗ ­ಬಂದುದು ಆಕಸ್ಮಿ­ಕ­ವಿರಬಹುದು ­ಅಷ್ಟೆ.

August 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Rudresh Adarangi

    ನಿಜಕ್ಕೂ ಒಂದು ಆತ್ಮೀಯ ಒಡನಾಟದ ಅನುಭವ ಓದುಗರಿಗೆ ಆಗುತ್ತದೆ. ಆಪ್ತವಾಗಿದೆ ಧನ್ಯವಾದಗಳು ಸರ್

    ಪ್ರತಿಕ್ರಿಯೆ
  2. ಅಂಕ್ನಳ್ಳಿ ಜಯರಾಂ

    ಕುವೆಂಪು ಸಮಗ್ರ ಸಾಹಿತ್ಯ ಕೃತಿಗಳ ಸಂಪಾದನೆ ಮತ್ತು ಪ್ರಕಟಣೆಯ ಹಲವು ಹಂತಗಳಲ್ಲಿ ದುಡಿದವರ ಬಗ್ಗೆ ತಿಳಿಸುತ್ತಲೇ ತೇಜಸ್ವಿ ಅವರ ಪಾರದರ್ಶಕ ಬದುಕನ್ನು ಅನಾವರಣಗೊಳಿಸಿದ ಆಪ್ತ ಬರಹ ತಮ್ಮದು. ತಮ್ಮಂಥ ನಿಸ್ವಾರ್ಥ ಸಾಧಕರ ಮಾತು ಕೇಳುವುದು ತುಂಬಾ ಆನಂದದ ಸಂಗತಿ. ಅನಂತ ಧನ್ಯವಾದಗಳು ಸರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: