ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಕ್ಕುವನೇ ಚಂದಿರ..?

ಚಂದ್ರಪ್ರಭ ಕಠಾರಿ

ಮುಗುದೆ ಅವಳು
ಕಂಕುಳಲ್ಲಿ ಬಿಂದಿಗೆ ಹೊತ್ತು
ಬಾವಿಗೆ ಹೊರಟಿದ್ದಾಳೆ
ಚಂದಿರನ ಹಿಡಿಯಲು

ಬೆಕ್ಕಿನೆಜ್ಜೆಯಿಟ್ಟು
ಪಾವಟಿಗೆಗಳನ್ನತ್ತಿ
ಬಾವಿಕಟ್ಟೆ ಹಿಡಿದು
ಬಾಗಿ ಆಳ ಇಣುಕಿದರೆ
ನೀರಿನ ಹಾಸಿಗೆ ಮೇಲೆ
ಚಂದಿರನ ತೂಕಡಿಕೆ.

ಕೊಡದ ಕಂಠಕೆ
ಸರಸರ ಬಿಗಿದು
ಹಗ್ಗದ ಕುಣಿಕೆ
ಗರಗರ ಸುತ್ತಿ ರಾಟೆ

ಬಾವಿಗಿಳಿಸಿದಳು
ಬಿಂದಿಗೆ ಮೆಲ್ಲಗೆ
ಮಲಗಿಹ ಚಂದಿರನ
ಹಿಡಿಯಲು
ಕೊಡದೊಳು

ಸಕ್ಕರೆ ನಿದಿರೆಯಲಿ
ತೇಲಾಡುತ ಕನಸಲಿ
ಮಲಗಿದ್ದ ಚಂದ್ರಮ
ಸರಸರ ಸರಿದು ನೀರು
ಬಿಂದಿಗೆ ಬಾಯಿಗೆ ಬಿದ್ದೆನೆ-
ನ್ನುವಾಗ ಬೆಚ್ಚಿ ಗಡಬಡನೆದ್ದ

ತೋಳು ಮಾರುದ್ದ
ಎಳೆದಾಟಕೆ
ತೊನೆದಾಡುತ್ತ ಮೇಲೇರಿ
ಬಂದ ತುಂಬಿದ ಕೊಡದಲಿ
ಇಣುಕಿದರೆ
ಚಂದಿರನಿಲ್ಲ

ಅಲೆ ಅಲೆಯಾಗಿ
ಗಹಗಹಿಸಿ ಬಂದ
ತಿಂಗಳಾ ಬೆಳಕಿನ ನಾದ
ದಲೆಗೆ ಗೋಣೆತ್ತಿದರೆ
ಅಗಸದಲಿ ಚಂದಿರನ
ಕಿಲಕಲ ನಗೆ

ಕೊಡ ಸೊಂಟಕ್ಕಿಟ್ಟವಳು
ಮನೆಯ ದಾರಿ ಹಿಡಿದಳು
ಮತ್ತೆ……
ನಾಳೆ ನೋಡೋಣವೆಂದು.

ದಕ್ಕುವನೇ ಚಂದಿರ..?

‍ಲೇಖಕರು Avadhi

10 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading