ಆನಂದ ಋಗ್ವೇದಿ
“ಲೇಹನುಮ್ಯಾ, ಬಿದ್ದೂರಿನ ಹನುಮಪ್ಪನ ತೇರಿಗೆ ಬರಾಕ್ಹತ್ತೀನಿ. ನಮ್ಕ್ಯಾದಿಗಿಬಸ್ರಾಜಕರ್ದಾನ. ನೀನೂಬಾ. ಗೆಳ್ಯಾರು ಕೂಡೋಣು. ಛಂದ ಇರ್ತತಿ” ಬೆಂಗಳೂರಿಂದ ಚಿದಂಬರ ಕರೆ ಮಾಡಿದ್ದೇ ಹಿಂದೆ ಮುಂದೆ ನೋಡದೇ ‘ಹೂಂ’ ಅಂದ ಹನುಮಂತರಾಯ ಆಮೇಲೇ ತೇರು ಯಾವಾಗ ಅಂತ ಕ್ಯಾಲೆಂಡರ್ನೋಡಿದ. ಬಿದ್ದೂರಿನ ಹನುಮಪ್ಪನ ತೇರು ನಡೆಯೋದು ರಾಮ ನವಮಿಯ ದಿವಸ. ಆತೇರು ಅಂದರೆ ಅಂತಿಂಥ ತೇರಲ್ಲ, ಲಕ್ಷಾಂತರ ಮಂದಿ ಸೇರುವ ದೊಡ್ಡ ಜಾತ್ರಿ. ಸುತ್ತ ಹತ್ತು ಜಿಲ್ಲೆಯಿಂದ ಬರೋ ಜನರಿಂದಾಗಿ, ‘ನಡೆದೇ ನಡೀತೈತಿ’ ಎಂಬೋ ನಂಬಿಕೆಯ ಕಾರ್ಣಿಕದಿಂದಾಗಿ ಭಾಳ ಹೆಸರು ಪಡೆದ ಜಾತ್ರಿ ಅದು. ಈ ‘ಬಿದ್ದೂರು’: ಕರೆ ಮಾಡಿದ ಚಿದಂಬರ, ಈ ಹನುಮಂತರಾಯ, ಕ್ಯಾದಿಗಿ ಬಸ್ರಾಜ. . ಇಂತಹ ಹತ್ತಾರು ಸರೀಕ ಸ್ನೇಹಿತರ ಹುಟ್ಟೂರು. ಕರ್ನಾಟಕದ ಉತ್ತರದಲ್ಲಿರುವ ಅಮರಾವತಿ ತಾಲ್ಲೂಕಿನ, ಬಿಸ್ಲಳ್ಳಿ ಪಕ್ಕದ ಈ ಊರಿಗೆ ಬಿದ್ದೂರು ಅಂತ ಹೆಸರು ಬರಲೂ ಪೌರಾಣಿಕ ಕಾರಣಗಳಿವೆ!
ರಾಮಾಯಣದಲ್ಲಿ ಹನುಮಪ್ಪ ಸಂಜೀವಿನಿ ಬೆಟ್ಟ ಹೊತ್ಕೊಂಡು ಹಾರುವಾಗ ಅದರದೊಂದು ಮೂಲೆಯ ಮಣ್ಣುಬಿದ್ದು ಇಲ್ಲಿ ಮೂಲಿಕಾ ಗುಡ್ಡವೇ ಆಗಿದೆ ಎಂಬುದು ನಂಬಿಕೆ. ಅದೂ ಅಲ್ಲದೇ ಆ ಮಣ್ಣ ಗುಡ್ಡದ ಮೇಲೆ ಕಳಶ ಇಟ್ಟಂತೆ ಕೂತಿರುವ ಏಕೈಕ ಕಲ್ಲುಗುಂಡು ಗದೆಯಂತೆ ಕಾಣುವುದೂ ಈ ನಂಬಿಕೆಗೆ ಪೂರಕ. ಅದು ಸಾಕ್ಷಾತ್ ಆಂಜನೇಯನ ಗದೆ ಎಂದೇ ಪ್ರತೀತಿ!! ಬಾಲ್ಯದಲ್ಲಿ ಶಾಲೆಗೆ ಸೂಟಿ ಬಂತೆಂದರೆ ಮೂಲಿಕಾ ಗುಡ್ಡ ಏರ್ತಿದ್ದ ಈ ಹುಡುಗರಿಗೆ ಮೇಲಿನ ಆ ಒಂಟಿ ಕಲ್ಗುಂಡು ಅಂದ್ರೆ ಅಚ್ಚರಿ. ಥೇಟ್ಮಣ್ಣ ಹುಡಿಯ ಮೇಲೆ ಬಿದ್ದ ಗದೆಯಂತಹ ಆಗುಂಡು ಸಣ್ಣದೇನೂ ಅಲ್ಲ. ಬರೋಬ್ಬರಿ ಹತ್ತಾಳು ಕೈಕೈ ಹಿಡಿದು ತಬ್ಬಿದರೂ ಬಳಸಲಾಗದಷ್ಟು ಅಗಾಧ ವಿಸ್ತಾರ ಅದರದು, ಎತ್ತರವೂ ಅಷ್ಟೇ. ಅ ಗುಂಡಿಗೆ ಹೊಂದಿಕೊಂಡಿರುವ ಗದೆಯ ಹಿಡಿಕೆಯಂತಹ ವಾರೆಗಲ್ಲನ್ನು ಕಷ್ಠಪಟ್ಟು ಹತ್ತಿ ಗುಂಡಿನ ಮೇಲ್ಭಾಗ ತಲುಪಬಹುದಿತ್ತು. ಹಾಗೆ ಗುಂಡು ಬಳಸಲು, ಹತ್ತಲು ಕೈಕೈ ಹಿಡಿದ ಈ ಪೂಜಾರ್ರ ಚಿದಂಬ್ರ, ಕುಲಕರ್ಣೇರ ಹನುಮಂತರಾಯ, ಹೂಗಾರ್ರ ಕ್ಯಾದಿಗಿಬಸ್ರಾಜ. ಎಲ್ಲರ ಕೈಗಳು ಇಂದೂ ಬೆಸೆದುಕೊಂಡೇ ಇವೆ.
ತಾಲ್ಲೂಕಾಫೀಸಿನ ಗುಮಾಸ್ತ ಹನುಮಂತರಾಯನಿಗೆ ತೇರಿಗೆ ಹೋಗಲು ರಜೆ ಸಿಗುವುದೂದು ಸ್ತರವಿತ್ತು. ಸದ್ಯ ಅದು ಯುಗಾದಿಯಾಗಿ ಒಂಭತ್ತು ದಿನಗಳ ಒಳಗಿನ ಅವಧಿ. ಬೇಸಿಗೆ ಇನ್ನೂ ಬಲಿತಿರೋದಿಲ್ಲ. ಬೇಸಿಗೆ ಹೆಚ್ಚಾದಂತೆ ತಾಲ್ಲೂಕಾಫೀಸಿನ ಕೆಲಸದ ಭರಾಟೆ ಹೆಚ್ಚು. ಹಳ್ಳಿಗಳಲ್ಲಿ ಕುಡಿಯೋ ನೀರಿಗಾಗಿ ಬೋರ್ಕೊರ್ಸೋದು, ಆ ಮೇಲೆ ಮಳೆ ಬರದ ಈ ಬೆಂಗಾಡಿಗೆ ಬರ ಪರಿಹಾರ ತಂದು ಹಂಚೋದು, ಶಾಲೆ ಆರಂಭ ಆಗೋದ್ರಲ್ಲಿ ವಿದ್ಯಾರ್ಥಿಗಳಿಗೆ ಜಾತಿ, ಆದಾಯದ ಸರ್ಟಿಫಿಕೇಟ್ಮಾಡೋದು, ಇದರನಡುವೆ ಯಾವ್ದಾದ್ರೂ ಚುನಾವಣೆ ಬಂದ್ರೆ.. . ಮುಗೀತು. ಗ್ರಾಮಪಂಚಾಯತಿ ಇರ್ಲಿ ತಾಲ್ಲೂಪಂಚಾಯ್ತಿ, ಜಿಲ್ಲಾಪಂಚಾಯ್ತಿ ಚುನಾವಣೆ ಅಂದ್ರೆ ಹನುಮಂತರಾಯನ ಆಫೀಸು ಅಕ್ಷರಶಃ ರಣರಂಗ. ಅದರಲ್ಲೂ ಚುನಾವಣೆ ಶಾಖೆ ನಿರ್ವಹಿಸೋ ಹನುಮಂತನ ಕೆಲ್ಸ ಹೈರಾಣ.

ಸದ್ಯ ಏನೂ ಒತ್ತಡ ಇರಲಿಲ್ಲ ಆದ್ದರಿಂದ ಹನುಮಂತನ ರಜಾ ಸ್ಯಾಂಕ್ಷನ್ ಆಯ್ತು. ಇನ್ನು ಚಿದಂಬ್ರ ಬರೋದೇ ಉಳಿದಿದ್ದು. ದೊಡ್ಡ ಸಾಫ್ಟ್ವೇರ್ಕಂಪನಿಯ ಟೀಮ್ಹೆಡ್ ಆಗಿರೋ ಚಿದಂಬರನಿಗೆ ಕೆಲಸದೊತ್ತಡದಷ್ಟೇ ಪ್ರವಾಸವೂ ಸಹಜ. ವರ್ಷಕ್ಕೊಂದು ವರ್ಲ್ಡ್ಟೂರ್ಮಾಡೋ ಪೈಕಿಯವನಲ್ಲ ಅವ. ಅಮರಾವತಿಯಲ್ಲಿ ಆಟೋ ಹತ್ತಿಳಿವಷ್ಟು ಸಲೀಸಾಗಿ ಅವ ಯೂರೋಪ್, ಅಮೇರಿಕಾ, ಜಪಾನ್, ಆಸ್ಟ್ರೇಲಿಯಾ. . ಅಂತೆಲ್ಲಾ ತಿರುಗುತ್ತಿದ್ದ. “ನಮ್ಚಿದಂಬ್ರ ನ್ಯೂಯಾರ್ಕಲ್ಲಿ ತಿಂಡಿ ತಿಂದು, ಹಂಗೇರಿಯಲ್ಲಿ ಕೈತೊಳ್ಕಂಡು, ಸಿಂಗಾಪುರ್ನಲ್ಲಿ ಕೈವರ್ಸಕಂತಾನೆ!!” ಅಂತ ಬಸ್ರಾಜ ಆಡ್ಕೊಳ್ತಿದ್ರೆ “ಹಂಗೇ ಬುಡಾಪೆಸ್ಟ್ಗೆ ಹೋಗಿ ಬೇಧಿ ಮಾಡ್ಬರ್ತಾನೆ” ಅಂತ ಈ ಹನುಮಂತರಾಯನೂ ಹಲ್ಕಿರೀತಿದ್ದ! ಅಂತಹ ಬಿಡುವೇ ಇಲ್ಲದ ಗೆಳ್ಯಾರು ತೇರಿಗೆ ಊರಿಗೆ ಬರ್ಲಿದ್ದಾರೆ ಅನ್ನೋದು ಬಸ್ರಾಜನ ಸಂಭ್ರಮ.
ಆಡಾಡ್ತಾ ಆದಿನಾ ಬಂದೇ ಬಿಡ್ತು. ಅವತ್ತು ಅಷ್ಟಮಿ. ವಾರಾಂತ್ಯದ ಬಿಡುವು ಅಂತ ಚಿದಂಬರ ಶುಕ್ರವಾರ ರಾತ್ರಿ ಬಸ್ಹತ್ತಿ ಅಮರಾವತಿಯಲ್ಲಿ ಬೆಳಗ್ಗೆಇ ಳಿದಾಗ ಹನುಮಂತರಾಯ ಅಲ್ಲಿಗೇ ಗಾಡಿ ತಗೊಂಡು ಹೋಗಿ ಮನೆಗೇ ಕರ್ಕೊಂಡ್ಬಂದ. ರಾತ್ರಿಯ ಪ್ರಯಾಣದ ಆಯಾಸ ಕಳೆದ ಮೇಲೆ, ಸ್ನಾನ ತಿಂಡಿ ಮುಗಿಸಿ ಬಿದ್ದೂರಿಗೆ ಗೆಳೆಯರು ಬೈಕಲ್ಲೇ ಹೋಗೋದು ಅವರ ಪ್ಲಾನ್. ಮನೆಗೆ ಬಂದು ಚಿದಂಬರ ಒಂದೆರಡು ತಾಸು ಮಲಗೋದರೊಳಗೆ ಹನುಮಂತರಾಯ ತನ್ನ ಮಗನ್ನ ಎಬ್ಬಿಸಿ ಸ್ನಾನ ಮಾಡ್ಸಿ, ಕೆದಕಿದ ಬಿಸಿ ಉಪ್ಪಿಟ್ಟನ್ನೇ ತಿನ್ನಿಸಿ ಶಾಲಾ ಬಾಕ್ಸಿಗೆ ಸಲಾಡ್ತುಂಬಿ ಅವನನ್ನು ಶಾಲೆಗೇ ಬಿಟ್ಟು ಬಂದಿದ್ದ. ಒಂಭತ್ತಕ್ಕೆ ಎದ್ದ ಗೆಳೆಯನಿಗೆ ಟೀ ಕಾಯಿಸುವಾಗ ಎದ್ದು ಬಂದ ಹನುಮಂತನ ಪತ್ನಿ ರಜನಿ, ಚಿದಂಬರನನೋಡಿ “ಯಾವಾಗ್ಬಂದ್ರಿ!? ನೀವು ಬಿದ್ದೂರಿನ ತೇರಿಗೆ ಬರ್ತೀರಿ ಅಂತ ಇವ್ರು ಹೇಳಿದ್ರು. ನೀವು ಕಾರ್ನಲ್ಲಿ ಅಲ್ಲಿಗೇ ಹೋಗಿರ್ತೀರಿ ಅಂದ್ಕೊಂಡಿದ್ದೆ” ಎಂದು ಕುಶಲೋಪರಿ ವಿಚಾರಿಸಿದಳು.
“ಇಲ್ಲಇಲ್ಲ, ಕಾರ್ತಂದ್ರೆ ರಾತ್ರಿಪೂರಾನಾ ನೇಡ್ರೈವ್ಮಾಡ್ಬೇಕು. ಅದೂ ಅಲ್ದೇ ಬಿದ್ದೂರಿನ ಜಾತ್ರೆ ಜಂಗುಳಿಯಲ್ಲಿ ಪಾರ್ಕಿಂಗ್ಪ್ರಾಬ್ಲಂ. ಅದಕ್ಕೇ ಸ್ಲೀಪರ್ಬಸ್ಗೆಬಂದೆ” ಎಂದು ಸಮಜಾಯಿಷಿದ. “ಮತ್ತೆ ಒಬ್ರೇನಾ!? ಇನ್ನೂ ಮದ್ವೆ ಆಗಲಿಲ್ವಾ!?” ಎಂಬ ರಜನಿಯ ಉದ್ಗಾರಕ್ಕೆ “ಆಗಾಣ ಬಿಡಿ.ಸದ್ಯ ಅದರ ಅಗತ್ಯ ಕಾಣ್ತಿಲ್ಲ. ಅಲ್ದೇ ನಮ್ಹನುಮಂತ, ಬಸವರಾಜ ಎಲ್ಲಾ ಮದ್ವೆ ಆಗಿ ಸುಖವಾಗಿದ್ದಾರಲ್ಲಾ, ಆ ಸುಖ ನೋಡಿ ನನಗಿನ್ನೂಮನಸ್ಸೇ ಬಂದಿಲ್ಲ” ಎಂದು ಕುಶಾಲುತೋಪುಹಾರಿಸಿದ. ಗಂಡ ಕೊಟ್ಟ ಚಹಾವನ್ನೇಹ ಲ್ಲುಜ್ಜದೇ ಕುಡಿದ ರಜನಿ ಚಿದಂಬರನ ಮಾತಿಗೆ ನಸುನಗುತ್ತಾ” ಎಲ್ಲಾ ಅವರವರು ಪಡೆದದ್ದು. ನಿಮಗೇ ಅಂತ ಆದೇವ್ರು ಒಂದು ಹೆಣ್ಣ ಸೃಷ್ಟಿ ಮಾಡಿರ್ತಾನೆ. ಸಿಕ್ಕೇ ಸಿಗ್ತಾಳೆ” ಎನ್ನುತ್ತಾ “ಹನುಮಂತ್, ಇವತ್ತು ಆಫೀಸಲ್ಲಿ ಎಲ್ಲಾ ಕ್ಲಷ್ಟರ್ಗಳ ಮೀಟಿಂಗ್ ಇದೆ. ಬರೋದು ತಡ ಆಗುತ್ತೆ. ನೀವು ಬಿದ್ದೂರಿಗೆ ಹೋಗ್ತಾ ಮಗನ್ನ ನಿಮ್ಮ ಅಮ್ಮನ ಮನೇಗೆ ಬಿಟ್ಬಿಡಿ” ಎಂದವಳೇ ಬಾತ್ರೂಂ ಹೊಕ್ಕಳು. ಚಿದಂಬರ ಹನುಮಂತನ ಮುಖವನ್ನೇ ನೋಡುತ್ತಿದ್ದ. ಹನುಮಂತನೇ ಎಲ್ಲಾ ಹೇಳ್ತೀನಿ ಅಂತ ಕಣ್ಣಲ್ಲೇ ಸೂಚಿಸಿ ಗೆಳೆಯನ ಸ್ನಾನಕ್ಕೆ ಸಿದ್ಧ ಮಾಡತೊಡಗಿದ.
ಬಿದ್ದೂರಿನ ರಾಮಚಂದ್ರ ಕುಲಕರ್ಣಿಯವರ ಹಿರಿಯ ಮಗ ಹನುಮಂತರಾಯ ಹುಟ್ಟಿದಾಗಲೇ ಅವನ ಅಪ್ಪನ ಶಾನುಭೋಗಿಕೆ ಹೋಗಿದ್ದು.”ಇನ್ನೂ ಶಾನುಭೋಗಿಕೆ ಪಡೆದ ಮೂರು ವರ್ಷ ಆಗಿಲ್ಲ, ಮದ್ವಿ ಆಗಿ ಮಗಾ ಹುಟ್ಟೋದ್ರೊಳಗೆ ಈ ಪರಂಪರಾಗತ ಪಿತ್ರಾರ್ಜಿತ ಕೆಲಸ ಹೋಗೋದಂದ್ರೆ ಏನು!? ಎಲ್ಲಾ ಸೊಸಿಯ ಕಾಲ್ಗುಣ, ಹುಟ್ಟಿದ ಮಗೀನ ನಕ್ಷತ್ರದೋಷ” ಅಂತ ರಾಮಚಂದ್ರ ಕುಲಕರ್ಣಿಯ ಅಮ್ಮ ಘೋಷಿಸಿದ್ದರಿಂದ ಹನುಮಂತನ ಅಮ್ಮನಿಗೆ ತವರು ಮನೆಯೇ ಗಟ್ಟಿಯಾಗಿತ್ತು. ಮಗುವಿನ ಜನ್ಮ ನಕ್ಷತ್ರದ ದೋಷಪರಿಹಾರ ಆಗಿ ಅದರಪ್ಪ ಈ ಮಗೀನ ಒಪ್ಪಲಿ ಎಂದೇ ಹನುಮಂತರಾಯ ಎಂಬ ಹೆಸರು ಇಟ್ಟಿದ್ದಂತೆ! ಆದರೂ ಇವನಪ್ಪ ಮಗನ ಮುಸುಡಿ ನೋಡಲು ಬಂದೇ ಇರಲಿಲ್ಲ. ಹೋದ ಶಾನುಭೋಗಿಕೆಯ ಬದಲು ಸರ್ಕಾರವೇ ವಿಲೇಜ್ ಅಕೌಂಟೆಂಟ್ನೌಕರಿ ಕೊಟ್ಟರೂ ಸೊಸೆಯನ್ನು ಕರೆತರಲು ಕುಲಕರ್ಣಿಯ ಅಮ್ಮ ಸಮ್ಮತಿಸದೇ ಹನುಮಂತ ಅವರಮ್ಮನ ಊರಲ್ಲೇ ಬೆಳೆದ. ಕಾದು ಕಾದು ಐದು ವರ್ಷ ಆದಮೇಲೆ “ಇದು ನಿಮ್ಮ ಮನೆಯ ಒಡವೆ. ಇದನ್ನು ಧರಿಸೋದು, ಅಥ್ವಾ ಹಾಗೇ ಪೆಟ್ಟಿಗೆಯಲ್ಲಿ ಇಡೋದು ನಿಮಗೆಬಿಟ್ಟಿದ್ದು” ಅಂತ ಹೇಳಿ ಹನುಮಂತನ ಮಾವ ತನ್ನ ತಂಗಿ ಮತ್ತು ಸೋದರಳಿಯನನ್ನ ಬಿದ್ದೂರಿಗೆ ಬಂದು ಬಿಟ್ಟು ಹೋಗದೇ ಇದ್ದರೆ ಈ ಚಿದಂಬರ, ಬಸವರಾಜ. . ಮೊದಲಾದ ಯಾರಿಗೂ ಹನುಮಂತನ ಪರಿಚಯವೇ ಆಗ್ತಿರಲಿಲ್ಲ! ಮನೆಯಲ್ಲಿ ಅಮ್ಮನ ಹುಕುಮನ್ನು ಮೀರಲಾಗದೇ, ರೈತರಿಂದ ವಸೂಲಿ ಮಾಡಿದ ತಲೆಗಂದಾಯದ ಹಣ ಕೈತುಂಬಿದ್ದ ರಾಮಚಂದ್ರನ ಬಲವಂತದ ಬ್ರಹ್ಮಚರ್ಯದ ಆದಿನಗಳ ಹಗಲು ಕಛೇರಿಗಳಲ್ಲಿ, ಇರುಳು ಕೆಳಗೇರಿಗಳಲ್ಲಿ ಕಳೆದು ಹೋಗುತ್ತಿದ್ದವು. ಅಮ್ಮ ವೈಕುಂಠ ಸೇರಿದ ಕೆಲವೇ ದಿನಗಳಲ್ಲಿ ಹೆಂಡತಿ ಮಗ ಮನಗೆ ಬಂದರೂ ರಾಮಚಂದ್ರ ಕುಲಕರ್ಣಿಗಳು ಮಾತ್ರ ಇರುಳನ್ನು ಕೇರಿಗಳಲ್ಲೇ ಕಳೆಯುತ್ತಿದ್ದರು!
ಕೇರಿಗಳ ಗಟಾರದಲ್ಲಿ ಬೀಳುವಅಪ್ಪ, ಮಡಿ ಅಡುಗೆ ಪೂಜೆ ಮಾಡುವ ಅಮ್ಮನ ನೋಡುತ್ತಾ ಬೆಳೆದ ಹನುಮಂತನಿಗೆ ಬ್ರಾಹ್ಮಣ್ಯ ಎಂಬುದೇ ದೊಡ್ಡಗೊಂದಲ. ಆ ಊರಿನಲ್ಲಿದ್ದ ಏಕೈಕ ಬ್ರಾಹ್ಮಣರ ಮನೆಯ ಹನುಮಯ, ತಲ ತಲಾಂತರದಿಂದ ಊರ ಹನುಮಪ್ಪನ ಪೂಜೆ ಮಾಡ್ಕೋತಾಬಂದ ಪೂಜಾರ್ರ ಮನೆಯ ಚಿದಂಬ್ರ, ಹನುಮಪ್ಪನಿಗೆ ಹೂವಿನ ಮಾಲೆ ಕಟ್ಟಿಕೊಡೋ ಹೂಗಾರ್ರ ಬಸ್ರಾಜ . . . ಜೊತೆಗೇ ಬೆಳೆದಿದ್ದು ಹೀಗೆ. ಹನುಮಂತನ ಅಪ್ಪ ಮನೆಗೂ ಬಂದು ಬೀಳುತ್ತಿದ್ದ ಕುರುಹಾಗಿ ಹನುಮಂತನಿಗೆ ಮೂವರು ತಂಗಿಯರೂ ಹುಟ್ಟಿದ್ದರು. ಹೆಂಡತಿ ಹೇಳಿದಂತೆ ಮಗನನ್ನ ಕರೆದುಕೊಂಡು ಅಮ್ಮನ ಮನೆಗೆ ಬಿಡಲು ಹೋದ ಹನುಮಂತರಾಯ ಚಿದಂಬರನನ್ನೂ ಗಾಡಿಯಲ್ಲಿ ಕೂರಿಸಿಕೊಂಡ. ಅದೇ ಊರ ಎಕ್ಷ್ಟೆನ್ಷನ್ನಲ್ಲಿ ಮಗಳ ಮನೆಯಲ್ಲಿ ವಾಸವಾಗಿದ್ದ ಅಮ್ಮನಿಗೆ. ” ಮಗನ್ನ ಇಲ್ಲೇ ಬಿಡಕ್ಕೆ ಹೇಳಿದ್ದಾಳೆ. ಅವಳೂ ನಿನ್ನೆ ಬೆಂಗ್ಳೂರಿಗೆ ಹೋಗಿದ್ಲು. ಅದೇನೋ ಆಡಿಟ್ ಅಂತೆ. ಜೀಪಲ್ಲಿ ಮನೆಗೆ ಬಂದಾಗ ಸರೀ ರಾತ್ರಿ.ಮತ್ತೆ ಇವತ್ತು ಮೀಟಿಂಗ್ ಅಂತೆ. ಸಂಜೆ ಬಂದು ಕರ್ಕೊಂಡು ಹೋಗ್ತಾಳೆ”. “ಬಿಡೋ ಇದೇನು ಹೊಸದಾ!? ಪ್ರತಿವಾರದ ಕತೆ ಇದು. ಕಾರಣ ಬೇರೆ ಬೇರೆ.
ಅದಿರ್ಲಿ ಇವನುಚಿ ದಂಬರಅಲ್ವಾ? ನಮ್ಮೂರ ಪೂಜಾರ್ರ ಹನುಮಜ್ಜ ನಮೊಮ್ಮಗ?” ಎಂದೇವಿ ಚಾರಿಸಿದರು ಹನುಮಂತನ ಅಮ್ಮ. ಹೌದೆಂದ ಚಿದಂಬರನ ಕುಶಲೋಪರಿ ವಿಚಾರಿಸಿ, ಕೂರಿಸಿ ಊಟಹಾಕಿದ ಅಮ್ಮನ ಕೈಯಡಿಗೆ ಉಂಡು, ಅಮರಾವತಿಯಿಂದ ಬಿದ್ದೂರಿಗೆ ಗಾಡಿ ಓಡಿಸುವಾಗ ಆಗಲೇ ಸೂರ್ಯ ಪಶ್ಚಿಮಕ್ಕೆ ಜಾರುತ್ತಿದ್ದ. ಬಸ್ರಾಜನ ಮನೆ ಮುಂದೆ ಗಾಡಿ ನಿಂತಾಗ ಅಪೂಟಮುಸ್ಸಂಜೆ. ಬೆಳಗ್ಗೆಯಿಂದ ಕಾದ ಬಸ್ರಾಜರೇಗುತ್ತಲೇ ಸ್ವಾಗತಿಸಿದ. “ಬರ್ರಲೇ. ಇದೇನು ಹನುಮಪ್ಪನ ತೇರಾದ ಮ್ಯಾಲೆ ಬಂದ್ರೀ!!?” ಎಂದು ಅವನು ಕಟಕಿದರೆ, ಚಿದಂಬ್ರ ನಗುತ್ತಾ ಹನುಮಂತನ ತೋರಿಸಿದ!. “ಬರ್ರಿ ಬರ್ರಿ, ಕೈಕಾಲು ಮಕತೊಕ್ಕೊಂಡು, ಚಾಕುಡ್ದು ಹನುಮಪ್ಪನ ಗುಡಿತಾವ ಹೋಗ್ಬರೋಣ. ಇವತ್ತು ಶನಿವಾರ ಬ್ಯಾರೆ. ಪಸಂದ್ ಅಲಂಕಾರ ಮಾಡಿರತಾರೆ” ಎಂದ ಬಸವರಾಜನ ಹಾಗೇ ಲಗು ಬಗೆಯಲ್ಲಿ ಅವರು ಗುಡಿ ಹತ್ರ ಹೋಗುವ ಹೊಗೇ ಜನ ಜಂಗುಳಿ ಸೇರಿತ್ತು. ರಾತ್ರಿ ಗುಡಿ ಪಕ್ಕದ ಕಲ್ಯಾಣಿಯಲ್ಲಿ ದೀಪ ತೇಲಿಬಿಡುವ, ತೆಪ್ಪೋತ್ಸವ ನೋಡುವ ಹೆಂಗಳೆಯರ ನುಗ್ಗಾಟ, ರೇಷ್ಮೆ ಸೀರೆ ಪರಕಾರಗಳ ಚರ ಪರ ಸಡಗರ ಕಿವಿ ತುಂಬಿದ್ವು. ಆಗಲೇ ತೂರಿ ಬಂದಿದ್ದು “ನೀ ಹನುಮಂತ ಅಲಾ!?” ಎಂಬ ಹೆಣ್ಣದನಿಯ ಪ್ರಶ್ನೆ.ಗೆಳ್ಯಾರುದನಿ ಬಂದ ಕಡೆ ತಿರುಗಿ ನೋಡಿದರು. ನಲವತ್ತರ ಪ್ರಾಯದಲ್ಲೂ ಕಟೆದ ಶಿಲಾಬಾಲಿಕೆಯಂತಿದ್ದ ಆಕೆ ಚಂದ್ರಕಲಾ ಅಂತ ಮೂವರಿಗೂ ಗುರುತು ಹತ್ತಿತು.

“ಹೂಂ. ಇವನೇ ಹನುಮಂತರಾಯ, ಇವನು ಪೂಜಾರ್ರ ಚಿದಂಬರ. ಈಕಿನಮ್ಗೌಡ್ರ ಚಂದ್ರಕಲಾ. ನೆಪ್ಪ್ಪಾಯ್ತಿಲ್ಲೋ!?” ಎಂದು ಬಸವರಾಜ ಪರಸ್ಪರ ಪರಿಚಯಿಸಿದಾಗಲೂ ಹನುಮಂತ ಆಕೆಯನ್ನೇ ವಿಸ್ಮಿತನಾಗಿ ನೊಡ್ತಿದ್ದ, ಚಿದಂಬರನೂ ಆಕೆಯನ್ನ ಅಪಾದಮಸ್ತಕನಿರುಕಿಸುತ್ತಿದ್ದ. “ಹಂಗೇ ಅದೀಯಲ್ಲೇ ಕಲಾ!? ಎಷ್ಟು ವರ್ಸಾತು ನಿನ್ನ ನೋಡಿ! ಏನು ತೇರಿಗಂತ ಊರಿಗೆ ಬಂದಿದ್ದೀ? ಒಬ್ಬಾಕೀನಾ? ಗಂಡ ಮಕ್ಳೂಬಂದಾರಾ?” ಒಂದೇ ಉಸಿರಿಗೇ ಹತ್ತು ಪ್ರಶ್ನೆ ಕೇಳಿದ್ದ ಹನುಮಂತ. “ನೀನಾ ಮುಪ್ಪಾನ ಮುದ್ಕ ಆಗಿದ್ದೀ ನೋಡು ಹನ್ಮಂತ. ನಂಗೂ ನಿನ್ನಷ್ಟೇ ವಯಸ್ಸಾಗೈತಿ. ನಾನೇನು ಹರೇದಾಕಿ ಅಲ್ಲ. ಮಗ್ಳು ಹರೇದಾಕಿ ಆಗ್ಯಾಳ. ಮಗ ಇಂಜಿನೀರಿಂಗ್ಕಲೀತದಾನ. ಗಂಡ ಮಕ್ಳೂಬಂದಾರ, ಅಲ್ಲೇ ಕಲ್ಯಾಣಿ ಹತ್ರ ಹೋಗಿರ್ಬೇಕ” ಎಂದು ನಸುನಕ್ಕು ಹೇಳಿದಳು ಚಂದ್ರಕಲಾ. ಆಕೆ ನುಲಿದಂತೆನ್ನಿಸಿತು ಚಿದಂಬರನಿಗೆ. ಆಗೌಜಿನಲ್ಲಿ ಹೆಚ್ಚು ಮಾತಾಡಲು ಆಗದೇ “ನಾಳಿ ಮನೀಗೆಬರ್ರಿ” ಎಂದವಳೇ ಆ ಜನರ ಮಧ್ಯೆ ಮರೆಯಾದಳು ಕಲಾ.
“ಹಂಗೇ ಅದಾಳಲ್ಲೋ ಚಂದ್ರೀ!!?” ಎಂದು ಕನಲಿದ ಚಿದಂಬರ.’ಹೌದು’ ಎಂದರೂ ಹನುಮಂತನ ಮನಸ್ಸು ಚಂದ್ರಕಲಾಳ ಹಿಂದೇ ಹೋಗಿತ್ತು. ಮನೆಯಲ್ಲಿ ಬೆನ್ನಿಗೆ ಬಿದ್ದ ತಂಗಿಯರಿದ್ದರೂ ಹನುಮಂತನ ಬದುಕಿನಲ್ಲಿ ಪ್ರವೇಶಿಸಿದ ಮೊದಲ ಹುಡುಗಿ ಈ ಚಂದ್ರಕಲಾ.ಬಿದ್ದೂರಿನ ಸೋಮನಗೌಡರ ಈ ಒಬ್ಳೇ ಮಗಳು ಅವಳ ಚಿಗಪ್ಪ ದೊಡ್ಡಪ್ಪನ ಗಂಡು ಮಕ್ಕಳ ನಡುವಿನ ಏಕೈಕ ಹೆಣ್ಮಗು. ಹಾಗಾಗೇ ರಾಜಕುಮಾರಿಯಂತೆ ಮೆರೆಸಿಕೊಂಡ ಈ ಹುಡುಗಿ ಹನುಮಂತ ಮತ್ತು ಚಿದಂಬರರ ಜೊತೆ ಶಾಲೆಗೆ ಸೇರಿದ್ದು ನೇರ ಐದನೆಯ ತರಗತಿಗೆ! ಅಷ್ಟೊತ್ತಿಗಾಗಲೇ ನಾವು ಗಂಡ್ಮಕ್ಳು, ಇವ್ರು ಹುಡುಗೀರು ಅಂತಬೇಧ ಗೊತ್ತಾಗಿದ್ದ ಹುಡುಗರಿಗೆ ಈಕೆ ಎಂದರೆ ರೋಮಾಚನ.ಸರೀಕ ಹುಡುಗಿಯರಿಗೂ ಈಕೆ ತಮ್ಮಂತಲ್ಲ ಎಂಬ ಬೆರಗು. ಒಂದನೆಯ ತರಗತಿಯಿಂದ ಮನೆಯಲ್ಲೇ ಪಾಠ ಹೇಳಿಸಿಕೊಂಡಿದ್ದ, ಓದಿನಲ್ಲೂ ಚುರುಕಿದ್ದ ಕಲಾ ಎಂದರೆ ಮೇಷ್ಟ್ರುಗಳಿಗೂ ಅಚ್ಚುಮೆಚ್ಚು. ತಪ್ಪುಉತ್ತರ ಕೊಟ್ಟ ಹುಡುಗರಿಗೆ ಹುಡುಗಿಯರಿಂದ ಮೂಗ್ಹಿಡಿದು ಕಪಾಳಕ್ಕೆ ಹೊಡಿಸ್ತಿದ್ದ ಮಾರ್ತಾಂಡಪ್ಪ ಮೇಷ್ಟ್ರಿಗೆ ಕಲಾಳನ್ನೇ ಕರೆಯುವ ಹುಮ್ಮಸ್ಸು.ಆಕೆ ಮುಖದ ಹತ್ರ ಮುಖಾತಂದು, ತನ್ನ ಗುಲಾಬಿ ಹೂವಿನಂತ ಅಂಗೈನಲ್ಲಿ ಕಪಾಳಕ್ಕೆ ಹೊಡೆಯೋದೇ ಪುರಸ್ಕಾರ ಅಂತ ಭಾವಿಸಿದ್ದ ಹುಡುಗರಿಗೆ ಈ ಶಿಕ್ಷೆ ಪಡೆಯೋದೇ ಒಂದು ಹುಮ್ಮಸ್ಸು. ಓದಿನಲ್ಲಿ ಜಾಣರಿದ್ದ ಈ ಹನುಮಂತ ಮತ್ತು ಚಿದಂಬರರಿಗೆ ಈ ಅವಕಾಶ ಸಿಕ್ಕದೇ, ಕೇವಲ ಬಸ್ರಾಜ ಮಾತ್ರ ಈ ಸುಖಪಡೆಯುತ್ತಿದ್ದುದಕ್ಕೆ ಆಗಲೂ ಹೊಟ್ಟೇಕಿಚ್ಚು!!
ಹನುಮಂತನಿಗೂ ಚಂದ್ರಕಲಾಳ ಸ್ಪರ್ಶ, ಸಾಂಗತ್ಯ ಸಿಕ್ಕಿದ್ದು ಹೈಸ್ಕೂಲಿಗೆ ಬಂದ ಮೇಲೆ. ಬಿದ್ದೂರಿನಲ್ಲಿ ಏಳನೇ ಕ್ಲಾಸಿನ ತನಕ ಕಲಿತು ಹೈಸ್ಕೂಲಿಗೆ ಒಂದು ಮೈಲಿ ದೂರದ ಬಿಸ್ಲಳ್ಳಿಗೆ ಸೇರಿದ ಇವರೆಲ್ಲಾ ಸಂಜೆ ಸ್ಕೂಲ್ಬಿಟ್ಟ ಮೇಲೆ ಬಿಸ್ಲಳ್ಳಿ ಕೆರೆ ಏರಿಮೇಲೆ ನಡೆದು ಬಂದು, ಹೊಲಗಳ ಮಧ್ಯದಿಂದ ಊರ ಸೇರುತ್ತಿದ್ದರು. ಕೆರೆಯ ಏರಿಯಲ್ಲಿ ಅಲ್ಲಲ್ಲಿ ಜೌಗು, ಯಾರೋ ಕೂತು ಚೆರಿಗೆಚೆಲ್ಲಿದ ನೀರಕೆಸರು, ಅಲ್ಲಲ್ಲಿ ಮುಳ್ಳು, ನಡುವೆ ಭಯಹುಟ್ಟಿಸುವ ದೊಡ್ಡ ಮರದ ನೆರಳು. . ನಡೆಯುತ್ತಾ ಗಾಳಿಗೆ ಓಲಾಡಿ, ಏನೋ ತುಳಿದು ಆರಾಡುತ್ತಿದ್ದ ಚಂದ್ರಕಲಾಳ ಹಿಂದೇ ಬರುತ್ತಿದ್ದ ಹನುಮಂತ ಆಕೆಗೆ ಸದಾ ಬೆಂಗಾವಲು.ಉಳಿದವರು ತಮ್ಮ ಲೋಕದಲ್ಲೇ ತಾವಿರುತ್ತಿದ್ದರೆ ಹನುಮಂತನಿಗೆ ಚಂದ್ರಕಲಾಳೇ ಲೋಕವಾಗಿದ್ದ ದಿನಗಳವು. ಎಸ್ಸೆಲ್ಸಿಯಲ್ಲಿ ಹೆಚ್ಚು ಸ್ಕೋರ್ಮಾಡಬಹುದು ಎಂಬ ದೂರದಾಸೆಯಿಂದ ಸಂಸ್ಕೃತ ಸೇರಿಕೊಂಡ ಚಂದ್ರಕಲಾ ಮತ್ತು ಕನ್ನಡ ಪ್ರಥಮ ಭಾಷೆಯಾದ ಹನುಮಂತ ಆಕ್ಲಾಸ್ಗಳಿಗೆ ಮಾತ್ರ ಬೇರೆ ತರಗತಿಗಳಿಗೆ ಹೋಗುತ್ತಿದ್ದರು. ಉಳಿದಂತೆ ಕ್ಲಾಸಿನಲ್ಲೂ ಸದಾ ಚಂದ್ರಕಲಾಳ ಹಿಂದೇ ಹನುಮಂತ ಕೂರುತ್ತಿದ್ದ. ಅವತ್ತು ಸಂಜೆ ಸ್ಕೂಲಿನಿಂದ ವಾಪಸ್ಬರ್ತಾ ಚಂದ್ರಕಲಾ ಕೇಳಿದಳು “ಹನ್ಮಂತ, ಚಂದ್ರಕಳಾ ಹಂಸೆವತಂಸೆ ಅಂದ್ರೇನೋ!?” ಒಂದು ನಿಮಿಷ ತಲೆ ಕೆರಕೊಂಡು ಹನುಮಂತ ಹೇಳಿದ
“ನಾನು ಕನ್ನಡದೋನು.ಸಂಸ್ಕೃತದ ಅರ್ಥನಂಗೊತ್ತಿಲ್ಲ. ಆದ್ರೆ ಅಮ್ಮ ಹೇಳ್ಕೋತಿರ್ತಾಳೆ ಹಂಗಾಗಿ ಇದು ಕಾಳಿದಾಸನ ದೇವಿಸ್ತುತಿ ಕಾವ್ಯ ಅಂತಷ್ಟೇ ಗೊತ್ತು. ಯಾಕೆಕೇಳ್ದೆ!?”
“ನಮ್ಸಂಸ್ಕೃತ ಮೇಷ್ಟ್ರುನನ್ನ ನೋಡ್ದಾಗಲೆಲ್ಲಾ ಇದನ್ನಗುಣುಗುಣಿಸ್ತಾರೆ”.
“ಹೌದಾ!?ಅಷ್ಟೇನಾ, ಅಥ್ವಾ ಮುಂದೆಕುಚೋನ್ನತೆ ಕುಂಕುಮರಾಗ ಶೋಣೇ ಅಂತಾನೂ ಹಾಡ್ತಾರಾ!?”
“ಹೂಂಕಣೊ, ಆಗಂತೂ ಅವರು ನನ್ನದೆನೇ ನೋಡ್ತಿರ್ತಾರೆ.ನಂಗಂತೂ ಭಾಳಾನಾಚ್ಕೆಆಗಿ. . “
ಹನುಮಂತ ಏನೂ ಮಾತಾಡಲಿಲ್ಲ. ಅದಾಗಿ ಒಂದು ವಾರ ಕಳೆದಿರಲಿಲ್ಲ, ಅದೇನೋ ಸಂಸ್ಕೃತ ಮೇಷ್ಟ್ರಿಗೆ ರಾತ್ರಿ ಮೋಹಿನಿ ದೆವ್ವ ಕಂಡು ಮಾತಾಡಿಸ್ತಂತೆ. ಅವ್ರು ಹೆದರಿ ಜ್ವರ ಬಂದು ಅಮರಾವತಿಯ ದೊಡ್ಡಾಸ್ಪತ್ರೆ ಸೇರಿದವರು ಹಾಗೇ ಅವರೂರ ಕಡೆ ವರ್ಗ ಮಾಡಿಸ್ಕೊಂಡು ಹೋಗಿದ್ರು! ಸಂಸ್ಕೃತ ಕಲಿಸೋರು ಯಾರೂ ಇಲ್ದೇ ಚಂದ್ರಕಲಾ ಸೇರಿ ಎಲ್ಲಾ ಸಂಸ್ಕೃತ ವಿದ್ಯಾರ್ಥಿಗಳೂ ಅನಿವಾರ್ಯವಾಗಿ ಕನ್ನಡಕ್ಕೇ ಸೇರ್ಕೊಂಡಿದ್ರು. ಬೆಳಗ್ಗೆ ಸ್ಕೂಲಿಗೆ ಹೊರಟಾಗಿ ನಿಂದ ಮತ್ತೆ ಸಂಜೆ ಮನೆ ತಲುಪೋ ತನಕ ಹನುಮಂತ ಚಂದ್ರಕಲಾಳ ನೆರಳಾಗಿದ್ದ. ಹನುಮಪ್ಪನ ಗುಡಿಯಿಂದ ಬರುವಾಗ ತಮ್ಮ ಕಾಲ ಕೆಳಗಿನ ನೆರಳೂ ಕಾಣಿಸದಷ್ಟು ಕತ್ತಲಾಗಿತ್ತು. ಬಸವರಾಜ ತಾನು ಅಧ್ಯಕ್ಷ ಆಗಿರುವಬಿದ್ದೂರುಮರ್ಚೆಂಟ್ಸ್ಅಸೋಸಿಯೇಷನ್ನಿನ ಸೊಸೈಟಿ ಬಿಲ್ಡಿಂಗ್ನಲ್ಲಿ ಇವರಿಬ್ಬರಿಗೆ ವಸತಿ ವ್ಯವಸ್ಥೆ ಮಾಡಿದ್ದ. ಸೊಸೈಟಿಯ ಸದಸ್ಯರು, ಆಡಿಟ್ಟಿಗೆ ಬರುವ ಅಧಿಕಾರಿಗಳು ಉಳಿಯಲೆಂದು ಕಟ್ಟಿಸಿದ್ದ ಆಗೆಸ್ಟ್ರೂಂ ಆಧುನಿಕವಾಗಿತ್ತು. ರಾತ್ರಿಯ ಊಟದ ವ್ಯವಸ್ಥೆ ಮಾಡಿ ಸೊಸೈಟಿಯ ಪರಿಚಾರಕರು ಹೋದ ಮೇಲೆ ಚಿದಂಬರ ಬಾಟಲ್ತೆಗೆದ.
“ವಾವ್!ಶಿವಾಸ್ರೀಗಲ್! ಚಿದಂಬ್ರ ಈ ಫುಲ್ಬಾಟಲ್ನಾವಿಬ್ಬರೇ ಹೇಗೋ ಕುಡಿಯೋದು!?”
“ಇಬ್ಬರೇ!? ನಮ್ಹನುಮ್ಯಾ ಅದಾನಲ್ಲ”
“ಇವ್ನಾ!? ಇವ ಕುಡಿಯಲ್ಲ. ಅದ್ಕೇಬಿಯರ್ತರ್ಸೀನಿ”
“ಹೌದಾ!! ಅಂತೂ ನಮ್ಹನುಮಂತವುಡ್ವರ್ಡ್ಸ್ಗ್ರೈಪ್ವಾಟರ್ರಿಂದ ಮೇಲೆ ಪ್ರಮೋಷನ್ತಗೊಂಡಾನೆ” ಗೆಳೆಯರಿಬ್ಬರೂ ಹನುಮಂತನ ಕಿಚಾಯಿಸಿಗ್ಲಾಸ್ತುಂಬಿಸಿಕೊಂಡರು.ಚಿಯರ್ಸೆಂದು ಮೊದಲ ಗುಟುಕು ಕುಡಿದ ಬಸ್ರಾಜ “ಶಿವಾಸ್ರೀಗಲ್” ಎಂದು ಮತ್ತೊಮ್ಮೆ ಹೆಸರಿಸಿ ಮುದಗೊಂಡ. ಚಿದಂಬರನೂ” ಯಸ್ಶಿವಾಸ್ರೀಗಲ್!” ಎಂದು ತನ್ಮಯತೆಯಿಂದ ಬಾಟಲನ್ನೆತ್ತಿ ಮುತ್ತಿಟ್ಟ. “ಯಾರು ನೆನಪಾದ್ರಪ್ಪಾ!?” ಎಂದು ಕೀಟಲೆ ಮಾಡಿದ ಹನುಮಂತ. “ಒಬ್ರಾ?ಇಬ್ರಾ!? ಅವನಿಗೆಲ್ಲಿಹೆಸರುನೆನಪಿರ್ತವೆ!!” ಎಂದ ಬಸವರಾಜನ ಕುಶಾಲಿಗೆ ನಕ್ಕು ಚಿದಂಬರ”ಕರೆಕ್ಟು.ಅವರ ಹೆಸರೇನು, ಅವರುಗಳ ದೇಶದ ಹೆಸರೇ ನೆನಪಿರಲ್ಲ. ನನ್ನಈಹದಿನೈದು ವರ್ಷದ ಬಿಜಿನೆ ಸ್ವರ್ಲ್ಡ್ಟೂರ್ನಲ್ಲಿ ಆರೂ ಖಂಡದ ಬಹುತೇಕ ದೇಶಗಳೂ ಪಾಸ್ಪೋರ್ಟಿನಲ್ಲಿ ದಾಖಲಾಗಿವೆ. ಹಾಗೇ ಆಯಾ ದೇಶದ ಹೆಂಗಸರೂ. . ” “ಹೆ ಹೆ ದೊಡ್ಡ ಹೂಗಾರ ನೀನೇ. ಅಲ್ಲಲೇ ನಿನ್ನ ಹೂವುಗಳ ಪಟ್ಟಿಯಲ್ಲಿ ನಮ್ದೇಶದೋರೂ ಇದ್ದಾರಾ!?”
“ಬೇಜಾನ್, ಆದ್ರೆ ಓಶೋ ಸರಿಯಾಗಿ ಹೇಳ್ಯಾರೆ.ನಮ್ದೇಶದ ಹೆಂಗುಸ್ರಿಗೆ ಆರ್ಗ್ಯಾಸ್ಮ್ಗೊತ್ತಿರಲ್ಲ ಅಂತ”
“ಹಂಗಂದ್ರೆ ಏನ್ಲೇ!?” ಪ್ತಶ್ನಿಸಿದ ಹನುಮಂತ.
“ತಗಾ ಅವನೌವ್ನ. ಆಪದನಮ್ದೇಶದಾಗೆ ಗಂಡಸರ್ಗೂ ಗೊತ್ತಿಲ್ಲ ಅಂತಾತು!!” ಚಿದಂಬರ ಗಹಗಹಿಸಿನಕ್ಕ. ಹನುಮಂತ ಪೆಚ್ಚಾದ.

ಎರಡನೆಯ ರೌಂಡಿಗೆ ಮಾತುಗಳು ಮತ್ತಷ್ಟು ವರ್ಣರಂಜಿತವಾದವು.”ಇವತ್ತು ಗ್ಯಾರಂಟಿ ಚಂದ್ರಿ ಕನಸಿನಾಗ ಬರ್ತಾಳ” ಎಂದ ಚಿದಂಬರ.ಹಾಗೇ “ಹನುಮ್ಯಾನೀ ಬಿಡಪ್ಪ, ಹೈಸ್ಕೂಲು ಪಿಯುಸಿ ಮುಗಿಯೋವರ್ಗೂ ಆಕಿ ಹಿಂದಾನಾ ಸುತ್ತುತಿದ್ದಿ.ನಿನ್ಕ ನಸ್ನಾಗದಿನಾ ಬರ್ತಿರ್ಬೇಕು” ಅಂದ “ಇಲ್ಲಲೇ ಅವ್ನ ಕನಸಿನ್ಯಾಗ ಅವನ ಹೆಣ್ತಿ ಮಾತ್ರ ಬರ್ತಾಳ!” ನಕ್ಕ ಬಸವರಾಜ. “ಕನಸಿನ್ಯಾಗೂ ಹೆಣ್ತಿ!!?” ಚಿದಂಬರನದು ಅಚ್ಚರಿಯ ಉದ್ಗಾರ “ಮತ್ತೇನು ಮಾಡ್ತಾನ!? ಆಕಿ ಹಗಲಿನ್ಯಾಗಂತೂ ಬಗಲಿಗೆ ಕೂಡ್ರಂಗಿಲ್ಲ. ರಾತ್ರಿ ಆಕಿ ದಾರೂಂಬ್ಯಾರೆ, ಈತಂದೂಬ್ಯಾರೆ! ಮತ್ತೆ ಕನಸಿನ್ಯಾಗೇ ಕರ್ಕೋಬೇಕು!!” ಬಸವರಾಜ ನನಗೆಯಲ್ಲಿ ಕುಹಕವೇನೂ ಇರಲಿಲ್ಲ. ಅದು ಗೆಳೆಯನ ಪರಿಸ್ಥಿತಿ ಕಂಡವನ ಪರಿತಾಪದ ವಿಷಣ್ಣನಗೆ. “ಹೌದೇನಲೇ!?ಹಿಂಗಾ!? ಮತ್ತೆಮಗಾ!?”
“ತಾಯಿಸತ್ಯ, ತಂದಿ ನಂಬಿಕೆ ಅಂತಾರಲ್ಲೋ, ಹಂಗೇ ನಮ್ಹನುಮಾ ಮಗನ್ನ ಮಗ ಹನುಮ್ಯಾನ್ನನಂಬ್ಕಂಡಾರೆ” ತಟ್ಟನೇ ಕಿರುಚಿದ ಹನುಮಂತ “ಹಂಗೇನಿಲ್ಲ. ಅವನನ್ನಮಗ.ನನ್ಹೆಣ್ತಿಅಂತೋಳಲ್ಲ” ಕ್ಷಣ ಕೋಣೆಯೇ ಸ್ಥಬ್ದವಾಯ್ತು.ಆ ವಿಲಕ್ಷಣ ಮೌನ ಮುರಿಯಲು ಚಿದಂಬರನೇ ಮಾತಾಡಿದ. “ಸರಿ ಬುಡಪ್ಪಾ, ನಮ್ದೇಶದಾಗ ಮಕ್ಳಾಗಕ್ಕೆ ಭಾಳ ಕಷ್ಟ ಏನೂ ಪಡಬೇಕಿಲ್ಲತಗಾ, ಸೀರೆ ಪಕ್ಕ ಪಂಚೆ ಒಣಾಕಿದ್ರೆ ಆತು” ಎಂದು ನಗುತ್ತಾ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ “ಅದೆಲ್ಲಾ ಬಿಡ್ರಲೇ, ಇವತ್ತು ಸಂಜಿ ಮುಂದ ಆ ಚಂದ್ರೀನ ನೋಡಿತಲಿತಿರ್ಗಾಕ ಹತ್ತೇತಿ.ಲೇ ಹನುಮ್ಯಾ ನನಗ ಆಕಿಬೇಕ” ಎಂದ ಚಿದಂಬರನ ಮಾತು ಕಿರಿಕಿರಿಯೆನಿಸಿತ್ತು ಹನುಮಂತನಿಗೆ
“ಏ ಇದೇನು ‘ಸಂಗ್ಯಾಬಾಳ್ಯಾ’ ನಾಟ್ಕಮಾಡೀ!!? ಆಕಿಗೆಲಗ್ನಾಗಿ ಎರಡುದೊಡ್ಡ ಮಕ್ಳಾದಾವು.ಒಳ್ಳೇ ಪಿಯೂಸಿ ಹುಡ್ಗ ಪ್ರೀತಿ ಮಾಡ್ದಂಗ ಮಾತಾಡ್ತೀ!!”
“ಐ!! ಇದ್ರಾಗ ಪ್ರೀತಿ ಎಲ್ಲಿ ಬಂತೋ!? ನಾನೇನು ಆಕಿ ಕೂಡೆ ಸಂಸಾರ ಮಾಡೋದೈತಾ!? ನನಗ ಆಕಿಮ್ಯಾಲೆ ಮನ್ಸಾಗೇತಿ ಅಷ್ಟ”
“ಮನ್ಸಾಗೇತಿ ಅಂದ್ರ ಗೊತ್ತಾತಲ ಹನುಮಂತ. ಆಕಿ ನೂಚಿದಂಬ್ರಗಒಂದ್ಸಲ ಒಲಿದ್ರಾಯ್ತಪ್ಪಾ”
“ಒಲಿಯೂದು!! ಹಂಗಂದ್ರೇನ್ರೋ!? ಆಕಿ ಹಾದರ ಮಾಡಬೇಕಂತೀರಿ! ಅದೂ ನಿಮ್ಕೂಡೇ!!”
“ಥೋ.ಅದಕ್ಯಾಕಹಾದ್ರಅಂತೀ?ಕಾಲ ಬದ್ಲಾಗೇತಿ.ಆಕಿನೂ ಕಾರ್ಪೋರೆಟ್ಆಗ್ಲಿ” “ಕಾಲ ಬದಲಾದ್ರೂ ಹೆಣ್ಣಮನಸ್ಥಿತಿ ಬದಲಾಗಂಗಿಲ್ರಪ್ಪಾ.ಹೆಣ್ಣು ಒಲಿಯಾದು ಅಂದ್ರೆ ಆಕಿ ದೇಹ ಮನಸ್ಸು ಎರಡೂ ಜೊತೆ ಗೂಡೇಬರ್ಬೇಕು, ಅದೂ ಆತ್ಮ ಪೂರ್ವಕ. ಇಲ್ದಿದ್ರ ಅದು ಬರೀ ದೇಹದ ಹಾದರಾನಾ” “ಯೇ, ನಿನ್ನ ಫಿಲಾಸಪಿ ಎಲ್ಲಾ ಬ್ಯಾಡಾ ತಮ್ಮಾ.ಆಕಿ ಮನ್ಸಕಟ್ಗಂಡು ನಾವೇನು ಮಾಡಣ? ನಮ್ಗ ಆಕಿ ಜಬರದಸ್ತ್ದೇಹ ಸಾಕ. ಏನಪಾ ಚಿದಂಬ್ರ ಏನಂತೀ?” ಬಸವರಾಜನ ಈಮಾತಿಗೆ ಪ್ರತಿಯಾಗಿ ಹನುಮಂತ ಏನೂ ಮಾತಾಡಲಿಲ್ಲ. ಬಾಟಲಿ ಎತ್ತಿ ಉಳಿದ ಬಿಯರನ್ನೆಲ್ಲಾ ಒಂದೇ ಗುಟುಕಿಗೆ ಕುಡಿದ.
“ನೀ ಎನೂ ಮಾಡ್ಬೇಡಪ್ಪಾ ಹನುಮ್ಯಾ. ನನ್ನ ನಂಬರ್ಆಕಿಗೆ ಕೊಡು. ಮುಂದಿನದು ನಂಗೆಬಿಡು.ಆಕೀನ ಬೆಂಗ್ಳೂರಿಗೇ ಕರ್ಸಕ್ಯಂತೀನಿ. ನಿಂಗೂಮನ್ಸಿದ್ರ ನೀನೂ ಬಾ.ಆಯ್ತಾ?” ಎಂದು ಕಣ್ಮಿಟುಕಿಸಿದ ಚಿದಂಬರ. ಹನುಮಂತ ಸಿಗರೇಟ್ಹಚ್ಚಿ ಬುಸುಬುಸುಹೊಗೆಯೊಂದಿಗೆ ಹೊರ ಹೋಗಿನಿಂತ. ಹನುಮಂತ ಮಲಗಿದರೂ ಗೆಳೆಯರಿಬ್ಬರ ಮಾತುಮುಗಿದಿರಲಿಲ್ಲ. ಮತ್ತೆ ಮತ್ತೊಂದು ರೌಂಡ್ ಅಂತಗ್ಲಾಸುಗಳು ಕಿಣಿ ಕಿಣಿಸುತ್ತಿದ್ದವು. ಮಾತೂ ಅವರಿಬ್ಬರ ಆವರೆಗಿನ ಸಾಹಸಗಳನ್ನು ಬಿಚ್ಚಿಡುತ್ತಿದ್ದವು. ಹನುಮಂತನಿಗೆ ಎಚ್ಚರವಾದಾಗ ಆಗಲೇ ಬೆಳಕು ಬಲಿತಿತ್ತು. “ಏಏಳ್ರಲೇ. ಬೆಳಕು ಹರಿದು ಬಿಸಿಲು ಬಿದ್ದದೆ. ಹನುಮಪ್ಪನ ತೇರು ಎಳೀತಿರ್ತಾರೆ.ಬೇಗ ಹೋಗೋಣು” ಎಂದು ಹನುಮಂತ ಲಗು ಬಗೆ ತೋರಿದರೂ ಅವರು ಎದ್ದೇಳಲಿಲ್ಲ. ಬಸ್ರಾಜ ಮಾತ್ರ ಅರೆಗಣ್ಣು ಬಿಟ್ಟು “ಬಿಡಲೇ ಆತೇರೇನು ವರ್ಷಾ ಎಳೀತಾರೆ.ಪ್ರತಿ ವರ್ಷ ಚಿದಂಬ್ರ ಬರ್ತಾನ!?” ಎಂದವನೇ ಮತ್ತೆ ಗೊರಕೆ ಹೊಡೆದ.
ಸಂಜೆ ಆರೂವರೆಗೇ ಬಿದ್ದೂರಿನಿಂದ ಬೆಂಗಳೂರಿಗೆ ಚಿದಂಬರನ ಬಸ್ರಿಸರ್ವೇಷನ್ ಇತ್ತು. ಅವನನ್ನು ಬಿಡಲು ಬಂದ ಹನುಮಂತನಿಗೆ “ನನಗೆ ಖರೇವಂದ್ರೂ ಚಂದ್ರಿಮ್ಯಾಲೆ ಮನಸ್ಸಾಗೈತಲೇ ಹನುಮ್ಯಾ. ನಿನ್ನೆ ರಾತ್ರಿ ಕುಡಿದ ನಿಶಾದಾಗ ಏನೇನೋ ಹಲುಬ್ದ ಅನ್ಕಾಬ್ಯಾಡ. ಇಗಾ ನನ್ನ ಈ ನಂಬರ್ಬರೆದ ಚೀಟೀನ ಆಕಿಗೆ ಕೊಡು” ಎಂದು ಕಣ್ಣ ಮಿಟುಕಿಸಿಯೇ ಬಸ್ಹತ್ತಿದ್ದ ಚಿದಂಬರ.ಗಪ್ಪಾಗಿನಿಂತ ಹನುಮಂತನಿಗೆ ಬಸ್ಹೋಗಿದ್ದೇ ಗೊತ್ತಾಗಿರಲಿಲ್ಲ! ಅವನನ್ನ ಮತ್ತೆ ವಾಸ್ತವಕ್ಕೆ ಕರೆತಂದಿದ್ದು ಕಲಾಳಧ್ವನಿ.
“ಏಹನ್ಮಂತ. ಬೆಳಿಗ್ಗೆ ತೇರು ಎಳೀವಾಗ ಕಾಣ್ಲಿಲ್ಲ! ಮನೀಗೂ ಬರ್ಲಿಲ್ಲ! ನಾನು ನಿನ್ನ ದಾರಿಕಾದಿದ್ದೆ. ಬಿಡು, ಅಮ್ಮ ಬೇಷದಾಳಾ? ಅಮ್ಮನ್ನೂ ನಿನ್ಹೆಣ್ತಿಮಗನ್ನೂ ಕರ್ಕೊಂಡು ಒಂದ್ಸಲ ನಮ್ಸಕಲೇಶ್ಪುರಕ್ಕೆ ಬಾ ಆಯ್ತಾ?” ಎಂದು ಒಂದು ಉಸಿರಿಗೇ ಎಲ್ಲಾ ಹೇಳಿ ಗಂಡ ಮಕ್ಕಳೊಂದಿಗೆ ಬಸ್ಹತ್ತಿದಳು ಕಲಾ. ಹೂಂ ಎಂದವನೇ ಗಡಿಬಿಡಿಯಲ್ಲಿ ಆಕೆಗೆ ಇಷ್ಟವಾದ ಕಪ್ಪುದ್ರಾಕ್ಷಿ ಖರೀದಿಸಿ ಕಿಟಕಿಯಲ್ಲಿ ಕೂತ ಆಕೆಯ ಕೈಗೆ ಇರಿಸಿ, ಆಕಿಯ ಪಕ್ಕದಲ್ಲಿ ಕೂತ ಆಕೆಯ ಗಂಡ ಚನ್ನವೀರಗೌಡರಿಗೆ ಕೈಕುಲುಕಲು ಹಸ್ತಚಾಚಿದ. ಕಲಾಳೇ “ಥ್ಯಾಂಕ್ಸ್ಕಣೋ ಹನ್ಮಂತು” ಅಂತ ಕೈಕುಲುಕಿದಳು! ಹೊಲಾ ಮನೆ ತೋಟ ಅಂತ ದುಡಿದು ಮರಗಟ್ಟಿದಂತಹ ಆಕೆಯ ಅಂಗೈ ಸ್ಪರ್ಶಿಸಿ ಕಸಿವಿಸಿಯಾಯ್ತು ಹನುಮಂತನಿಗೆ. ಬಸ್ಹೊರಟ ಮೇಲೆಚಿಲ್ಲರೆ ಜೇಬಿಗೆ ಸೇರಿಸುವಾಗ ಚಿದಂಬರ ಕೊಟ್ಟ ಅವನ ನಂಬರ್ರಿನ ಚೀಟಿ ಕೈಗೆ ಹತ್ತಿ ಹೊಟ್ಟೆ ತೊಳೆಸಿದಂತಾಯ್ತು!






ಪ್ರಿಯರೆ ನಮಸ್ಕಾರ. ಹೊಸಪರಿಕಲ್ಪನೆಯ ಅವಧಿ ಸೊಗಸಾಗಿದೆ.ಅಭಿನಂದನೆಗಳು.