ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಪೆ ಬಹಳ ಕಾಲ ನಿಲ್ಲುವುದಿಲ್ಲ..

ದರ್ಜಿ…

ಶ್ರೀ ತಲಗೇರಿ

ಇಲ್ಲಾ ಬಹುಶಃ ಅವನು
ಮಾತುಕತೆಗಿಳಿದಿದ್ದ ದಾರಗಳ ಜೊತೆ..
ಎಳೆದ ಶಾಯಿಯ ಗುರುತೋ
ದಪ್ಪ ಬಳಪದ ಧೂಳೋ
ದೇಹದ ಅಳತೆ ಕೊಡುತ್ತದೆ;
ಅವ ಗುಲಾಮ..
ಕೈಗಳು ಅವನವೇ!

ತಡವರಿಸುವ ಗಾಲಿಗಳಿಗೆ
ಮೊದಲೆಲ್ಲ ತಲೆತಟ್ಟಿ ಮಲಗಿಸುವ
ಕಕ್ಕುಲಾತಿಯ ಚಲನವಿತ್ತು..
ಯಂತ್ರಗಳ ಉಸ್ತುವಾರಿ
ಆಹಾರ ಸರಬರಾಜು ಎಲ್ಲಕ್ಕೂ
ಒಗ್ಗಿಕೊಂಡಿವೆ ಈಗ
ವಿದ್ಯುತ್ತಿನ ತಂತಿಗಳು..
ಸೋರುವಿಕೆಯ ಅಳೆಯಬಹುದು..

ನೀಲಿ ಹೂಗಳ
ದಾವಣಿ ಹೊಲಿವಾಗ
ತನ್ನ ಗೊಂಬೆ ಇಣುಕಿದಂತೆ ಭಾಸ..
ಹೊಗೆ ಬಾರದ ತುಂಡು ಬೀಡಿ
ಕೈಲಿಡಿದು ನಟಿಸುತ್ತಾನೆ ಆತ
ತೇಪೆ ಹಾಕುತ್ತೇನೆಂದು..
ಆತನ ಸಾಕುನಾಯಿ
ಪೊದೆಯ ಮಗ್ಗುಲಲ್ಲಿ
ಕುಯ್ಗುಟ್ಟಿದ್ದಕ್ಕೆ ಯಾವ ಗೆರೆಯೂ
ಇಲ್ಲ ಅವನ ಹಣೆಯ ಮೇಲೆ..

ಗುನುಗುತ್ತಾನೆ, ಹಳೇ ರೇಡಿಯೋದ
ಗಂಟಲು ಕಟ್ಟುವಾಗ ಇವ ತಾನ್ ಸೇನ್..
ಜಾರಿ ಬೀಳುವ ಕನ್ನಡಕದ ಗಾಜಿನ
ಎಡಪಕ್ಕ ಸ್ವಲ್ಪ ಒಡಕು..
ಎಲ್ಲ ಬಿರುಕಿಗೂ
ಹೊಲಿಗೆ ಹಾಕಬಹುದು ;
ಹಲುಬುತ್ತಾನೆ ಅಥವಾ
ಬಿಕ್ಕಳಿಸುತ್ತಾನೆ ಜಗತ್ತು ಒಡೆಯುತ್ತಿದೆಯೆಂದು!..

ಕತ್ತರಿಸುತ್ತಾನೆ, ಆಕಾರದಲ್ಲಿ
ಕೂಡಿಸುತ್ತಾನೆ ತೂಕಡಿಸುತ್ತಿದ್ದರೂ..
ಚೆಂದದ ಅಂಗಿ ತೊಟ್ಟವನ
ದರ್ಜಿ, ಸೂಜಿದಾರಗಳ
ಕೂಗಳತೆಯ ಅಂತರದಲ್ಲೇ ಉಳಿದ..
ನಕ್ಷೆಯಲ್ಲಿ ಗಡಿಗಳ ತಿದ್ದುತ್ತೇವೆ;
ಅವ ಬರುವುದಿಲ್ಲ ಇಲ್ಲಿ..
ಕವಳ ಜಗಿಯುತ್ತ
ಮಿಣುಕು ಬೆಳಕಲ್ಲಿ
ತೂತು ಚಾದರ ಹೊದ್ದು
ಬುದ್ಧನಂತೆ ನಗುತ್ತಾನೆ ;
ತೇಪೆ ಬಹಳ ಕಾಲ ನಿಲ್ಲುವುದಿಲ್ಲ..
ಮತ್ತೆ ನಾನೂ ಇರುವುದಿಲ್ಲ..!

 

‍ಲೇಖಕರು admin

24 May, 2017

10 Comments

    • Shreedhar Bhat

      ಜೀ, ಧನ್ಯವಾದಗಳು 🙂 🙂 🙂

  1. Shubhashree

    ತೇಪೆ ಬಹಳ ಕಾಲ ನಿಲ್ಲುವುದಿಲ್ಲ … ಈ ಸಾಲು ತುಂಬಾ ಇಷ್ಟ ಆಯ್ತು

    • Shreedhar Bhat

      ಥಾಂಕೀಸ್ ಶುಭಕ್ಕಾ 🙂 🙂 🙂

  2. sangeetha raviraj

    kavite chennagide

    • Shreedhar Bhat

      ಧನ್ಯವಾದಗಳು ಜೀ 🙂 🙂 😉

  3. Sathish Reddy

    ಏನಂತ ಹೇಗಂತ ಪ್ರತಿಕ್ರಿಯಿಸಲಿ ಗೆಳೆಯ..
    ಒಳಗೊಳಗೆ ಮೊರೆವ ಭಾವಗಳಿಗೆ ಜೀವವಿತ್ತು ಅಕ್ಕರದಿಂದ ಪೋಷಿಸುವುದು ಸುಲಭವಲ್ಲ. ತುಂಬಾ ಇಷ್ಟವಾಯಿತು…

    • Shreedhar Bhat

      ಧನ್ಯವಾದಗಳು ಸತೀಶ್ ಬ್ರೋ 🙂 🙂 🙂

  4. shama nandibetta

    “ಎಲ್ಲ ಬಿರುಕಿಗೂ
    ಹೊಲಿಗೆ ಹಾಕಬಹುದು”

    Howda Puttanna ? Biruku bitta manasige ???

    • Shreedhar Bhat

      ಹ್ಞೂ ಶಮಕ್ಕಾ, ಪದೇ ಪದೇ ತೇಪೆ ಹಾಕಲೇಬೇಕು.. ತೇಪೆ ತೇಪೆಯೇ!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading