ತೇಪೆಯ ಸಾಲು

ಅವಿಜ್ಞಾನಿ / ಮಂಗಳೂರು

ನಿನ್ನ ನೋವಿನ ಸರಕು
ಯಾವ ಸಂತೆಯಲ್ಲೂ
ಬಿಕರಿಗಿಡಬೇಡ
ಇಲ್ಲಿ
ಗುಂಪಿನಲ್ಲೂ ಚಪ್ಪಲಿಯದ್ದೇ
ಚಿಂತೆಯ ಜನರಿದ್ದಾರೆ

ಷಹರದ ಮೂಲೆ ಮೂಲೆ
ಹುಡುಕಿದರೂ ವ್ಯಥೆಗಳ
ಕಂತೆ ಸಿಗುತ್ತದೆ
ನಿನ್ನದನ್ನೇ ಪರಾಮರ್ಶಿಸಿ
ನೋಡೋಕೆ
ಈ ಬಜಾರ ಅಷ್ಟು
ತಾಳ್ಮೆಯದ್ದಲ್ಲ

ಬೇಕೆಂದರೆ ಹೀಗೆ
ಮಾಡು..

ಏಕಾಂತವೊಂದನ್ನೇ
ಕೊಯ್ಯಲು ನದಿಯ
ಬೆನ್ನ ಮೇಲೆ ಗಾಳ ಹಾಕುವ
ಪ್ರಾಯದವನಲ್ಲಿ
ನಿನ್ನ ಕಥೆಯ ಬಿಡಿಸಲು
ನೋಡು
ನೆನಪಿರಲಿ….
ಯಾವ ಮೀನೂ ಸಿಕ್ಕದ
ಸಮಯ ಅವನೂ ನಿನಗೆ
ದಕ್ಕುವುದಿಲ್ಲ

ಊರೂರು ಸುತ್ತು
ಹಾದಿ ತಿರುವು ಅಲೆ
ನಿನ್ನ ಅಲೆಮಾರಿ ಪಾದಕ್ಕೆ
ದಾರಿಗುಂಟ ಸಿಕ್ಕುವ
ಜೋಡಿ ಹೆಜ್ಜೆ ಸಿಗಬಹುದು

ನೀರೇ ಇರದ ಕೆರೆಬದಿಯ
ಖಾಲಿ ಕೊಡ ಹೆಂಗಸು
ಬರುವುದೇ ಇಲ್ಲವೆನ್ನಬಹುದಾದ
ಬಸ್ಸಿಗೆ ಕಾಯುವ ಪಾದಚಾರಿ
ಮುರಿದ ಪ್ರೇಮದ ಶೋಕದಲ್ಲಿರುವ
ಮಜ್ನು ಇವರಲ್ಲಿ
ಯಾರನ್ನಾದರೂ ಆರಿಸು
ಹದವಾಗಿ ನಿನ್ನ
ನೋವ ತೆರೆದಿಡು

ಊರ ಮಾರ್ಕೆಟ್ಟಿನ್ನಲ್ಲಿ
ಚೌಕಾಸಿ ಮಾಡುವವ
ಕೇಳಿ ಕೇಳಿ ಬೇಸತ್ತ
ಸುದ್ಧಿಯ ಕೇಳುಗರಲ್ಲಿ
ತುರುಕ ಬಯಸುವ
ಊರ ಕಟ್ಟೆಯ ವಯಸ್ಸಿನವ
ಸಿಗದ ಕೆಲಸಕ್ಕೆ ಪ್ರತಿದಿನ
ಶೂಪಾಲಿಷ್ ಹಾಕಿ ನಡೆಯುವ
ಹುಮ್ಮಸ್ಸಿನ ಯುವಕ
ತಾಪಮಾನ ಹೇರಿಕೆ ಕುರಿತು
ತೀರಾ ತರ್ಕಿಸುವ
ಊರ ಬಿಕಾರಿ
ಇಂತಹ ಕಿವಿಗೆ
ನಿನ್ನ ಕೂಗು ಕೇಳಿಸಬಹುದು
ಬಹುಶಃ

ಜಂಗಮನಾಗು
ಮುಡಿಯಿಂದ ಅಡಿವರೆಗೆ
ನೋವು ಹರಿದುಹೋಗುವಷ್ಟು
ಬಿಸುಟಿ ಬಿಡು
ನಾಜೂಕುತನದ ಲೋಕದಲ್ಲಿ
ಒಂದೇ ಮರದ ಕಾಯಿಗೆ
ಕಾಯುವ ವ್ಯವಧಾನ
ಇರುವುದಿಲ್ಲ

ನೀ ದೇವರ ಮೌನ
ಉಡು
ತೇರಿನ ರಥವಾಗು
ರೈತನ ಬೈರಾಸು
ಪೆಂನ್ಷನ್‌ಗೆ ಕಾಯುವ
ಹಣ್ಣೆಲೆ ಮುದುಕ
ಅಥವಾ ಜಾತ್ರೆಯ ಜಂಗುಳಿಯಲ್ಲಿ
ಬೊಂಬಾಯಿ ಮಿಠಾಯಿ
ಮಾರುವವನ ತಾಳ್ಮೆಯಷ್ಟಾದರೂ ಇರಲಿ

ಕತ್ತಲ ಕೆತ್ತಿ ಕೆತ್ತಿ
ಬೆಳಕ ಮೂರ್ತಿ
ಮಾಡೋದು
ಕಡಲಲೆಯ ಸವೆಸಿ
ಉಪ್ಪಾಗಿಸುವುದು
ಬೊಗಸೆ ಕೈಯಾಗಿಸುವ
ಕೇವಲ ನಿನಗೆ
ಅಷ್ಟು ಬೇಗ ಒಗ್ಗುವುದಿಲ್ಲ

ಆದ್ದರಿಂದ
ನೋವ ಪೆಟ್ಟಿಗೆ
ನಿನ್ನ ಶವದ ತಲೆದಿಂಬಾಗಿಸು
ಅಥವಾ
ನಿದ್ದೆ ಸಾಯುವ ರಾತ್ರಿಗೆ
ಜೋಗುಳ ಗಾನವಾಗಿಸು…!

‍ಲೇಖಕರು avadhi

June 18, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. prakash konapur

    ಅತ್ಯಂತ ಪರಿಪಕ್ವವಾದ ಕವಿತೆ.ಶಹರದ ಯಾಂತ್ರಿಕ ಜೀವನ ಅತ್ಯಂತ ಸೊಗಸಾಗಿ ಮೂಡಿ ಬಂದಿದೆ

    ಪ್ರತಿಕ್ರಿಯೆ
  2. nagraj harapanahalli

    ನದಿಯ
    ಬೆನ್ನ ಮೇಲೆ ಗಾಳ ಹಾಕುವ
    ಪ್ರಾಯದವನಲ್ಲಿ

    ಕತ್ತಲ ಕೆತ್ತಿ ಕೆತ್ತಿ
    ಬೆಳಕ ಮೂರ್ತಿ
    ಮಾಡೋದು

    ನೋವ ಪೆಟ್ಟಿಗೆ
    ನಿನ್ನ ಶವದ ತಲೆದಿಂಬಾಗಿಸು

    ….ಇಂಥ ಅಚ್ಚರಿಯ ಸಾಲುಗಳು ಕವಿತೆಗೆ ಕಸುವು ತುಂಬಿವೆ . ನಿಷ್ಕರುಣಿ ಜಗತ್ತನ್ನು ಹಿಡಿದಿದ್ದೀರಿ . ಅಸಂಗತ ಜಗತ್ತು ಮತ್ತೆ ನಮ್ಮೆದುರು ದುತ್ತನೆ ನಿಂತಿದೆ. ಅನಾಥ ಭಾವ, ಏಕಾಂಗಿತನ ಮನುಷ್ಯನನ್ನು ಸುತ್ತಿಕೊಂಡಿದೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: