ನನ್ನಪ್ಪನಿಗೆ ನಾನು ಸದಾಕಾಲ ಮಗುವೇ ಆಗಿದ್ದೆ..

ನನ್ನ ಅಪ್ಪ ವೃದ್ಧರಾಗುವುದನ್ನು ನಾನು ನೋಡಲೇ ಇಲ್ಲ.

ವಸುಂಧರಾ ಕೆ ಎಂ

‘ನನ್ನ ಮಗೀಗೆ ಇಷ್ಟ’ ಎಂದು ಹೇಳಿ ಬೇಕರಿಯಲ್ಲಿ ‘ದಿಲ್ ಪಸಂದ್’  ತರುವಾಗ,  ‘ನಿಮ್ಮ ಮಗೂ ವಯಸ್ಸೆಷ್ಟು ಸರ್?’ ಎನ್ನುವ ಬೇಕರಿಯವರಿಗೆ, 15 ಎಂದೋ, ‘ನನ್ನ ಮಗೀಗೆ ಮಸಾಲೆ ದೋಸೆ ಇಷ್ಟ ‘ ಎಂದು ಹೇಳಿ ಪಾರ್ಸೆಲ್ ತರುತ್ತಿದ್ದ ನನ್ನಪ್ಪನಿಗೆ, ಅವರ ಮಗೂ ವಯಸ್ಸು ಕೇಳುತ್ತಿದ್ದ ಹೊಟೇಲಿನವರಿಗೆ 18 ಎಂದೋ ಹೇಳುತ್ತಿದ್ದ ನನ್ನಪ್ಪನಿಗೆ ನಾನು ಸದಾಕಾಲ ಮಗುವೇ ಆಗಿದ್ದೆ. ಯಾವಾಗಲೂ ನನ್ನನ್ನು  ‘ಮಗಾ’, ‘ಅಪ್ಪಿ’ ಎಂದೇ  ಕರೆಯುತ್ತಿದ್ದ ನನ್ನಪ್ಪ ನನ್ನನ್ನು ದೊಡ್ಡವಳಾಗಲು ಬಿಡಲಿಲ್ಲ. ಹಾಗೆಯೇ ನನ್ನ ಮುಂದೆ ಅವರು ಯಾವತ್ತೂ ವೃದ್ಧರಾಗಲೇ ಇಲ್ಲ.

ನನ್ನಕ್ಕ, ಅಣ್ಣ ಮತ್ತೆ ನಾನು -ನಾವು ಮೂರೂ ಮಕ್ಕಳು ನಮ್ಮಪ್ಪನನ್ನು ‘ಅಣ್ಣ’ ಎಂದೇ ಕರೆಯುತ್ತಿದ್ದೆವು. ಇದು ಚಿಕ್ಕವಯಸ್ಸಿನ ರೂಢಿ.

ನಂಜನಗೂಡು ಬಳಿಯಿರುವ ‘ಹದಿನಾರು’ ಎಂಬ ಊರಿನಲ್ಲಿ ಮಲ್ಲಪ್ಪ ಡಾಕ್ಟರ್ ಆಗಿಯೇ ನನಗೆ ನನ್ನಪ್ಪ ಪರಿಚಯವಾದದ್ದು. ಹಬ್ಬದ ದಿನಗಳಲ್ಲೂ, ಎರಡನೆಯ ಶನಿವಾರ, ಭಾನುವಾರದ ಸಾರ್ವಜನಿಕ ರಜೆಗಳಲ್ಲೂ ನನ್ನಪ್ಪನ ಸಲುವಾಗಿ ಆಸ್ಪತ್ರೆಯ ಬಾಗಿಲು ತೆರೆದೇ ಇರುತ್ತಿತ್ತು. ಅವರು ಹಳ್ಳಿಯ ಜನರಿಗೆ ಅಪಾರ ಅನುರಾಗಿ ವೈದ್ಯ. ಬಡರೋಗಿಗಳಿಗೆ ಬಸ್ ಚಾರ್ಜನ್ನೂ ಕೊಟ್ಟು ಕಳಿಸುತ್ತಿದ್ದ ಬಹು ಅಂತಃಕರುಣಿ.

ನಾನು ‘ಹದಿನಾರಿ’ನಲ್ಲೇ ಒಂದರಿಂದ ಮೂರನೆಯ ತರಗತಿವರೆಗೆ ಓದಿದ್ದು. ಮನೆ, ಮನೆಯ ಪಕ್ಕದಲ್ಲೇ ಆಸ್ಪತ್ರೆ. ವಿಶಾಲವಾದ ಕಂಪೌಂಡಿನೊಳಗಿನ ಜಾಗದಲ್ಲಿ ಅಪ್ಪ ನೆಟ್ಟು ಬೆಳೆಸಿದ ಬಗೆ ಬಗೆಯ ಹೂ ಹಣ್ಣುಗಳಿಗೆ ಆಗ ಲೆಕ್ಕವಿಲ್ಲ. ಅವರೊಬ್ಬ ನಿಜವಾದ ಮಣ್ಣಿನ ಮಗ. ಜನಸ್ನೇಹಿ. ಸಹೃದಯಿ, ಆದರಣೀಯ ಪರಿಸರ ಮಿತ್ರ. ಅವರು ಕಾರ್ಯನಿರ್ವಹಿಸಿದ ಊರುಗಳಲ್ಲಿ  ಆ ಕಾಲಮಾನದ ಜನರ ನೆನಪಲ್ಲಿ ಗಟ್ಟಿಕೊಂಡಿದ್ದಾರೆ ನನ್ನಪ್ಪ.

ನನ್ನಪ್ಪ ತಮ್ಮ ಸುದೀರ್ಘ ರಜೆಗಳಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ಬಳಿಯ ನಮ್ಮ ಊರಾದ ಕದಲೂರಿಗೆ ಹಾಜರಿಯನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಹೊಲದ ಬಳಿ ಹೋಗದೇ, ಊರನ್ನೊಂದು ಬಾರಿ ಸುತ್ತಿ ಎಲ್ಲರ ಮನೆಯ ಜಗುಲಿಗಳಲ್ಲಿ ಕುಳಿತು ಕುಶಲೋಪರಿ ವಿಚಾರಿಸದೇ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಯಾರ ಮನೆಯಲ್ಲಿ ವಿವಾಹ ಯೋಗ್ಯ ವಧು- ವರ ಇದ್ದಾರೆ ಎಂಬ ಮಾಹಿತಿಯೂ ಸೇರಿದಂತೆ, ಎಲ್ಲರ ಮನೆಯ ವಿಚಾರಗಳೂ ನನ್ನಪ್ಪನಿಗೆ  ಗೊತ್ತಿರುತ್ತಿತ್ತು. ಸಂಬಂಧಿಕರಲ್ಲಿ ಅಪಾರ ಪ್ರೀತಿಯಿಟ್ಟಿದ್ದ ನನ್ನಪ್ಪನನ್ನು ಎಲ್ಲರೂ ಹಾಗೆಯೇ ಪ್ರೀತಿಸುತ್ತಿದ್ದರು. ನಮ್ಮ ಸಂಬಂಧದ ಬಹುಮಕ್ಕಳಿಗೆ ಚೆಂದಚೆಂದ ಹೆಸರನ್ನಿಟ್ಟವರು ನನ್ನಪ್ಪನೇ. ಅವರ ಸಲಹೆಯಂತೆ ಮದುವೆಯಾದವರು ಈಗ  ಸುಖವಾಗಿ ಸಂಸಾರ ಮಾಡುತ್ತಿದ್ದಾರೆ.

ಆದರೆ ನನ್ನಪ್ಪ ನನ್ನ ಮದುವೆಗೆ ಇರಲೇ ಇಲ್ಲ…

ರಾಜಕುವರಿ ಕಥೆ ಅವಳ ಹೆಸರು ಸೀತೆ ಬಹಳ ಹಿಂದೆ ಬಹಳ ಹಿಂದೆ ನಡೆಯಿತೀ ಕಥೆ..; ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ; ತೂಗುವೆ ರಂಗನ, ತೂಗುವೆ ಕೃಷ್ಣನ;  ಆಡಿಸಿದಳೆಶೋದೆ ಜಗದ್ದೋದ್ಧಾರನ; ಹಿಂದೂಸ್ಥಾನವು ಎಂದೂ ಮರೆಯದ… ಹೀಗೆ ಎಷ್ಟೆಲ್ಲಾ ಹಾಡುಗಳನ್ನು ತಮ್ಮ ಸುಮಧುರ ಸ್ವರದಲ್ಲಿ ಶೃತಿಬದ್ಧವಾಗಿ ಹಾಡುತ್ತಿದ್ದರು ನನ್ನಪ್ಪ. ನನ್ನಕ್ಕ ಹಾಗೂ ನನಗೆ ಸಂಗೀತ ಕಲಿಸಲು ಮೈಸೂರಿನಿಂದ  ಆ ಕಾಲಕ್ಕೇ 50 ರೂಪಾಯಿಗಳ ಫೀಸಿಗೆ ಸಂಗೀತ ಗುರುಗಳನ್ನು ಕರೆಸುತ್ತಿದ್ದರು. ಆ.. ಎನ್ನಲೂ ಬಾಯ್ತೆರೆಯದೆ ಕೂತಿರುತ್ತಿದ್ದ ನನ್ನ ದೆಸೆಯಿಂದ ನನ್ನ ಅಕ್ಕ ಕೂಡ ಸಂಗೀತ ಕಲಿಯದಂತಾಗದೇ ನನ್ನಪ್ಪನ ಪ್ರಯತ್ನ ಹೊಳೆಗೆ ತೇದ ಹುಣಸೆಯಾಯ್ತು.

ನಾನು ಸುಖಾಸುಮ್ಮನೆ ಅಪ್ಪನಿದ್ದ  ಆಸ್ಪತ್ರೆಗೆ ಹೋಗಿ ಅಪ್ಪನಿಂದ ಇಂಜೆಕ್ಷನ್ (ಅದು ಬರಿಯ ಸ್ಟೆರಲೈಜ್ಡ್ ನೀರು ಅನ್ನೋದು ಆಮೇಲೆ ಗೊತ್ತಾಯ್ತು! ) ಮಾಡಿಸಿಕೊಂಡು ಬರುವುದು ಮಾಡುತ್ತಿದ್ದೆ. ಅಮ್ಮ, ಅಕ್ಕ, ಅಣ್ಣನಿಗೆ ಗೊತ್ತಾಗದಂತೆ ಅಪ್ಪನಿಂದ  ಪಡೆಯುತ್ತಿದ್ದ 5, 10, ರೂಪಾಯಿ ಪಾಕೇಟ್ಮನಿಯ ಮೌಲ್ಯ ಈಗಿನ ನನ್ನ  ಸಂಬಳಕ್ಕಿಲ್ಲ.

ಗುರುರಾಜಲು ನಾಯ್ಡು  ಅವರ ಹರಿಕಥೆ, ಎಂ.ಎಸ್.ಸುಬ್ಬಲಕ್ಷ್ಮಿಯವರ ಗಾಯನ ಆಸ್ವಾದಿಸಲು, ಪುಷ್ಪಕವಿಮಾನ, ಸ್ವಾತಿಮುತ್ಯಂ, ಸಾಗರಸಂಗಮಂ, ಶಂಕರಾಭರಣಂ ಸೇರಿದಂತೆ ಕನ್ನಡದ ನಮ್ಮ ಅಣ್ಣಾವ್ರ ಪಿಚ್ಚರ್ ಗಳನ್ನು ಅವುಗಳ ಮಹೋನ್ನತ ಕಲಾತ್ಮತೆಗಾಗಿ ಮಗು ವಯಸ್ಸಿನವರಾದರೂ ನಮಗೆ ನೋಡಲು ಕಲಿಸಿದ್ದು ನನ್ನಪ್ಪ .

ನನ್ನಪ್ಪ ಆಕಾಶಕ್ಕೆಂದೂ ಏಣಿ ಹಾಕಲಿಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚಿದ ಅಪ್ಪಟ ಸರಳಜೀವಿ. ಊರಿಗೆ ಹೋಗುವಾಗ ಬಸ್ಸಿನ ಜನರನ್ನೆಲ್ಲಾ ಪರಿಚಯ ಮಾಡಿಕೊಂಡುಬಿಡುತ್ತಿದ್ದ ಸ್ನೇಹಿತ. ‘ಹದಿನಾರಿ’ನಲ್ಲಿ ಸರಕಾರಿ ನೌಕರರೆಲ್ಲಾ ಸೇರಿ ‘ದಕ್ಷಬ್ರಹ್ಮಯಜ್ಞ’ ನಾಟಕ ಮಾಡಿದಾಗ ದಕ್ಷಬ್ರಹ್ಮನ ಪಾತ್ರ ಮಾಡಿದ ನನ್ನಪ್ಪ, ನಾಟಕ ಕಂಪನಿಯ ನಟಿಯರ ಕೈ ಹಿಡಿದು ನರ್ತಿಸಲು ಸಂಕೋಚ ಪಡುತ್ತಿದ್ದದ್ದನ್ನು ಬಹುಕಾಲ ನೆನೆದು ಅಮ್ಮ ರೇಗಿಸುತ್ತಿದ್ದರೆ, ಅಪ್ಪ ನಾಚಿದಂತೆ ನಗುತ್ತಿದ್ದರು ಜೊತೆಗೆ ನಮ್ಮನ್ನೂ ನಗಿಸುತ್ತಿದ್ದರು.

ಅಪ್ಪ ಕೊಡಿಸಿದ ಮೈಸೂರಿನ ಗೋವರ್ಧನ, ದಾಸ್ ಪ್ರಕಾಶ್ ಹೊಟೇಲಿನ ಮಸಾಲೆ ದೋಸೆ, bsa slr ಸೈಕಲ್, ರಂ.ಶ್ರೀ.ಮುಗಳಿಯವರ  ‘ಕನ್ನಡ ಸಾಹಿತ್ಯ ಚರಿತ್ರೆ’ಯ ಪುಸ್ತಕಗಳು ನೆನಪಾಗುತ್ತಲೇ ಇರುತ್ತವೆ. ಮಕ್ಕಳಿಗಿಂತಲೂ ಮೊಮ್ಮಕ್ಕಳ ಬಗ್ಗೆ ಅಭಿಮಾನದಿಂದ ಮಾತಾಡುತ್ತಿದ್ದ ನಮ್ಮಪ್ಪ ನೋಡಿದ್ದು ಒಬ್ಬನೇ ಒಬ್ಬ ಮೊಮ್ಮಗನನನ್ನು. ನಮ್ಮಪ್ಪ ಈಗ ಇದ್ದಿದ್ದರೆ ಬರೋಬ್ಬರಿ 6 ಮೊಮ್ಮಕ್ಕಳಿಗೆ ಅಜ್ಜನಾಗಿರುತ್ತಿದ್ದರು.

ನನ್ನಪ್ಪ ನಮ್ಮ ಮುಂದೆ ವೃದ್ಧರಾಗಿ ಮೊಮ್ಮಕ್ಕಳಿಗೆ ಕಥೆ, ಹಾಡು ಹೇಳಬೇಕಾಗಿತ್ತು. ನನ್ನ ಜೀವನದ ಎಷ್ಟೆಲ್ಲಾ ನೋವು ನಲಿವುಗಳಿಗೆ ಅಪ್ಪನ ಹಾಜರಿ ಬೇಕಾಗಿತ್ತು. ನನ್ನಪ್ಪ ನನಗಿನ್ನೂ ತುಂಬಾ ತುಂಬಾ ಆಪ್ತವಾಗಬೇಕಾಗಿತ್ತು. ನನ್ನಿಂದ ಕನಿಷ್ಠ ಪಕ್ಷ ಅಡುಗೆಯನ್ನಾದರೂ ಮಾಡಿಸಿಕೊಂಡು ತಿನ್ನಬೇಕಿತ್ತು. ವೃದ್ಧಾಪ್ಯದ ಕಿರಿಕಿರಿಯನ್ನಾದರೂ ನಮಗೆ ಮಾಡಬೇಕಿತ್ತು.

ಆಗ ಸ್ವಲ್ಪನಿಧಾನ ಪ್ರವೃತ್ತಿಯವಳಾಗಿದ್ದ ನನ್ನನ್ನು ಯಾವಾಗಲೂ “ಸಾಯ್ತಾ ಇರೋರಿಗೆ ಬಾಯಿಗೆ ನೀರು ಬಿಡು ಮಗಾ ಅಂದ್ರೆ ಸತ್ತ ಮೇಲೆ ಬಾಯಿಗೆ ನೀರು ಬಿಡ್ತೀಯ ನೀನು“ ಅನ್ತಿದ್ದ  ನನ್ನಪ್ಪನ ಬಾಯಿಗೆ ಅವರ ಕಡೇ ಉಸಿರು ಗುಟುಕರಿಸಿದ ನೀರು ಬಿಟ್ಟದ್ದು ನಾನೇ ಆದದ್ದನ್ನು ನೆನೆದರೀಗ ಗಂಟಲುಬ್ಬುತ್ತದೆ…

ವಯೋನಿವೃತ್ತಿ ಹೊಂದಿ ತಮ್ಮ ಹುಟ್ಟೂರಿನಲ್ಲಿ ಉಳಿದ ಬದುಕು ಸವೆಸುವ ಬಗ್ಗೆ ಪುಟ್ಟ  ಕನಸು ಕಾಣುತ್ತಿದ್ದ ನನ್ನಪ್ಪನಿಗೆ ಕ್ರೂರವಿಧಿ ಸ್ವಲ್ಪವೂ ಉದಾರತೆಯನ್ನೇ ತೋರಲಿಲ್ಲ.

ಕೇವಲ 57 ವರ್ಷಗಳ ಅಕಾಲದಲ್ಲಿ ತೀರಿಹೋದ ನನ್ನಪ್ಪನನ್ನು ಈಗ ಎಲ್ಲಿಂದ ಹುಡುಕಿ ತರಲಿ…??

‍ಲೇಖಕರು avadhi

June 18, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: