ತುಂಬ ಇಷ್ಟವಾಯ್ತು ಈ ‘ಯೂ ಟರ್ನ್’

ಪ್ರೀತಿ ಸಂಗಮ್

**

ಲೇಖಕಿ ಮೇಘನಾ ಕಾನೇಟ್ಕರ ಅವರ ಹೊಸ ಕೃತಿ ಬಿಡುಗಡೆಯಾಗಿದೆ.

ಹರಿವು ಬುಕ್ಸ್ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

**

ಓದುಗರ ಭಾವಕೋಶ ಹಾಗೂ ಜೀವಕೋಶಗಳನ್ನು ಕ್ಷಣದಲ್ಲಿ ಆಕ್ರಮಿಸಿ ಬಿಡುವ ಲೇಖಕಿ ಮೇಘನಾ ಕಾನೇಟ್ಕರ ಅವರ ‘ಲೈಫ್ ನಲ್ಲೊಂದು ಯೂ ಟರ್ನ್’ ಎನ್ನುವ ಈ ಕಥಾಕೋಶದ ಬಗ್ಗೆ ನನ್ನ ಅನಿಸಿಕೆಗಳನ್ನು ಲೇಖಕಿಯ ಹಾಗೂ ಓದುಗರ ಮುಂದಿಡುವ ಪ್ರಾಮಾಣಿಕ ಪ್ರಯತ್ನ.. “Don’t judge the book by it’s cover” ಅಂತ ಹೇಳ್ತಾರೆ. ಆದ್ರೂ ಕೂಡ ‘ಲೈಫ್ ನಲ್ಲೊಂದು ಯೂ ಟರ್ನ್’ ಪುಸ್ತಕದ ಮುಖಪುಟ, ಅದರ ಆಕರ್ಷಕ ಶೀರ್ಷಿಕೆ , ಹಾಗೂ ಅದರಲ್ಲಿರುವ ಪ್ರತಿಯೊಂದು ಕಥೆಯ ಚಂದ ಚಂದದ ಶೀರ್ಷಿಕೆ ನೋಡಿಯೇ ನಾನು ಜಡ್ಜ್ ಮಾಡಿದ್ದು ಇದು ಓದಲೇಬೇಕಾದ ಪುಸ್ತಕ ಎಂದು. ಇದಷ್ಟೇ ಅಲ್ಲ, ಲೇಖಕಿ ಈ ಪುಸ್ತಕವನ್ನು ಅರ್ಪಿಸಿದ್ದು ‘ಆ ಅವನಿಗೆ’. ನನಗೆ ಇಲ್ಲಿ ಮುಖ್ಯವಾದದ್ದು ‘ಆ ಅವನು’ ಯಾರು ಅಂತ ತಿಳಿಯುವ ಕುತೂಹಲ ಅಲ್ಲ. ನನ್ನನ್ನು ಸೆಳೆದದ್ದು ಅವರು ಬರೆದ ಈ ಸಾಲು. “ಕಳೆದುಕೊಂಡಿದ್ದ ನನ್ನನ್ನು ಕಂಡುಕೊಳ್ಳುವಂತೆ ಮಾಡಿದ ‘ಆ ಅವನಿಗೆ’.

ಲೇಖಕಿ ಬಹುಶಃ ಈ ಕಥೆಗಳನ್ನು ಬರೆಯುತ್ತಾ ತಮ್ಮನ್ನು ತಾವು ಕಂಡುಕೊಂಡಂತೆ ಹಲವಾರು ಓದುಗರು ತಮ್ಮ ಲೈಫನಲ್ಲಿ ಯೂ ಟರ್ನ್ ತೆಗೆದುಕೊಂಡು ತಮ್ಮನ್ನು ತಾವು ಕಂಡುಕೊಳ್ಳಲು ಈ ಕಥೆಗಳು ಇಂಬು ಮಾಡಿಕೊಡುತ್ತವೆ ಎಂದು ನನ್ನ ಅನಿಸಿಕೆ. ನನಗೆ ಈ ಕಥೆಗಳಲ್ಲಿ ಇನ್ನೊಂದು ವಿಶೇಷ ಎನಿಸಿದ್ದೇನೆಂದರೆ ಲೇಖಕಿಯ ಮಲೆನಾಡು ಹಾಗೂ ಬಯಲುಸೀಮೆಯ ಭಾಷಾ ಪ್ರೌಢಿಮೆ. ಕೆಲವು ಕಥೆಗಳು ಮಲೆನಾಡಿನ ಭಾಷಾ ಸೊಗಡಿನಲ್ಲಿ ಅರಳಿ ಅಲ್ಲಿನ ಆಚಾರ ವಿಚಾರಗಳ ಮತ್ತು ಜೀವನ ಶೈಲಿಯ ಕಂಪನ್ನು ಸೂಸಿದರೆ ಇನ್ನು ಕೆಲವು ಕಥೆಗಳಲ್ಲಿ ನಮ್ಮ ಉತ್ತರ ಕರ್ನಾಟಕದ ಗಂಡು ಭಾಷೆ ಹಾಗೂ ಅಲ್ಲಿಯ ಸರಳತನ ಆಪ್ತವಾಗುತ್ತದೆ. ಎರಡೂ ಭಾಷೆಯಲ್ಲಿ ನೈಪುಣ್ಯತೆಯನ್ನು ಹೊಂದಿದ ಲೇಖಕಿ ಎರಡೂ ಪ್ರದೇಶಗಳ ಓದುಗರನ್ನು ವಿಶೇಷವಾಗಿ ಸೆಳೆಯುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪುಸ್ತಕದ ಹೆಸರೇ ಸೂಚಿಸುವಂತೆ ಇಲ್ಲಿರುವ ಎಲ್ಲ ಕಥೆಗಳಲ್ಲಿ ಕಥಾನಾಯಕ/ಕಥಾನಾಯಕಿ ತಮ್ಮ ಜೀವನದ ಯಾವುದೋ ಒಂದು ಕವಲು ದಾರಿಯಲ್ಲಿ ಬಂದು ದಿಕ್ಕು ತೋಚದೇ ನಿಂತಾಗ, ಹಿಂದೆ ಮಾಡಿದ ತಪ್ಪಿನ ಅರಿವಾಗಿ ಅಥವಾ “ನಿನ್ನ ನೀನು ಮರೆತರೇನು ಸುಖವಿದೆ” ಎಂದು ಜ್ಞಾನೋದಯವಾದಾಗ ತಮ್ಮ ಬದುಕಿನಲ್ಲಿ ‘ಯೂ ಟರ್ನ್’ ತೆಗೆದುಕೊಂಡವರು. “Take a U turn in life before ECG line refuses to take a turn in your life” ಎನ್ನುವ ಮಾತೊಂದಿದೆ. ಬದುಕಿನಲ್ಲಿ ತೆಗೆದುಕೊಳ್ಳುವ ಯೂ ಟರ್ನ್ ನಮ್ಮ ಆತ್ಮಾವಲೋಕನ ಮಾಡಿಕೊಳ್ಳಲು ತುಂಬಾ ಸಹಕಾರಿ. ಈ ದೇಹವೆಂಬ ಮನೆಯಿಂದ ಆತ್ಮ ಎದ್ದು ಹೊರಡುವ ಮೊದಲು ಒಮ್ಮೆಯಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲಿನ ಕಥಾನಾಯಕ/ನಾಯಕಿ ಜೀವನದ ದಾರಿಯಲ್ಲಿ ಯಾವುದೋ ಒಂದು ಘಟ್ಟದಲ್ಲಿ ಕಳೆದು ಹೋಗಿ ಏಕಾಂಗಿಯಾದಾಗ ಹತಾಶರಾಗಿ ಪ್ರಯಾಣವನ್ನು ಸ್ಥಗಿತಗೊಳಿಸದೇ ಯೂ ಟರ್ನ್ ತೆಗೆದುಕೊಂಡು ಅಲ್ಲಿಂದ ಮತ್ತೆ ಜೀವನ ಪಯಣವನ್ನು ಆರಂಭಿಸುವ ಬಗ್ಗೆ ಮಾತನಾಡಿವೆಯಾದರೂ ಎಲ್ಲ ಕಥೆಗಳಲ್ಲೂ ಆ ಯೂ ಟರ್ನ್ ಸುಖಾಂತ್ಯ ಕಂಡಿಲ್ಲ.

ಹಾಗೇನಾದರೂ ಆಗಿದ್ದರೆ ಓದುಗನ ಮನದಲ್ಲಿ ಅವು ಬರೀ ಕಥೆಗಳಾಗಿ ಉಳಿದು ಬಿಡುತ್ತಿದ್ದವೇನೋ. ಎಲ್ಲರ ಜೀವನಗಾಥೆ ಪುಸ್ತಕದ ಕಾಲ್ಪನಿಕ ಕಥೆಗಳಂತೆ ಹ್ಯಾಪಿ ಎಂಡಿಂಗ್ ಆಗಿರಲು ಸಾಧ್ಯವಿಲ್ಲ ಅಲ್ಲವೇ? ಏಕೆಂದರೆ ನಿಜ ಜೀವನ ಕಥೆಗಳಿಗಿಂತ ತುಂಬಾ ಭಿನ್ನವಾಗಿರುತ್ತದೆ. ಇದನ್ನೇ ಲೇಖಕಿ ತಮ್ಮ ಕಥೆಗಳಲ್ಲಿ ನೈಜವಾಗಿ ತೋರಿಸಿದ್ದಾರೆ. ಹಾಗಾಗಿ ಓದುಗ ಕಥೆಯನ್ನು ತನ್ನ ಬದುಕಿಗೆ ಸಮೀಕರಿಸಿ ನೋಡಲು ಸಾಧ್ಯವಾಗಿಸುವಲ್ಲಿ ಗೆದ್ದಿದ್ದಾರೆ ಎನ್ನಬಹುದು. ಕೆಲವೊಂದು ಮಾರ್ಮಿಕ ಕಥೆಗಳಿಗೆ ತಾರ್ಕಿಕ ಅಂತ್ಯವನ್ನು ಕೊಟ್ಟು ಓದುಗರ ಮಸ್ತಿಷ್ಕಕ್ಕೆ ಕೆಲಸ ಕೊಟ್ಟಿದ್ದಾರೆ ಲೇಖಕಿ. ಓದುಗರು ತಮ್ಮ ದೃಷ್ಟಿಕೋನಗಳ ಆಧಾರದ ಮೇಲೆ ಅಂತ್ಯವನ್ನು ಅರ್ಥೈಸಲು ಅನುವು ಮಾಡಿಕೊಡುವುದರಿಂದ ತಾರ್ಕಿಕ ಅಂತ್ಯವನ್ನು ಹೊಂದಿದ ಕಥೆಗಳು ಓದುಗನನ್ನು ಹೆಚ್ಚಿನ ಚಿಂತನೆ ಮತ್ತು ಚರ್ಚೆಗೆ ಪ್ರಚೋದಿಸುತ್ತವೆ.

ಕಥೆಯ ಅಂತ್ಯವು ಓದುಗನ ಬುದ್ಧಿಗೆ ಸಲೀಸಾಗಿ ನಿಲುಕದಿದ್ದಾಗ ಆ ಅಂತ್ಯ ಆ ಕ್ಷಣಕ್ಕೆ ನಿರಾಶಾದಾಯಕವೆನಿಸಿದರೂ, ಇವು ಕಾಡುವ ಕಥೆಗಳಾಗಿ ಓದುಗರನ್ನು ಎಷ್ಟೋ ದಿನಗಳ, ತಿಂಗಳುಗಳ ಅಥವಾ ವರ್ಷಗಳ ಕಾಲ ಕಾಡಿ ಕಥೆಯ ಅಂತ್ಯವನ್ನು ಅವರವರ ಕಲ್ಪನೆಗೆ ತಕ್ಕಂತೆ ಹೆಣೆಸುವ ಮೂಲಕ ಓದುಗನ ಮನದಲ್ಲಿ ತಮ್ಮ ಕಥೆಗಳನ್ನು ಅಚ್ಚೊತ್ತುವ ಹಾಗೆ ಮಾಡಿ ಕೂತರೂ, ನಿಂತರೂ ಅದರದ್ದೇ ಧ್ಯಾನ ಎನ್ನುವ ಹಾಗೆ ಮಾಡುವುದು ಕಥೆಗಾರರ ಉದ್ದೇಶಪೂರ್ವಕ ಆಯ್ಕೆಯಾಗಿರಬಹುದು ಎಂದು ನನ್ನ ಅನಿಸಿಕೆ. ಲೇಖಕಿ, ಕಥೆಗೆ ಈ ತರಹ ಅಂತ್ಯ ಕೊಟ್ಟಿರುವುದು ನನಗೆ ತುಂಬ ಇಷ್ಟವಾಯ್ತು.

ಒಟ್ಟಿನಲ್ಲಿ ಈ 15 ಕಥೆಗಳಲ್ಲಿ ಕಥಾನಾಯಕ/ನಾಯಕಿಗೆ ಯೂ ಟರ್ನ್ ಮಾಡಿಸಿ ಲೇಖಕಿಯು ವಿರಹದ ಮೋಡ ಕರಗಿಸಿ ಮಿಲನದ ಮಳೆ ಸುರಿಸಿದ್ದಾರೆ (ಕಥೆ: ಮತ್ತೆ ಮಳೆಯಾಗಿದೆ), ಮಾಗಿದ ಬದುಕಿಗೆ ಹೊಸ ದಾರಿ ಸೃಷ್ಟಿಸಿ ಕೈ ಕೈ ಹಿಡಿಸಿ ಅವರನ್ನು ಮುನ್ನಡೆಸಿದ್ದಾರೆ (ಕಥೆ: ತಿರುವು), ತಂತಿ ಹರಿದ ಸಂಸಾರದಲ್ಲಿ ಮತ್ತೆ ಸರಿಗಮದ ಸುಸ್ವರ ನುಡಿಸಿದ್ದಾರೆ(ಕಥೆ : ಸ್ವಾಭಿಮಾನ), ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನಿಸುವ ಹಾಗೆ ಸ್ಯಾಡ್ ಎಂಡಿಗ್ ಮಾಡಿದ್ದಾರೆ (ಕಥೆ: ವಿಲ್ ಯು ಮ್ಯಾರಿ ಮಿ), ಓದುಗ ಊಹಿಸಲಸಾಧ್ಯವಾದ ತರಹ ಕಥೆಯ ಕೊನೆಗೆ ಶಾಕ್ ಕೊಟ್ಟಿದ್ದಾರೆ (ಕಥೆಗಳು: ಚಾರಿತ್ರ್ಯ, ಕರಿಮಚ್ಚೆ), ಒಲ್ಲದ ಮನಸ್ಸಿನಿಂದ ತನ್ನ ಮುಂದಿನ ಜೀವನವನ್ನು ನಿರ್ಧರಿಸಲು ಹೊರಟ ನಾಯಕಿಗೆ ಮ್ಯಾಜಿಕ್ ರೀತಿಯಲ್ಲಿ ನಾಯಕನನ್ನು ಪರಿಚಯಿಸಿ ಅವಳ ಲೈಫ್ ಸೆಟ್ ಮಾಡಿಸಿದ್ದಾರೆ (ಕಥೆಗಳು: ಲೈಫ್ ನಲ್ಲೊಂದು ಯೂ ಟರ್ನ್, ಚಂದಿರ ಬರೆದ ಮುನ್ನುಡಿ), ನಾನು ಮೊದಲೇ ಹೇಳಿದ ಹಾಗೆ ಮಲೆನಾಡಿನ ಭಾಷೆಯಲ್ಲಿರುವ ಕಥೆಯಲ್ಲಿ ಅಲ್ಲಿನ ಭಾಷೆ ಲೇಖಕಿಯ ಲೇಖನಿಯಲ್ಲಿ ಚಂದವಾಗಿ ಮೂಡಿ ಬಂದಿದೆ.

ಉಗ್ರಾಣದಲ್ಲಿ ಹುದುಗಿ ಹೋದ ಅನೇಕ ಸತ್ಯಗಳನ್ನು ಓದುಗರಿಗೆ ಕೊಡುತ್ತಾ ಹೀಗೂ ಉಂಟಾ? ಎನ್ನುವ ತಾರ್ಕಿಕ ಕಥೆಗೆ ಮಾರ್ಮಿಕ ಅಂತ್ಯ ಕೊಟ್ಟಿದ್ದಾರೆ (ಕಥೆ: ಉಗ್ರಾಣ). ಅದರಂತೆಯೇ ನಮ್ಮ ಉತ್ತರ ಕರ್ನಾಟಕದ ಆಪ್ತ ಭಾಷೆಯಲ್ಲಿ ಕಟ್ಟಿಕೊಟ್ಟ ಕಥೆಗೆ ‘ಛೇ ಹೀಗಾಗಬಾರದಿತ್ತು..’ ಎನ್ನುವ ತರಹ ದುಃಖಾಂತ್ಯ ಕೊಟ್ಟು ಬದುಕಿನ ನೈಜತೆಯ ಟಚ್ ಕೊಟ್ಟು ಕಥೆಯನ್ನು ಬದುಕಿಗೆ ಸಮೀಕರಿಸಿದ್ದಾರೆ (ಕಥೆ: ಲೋಕದಾ ಸುಖವೆಲ್ಲ ನಿನಗಾಗಿ ಮುಡಿಪಿರಲಿ) ಬೈರಪ್ಪನವರ ‘ಮಂದ್ರ’ ತರಹದ ಒಂದು ಕಥೆಯಲ್ಲಿ ಎಲ್ಲ ರಾಗಗಳನ್ನು ಪರಿಚಯಿಸಿ, ನಾಯಕಿ, ನಾಯಕನಿಂದ ಇಂಪಾಗಿ ಕುಹೂ ಕುಹೂ ಹಾಡಿಸಿ, ಮಧ್ಯದಲ್ಲಿ ಅವರನ್ನು ಬೇರ್ಪಡಿಸಿ, ಅಂತ್ಯದಲ್ಲಿ ಮತ್ತೆ ಡುಯೆಟ್ ಹಾಡಿಸಿ The End (ಇದೇ ಕೊನೆಯ ಕಥೆ) ಮಾಡಿದ್ದಾರೆ (ಕಥೆ: ಮತ್ತೆ ಹಾಡಿತು ಕೋಗಿಲೆ) ಇದರಂತೆಯೇ ಇನ್ನೂ 4 ಕಥೆಗಳಿಂದ ಓದುಗನನ್ನು ತಮ್ಮ ಅದ್ಭುತ ಕಲ್ಪನೆಯಲ್ಲಿ ಬಂಧಿಸಿದ್ದಾರೆ ಎಂದರೆ ತಪ್ಪಾಗದು. ಒಟ್ಟಿನಲ್ಲಿ ಪ್ರತಿಯೊಂದು ಕಥೆಯಲ್ಲಿ ಕಥೆಗಾರ್ತಿಯ ನಿರೂಪಣಾ ವಿಲಾಸ ಲಾಸ್ಯವಾಡಿ ಓದುಗನ ಮನಸ್ಸನ್ನು ಸೂರೆಗೊಳಿಸುತ್ತವೆ ಎಂದು ಹೇಳಬಲ್ಲೆ. 

‍ಲೇಖಕರು Admin MM

March 5, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: