ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೀರ್ಥಯಾತ್ರೆ to ಬ್ಯೂಟಿಫುಲ್ ಟೂರ್..

ತೀರ್ಥಯಾತ್ರೆಯ ಘಮಲು

ಹಾಗೂ

ವಿದೇಶೀ ನೆಲದ ಹುಡುಕಾಟ

terracota cup

ಗೀರ್ವಾಣಿ 

travel4

ಭಾರತೀಯರಲ್ಲಿ ಪ್ರವಾಸದ ಕಲ್ಪನೆ ಬದಲಾಗಿ ಹೆಚ್ಚೆಂದರೆ ಮೂವತ್ತು ವರ್ಷಗಳಾಗಿರಬೇಕು.

ಅಲ್ಲಿಯವರೆಗೂ ಪ್ರವಾಸ ಎಂದರೆ ತೀರ್ಥಯಾತ್ರೆಯಾಗಿತ್ತು. ವಯಸ್ಸಿನ ತುದಿಗೆ ಕಾಶಿಗೋ, ಬದರಿ, ಕೇದಾರಕ್ಕೋ ಹೋಗಿ ಬಂದರೆ ಮುಗಿದು ಹೋಗಿತ್ತು. ಅದಕ್ಕು ಮೊದಲೂ ಪ್ರವಾಸವಿಲ್ಲ. ಕೊನೆಗೂ ಪ್ರವಾಸವಿಲ್ಲ. ಈಗಿದ್ದ ತಲೆಮಾರು ಅಳಿದು, ಅವರ ಅಸ್ಥಿ ಗಂಗೆಗೆ ಬಿಡಬೇಕು ಎಂದಾಗ ಮಾತ್ರ ಮತ್ತೊಮ್ಮೆ ಪ್ರವಾಸದ ಮಾತು ಬರುತ್ತಿತ್ತು. ಅದೂ ಕೂಡ ಪ್ರವಾಸವಲ್ಲ. ತೀರ್ಥಯಾತ್ರೆ.

ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಸತ್ತ ಮೇಲೆ ಅವರ ಅಸ್ಥಿ ತೆಗೆದುಕೊಂಡು ಗಯಾಕ್ಕೆ ಹೋಗಿ ಕ್ರಿಯೆ ಹಿಡಿದು ಬರುವುದು ತೀರ್ಥಯಾತ್ರೆಯ ಮೂಲ ಉದ್ದೇಶವಾಗಿರ್ತಿತ್ತು. ಇದಕ್ಕಾಗಿ ಜೀವಮಾನವಿಡೀ ಪ್ಲಾನ್ ಮಾಡುತ್ತಿದ್ದರು. ಕಾಶಿ ಇಲ್ಲದ ಯಾತ್ರೆ ತೀರ್ಥಯಾತ್ರೆಯೇ ಅಲ್ಲ. ಕೈ ಕಾಲು ಗಟ್ಟಿ ಇದ್ದವರು ಬದರಿ, ಕೇದಾರಕ್ಕೂ ಹೋಗಿ ಬರುತ್ತಿದ್ದರು. ಆದರೆ ಎಲ್ಲಿಗೆ ಹೋಗದಿದ್ದರೂ ಕಾಶಿ ಯಾತ್ರೆ ಮಾತ್ರ ತಪ್ಪಿಸುತ್ತಿರಲಿಲ್ಲ. ಮನೆಯ ಪಡಸಾಲೆಯಲ್ಲಿ ವಯಸ್ಸಾಗಿ ನೆಲ ಹಿಡಿದು ಮಲಗಿದ್ದ ಅಜ್ಜಿ ಅಜ್ಜಂದಿರಿದ್ದರೆ ಮುಂದೆ ಬರಲಿರುವ ಅವರ ಸಾವಿಗೂ, ತೀರ್ಥಯಾತ್ರೆಗೂ ಲಿಂಕ್ ಮಾಡಿಯೇ ಮಾತುಕತೆಗಳು ಸಾಗುತ್ತಿತ್ತು. ಹೇಗಿದ್ದರೂ ಅಜ್ಜನ ಅಸ್ಥಿ ಬಿಡಬೇಕಲ್ಲ ಎಂಬ ಮಾತು ಬದುಕಿದ್ದ ಅಜ್ಜನಿಗೂ ಅಸಹಜ ಎನಿಸದಷ್ಟು ಸಹಜವಾಗಿರುತ್ತಿತ್ತು.

travelಇವತ್ತಿಗೂ ಹಳೆಯ ಮನಸ್ಥಿತಿ ಇರುವ ಕುಟುಂಬದಲ್ಲಿ ಅಂಥದೇ ರೂಢಿಯಿದೆ. ಆದರೆ ಇತ್ತೀಚೆಗೆ, ಅದರಲ್ಲೂ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಪ್ರವಾಸದ ರೂಪವೇ ಬದಲಾಗಿಬಿಟ್ಟಿದೆ. ಪರಿಕಲ್ಪನೆಯೂ ಬದಲಾಗಿದೆ. ಇವತ್ತು ತೀರ್ಥಯಾತ್ರೆ ಎಂಬ ಶಬ್ದ ಮರೆತೇ ಹೋಗುವಷ್ಟು, ಜನ ಪ್ರವಾಸ ಹೋಗುತ್ತಿದ್ದಾರೆ. ಬಸ್ಸು, ಕಾರು, ಟ್ರೇನು, ವಿಮಾನಗಳನ್ನು ಹತ್ತಿ ಭೂಮಿಯಲ್ಲಿ ಹೋಗಿ ತಲುಪಲು ಸಾಧ್ಯವಿರುವಲ್ಲೆಲ್ಲ ಹೋಗುತ್ತಿದ್ದಾರೆ. ಹೀಗೆ ಪ್ರವಾಸ ಹೊರಡುವವರಿಗಾಗಿ ನೂರಾರು ಟೂರ್ ಪ್ಲಾನಿಂಗ್ ಕಂಪನಿಗಳೂ ತಲೆಎತ್ತಿವೆ. ರೂಮ್ ಬುಕಿಂಗ್, ಊಟ, ದರ್ಶನ, ಎಂಟ್ರಿ ಎಲ್ಲವನ್ನೂಅರೇಂಜ್ ಮಾಡಿಕೊಡುತ್ತವೆ. ಜನರೂ ನೆಮ್ಮದಿಯಿಂದ ಟೂರ್ ಮಾಡಿ ಬರುತ್ತಾರೆ.

ಟೂರ್ ಏಜೆನ್ಸಿಗಳನ್ನು ಅವಲಂಬಿಸದೆ ಟೂರ್ ಮಾಡುವವರೂ ಕಡಿಮೆಯೇನಿಲ್ಲ. ತಮ್ಮಷ್ಟಕ್ಕೆ ತಾವೇ ಆನ್ ಲೈನಿನಲ್ಲಿ ಎಲ್ಲ ಬುಕ್ ಮಾಡಿಕೊಂಡು ಬೇಕೆಂದಾಗ ಎದ್ದು ನಡೆಯುವವರೂ ಸಾಕಷ್ಟಿದ್ದಾರೆ. ದೇಶದೊಳಗೇ ಆದರೆ ಕಷ್ಟ ಎನಿಸಲಿಕ್ಕಿಲ್ಲ. ವಿದೇಶಗಳಲ್ಲಿ ಇಂಥ ಪ್ರವಾಸ ಮಾಡುವುದು ನಿಜಕ್ಕೂಚಾಲೆಂಜಿಗ್ ಆಗಿರತ್ತೆ. ಹುಟ್ಟಿದಂದಿನಿಂದ ನೋಡೇ ಇರದ ದೇಶವೊಂದರ ನೆಲಕ್ಕೆ ಹೋಗಿಳಿದಾಗ ಉಂಟಾಗುವ ಅನುಭೂತಿ ನಿಜಕ್ಕೂ ವಿವರಿಸಲಾಗದ್ದು.

ಅದೊಂದು ಹಿತವಾದ ಅನಿಶ್ಚಿತತೆ. ವಿದೇಶದ ಯಾವುದೋ ಬೀದಿಯಲ್ಲಿ ಆನ್ ಲೈನಿನಲ್ಲಿ ಬುಕ್ ಮಾಡಿದ ಹೋಟೆಲ್ ಇರುತ್ತೆ. ವಿದೇಶದ ಏರ್ ಪೋರ್ಟ್ ಗೆ ಹೋಗಿ ಇಳಿಯುತ್ತಿದ್ದಂತೆ ಮೊದಲು ಎದುರಾಗುವ ಪ್ರಶ್ನೆ ಹೋಟೆಲ್ ಇದ್ದ ಜಾಗಕ್ಕೆ ತಲುಪುವುದು ಹೇಗೆ? ಟ್ರೇನಲ್ಲಿ ಹೋಗುವುದಾ? ಟ್ಯಾಕ್ಸಿ ಮಾಡುವುದಾ? ಟ್ಯಾಕ್ಸಿ ಮಾಡಿದರೆ ಇಂಡಿಯನ್ ಮನಿಗೆ ಕನ್ವರ್ಟ್ ಮಾಡಿದಾಗ ಎಷ್ಟಾಗಬಹುದು? ಆ ಹೋಟೆಲ್ ನಿಜಕ್ಕೂಇದೆಯ? ಅಥವಾ ಆನ್ ಲೈನಿನಲ್ಲಿ ಫ್ರಾಡ್ ಆಗಿದ್ದರೆ? ಎಂದೆಲ್ಲ ವಿನಾ ಆತಂಕಗೊಳ್ಳುತ್ತ ಹೋಟೆಲ್ ಹುಡುಕಲು ಶುರು ಮಾಡಿದಾಗ ಕಣ್ಣೆದುರೇ ಇದ್ದರೂ ಅದು ಇನ್ನೆಲ್ಲೋ ಇದೆ ಎಂಬ ಭಾವ ಹುಟ್ಟಿಸುತ್ತಿರುತ್ತದೆ.

ಏರ್ ಪೋರ್ಟ್ ನಿಂದ ಹತ್ತಿರದ ಟ್ಯೂಬ್ ಟ್ರೇನೋ, ಇಲ್ಲ ನಮ್ಮ ಮೆಟ್ರೋ ಥರದ ಟ್ರೇನ್ ಹುಡುಕುವುದರೊಂದಿಗೆ ಫಾರಿನ್ ನೆಲದ ಹುಡುಕಾಟ ಆರಂಭವಾಗುತ್ತದೆ. ನಾವಿನ್ನೂ ಹತ್ತು ವರ್ಷಗೂಡಿ, ಟನ್ ಗಟ್ಟಲೇ ಧೂಳು ಕುಡಿದು, ರಸ್ತೆಯೆಲ್ಲ ಹೊಂಡ ಮಾಡಿಕೊಂಡುಒಂದು ಮೆಟ್ರೊ ಮಾಡಿಕೊಂಡಿದ್ದೇವೆ. ಅದಿನ್ನೂ ಎಲ್ಲ ಕಡೆ ಆಗದಿದ್ದರೂ ಅದಿದ್ದಲ್ಲೇ ಹೋಗಿ ಹತ್ತಿ ಸುಖ ಅನುಭವಿಸುತ್ತಿದ್ದೇವೆ. ಎಷ್ಟೆಂದರೂ ‘ನಮ್ಮ ಮೆಟ್ರೋ’ ತಾನೆ?

ಈ ಮೆಟ್ರೋ ಅಲ್ಲೆಲ್ಲೋ ಭೂಮಿಯಡಿ ಸುರಂಗದಲ್ಲಿ ಹೋಗುತ್ತದೆ ಎಂಬುದಕ್ಕೇ ಬೆರಗುಗೊಳ್ಳುತ್ತೇವೆ. ಇಂಥ, ಇದರಪ್ಪನಂಥ ಟ್ರೇನ್ ಗಳನ್ನು ವಿದೇಶಿಯರು ದಶಕಗಳ ಹಿಂದೆಯೇ ಮಾಡಿ ಮುಗಿಸಿದ್ದಾರೆ. ಅದು ನಗರವೆಲ್ಲ ಸುತ್ತಾಡಿ ವಿಮಾನ ನಿಲ್ದಾಣಕ್ಕೂ ನುಗ್ಗಿ ನಿಲ್ಲುತ್ತದೆ. ಅದೇ ನಮ್ಮ ಪಾಲಿನ ವಿದೇಶದ ಅಂಬಾರಿ.ಇಲ್ಲಿ ಸ್ವಲ್ಪತಲೆ ಓಡಿಸುವುದು ಅನಿವಾರ್ಯ. ತೀರಾ ಫಿಸಿಕ್ಸ್ ಸೂತ್ರ ಬರೆಯುವಷ್ಟು ಬುದ್ಧಿ ಅಗತ್ಯ ಇರದಿದ್ದರೂ ಸಣ್ಣ ಮಟ್ಟಿಗಿನ ಗಾಬರಿ ರಹಿತ ಮನಸಿನ ಅಗತ್ಯವಿದೆ. ಸ್ವಲ್ಪ ತಲೆ ಓಡಿಸಿದರೆ ಟಿಕೆಟ್ ವೆಂಡಿಂಗ್ ಮೆಷಿನ್ ಆಪರೇಟ್ ಮಾಡುವುದನ್ನೂ ಕಲಿಯಬಹುದು. ಇದೆಲ್ಲ ಯಾವ ಮಹಾ ಎಂಬ ಸಣ್ಣ ಮಟ್ಟಿಗಿನ ಅಹಂಕಾರ ಬಹುಶಃ ಇಲ್ಲಿ ಅನಿವಾರ್ಯ ಎನಿಸುತ್ತದೆ. ಸರಿಯಾದ ಸ್ಟೇಶನ್ನಿಗೆ ಹೋಗಿ ಇಳಿದಾಗ ಸಣ್ಣ ಹೆಮ್ಮೆಯೊಂದು ಬಂದು ಹೋಗುತ್ತದೆ. ಬಹುಶಃ ಪ್ಯಾಕೇಜ್ ಟೂರಿನಲ್ಲಿ ಇಂಥ ಹೆಮ್ಮೆಗೆ ಅವಕಾಶವಿಲ್ಲ.

ಸರಿ. ಟ್ರೇನ್ ಇಳಿದು ಬೀದಿಗೆ ಬಂದೆವಂದ್ರೆ ಎಲ್ಲ ಅಯೋಮಯ. ನಿನ್ನೆ ಅಲ್ಲ ಮೊನ್ನೆ ಈ ಬೀದಿ ಗೊತ್ತಿರಲಿಲ್ಲ. ಹೋಗಲಿ ಹತ್ತೇ ನಿಮಿಷದ ಹಿಂದೆ ಟ್ರೇನಿನಲ್ಲಿ ಬರುವಾಗ ಆ ದೇಶದ ಆ ಸ್ಟ್ರೀಟ್ ಕಲ್ಪನೆಯೂ ಇರಲಿಲ್ಲ. ಜಗತ್ತಿನ ಅದ್ಯಾವುದೋ ದೇಶಕ್ಕೆ ಅದೆಷ್ಟೋ ಹೊತ್ತು ವಿಮಾನದಲ್ಲಿ ಬಂದು, ಟ್ರೇನಿನಲ್ಲಿ ಪ್ರಯಾಣಿಸಿದರೆ ಇಂಥದೊಂದು ಬೀದಿ ಸಿಗುತ್ತದೆ ಎಂದೂ ತಿಳಿದಿರಲಿಲ್ಲ. ಆಗಲೂ ಇಲ್ಲಿ ಜನ ಓಡಾಡುತ್ತಿದ್ದರು. ರಸ್ತೆ ದಾಟುತ್ತಿದ್ದರು, ಯಾರೋ ಚಿಂತೆ ಹೊತ್ತವರಂತೆ ನಡೆಯುತ್ತಿದ್ದರು, ಇನ್ಯಾರೋ ನೌಕರಿ ಸಿಕ್ಕ ಖುಷಿಯಲ್ಲಿ ಬೀಗುತ್ತಿದ್ದರು. ಮತ್ಯಾರೋ ಲವ್ವರ್ ಸಿಕ್ಕಿದ್ದಕ್ಕೆ ಲೋಕವನ್ನೇ ಮರೆತಿದ್ದರು. ಅದ್ಯಾರೋ ವಯಸ್ಸಿನ ಭಾರಕ್ಕೆ ಬಾಗಿದ್ದರು. ಅಲ್ಲೆಲ್ಲೋ ಮಗು ಹುಟ್ಟಿದ್ದಕ್ಕೆ ಕುಷಿಯಾಗಿದ್ದರು. ಅಬ್ಬಾ ಬದುಕೆ !

travel3ಇನ್ನು ಆ ಸಿಟಿಯ ಪೂರ್ವ ಪಶ್ಚಿಮ ಯಾವುದು ಎಂದು ತಿಳಿಯಲು ಮೇಲೆ ಸೂರ್ಯನ ಹುಡುಕಿದ್ದಾಯಿತು. ಆದರೆ ತೀರಾ ಬೆಂಗಳೂರಿನಲ್ಲಿ ಅಡ್ರೆಸ್ ಹುಡುಕಿದಷ್ಟು ಕಷ್ಟವೇನಲ್ಲ. 46 ನೇ ಕ್ರಾಸ್ಆದ ಮೇಲೆ 47 ನೇ ಕ್ರಾಸ್ ಆದರ ಪಕ್ಕವೇ ಇರುತ್ತೆ. ಹಾಗೂ ಪ್ರತೀ ಬಸ್ ಸ್ಟಾಪುಗಳಲ್ಲಿ, ರೈಲ್ವೆ ಸ್ಟೇಶನ್ನುಗಳಲ್ಲಿ ಬಸ್ ನಂಬರ್, ಟ್ರೇನ್ ನಂಬರ್ ಹಾಗೂ ರೂಟ್ ಗಳು ಅತ್ಯಂತ ಸ್ಪಷ್ಟವಾಗಿ ನಮೂದಿಸಿರುತ್ತವೆ. ಹೀಗಾಗಿ ಅಡ್ರೆಸ್ ತಪ್ಪಿ ಎಲ್ಲೋ ಹೋಗಿ ಬಿಟ್ಟೆ ಎಂಬ ಸಾಧ್ಯತೆ ತೀರಾ ಕಡಿಮೆ.

ಅಂತೂ ರೂಮ್ ಹುಡುಕಿ ಪ್ರೆಶ್ ಆದರೆ ನಂತರ ಶುರುವಾಗುವುದು ಹೊಟ್ಟೆಚಿಂತೆ. ಅನ್ನ ಬ್ರಹ್ಮನ ನೆನೆಯುತ್ತ ಬೀದಿಗಿಳಿದರೆ ಮನಸ್ಸು ಇಂಡಿಯನ್ ರೆಸ್ಟೋರೆಂಟ್ ಹುಡುಕಲು ಶುರು ಮಾಡುತ್ತದೆ. ಆ ದೇಶಕ್ಕೆ ಹೋದಾಗ ಆ ದೇಶದ ಫುಡ್ಎಂಜಾಯ್ ಮಾಡ್ಬೇಕು ಎನ್ನುವವರಿದ್ದಾರೆ. ಆದರೆತೀರಾ ಪ್ರಾಗ್ ಲೆಗ್ ಪ್ರೈ, ಬೇಬಿ ಮೌಸ್ಕರಿ, ಡಕ್ರೈಸ್ ಮಿಕ್ಸ್ ಎಲ್ಲ ಇದ್ದರೆ ಏನ್ತಿನ್ನೋಣ ಸ್ವಾಮಿ? ಹೋಟೆಲ್ ನಲ್ಲಿ ಮೆನು ನೋಡಿದಾಗ ಊರಿನ ಮಳೆಗಾಲದಲ್ಲಿ ತೋಟದ ಬಾವಿ ಕಲ್ಲಿಗೆ ಕೂತು ವಟರ್ಗುಟ್ಟುವ ಕಪ್ಪೆ ವಿನಾ ಕಾರಣ ನೆನಪಾಗಿಬಿಡುತ್ತದೆ. ಹಾಗೆಯೇ ಬೆಂಗಳೂರಿನ ಫುಟ್ಪಾತ್ ಗಳಲ್ಲಿ ನಡೆಯುತ್ತಿದ್ದಾಗ ಕಾಲ ನಡುವೆಯೇ ನುಸುಳಿ ಹೋಗುವ ಇಲಿ ಮರಿಗಳೂ ನೆನಪಾಗುತ್ತವೆ. ಅವಕ್ಕೆಲ್ಲ ಶ್ರದ್ಧಾಂಜಲಿ ಸಲ್ಲಿಸುತ್ತ ಮೆಕ್ಡೊನಾಲ್ಡ್ ಇಲ್ಲವೇ ಕೆ ಎಫ್ ಸಿಗೆ ದಾಳಿಯಿಡುವುದು ಅನಿವಾರ್ಯ.

ಪರದೇಶದಲ್ಲೂ ಸ್ವದೇಶದ ಸಾಂಬಾರಿನ ಘಮಲು ಆಸ್ವಾದಿಸಲು ಪ್ಯಾಕೇಜ್ ಟೂರಿನಲ್ಲಿ ಸಾಧ್ಯವಾಗುತ್ತದೆ. ಟೂರ್ ಅರೇಂಜ್ ಮಾಡಿದವರು ರುಚಿ ಶುಚಿಯಾದ ಇಂಡಿಯನ್ ಫುಡ್ ಮಾಡಿ ಬಡಿಸುತ್ತಾರೆ. ನೆಲ ಯಾವುದಾದರೂ ಆಗಲಿ. ಆಹಾರ ನಮ್ಮದಿರಲಿ ಎನ್ನುವವರಿಗೆ ಇದು ನೆಮ್ಮದಿ ಕೊಡುತ್ತೆ. ಆದರೆ ಫುಡ್ ಹುಡುಕುವ ನೆಪದಲ್ಲಿ ಆ ಸಿಟಿಯನ್ನು ಎಕ್ಷಪ್ಲೋರ್ ಮಾಡುವ ಅವಕಾಶ ತಪ್ಪಿ ಹೋಗುತ್ತದೆ. ನಮಗೆ ಬೇಕಾದ ಫುಡ್ ಆರಸುತ್ತ ಅಲ್ಲಿನ ಬೀದಿಗಳನ್ನು ಸುತ್ತುವಾಗ ಕಣ್ಣಿಗೆ ಬೀಳುವ ಬೇರೆ ಸಾಧ್ಯತೆಗಳು ತಪ್ಪಿ ಹೋಗುತ್ತೆ.

ಆ ಊರ ತರಕಾರಿ, ಆ ಊರ ಹಣ್ಣುಗಳು, ಅಲ್ಲಿನ ಯಾವುದೋ ಫಂಕ್ಷನ್, ಅಲ್ಲಿನ ಬುಕ್ ಶಾಪ್, ಅಲ್ಲಿನ ಪುಸ್ತಕಗಳು, ಪುಸ್ತಕದ ಮುಖಪುಟಗಳು, ಆ ಊರಿನ ಜನರ ಒರಟುತನ, ಸಾಚಾತನ, ಅಲ್ಲಿನ ಜನರ ಮನೆಗಳು, ಅವರು ಬಟ್ಟೆ ಒಣಗಿಸುವ ರೀತಿ, ಅವರದೊಂದು ಮುಗುಳ್ನಗು ಇವೆಲ್ಲ ಒಂದು ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಬಹು ಮುಖ್ಯ ಸಂಗತಿ. ಬುಕ್ ಷಾಪಿಗೆ ಹೋದರೆ ಪುಸ್ತಕ ತೆಗೆದು ನೋಡಿ ಅಲ್ಲೇ ಬಿಸಾಕಿ ಬರುವುದು ನಮ್ಮ ಸಂಸ್ಕೃತಿ. ತೆಗೆದ ಪುಸ್ತಕವನ್ನು wrack ನಲ್ಲಿ ಇದ್ದಂತೆಯೇ ಇಡದೇ ಹೋದರೆ ಶಾಪ್ ಓನರ್ ನ ಕೆಂಗಣ್ಣಿಗೆ ಗುರಿಯಾಗುವುದು ಗ್ಯಾರಂಟಿ! ನಿಜಕ್ಕೂ ಪ್ಯಾಕೇಜ್ ಟೂರಿನಲ್ಲಿ ಈ ಎಲ್ಲ ಸಾಧ್ಯತೆಗಳಿಲ್ಲ. ಏರ್ ಕಂಡೀಶನ್ ಬಸ್ಸಿನಾಚೆ ಕಂಡಿದ್ದೇ ವಿದೇಶ ಎಂಬ ಭಾವನೆ ಮೂಡಿಬಿಡುತ್ತದೆ.

ಯುರೋಪ್ ನ ಪಬ್ಲಿಕ್ ಟ್ರಾನ್ಸ್ ಪೋರ್ಟ್ ಗಳಲ್ಲಿ ಸಂಚರಿಸುತ್ತಿದ್ದಾಗ ಆ ದೇಶದ ಜನರ ಮೌನ ಅರ್ಥವಾಗುತ್ತದೆ. ಅವರು ಹೋಗುತ್ತಿದ್ದಾಗ ಹೋಗುತ್ತಿರುತ್ತಾರೆ. ಕೂತಿದ್ದಾಗ ಸುಮ್ಮನೆ ಕೂತಿರುತ್ತಾರೆ. ಅಲ್ಲೊಂದು ದಿವ್ಯವಾದ ಶಾಂತತೆ ಕಾಣುತ್ತದೆ. ಹೆಚ್ಚೆಂದರೆ ಓದುತ್ತಿರುತ್ತಾರೆ. ಇಲ್ಲವೇ ಯಾವುದೋ ಗಮ್ಯದತ್ತ ದೃಷ್ಟಿ ನೆಟ್ಟಂತೆ ನೇರ ನೋಡುತ್ತ ಕುಳಿತು ಬಿಡುತ್ತಾರೆ. ಅದೇ ಏಷ್ಯನ್ ಕಂಟ್ರಿಗಳಲ್ಲಿ ಓಡಾಡಿದರೆ ಅದೇನೋ ಚಡಪಡಿಕೆ ಕಾಣಬಹುದು.

travel2ಜನರು ಟ್ರೇನು, ಟ್ರಾಮುಗಳಲ್ಲಿ ಸುಮ್ಮನೆ ಕೂರುವುದಿಲ್ಲ. ಎಲ್ಲರೂ ಮೊಬೈಲುಗಳಲ್ಲಿ ತಲೆ ತೂರಿಸಿರುತ್ತಾರೆ. ಯಾರೂ ಯಾರ ಮುಖವನ್ನೂ ನೋಡುವುದಿಲ್ಲ. ಎಲ್ಲರೂ ಸಮೂಹ ಸನ್ನಿಗೊಳಗಾದಂತೆ ಮೊಬೈಲ್ ನಲ್ಲಿ ಮುಳುಗಿರುತ್ತಾರೆ. ಸಿಂಗಾಪುರ್, ಹಾಂಕ್ ಕಾಂಗ್ ನಲ್ಲಿ ಈ ದೃಶ್ಯಗಳು ಸರ್ವೇ ಸಾಮಾನ್ಯ. ತೀರಾ ನಮ್ಮವರಂತೆ ಮೊಬೈಲಿನಲ್ಲಿ ಮಾತಾಡುತ್ತಲೇ ಬಸ್ ಹತ್ತುವುದಿಲ್ಲ. ಅಥವಾ ಜಗತ್ತಿಗೆಲ್ಲ ಕೇಳುವಂತೆ ಮಾತಾಡುತ್ತ ಇರುವುದಿಲ್ಲ. ಬಹುಶಃ ‘ಹಿಂಗೇ ಮಾಡದೆ, ಆರಾಮಾ? ‘ ಎಂದೂ ಹೇಳಲಿಕ್ಕಿಲ್ಲ. ಆದರೆ ಮೊಬೈಲು ಅವರ ಬದುಕನ್ನು ಬೇರೆ ರೀತಿಯಲ್ಲಿ ಆವರಿಸಿರುವುದಂತೂ ನಿಜ.

ಲಂಡನ್ ಹಾಗೂ ಪ್ಯಾರಿಸ್ ನ ವಸತಿ ಪ್ರದೇಶಗಳಲ್ಲಿ ಅದೇನೋ ಖಾಲಿತನವಿದೆ. ಮನೆ ಮುಂದೆಲ್ಲ ಗುಲಾಬಿ ಅರಳಿರುತ್ತದೆ. ಪರಿಮಳವೇ ಇಲ್ಲ. ಅದ್ಯಾವುದೋ ಹೆಸರು ಗೊತ್ತಿರದ ಬಳ್ಳಿಯಲ್ಲಿ ಹೂವು ತೂಗುತ್ತಿರುತ್ತದೆ ಮಲ್ಲಿಗೆಯಲ್ಲ. ಅಲ್ಯಾರೋ ಕೆಲಸ ಮುಗಿಸಿ ಸಂಜೆ ಮನೆಗೆ ಬರುತ್ತಾರೆ. ಬಾಗಿಲು ತೆಗೆಯುವವರಿಲ್ಲ. ಕೀ ತೆಗೆದು ಬಂದರೆ ಮನೆ ಒಳಗಿಂದ ಸ್ವಾಗತ ಮಾಡುವುದು ಮನೆಯ ನಾಯಿ. ಆಹ್ ! ಇಲ್ಲೊಂದು ಜೀವ ಸಂಚಾರವಿದೆಯಲ್ಲ ಎಂದುಕೊಂಡರೆ ಆ ಮನೆಯ ಬಾಗಿಲೂ ಹಾಕಿಕೊಂಡು ಬಿಡುತ್ತದೆ. ಮತ್ತದೇ ಮೌನ, ಮತ್ತದೇ ಏಕಾಂತ! ಸಾಲಾಗಿ ಕಾರುಗಳು ನಿಂತಿರುತ್ತವೆ. ಯಾರೊಬ್ಬರ ಸುಳಿವಿಲ್ಲ. ಇದೇನು ಜನರು ಸಾಮಾನು ಸರಂಜಾಮನ್ನೆಲ್ಲ ಬಿಟ್ಟು ಊರು ಬಿಟ್ಟು ನಡೆದರಾ ಎಂಬ ಭಾವನೆ ಬರುತ್ತದೆ.

ಅದೇ ಸಿಂಗಾಪುರ, ಹಾಂಕಾಂಗ್ ಗೆ ಬಂದರೆ ಮನೆಗಳೆಲ್ಲ ದೂರ ಇರಲು ಭಯ ಎಂಬಂತೆ ಒಂದರ ತಲೆಯ ಮೇಲೆ ಇನ್ನೊಂದು ಕೂತಿರುತ್ತವೆ. 50, 70 ಅಂತಸ್ತಿನೆತ್ತರಕ್ಕೂ ಜನ ಬದುಕುತ್ತಿರುತ್ತಾರೆ. ಪ್ರತಿ ಮನೆಗೂ ಫಿಟ್ ಮಾಡಿದ ಏರ್ ಕಂಡೀಶನ್ ಡಬ್ಬ, ಬಾಲ್ಕನಿಯಲ್ಲಿ ಜೋತಾಡುತ್ತಿರುವ ಬಟ್ಟೆಗಳು, ಬಣ್ಣ ಮಾಸಿದ ಗೋಡೆಗಳು ಏಷ್ಯಾದ ಲಕ್ಷಣಗಳನ್ನು ಅಣಕಿಸುವಂತಿರುತ್ತದೆ.

ನಮ್ಮ ಬೆಂಗಳೂರಿನಂತೆ 80 ಬೈ 100 ನ ಇಂಡಿಪೆಂಡೆಂಟ್ ಸೈಟ್ ಹಾಗೂ ಅದರಲ್ಲೊಂದು ಭವ್ಯವಾದ ಮನೆಯಂತೂ ಎಲ್ಲೂ ಕಣ್ಣಿಗೆ ಬಿದ್ದಿಲ್ಲ. ಮನೆ ಹೇಗೇ ಇದ್ದರೂ ಬೆಂಕಿ ಪೊಟ್ಟಣ ಪೇರಿಸಿಟ್ಟಂತೆಯೇ ಇರುತ್ತದೆ. ಮಧ್ಯರಾತ್ರಿ ಕಳೆದ ಮೇಲೂ ಗಜಿಬಿಜಿ. ಯಾವುದೋ ಕಾರು ಗರ್ಜಿಸುತ್ತ ಬಂದು ನಿಲ್ಲುತ್ತದೆ. ಇನ್ಯಾರೋ ಹತ್ತಿ ಹೋಗುತ್ತಾರೆ. ಮತ್ಯಾರೋ ಬಂದು ಇಳಿಯುತ್ತಾರೆ. ಒಟ್ಟಿನಲ್ಲಿ ಬದುಕು ಪ್ರಶಾಂತವಾಗಿಲ್ಲ ಎಂಬ ಭಾವ ಮೂಡುತ್ತದೆ.

ಈ ಎಲ್ಲ ವ್ಯತ್ಯಾಸಗಳನ್ನು ಗಮನಿಸಲು ಸಾಧ್ಯವಾಗುವುದು ಹೀಗೆ ನಾವೇ ಸ್ವತಃ ಹೋಗಿ ಹುಡುಕಾಡಿದಾಗ. ನಾರ್ವೆಗೆ ಹೋದರೆ ಟ್ಯೂಲಿಪ್ ಗಾರ್ಡನ್ ಮನಸೆಳೆಯುತ್ತದೆ. ವೆನಿಸ್ ಗೆ ಬಂದರೆ ತೇಲುವ ನಗರವೇ ಅದ್ಭುತ ಎನಿಸುತ್ತದೆ. ಪ್ಲೋರೆನ್ಸಿನ ಬೀದಿ ಬೀದಿಗಳಲ್ಲಿ ಕಲೆ ಮೇಳೈಸಿದೆ. ಪ್ಯಾರಿಸ್ಸಿನ ಗಲ್ಲಿಗಳಲ್ಲಿ ಸುಗಂಧದ ಪರಿಮಳವಿದೆ, ಜರ್ಮನಿಯಲ್ಲಿ ಹಿಟ್ಲರನ ಇತಿಹಾಸವಿದೆ. ಇವೆಲ್ಲ ಹೇಗೇ ಹೋದರೂ ಸಿಗುವ ನೋಟಗಳು. ಆದರೆ ಇದರಾಚೆಯೂ ಒಂದು ಗಮನಿಸುವಿಕೆ ಬೇಕು ಎನ್ನುವವರಿಗೆ ಪ್ಯಾಕೇಜ್ ಟೂರ್ ಗಿಂತ ಸ್ವತಃ ಹುಡುಕಾಡುತ್ತ ಹೋಗುವುದು ಅನಿವಾರ್ಯ.

travel5ಆಗ ಅದರ ಜೊತೆಗೆ ವಿದೇಶದಲ್ಲಿ ದಾರಿ ತಪ್ಪುವ ಕಷ್ಟ ಹಾಗೂ ಸರಿದಾರಿ ಹುಡುಕುವ ಸವಾಲುಗಳು ಜೊತೆಜೊತೆಗೇ ಬರುತ್ತವೆ. ಎಷ್ಟೋ ದೇಶಗಳಲ್ಲಿ ಇಂಗ್ಲೀಷ್ ಅಷ್ಟಾಗಿ ನಡೆಯುವುದಿಲ್ಲ. ಅಥವಾ ನಮಗೆ ಎದುರಾದವರಿಗೆ ಇಂಗ್ಲೀಷ್ ಬಾರದೇ ಹೋಗಬಹುದು. ಅಲ್ಲಿನ ಊರಿನ ಹೆಸರನ್ನುಅಥವಾ ಸ್ಟೇಶನ್ನಿನ ಹೆಸರನ್ನು ನಾವು ಇಂಗ್ಲೀಷಿನಲ್ಲಿ ಓದಿದರೂ ತಪ್ಪಾಗಿ ಹೇಳುತ್ತಿರುತ್ತೇವೆ. ಇದರಿಂದಾಗಿ ಇನ್ನಷ್ಟು ಅವಾಂತರ. ಇಂಗ್ಲೀಷ್ ಬಾರದವರ ಹತ್ತಿರ ಕಮ್ಯನಿಕೇಟ್ ಮಾಡುವಾಗ ಕೈ, ಕಾಲು, ಕಣ್ಣು ಎಲ್ಲ ಬಳಸಿ ನಮಗೆ ಬೇಕಾಗಿದ್ದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇದೆಲ್ಲ ಆ ಕ್ಷಣಕ್ಕೆ ಕಷ್ಟವಾಗಿ ಕಂಡರೂ ಬಾಯಿ ಇದ್ದರಷ್ಟೇ ತಾಯಲ್ಲ. ಕೈ ಕಾಲಿದ್ದರೂ ತಾಯಿ ಎಂದು ಗಾದೆಯನ್ನೇ ತಿದ್ದುವಷ್ಟು ಆತ್ಮವಿಶ್ವಾಸ ಬಂದು ಬಿಡುತ್ತದೆ.

ಈಗ ಕೊನೆಯದಾಗಿ ಒಂದು ಪ್ರಶ್ನೆ. ವಿದೇಶದಲ್ಲಿ ಹುಡುಕಾಡಿ ಪ್ರವಾಸ ಮಾಡಿ ಬಂದರೆ ಆ ಅನುಭವ ನಮ್ಮ ದೇಶದಲ್ಲಿ ಪ್ರಯೋಜನಕ್ಕೆ ಬಂದೀತೆ? ಅಲ್ಲಿನ ಆತ್ಮ ವಿಶ್ವಾಸ ಇಲ್ಲಿ ಕೆಲಸ ಮಾಡೀತೇ? ಖಂಡಿತಾ ಇಲ್ಲ. ನಮ್ಮ ದೇಶದಲ್ಲಿ ಖಾಸಗಿಯಾಗಿ ಟೂರ್ ಮಾಡುವಾಗ ಬೇರೆಯದೇ ಆದ ಚಾಲಾಕಿತನ ಬೇಕಿರುತ್ತದೆ. ವಿಶೇಷವಾದ ಎಚ್ಚರಿಕೆ, ಮುಂಜಾಗ್ರತೆ ಹಾಗೂ ಒಂದಿಷ್ಟು ಕಾಂಟಾಕ್ಟ್ ನಂಬರ್ ಗಳನ್ನು ಜೊತೆಯಲ್ಲಿ ಇರಿಸಿಕೊಂಡೇ ಪ್ರವಾಸ ಹೊರಡಬೇಕು. ಏಕೆಂದರೆ ಇದು ನಮ್ಮದೇಶ !

‍ಲೇಖಕರು Admin

24 June, 2016

3 Comments

  1. Vihi wadawadagi

    Duddu iddoru en bidi madam hegadru tour madtare duddin mukha ivattigu nodade iro jana tumba idare yak Andre idu namma desha allave

  2. Anonymous

    very nicely written-rajeev

  3. Sudha ChidanandGowd

    intresting story

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading