ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿಯತನಕ ನಡಿಗೆ 63 ಮೈಲುಗಳು..

ಕಾಣದ ಕಡಲಿಗೆ ಹಂಬಲಿಸಿದೆ ಮನ…

ಹೆಜ್ಜೆ 11

ಮಹಾರಾಜರ ಸರ್ವಾಧಿಕಾರೀ ಧೋರಣೆ

ಶಾಲೆಯ ಮಕ್ಕಳು ಬೆಳಗಿನ ಜಾವವೇ ಎದ್ದು ಗಲಾಟೆ ಮಾಡುತ್ತಿದ್ದರಿಂದ ನನಗೂ ಎಚ್ಚರವಾಯಿತು. ಎದ್ದು ಹೊರಬಂದು ಅಲ್ಲಿ ಇಲ್ಲಿ ಓಡಾಡಿ ಗಲಾಟೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಶಾಲಾ ಆವರಣದಲ್ಲಿ ಒಂದಷ್ಟು ಸ್ವಚ್ಛತಾ ಕಾರ್ಯಗಳನ್ನು ಮಾಡಿ ಮುಗಿಸಿದೆವು. ಮಕ್ಕಳಿಗೆ ಮನೆ ಪಾಠದೊಂದಿಗೆ, ಮಕ್ಕಳನ್ನು ನವೋದಯ ಶಾಲೆಯ ಪರೀಕ್ಷೆಗೆ ತಯಾರಿ ಮಾಡಲು ಬಂದಿದ್ದ ಈ ಭಾಗದ ಬಹುಮುಖ ಪ್ರತಿಭೆ ಮತ್ತು ಶಿಕ್ಷಕರಾದ ಬಸವರಾಜರವರು ಅವರ ಪ್ರವಾಸದ ಘಟನೆಗಳನ್ನು ಹೇಳಿ ನಮ್ಮನ್ನೆಲ್ಲಾ ಒಂದು ಅರ್ಧ ಗಂಟೆಗಳ ಕಾಲ ನಕ್ಕು ನಲಿಸಿದರು.
ನಂತರ ಸ್ನಾನ ಮಾಡಿ ಬರುವಷ್ಟರಲ್ಲಿ ತುಂತುರು ಮಳೆ ಶುರುವಾಗಿತ್ತು. ಬೆಳಗಿನ ಉಪಹಾರ ಮಾಡಿ, ಪ್ರಾರ್ಥನೆಯಾದ ನಂತರ, ನನ್ನ ಉಪನ್ಯಾಸವನ್ನು ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಕೊಟ್ಟು ಮುಗಿಸಿದೆ. ಖಾಸಗಿ ಶಾಲೆಯಾದರೂ, ಕಟ್ಟಡಗಳ ಕಾಮಗಾರಿಗಳು ನಡೆಯುತ್ತಿದ್ದರಿಂದಲೋ ಅಥವಾ ಪರಿಸರ ಮತ್ತು ಸ್ವಚ್ಛತೆಯ ಬಗ್ಗೆ ಮಕ್ಕಳು ಹಾಗೂ ಶಿಕ್ಷಕರಲ್ಲಿ ಶಿಸ್ತಿನ ಕೊರತೆಯೋ ಅಥವಾ ಶಾಲೆಯ ಆಡಳಿತ ಮಂಡಳಿಗೆ ಇದರ ಬಗ್ಗೆ ಕಾಳಜಿ ಮತ್ತು avadhi- column- rahul- low res- editedಬದ್ಧತೆಯ ಕೊರತೆಯೋ ತಿಳಿಯಲಿಲ್ಲ. ಶಾಲೆಯ ಆವರಣದಲ್ಲೆಲ್ಲಾ ಗಿಡಗಂಟೆಗಳು ಬೆಳೆದಿದ್ದವು. ಶಾಲೆಯ ಸುತ್ತ ಪ್ಲಾಸ್ಟಿಕ್ ಮತ್ತು ಪೇಪರ್ ತ್ಯಾಜ್ಯದಿಂದ ಕಂಗೊಳಿಸುತ್ತಿತ್ತು. ಶೌಚಾಲಯಗಳು ಗಬ್ಬುನಾರುತ್ತಿದ್ದವು. ಆದರೂ ಈ ಸಂಸ್ಥೆಯ ಹಿನ್ನಲೆ ಮತ್ತು ಪಾಟೀಲರ ಕುಟುಂಬ ವರ್ಗದವರ ಪರಿಶ್ರಮ ನೋಡಿದರೆ ಈ ಶಾಲೆಗೆ ಮುಂದೆ ಇವೆಲ್ಲವನ್ನೂ ಮೀರಿದ ಒಂದು ಒಳ್ಳೆಯ ಭವಿಷ್ಯವಿದೆ ಎಂದು ಅನಿಸಿತು.

ಉಪನ್ಯಾಸದ ನಂತರ ನಾನು ಸಂಸ್ಥೆಯ ನಿರ್ದೇಶಕರನ್ನು ಭೇಟಿ ಮಾಡಿ ಮಾತನಾಡಿದೆ. ಅವರಿಗೆ ನನ್ನ ಈ ಕಾರ್ಯದ ಯಶಸ್ಸಿನ ಬಗ್ಗೆ ಕೆಲವು ಅನುಮಾನಗಳಿದ್ದಂತೆ ವರ್ತಿಸಿದರು. ಈ ದೀರ್ಘ ಪ್ರಯಾಣದಲ್ಲಿ ಎಲ್ಲಾ ತರಹದ ಧೋರಣೆಗಳನ್ನು ಸಹಿಸಿಕೊಳ್ಳಬೇಕಾಗುತ್ತದೆಂದು ನಿರ್ಧರಿಸಿ ಮನಸ್ಸನ್ನು ಗಟ್ಟಿಗೊಳಿಸಿದೆ. ಶಾಲೆಯಿಂದ ಅಭಿನಂದನಾ ಪತ್ರವನ್ನು ಪಡೆದು ಮುಂದಿನ ಸರ್ಕಾರಿ ಶಾಲೆಯ ಕಡೆಗೆ ಹೊರಟೆ. ಮಕ್ಕಳು ಹಜಾರದಲ್ಲಿ ನಿಂತುಕೊಂಡು ನಾನು ಅರ್ಧ ಮೈಲು ದಾಟುವ ತನಕವೂ ನನ್ನನ್ನು ಕೂಗಿ ಕೈಬೀಸುತ್ತಿದ್ದರು. ಹೊಲಗಳನ್ನು ದಾಟಿ ಸರ್ಕಾರಿ ಶಾಲೆಯ ಆವರಣವನ್ನು ತಲುಪಿದೆ.

ಸರ್ಕಾರಿ ಶಾಲೆಯ ಶಿಕ್ಷಕರು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡು, ಉಪಚರಿಸಿದರು. ನಿನ್ನೆಯ ವಾಸ್ತವ್ಯ ಮತ್ತು ಊಟದ ಬಗ್ಗೆ ವಿಚಾರಿಸಿದರು. ಶಾಲೆಯ ಮಕ್ಕಳ ಸಂಖ್ಯೆ ಜಾಸ್ತಿ ಇದ್ದರಿಂದ, ಬರೀ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಉಪನ್ಯಾಸ ಕೊಡುವಂತೆ ವಿನಂತಿಸಿಕೊಂಡರು. ನಾನು ಸರಿಯೆಂದು ಒಪ್ಪಿದೆ. ಹತ್ತನೇ ತರಗತಿಯ ಸುಮಾರು ನೂರು ವಿದ್ಯಾರ್ಥಿಗಳನ್ನು ದೊಡ್ಡದಾದ ಕೊಠಡಿಯಲ್ಲಿ ಕೂರಿಸಿ, ಅಲ್ಲಿಗೆ ಶಾಲೆಯ ಇಕೋ ಕ್ಲಬ್‍ನ ನಿಶಾನೆಯನ್ನು ಗೋಡೆಯ ಮೇಲೆ ನೇತು ಹಾಕಿದರು. ನನ್ನ ಪರಿಚಯಿಸಿದ ಮುಖ್ಯೋಪಾಧ್ಯಾಯರು ಪರಿಸರದ ಬಗ್ಗೆ ಒಂದೆರಡು ಮಾತುಗಳನ್ನಾಡಿ, ನನ್ನ ಉಪನ್ಯಾಸಕ್ಕೆ ಅನುವು ಮಾಡಿಕೊಟ್ಟರು.

ಉಪನ್ಯಾಸ ಎಂದಿನಂತೆ ಚೆನ್ನಾಗೇ ನಡಿಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರತಿಜ್ಞೆ ಸ್ವೀಕರಿಸಿದರು. ನನ್ನ ನಾಟಕಕ್ಕೆ ಭೂಮಿಕ ಎಂಬ ಹುಡುಗಿ ಭೂಮಿ ತಾಯಿಯ ಪಾತ್ರ ಮಾಡಲು ಮತ್ತು ಮನುಷ್ಯನ ಪಾತ್ರ ಮಾಡಲು ಮನೋಜ್ ಎಂಬ ಹುಡುಗ ಪಾಲ್ಗೊಂಡಿದ್ದು ವಿಶೇಷ ಮತ್ತು ಕಾಕತಳೀಯ. ಅವರ ಹೆಸರುಗಳೂ ಕೂಡ ಪಾತ್ರಗಳ ಹೆಸರಿಗೆ ಜೋಡಣೆಯಾಯಿತು. ಉಪನ್ಯಾಸದ ನಂತರ ನನಗೆ ಮಧ್ಯಾಹ್ನದ ಬಿಸಿ ಊಟ ಬಡಿಸಿ ಉಪಚರಿಸಿ, ನನಗೆ ಅಭಿನಂದನಾ ಪತ್ರ ನೀಡಿ ಶುಭಕೋರಿದರು. ಶಾಲೆಯ ಕ್ರೀಡಾ ಶಿಕ್ಷಕರು ನನ್ನನ್ನು ರಾಷ್ಟ್ರೀಯ ಹೆದ್ದಾರಿಯ ತನಕ ತಂದು ಬಿಟ್ಟರು. ಅವರಿಗೆ ವಂದಿಸಿ, ಐದು ಮೈಲುಗಳ ನಡಿಗೆಯನ್ನು ಬೆಳಗಲಿಯ ಸರ್ಕಾರಿ ಶಾಲೆಯ ಕಡೆಗೆ ಮುಂದುವರಿಸಿದೆ.

ಆ ಸಂದರ್ಭದಲ್ಲಿ ನನ್ನ ಮನಸ್ಸು ಅಂತರ್ಮುಖಿಯಾಗಿತ್ತು. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯವರು ಇಲ್ಲೀ ತನಕ ಬರೀ ಕಾರಣಗಳನ್ನೇ ಕೊಡುತ್ತಾ ಕೈಚೆಲ್ಲುತ್ತಿದ್ದಾರೆಯೇ ಹೊರತು, ಬಹುತೇಕ ಮಂದಿ ಸ್ವಚ್ಛತೆಯ ಕಡೆಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಿಲ್ಲ. ತಪ್ಪುಗಳನ್ನು ಹಳ್ಳಿಗರ ಮೇಲೆ ಅಥವಾ ವಿದ್ಯಾರ್ಥಿಗಳ ಮೇಲೆ ಹೇರುತ್ತಿದ್ದಾರೆ. ಜಾಗೃತಿಯೆಂಬುದು ಒಂದು ಗಂಟೆಯ ಅಥವಾ ಒಂದು ದಿನದ ಕೆಲಸವಲ್ಲ. ಅದು ಆಗಿಂದ್ದಾಗೆ ಆಗುತ್ತಿರಬೇಕು. ತಿಂಗಳಿಗೆ ಒಂದು ಸಲವಾದರೂ ಮಕ್ಕಳಿಗೆ ಮತ್ತು ಹಳ್ಳಿಯ ಜನರಿಗೆ ಸ್ವಚ್ಛತೆ ಮತ್ತು ಪರಿಸರ ಬಗ್ಗೆ ಜಾಗೃತಿ ಮೂಡಿಸಬೇಕು. ಒಂದೇ ಸಲ ನೂರು, ಇನ್ನೂರು ಗಿಡಗಳನ್ನು ನೆಡುವುದಕ್ಕಿಂತ, ತಿಂಗಳಿಗೆ ಐದರಿಂದ ಹತ್ತು ಸಸಿಗಳಂತೆ ವರ್ಷ ಪೂರ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಹಳ್ಳಿಗಳ ಪ್ರತೀ ಬೀದಿಯಲ್ಲೂ ಶಾಲೆಯ ವಿದ್ಯಾರ್ಥಿಗಳೊಂದಿಗೆ ಆಗಿಂದಾಗೆ ಜಾಥಾ, ಬೀದಿ ನಾಟಕಗಳ ಪ್ರದರ್ಶನ ಮಾಡಬೇಕು. ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಶಿಕ್ಷಣ ಇಲಾಖೆಯವರು ಒಂದು ಹೊಸ ಪಠ್ಯಕ್ರಮ ತಂದು ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜಿನ ಮಕ್ಕಳಿಗೆ ಇದರ ಬಗ್ಗೆ ಪರೀಕ್ಷೆಗಳನ್ನು ಏರ್ಪಡಿಸಬೇಕು.

ಹಳ್ಳಿಗಳಲ್ಲಿ ಓದಿಕೊಂಡು ವಿದ್ಯಾವಂತರಾಗಿ, ಈಗ ಒಳ್ಳೆಯ ಸ್ಥಾನಗಳಲ್ಲಿರುವ ಜನರು ತಮಗೆ ಸಮಯ ಸಿಕ್ಕಾಗಲೆಲ್ಲಾ ತಮ್ಮ ಹಳ್ಳಿಗಳಲ್ಲಿ ಇದರ ಬಗ್ಗೆ ಕೆಲಸ ಮಾಡಬೇಕು. ಗ್ರಾ.ಪಂ. ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬರೀ ಗತ್ತಿನಿಂದ ಓಡಾಡಿಕೊಂಡು ಇರದೇ ಇದರ ಬಗ್ಗೆ ಸರ್ಕಾರದ ವತಿಯಿಂದ ಎಲ್ಲಾ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಕೊಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ಮಿತಿಯಲ್ಲಿಡಬೇಕು ಅಥವಾ ಪ್ಲಾಸ್ಟಿಕ್ ಮುಕ್ತ ಊರುಗಳನ್ನಾಗಿ ಘೋಷಿಸಬೇಕು. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಹಟವಿಡಿದು ಶೌಚಾಲಯವನ್ನು ಕಟ್ಟಿಸಿಕೊಳ್ಳಬೇಕು.

ಯಾವುದೇ ಕಾರಣಕ್ಕೂ ಬಯಲು ಶೌಚಾಲಯವನ್ನು ಉಪಯೋಗಿಸುವುದಿಲ್ಲವೆಂದು ಪಣತೊಡಬೇಕು. ತಮ್ಮ ಮನೆಯ ಮತ್ತು ಶಾಲೆಯ ಆವರಣವನ್ನು ಯಾರ ಸಹಾಯವನ್ನೂ ನಿರೀಕ್ಷಿಸದೆ ಸ್ವಚ್ಚತೆಯಿಂದ ಮತ್ತು ಹಸಿರಿನಿಂದ ಇಟ್ಟುಕೊಳ್ಳಬೇಕು. ಈಗ ಏನಾಗುತ್ತಿದೆ? ಮನೆಯೇ ದೇವಾಲಯ, ಬಯಲೇ ಶೌಚಾಲಯವೆಂಬಂತೆ ಭಾಸವಾಗುತ್ತಿದೆ. ಪ್ರತೀ ವರ್ಷವೂ ಈ ವಿಷಯದ ಬಗ್ಗೆ ಅತ್ಯುತ್ತಮವಾಗಿ ಕೆಲಸಮಾಡುವ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ಹಸಿರು ವಿದ್ಯಾರ್ಥಿ ಅಥವಾ ಪರಿಸರ ವಿದ್ಯಾರ್ಥಿ ಎಂದು ಘೋಷಿಸಿ, ಅವರ ಸೇವೆಯನ್ನು ಗೌರವಿಸಿ ಇತರರಿಗೂ ಮಾದರಿಯಾಗುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಈ ವಿಷಯದಲ್ಲಿ ಅದ್ಭುತವಾದ ಕೆಲಸಗಳು ನಡೆಯುವಂತಾಗುತ್ತದೆ.

ಈಗ ಸಾಲು ಮರದ ತಿಮ್ಮಕ್ಕನ ವಿಷಯಕ್ಕೆ ಬಂದರೆ, ಅವಳಿಗೆ ಯಾವುದೇ ಶಿಕ್ಷಣ ದೊರೆತಿರಲಿಲ್ಲ. ಅವಳಲ್ಲಿ ಹಣವಿರಲಿಲ್ಲ. ಅವಳಿಗೆ ಅಗತ್ಯ ಸೌಲಭ್ಯಗಳು ದೊರೆತಿರಲಿಲ್ಲ. ಅವಳಿಗೆ ಸಂಪನ್ಮೂಲದ ಕೊರತೆ ಮತ್ತು ಜನತೆಯ ಸಹಕಾರದ ಕೊರತೆಯಿತ್ತು. ಹಾಗಾಗಿಯೂ ಆ ಮಹಾತಾಯಿ ಸಸಿಗಳನ್ನು ನೆಟ್ಟು ಹತ್ತಾರು ವರ್ಷಗಳ ಕಾಲ ಅವಕ್ಕೆ ನೀರೆರೆದು, ರಕ್ಷಿಸಿ, ಪೋಷಿಸಿ ನೂರಾರು ಮರಗಳನ್ನು ಬೆಳೆಸಿದಳು. ತಿಮ್ಮಕ್ಕ ಈಗಿನ ಜನರ ತರಹ ಕ್ಷುಲ್ಲಕ ಕಾರಣಗಳನ್ನು ಕೊಟ್ಟು ತನ್ನ ಕರ್ತವ್ಯದಿಂದ ಹಿಂದೆ ಸರಿಯಲಿಲ್ಲ. ಇಷ್ಟೆಲ್ಲಾ ವಿಚಾರಗಳನ್ನು ಯೋಚಿಸಿಕೊಂಡು, ರಾಷ್ಟ್ರೀಯ ಹೆದ್ದಾರಿಯ ಬಲಕ್ಕೆ ತಿರುಗಿ ಒಂದೆರಡು ಮೈಲು ನಡೆದು ಬೆಳಗಲಿ ತಲುಪಿದೆ. ಚಿಕ್ಕದಾದ ಗ್ರಾಮ. ಗ್ರಾಮದ ಯುವಕರು ಪಗಡೆ ಆಟವಾಡುತ್ತಾ ಜಗುಲಿಗಳ ಮೇಲೆ ಜೂಜಿನಲ್ಲಿ ಮುಳುಗಿದ್ದರು. ಮಿಕ್ಕವರು ಎಲೆ ಅಡಿಕೆ ಅಗೆದು ರಸ್ತೆಯ ಮೇಲೆ ಉಗಿಯುತ್ತಿದ್ದರು.

ಗ್ರಾಮವನ್ನು ದಾಟ್ಟುತ್ತಿದ್ದಂತೆ ಬಲಕ್ಕೆ ತಿರುಗಿ ಪ್ರೌಢಶಾಲೆ ತಲುಪಿದೆ. ಒಳ್ಳೆಯ ವಾತಾವರಣದಲ್ಲಿರುವ ಶಾಲೆ. ನೀರಿನ ಸೌಕರ್ಯಕ್ಕೇನು ಕೊರತೆಯಿಲ್ಲ. ಮುಖ್ಯೋಪಾಧ್ಯಾಯರಿಗೆ ವಿಷಯ ತಿಳಿಸಿ ನನ್ನ ಉಪನ್ಯಾಸ ಕೊಡಲು ಅನುಮತಿ ಪಡೆದೆ. ಅವರ ಅಳಿಯ, ತಮ್ಮ ಶಾಲೆಗೆ ಲಕ್ಷಾಂತರ ರೂಪಾಯಿಗಳನ್ನು ದೇಣಿಗೆ ನೀಡಿದುದನ್ನು ಬಹಳ ಹೆಮ್ಮೆಯಿಂದ ಹೇಳಿಕೊಂಡರು. ಅವರ ಅಳಿಯನ ಕೆಲಸಕ್ಕೆ ನನ್ನ ಅಭಿನಂದನೆ ತಿಳಿಸಿ, ನನ್ನ ಉಪನ್ಯಾಸ ಶುರುಮಾಡಿದೆ. ಸಾಲುಮರದ ತಿಮ್ಮಕ್ಕನ ಸಾಹಸ ಕಥೆಗಳಿಗೆ ಜಾಸ್ತಿ ಒತ್ತು ಕೊಟ್ಟು ಪರಿಸರದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುವಂತೆ ವಿನಂತಿಸಿ ನನ್ನ ಉಪನ್ಯಾಸ ಮುಗಿಸಿದೆ.

speech-bubbles-and-circlesಶಾಲೆಯಲ್ಲಿ ಉಪನ್ಯಾಸ ನೀಡುವಾಗ ಗಲಾಟೆ ಮಾಡುತ್ತಿದ್ದ ಶಾಲೆಯ ಮಕ್ಕಳನ್ನು ಒಬ್ಬ ಶಿಕ್ಷಕ ಶಿಳ್ಳೆ ಹೊಡೆದು ನನ್ನತ್ತ ಗಮನ ನೀಡುವಂತೆ ಮಾಡಿದ್ದು ಇಲ್ಲಿನ ವಿಶೇಷತೆ. ಶಾಲೆಯ ಆವರಣದಲ್ಲಿ ಹೀಗೆ ಶಿಳ್ಳೆ ಹೊಡೆದ ಶಿಕ್ಷಕನಿಂದ ವಿದ್ಯಾರ್ಥಿಗಳು ಯಾವ ರೀತಿಯ ಶಿಸ್ತನ್ನು ಕಲಿಯಬಹುದು ಎಂದು ಯೋಚಿಸುತ್ತಾ ನಡೆದೆ .

ಶಿಳ್ಳೆ ಹೊಡೆಯುವ ಶಿಕ್ಷಕ,

ಸೊಳ್ಳೆ ಹೊಡೆಯುವ ಅಧಿಕಾರಿ,

ಕೊಳ್ಳೆ ಹೊಡೆಯುವ ರಾಜಕಾರಣಿ,

ನೀರಿನ ಮೇಲಿನ ಗುಳ್ಳೆಯಂತಹ ಅಭಿವೃದ್ಧಿಯಿಂದ,

ದೇಶ ಸಮೃದ್ಧಿಯಾಗಲು ಸಾಧ್ಯವೇ? ಓ ಪ್ರಕೃತಿ

ಅಲ್ಲಿಂದ ರಾಮನಕೊಪ್ಪ ಊರಿನ ಕಡೆಗೆ ಹೊರಟು ಸುಮಾರು ಮೂರು ಮೈಲುಗಳು ನಡಿಗೆಯ ಮಧ್ಯೆ, ಈ ದಿನ ಕೂಡ ಮಳೆಯಿಲ್ಲದಿದ್ದುದು ನನಗೆ ಚಿಂತೆಗೀಡು ಮಾಡಿತ್ತು. ರೈತ ಬಾಂಧವರು ಸೋಯ ಬೀನ್, ಜೋಳ ಬಿತ್ತಿದ್ದರು. ಅಲ್ಲಲ್ಲಿ ಮಾವಿನ ತೋಟ. ತೋಟದ ಸುತ್ತ ತೇಗದ ಮರಗಳು. ಅಪರೂಪಕ್ಕೆ ಒಂದು ಬಾಳೆ ತೋಟವನ್ನು ನೋಡಿದೆ. ನನ್ನ ಗಮನವೆಲ್ಲಾ ವೇಗವಾಗಿ ನಡೆಯುವುದರಲ್ಲೇ ಇತ್ತು. ಸೂರ್ಯನನ್ನು ನೋಡಿದೆ, ಸುಮಾರು ಅರವತ್ತು ಡಿಗ್ರಿ ಭೂಮಿಯ ಮೇಲಿದ್ದ. ಸಮಯ ಸುಮಾರು 05-30 ಇರಬಹುದು ಎಂದು ಗ್ರಹಿಸಿದೆ. ಏನೇ ಹೇಳಿ ದಿನಾಂಕ, ವಾರ, ಸಮಯದ ಪರಿವೇ ಇಲ್ಲದೆ ಬದುಕುವುದೇ ಒಂದು ಅದ್ಭುತವಾದ ಅನುಭವ.

ಕತ್ತಲೆಯಾದ ಮೇಲೆ ಹೆದ್ದಾರಿಯಲ್ಲಿ ನಡೆಯುವುದು ಅಷ್ಟು ಸುರಕ್ಷಿತವಲ್ಲ ಎಂದು ತಿಳಿದು, ಸೂರ್ಯ ಮುಳುಗುವ ಮೊದಲೇ ರಾಮನಕೊಪ್ಪ ಅಥವಾ ರಾಮನಕೊಪ್ಪದ ಮುಂಚೆಯೇ ಸಿಗುವ ಗಾಯತ್ರಿ ಮಠವನ್ನು ತಲುಪಿ ನನ್ನ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸುತ್ತಾ ಒಂದೇ ಸಮನೆ ನಡೆದು, ಚಬ್ಬಿಯೆಂಬ ಗ್ರಾಮವನ್ನು ದಾಟಿ ಸಾಗುವಾಗ ದಾರಿಯ ಎಡಕ್ಕೆ ಒಂದು ಶಿಕ್ಷಣ ಸಂಸ್ಥೆಯನ್ನು ಗಮನಿಸಿದೆ. ಸರಿ, ಸೂರ್ಯನನ್ನು ನೋಡಿದೆ. ಕತ್ತಲಾಗಲು ಇನ್ನೂ ಸಮಯವಿದೆ, ನೀನು ಸ್ವಲ್ಪ ಹೊತ್ತು ವಿಶ್ರಮಿಸಬಹುದು ಎಂದು ಹೇಳಿ ನಗುತ್ತಿದ್ದಂತೆ ಭಾಸವಾಯಿತು.

ಶಿಕ್ಷಣ ಸಂಸ್ಥೆಯ ಬಾಗಿಲನ್ನು ಬಹಳ ನಿಷ್ಠೆಯಿಂದ ಕಾಯುತ್ತಿದ್ದ ಕಾವಲುಗಾರನ ಹತ್ತಿರ ಹೋಗಿ ಅವನ ಅಪ್ಪಣೆ ಪಡೆದು ಚೇರಿನ ಮೇಲೆ ಕುಳಿತು ನೀರು ಕುಡಿಯುತ್ತಾ ವಿರಮಿಸಿದೆ. ಮೂರ್ನಾಲ್ಕು ಮೈಲು ನಡೆದ ಮೇಲೆ ಒಂದು ಕಡೆ ಕುಳಿತು ವಿಶ್ರಮಿಸುವುದಿದೆಯಲ್ಲಾ, ಅದರ ಸುಖವೂ ಕಡಿಮೆಯೇನಲ್ಲ. ಹಾಗೇ ಕಾವಲುಗಾರನ ಹತ್ತಿರ ಮಾತನಾಡುತ್ತಿದ್ದಾಗ ಒಂದು ಕಾರು ಬಂದು ನಿಂತಿತು. ಇವನು ದೊಡ್ಡ ಸಲಾಮ್ ಹೊಡೆದ. ಕಾರಿನಲ್ಲಿದ್ದವರು ನನ್ನನ್ನು ಒಂದು ಕ್ಷಣ ಗಮನಿಸಿ ಹೊರಟು ಹೋದರು. ನಾನು ಅವರ ಬಗ್ಗೆ ಕಾವಲುಗಾರನನ್ನು ವಿಚಾರಿಸಿದಾಗ ಅವರು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರೆಂದು ತಿಳಿಯಿತು.

“ಅಯ್ಯೋ ನೀವು ಮೊದಲೇ ಹೇಳಬಾರದೇ. ನಾನು ಅವರನ್ನು ಸಂಪರ್ಕಿಸಿ, ನನ್ನ ವಿಚಾರ ತಿಳಿಸಿ, ರಾತ್ರಿ ಇಲ್ಲಿ ಉಳಿಯಲು ವ್ಯವಸ್ಥೆ ಕಲ್ಪಿಸುವಂತೆ ವಿನಂತಿಸಿಕೊಳ್ಳುತ್ತಿದ್ದೆ” ಎಂದೆ.

“ಹೌದೇನ್ರೀ, ಈಗೇನು ಒಳಗೆ ಮಹಾರಾಜರಿದ್ದಾರೆ. ಅವರನ್ನು ಕೇಳ್ರೀ. ಅವರು ಏನಾದರು ಮಾಡುತ್ತಾರೆ” ಎಂದು ಹೇಳಿ ಅಲ್ಲೇ ದೂರವಾಣಿಯಲ್ಲಿ ಮಾತನಾಡುತ್ತಾ ಅಡ್ಡಾಡುತ್ತಿದ್ದ ಒಬ್ಬರು ದಿಗಂಬರ ಸ್ವಾಮಿಯನ್ನು ತೋರಿಸಿದ. ಸರಿಯೆಂದು ಅವರತ್ತ ಓಡಿದೆ. ಅವರ ಹತ್ತಿರ ಹೋಗಿ ನನ್ನ ವಿಚಾರ ತಿಳಿಸಿದೆ. ಅದಕ್ಕೆ ಅವರು “ಇದು ನನ್ನ ಸುಪರ್ಧಿಗೆ ಓಳಪಡುವುದಿಲ್ಲ. ಒಳಗೆ ಇನ್ನೊಬ್ಬರಿದ್ದಾರೆ. ಅವರನ್ನು ಹೋಗಿ ಸಂಪರ್ಕಿಸಿ” ಎಂದರು. ನಾನು ಅವರಿಗೆ ನಮಸ್ಕರಿಸಿ ಒಳಗೆ ಹೋದೆ. ಒಳಾವರಣಕ್ಕೆ ಹೋಗಿ ಅಲ್ಲಿ ಇಲ್ಲಿ ಅಡ್ಡಾಡಿ, ಒಬ್ಬ ಕಿರಿಯ ಸ್ವಾಮಿಯನ್ನು ಸಂಪರ್ಕಿಸಿ ನನ್ನ ವಿಷಯ ತಿಳಿಸಿದೆ. ಅವರು “ಆಗಲಿ. ಏನಾದರೊಂದು ವ್ಯವಸ್ಥೆ ಮಾಡೋಣ. ಇನ್ನೊಬ್ಬರು ಖಾವಿ ಧರಿಸಿದ ಸ್ವಾಮಿಗಳಿದ್ದಾರೆ. ಶಾಲಾ ಕಾಲೇಜುಗಳು ಅವರ ಸುಪರ್ಧಿಗೆ ಬರುತ್ತವೆ. ಅವರನ್ನು ನೀವು ಕಂಡರೆ ಅವರಿಗೂ ಒಂದು ಮಾತು ಕೇಳಿನೋಡಿ” ಎಂದರು.

ಇದು ಒಳ್ಳೆಯ ಕಥೆಯಾಯಿತಲ್ಲ ಎಂದು ಅಲ್ಲಿದ್ದ ಬೇವಿನ ಮರದ ಕೆಳಗಿದ್ದ ಕಟ್ಟೆಯ ಮೇಲೆ ಕುಳಿತೆ. ಸೂರ್ಯ ಮುಳುಗಿ ಕತ್ತಲಾಯಿತು. ಮಕ್ಕಳೆಲ್ಲಾ ನನ್ನ ಸುತ್ತಾ ಮುತ್ತಿಕೊಂಡು ನನ್ನ ವಿಚಾರ ತಿಳಿದುಕೊಂಡು ಪ್ರಾರ್ಥನೆ ಮಾಡಲು ಹೊರಟರು. ಪಾರ್ಥನೆಯ ನಂತರ ಅವರ ಭೋಜನವೂ ಮುಗಿಯಿತು. ನನ್ನ ವಾಸ್ತವ್ಯದ ಬಗ್ಗೆ ಯಾರೂ ಚಕಾರವೆತ್ತಲಿಲ್ಲ. ಈ ಹೊತ್ತಿನಲ್ಲಿ ಅಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿಬಿಟ್ಟರೆ ನನ್ನ ಗತಿಯೇನಪ್ಪಾ ಎಂದು ಸ್ವಲ್ಪ ದುಗುಡ ಶುರುವಾಯಿತು. ಅದರಲ್ಲಿ ಹೆದರುವುದೇನಿದೆ. ಎಲ್ಲಾ ನೋಡಿಯಾಯಿತು ಇದನ್ನೂ ಒಂದು ಕೈ ನೋಡಿ ಬಿಡೋಣ ಎಂದು ಧೈರ್ಯ ತಂದುಕೊಂಡೆ.

catದೂರದಲ್ಲಿ ಕಂಡ ಖಾವಿಧಾರಿಯನ್ನು ಸಂಪರ್ಕಿಸಿದೆ. ಅವರು ನನ್ನ ಕಥೆಯನ್ನು ಕೇಳುವ ಸೌಜನ್ಯ ತೋರಲಿಲ್ಲ. “ಊಟ ಮುಗಿಸಿ , ಆಮೇಲೆ ವಿಚಾರಮಾಡುವ” ಎಂದರು. ರಾತ್ರಿ 08-30 ಆಗಿತ್ತು. ಇನ್ನು ಯಾವಾಗ ವಿಚಾರಮಾಡಿ ತಿಳಿಸುತ್ತಾರಪ್ಪ ಎಂದೆನಿಸಿತು. ಸ್ವಲ್ಪ ಹೊತ್ತಿನ ನಂತರ ಅವರ ಬಾಲಂಗೋಚಿ ಬಂದು ನನ್ನನ್ನು ಕಛೇರಿಯ ಒಂದು ಕೋಣೆಗೆ ಕರೆದುಕೊಂಡು ಹೋಗಿ ವಿಚಾರಣೆಯನ್ನು ಆರಂಭಿಸಿದರು. ನಾನು ನನ್ನ ಪ್ರಯಾಣದ ವಿಚಾರ ತಿಳಿಸಿದೆ. ಅಲ್ಲಿಂದ ಶುರುವಾಯಿತು ನೋಡಿ ಅವರ ಅಧಿಕಾರಯುತ ಮಾತುಗಳು.

“ಸರ್ರಾ. ನೀವು ಇಂಜಿನಿಯರ್. ಈ ಫೀಲ್ಡ್ಗೆ ಯಾಕೆ ಬಂದದ್ದು” ಎಂದು ಕೇಳಿದರು. ಇದರ ಬಗ್ಗೆ ಕೇಳಿದವರೆಲ್ಲರಿಗೂ ವಿವರಣೆ ಕೊಟ್ಟು ಕೊಟ್ಟು ನನಗೆ ರೇಗತ್ತಿತ್ತು.

“ಯಾಕೆ? ಇಂಜಿನಿಯರ್‍ಗಳು ಬೇರೆ ಯಾವ ಕ್ಷೇತ್ರಗಳಲ್ಲೂ ಕೆಲಸ ಮಾಡಬಾರದು ಎಂದು ಕಾನೂನು ಇದೆಯೇ? ” ಎಂದು ಕೇಳಿದೆ.

“ಆಗಲ್ರೀ. ನೀವು ಪರಿಸರ ಬಗ್ಗೆನೇ ಯಾಕೆ ಜಾಗೃತಿ ಮೂಡಿಸುತ್ತಿದ್ದೀರ?” ಎಂಬ ಪ್ರಶ್ನೆಯಿಟ್ಟರು.

“ಒಬ್ಬೊಬ್ಬರು ಅವರಿಗಿಷ್ಟ ಬಂದ ಕ್ಷೇತ್ರ ಆಯ್ಕೆ ಮಾಡಿಕೊಂಡು ಕೆಲಸ ಮಾಡುತ್ತಾರೆ. ನಾನು ಪರಿಸರದ ವಿಷಯವನ್ನು ಆಯ್ಕೆ ಮಾಡಿಕೊಂಡೆ” ಎಂದುತ್ತರಿಸಿದೆ.

“ಪಾದಯಾತ್ರೇನೇ ಯಾಕೆ ಕೈಗೊಂಡಿರಿ? ಬಸ್ಸು ಕಾರಿನಲ್ಲಿ ಹೋಗಿ ಉಪನ್ಯಾಸ ಕೊಡಬಹುದಿತ್ತಲ್ಲಾ?” ಎಂದು ಕೇಳಿದರು.

“ನಾನು ಯಾವುದೇ ವಾಹನದಲ್ಲಿ ಏರಿ ಬಂದರೂ, ಅದು ಒಂದಲ್ಲಾ ಒಂದು ಮಾಲಿನ್ಯ ಮಾಡಿರುತ್ತದೆ. ಹೀಗಾಗಿ ಒಂದೆಡೆ ಮಾಲಿನ್ಯ ಮಾಡಿಕೊಂಡು ವಾಹನದಲ್ಲಿ ಪ್ರಯಾಣಿಸಿ, ಇನ್ನೊಂದು ಕಡೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು ನನಗೆ ಸರಿ ಎನಿಸಲಿಲ್ಲ. ಎರಡೂ ತದ್ವಿರುದ್ದವಾದ ಕೆಲಸ” ಎಂದೆ.

“ಬರೀ ಪ್ರೌಢಶಾಲೇನೇ ಯಾಕೆ ಆಯ್ಕೆ ಮಾಡಿಕೊಂಡಿರಿ. ಪ್ರಾಥಮಿಕ ಮತ್ತು ಕಾಲೇಜುಗಳಲ್ಲಿ ಯಾಕೆ ಉಪನ್ಯಾಸ ಕೊಡುವುದಿಲ್ಲ?” ಎಂದು ಕೇಳಿದರು.

“ಪ್ರಾಥಮಿಕ ಶಾಲೆಯ ಮಕ್ಕಳಿಗೆ ನಾನು ಹೇಳುವುದು ಅಷ್ಟು ಅರ್ಥವಾಗುವುದಿಲ್ಲ. ಕಾಲೇಜಿನ ಹುಡುಗರು ಶಿಸ್ತಿನಿಂದ ಶೋಕಿಯ ಕಡೆಗೆ ತಿರುಗಿರುತ್ತಾರೆ. ನನ್ನ ಮಾತು ಅವರಿಗೆ ಹಿಡಿಸುವುದಿಲ್ಲ. ಅದೇ ಪ್ರೌಢಶಾಲೆಯ ಮಕ್ಕಳಲ್ಲಿ ಇನ್ನು ಶಿಸ್ತು, ಭಯವಿರುತ್ತದೆ. ನನ್ನ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಪ್ರೌಢತೆಯೂ ಬೆಳೆದಿರುತ್ತದೆ. ಹಾಗಾಗಿ ಬರೀ ಪ್ರೌಢಶಾಲೆಗಳನ್ನು ಆಯ್ಕೆ ಮಾಡಿಕೊಂಡೆ. ಅಲ್ಲದೇ ಆಂಗ್ಲಭಾಷೆಯಲ್ಲಿ ಒಂದು ಮಾತಿದೆ ‘ಇಟ್ ಈಸ್ ಈಸಿಯರ್ ಟು ಬಿಲ್ಡ್ ಸ್ಟ್ರಾಂಗ್ ಚಿಲ್ಡ್ರನ್ ದೆನ್ ರಿಪೇರ್ ಬ್ರೋಕನ್ ಮೆನ್’ ಎಂದು. ಗಿಡವಾಗಿ ಬಗ್ಗದು, ಮರವಾಗಿ ಬಗ್ಗೀತೇ ಎಂಬ ಗಾದೆಯೂ ಅದನ್ನೇ ಸಾರುತ್ತದೆ” ಎಂದೆ.

“ನೀವು ಮಾಡುವ ಉಪನ್ಯಾಸದಿಂದ ಬದಲಾವಣೆಯಾಗುತ್ತದೆ ಎಂದು ಎಣಿಸಿದ್ದೀರ? ಈ ರಾಷ್ಟ್ರೀಯ ಹೆದ್ದಾರಿಯನ್ನೇ ತೆಗೆದುಕೊಳ್ಳಿ. ಈ ರಸ್ತೆ ನಿರ್ಮಿಸಲು ಸಾವಿರಾರು ಮರಗಳನ್ನು ಕಡಿದರು. ಈಗ ಅದರ ಅಗಲೀಕರಣ ನಡೆಯುತ್ತಿದೆ. ಇದಕ್ಕೆ ಸರ್ಕಾರ ಕಡೆಯಿಂದ ಸಿಗುವ ಉತ್ತರ, ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದರಿಂದ ಪೆಟ್ರೋಲ್ ಮತ್ತು ಡೀಸಲ್ ಉಳಿತಾಯ. ಇದಕ್ಕೆ ಏನು ಮಾಡುತ್ತೀರ?” ಎಂದು ಕೇಳಿದರು.

ನನ್ನ ತಾಳ್ಮೆಯ ಕಟ್ಟೆ ಹೊಡೆಯಿತು. “ನಾನು ಯಾವಗಲೂ ಆಶಾಭಾವನೆ ಇಟ್ಟುಕೊಂಡು ಕೆಲಸ ಮಾಡುತ್ತೇನೆ. ಇನ್ನು ಹೆದ್ದಾರಿಯ ವಿಷಯಕ್ಕೆ ಬಂದರೆ, ನಾಗರೀಕರಾದ ನಾವೆಲ್ಲರೂ ಸಾರ್ವಜನಿಕ ಸಾರಿಗೆಯಾದ ಬಸ್ಸು, ರೈಲು, ಹಡಗು, ವಿಮಾನವನ್ನು ಬಳಸಿದರೆ ದೇಶಕ್ಕೆ ಯಾವ ಹೆದ್ದಾರಿಯೂ ಬೇಡ, ಯಾವ ರಸ್ತೆ ಅಗಲೀಕರಣವೂ ಬೇಡ. ಇರುವ ರಸ್ತೆಗಳೇ ಬೇಕಾದಷ್ಟು. ಎಲ್ಲರೂ ಮೈಮರೆತು ಮತ್ತು ಹಣದ ಗಮ್ಮತ್ತಿನಿಂದ ಸ್ವಂತ ವಾಹನಗಳಲ್ಲಿ ಓಡಾಡುತ್ತಾರೆ. ಹೀಗಾಗಿ ವಾಹನ ದಟ್ಟಣೆ. ಈ ವಿಷಯಗಳ ಬಗ್ಗೆ ಮಾತನಾಡುವರೇ ಜಾಸ್ತಿ. ಅಲ್ಲಿ ಇಲ್ಲಿ ಎಲೆಮರೆಕಾಯಿಗಳಂತೆ ಕೆಲಸ ಮಾಡುವವರ ಸಂಖ್ಯೆ ದೊಡ್ಡದಿದೆ” ಎಂದು ಹೇಳಿದೆ.

treeಕೊಡಗಿನ ಜನತೆ ತಮ್ಮ ಕಾಡಿನ ಮೂಲಕ ಹಾದು ಹೋಗುವ ಬೃಹತ್ ವಿದ್ಯುತ್ ತಂತಿಯ ಕಾಮಗಾರಿಯ ವಿರುದ್ಧ ಹೋರಾಡಿದ್ದುದು, ಕರಾವಳಿಯ ಜನರು ಎಂಡೋಸಲ್ಫಾನ್ ಕೀಟನಾಶಕ ವಿರುದ್ಧ ಹೋರಾಡಿದ್ದು ಮತ್ತು ಮೇಧಾ ಪಾಟ್ಕರ್‍ರವರ ನರ್ಮದಾ ಬಚಾವ್ ಚಳುವಳಿಗಳ ಉದಾಹರಣೆಯನ್ನು ಕೊಟ್ಟೆ. “ನಿಮಗೆ ಬೇಡವಾದುದು ನಡೆಯುತ್ತಿದೆ ಎಂದರೆ ಹೋರಾಟ ನಡೆಸಿ ಜಯ ಸಾಧಿಸಿ. ನಾನು ವಯಸ್ಸಾದವರ ಮಾತಿನ ಬಗ್ಗೆ ಹೆಚ್ಚು ತಲೆ ಕೆಡಸಿಕೊಳ್ಳುವುದಿಲ್ಲ. ಯಾಕೆಂದರೆ ಅವರೆಲ್ಲ ಉದುರುವ ಹಣ್ಣುಗಳು. ನಾನು ಯಾವಾಗಲು ಬಾಳಿ ಬದುಕಬೇಕಾದ ಮುಂದಿನ ಪೀಳಿಗೆಯ ಬಗ್ಗೆ ವಿಚಾರ ಮಾಡುತ್ತೇನೆ” ಎಂದು ಅವರ ಮುಖದ ಮೇಲೆ ಹೇಳಿಬಿಟ್ಟೆ.

ನನ್ನ ಮಾತಿನ ದಾಟಿಗೆ ಅವರು ಒಂದು ಕ್ಷಣ ಅವಕ್ಕಾದರೂ ಸ್ವಲ್ಪ ಸುಧಾರಿಸಿಕೊಂಡು “ಹೌದು ಹೌದು. ಆಶಾಭಾವನೆ ಇಟ್ಟುಕೊಂಡೇ ಕೆಲಸ ಮಾಡಬೇಕು” ಎಂದು ಹೇಳಿ ನನ್ನ ದಾರಿಗೇ ಬಂದರು. “ನೀವು ಪತ್ರಕರ್ತರನ್ನು ಏಕೆ ಭೇಟಿಯಾಗಿಲ್ಲ” ಎಂದು ಕೇಳಿದ.

“ಸಮಾಜದಲ್ಲಿ ಎಲ್ಲಾ ತರಹದ ಜನರಿರುತ್ತಾರೆ. ಪತ್ರಿಕೆಗಳಲ್ಲಿ ಒಬ್ಬ ಇಂಜಿನಿಯರ್ ಹೆದ್ದಾರಿಯಲ್ಲಿ ಒಬ್ಬನೇ ಓಡಾಡುತ್ತಿದ್ದಾನೆ ಎಂದು ಪ್ರಕಟಿಸಿದರೆ, ಸಮಾಜಘಾತುಕರಿಂದ ನನಗೆ ಯಾವ ರೀತಿಯಲ್ಲಾದರು ಆಪತ್ತು ಬರಬಹುದು. ನನ್ನ ಸುರಕ್ಷತೆಯ ದೃಷ್ಟಿಯಿಂದ, ನಾನು ಯಾರಿಗೂ ಹೇಳದೇ ನನ್ನ ಕೆಲಸವನ್ನು ನಿಶ್ಯಬ್ದವಾಗಿ ಮಾಡುತ್ತಿದ್ದೇನೆ. ನಿಮಗೆ ಆಶ್ಚರ್ಯವೆನಿಸಬಹುದು, ನಾನು ಮಾಡುತ್ತಿರುವ ಕೆಲಸ ನನಗೆ ಬಿಟ್ಟರೆ, ನನ್ನ ಕುಟುಂಬ ವರ್ಗದವರಿಗಾಗಲೀ, ಸ್ನೇಹಿತರಿಗಾಗಲೀ ತಿಳಿದೇ ಇಲ್ಲ. ಅಷ್ಟು ಗೌಪ್ಯವಾಗಿ ಕೆಲಸ ಮಾಡುತ್ತಿದ್ದೇನೆ” ಎಂದೆ.

ತಮ್ಮನ್ನು ತಾವು ಬಹಳ ದೊಡ್ಡವರು ಎಂದು ಭಾವಿಸಿದ ಕೆಲವರಲ್ಲಿ ಒಂದು ಕೊರತೆ ಎದ್ದು ಕಾಣುತ್ತದೆ. ಅವರು ಮಾಡಬೇಕಾದ ಕೆಲಸವನ್ನು ಒಬ್ಬ ಸಾಮಾನ್ಯ ವ್ಯಕ್ತಿ ಮಾಡುತ್ತಿದ್ದರೆ, ಅವರಿಗೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಅವರ ಅಹಂಭಾವವನ್ನು ಕೆಣಕಿದಂತಾಗುತ್ತದೆ. ಈ ಆಸಾಮಿಗೂ ಅದೇ ತೊಂದರೆ. ಹೇಗಾದರೂ ನನ್ನನ್ನು ಹಿಡಿಯಬೇಕು ಎಂದುಕೊಂಡಿದ್ದರು. ಆದರೆ ಅವರ ಎಲ್ಲಾ ಪ್ರಶ್ನೆಗಳಿಗೆ ದಿಟ್ಟತನದಿಂದಲೇ ಉತ್ತರ ನೀಡಿದ್ದೆ. ಅವರ ವಿವೇಚನೆಯಲ್ಲಿ ಬೇರೆ ಯಾವ ಪ್ರಶ್ನೆಗಳು ಉಳಿದಿರಲಿಲ್ಲ್ಲ.

ಕೊನೆಗೆ “ನಿಮ್ಮ ಐಡಿ ಕಾರ್ಡ್ ತೋರಿಸಿ” ಎಂದರು. ನನ್ನ ಪಾಸ್‍ಪೋರ್ಟ್ ಅವನ ಕೈಗೆ ಇಟ್ಟೆ ಮತ್ತು ಅದರಲ್ಲಿದ್ದ ಇಂಗ್ಲೆಂಡ್‍ನ ವೀಸಾವನ್ನು ತೋರಿಸಿದ ಮೇಲೆ, ವಸತಿಯ ಮೇಲ್ವಿಚಾರಕನನ್ನು ಕರೆದು ನನಗೆ ಒಂದು ಕೋಣೆ ಕೊಡಲು ಹೇಳಿದರು. ನಾನು ಊಟ ಮಾಡಿ, ಅವನ ಹಿಂಬಾಲಿಸಿ ವಸತಿ ಕಟ್ಟಡದ ಕಡೆಗೆ ನಡೆದೆ. ಇವರು ನನ್ನನ್ನು ನಡೆಸಿಕೊಂಡ ರೀತಿಯನ್ನು ಗಮಸಿದರೆ ಇವರ ಕೋಣೆಗಳು ಐಷಾರಾಮಿ ಹೋಟೆಲ್‍ನ ರೂಮಿನ ತರಹ ಇರುತ್ತವೇನೋ ಎಂದುಕೊಂಡಿದ್ದೆ. ಆದರೆ ನನಗೆ ದೊರೆತಿದ್ದು ಕೊಳಕಿನಿಂದ ಗಬ್ಬು ನಾರುತ್ತಿದ್ದ ಒಂದು ಕೋಣೆ. ಆ ಕೋಣೆ ಕೊಟ್ಟವ, ನನ್ನ ಜೊತೆ ಒಂದು ತಾಸಿಗಿಂತಲೂ ಹೆಚ್ಚು ಮಾತನಾಡಿಕೊಂಡು ನಿಂತು ಬಿಟ್ಟ.

ಬೆಳಗಿನಿಂದ ತುಂಬಾ ನೀರು ಕುಡಿದಿದ್ದರಿಂದ, ನನಗೆ ಮೂತ್ರ ವಿಸರ್ಜಿಸಲು ಬಹಳ ಆತುರವಿತ್ತು. ನಾನು ಕೋಣೆಗೆ ಹೋಗಲು ಅವನು ಅವಕಾಶವೇ ನೀಡಲಿಲ್ಲ. ನನ್ನ ಕಟ್ಟೆ ಹೊಡೆಯಿತು. ನಾನು ತೊಟ್ಟಿದ್ದ ಬಟ್ಟೆಯಲ್ಲೇ, ಸ್ವಲ್ಪ ಸ್ವಲ್ಪ ಮೂತ್ರ ವಿಸರ್ಜನೆ ಮಾಡಿಕೊಂಡುಬಿಟ್ಟೆ. ಕಪ್ಪು ಪ್ಯಾಂಟ್ ಧರಿಸಿದ್ದರಿಂದ ಮತ್ತು ಕತ್ತಲೆಯಲ್ಲಿ ನಿಂತು ಮಾತನಾಡುತ್ತಿದ್ದರಿಂದ ಅವನಿಗೆ ತಿಳಿಯಲಿಲ್ಲ. ಅವನು ಹೋದ ಮೇಲೆ, ಬೇಗನೇ ಒಳಗೆ ಹೋಗಿ ಬಟ್ಟೆಯಲ್ಲಾ ಬಿಚ್ಚಿ ಒಗೆದ ನಂತರ ಸ್ನಾನ ಮಾಡಿ ಮಡಿವಂತಿಕೆ ಮೆರೆದೆ. ಅದು ಬೇರೊಬ್ಬರ ಕೊಠಡಿಯಂತಿತ್ತು. ಕೊಠಡಿಯ ಒಡೆಯ ರಜೆಯ ಮೇಲೆ ಊರಿಗೆ ಹೋಗಿರಬಹುದೆಂದು ಗ್ರಹಿಸಿದೆ. ಅವನು ಇಟ್ಟಿದ್ದ ವಸ್ತುಗಳ ರಾಶಿಯಲ್ಲಿ ಹುಡುಕಿ ಕೊಬ್ಬರಿ ಎಣ್ಣೆಯಿಂದ ತಲೆ ಕೂದಲನ್ನು ಮಸಾಜ್ ಮಾಡಿ ತಲೆಬಿಸಿಯನ್ನು ಕಡಿಮೆ ಮಾಡಿ ನಿದ್ರೆಗೆ ಜಾರಿದೆ.

 [ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 63 ಮೈಲುಗಳು]

‍ಲೇಖಕರು Admin

25 June, 2016

4 Comments

  1. Vihi wadawadagi

    kelavaru taavu sudharanege Kai hakuvadilla sudharane bayasuvavarige sahakara kodalu hindetu hakuttare enta viparyasa

    • ರಾದ

      ವಿಪರ್ಯಾಸವೂ, ದುರಂತವೂ ಹೌದು. ಆಶಾಭಾವನೆಯಿಂದ ಕೆಲಸ ಮಾಡುವವರನ್ನು ತಡೆಹಿಡಿಯುವುದು ತಪ್ಪು.

  2. Pradeep K S

    King Tippu Sultan used to punish people who couldn’t pay tax in a way. He had passed an order that those who cannot pay tax should put certain number of saplings, especially fruiting trees, and they should take care of those saplings till they grown up well. Lovely punishment. These bloody governments, instead of giving ration for free or free subsidies or all nonsense bhagyas, they should bring such nature cology schemes and give proportional subsidies. Why anything for free??? Rule should encourage those work for nature.

    • ರಾದ

      ಹೌದು ಪ್ರದೀಪ್. ತಮ್ಮ ಅನಿಸಿಕೆಗಳಿಗೆ ನನ್ನ ಸಹಮತವಿದೆ. ನೀವು ಇಲ್ಲಿ ತಿಳಿಸಿರುವ, ಟಿಪ್ಪು ಕಾಲದಲ್ಲಿದ್ದ ಕಾನೂನುಗಳ ಬಗ್ಗೆ ನನಗೆ ಅಷ್ಟಾಗಿ ಅರಿವಿಲ್ಲ. ಸಸಿನೆಡುವ ಶಿಕ್ಷೆಯ ಪರಿಕಲ್ಪನೆ ಇವತ್ತಿನ ಪರಿಸ್ಥಿತಿಗೆ ಗಗನ ಕುಸುಮ. ಏನಂತೀರ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading