ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೀರದಾ ಋಣ..

ಸೌಮ್ಯ

ಕೊಡೆಯಿಂದ ಬೀಳ್ತಿದ್ದ ಮಳೆಹನಿಯ ಬಿಂದುಗಳ,
ಎಣಿಸುತ್ತ ಶಾಲೆಗೆ ನಡೆದಿದ್ದ ದಿನಗಳಮರೆತಿಲ್ಲ:

ಒದ್ದೆಗೊಂಡಿದ್ದ ಪುಸ್ತಕಕೆ ಅಪ್ಪ ಅಗ್ಗೀಷ್ಟಿಕೆಯ
ಕಾವು ಕೊಟ್ಟು, ಒಣಗಿಸಿದ ದಿನಗಳ ಮರೆತಿಲ್ಲ:

ನೆಂದು ಬಂದಾಗ ಮನೆಗೆ, ಅಕ್ಕರೆಯಲಿ ಅಮ್ಮ
ಕೊಟ್ಟ ಬಿಸಿ ಬಜ್ಜಿ ಕಾಫಿಯ ರುಚಿ ಇನ್ನೂ ಮಾಸಿಲ್ಲ:

ಬೇಜಾರು ಎಂದಾಗ, ಛಾವಣಿಗೆ ಕರೆದೊಯ್ದು,
ಚಂದ್ರನ ತೋರುತ, ತಾರೆಗಳ ಎಣಿಸುತಾ,
ಸಾರವ್ಯೂಹಕೆ ಪಯಣಿಸಿದ ನೆನಪಿನ್ನೂ ಹೋಗಿಲ್ಲ:

ಕೈ ತುತ್ತು ನೀಡುತಾ, ಮಧುರ ಮಾತನಾಡುತಾ,
ಎರಡರಷ್ಟಳತೆಯ ಊಟ ಮಾಡಿಸಿದ
ಅಮ್ಮನ ಮಮತೆ ಇನ್ನೂ ಬತ್ತಿಲ್ಲ:

ನಿದ್ದೆ ಬಾರದೆ ಇರಲು, ಅಪ್ಪ ಹೇಳಿದ
ಏಳು ಸಮುದ್ರದಾಚಿನ ಮಾಂತ್ರಿಕನ ಕಥೆಯ,
ರಾಜಕುಮಾರಿ ನಾನಾಗಿ ಮಲಗಿದ ರಾತ್ರಿಗಳ ಮರೆತಿಲ್ಲ:

ಜ್ವರ ಬಂದು ಮಲಗಿರಲು, ಹಣೆ ಮೇಲೆ ಇಡಿ ರಾತ್ರಿ
ತಣ್ಣೀರ ಬಟ್ಟೆ ಇಟ್ಟು, ನಿದ್ದೆಗೆಟ್ಟ
ಅಮ್ಮ ಅಪ್ಪನ ಎಂದೂ ಮರೆತಿಲ್ಲ:

ಪಠ್ಯದ ವಿಷಯಗಳು ಅರ್ಥವಾಗದೆ ಅತ್ತಾಗ,
ಧೈರ್ಯ ತುಂಬಿ ಸುಲಭದಿ ಅರ್ಥೈಸಿ
ಗುರುವಾದ ನಿಮ್ಮನ್ನು ಮರೆತಿಲ್ಲ:

ಮರೆತಿಲ್ಲ ಎಂಥಹಾ ಕಷ್ಟದಲೂ ನಮಗೆ ತೋರದೆ
ನೋವ, ಯಾವುದಕೂ ಕಡಿಮೆ ಮಾಡದೆ
ಬೆಳೆಸಿದ ನಿಮ್ಮ ಸಹನೆಯನ್ನ:

ನಿಮ್ಮಿಬ್ಬರಾ ಋಣವ ತೀರಿಸಲು ಸಾಧ್ಯವೇ?
ಜನ್ಮಜನ್ಮಕೂ ನಿಮಗೆ ನಾನು ಸದಾ ಚಿರಋಣಿ
ಓ ನನ್ನ ಅಪ್ಪ ಅಮ್ಮ…

‍ಲೇಖಕರು Admin

24 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading