ವಾಸುದೇವ ಶರ್ಮಾ ಅಂಕಣ – ಮಗುವಿನ ಹಿತದೃಷ್ಟಿಯಿಂದ ‘ದತ್ತು’ ಪ್ರಕ್ರಿಯೆ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

| ಕಳೆದ ಸಂಚಿಕೆಯಿಂದ |

ʼಆಮೇಲೆ… ಆಮೇಲೇನಾಯ್ತು?ʼ

ʼಅವರು ತಮ್ಮ ಹೆಂಡತೀನ, ದತ್ತು ಪಡೆದ ಮಗಳನ್ನ ಬಿಟ್ಬಿಟ್ಟು ಹೋಗ್ಬಿಟ್ರು. ಆಮೇಲೇನಾಯ್ತು…?ʼ

ಆ ಕತೆ ಅಷ್ಟು ಆಸಕ್ತಿ ಹುಟ್ಟಿಸುತ್ತೆ ಅಂತ ನಾನು ಊಹಿಸಿರಲಿಲ್ಲ. ಕೆಲವು ಗೆಳೆಯರು ಕುತೂಹಲಗೊಂಡು ಫೋನು ಮಾಡಿ ಕೇಳಿದ್ರು, ಮೆಸೇಜ್‌ ಕಳಿಸಿದ್ರು… 

…ಮುಂದೆ?

ಚುಟುಕಾಗಿ ಹೇಳುವುದಾದರೆ, ಆ ಪ್ರಕರಣವನ್ನ ಕೂಲಂಕಷವಾಗಿ ಪರಿಶೀಲಿಸಿ ಬಾ ಅಂತ ಮಾತೃಛಾಯಾದ ಮ್ಯಾನೇಜರ್‌ ಪದ್ಮಾ ಸುಬ್ಬಯ್ಯನವರು ನನ್ನನ್ನು ಮೈಸೂರಿಗೆ ಕಳುಹಿಸಿದರು. ಪ್ರಕರಣದ ಎಳೆ ಹಿಡಿದುಕೊಂಡು ಮೈಸೂರು, ಶಿವಮೊಗ್ಗ ಎಂದೆಲ್ಲಾ ಓಡಾಡಿ ನಾನು ನನ್ನ ವರದಿ ಸಿದ್ಧ ಮಾಡಿದೆ. ಅದರ ಒಟ್ಟು ವಿಚಾರ: ‘ಈ ಪ್ರಕರಣದಲ್ಲಿ ಹಲವು ಸುಳ್ಳುಗಳ ಸುಳಿ ಇದೆ. ಮೊದಲನೆಯದಾಗಿ, ಆ ವ್ಯಕ್ತಿ ತನಗೆ ಮೊದಲೇ ಮದುವೆಯಾಗಿದ್ದು, ತನ್ನ ಮೊದಲ ಪತ್ನಿಗೆ ವಿಚ್ಛೇದನ ಕೊಟ್ಟಿರುವುದು, ಅವರಿಗೆ ಈ ಮೊದಲೇ ಒಬ್ಬ ಮಗಳಿರುವುದನ್ನು ಮರೆ ಮಾಚಿದ್ದರು. ಅವರಿಗೆ ಶಿಫಾರಸ್ಸು ಪತ್ರ ಕೊಟ್ಟಿದ್ದ ಕೆಲವು ಗಣ್ಯ ವ್ಯಕ್ತಿಗಳು, ಪ್ರಖ್ಯಾತ ಸಾಹಿತಿಗಳು ಕೂಡಾ ಈ ಸುಳ್ಳಿನಲ್ಲಿ ಪಾಲು ಹೊಂದಿದ್ದಾರೆ. ಆ ವ್ಯಕ್ತಿಗೆ ಮಕ್ಕಳಾಗುವ ಶಕ್ತಿ ಇಲ್ಲ ಎಂದು ಕೊಟ್ಟಿದ್ದ ವೈದ್ಯಕೀಯ ವರದಿ ಕೂಡಾ ಖೋಟಾ ವರದಿ. ಅವರಿಗೆ ದತ್ತು ನೀಡುವಾಗ ನಡೆಸಿದ ಗೃಹ ತನಿಖೆಯಲ್ಲಿ ಹಲವು ಲೋಪಗಳಿವೆ.

‘ದತ್ತು ತೆಗೆದುಕೊಂಡ ಮೇಲೂ ಆ ವ್ಯಕ್ತಿ ಎರಡನೆ ಹೆಂಡತಿ ಮತ್ತು ಮಗುವನ್ನು ಸೂಕ್ತ ರೀತಿಯಲ್ಲಿ ಗಮನಿಸಿಲ್ಲ ಮತ್ತು ಅವರ ನಿರ್ವಹಣೆಗೆ ಯಾವುದೇ ರೀತಿಯಲ್ಲೂ ಸಹಕರಿಸುವ ಪ್ರಯತ್ನ ನಡೆಸಿಲ್ಲ. ಅಂದರೆ ಆತ ಮಕ್ಕಳ ಹಿತದೃಷ್ಟಿಯನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಆತ ತನ್ನ ವಿಚ್ಛೇದಿತ ಮೊದಲ ಹೆಂಡತಿಯೊಡನೆ ಇರುವುದು ವಾಸ್ತವ’. 

ಈ ಹಂತದಲ್ಲಿ ಮಾತೃ ಛಾಯಾ ಕಾನೂನು ಕ್ರಮ ಕೈಗೊಳ್ಳುವ ಕುರಿತು ಆಂತರಿಕವಾಗಿ ಮಾತನಾಡಿತು. ವಾಸ್ತವವಾಗಿ ಇದೊಂದು ಮೋಸದ ದತ್ತು ಆಗಿರುವುದರಿಂದ ‘ಮಗುʼವನ್ನು ಆ ದಂಪತಿಗಳಿಂದ ಕಾನೂನಿನಂತೆ ಹಿಂದಕ್ಕೆ ತೆಗೆದುಕೊಳ್ಳಬೇಕು, ಸುಳ್ಳು ಹೇಳಿ ಮಗುವನ್ನು ಪಡೆದಿರುವುದರಿಂದ ಆ ವ್ಯಕ್ತಿಯ ಮೇಲೆ ಪ್ರಕರಣ ಹೂಡಿ ಶಿಕ್ಷೆ ಕೊಡಿಸಬೇಕು. 

ಆದರೆ ಆ ವ್ಯಕ್ತಿಯ ಎರಡನೇ ಹೆಂಡತಿ ತಾನು ಅವುಗಳಿಗೆ ಒಪ್ಪುವುದಿಲ್ಲ, ತನ್ನ ಮಗಳಿಗೆ ಮತ್ತು ತನಗೆ ಅವರಿಂದ ಜೀವನ ನಿರ್ವಹಣೆಗೆ ನೆರವು ಕೊಡಿಸಿದರೆ ಸಾಕು ಎಂದರು. ತಾನು ತನ್ನ ದತ್ತು ಮಗುವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಆಕೆ ಹಠ ಹಿಡಿದರು. ಸರ್ಕಾರಕ್ಕೂ ಇಡೀ ಪ್ರಕರಣ ಕುರಿತು ಮಾಹಿತಿ ಕೊಡಲಾಯಿತು. ಆದರೆ  ಕಾನೂನು ಕ್ರಮ ಹಿಂದೆ ಬಿದ್ದಿತು. 

ಆ ಪ್ರಶ್ನಿತ ವ್ಯಕ್ತಿಯ ಎರಡನೆ ಹೆಂಡತಿಯ ಊರಿನ ಕಡೆಯವರು, ಪ್ರಸಿದ್ಧರು, ಸಾಹಿತಿಗಳು ಸೇರಿ ರಾಜಿ ಸಂಧಾನ ನಡೆಸಿದರು ಎಂಬ ಮಾಹಿತಿ ಬಂದಿತು. ಅವರವರ ಮಧ್ಯೆ ಏನೇನೋ ಕೊಡು ಕೊಳ್ಳುವಿಕೆ, ಹಿಂದೆ ಮುಂದೆ ಸುಮಾರು ವರ್ಷಕ್ಕೂ ಹೆಚ್ಚು ಕಾಲ ಜಗ್ಗಾಡಿತು ಎಂದು ತಿಳಿಯಿತು.  ಅಷ್ಟು ಹೊತ್ತಿಗೆ ನಾನು ಪ್ರಕರಣದಿಂದ ಹಿಂದೆ ಸರಿದಿದ್ದೆ. ನನ್ನ ಸಮಾಜಕಾರ್ಯ ಶಿಕ್ಷಣ ಮುಗಿದು ನಾನು ವೃತ್ತಿ ಜೀವನದಲ್ಲಿ ಮುಂದುವರೆದೆ. 

ಮಕ್ಕಳು ದೊಡ್ಡವರಾದರು. ಅವರದೇ ಕುಟುಂಬಗಳನ್ನು ಮಾಡಿಕೊಂಡು ಬೆಳೆದರು ಎಂದು ಪದ್ಮಾ ಸುಬ್ಬಯ್ಯನವರಿಂದ ಮುಂದಿನೊಂದು ಭೇಟಿಯಲ್ಲಿ ತಿಳಿಯಿತು. ಮಾತೃಛಾಯಾದಿಂದ ನಿವೃತ್ತರಾದ ಪದ್ಮಾ ಸುಬ್ಬಯ್ಯನವರು ನಂತರ ಕೆಲವು ವರ್ಷಗಳಲ್ಲಿ ನಿಧನರಾದರು. ಅದಕ್ಕೆ ಕೆಲವೇ ವರ್ಷಗಳ ಹಿಂದೆ ಅವರು ದತ್ತು ಪ್ರಕ್ರಿಯೆಯಲ್ಲಿನ ನಲಿವು, ನೋವು, ಏಳುಬೀಳುಗಳು, ರೋಚಕ ವಿಚಾರಗಳೇ ಮೊದಲಾದವುಗಳನ್ನು ಇಟ್ಟುಕೊಂಡು ‘ಮಡಲಿಗೊಂದು ಮಗುʼ ಎಂಬ ಹೆಸರಿನಲ್ಲಿ ದತ್ತು ಪಡೆಯುವವರಿಗೊಂದು ಕೈಪಿಡಿಯಂತಹ ಪುಸ್ತಕ ಪ್ರಕಟಿಸಿದ್ದರು. 

ಕಾಲ ಸಾಗಿತು.

ಕೆಲ ವರ್ಷಗಳ ಹಿಂದೆ ಇದ್ದಕ್ಕಿದ್ದ ಹಾಗೆ ಈ ಪ್ರಶ್ನಿತ ವ್ಯಕ್ತಿಯ ದತ್ತು ಪುತ್ರಿಯ ಕಡೆಯಿಂದ ಮತ್ತು ಇನ್ನೊಂದೆಡೆ ಮೊದಲ ಹೆಂಡತಿಯ ಕಡೆಯಿಂದ ನನ್ನ ಮೇಲೆ ದೂರವಾಣಿ ದಾಳಿಗಳಾಯಿತು. ಅವರಿಗೆ ಸಂಪರ್ಕ ಹೇಗೋ ಸಿಕ್ಕಿತ್ತು. ಸುದೀರ್ಘವಾದ ಮಾತುಗಳು. ವಿವಿಧ ಅಂಗವೈಫಲ್ಯತೆಯಿಂದ ಆಸ್ಪತ್ರೆಯಲ್ಲಿದ್ದ ಆ ವ್ಯಕ್ತಿಯ ಖರ್ಚುವೆಚ್ಚ ಭರಿಸುವುದು ಮತ್ತು ಅವರ ಆಸ್ತಿಪಾಲಿನ ನ್ಯಾಯಾನ್ಯಾಯಗಳ ಮಾತಿಗೆ ನಾನು ಕೇಳುಗ! ಇದೆಲ್ಲದರ ನಡುವೆ ಆ ಸಾಹಿತಿಗಳೂ ನಿಧನರಾದರು. ಅದರ ಆಚೀಚೆ ಎರಡನೇ ಹೆಂಡತಿಯೂ ನಿಧನರಾದರು ಎಂದು ಕೇಳಿಬಂತು. 

***

ಇದು ಸುಳ್ಳುಗಳ ಸರಪಣಿಯೊಳಗೆ ‘ದತ್ತು  ಎಂಬ ಮುತ್ತುʼ ಪೋಣಿಸ ಹೋದರೆ ಆಗುವ ಗೊಂದಲ, ಮನಸ್ತಾಪ, ಮನಃಕ್ಲೇಶಗಳ ಒಂದು ಚಿಕ್ಕ ಪ್ರತಿರೂಪವಷ್ಟೆ. ಎಲ್ಲವೂ ಹೀಗೇ ಆಗುತ್ತದೆ ಎಂದೇನಲ್ಲ. ದತ್ತು ಪಡೆದ ಮಕ್ಕಳು ಮತ್ತು ಅವರ ಕುಟುಂಬ ಚೆನ್ನಾಗಿ ಅಭಿವೃದ್ಧಿಯಾದ ಕತೆಗಳೂ ಇವೆ. ಹಾಗೆಯೇ ಸುಳ್ಳಿನ ಸೇತುವೆ ಹರಿದು ಬಿದ್ದದ್ದು, ಅಥವಾ ದತ್ತು ಬಂದ ಮಕ್ಕಳು ಮತ್ತು ಪೋಷಕರೊಡನೆ ಹೊಂದಾಣಿಕೆಯಾಗದೆ ಸಂಬಂಧಗಳು ಮೂರಾಬಟ್ಟೆಯಾದ ಕತೆಗಳೂ ಇವೆ. 

ಇಂತಹದರ ಜೊತೆಯಲ್ಲಿ ಕೆಲವರು ತಾವು ಮಕ್ಕಳನ್ನು ದತ್ತು ಪಡೆದದ್ದನ್ನು ಎಲ್ಲೆಡೆ ಜಾಹೀರು ಮಾಡುವುದು ಉಂಟು. ʼನಿಮಗೆ ಗೊತ್ತಾ ಇವನು ನನ್ನ ದತ್ತು ಪುತ್ರ. ಇವನೇʼ. ಅವನೇನು ಬಹಮಾನದ ಟ್ರೋಫಿಯೇನು? ಬೆಳೆದಂತೆ ಆ ಬಾಲಕ ದತ್ತು  ಎಂಬ ಶಬ್ದ ಕಿವಿಗೆ ಬಿದ್ದರೇನೇ ಅಸಹ್ಯ ಪಟ್ಟುಕೊಂಡರೆ ಏನೇನೂ ಆಶ್ಚರ್ಯವಿಲ್ಲ. ಮತ್ತೊಂದೆಡೆ ದತ್ತುವನ್ನು ಆದಷ್ಟೂ ರಹಸ್ಯ ಮಾಡುವುದು. ಗಂಡ ಹೆಂಡಿರೇ ತಾವು  ಪಡೆದಿರುವುದು ದತ್ತು  ಎಂದು ಪರಸ್ಪರರಿಗೇ ಗೊತ್ತಿಲ್ಲ ಎಂಬಂತೆ ವರ್ತಿಸುವುದು! ಅದಂತೂ ತೀರಾ ಅವಾಸ್ತವ. ದತ್ತು ಪಡೆಯುವ ಪ್ರಕ್ರಿಯೆಯಲ್ಲಿ ಒಂದು ಸ್ಪಷ್ಟ ತಿಳಿವಳಿಕೆ ನೀಡುವುದು ದತ್ತು ಎಂದಿಗೂ ಒಂದು ‘ರಹಸ್ಯʼ ಆಗಿರಬಾರದು ಎಂದು. ದತ್ತು ಪಡೆದಿರುವುದು ಕುಟುಂಬದ ಹತ್ತಿರದವರಿಗೆ ತಿಳಿದಿರಬೇಕು. ಕಾಲ ಕಳೆದಂತೆ ಮಗುವಿಗೂ ಕುಟುಂಬದವರಿಂದಲೇ (ತಾಯಿ ತಂದೆಯರಿಂದಲೇ) ತಾವು ದತ್ತು ಪಡೆದಿರುವ ವಿಚಾರ ಕ್ಲುಪ್ತವಾಗಿ ದತ್ತು ಪುತ್ರನಿಗೆ / ಪುತ್ರಿಗೆ ತಿಳಿದುಬರಬೇಕು. ಮಗು ಏನಾದರೂ ಪ್ರಶ್ನೆಗಳನ್ನು ಕೇಳಿದರೆ ಅವನ್ನು ನಿರ್ಲಕ್ಷಿಸದೆ ನಿಧಾನವಾಗಿ, ಸಮಾಧಾನವಾಗಿ ಉತ್ತರಿಸಬೇಕು.

ನನ್ನ ಮಾತೃಛಾಯಾದ ಕಾಲದಲ್ಲಿ ಹನ್ನೊಂದು ವರ್ಷದ ಗಂಡು ಮಗುವಿದ್ದ ಕೇಂದ್ರ ಸರ್ಕಾರದ ನೌಕರಿಯಲ್ಲಿದ್ದ ಕುಟುಂಬವನ್ನು ದತ್ತುವಿಗೆ ಅರ್ಹರೇ ಎಂದು ಗೃಹತನಿಖೆ ನಡೆಸಿ ವರದಿ ಕೊಟ್ಟಿದ್ದೆ. ವರದಿ ಒಪ್ಪಿಗೆಯಾಗಿ, ಅವರೊಂದಿಗೆ ವಿವರವಾದ ಆಪ್ತಸಮಾಲೋಚನೆಯಾಗಿ, ನಂತರ ಸುಮಾರು ಮೂರು ವರ್ಷದ ಹೆಣ್ಣು ಮಗುವನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಅವರೊಡನೆ ತೊಡಗಿದ್ದೆ. ಮಗುವಿನೊಡನೆ ಪೋಷಕರು ಸಮಯ ಕಳೆಯಲು ಅನುವು ಮಾಡಿಕೊಡುವುದು, ಮಗುವನ್ನು ಅವರ ಮನೆಗೆ ಭೇಟಿಗೆ, ನ್ಯಾಯಾಲಯದಲ್ಲಿ ದತ್ತು ಪಡೆಯಲು ಅವರಿಗೆ ಅನುಮತಿ ಪಡೆಯಲು ಮತ್ತು ಮಗುವಿನ ದತ್ತು ರಿಜಿಸ್ಟ್ರೇಷನ್ ಸಮಯದಲ್ಲೂ ಜೊತೆಯಲ್ಲಿದ್ದೆ. ಆಮೇಲೆ ನಾನು ಅಲ್ಲಿಂದ ಬೇರೆ ಕೆಲಸಕ್ಕೆ ಹೊರಟು ಹೋಗಿದ್ದೆ. 

ಬೆಂಗಳೂರಿನಲ್ಲಿ ಇನ್ನೂ ಒಂದೆರೆಡು ಕಡೆ ಉದ್ಯೋಗ ಮಾಡಿ, ನಂತರ ಅರಸೀಕೆರೆ ಸುತ್ತಿ ಮತ್ತೆ ಬೆಂಗಳೂರಿಗೆ ಬಂದು ನಾನು ಚೈಲ್ಡ್‌ ರಿಲೀಫ್‌ ಅಂಡ್‌ ಯೂ ಸಂಸ್ಥೆಯಲ್ಲಿ  ಕೆಲಸಕ್ಕೆ ಸೇರಿದೆ (೧೯೯೨). ಈ ಮಧ್ಯೆ ಮೂರು ವರ್ಷಗಳೇ ದಾಟಿದ್ದವು. ಒಮ್ಮೆ ಪದ್ಮಾ ಸುಬ್ಬಯ್ಯನವರಿಂದ ಕರೆ ಬಂದಿತು. ‘ಅದೇ ಆ ಕೇಸು, ಅವರಿನ್ನೂ ಮಗಳಿಗೆ ದತ್ತು ಬಗ್ಗೆ ಹೇಳಿಲ್ಲವಂತೆ, ಹೇಳಕ್ಕೆ ಆಗ್ತಿಲ್ಲವಂತೆ. ಸ್ವಲ್ಪ ಅವರ ಮನೆಗೆ ಹೋಗಿ ಮಾತನಾಡಿಕೊಂಡು ಬಾʼ. ಒಂದು ಸಂಜೆ ನಾನು ಕಛೇರಿಯಿಂದ ಮನೆಗೆ ಹಿಂದಿರುಗುವ ದಾರಿಯಲ್ಲಿ ದತ್ತು ಪಡೆದ ಕುಟುಂಬಕ್ಕೆ ಹೋಗಿ ಅವರನ್ನು ಭೇಟಿಯಾಗಿ, ಲೋಕಾಭಿರಾಮವಾಗಿ ಮಾತಿಗೆ ಮೊದಲಿಟ್ಟೆ. ಆ ಹುಡುಗಿಗೆ ನನ್ನ ನೆನಪಿರಲಿಲ್ಲ (ಅಥವಾ ಬೇಕಿರಲಿಲ್ಲವೋ!). ಮಗ ಗುರುತು ಹಿಡಿದು ಮಾತನಾಡಿಸಿದ. ಈ ತಾಯಿ ತಂದೆಯರು ಏನೋ ಆತಂಕದಲ್ಲಿ ಮಾತನಾಡಿದರು. ಸ್ವಲ್ಪ ಹೊತ್ತಾದ ಮೇಲೆ ಮಹಡಿಯಲ್ಲಿ ಕುಳಿತು ಮಾತನಾಡುವ ಎಂದು ಅಲ್ಲಿಗೆ ಹೋದೆವು. ಒಂದೇ ವಿಚಾರ, ಹೇಗೆ ಹೇಳುವುದು? 

ನನಗೆ ಹೇಳಿ ಗೊತ್ತಿಲ್ಲ, ಆದರೆ ಹೇಗೆ ಹೇಳ್ತಾರೆ ಅನ್ನೋದು ಕೇಳಿದ್ದೆ. ಹೇಳಿದೆ. ಅದೇ ದತ್ತು ಪೂರ್ವ ಆಪ್ತಸಮಾಲೋಚನೆಯಲ್ಲಿ ಹೇಳಿದ್ದೇ ಹೇಳಿದೆ. ಕೃಷ್ಣನ ಕತೆ, ಸೀತೆ ಕತೆ, ಕರ್ಣನ ಕತೆ ಮತ್ತು ಇಂದಿನ ದಿನಗಳಲ್ಲಿನ ಕೆಲವು ಜನಪದ ಕತೆಗಳನ್ನು ಹೇಳಿ ಅವು ಹೇಗೆ ಕುಟುಂಬದಲ್ಲಿ, ಸಮುದಾಯದಲ್ಲಿ ಒಪ್ಪಿತವಾಯ್ತು ಎಂದೆಲ್ಲಾ ತಂದು ಅವಳ ಕತೆಯೂ ಹಾಗೆ ಎಂದೂ, ಮಾತೃಛಾಯಾಕ್ಕೆ ನಾವು ವರ್ಷಕ್ಕೊಂದ್ಸರ್ತಿ ಹೋಗ್ತೀವಲ್ಲ, ಅಲ್ಲಿಂದ ನಿನ್ನನ್ನ ಕರೆದುಕೊಂಡು ಬಂದು … ಮುಂದೆ ಅವಳಿಗೆ ಅರ್ಥವಾಗುವಾಗುವಂತೆ ‘ದತ್ತುʼ ಕುರಿತು ಹೇಳಿ. ಮಾತು ಕತೆ ಮುಗಿಸಿ ನಾನು ಹಿಂದಕ್ಕೆ ಬಂದೆ. 

ಆಮೇಲೊಂದು ದಿನ ಪದ್ಮಾ ಸುಬ್ಬಯ್ಯನವರಿಂದ ಫೋನ್‌ ಬಂತು.ಅವರ ಧ್ವನಿಯಲ್ಲಿ ಏನೋ ವಿಶೇಷ ಸಂತಸ ! ‘ವಾಸು! ಏನು ಹೇಳ್ದೆ ಅವರಿಗೆ…ʼ  ನಾನು ಪಾಠ ಒಪ್ಪಿಸಿದೆ. ‘ಅಲ್ಲ. ಕೆಲಸ ಅಷ್ಟೊಂದು ಸುಲಭವಾಗಿ ಆಯ್ತಲ್ಲ, ಅದೇನು ಮಾಡಿದೆ?ʼ ನಾನೇನು ಮಾಡಿದೆ? ಏನು ಹೇಳಿದೆನೋ, ಏನು ಮಾಡಿದೆನೋ ಅದಕ್ಕೆ ಅಂತ:ಪ್ರೇರಣೆ ಒದಗಿದ್ದು  ಸದುದ್ದೇಶದಿಂದ ಅಷ್ಟೇ.

ಈ ದಂಪತಿಗಳು ಮಗಳೊಡನೆ ಅದೂ ಇದೂ ಮಾತನಾಡಿ ಮಗನನ್ನೂ ಸೇರಿಸಿಕೊಂಡು ಒಂದು ಪಾರ್ಟಿ ಮಾಡಿ ಕತೆ ಹೇಳಿ ವಿಷಯಕ್ಕೆ ಬಂದು ಅವಳನ್ನ ಮಾತೃಛಾಯಾದಿಂದ ಕರೆತಂದದ್ದು, ಅವರು ಈಗ ಅವಳಿಗೆ ಅಪ್ಪ ಅಮ್ಮ ಅಂದ್ರೆ ‘ದತ್ತುʼ ಎಂಬ ಪದ ಬಳಸದೆ ಸುತ್ತೀಬಳಸಿ ಅಂತೂ ಇಂತೂ ವಿಚಾರಕ್ಕೆ ಬಂದು ಹೇಳಿದರಂತೆ. ಆ ಮಗು ʼನನಗೆ ಗೊತ್ತುʼ ಅಂದ್ಬಿಡೋದೆ. ಹೇಗೆ ಗೊತ್ತು. ‘ಅಣ್ಣ ಮತ್ತೆ ಕಸಿನ್ಸ್‌ ಎಲ್ಲ ಹೇಳಿದ್ರುʼ ಎಂದಳಂತೆ ಖುಷಿಯಲ್ಲೇ.

ಆದರೆ ಎಲ್ಲ ದತ್ತು ಪ್ರಕರಣಗಳಲ್ಲಿ ಎಲ್ಲ ಮಕ್ಕಳೂ ಚಿಕ್ಕವಯಸ್ಸಿನಲ್ಲಿ ಹೀಗೆ ದತ್ತುವನ್ನು ಸುಲಭವಾಗಿ ಒಪ್ಪಿ ಬಿಡುತ್ತಾರೆ ಎನ್ನಲಾಗದು. ಕೆಲವು ಬಾರಿ ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡವರಾದ ಮೇಲೂ ಕೆಲವು ದತ್ತು ಮಕ್ಕಳು ತಮ್ಮ ಪೋಷಕರನ್ನು ಪರೀಕ್ಷಿಸುತ್ತಲೇ ಇರುತ್ತಾರೆ! ತನ್ನನ್ನು ಈ ಪೋಷಕರು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೋ ಇಲ್ಲವೋ… ಅದು ಮಾತಿನಲ್ಲಿ, ಕೆಲವೊಮ್ಮೆ ಒಪ್ಪಿತವಾಗದಿರಬಹುದಾದ (!) ನಡವಳಿಕೆಯಲ್ಲಿ, ಹಣಕಾಸು, ವಸ್ತುಗಳಿಗಾಗಿ ಬೇಡಿಕೆಯಿಡುವುದರಲ್ಲಿ, ತಿರಸ್ಕಾರ ಭಾವದಲ್ಲಿ, ಇವೇ ಮೊದಲಾದವುಗಳಲ್ಲಿ ವ್ಯಕ್ತವಾಗಬಹುದು. ಹಾಗೆಯೇ ಕೆಲವು ಪೋಷಕರೂ ಕೂಡಾ ದತ್ತು ಮಗು ತಮ್ಮನ್ನು ಒಪ್ಪಿಕೊಂಡಿದೆಯೇ ಎಂದು ಪರೀಕ್ಷಿಸಲು ಹೊರಟು ಬಿಡುತ್ತಾರೆ. ಇದಂತೂ ಸರ್ವಥಾ ಸರಿಯಲ್ಲ. 

ಹೆಣ್ಣುಮಗುವನ್ನು ದತ್ತು ಪಡೆದಿದ್ದ (ಫಾಸ್ಟರ್‌ ಕೇರ್‌) ಒಬ್ಬ ಅವಿವಾಹಿತ ಮಹಿಳೆ ಸ್ವಲ್ಪ ಬೆಳೆದ ಬಾಲಕಿಯನ್ನು ಭೇಟಿಯಾದ ಮೊದಲ ದಿನದಿಂದಲೇ ತನ್ನನ್ನು ‘ಅಮ್ಮʼ ಎನ್ನಬೇಕು ಎಂದು ಬೇಡಿಕೆ ಇಟ್ಟಿದ್ದರು. ಆಪ್ತಸಮಾಲೋಚನೆಯಲ್ಲಿ ಈ ಕುರಿತು ವಿವರಿಸಿ ತಿಳಿ ಹೇಳಲಾಗಿತ್ತು. ಆದರೇಕೋ ಏನೋ ಆ ಹುಡುಗಿ ಮನೆಗೆ ಹೋದ ಮೇಲೆ ಕೆಲ ಕಾಲದಲ್ಲಿ ‘ಅಮ್ಮʼ ಎನ್ನುವ ಬದಲು ಆಕೆಯ ಹೆಸರನ್ನು ಹಿಡಿದು ಕರೆದಳು ಎಂದು ಈ ತಾಯಿ ದೊಡ್ಡ ರಂಪ ಮಾಡಿಬಿಟ್ಟಿದ್ದರು. ಈ ಬಾಲಕಿ ಸಂಗೀತ ಕಲಿಯಬೇಕು, ನೃತ್ಯದಲ್ಲಿ ಪಾಲ್ಗೊಳ್ಳಬೇಕು, ಭಜನೆಯಲ್ಲಿ ತನ್ನೊಡನೆ ಕೂರಬೇಕು, ತನ್ನಂತೆಯೇ ಸಾತ್ವಿಕ ಆಹಾರ ತೆಗೆದುಕೊಳ್ಳಬೇಕು ಇನ್ನೂ ಏನೇನೋ ನಿರೀಕ್ಷೆ. ಪದ್ಮಾ ಸುಬ್ಬಯ್ಯನವರಿಗಂತೂ ದಿನ ಬೆಳಗಾದರೆ ಫೋನ್‌ ಮೇಲೆ ಫೋನ್‌ ದೂರುಗಳು. ನಾನೂ ಒಂದೆರಡು ದಿನ ಈ ತಾಯಿಯ ಮನೆಗೆ ಹೋಗಿ ಮಗುವಿನೊಡನೆ ಮಾತನಾಡಿ ಬಂದಿದ್ದೆ. ಕಾಲ ಕಳೆದಂತೆ ಆ ತಾಯಿ-ಮಗಳ ನಡುವೆ ಸಾಕಷ್ಟು ಕೋಪ, ತಾಪ, ಪ್ರೀತಿ, ಸಂಧಾನ, ಹೀಗೇ ಮುಂದುವರೆದು ಬಾಂಧವ್ಯ ಬೆಳೆಯಿತು. 

ಮಕ್ಕಳು ಮತ್ತು ದತ್ತು ಪೋಷಕರು, ಅವರ ಕುಟುಂಬದ ಇತರ ಸದಸ್ಯರು ಎಲ್ಲರೂ ಪರಸ್ಪರ ಸೊಗಸಾಗಿ ಒಪ್ಪಿಕೊಂಡ ಮತ್ತು ಬೆರೆತು ಹೋಗಿರುವ ಹಲವಾರು ಪ್ರಸಂಗಗಳನ್ನು ಹತ್ತಿರದಿಂದ ನೋಡಿದ್ದೇನೆ. ಅಂತಹ ಕುಟುಂಬಗಳಲ್ಲೂ ಒಮ್ಮೊಮ್ಮೆ ದತ್ತು ಕುರಿತು ಮಗುವಿಗೆ ಗೊತ್ತಿದೆಯಾ ಎಂಬ ಪ್ರಶ್ನೆ ಬಂದಾಗ ಚಿಕ್ಕ ಪ್ರಮಾಣದ ಬಿರುಗಾಳಿಗಳು ಎದ್ದಿದ್ದು ಸುಳ್ಳೇನಲ್ಲ. 

***

ದತ್ತು ಕುರಿತು ಸರ್ವೋಚ್ಚ ನ್ಯಾಯಾಲಯ ೧೯೮೪ರಲ್ಲಿ ನೀಡಿದ ತೀರ್ಪು ಮತ್ತು ನಿರ್ದೇಶನದಲ್ಲಿ ಭಾರತೀಯರಿಗೆ ದತ್ತು ನೀಡುವುದರಲ್ಲಿ ಆದ್ಯತೆ ನೀಡಬೇಕೆಂದು ದತ್ತು ಸಂಸ್ಥೆಗಳಿಗೆ ಸ್ಪಷ್ಟವಾಗಿಯೇ ತಾಕೀತು ಮಾಡಿತ್ತು. ಅದಕ್ಕಾಗಿ ಅಲಿಖಿತವೋ ಎಂಬಂತಹ ಸೂತ್ರವನ್ನೂ ನೀಡಿತು. ನೀವು ಮೊದಲು ಭಾರತದಲ್ಲಿರುವವರಿಗೆ ಮಕ್ಕಳನ್ನು ದತ್ತು ನೀಡಿ. ನೀವೆಷ್ಟು ಮಕ್ಕಳನ್ನು ದತ್ತು ನೀಡುವಿರೋ ಅದರ ಪ್ರಮಾಣದಲ್ಲಿ ವಿದೇಶೀಯರಿಗೆ ದತ್ತು ನೀಡಲು ಸಂಖ್ಯೆಗಳನ್ನು ನಿರ್ಧರಿಸೋಣ ಎಂದಿತು. ಇದರ ಪರಿಣಾಮವೋ ಎಂಬಂತೆ ಅದೆಷ್ಟೋ ಸಂಸ್ಥೆಗಳು ಮೊದಮೊದಲು ಏನೇನೋ ನೆಪಗಳನ್ನು  ಒಡ್ಡಿ ದತ್ತು ನಿರಾಕರಿಸಲು ಯತ್ನಿಸಿದರೂ, ಕಾಲಕ್ರಮೇಣ ಅನಿವಾರ್ಯವಾಗಿ ಸ್ವದೇಶೀಯ ಪೋಷಕರಿಗೆ ಮಕ್ಕಳನ್ನು ದತ್ತು ಕೊಡಲೇಬೇಕಾದ ಪರಿಸ್ಥಿತಿಗೆ ಒಗ್ಗಿಕೊಂಡವು. ಇಂತಹ ನಿರ್ದೇಶನಕ್ಕೆ ಮೊದಲು ಭಾರತೀಯರು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಮುಂದೆ ಬರುವುದೇ ಇಲ್ಲ ಎಂದು ನ್ಯಾಯಾಲಯದಲ್ಲಿ, ಸರ್ಕಾರದೆದುರು ಹೇಳಿಕೊಂಡಿದ್ದ ದೊಡ್ಡ ದೊಡ್ಡ ಹೆಸರಾಂತ  ಸಂಸ್ಥೆಗಳಿಗೂ ಈಗ ಭಾರತೀಯ ಕುಟುಂಬಗಳು ಸಿಗತೊಡಗಿದವು! 

ಭಾರತೀಯ ದತ್ತು ಪ್ರಮಾಣ ಏರತೊಡಗಿತು. ದತ್ತು ಪೋಷಕರ ಸಂಘಗಳು ಮತ್ತು ದತ್ತು ಕುರಿತು ಪ್ರಚಾರ ಮತ್ತು ಆ ಕುರಿತು ಸಭೆಗಳಲ್ಲಿ ಮಾತನಾಡಿದ ನನ್ನ ಪಾಲೂ ಇದರಲ್ಲಿ ಇತ್ತು ಎನ್ನುವುದು ನನ್ನ ಮನಸ್ಸಿಗೆ  ಸಮಾಧಾನ ತರುವ  ಹೆಮ್ಮೆಯ ಸಂಗತಿ. 

ಮಾತೃಛಾಯಾದಲ್ಲಿ ಇದ್ದ ಸಮಯದಲ್ಲಿ (೧೯೮೯-೯೦) ದತ್ತು ಅಪೇಕ್ಷಿಸುವವರೊಂದಿಗೆ ಆಪ್ತ ಸಮಾಲೋಚನೆ, ಗೃಹತನಿಖೆ ಮಾಡುವುದೇ ಅಲ್ಲದೆ, ತಮಗೆ ಮಕ್ಕಳು ಬೇಡ ಎಂದು ಬಿಟ್ಟುಬಿಡಲು ಬಂದವರೊಡನೆಯೂ ಮಾತನಾಡುವ ಪ್ರಸಂಗಗಳು ಒದಗಿ ಬಂದಿತ್ತು. ಎಲ್ಲೋ ಯಾರೋ ಮಗುವನ್ನು ಬಿಟ್ಟು ಹೋಗಿದ್ದಾಗ ಪೊಲೀಸರ ಮೂಲಕ ಬಂದ ಮಕ್ಕಳನ್ನು ಬರ ಮಾಡಿಕೊಂಡು, ಅಥವಾ ಆಸ್ಪತ್ರೆಗಳಿಂದ ಮಕ್ಕಳನ್ನು ಕರೆತಂದು ನಂತರ ಆ ಮಗು ಸಿಕ್ಕ ಸ್ಥಳದಲ್ಲಿ ಓಡಾಡಿ ಮಗುವಿನ ಪೋಷಕರ ಬಗ್ಗೆ ಏನಾದರೂ ಮಾಹಿತಿ ಸಿಗುತ್ತದೆಯೇ ಎಂದು ಪರಿಶೀಲಿಸುವುದು ಕೂಡಾ ಆಗುತ್ತಿತ್ತು.

ಕಾರಣ, ಅಂತಹ ಮಕ್ಕಳನ್ನು ಕುರಿತು ಒಂದು ಕಡತ ಇಡಬೇಕಿದ್ದು, ಅದರಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾಹಿತಿಗಳನ್ನು ದಾಖಲಿಸಲೇಬೇಕಿತ್ತು (ಮಗು ಎಲ್ಲಿ ಸಿಕ್ಕಿತು, ಯಾರು ಮೊದಲು ನೋಡಿದ್ದು, ಆ ಮಗುವಿನೊಡನೆ ಇದ್ದ ವಸ್ತುಗಳು, ಹಾಕಿಕೊಂಡಿದ್ದ ಬಟ್ಟೆ, ಆಗಿನ ಛಾಯಾಚಿತ್ರ, ಇತ್ಯಾದಿ). ಮಗು ದತ್ತು ಹೋಗಲು ಅರ್ಹವೇ ಎಂದು ನಿರ್ಧರಿಸುವಾಗ ನ್ಯಾಯಾಲಯದಲ್ಲೂ ಇವನ್ನೆಲ್ಲಾ ಹೇಳಬೇಕಿತ್ತು. ಅಕಸ್ಮಾತ್‌ ಮುಂದೊಂದು ದಿನ ಮಗು ಬಂದು ತನ್ನ ಮೂಲ ನೆಲೆಗಳನ್ನು ಪರಿಶೀಲಿಸಲು ಇಷ್ಟಪಟ್ಟರೆ ಇವೆಲ್ಲಾ ಇರಲೇಬೇಕು. (ಇಂತಹ ಕತೆಗಳನ್ನು ನೀವು ಪತ್ರಿಕೆಗಳಲ್ಲಿ ಓದಿರುತ್ತೀರಿ. ʼಮೂಲನೆಲೆ ಹುಡುಕಿಕೊಂಡು ಜರ್ಮನಿಯಿಂದ ಬಂದ ಬಾಲಕʼ ಇತ್ಯಾದಿ).

ತಾವೇ ಬಂದು ಮಗು ಬೇಡ ಎಂದು ಬಿಟ್ಟು ಹೋಗುವವರಿಗೆ ಬಹಳ ಮುಖ್ಯವಾಗಿ ನೀಡುವ ಆಪ್ತ ಸಮಾಲೋಚನೆಯಲ್ಲಿ ಒಂದು ವಿಚಾರ ಇರಲೇಬೇಕಿತ್ತು. ಅದು, ‘ನೀವು ಅಪೇಕ್ಷಿಸಿದರೆ ೬೦ ದಿನಗಳಲ್ಲಿ ಮತ್ತೆ ಹಿಂದೆ ಬಂದು ಮಗುವನ್ನು ಪಡೆಯಬಹುದು. ಅದಕ್ಕಾಗಿ ಯಾವುದೇ ಪ್ರಶ್ನೆಯನ್ನು ಕೇಳಲಾಗುವುದಿಲ್ಲ’. ವಿವಿಧ ಕಾರಣಗಳಿಂದಾಗಿ ಮಗುವನ್ನು ಬಿಟ್ಟು ಬಿಡಲು ನಿರ್ಧರಿಸುವ ದಂಪತಿಗಳು ಅಥವಾ ವ್ಯಕ್ತಿಗಳು (ಸಾಮಾನ್ಯವಾಗಿ ತಾಯಿ / ಅವಿವಾಹಿತ ಮಹಿಳೆಯರು / ಮೋಸದಿಂದಲೋ, ಲೈಂಗಿಕ ದೌರ್ಜನ್ಯದಿಂದಲೋ, ಅತ್ಯಾಚಾರಕ್ಕೊಳಗಾಗಿಯೋ ಗರ್ಭ ಧರಿಸಿದವರು) ಹಿಂದೆ ಬಂದು ಮಕ್ಕಳನ್ನು ಒಯ್ದದ್ದು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. 

***

ದತ್ತು ನೀಡುವ ಸಂಸ್ಥೆಗಳಿಗೆ ʼದತ್ತುʼ, ಲಾಭ ತರುವ ಕೆಲಸ/ವ್ಯಾಪಾರವಾಗಬಾರದು ಎಂದು ಒಂದು ಸ್ಪಷ್ಟ ನಿರ್ದೇಶನವಿದೆ. ಸಂಸ್ಥೆ ಮಕ್ಕಳನ್ನು, ಅನಾಥ ಮಕ್ಕಳನ್ನು ಕಾಪಿಡುವ ಕೆಲಸ ಮಾಡುತ್ತಿದೆ, ಅಲ್ಲಿ ಪ್ರಾಸಂಗಿಕವಾಗಿ ದತ್ತು ಕಾರ್ಯಕ್ರಮವಿರುತ್ತದೆ. ಹೀಗಾಗಿ ನಾವು ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇವೆ, ದತ್ತು ನೀಡಲು ಬೇಕಾದ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ, ವೈದ್ಯಕೀಯ ನೆರವು ನೀಡಿ, ಪೌಷ್ಟಿಕ ಆಹಾರ ಕೊಟ್ಟು ಸಾಕಿದ್ದೇವೆ, ಮಕ್ಕಳನ್ನು ನೋಡಿಕೊಳ್ಳಲು ಜನರನ್ನು ಇಟ್ಟಿದ್ದೇವೆ, ಹೀಗಾಗಿ ದತ್ತು ಪಡೆಯುವವರು ದೊಡ್ಡ ಮೊತ್ತದ ಹಣ ಕೊಡಬೇಕು ಎಂದು ಸಂಸ್ಥೆಗಳು ಬೇಡಿಕೆ ಇಡುವುದು ‘ತಪ್ಪಷ್ಟೇ ಅಲ್ಲ  ಅದು ಅಪರಾಧʼ. ವಿದೇಶೀ ದತ್ತು ವ್ಯಾಪಾರದಲ್ಲಿದ್ದು ಲಾಭ ಬಾಚಿಕೊಳ್ಳುತ್ತಿದ್ದ ಅನೇಕ ಸೇವಾ (?) ಸಂಸ್ಥೆಗಳ ಸೊಂಟ ಮುರಿದಿದ್ದು ಸರ್ವೋಚ್ಚ ನ್ಯಾಲಯದ(೧೯೮೪) ಇದೇ ತೀರ್ಪು. ಕಾಲಕ್ರಮೇಣ ಹಣದ ಹಿಂದೆ ಬಿದ್ದಿದ್ದ ಅದೆಷ್ಟೋ ಕೇವಲ ‘ದತ್ತು’ ಸಂಸ್ಥೆಗಳು ಮುಚ್ಚಿಹೋದವು.

ಮೊದಮೊದಲು ಹಿಂದೂ ದತ್ತು ಕಾಯಿದೆ ಮತ್ತು ಮಕ್ಕಳು ಮತ್ತು ಪೋಷಕರ ಕಾಯಿದೆಯಲ್ಲಿ ಮಾತ್ರ ಮಕ್ಕಳನ್ನು ದತ್ತು ಮತ್ತು ಫಾಸ್ಟರ್‌ ಕೇರ್‌ನಲ್ಲಿ ಕುಟುಂಬಗಳಿಗೆ ಬರ ಮಾಡಿಕೊಳ್ಳಲು ಅವಕಾಶವಿತ್ತು. ಅದರಲ್ಲಿ ಒಂದಷ್ಟು ನ್ಯೂನತೆಗಳಿದ್ದವು. ಈಗ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆಯಲ್ಲಿ ‘ದತ್ತುʼವನ್ನು ವಿಶೇಷವಾಗಿ ಪರಿಗಣಿಸಿ, ಪೋಷಣೆ ಮತ್ತು ರಕ್ಷಣೆ ಆವಶ್ಯಕತೆಯಿರುವ ‘ಅನಾಥʼ ಮಕ್ಕಳಿಗೆ ‘ದತ್ತು ಒಂದು ಶಾಶ್ವತ ಪುನರ್ವಸತಿʼ ಕ್ರಮ ಎಂದು ಗುರುತಿಸಲಾಗಿದೆ. ಅದರ ಪರಿಣಾಮ, ಯಾವುದೇ ಭಾರತೀಯರು (ದಂಪತಿಗಳು ಮತ್ತು ವಿಚ್ಛೇದಿತರು, ಮದುವೆಯಾಗದವರು) ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಸಾಧ್ಯವಾಗಿದೆ (ಅವಿವಾಹಿತ ಪುರುಷರಿಗೆ ಹೆಣ್ಣುಮಕ್ಕಳನ್ನು ದತ್ತು ಕೊಡುವುದಿಲ್ಲ ಎಂಬುದೊಂದು ಹೊರತುಪಡಿಸಿ). 

ಪ್ರತಿ ಜಿಲ್ಲೆಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗಳು ವಿವಿಧ ಮಕ್ಕಳ ಆರೈಕೆ ಸಂಸ್ಥೆಗಳಲ್ಲಿರುವ ಮಕ್ಕಳ ಪರಿಸ್ಥಿತಿಗಳನ್ನು ಗಮನಿಸಿ ಅವರು ದತ್ತು ಹೋಗಲು ಅರ್ಹರೇ ಎಂದು ನಿರ್ಧರಿಸುತ್ತವೆ. ಅಂತಹ ಮಕ್ಕಳ ಮಾಹಿತಿಯನ್ನು ಕೇಂದ್ರ ಸರ್ಕಾರದ ಕಾರಾ (CARA-Central Adoption Resource Authority) ದ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗುತ್ತದೆ. ಭಾರತದ ಯಾವುದೇ ಮೂಲೆಯಲ್ಲಿರುವ ಅರ್ಹ ವ್ಯಕ್ತಿ / ದಂಪತಿಗಳು ಕಾರಾದ ಮೂಲಕವೇ ದತ್ತುವಿಗಾಗಿ ಅರ್ಜಿ ಸಲ್ಲಿಸಿ, ಅಲ್ಲಿರುವ ಮಾಹಿತಿ ಆಧರಿಸಿಯೇ ಮಕ್ಕಳು ಮತ್ತು ಭಾವೀ ಪೋಷಕರನ್ನು ಹೊಂದಿಸುವ ಕೆಲಸ ಮಾಡಲಾಗುತ್ತದೆ. ವಿದೇಶೀಯರು ಈ ಮಾರ್ಗದಲ್ಲೇ ದತ್ತು ಅಪೇಕ್ಷಿಸಿ ಬರಬೇಕು. ಸದ್ಯದಲ್ಲಿ ಇಂತಹ ದತ್ತು ಪ್ರಕ್ರಿಯೆ ಸಾಕಷ್ಟು ಪಾರದರ್ಶಕವಾಗಿದ್ದು, ಮಗು ಹಾಗೂ ಪೋಷಕರ ಗೌಪ್ಯತೆಯನ್ನು ಕಾಪಿಟ್ಟುಕೊಂಡೇ ಮಗುವಿನ ಹಿತದೃಷ್ಟಿಯಿಂದ ದತ್ತು ಪ್ರಕ್ರಿಯೆಗಳು ನಡೆಯಲು ಸಹಕಾರಿಯಾಗಿದೆ. ವಿವರಗಳಿಗೆ ಕಾರಾದ ಅಂತರ್ಜಾಲವನ್ನು ನೋಡಿ. http://cara.nic.in/ 

***

ಅಂತಾರಾಷ್ಟ್ರೀಯ ದತ್ತು ಕುರಿತು ವಿಶ್ವಸಂ‍ಸ್ಥೆಯು ೨೯ ಮೇ ೧೯೯೩ರಲ್ಲಿ ಹೇಗ್‌ನಲ್ಲಿ ಒಂದು ಒಡಂಬಡಿಕೆ/ಒಪ್ಪಂದವನ್ನು ಹೊರಡಿಸಿತು. ಅದು ಮುಖ್ಯವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದತ್ತು ಪ್ರಕ್ರಿಯೆಗಳನ್ನು ಸುಗಮಗೊಳಿಸುವ ಕುರಿತು ರಾಷ್ಟ್ರಗಳ ನಡುವೆ ಒಪ್ಪಂದಗಳಾಗಬೇಕು, ಇಂತಹ ಸಂದರ್ಭಗಳಲ್ಲಿ ಮಕ್ಕಳ ಹಕ್ಕುಗಳನ್ನು ಮತ್ತು ಅವರ ಕುಟುಂಬಗಳನ್ನು ರಕ್ಷಿಸಬೇಕು ಎಂಬುದಾಗಿತ್ತು. ಇದಕ್ಕೆ ಮುಖ್ಯ ಕಾರಣ ದತ್ತು ಹೆಸರಿನಲ್ಲಿ ಮಕ್ಕಳ ಕಳ್ಳತನ, ಕೊಂಡುಕೊಳ್ಳುವುದು, ಮಾರುವುದು, ವಾಮಮಾರ್ಗದಲ್ಲಿ ಮಕ್ಕಳನ್ನು ದೇಶವಿದೇಶಗಳಲ್ಲಿ ಸಾಗಿಸುವುದು ಮತ್ತು ದತ್ತು ಕುರಿತು ಸರಿಯಾದ ಮಾರ್ಗದರ್ಶನಗಳು, ನೀತಿ ನಿಯಮಗಳು ಇವ್ಯಾವೂ ಇಲ್ಲದೆ ಮಕ್ಕಳನ್ನು ಕಳುಹಿಸುವುದು ಅಥವಾ ಬರಮಾಡಿಕೊಳ್ಳುವುದನ್ನು ತಡೆಯುವುದೇ ಆಗಿದೆ. 

ಇಷ್ಟಾದರೂ ದೇಶದೊಳಗೆ ಮತ್ತು ಹೊರಗೆ ದತ್ತು ಒಂದು ದೊಡ್ಡ ಅಪಚಾರದ ದಂಧೆಯೇ ಆಗಿದೆ. ಈಗಲೂ ಮಕ್ಕಳನ್ನು ವಿವಿಧ ರೂಪಗಳಲ್ಲಿ ಕದಿಯುವುದು, ಕೊಳ್ಳುವುದು, ಮಾರುವುದು ನಡೆಯುತ್ತಿದೆ. ಇಂತಹ ಕೆಲವು ಪ್ರಕರಣಗಳು ಈಗ ನ್ಯಾಯಾಲಯಗಳಲ್ಲಿವೆ. ಇದರಲ್ಲಿ ವೈದ್ಯರು, ದಾದಿಯರು, ವಕೀಲರು, ಮಕ್ಕಳ ಸಂಸ್ಥೆಗಳು, ಮಕ್ಕಳನ್ನು ಕದಿಯುವುದೇ ವೃತ್ತಿ ಮಾಡಿಕೊಂಡಿರುವವರು ಎಲ್ಲರೂ ಶಾಮೀಲಾಗಿದ್ದಾರೆ. ಮಕ್ಕಳನ್ನು ಕದ್ದು ದತ್ತು ಹೆಸರಿನಲ್ಲಿ ಕೈ ಕೈ ಬದಲಾಯಿಸಿ, ಎಲ್ಲ ಕಾಗದ ಪತ್ರಗಳನ್ನು ಸಿದ್ಧಪಡಿಸಿ, ನ್ಯಾಯಾಲಯದ ಒಪ್ಪಿಗೆಯನ್ನೂ ಪಡೆದು, ರಿಜಿಸ್ಟರ್‌ ಮಾಡಿಸಿದ ಮೇಲೆ ಸಿಕ್ಕಿ ಹಾಕಿಕೊಂಡಾಗ, ಮಕ್ಕಳು ಮತ್ತು ದತ್ತು ಪೋಷಕರ ನಡುವೆ ಬಾಂಧವ್ಯ ಬೆಳೆದಿದೆ ಹೀಗಾಗಿ ದತ್ತು ಕಳ್ಳತನವಾದರೂ ಪರವಾಗಿಲ್ಲ, ಆಪಾದಿತರನ್ನು ಬಿಟ್ಟುಕೊಡಿ ಎಂದು ದಾವೆ ಹೂಡುವ ವಕೀಲರು… ಎಲ್ಲರೂ ಈ ಸುಳ್ಳುಗಳ ಸರಪಳಿಯಲ್ಲಿ ಭಾಗಿಗಳೇ.    

***

ಕೋವಿಡ್‌ ವ್ಯಾಪಿಸಿದ ರೀತಿ ಮತ್ತು ಕೋವಿಡ್‌ಗೆ ಬಲಿಯಾದ ವಯಸ್ಕರ ಸಂಖ್ಯೆಯನ್ನು ಗಮನಿಸಿದಾಗ ದೊಡ್ಡ ಪ್ರಮಾಣದಲ್ಲಿ ಮಕ್ಕಳು ಅನಾಥರಾಗುವ ಸಾಧ್ಯತೆ ಎದ್ದು ಕಾಣುತ್ತಿದೆ. ಸರ್ಕಾರದ ವರದಿಯಂತೆ ಇಡೀ ಭಾರತದಲ್ಲಿ ಕೆಲವು ಸಾವಿರ ಮಕ್ಕಳು ಮಾತ್ರ ಅನಾಥರು. (ಈ ಸಂಖ್ಯೆ ಇನ್ನೂ ಹೆಚ್ಚು ಇರಬಹುದು ಎಂದು ಕಾಣುತ್ತಿದೆ.) ಈ ಸಂಖ್ಯೆ ೧೮ ವರ್ಷದೊಳಗಿನ ಎಲ್ಲ ಮಕ್ಕಳನ್ನು ಒಳಗೊಂಡಿದೆ. ಹಾಗೆಂದು ಈ ಎಲ್ಲ ಮಕ್ಕಳು ದತ್ತುವಿಗೆ ಲಭ್ಯವಿರುತ್ತಾರೆ ಎನ್ನುವ ತಪ್ಪು ಕಲ್ಪನೆ ಎದ್ದಿದೆ.

ಸಾಮಾನ್ಯವಾಗಿ ಚಿಕ್ಕ ವಯಸ್ಸಿನ ಮಕ್ಕಳು ಅತೀವ್ರವಾದ ಸಂಕಷ್ಟಕ್ಕೆ ಈಡಾಗುವ ಸಾಧ್ಯತೆಯಿರುವುದರಿಂದ ಅಂತಹ ಮಕ್ಕಳನ್ನು ಸರ್ಕಾರದ ಒಪ್ಪಿತ ವಿಧಿವಿಧಾನಗಳ ಮೂಲಕ ಮಾತ್ರ ದತ್ತುವಿಗೆ ಅರ್ಹರು ಎಂದು ಹೇಳಲಾಗುತ್ತದೆ. ಯಾವುದೇ ಸಂಘಸಂ‍ಸ್ಥೆಗಳು, ಮಠ ಮಂದಿರಗಳು ತಾವು ಈ ಎಲ್ಲ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುತ್ತೇವೆ ಎಂದು ಹೇಳುವುದು, ಜಾಹೀರಾತು ಹೊರಡಿಸುವುದು ಮತ್ತು ಅದಕ್ಕಾಗಿ ದೇಣಿಗೆ ಸಂಗ್ರಹಿಸುವುದು ಕಾನೂನು ಬಾಹಿರವಾಗಿದೆ. 

ಕಳೆದ ಮಾರ್ಚ್‌ ತಿಂಗಳಿಂದ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿರುವ ನಾವು ಅನೇಕ ಕಾರ್ಯಕರ್ತರರು ಮಕ್ಕಳ ಹಿತದೃಷ್ಟಿಯಿಂದ ನಡೆಸಿರುವ ಹಲವಾರು ಚರ್ಚೆಗಳಲ್ಲಿ, ಕೈಗೊಳ್ಳುತ್ತಿರುವ ಕ್ರಮಗಳಲ್ಲಿ ಅನಾಥ ಮತ್ತು ಅರೆ-ಅನಾಥ ಮಕ್ಕಳನ್ನು ಗುರುತಿಸುವುದು ಮತ್ತು ಅವರಿಗೆ ಸೌಲಭ್ಯಗಳನ್ನು, ಸಹಕಾರವನ್ನು ಕೊಡುವುದು ನಡೆದಿದೆ. ಈಗಾಗಲೇ ಸರ್ಕಾರವು ಹೇಳಿರುವಂತೆ ಪೋಷಕರನ್ನು ಕಳೆದುಕೊಂಡ ಬಹುತೇಕ ಮಕ್ಕಳು ತಮ್ಮ ತಮ್ಮ ಕುಟುಂಬದ ಇತರ ಸದಸ್ಯರ ಆ‍ಶ್ರಯದಲ್ಲಿ ಇದ್ದಾರೆ. ಹಾಗೆ  ನೋಡಿಕೊಳ್ಳಲಾಗುವ  ಮಕ್ಕಳಿಗಾಗಿ ಸರ್ಕಾರ ನೆರವಿನ ಭರವಸೆಯನ್ನು ನೀಡಿದೆ. ನ್ಯಾಯಾಲಯವೂ ಈ ವಿಚಾರವನ್ನು ತನ್ನ ಪ್ರಜ್ಞೆಗೆ ತೆಗೆದುಕೊಂಡು ಕೋವಿಡ್‌ನಿಂದಾಗಿ ಅನಾಥರಾದ ಯಾವುದೇ ಮಗುವಿಗೆ ಅನ್ಯಾಯವಾಗಬಾರದು, ದತ್ತು ಹೆಸರಿನಲ್ಲಿ ಮೋಸಗಳಾಗಬಾರದು, ಹಣಕಾಸಿನ ಅನೈತಿಕ ವ್ಯವಹಾರಗಳಾಗಬಾರದು ಎಂದು ಕಟ್ಟುನಿಟ್ಟಾದ ನಿರ್ದೇಶನ ನೀಡಿದೆ. 

***

ಇಷ್ಟು ಹೇಳಿದ ಮೇಲೆ ಒಂದು ಪ್ರಕರಣ ಹೇಳಲೇಬೇಕು. ನನ್ನ ಮಕ್ಕಳ ಹಕ್ಕುಗಳ ಕ್ಷೇತ್ರದ ಕೆಲಸಗಳನ್ನು ಗುರುತಿಸಿ ೨೦೦೪ರ ನವೆಂಬರ್‌ ತಿಂಗಳಲ್ಲಿ ಕರ್ನಾಟಕ ಸರ್ಕಾರವು ‘ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿʼಯನ್ನು ನನಗೆ ನೀಡಿತು. ಅದೇ ತಿಂಗಳು ಒಬ್ಬಾತ ನಮ್ಮ ಕಛೇರಿಗೆ ಬಂದರು. ‘ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿʼ ಸಿಗಲು ನಾನೇನು ಮಾಡಿದ್ದೇನೆ ಎಂದು ಕೇಳಿದರು. ನಾನು ನನ್ನ ಮಕ್ಕಳ ಹಕ್ಕುಗಳ ಸಂಶೋಧನೆ, ತರಬೇತಿ, ಬರಹ, ಪ್ರಕಟನೆ, ಸಾಮಗ್ರಿಗಳ ತಯ್ಯಾರಿ, ವಕೀಲಿ ಇತ್ಯಾದಿ ಕೆಲಸಗಳ ಬಗ್ಗೆ ಹೇಳಿ, ಇದು ಸರ್ಕಾರದಲ್ಲಿರುವ ಅಧಿಕಾರಿಗಳ ಗಮನಕ್ಕೆ ಬಂದಿರಬೇಕು, ಹೀಗಾಗಿ ನನ್ನನ್ನುಗುರುತಿಸಿದ್ದಾರೆ ಎಂದೆ. ಆತ ತಾನೂ ಸಮಾಜಸೇವೆಯಲ್ಲಿರುವುದಾಗಿಯೂ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಂಡಿರುವುದಾಗಿಯೂ ಹೇಳಿ, ತನಗೂ ಪ್ರಶಸ್ತಿ ಕೊಡಿಸಲೇಬೇಕೆಂದು ದುಂಬಾಲು ಬಿದ್ದರು. ಆತ ಮತ್ತೆ ಮತ್ತೆ ಹೇಳುತ್ತಿದ್ದುದು, “ಮಕ್ಕಳಿಲ್ಲದ ತಾನು ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೊಂದು ಬಾಳು ಕೊಟ್ಟಿದ್ದೇನೆ” ಎಂದು.

ಇದು ನೇರವಾಗಿ ಇಂತಹದೊಂದು ಪ್ರಶಸ್ತಿಗೆ ಅರ್ಹವಾಗದಿರಬಹುದು, ಆದರೆ ಮುಂದೊಂದು ದಿನ ದತ್ತು ಕುರಿತು ಅವರೊಂದು ವಿಶೇಷ ಅಲೆಯನ್ನು ಸೃಷ್ಟಿಸಿದರೆ, ದತ್ತು ಕುರಿತು ಧನಾತ್ಮಕವಾದ ಚಿಂತನೆಗಳನ್ನು ಉದ್ದೀಪಿಸಲು ನೆರವಾದರೆ ಸರ್ಕಾರವೇ ಅವರನ್ನು ಗುರುತಿಸಬಹುದು ಎಂದು ನಾನು ಆಗ ಬಂದಾತನಿಗೆ ಹೇಳಿದ್ದೆ. ಸುಮಾರು ಐದಾರು ವರ್ಷಗಳ ನಂತರ ಆತ ಮತ್ತೆ ಬಂದರು. ಅದೇಕೋ ಏನೋ ತನಗೆ ಪ್ರಶಸ್ತಿ ಏನೂ ಬೇಡ. ಈ ಮಕ್ಕಳಿಂದ ಬಿಡುಗಡೆ ಸಿಕ್ಕರೆ ಸಾಕು ಎಂಬಂತೆ ಮಾತನಾಡಿದರು. ಆತನ ಮತ್ತು ಮಕ್ಕಳ ಅನುಭವ ಹಲವು ಗೋಜಲುಗಳಲ್ಲಿ ಸಿಲುಕಿತ್ತು. ಅವರಿಗೆ ಆಪ್ತಸಮಾಲೋಚನೆಯ ಸಂಪರ್ಕ ಏರ್ಪಡಿಸಿದೆವು. ನಿಧಾನವಾಗಿ ಆತನ ಗೊಂದಲದ ಪರಿಸ್ಥಿತಿ ತಿಳಿಯಾಯಿತು ಎಂದು ಕೇಳಿಪಟ್ಟೆ. 

ದತ್ತು ಸದಾಕಾಲಕ್ಕೂ ಮಕ್ಕಳ ಹಿತದೃಷ್ಟಿಯಿಂದಲೇ ಆದಲ್ಲಿ ಅಂತಹ ಸಂಬಂಧ ಗಟ್ಟಿಯಾಗುತ್ತಾ ಹೋಗುತ್ತದೆ. ಆಗಿನ ದಿನಗಳಲ್ಲಿ ಮಾತೃಛಾಯಾದ ಪದ್ಮಾ ಸುಬ್ಬಯ್ಯನವರು ಹೇಳುತ್ತಿದ್ದ ಮಾತು ‘ದತ್ತು ಎಂದರೆ ಪೋಷಕರಿಲ್ಲದ ಮಕ್ಕಳಿಗೆ ಸೂಕ್ತ ಪೋಷಕರನ್ನು ಒದಗಿಸುವುದಾಗಿದೆ’. ಇದಕ್ಕೆ ಸಾರ್ವಕಾಲಿಕ ಅರ್ಥವಿದೆ.

‍ಲೇಖಕರು Admin

June 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: