ತಮ್ಮಣ್ಣ ಬೀಗಾರ ಓದಿದ – ಅಜ್ಜಿ ಅಂದ್ರ ಹೆಂಗಿರ್ತಾಳ…

ಮಂಡಕ್ಕಿ ಉಂಡಿ ತಂದೀನಲ್ಲ…

ತಮ್ಮಣ್ಣ ಬೀಗಾರ


ಮಕ್ಕಳ ಲೋಕದಲ್ಲಿ ತೊಡಗಿಕೊಳ್ಳುವುದು, ವಿಸ್ತರಿಸಿಕೊಳ್ಳುವುದು ಎಂದರೆ ಮಕ್ಕಳಾಗುವುದು. ಮಕ್ಕಳಾಗದೇ ಮಕ್ಕಳ ಲೋಕದ ಬೆಳಕು ಕಾಣದು, ಅಲ್ಲಿಯ ಸಂತಸ ನಮ್ಮದಾಗದು. ಅದು ಒಂದು ಧ್ಯಾನವಾಗಿ ಸಿದ್ಧಿ ಸಿಗದು. ಹಾಗಾಗಿಯೇ ಮಕ್ಕಳಿಗಾಗಿ ಬರಹ ಬರೆಯಬೇಕೆಂದರೆ ಮಕ್ಕಳ ಲೋಕದ ಪ್ರೀತಿಯ ಜೊತೆಗೆ ಮಕ್ಕಳ ಮುಗ್ಧತೆ ಹಾಗೂ ವಿಸ್ಮಯಕ್ಕೆಲ್ಲಾ ತೆರೆದುಕೊಳ್ಳುವ ಉದ್ದೀಪಕತೆ ನಮ್ಮಲ್ಲಿ ಇರಬೇಕಾಗುತ್ತದೆ. ಅದಕ್ಕಾಗಿ ಮಕ್ಕಳ ಬರಹದ ಯಶಸ್ಸು ಎಲ್ಲರಿಗೂ ಸಿದ್ಧಿಸದು. ಮಕ್ಕಳಿಗಾಗಿ ಸತತ ಯೋಚಿಸುವ ಮನಸ್ಸು ಮತ್ತು ಪ್ರೀತಿ ಬಹು ಮುಖ್ಯ.
ಇಲ್ಲಿ ಬರೆಯುವವರೆಲ್ಲ ಹೆಚ್ಚಾಗಿ ಮೊದಲು ಪದ್ಯವನ್ನೇ ಬರೆಯಲು ತೊಡಗುತ್ತಾರೆ.

ಪ್ರತಿವರ್ಷ ಹತ್ತಾರು ಮಕ್ಕಳ ಪದ್ಯ ಪುಸ್ತಕಗಳು ಪ್ರಕಟವಾಗುತ್ತವೆ. ಆದರೆ ಅವೆಲ್ಲ ಮಕ್ಕಳು ಮತ್ತೆ ಮತ್ತೆ ಗುನುಗುನಿಸಬಹುದಾದ, ಅವರ ಕಲ್ಪನಾ ಲೋಕ ವಿಸ್ತರಿಸುವ, ಅವರ ಖುಷಿ ಹಿಗ್ಗಿಸುವ ಪುಸ್ತಕಗಳಾಗಿ ಯಶಸ್ಸು ಪಡೆಯುವವು ಕಡಿಮೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದಿಷ್ಟು ಯುವಕರು ಪ್ರೀತಿಯಿಂದ ತೊಡಗಿಕೊಂಡಿದ್ದಾರೆ. ಅವರ ಪದ್ಯಗಳು ಮಕ್ಕಳ ಸಾಹಿತ್ಯಕ್ಕೆ ಇನ್ನಷ್ಟು ಹೊಸತನ್ನು ತುಂಬುವ ಆಕರ್ಷಕ ನಡೆಯದಾಗಿವೆ ಎನ್ನುವುದು ಖುಷಿಯ ಸಂಗತಿ.

ವಿನಾಯಕ ಕಮತದ ಅಂಥಹ ಯುವಕರಲ್ಲೊಬ್ಬರು. ಇವರು ನನ್ನ ಕಿರಿಯ ಸ್ನೇಹಿತರು. ಮಕ್ಕಳ ಸಾಹಿತ್ಯದ ಕುರಿತಾಗಿ ಅವಿರತ ಕೆಲಸ ಮಾಡುತ್ತಿರುವ ಆನಂದ ಪಾಟೀಲರು ಮಕ್ಕಳ ಸಾಹಿತ್ಯದ ಹೊಸ ಪುಸ್ತಕಗಳನ್ನು ಅವಲೋಕಿಸುತ್ತ ಇರುತ್ತಾರೆ. ಸತ್ವಯುತವಾದುದು ಗಮನಕ್ಕೆ ಬಂದರೆ ಎತ್ತಿ ಬರೆಯುತ್ತಾರೆ. ವಿನಾಯಕ ಅವರ ‘ಚಂದಮಾಮನ ಮಗಳು’ ಪುಸ್ತಕದ ಕುರಿತು ಬರೆದಿದ್ದರು. ಅದನ್ನು ನಾನು ಓದಿ ಸಂತಸ ಪಟ್ಟಿದ್ದೆ. ನಂತರ ಸಂಧ್ಯಾ ವೇದಿಕೆಯ ಮೂಲಕ ಹೆಚ್ಚು ಸಂಪರ್ಕಕ್ಕೆ ದೊರೆತು ಆತ್ಮೀಯತೆ ಬೆಳೆಯಿತು.

ವಿನಾಯಕ ಮಕ್ಕಳ ಮೆಚ್ಚಿನ ಶಿಕ್ಷಕ. ಅವರಲ್ಲಿಯ ಮಕ್ಕಳ ಕುರಿತಾದ ಅದಮ್ಯ ಪ್ರೀತಿ ಹಾಗೂ ಪ್ರತಿಭೆಯಿಂದಾಗಿ ಈಗಾಗಲೇ ಎರಡು ಯಶಸ್ವೀ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಇರಲಿ ಸದ್ಯ ಅವರು ಹೊರ ತಂದಿರುವ ‘ಅಜ್ಜಿ ಅಂದ್ರ ಹೆಂಗಿರ್ತಾಳ?’ ಸಂಕಲನ ಸುಭಾಷಿಣಿ ಪ್ರಕಾಶನದ ಮೂಲಕ ಹೊರತಂದಿದ್ದಾರೆ. ಅಜ್ಜಿ ಅಂದ್ರ ಹೆಂಗಿರ್ತಾಳ ಪುಸ್ತಕ ಓದಿ ಖುಷಿಪಟ್ಟು ಬರೆದಿದ್ದೇನೆ.

ಪಟ ಪಟ ಹಾರುವ ಹನಿಯೇ
ರಪ ರಪ ಮಳೆಯ ಸುರಿಯೆ
ಇಳೆಯ… ಒಳಗೆ ಇಳಿದು
ಹಸಿರ ಕೊಡೆಯ ಹಿಡಿಯೇ
ಮಳೆಯ ಕುರಿತು, ಚಂದ್ರನ ಕುರಿತು, ಚಿಕ್ಕಿಗಳ ಕುರಿತು ಎಲ್ಲ ಬರೆಯದ ಮಕ್ಕಳ ಕವಿಗಳೇ ಇಲ್ಲ ಅನಿಸುತ್ತದೆ. ಆದರೆ ಇವೆಲ್ಲ ಮತ್ತೆ ಮತ್ತೆ ಬರುವ ವಸ್ತುಗಳೇ ಆದರೂ ಅದನ್ನು ಇಡುವ ರೀತಿ ಕಟ್ಟಿಕೊಡುವ ಸಂಭ್ರಮವೆಲ್ಲ ನಮ್ಮನ್ನು ಹೊಸತಿನ ಉಣಿಸಿಗೆ ಕೊಂಡೊಯ್ಯುತ್ತವೆ. ಮೇಲಿನ ಪದ್ಯದಲ್ಲಿ ‘ಇಳೆಯ ಒಳಗೆ ಇಳಿದು/ ಹಸಿರ ಕೊಡೆಯ ಹಿಡಿಯೇ’ ಎನ್ನುವ ಸಾಲು ಮನಸ್ಸಿಗೆ ಇಳಿದು ತಂಪಿನ ಹಂದರವನ್ನು ನಮಗೆ ನೀಡುತ್ತದೆ. ಇದೇ ಪದ್ಯದಲ್ಲಿ ‘ಗುಡಿಸಿಲಿನ ಗುಡಿದೇವ/ ಬಿಸಿಲಿಗೆ ಬಂದನು ಬಾರೆ’ ಎನ್ನುವಲ್ಲಿ ಪದ್ಯದ ಸೊಬಗಿಗೆ ತೊಂದರೆಯಾಗದಂತೆ ಮಕ್ಕಳ ಭಾವ ವಿಸ್ತಾರಕ್ಕೂ ಹೆಚ್ಚು ಕಾಳಜಿ ವಹಿಸಿರುವುದು ಕಂಡುಬರುತ್ತದೆ. ಮಳೆಯ ಕುರಿತಾದ ಇನ್ನೊಂದು ಪದ್ಯದಲ್ಲಿ ‘ಮಿಂಚೆ ಮಿಂಚೆ ಕೋಲ್ಮಿಂಚೆ/ ಬಾ ನಮ್ಮೂರಿಗೂ ಚೂರು ಮಳೆ ಹಂಚಿ’ ಎನ್ನುವ ಸಾಲುಗಳು ಗೆಲುವಾಗಿವೆ.

ಪುಸ್ತಕದ ಶೀರ್ಷಿಕೆಯ ‘ಅಜ್ಜಿ ಅಂದ್ರ ಹೆಂಗಿರ್ತಾಳ?’ ಪದ್ಯದಲ್ಲಿ ‘ಚಂದಮಾಮನ ಕಥೆಯ ಹೇಳಿ / ಉಣಿಸ್ತಾ ಇರ್ತಾಳ’ ‘ಬೆಳ್ಳಿ ಚುಕ್ಕಿ ಕೂಡಾ ಎದ್ದು/ ಹಾಡ್ತಾ ಇರ್ತಾಳ’ ‘ಕುಟ್ಟೋ ಪದ ಬೀಸೋ ಪದ/ ಕಟ್ತಾ ಇರ್ತಾಳ’ ಎನ್ನುವ ಸಾಲುಗಳಲ್ಲೆಲ್ಲ ಮಕ್ಕಳು ಅಜ್ಜಿಯನ್ನು ಬೆರಗುಣ್ಣಿನಿಂದ ಅವಳ ಕ್ರಿಯೆಯ ಮೂಲಕ ಗುರುತಿಸುವ ಸಹಜತೆ ಇದೆ. ‘ಚಂದಾ ಚಂದಾ ಕಥೆಯಲ್ಲೆಲ್ಲ/ ಅಜ್ಜಿ ಇರರ್ತಾಳ’ ಎನ್ನುವ ಮಗು ಅಜ್ಜಿಯನ್ನು ಎಷ್ಟು ಪ್ರೀತಿಸುತ್ತದೆ ಅಂದರೆ ಅಜ್ಜಿಯನ್ನೇ ತಾನು ಎತ್ತಿಕೊಳ್ಳುತ್ತೇನೆ ಎಂದೆಲ್ಲ ಹೇಳುತ್ತದೆ. ಅಪ್ಪ ಅಮ್ಮ ಬರುವ ವರೆಗೂ ಬರೆಯುತ್ತಾ ಇರುತ್ತೇನೆ. ಅವರು ಬಂದ ಕೂಡಲೇ ಅಜ್ಜಿಯನ್ನು ನಮ್ಮ ಮನೆಗೆ ಕರೆದುಕೊಂಡು ಬರೋಣ ಎಂದು ಹೇಳುವೆ ಅನ್ನುತ್ತದೆ. ಇಲ್ಲಿ ಮಕ್ಕಳ ಹಿರಿಯರ ಸಂಬAಧದ ಆಪ್ತತೆಯನ್ನು ತಾನಾಗಿ ಮೂಡುವಂತೆ ಮಾಡಿದ್ದಾರೆ.

ವಿನಾಯಕ ಅವರು ಕವಿ ಮಾತ್ರ ಅಲ್ಲ. ಅವರು ಹಾಡುಗಾರರೂ ಹೌದು. ಅವರು ಆಗಾಗ ಹಾಡುತ್ತ… ಗುನುಗುನಿಸುತ್ತ ತೇಲುವ ಸಂಭ್ರಮದಲ್ಲಿ ಇರುತ್ತಾರೆ. ಹಾಗಾಗಿಯೇ ಇರಬೇಕು ಅವರಿಗೆ ಮಕ್ಕಳಂತೆ ಆಕಾಶ, ಚಂದ್ರ, ನಕ್ಷತ್ರ ಮುಂತಾದವುಗಳೆಲ್ಲ ಬಹಳ ಆಪ್ತ. ಅವರು ಹೆಚ್ಚು ಸಾರಿ ನಮ್ಮನ್ನು ಬಾನಿನ ವಿಸ್ತಾರಕ್ಕೆ, ಚಂದ್ರನ ತಂಪಿಗೆ, ಚಿಕ್ಕಿಗಳ ಹೊಳಪಿಗೆಲ್ಲ ಕೊಂಡೊಯ್ಯುತ್ತಾರೆ.

ಈ ಸಂಕಲನದ ಹಲವು ಪದ್ಯಗಳು ಚಂದ್ರ, ಆಕಾಶ, ನಕ್ಷತ್ರ ಮುಂತಾದವುಗಳ ಪ್ರಸ್ತಾಪ ಇರುವವೇ ಆಗಿವೆ. ‘ಚಂದಪ್ಪ’ ಪದ್ಯದಲ್ಲಿ ಮಗು ‘ಚಾಪೆ ಕೋಟೆಯ ಮನೆ ನಂದಪ್ಪ/ ನಿನಗೇನಿದೆಯೋ ಹೇಳಪ್ಪ?’ ಎಂದು ಚಂದ್ರನಿಗೆ ಆಪ್ತವಾಗಿ ಪ್ರಶ್ನಿಸುತ್ತ ಹೋಗುವುದಿದೆ. ‘ಬೆಳೆದಿಂಗಳಂಗಿ’ ಪದ್ಯದಲ್ಲಿ ‘ಹಕ್ಕಿ ಗುಬ್ಬಿ ಹಾರುತಾವೆ ನೋಡು ಮಾಮ/ ನಿನಗೆ ಎಂಥ ರೆಕ್ಕೆ ಉಂಟು ತೋರು ಮಾಮ’ ಎನ್ನುತ್ತ ಹಕ್ಕಿಗಳು ಹಾರುವುದನ್ನು ನೋಡಿ ಬೆರಗಾಗುವ ಮಗು ಚಂದ್ರನೂ ಆಕಾಶದಲ್ಲಿ ಸಂಚರಿಸಲು ರೆಕ್ಕೆ ಹೊಂದಿದ್ದಾನಯೇ ಎಂಬ ಕುತೂಹಲಕ್ಕಿಳಿಯುವುದು ಇದೆ.

ಮಕ್ಕಳಿಗೆ ಚಂದ್ರನನ್ನು ತೋರಿಸಿ ನಿನ್ನ ಸಂಗಡ ಆಡಲು ಬರುತ್ತಾನೆಂದೋ, ಊಟಮಾಡಲು ಬರುತ್ತಾನೆಂದೋ, ನಿನ್ನನ್ನು ನೋಡಿ ನಗುತ್ತಾನೆಂದೋ ಹೇಳುವುದು ಹಳ್ಳಿಯಲ್ಲಿ ತಾಯಂದಿರಿಗೆ ಈಗಲೂ ರೂಢಿ ಇದೆ. ಆದರೆ ಚಂದಮಾಮ ಆಡಲು, ಉಣ್ಣಲು ಬಾರದೇ ಇದ್ದಾಗ ಸಹಜವಾಗಿಯೇ ನಿರಾಶೆ ಆಗುತ್ತದೆ. ಆಗ ಮಗು ‘ಅಮ್ಮಾ ಕೂಡಾ ತುತ್ತು ಹಿಡಿದು/ ಕರೆಯತ್ತಿದ್ಳು ನಿನ್ನನ್ನು/ ಬರಲೇ ಇಲ್ಲ ನೀನ್ಯಾಕೆ/ ನಿನ್ನ ಚಾಳಿ ನನಗ್ಯಾಕೆ?’ ಎಂದು ಪ್ರಶ್ನಿಸುವುದು ಸಹಜವಾಗಿದೆ.

‘ಪಾತರಗಿತ್ತಿಯ ರೆಕ್ಕೆಯು ರೇಷಿಮೆ/ ಮುಟ್ಟಲೇ ಬಾರದು ತಮ್ಮ’ ಎಂದು ಹೇಳುತ್ತ ನಮ್ಮ ಸುತ್ತಲಿನ ಪರಿಸರದ ವಿವಿಧ ಕೀಟ ಪಕ್ಷಿಗಳು ಮುಂತಾದ ಸುಂದರ ಜೀವಿಗಳನ್ನು ನೋಡಿ ಆನಂದಿಸಬೇಕೇ ವಿನಹ ಮುಟ್ಟಬಾರದು ಎಂಬ ವಿವೇಕ ಹೇಳಿದರೆ ‘ಮಕ್ಕಳ ರೈಲು ಓಡುತಲಿದ್ದರೆ/ ಮುದುಕರು… ಹತ್ಬೇಕು’ ಎನ್ನುತ್ತ ಬಾಲ್ಯ ಹಾಗೂ ವೃದ್ಧಾಪ್ಯಕ್ಕಿರುವ ಸಾಮ್ಯತೆ ಸಂಬಂಧಗಳನ್ನು ಹೇಳುತ್ತಾರೆ. ‘ಕಾಲ ಬಂತು ಕಾಲ/ ಕಾಲು ಇಲ್ಲದ ಕಾಲ’ ಎನ್ನುವಲ್ಲಿ ಕಾಲು ಇಲ್ಲದಿದ್ದರೂ ಕಾಲ ಕಳೆದುಹೋಗುವಿಕೆಯ ಬೆರಗು ಕವಿಗೆ ತನ್ಮೂಲಕ ಮಕ್ಕಳಿಗೆ ಉಂಟಾಗುವುದು ಇದೆ.
ದಾರದ ಉಂಡೆ, ಸೊಳ್ಳೆ, ಗಾಡಿ, ಅಂಬಾ ಮುಂತಾದ ಮಕ್ಕಳ ಸುತ್ತಲಿನ ವಿವಿಧ ವಸ್ತುಗಳನ್ನು ಬಳಸಿ ಮಕ್ಕಳಿಗೆ ಪ್ರಿಯವಾಗುವಂತೆ ಪದ್ಯ ಹೆಣೆದಿದ್ದಾರೆ. ಸಂಕಲನದ ಉದ್ದಕ್ಕೂ ಮಕ್ಕಳಿಗೆ, ನಮಗೆ ಆಪ್ತವಾಗುವ ಕವಿತೆಗಳಿವೆ.

ತಮ್ಮ ಆಡು ಭಾಷೆಯನ್ನೇ ಬಳಸಿ ಪದ್ಯ ರಚಿಸಿರುವುದು ಸಹಜತೆಯ ಮೆರಗು ಹೆಚ್ಚಿಸಿ ಖುಷಿ ನೀಡುತ್ತದೆ. ಮಕ್ಕಳ ಜಗತ್ತಿನಲ್ಲಿ ಸುಲಭವಾಗಿ ಓಡಾಡುವ ಕೌಶಲ ಗಳಿಸಿಕೊಂಡಿರುವ ವಿನಾಯಕ ಅಲ್ಲೆಲ್ಲ ಓಡಾಡಿ ಮಕ್ಕಳಿಗೆ ಹಾಗೂ ಎಲ್ಲರಿಗೆ ಸವಿಯಾಗುವ ತಿನಿಸನ್ನು ತಯಾರಿಸಿ ಕೊಟ್ಟಿದ್ದಾರೆ.

ಬಾಗಿಲ ಮರಿಗೆ ನಿಂತೋರ ಯಾರು?
ಬಾಲಾ ಇಲ್ಲದ ಮಂಗ್ಯಾ ಏನು?
ಮಂಡಕ್ಕಿ ಉಂಡಿ ತಂದೀನಲ್ಲ
ಕೇಳದಿದ್ರ ಕೊಟ್ಟೇನೇನು! ಎಂದು ಹೇಳುತ್ತ ವಿನಾಯಕ ಅವರು ರುಚಿಯಾದ ಉಂಡಿ ಹಂಚಲು ಹೊರಟಿದ್ದಾರೆ. ಅದನ್ನು ಕೇಳಿ ಪಡೆದು ನಾವೆಲ್ಲ ಸವಿಯನ್ನು ಸವಿಯೋಣ ಮಕ್ಕಳಿಗೂ ಹಂಚೋಣ ಎನ್ನುತ್ತ ಅವರ ಕಾವ್ಯ ಪ್ರೀತಿಯಲ್ಲಿ ಇನ್ನಷ್ಟು ಹೊಸತಿನ ಉಣಿಸುಗಳು ಬರುತ್ತಿರಲೆಂದು ಆಶಿಸುತ್ತೇನೆ. ಕನ್ನಡದ ಹಿರಿಯರು ಮಕ್ಕಳು ಎಲ್ಲ ಓದಬೇಕಾದ ಈ ಪುಸ್ತಕ ಕೊಂಡು ಓದಿ ವಿನಾಯಕರನ್ನು ಪ್ರೋತ್ಸಾಹಿಸೋಣ ಎನ್ನುತ್ತ ಆಕರ್ಷಕ ಪುಸ್ತಕ ನೀಡಿದ ಡಾ.ವಿನಾಯಕ ಕಮತದ ಅವರಿಗೆ ಹಾಗೂ ತಮಗೆಲ್ಲ ವಂದಿಸುತ್ತೇನೆ.

‍ಲೇಖಕರು Admin

October 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: