ತಮ್ಮಣ್ಣ ಬೀಗಾರರ ಸಮಗ್ರ ಸಾಹಿತ್ಯ ಒಂದು ಅವಲೋಕನ…

ಭಾಗೀರಥಿ ಹೆಗಡೆ

ತಮ್ಮಣ್ಣ ಬೀಗಾರರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆದದ್ದಲ್ಲದೆ ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ಅಪೂರ್ವವಾದದ್ದು. ಅವರು ನಮ್ಮ ನಾಡಿನ ಹೆಮ್ಮೆ. ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಹೊಸತನ್ನು ನೀಡಿದವರಲ್ಲಿ ಇವರೂ ಒಬ್ಬರು. ಕವಿತೆ, ಕಥೆ, ಲಲಿತ ಬರಹ, ಕಾದಂಬರಿ, ಚಿತ್ರ ಪುಸ್ತಕ ಹೀಗೆ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಇಪ್ಪತ್ತೇಳಕ್ಕೂ ಅಧಿಕ ಪುಸ್ತಕ ಬರೆದು ಸಾಧನೆ ಮಾಡಿದ್ದಾರೆ. ತಮ್ಮಣ್ಣ ಬೀಗಾರರ ಸಮಗ್ರ ಸಾಹಿತ್ಯದ ಒಂದು ಪಕ್ಷಿ ನೋಟವನ್ನು ಮಾತ್ರ ಇಲ್ಲಿ ನೀಡಲು ಪ್ರಯತ್ನಿಸಿದ್ದೇನೆ.

ಇಲ್ಲಿ ನಾನು ಒಬ್ಬ ಪ್ರಾಮಾಣಿಕ ಓದುಗನಾಗಿ ನನಗೆ ಅನಿಸಿದ ಅನಿಸಿಕೆಗಳನ್ನು ತಮ್ಮ ಮುಂದೆ ಹಂಚಿಕೊಂಡಿದ್ದೇನೆ. ತಮ್ಮಣ್ಣ ಬೀಗಾರರು ಚಿತ್ರಕಲಾವಿದರೂ ಆಗಿದ್ದು ಅವರ ಕೆಲ ಪುಸ್ತಕಗಳಿಗೆ ಅವರೇ ಚಿತ್ರ ಬರೆದಿದ್ದು ಖುಷಿ ನೀಡುತ್ತದೆ.

ಕನ್ನಡದ ಮಕ್ಕಳ ಸಾಹಿತ್ಯದಲ್ಲಿ ಕವನಗಳನ್ನು ಬರೆಯುವವರೇ ಹೆಚ್ಚು. ಆದರೆ ಬೀಗಾರರು ಕವನ ಹಾಗೂ ಗದ್ಯ ಎರಡೂ ಪ್ರಕಾರಗಳಲ್ಲಿ ಸಾಕಷ್ಟು ಬರೆದಿದ್ದಾರೆ. ಈಗ ಅವರ ಪದ್ಯಗಳನ್ನು ಮೊದಲು ಅವಲೋಕಿಸೊಣ. ಬೀಗಾರರ ಮೊದಲ ಕವನ ಸಂಕಲನ “ಗುಬ್ಬಚ್ಚಿ ಗೂಡಿನಿಂದ” ಹಿಡಿದು ಇತ್ತೀಚಿನ ಕವನ ಸಂಕಲನ, “ಹಾಡಿನ ಹಕ್ಕಿಯ” ವರೆಗೆ ಎಂಟು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಒಂದು ಶಿಶುಪ್ರಾಸ ಪುಸ್ತಕ. ಈ ಎಲ್ಲ ಪುಸ್ತಕಗಳನ್ನು ನಾನು ಓದಿದ್ದೇನೆ. ಕನ್ನಡ ಜಾನಪದದಲ್ಲಿ ಶಿಶುಪ್ರಾಸದ ಪರಂಪರೆಯೇ ಇದೆ. ಆಯಾ ಪ್ರದೇಶಗಳಿಗನುಗುಣವಾಗಿ ಈ ಪ್ರಾಸಗಳು ವಿಭಿನ್ನತೆಯನ್ನು ಹೊಂದಿವೆ. ಇಲ್ಲಿ ಬೀಗಾರರು ಕೂಡ ತಮ್ಮ ಪರಿಸರದ ಸುತ್ತಲಿನ ಸಂಗತಿಯನ್ನು ಪ್ರಾಸದಲ್ಲಿ ಬಂಧಿಸಿದ್ದಾರೆ. “ ಮಿಂಚಿನ ಮರಿ” ಎನ್ನುವ ಶಿಶುಪ್ರಾಸ ಸಂಕಲನದಲ್ಲಿ
“ಕೋಳಿ ಮರಿ ಕೋಳಿ ಮರಿ
ಸಿಕ್ಕಿತೇನು ಊಟ ?
ಲಕ್ಕಿ ನೀನು ಇಲ್ಲ ನಿಂಗೆ
ಪಾಠ ಎನ್ನೋ ಕಾಟ”
ಎಂದು ಹೇಳಿದ್ದಾರೆ. ನಿಜ. ಮಕ್ಕಳಿಗೆ ಮೊದ ಮೊದಲು ಪಾಠ ಎನ್ನುವುದು ಕಾಟನೇ ಆಗಿರುತ್ತದೆ. ಕ್ರಮೇಣ ಅವರು ಬೆಳೆದಂತೆ ಶಾಲೆ, ಗೆಳೆಯರು, ಶಿಕ್ಷಕರು ಎಲ್ಲಾ ಅಭ್ಯಾಸವಾಗಿ ಆಪ್ತವಾಗುತ್ತ ಹೋಗುತ್ತದೆ.

ಇವರ ಪದ್ಯಗಳ ವೈಶಿಷ್ಟö್ಯವೆಂದರೆ ಮಗು ಸಹಜವಾದ ಅದ್ಭುತ ಕಲ್ಪನಾ ಶಕ್ತಿ. ಇಲ್ಲಿ ಪುಟ್ಟು ಗಾಳಿಪಟ ಮಾಡಿ ಅದರ ಮೇಲೆ ಕುಳಿತು ಸ್ವರ್ಗಕ್ಕೆ ಹೋಗಿ ಉಂಡೆ ಗಿಂಡೆ ತಿಂದು ಮನೆಗೆ ಬರುತ್ತಾನೆ ! ಅಮ್ಮ ಮಾಡಿದ ಬಟ್ಟೆಯ ಗೊಂಬೆ “ನೀನು ನನ್ನನ್ನು ಚಳಿಯಲ್ಲಿ ಮಲಗಿಸಿ ನೀವೆಲ್ಲ ಚೆನ್ನಾಗಿ ಹೊದ್ದು ಮಲಗುತ್ತೀರಿ” ಎಂದು ಹೇಳಿ ಸಿಟ್ಟು ಮಾಡಿ ಹೊರಕ್ಕೆ ಹೋಗುತ್ತದೆ. ಚಂದ್ರನಿಗೂ ಸೂರ್ಯನಿಗೂ ಮದುವೆಯ ಸಂಭ್ರಮ ನಡೆಯುತ್ತದೆ. ಮರಗಳಿಗೆಲ್ಲ ರೆಕ್ಕೆ ಬಂದು ಅವು ಹಾರಿ ಮರಗಳ್ಳರಿಗೆ ಸಿಕ್ಕದೇ ತಪ್ಪಿಸಿಕೊಳ್ಳುತ್ತವೆ.

ಮಕ್ಕಳಲ್ಲಿ ಯಾವಾಗಲೂ ಕುತೂಹಲ ತುಂಬಿರುತ್ತದೆ. ಅವರು ಹಿರಿಯರನ್ನು ಕಂಡಾಗಲೆಲ್ಲ ಪ್ರಶ್ನೆಯ ಮಳೆಗರೆಯುತ್ತಾರೆ. ಈ ಪ್ರಮುಖ ಅಂಶಗಳನ್ನು ಬೀಗಾರರು ತಮ್ಮ ಪದ್ಯಗಳಲ್ಲಿ ಸಾಕಷ್ಟು ಬಳಸಿಕೊಂಡಿದ್ದಾರೆ. ‘ಬಾನಲಿ ದುಂಡಗೆ ಕಾಣುವುದೇನು/ಗೋಧಿಯ ರೊಟ್ಟಿಯ ಮಾಡಿಹರೇನು?’ ‘ಅಮ್ಮ ನನಗೆ ತಿಳಿದೇ ಇಲ್ಲ /ಅಪ್ಪನ ಮೀಸೆ ನಿನಗೇಕಿಲ್ಲ’? ‘ಅಜ್ಜಿಯ ಬಾಯಲಿ ಹಲ್ಲೇ ಇಲ್ಲ’ ‘ಕಾಮನಬಿಲ್ಲು ಬಾಗೋದೇಕೆ’ ‘ಹಣ್ಣಿಗೆ ಸಕ್ಕರೆ ಹಾಕರ‍್ಯಾರು’? ‘ಬಿಸಿಲಿಗೂ ಮಳೆಗೂ ಏತರ ನಂಟು’? ‘ಮಕ್ಕಳೆಲ್ಲ ಮಕ್ಕಳಾಗಿ ಏತಕೆ ರ‍್ತಾರೆ?’ ಇಂತಹ ಕುತೂಹಲಕರ ಮಕ್ಕಳೇ ಕೇಳಬಹುದಾದಂತಹ ಖುಷಿ ಕೊಡುವ ಪ್ರಶ್ನೆಗಳು ಬೀಗಾರರ ಪದ್ಯಗಳಲ್ಲಿ ಇವೆ. ‘ದೊಡ್ಡೋರು ಕೂಡಾ ಮಕ್ಕಳಾಗ್ಲಿ ಎನ್ನೋದು ಹೇಳ್ತಾರೆ’ ಎನ್ನುವುದು ಇದೆ. ಇಲ್ಲಿ ದೊಡ್ಡವರಿಗೂ ಮಕ್ಕಳ ಚೈತನ್ಯ, ಶುದ್ಧ ಮನಸ್ಸು ಹಾಗೂ ಖುಷಿ ಎಲ್ಲ ಬರಬೇಕೆಂಬುದು ಬೀಗಾರರ ಆಶಯವಾಗಿದೆ. ಇಲ್ಲಿ ಬರುವ ಪ್ರಶ್ನೆಗಳನ್ನೆಲ್ಲಾ ನಾವೆಲ್ಲರೂ ಕೇಳುತ್ತ ಹೇಳುತ್ತಲೇ ದೊಡ್ಡವರಾಗಿದ್ದೇವೆ. ಇವೆಲ್ಲ ಕೇಳಲೇಬೇಕಾದ ಪ್ರಶ್ನೆಗಳು ಮತ್ತು ಕೇಳುತ್ತಲೇ ಇರುವ ಪ್ರಶ್ನೆಗಳು.

ಇಲ್ಲೆಲ್ಲ ಬೀಗಾರರು ಮಕ್ಕಳ ಮುಗ್ಧ ಮನಸ್ಸಿನ ಕುತೂಹಲವನ್ನು ತುಂಬಾ ಚೆನ್ನಾಗಿ ವ್ಯಕ್ತ ಮಾಡಿದ್ದಾರೆ.
ಇವರ ಪದ್ಯ ಹಾಗೂ ಗದ್ಯ ಬರಹಗಳೆಲ್ಲದರಲ್ಲೂ ಕಾಣುವ ಬಹು ಪ್ರಮುಖ ಲಕ್ಷಣವೆಂದರೆ ಪರಿಸರ ಪ್ರಜ್ಞೆ ಮತ್ತು ಪರಿಸರ ಪ್ರೀತಿ. ನಮ್ಮ ಮಲೆನಾಡಿನಲ್ಲಿ ಇರುವ ಗುಡ್ಡ, ಬೆಟ್ಟ, ಹಳ್ಳ, ಹೊಳೆ, ಮರಗಿಡಗಳು, ಹೂವು ಪ್ರಾಣಿಗಳೆಲ್ಲ ಅತ್ಯಂತ ಸುಂದರವಾಗಿ ಇವರ ಸಾಹಿತ್ಯದಲ್ಲಿ ಚಿತ್ರಿತವಾಗಿವೆ. ಈ ಸುಂದರ ಪರಿಸರವನ್ನು ಹಾಳು ಮಾಡಿದರೆ ನಾವ್ಯಾರೂ ಬದುಕಲು ಸಾಧ್ಯವಿಲ್ಲ ಎಂಬ ಅರಿವನ್ನು ಸೂಕ್ಷ್ಮವಾಗಿ ಮೂಡಿಸುವಂತೆ ನಿರೂಪಿಸಿದ್ದಾರೆ.

‘ಪಕ್ಷಿ ಗತಿಯು ನಮಗೂ ಕೂಡ ಬಂದು ಹೋಗಿದೆ / ಹಸಿರ ಬೆಳೆಸಿ ಉಸಿರ ಉಳಿಸಿ ಬಾಳ ಬೇಕಿದೆ’
‘ಪ್ರಕೃತಿ ಪ್ರೀತಿಸಿ ಉಳಿಸಿಕೊಳ್ಳಲು ಬರಲಿ ನಮ್ಮಲಿ ಸಂಯಮ’
‘ನಮ್ಮನು ಬೆಳಸಿ ನಿಮ್ಮನು ಉಳಿಸಿ ಎನ್ನುವ ಹಾಡನು ಹಾಡುತ್ತ’
‘ಗಿಡ ನೆಟ್ಟು ಹಸಿರಕೊಟ್ಟು ಮಳೆ ಕರೆಸಿ ಸಾಕು’
ಇಂತಹ ಹಲವಾರು ಸಾಲುಗಳು ಇವರ ಪದ್ಯದಲ್ಲಿವೆ. ಜೊತೆಗೆ ಇವರ ‘ತೆರೆಯಿರಿ ಕಣ್ಣು’ ‘ ಖುಷಿಯ ಬೀಜ’ ‘ಹಾಡಿನ ಹಕ್ಕಿ’ ಈ ಕವನ ಸಂಕಲನಗಳ ಪದ್ಯಗಳು ಆಡು ಮಾತಿನ ಲಯದಲ್ಲಿದ್ದು ಪದ್ಯಗಳೆಲ್ಲ ಮಕ್ಕಳಂತೆ ಜಿಗಿಯುತ್ತ ಕುಣಿಯುತ್ತ ಮಾತಾಡುತ್ತವೆ.
‘ರಸ್ತೆ ದಾಟಲು ಹಾವು ಬಂದ್ರೆ
ಅದರದ್ದೇನು ತಪ್ಪು….. ?
ಅದಕೂ ದಾರಿ ಬಿಡಬರ‍್ದಿತ್ತಾ
ಕಾರಿಗೆಷ್ಟು ಸೊಕ್ಕು ?
ಎಂದು ಒಂದು ಪದ್ಯದಲ್ಲಿ ಇದ್ದರೆ ‘ಅಲ್ನೊಡ್ ಅಲ್ನೋಡ್ ಗುಬ್ಬಚ್ಚಿ’ ‘ಹಳ್ಳಿಯ ಮಕ್ಕಳು ಆಡಿನ ಸಂಗಡ ಆಟಕೆ ಹೋಗಿದ್ರು / ಹಳ್ಳಿಯ ಮಕ್ಕಳು ಅಪ್ಪನ ಸಂಗಡ ಹೊಲಕ್ಕೆ ಹೋಗಿದ್ರು’ ಇಂತಹ ಸುಂದರ ಸಾಲುಗಳಿವೆ. ಮಕ್ಕಳಿಗೆ ಖುಷಿ ಕೊಡುವ ಅನುಕರಣಾವ್ಯಯಗಳು ಇವರ ಸಾಕಷ್ಟು ಪದ್ಯಗಳಲ್ಲಿ ಇವೆ. ಉದಾಹರಣೆಗೆ ಥಳ ಥಳ, ಫಳ ಫಳ ಇಂತಹವು. ರ‍್ರ ರ‍್ರ ಎನ್ನುವ ಪದ್ಯದ ಸಾಲು ನೋಡಿ
ರ‍್ರ ರ‍್ರ ರ‍್ರ
ಕಾಗೆ ಅಲ್ಲ ಚಕ್ಲಿ
ಢಂ ಢಂ ಡಬ್
ಎತ್ತಿ ಇಟ್ಟೆ ಚುಪ್
ಮ್ಯಾಂ ಮ್ಯಾಂ ಮ್ಯಾಂ
ಹಾಲು ಇಲ್ಲ ಖಾಲಿ
ಹೀಗೆ ಸಾಗಿದೆ. ಇವೆಲ್ಲ ಮಕ್ಕಳಿಗೆ ಅತ್ಯಂತ ಖುಷಿ ನೀಡಿದೇ ಇರದು.
ಬೀಗಾರರು ಕೆಲವು ಮುಕ್ತ ಛಂದಸ್ಸಿನ ಪದ್ಯಗಳನ್ನು ಮಕ್ಕಳಿಗಾಗಿ ರಚಿಸಿದ್ದಾರೆ. ಇವುಗಳನ್ನು ‘ಗಪದ್ಯಗಳೆಂದು ಮುನ್ನುಡಿ ಬರೆದ ವಿ.ಗ. ನಾಯಕರು ಹೇಳಿದ್ದಾರೆ. ಇಲ್ಲಿ ಪ್ರಾಸಕ್ಕಿಂತ ಅರ್ಥಕ್ಕೇ ಹೆಚ್ಚು ಪ್ರಾಧಾನ್ಯ. ಇಂತಹುದೇ ಪ್ರಯೋಗವನ್ನು ಡಾ. ಆನಂದ ಪಾಟೀಲರೂ ಮಾಡಿದ್ದಾರೆ. ಕವಿತೆಗಳಲ್ಲೆಲ್ಲ ನನಗೆ ಹೆಚ್ಚು ಇಷ್ಟವಾದ ಒಂದು ಪದ್ಯವೆಂದರೆ ಉಂಡೆ ಪದ್ಯ. ಲಾಡುಂಡೆ, ಸುಕ್ಕಿನುಂಡೆ, ಉದ್ದುಂಡೆ, ಎಳ್ಳುಂಡೆ, ಗೇರುಂಡೆ ಆ ಮೇಲೆ ಕದ್ದುಂಡೆ. ಕದ್ದುಂಡೆ ಎಂದರೆ ಎನು? ಕದ್ದುಂಡೆ ಎಂದರೆ ಕದ್ದು ತಿಂದ ಉಂಡೆ. ಇದರ ಜೊತೆಗೇ ಬರುವದು ಬಾಸುಂಡೆ. ಇದು ನಮಗೆಲ್ಲ ಚಿರಪರಿಚಿತ.

ಬೀಗಾರರು ‘ಕಪ್ಪೆಯ ಪಯಣ’ ಕಥಾ ಸಂಕಲನದಿAದ ಪ್ರಾರಂಭಿಸಿ ‘ಪುಟ್ಟಿಯೂ ಹಾರುತ್ತಿದ್ದಳು’ ಕಥಾಸಂಕಲನದವರೆಗೆ ಒಂಬತ್ತು ಸಂಕಲನವನ್ನು ಹೊರತಂದಿದ್ದಾರೆ. ಈ ಎಲ್ಲ ಸಂಕಲನಗಳ ಸುಮಾರು ಐವತ್ತು ಕಥೆಗಳನ್ನು ನಾನು ಓದಿದ್ದೇನೆ. ಇವರ ಕಥೆಗಳಲ್ಲಿ ಮಲೆನಾಡಿನ ಪರಿಸರ ಸಂರ್ಪೂರ್ಣವಾಗಿ ಆವರಿಸಿಕೊಂಡಿದೆ. ಅಲ್ಲಲ್ಲಿ ಪೇಟೆಯ ಬದುಕಿನ ಕಥೆಗಳೂ ಇವೆ. ಆದರೆ ಹೆಚ್ಚಿನ ಕಥೆಗಳು ಮಲೆನಾಡಿನ ಹಳ್ಳಿಯಲ್ಲಿ ಅರಳಿವೆ.

ಮಲೆನಾಡಿನ ತೋಟ ಗದ್ದೆಗಳು, ಬೆಟ್ಟ ಗುಡ್ಡಗಳು, ಮನೆ ಮತ್ತು ಜನರು, ಶಾಲೆಗಳು, ಶಿಕ್ಷಕರು, ಜೊತೆಗೆ ಇಲ್ಲಿ ಸಹಜವಾಗಿ ಕಂಡು ಬರುವ ಒತಿಕ್ಯಾತ, ಅಳಿಲು, ಜಿಂಕೆ, ಹಾವು, ಕೆಂಬೂತ, ನವಿಲು, ಪಾತರಗಿತ್ತಿ, ನಾಯಿ, ಬೆಕ್ಕು ಮುಂತಾದ ಜೀವನ ಸಂಗಾತಿಗಳೊAದಿಗೆ ಕಥೆಗಳು ಅರಳಿವೆ. ಲೇಖಕರಿಗೆ ಪ್ರಾಣಿ ಪ್ರಪಂಚದ ನಿಕಟ ಪರಿಚಯವಿದೆ. ಅವುಗಳ ಜೀವನಕ್ರಮದ ಅರಿವಿದೆ. ಜೊತೆಗೆ ಕಲ್ಪನೆಯು ಸೇರಿ ಹಲವಾರು ಉತ್ತಮ ಕಥೆಗಳಾಗಿವೆ.

ಇಲ್ಲಿ ಪ್ರಾಣಿ ಪಕ್ಷಿಗಳು ಮಾತಾಡುತ್ತವೆ, ಆಲೋಚಿಸುತ್ತವೆ ಆದರೆ ತಮ್ಮ ತಮ್ಮ ವೈಶಿಷ್ಟದೊಂದಿಗೆ ಬದುಕುತ್ತವೆ. ಅವು ತಮ್ಮ ಮೇಲೆ ಮನುಷ್ಯ ನಡೆಸುವ ದೌರ್ಜನ್ಯದ ಕುರಿತು ಮಾತಾಡಿ ‘ಮತ್ತೊಂದು ಮರ ಬಿತ್ತು, ಮನುಷ್ಯ ಹೋಗಲಿ ಸತ್ತು’ ಎಂದು ಹಾಡುತ್ತವೆ. ಅಂದರೆ ಲೇಖಕರಿಲ್ಲಿ ಪ್ರಾಣಿ ಪಕ್ಷಿಗಳನ್ನು ಮಾನವೀಕರಣಕ್ಕೆ ಒಳಪಡಿಸಿದ್ದಾರೆ. ಈ ಕಥೆಗಳ ಇನ್ನೊಂದು ಪ್ರಮುಖ ಅಂಶವೆಂದರೆ ಮಕ್ಕಳ ಭಾವನೆ ಮತ್ತು ಕಲ್ಪನೆಗಳು. ಅವುಗಳೊಂದಿಗೆ ಮಕ್ಕಳು ಶಾಲೆಯಲ್ಲಿ, ಮನೆಯಲ್ಲಿ ಎದುರಿಸುವ ಪ್ರಸಂಗಗಳು. ಜೊತೆಗೆ ಶಾಲೆಯ ಹೊರಗೆ ತೋಟ, ಬೆಟ್ಟ. ಗುಡ್ಡಗಳಲ್ಲಿ ಮಕ್ಕಳು ನಡೆಸುವ ಹುಡುಕಾಟ, ಓಡಾಟ ಮತ್ತು ಸಾಹಸ ಈ ಕಾರಣಕ್ಕಾಗಿ ಮಕ್ಕಳು ಹಿರಿಯರಿಂದ ಅಥವಾ ಶಾಲಾ ಶಿಕ್ಷಕರಿಂದ ಪಡೆಯುವ ಶಿಕ್ಷೆ ಹೀಗೆ ಸಹಜ ಲಯದಲ್ಲಿ ಕಥೆಗಳು ಸಾಗುತ್ತವೆ.

ರಾಮು ಮತ್ತು ಅವನ ಅಣ್ಣ ಜೇನು ತೆಗೆಯಲು ಹೋಗುತ್ತಾರೆ. ಇವರು ಗುಡ್ಡದಲ್ಲಿರುವ ಜೇನನ್ನು ತೆಗೆಯಲು ಮೊದಲೇ ಯಾರೋ ಅಲ್ಲಿ ಬಂದಿರುತ್ತಾರೆ. ಅವರು ಇವರನ್ನು ಕಂಡು ಹೆದರಿ ಓಡಿ ಕಾಲು ಮುರಿದುಕೊಂಡಾಗ ಅವರನ್ನು ಆಸ್ಪತ್ರೆಗೆ ಸೇರಿಸುವುದಿದೆ. ಹೀಗೆ ಈ ಕಥೆಯಲ್ಲಿ ಉಪಕಾರ ಗುಣದ ವರ್ಣನೆ ಬರುತ್ತದೆ. ಇನ್ನೊಂದು ಕಥೆಯಲ್ಲಿ ಪುಟ್ಟ ಅವನ ತಮ್ಮ ದನ ಮೇಯಿಸುವ ನೆಪದಲ್ಲಿ ಕಾಡಿಗೆ ಹೋಗಿ, ಜೋತಾಡುವ ಬಳ್ಳಿ ಹಿಡಿದು ನೇತಾಡುವುದು, ಅಪ್ಪ ಸಿಟ್ಟು ಮಾಡುವುದು ಸಹಜವಾಗಿದೆ. ಮಾಳ ಕಾಯಲು ಅಣ್ಣ ತಮ್ಮ ಹೋದಾಗ ಮಾಳದ ಮಾಡಲ್ಲಿ ಹಾವು ಬಂದು ಭಯ ಹುಟ್ಟಿಸುವುದು…… ಭಯದಲ್ಲೇ ರಾತ್ರಿ ಕಳೆಯುವುದು ಇದೆ.

ಪ್ರದೀಪ ಎಂಬ ಹುಡುಗ ಗೆಳೆಯ ಹುಸೇನನೊಂದಿಗೆ ಸೇರಿ ಶಾಲೆಯ ಎದುರಿನ ತೆಂಗಿನ ಮರದ ಬುಡದಲ್ಲಿ ಇರುವ ನಾಯಿಯ ಮರಿಯನ್ನು ತಂದು ದನದ ಕೊಟ್ಟಿಗೆಯಲ್ಲಿ ಬಚ್ಚಿಡುವುದು…… ಅಪ್ಪ, ಅಮ್ಮ, ಅಜ್ಜಿ ಎಲ್ಲ ಬೈಯ್ದರೂ ಕೊನೆಗೆ ಒಪ್ಪಿಕೊಳ್ಳುವುದು ‘ಕಾಳು’ ಕಥೆಯಲ್ಲಿ ಇದೆ. ಪುಟ್ಟು ಮಳೆ ಬಿದ್ದ ಮರುದಿನ ಗದ್ದೆಗೆ ಹೋಗಿ ಅಲ್ಲಿ ಸುಲಿದ ತೆಂಗಿನ ಕಾಯಿ ಗಾತ್ರದ ಕಪ್ಪೆ ನೋಡಿ ಅವುಗಳ ಕಣ್ಣು ಕನ್ನಡಕ ಹಾಕಿಕೊಂಡಂತಿದೆ ಎಂದು ಅನಿಸಿ ಖುಷಿಯಾಗುತ್ತಾನೆ. ಇದರಿಂದ ಪ್ರಭಾವಿತನಾದ ಪುಟ್ಟು ಮನೆಗೆ ಓಡಿಹೋಗಿ ಅಪ್ಪನ ಕನ್ನಡಕ ಎತ್ತಿಕೊಂಡು ಬಂದು ಹಾಕಿಕೊಂಡು ನೀರಿನಲ್ಲಿ ಕಪ್ಪೆಯೊಂದಿಗೆ ತನ್ನ ಪ್ರತಿಬಿಂಬ ನೋಡುವುದಕ್ಕೆ ಪ್ರಯತ್ನಿಸುವಾಗ ಕನ್ನಡಕ ಬಿದ್ದುಹೋಗಿ ಕಾಣೆಯಾಗುವುದು ಮಕ್ಕಳ ಆಟ ಹೇಗೆಲ್ಲಾ ಕೊನೆಗೊಳ್ಳಬಹುದು ಎಂಬುದನ್ನು ತೋರಿಸುತ್ತದೆ, ಇಲ್ಲಿ ಮಕ್ಕಳ ಸಹಜ ಆಟ ಸಾಹಸಗಳನ್ನು ಕಥೆ ಅನಾವರಣಗೊಳಿಸುತ್ತದೆ.

‘ಕಪ್ಪೆಯ ಪಯಣ’ ಕಥೆಯಲ್ಲಿ ಕಪ್ಪೆಯ ಸಾಹಸ ಯಾತ್ರೆ ಇದೆ. ಇವೆಲ್ಲ ಸಾಮಾನ್ಯವಾಗಿ ಮಧ್ಯಮ ವರ್ಗದ ಕುಟುಂಬದ ಮಕ್ಕಳ ಕಥೆಗಳಾಗಿದ್ದರೆ ಶ್ರಮಿಕ ವರ್ಗಗಳ ಮತ್ತು ಭಿಕ್ಷುಕರ ಕಥೆಗಳೂ ಇಲ್ಲಿವೆ, ಉದಾಹರಣೆಗೆ ‘ಚೋಲು’. ಊರಿನಿಂದೂರಿಗೆ ತಿರುಗುವ ಹಾವುಗೊಲ್ಲರ ಹುಡುಗ ಚೋಲು. ಚೋಲುವನ್ನು ಶಾಲಾ ಮಾಸ್ತರ ಶಾಲೆಗೆ ಸೇರಿಸಿಕೊಂಡರೂ ಊರಿನ ಜನರ ಸಿಟ್ಟಿನಿಂದಾಗಿ ಅವನ ಕುಟುಂಬ ಊರು ಬಿಡಬೇಕಾಗುತ್ತದೆ. ಇದರಿಂದಾಗಿ ಕಲಿಯಲು ಜಾಣನಾಗಿದ್ದ ಚೋಲು ಕೂಡಾ ಶಾಲೆ ಬಿಡಬೇಕಾಗಿ ಬಂದಾಗ ಗೆಳೆಯ ಲಕ್ಷö್ಮಣನ ಸಹಾಯದಿಂದ ಚೋಲು ಮತ್ತೆ ಶಾಲೆಗೆ ಸೇರುತ್ತಾನೆ. ಇಲ್ಲೆಲ್ಲ ಲೇಖಕರ ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ.

ಪೇರು ಎಂಬ ಬಡ ಹುಡುಗನ ಅಪ್ಪನಿಗೆ ಕುರುಡು, ಕ್ರಮೇಣ ಪೇರುವಿಗೂ ಕಣ್ಣು ಮಸುಕು ಮಸುಕಾಗಿ ಕಾಣಿಸದಾಗುತ್ತದೆ. ಆಗ ಅವನ ಶಾಲೆಯ ಗಣಿತ ಮಾಸ್ತರ ಸಹಾಯದಿಂದ ಅವನ ಓದು ಮುಂದುವರಿಯುತ್ತದೆ. ನಂತರ ಅವನ ಪ್ರತಿಭೆಯಿಂದಾಗಿ ಅವನ ಹೆಸರು ಫೋಟೋ ಪೇಪರಿನಲ್ಲಿ ಬರುತ್ತದೆ. ಶ್ರಮಿಕ ವರ್ಗಗಳ ಮಕ್ಕಳ ಪಾಡನ್ನು ಬೀಗಾರರು ಹೃದಯ ಸ್ಪರ್ಶಿಯಾಗಿ ಚಿತ್ರಿಸಿದ್ದಾರೆ. ‘ನಕ್ಷತ್ರ ನೋಡುತ್ತ’ ಕಥೆಯಲ್ಲಿ ಬಡಹುಡುಗನ ಪಾಡು ಹಾಗೂ ನಕ್ಷತ್ರದ ಬೆಳಕಿನಲ್ಲಿ ಅವನು ಗುರಿ ಕಂಡುಕೊಳ್ಳುವ ಜಾಣ್ಮೆಯ ಚಿತ್ರಣವಿದೆ.

ಇನ್ನು ನಾಯಿಮರಿಯ ಸ್ವಗತ ‘ಹೆಗಲ ಮೇಲೆ ಕುಳಿತು’ ಕಥೆಯಲ್ಲಿ ವ್ಯಕ್ತವಾಗಿದ್ದಾರೆ… ನಾಗರಹಾವಿನ ಆತ್ಮ ಕಥನ ನಾಗಪ್ಪಣ್ಣನ ಕಥೆಯಲ್ಲಿ ಇದೆ. ನವಿಲಕ್ಕನ ಉಪಾಯದಿಂದಾಗಿ ನವಿಲಿನ ಕೃತ್ರಿಮ ಬದುಕಿಗೆ ತಣ್ಣೀರು ಬೀಳುವುದು ‘ನವಿಲಕ್ಕ’ ಕಥೆಯಲ್ಲಿ. ಇಲ್ಲೆಲ್ಲ ಪ್ರಾಣಿಗಳ ಮಾನವೀಕರಣವಿದೆ.

‘ಅಮ್ಮನ ಚಿತ್ರ’ ಕಥೆಯಲ್ಲಿ ಸೋನು ಚಿಂದಿ ಆಯುವ ಹುಡುಗ. ಅವನ ಅಮ್ಮ ಮತ್ತು ತಂಗಿ ಬಸ್ಸಿನಡಿಯಲ್ಲಿ ಸಿಕ್ಕು ಸತ್ತು ಹೋಗಿದ್ದಾರೆ. ಆದರೆ ಅಮ್ಮ ತಂಗಿಯನ್ನು ಎತ್ತಿಕೊಂಡು ಯಾರೋ ದೊಡ್ಡ ಮನುಷ್ಯರಿಂದ ಪೋಲಿಯೋ ಡ್ರಾಪ್ಸ್ ಹಾಕಿಸಿಕೊಳುತ್ತಿರುವ ಚಿತ್ರವನ್ನು ಕಂಪೌ೦ಡ ಗೋಡೆಗೆ ಅಂಟಿಸಿದ್ದಾರೆ. ಅದನ್ನು ಕಂಡ ಸೋನು ಅಮ್ಮನ ಚಿತ್ರವನ್ನು ಆಸೆಯಿಂದ ಕಿತ್ತುಕೊಂಡು ಓಡುವುದು ಹೃದಯ ವಿದ್ರಾವಕವಾಗಿದೆ. ಅಂದರೆ ಲೇಖಕರು ವರ್ತಮಾನದ ವ್ಯಂಗವನ್ನು ಅರ್ಥಪೂರ್ಣವಾಗಿ ಹಿಡಿದಿಟ್ಟಿದ್ದಾರೆ.

ಅಲ್ಲದೆ ಇವರ ಸಂಕಲನಗಳಲ್ಲಿ ನವಿರು ಹಾಸ್ಯದ ಕಥೆಗಳು ಇವೆ. ‘ಮುಖಕ್ಕೆ ಬಣ್ಣ ಮತ್ತು ಶೇಂಗಾ ಅಂಗಡಿ’ ಕಥೆಯಲ್ಲಿ ಹಳ್ಳದಲ್ಲಿ ಸಿಗುವ ಬಣ್ಣದ ಕಲ್ಲುಗಳು, ಒಲೆ ಇದ್ದಿಲು ಇವನ್ನೆಲ್ಲ ಕಲ್ಲಿನ ಮೇಲೆ ತೇಯ್ದು ಮಾಡಿದ ಬಣ್ಣ ಹಚ್ಚಿಕೊಂಡು ಮಕ್ಕಳು ಯಕ್ಷಗಾನದ ಆಟವಾಡುವುದು ಇದೆ. ಇಲ್ಲಿ ತಗಡಿನ ಖಾಲಿ ಡಬ್ಬಗಳ ಚಂಡೆ, ಮೃದಂಗ, ತೆಂಗಿನಕಾಯಿಯ ಗರಟೆಯ ತಾಳವೆಲ್ಲ ಉಪಯೋಗಿಸುವುದು ನಗು ಉಕ್ಕಿಸುತ್ತದೆ. ಲೇಖಕರು ಮಕ್ಕಳು ಪರಿಸರದ ವಸ್ತುವನ್ನೇ ಬಳಸಿ ಸನ್ನಿವೇಶ ನಿರ್ಮಿಸುವುದನ್ನು ಹಾಸ್ಯಮಯವಾಗಿ ಹೇಳುತ್ತಾರೆ. ಯಕ್ಷಗಾನದ ಆಟವಾಡುತ್ತ ಮಕ್ಕಳು ಮೈಮರೆತು ಕುಣಿಯುತ್ತಾರೆ. ದೊಡ್ಡವರು ಬಂದಾಗ ನಾಚಿಕೆ ಪಟ್ಟು ಓಡುತ್ತಾರೆ. ಪುಟ್ಟು ಒಂದು ಯಕ್ಷಗಾನ ಸಂದರ್ಭದಲ್ಲಿ ಶೇಂಗಾ ಅಂಗಡಿ ಇಡುತ್ತಾನೆ. ಶೇಂಗಾವನ್ನು ಗೆಳೆಯರಿಗೆಲ್ಲ ಪುಕ್ಕಟೆಯಾಗಿ ಹಂಚಿ ಅರ್ಧ ಖಾಲಿ ಮಾಡಿದರೆ ಕ್ರಮೇಣ ನಿದ್ದೆ ಬಂದು ಬೆಳಗ್ಗೆ ಎದ್ದು ನೋಡಿದರೆ ಶೇಂಗಾ ಪೂರ್ತಿ ಖಾಲಿಯಾಗಿತ್ತು.

ಇನ್ನೊಂದು ಕಥೆಯಲ್ಲಿ ದೀಪಾವಳಿಯ ಬೂದಗಳುವಿನ ಪ್ರಸಂಗವಿದೆ. ದೀಪಾವಳಿಯಲ್ಲಿ ತಮಾಷೆಗಾಗಿ ಕಳುವು ಮಾಡುವ ಸಂಪ್ರದಾಯ ನಮ್ಮ ಮಲೆನಾಡಿನಲ್ಲಿದೆ. ದೀಪಾವಳಿಯಲ್ಲಿ ಕಳುವು ಮಾಡಲು ಹೋಗಿ ಪುಟ್ಟು ಜಾರಿ ಬಿಳುವುದು ಮಜವಾಗಿದೆ. ಇನ್ನು ತಾಯಿ, ಅಜ್ಜಿ, ಶಿಕ್ಷಕರ ಕುರಿತಾದ ಪ್ರೀತಿಯ ಕಥೆಗಳು ಕೆಲವು ಇದೆ. ‘ಚಿನ್ನದ ಕಡ್ಡಿ’ ಕಥೆಯಲ್ಲಿ ಮೂಢನಂಬಿಕೆಯನ್ನು ವಿರೋಧಿಸುವ ವಿಚಾರವಿದೆ. ಒಟ್ಟಿನಲ್ಲಿ ಹೇಳುವುದಾದರೆ ತಮ್ಮಣ್ಣ ಬೀಗಾರರ ಮಕ್ಕಳ ಕಥೆಗಳು ಕನ್ನಡಕ್ಕೆ ನೀಡಿದ ಅಪೂರ್ವ ಮೌಲಿಕ ಕೊಡುಗೆಗಳೆಂದರೆ ಉತ್ಪ್ರೆಕ್ಷೆ ಏನಲ್ಲ ಎನ್ನುವುದು ನನ್ನ ಭಾವನೆ.

ಬೀಗಾರರು ಎರಡು ಕಾದಂಬರಿಗಳನ್ನು ಮಕ್ಕಳಿಗಾಗಿ ಬರೆದಿದ್ದಾರೆ. ಮೊದಲನೆಯ ಕಾದಂಬರಿ ‘ಬಾವಲಿ ಗುಹೆ’ ೭೫ ಪುಟಗಳ ಪುಟ್ಟ ಕಾದಂಬರಿಯಲ್ಲಿ ದೊಡ್ಡ ಸಂದೇಶ ನೀಡಿರುವುದು ಹೆಗ್ಗಳಿಕೆ. ಊರಿನ ಗುಡ್ಡಗಳಲ್ಲಿ ಕಲ್ಲು ಒಡೆದು ಸಾಗಿಸುವ ಗಣಿಗಾರಿಕೆಯ ಸ್ಫೋಟದಿಂದಾಗಿ ಊರಿಗೆ ಅನಾಹುತವಾಗುತ್ತಿರುತ್ತದೆ. ಬಂಡೆಗಳ ಒಡೆಯುವಿಕೆ ಅವಿರತವಾಗಿ ನಡೆದಿದೆ. ಮರಗಳನ್ನು ಉರುಳಿಸುತ್ತಿದ್ದಾರೆ. ಸ್ಪೋಟದಿಂದ ಸಿಡಿದ ಕಲ್ಲುಗಳಿಂದ ದನಗಳು ಗಾಯಗೊಂಡಿವೆ. ಮರಗಳೆಲ್ಲ ಗಣಿಗಾರಿಕೆಯ ಧೂಳಿನಿಂದ ಕೆಂಪಾಗಿವೆ. ಊರಿನ ಸಾರಾಯಿ ಅಂಗಡಿಯಲ್ಲಿ ಮಾತ್ರ ವ್ಯಾಪಾರ ಜೋರಾಗಿದೆ. ಆಗ ಊರವರೆಲ್ಲ ಸೇರಿ ಮಾಡಿದ ಚಳುವಳಿಯಲ್ಲಿ ಶಾಲಾ ಮಕ್ಕಳು ಭಾಗವಹಿಸಿದರೆ ಪೊಲೀಸ್ ಇನ್ಸಪೆಕ್ಟರ್ ಅವರನ್ನು ಹೆದರಿಸಿ ಹಿಂದೆ ಕಳಿಸುತ್ತಾರೆ. ಅವರಲ್ಲಿ ಜಾನು ಮತ್ತು ಶಂಕರ ಎಂಬ ಮಕ್ಕಳಿಗೆ ಹೇಗಾದರೂ ಮಾಡಿ ಗಣಿಗಾರಿಕೆ ನಿಲ್ಲಿಸುವ ಆಸೆ. ಶಂಕರನ ಅಪ್ಪ ಶಾಮಣ್ಣ, ಖಾಜಿ ಮಾಸ್ತರ ಮುಂತಾದವರೆಲ್ಲ ಚಳವಳಿ ಮಾಡಿದರೂ ಏನು ಪ್ರಯೋಜನವಾಗಲಿಲ್ಲ.

ಶಾಲೆಯಲ್ಲಿ ಇತಿಹಾಸದ ಪಾಠ ಮಾಡುವಾಗ ಸರ್ ಐತಿಹಾಸಿಕ ವಸ್ತುಗಳ ರಕ್ಷಣೆಗೆ ಕಾನೂನು ಇರುವುದನ್ನು ತಿಳಿಸುತ್ತಾರೆ. ಇದರಿಂದ ಶಂಕರನಿಗೆ ಏನೋ ಹೊಳೆಯುತ್ತದೆ. ಅವನು ಗೆಳೆಯರೊಂದಿಗೆ ಊರೆಲ್ಲ ಹುಡುಕಿದರೂ ಐತಿಹಾಸಿಕವಾದದ್ದೇನೂ ಸಿಗುವುದಿಲ್ಲ.

ಒಂದು ದಿನ ಜಾನು ಶಂಕರರು ಗುಡ್ಡದಲ್ಲಿರುವ ಬಾವಲಿ ಗುಹೆ ನೋಡಲು ಹೋಗಿ ಒಳಗೆ ಇಣುಕಿ ಕತ್ತಲಿಗೆ ಹೆದರಿ ಹಿಂದೆ ಬರುತ್ತಾರೆ. ಮತ್ತೊಂದು ದಿನ ಜಾನು ಶಂಕರರು ಟಾರ್ಚ ತೆಗೆದುಕೊಂಡು ಹೋಗಿ ನೋಡಿದಾಗ ಬಿಳಿಗೋಡೆಯಲ್ಲಿ ಕೆತ್ತಿದ ಬಾಹುಬಲಿಯ ವಿಗ್ರಹ ಕಾಣುತ್ತದೆ. ಇದನ್ನು ನೋಡಿದ ಹುಡುಗರು ಐತಿಹಾಸಿಕ ಸ್ಮಾರಕವೊಂದು ದೊರೆಯಿತೆಂದು ಖುಷಿಗೊಂಡು ಮನೆಗೆ ಬಂದು ಹೇಳಿದಾಗ ಶಂಕರನ ಅಪ್ಪ ಬೈಯ್ದರೂ ಶಾಮಣ್ಣನವರಿಗೆ ಸಂತೋಷ ಉಂಟಾಗುತ್ತದೆ. ಯಾಕೆಂದರೆ ಐತಿಹಾಸಿಕ ಸ್ಮಾರಕದಿಂದಾಗಿ ತನ್ನ ಗಣಿಗಾರಿಕೆ ವಿರುದ್ಧದ ನ್ಯಾಯಾಲಯದ ಹೋರಾಟಕ್ಕೆ ಬಲ ಸಿಕ್ಕು ಜಯ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಅವರಲ್ಲಿ ಮೂಡುತ್ತದೆ. ಇಲ್ಲಿ ಮಕ್ಕಳ ಪರಿಸರ ಕಾಳಜಿ ಮತ್ತು ಸಾಹಸ ಊರಿನ ಸಂಕಷ್ಟ ನೀಗಿಸುವಲ್ಲಿ ಸಹಾಯ ಆಗುವುದು ಕಾದಂಬರಿಯ ಸಾರಾಂಶ ಆಗಿದೆ. ಕಾದಂಬರಿ ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ.

ಬೀಗಾರರ ಇನ್ನೊಂದು ಕಾದಂಬರಿ ೨೦೨೦ ರಲ್ಲಿ ಪ್ರಕಟಗೊಂಡ ‘ಫ್ರಾಗಿ ಮತ್ತು ಗಳೆಯರು’. ಇದಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಪುಸ್ತಕ ಸೊಗಸು ಬಹುಮಾನ ಮತ್ತು ಅ ಸರ್ ಪತ್ರಿಕೆ ನೀಡುವ ಮಕ್ಕಳ ಸಾಹಿತ್ಯ ಬಹುಮಾನಗಳು ದೊರೆತಿವೆ. ನಿಜಕ್ಕೂ ಈ ಪುಸ್ತಕ ತಮ್ಮಣ್ಣ ಬೀಗಾರರ ಸೃಜನಶೀಲ ಶಕ್ತಿಯ ಅತ್ಯುತ್ತಮ ನಿದರ್ಶನ ಆಗಿದೆ. ಇವೆರಡೂ ಕಾದಂಬರಿಗಳಲ್ಲಿ ಬೇರೆ ಬೇರೆ ಶೀರ್ಷಿಕೆ ಪಡೆದ ಪುಟ್ಟ ಪುಟ್ಟ ಅಧ್ಯಾಯಗಳಿವೆ. ಇವು ಮಕ್ಕಳ ಓದಿಗೆ ಹಾಗೂ ಕುತೂಹಲಕ್ಕೆ ಪೂರಕವಾಗಿದೆ. ಫ್ರಾಗಿ ಅಂದರೆ ಕಪ್ಪೆ. ತನ್ನ ನೀರ ಕೊಳದಿಂದ ಹೊರಗೆ ಬಂದು ತನ್ನ ಗೆಳೆಯರಾದ ಪೂವಿ ಎನ್ನುವ ಪುಟ್ಟ ಹಕ್ಕಿ ಹಾಗೂ ರಂಗಿ ಎನ್ನುವ ಚಿಟ್ಟೆಯ ಸಂಗಡ ಸೇರಿ ಎಲ್ಲೆಲ್ಲಿ ಹೋದವು, ಏನೇನು ಮಾಡಿದವು ಎಂಬುದು ಇಲ್ಲಿಯ ಕಥೆ. ಫ್ರಾಗಿಗೆ ತನ್ನ ಸುತ್ತಲಿನ ಜಗತ್ತನ್ನು ನೋಡುವ ಆಸೆ.

ಬಾವಿಯಲ್ಲಿನ ಕಪ್ಪೆ ಎಂಬ ಕೀಳಿರಿಮೆಯನ್ನು ತೊಡೆದು ಹಾಕುವ ಆಸೆ. ಇಲ್ಲೂ ಪ್ರಾಣಿ ಪಕ್ಷಿಗಳು ಮನುಷ್ಯರಂತೆ ಮಾತಾಡುತ್ತವೆ. ಮೂವರು ಸೇರಿ ಮೊದಲು ಶಾಲೆಗೆ ಹೋಗುತ್ತಾರೆ. ಶಾಲೆಯಲ್ಲಿ ಕಪ್ಪೆಯನ್ನು ಕಂಡು ಮಕ್ಕಳ ಗದ್ದಲವೇ ಗದ್ದಲ. ಈ ಕಥೆಯನ್ನು ಕಥೆಗಾರನೊಬ್ಬ ಚಿನ್ನು, ಪುಟ್ಟಿ, ಪುಂಡು ಎಂಬ ಮಕ್ಕಳಿಗೆ ಹೇಳುತ್ತಾನೆ. ಕಥೆಗಾರರು ಇಲ್ಲಿ ನಮ್ಮ ಪಾರಂಪರಿಕ ಕಥನ ಕ್ರಮವನ್ನು ಅರ್ಥಪೂರ್ಣವಾಗಿ ಬಳಸಿಕೊಂಡಿದ್ದಾರೆ. ಶಾಲೆಯಲ್ಲಿ ಮಕ್ಕಳ ಉಪಟಳಕ್ಕೆ ಸಿಕ್ಕ ಫ್ರಾಗಿಯನ್ನು ಹುಡುಗನೊಬ್ಬ ಹೊರಕ್ಕೆ ತಂದು ನೀರಿನ ಪುಟ್ಟ ಹೊಂಡಕ್ಕೆ ಬಿಡುತ್ತಾನೆ. ಮತ್ತೊಂದು ದಿನ ಫ್ರಾಗಿ, ಪೂವಿ, ರಂಗಿ ಮಾತಾಡಿಕೊಂಡು ಆಕಾಶ ನೋಡಲು ಹೋಗುತ್ತವೆ.

ಪೂವಿ, ರಂಗಿ ಹಾರುತ್ತ ಹೋಗುವವರು ಬೇಗ ತಲುಪುತ್ತವೆ. ಫ್ರಾಗಿ ಜಿಗಿಯುತ್ತ ಹೋಗಬೇಕು. ಗುಡ್ಡ ತಲುಪುವಾಗಿನ ಸಂಕಟದಿಂದೆಲ್ಲ ಪಾರಾಗಿ ಅಂತೂ ಇಂತೂ ಗುಡ್ಡದ ತುದಿ ತಲುಪುತ್ತವೆ. ಅಲ್ಲಿ ಮೋಡ, ಬೆಳ್ಳಕ್ಕಿ ಮುಂತಾದವನ್ನು ನೋಡುತ್ತ ಅಲ್ಲೊಂದು ಕೆಂಪು ಹೂವು ಎಂದರೆ ಸೂರ್ಯನನ್ನು ನೋಡುತ್ತವೆ. ಇವೆಲ್ಲ ನೋಡಿ ಖುಷಿಯಾಗಿ ಮರವೇರಿದರೆ ಚೆನ್ನಾಗಿ ನೋಡಬಹುದೆಂದು ಆಲೋಚನೆ ಬರುತ್ತದೆ. ಅವರು ಮರವೇರುವ ಪ್ರಯತ್ನ ಮಾಡುತ್ತಾರೆ. ಪೂವಿ, ರಂಗಿಗೆ ಹಾರುತ್ತ ಮೇಲೇರಿದರೆ ಆಯಿತು. ಫ್ರಾಗಿ ಕಷ್ಟಪಟ್ಟು ಮರ ಹತ್ತುತ್ತಾ ಕಾಲು ಜಾರಿ ಎತ್ತರದಿಂದ ದೊಪ್ಪನೆ ಬೀಳುತ್ತದೆ. ಬಿದ್ದ ಫ್ರಾಗಿ ಕಾಣದಾಗುತ್ತದೆ.

ಪೂವಿ ಮತ್ತು ರಂಗಿ ತನ್ನ ಗೆಳೆಯನನ್ನು ಹುಡುಕುತ್ತಾ ಇರುವೆ, ಗಿಳಿ, ಅಳಿಲು, ಮುಂತಾದವುಗಳನ್ನು ಫ್ರಾಗಿ ಕಂಡಿರಾ, ಫ್ರಾಗಿ ಕಂಡಿರಾ ಎಂದು ಕೇಳುತ್ತವೆ, ಹುಡುಕುತ್ತವೆ. ಆದರೆ ಯಾರಿಗೂ ಫ್ರಾಗಿ ಕಂಡಿರುವುದಿಲ್ಲ. ನಂತರ ಕೆಳಗಿನ ಕೊಂಬೆಯಲ್ಲಿ ಅಂತೂ ಇಂತೂ ಫ್ರಾಗಿಯನ್ನು ಕಂಡು ಫ್ರಾಗಿಯನ್ನು ಕರೆದಾಗ ಅದು ಗೆಳೆಯರನ್ನು ಕೂಡಿಕೊಳ್ಳುತ್ತದೆ. ನಂತರ ಗೆಳೆಯರ ಮಾರ್ಗದರ್ಶನದಲ್ಲಿ ಫ್ರಾಗಿ ಮರ ಏರಿ ಆಕಾಶ ನೋಡುತ್ತಿರುತ್ತದೆ. ಜೋರಾಗಿ ಗಾಳಿ ಬೀಸಿ ಫ್ರಾಗಿ ಇದ್ದ ಕೊಂಬೆ ಮುರಿದು ಹೋಗುತ್ತದೆ. ಫ್ರಾಗಿ ಅದೃಷ್ಟದಿಂದ ಗಾಳಿಯಲ್ಲಿ ತೇಲುತ್ತ ಅದರ ಕೊಳಕ್ಕೆ ಬಂದು ಬೀಳುತ್ತದೆ.

ನಂತರ ಪೂವಿ ರಂಗಿಗಳೂ ಅದರೊಂದಿಗೆ ಸೇರುವಾಗ ಮಳೆಗಾಲ ಪ್ರಾರಂಭವಾಗುತ್ತದೆ. ಇದರಿಂದಾಗಿ ಅವರ ಸುತ್ತಾಟ ಇಲ್ಲಿಗೆ ಮುಗಿಯುತ್ತದೆ. ಮಳೆಗಾಲದ ನಂತರ ಮತ್ತೆ ಸುತ್ತಾಡಲು ಹೋಗೋಣ ಎನ್ನುತ್ತ ಗೆಳೆಯರು ಕಣ್ಣೀರಿನೊಂದಿಗೆ ಅಗಲುತ್ತಾರೆ. ಇದು ಕಥೆಯ ಸಾರಾಂಶ. ಆದರೆ ಇದನ್ನು ಅತ್ಯಂತ ಹೃದ್ಯ ಭಾವದಿಂದ ಬೀಗಾರರು ಚಿತ್ರಿಸಿದ್ದಾರೆ. ಆಕಾಶ, ನಕ್ಷತ್ರ, ಮೋಡ, ಮಳೆ ಮುಂತಾದ ಪೃಕೃತಿ ವರ್ಣನೆ ತುಂಬಾ ಸುಂದರವಾಗಿದೆ. ಈ ಕಾದಂಬರಿಯಲ್ಲಿ ಗಿಳಿ, ಇರುವೆ, ಹಾವು, ಅಳಿಲುಗಳಂತಹ ಪ್ರಾಣಿಗಳ ವರ್ತನೆಯೂ ಅತ್ಯಂತ ಸಹಜವಾಗಿದೆ. ಪೃಕೃತಿಯ ನಡುವೆ ಅರಳಿದ ಇಂತಹ ಹೊಸತನದಿಂದ ಕೂಡಿದ ಕಾದಂಬರಿ ಬರೆದ ಬೀಗಾರರು ನಿಜಕ್ಕೂ ಅಭಿನಂದನಾರ್ಹರು.

ಬೀಗಾರರು ಮಕ್ಕಳ ಸಾಹಿತ್ಯಕ್ಕೆ ಲಲಿತ ಬರಹವನ್ನು ಸೇರಿಸಿ ಕನ್ನಡದ ಮಕ್ಕಳಿಗೆ ಹೊಸದೊಂದು ಉಣಿಸಿನ ಮಾರ್ಗವನ್ನು ತೆರೆದಿದ್ದಾರೆ. ಈಗ ಅವರ ಲಲಿತ ಬರಹಗಳನ್ನು ನೋಡೋಣ.

‘ಮಾತಾಟ ಮಾತೂಟ’ ಮತ್ತು ‘ಮರ ಬಿದ್ದಾಗ’ ಎಂಬ ಎರಡು ಲಲಿತ ಬರಹ ಹೊತ್ತಿಗೆಗಳನ್ನು ಪ್ರಕಟಿಸಿದ್ದಾರೆ. ಇವೆರಡೂ ಹೊತ್ತಿಗೆಗಳಲ್ಲಿನ ಬರಹಗಳು ಮಕ್ಕಳ ಭಾವಲೋಕದ ಪರಧಿ ವಿಸ್ತರಿಸುವಂತೆ ರಚಿಸಲ್ಪಟ್ಟಿವೆ. ಇಲ್ಲಿನ ಬಹುತೇಕ ಬರಹಗಳು ಉತ್ತಮ ಪುರುಷ ನಿರೂಪಣೆಯಲ್ಲಿವೆ. ಇಲ್ಲಿ ಮಾತ್ರವಲ್ಲ ಬೀಗಾರರ ಕಥೆಗಳಲ್ಲೂ ಕೂಡಾ ಉತ್ತಮ ಪುರುಷ ನಿರೂಪಣೆಯು ಹೆಚ್ಚಾಗಿ ಕಾಣುತ್ತದೆ.

ಸಾಮಾನ್ಯವಾಗಿ ಎಲ್ಲ ಕಡೆಯಲ್ಲಿ ಪುಟ್ಟಿಗಿಂತ ಪುಟ್ಟನೇ ಹೆಚ್ಚಾಗಿ ಇದ್ದಾನೆ. ಇದೂ ಒಂದು ಕುತೂಹಲದ ಸಂಗತಿ. ಆದರೆ ಎಲ್ಲಾ ಕಡೆಯಲ್ಲೂ ಪುಟ್ಟನೇ ಇದ್ದಾನೆ ಎಂದಲ್ಲ, ಪುಟ್ಟಿಯೂ ಅಲ್ಲಲ್ಲಿ ಇದ್ದಾಳೆ. ಆದರೆ ಇದೊಂದು ಪ್ರಶ್ನೆ ಮೂಡುವುದು ಸಹಜ ಎಂದು ನನಗೆ ಅನಿಸುತ್ತದೆ.

ಇಲ್ಲಿನ ಲಲಿತ ಬರಹಗಳು ಸರಳ ಭಾಷೆಯಲ್ಲಿ ಮಕ್ಕಳ ಲೋಕದ ವಿವಿಧ ಚಿತ್ರವನ್ನು ನಮಗೆ ಪರಿಚಯಿಸುತ್ತವೆ. ಇವರ ಕವಿತೆಗಳಲ್ಲಿ ಪುಟ್ಟ ಗಾಳಿಪಟ ಮಾಡಿ ಅದರ ಮೇಲೆ ಕುಳಿತು ಸ್ವರ್ಗಕ್ಕೆ ಹೋಗಿ ಉಂಡಿ ತಿಂದು ಬಂದರೆ, ಇಲ್ಲಿ ಪುಟ್ಟು ಹಕ್ಕಿಗಳನ್ನು ನೋಡುತ್ತ, ವಿಮಾನ ನೋಡುತ್ತ, ಮೋಡಗಳ ವಿವಿಧ ಆಕಾರಗಳನ್ನು ನೋಡುತ್ತ ಕೊನೆಗೆ ತಾನೇ ಮೋಡದ ಮೇಲೆ ಸವಾರಿ ಮಾಡುವ ಕಲ್ಪನೆ ವಿಶಿಷ್ಟವಾಗಿದೆ. ಹಾಗೇ ಅವನ ತಮ್ಮನ ಕತ್ತಲೆ ತೋರಿಸು ಎಂಬ ಹಟವೂ ಕೂಡಾ ಮಕ್ಕಳ ವಿಚಿತ್ರ ಹಟವನ್ನು ಪರಿಚಯ ಮಾಡಿಸುತ್ತದೆ. ಒಂದೇ ಕಥೆಯನ್ನು ಬೇರೆ ಬೇರೆ ರೀತಿಯಲ್ಲಿ ಹೇಳುವ ಅಜ್ಜಿಯ ಕಥೆಗಾರಿಕೆಗೆ ಮರುಳಾದ ಪುಟ್ಟ ತಾನು ಕಥೆಗಾರನಾಗಬೇಕೆಂಬ ನಿರ್ಣಯಕ್ಕೆ ಬರುವುದು ಇದೆ. ‘ನಮ್ಮ ಸರ್ ಹಾಗೇ ಇz’ೆ್ರ ಎಂಬ ಬರಹ ಆದರ್ಶ ಶಿಕ್ಷಕರು ಹೇಗಿರಬೇಕು ಎಂಬ ಪರಿಕಲ್ಪನೆ ತಿಳಿಸುತ್ತದೆ. ಒಟ್ಟಿನಲ್ಲಿ ಈ ಲಲಿತ ಬರಹಗಳು ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಕೊಟ್ಟ ಒಂದು ಹೊಸ ಕೂಡುಗೆ ಎಂಬುವುದರಲ್ಲಿ ಎರಡುಮಾತಿಲ್ಲ.

ಬೀಗಾರರ ವಿಸ್ತಾರವಾದ ಮಕ್ಕಳ ಸಾಹಿತ್ಯ ಕೊಡುಗೆಯ ಒಂದು ಅವಲೋಕನವನ್ನು ನಾನಿಲ್ಲಿ ಸಂಕ್ಷಿಪ್ತವಾಗಿ ಮಾಡಿದ್ದೇನೆ. ಮಕ್ಕಳ ಸಾಹಿತ್ಯವನ್ನೇ ಉಸಿರಾಗಿಸಿಕೊಂಡು ಅವಿರತವಾಗಿ ಮಕ್ಕಳಿಗಾಗಿಯೇ ಉತ್ತಮ ಸಾಹಿತ್ಯ ಬರೆಯುತ್ತಿರವ ಬೀಗಾರರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಬೀಗಾರರ ಮಕ್ಕಳ ಸಾಹಿತ್ಯ ಕನ್ನಡದ ಮಕ್ಕಳಿಗೆ ತಲುಪಿ ಅವರು ಹಾಡಿ ಕುಣಿದು ಖುಷಿ ಪಡಲೆಂದು ಬಯಸುತ್ತೇನೆ. ತಮ್ಮಣ್ಣ ಬೀಗಾರರ ಪರಿಶ್ರಮಕ್ಕೆ ಅವರನ್ನು ಕನ್ನಡ ಸಾಹಿತ್ಯ ಲೋಕ ಹೆಚ್ಚೆಚ್ಚು ಗುರುತಿಸಲಿ, ಅವರಿಗೆ ಹೆಚ್ಚಿನ ಯಶಸ್ಸು ದೊರೆಯಲಿ ಎಂದು ಹರ‍್ಯಸಿ ನನ್ನ ಅವಲೋಕನ ಮುಗಿಸುತ್ತೇನೆ.

‍ಲೇಖಕರು Admin

April 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ನೂತನ ದೋಶೆಟ್ಟಿ

    ತಮ್ಮಣ್ಣ ಬೀಗಾರ್ ಅವರಿಗೆ ಅಭಿನಂದನೆಗಳು. ಹಿರಿಯರಾದ ಭಾಗೀರತಿ ಮೇಡಂ ಅವರು
    ಬರೆದಿರುವುದು ಹಾಗೂ ಸವಿಸ್ತಾರವಾಗಿ ಬರೆದಿರುವುದು ಎರಡಕ್ಕೂ.
    ಸರಳವಾಗಿ ಪರಿಸರ,. ಸಂಬಂಧ, ಮೊದಲಾದ ದೊಡ್ಡ ದೊಡ್ಡ ವಿಷಯಗಳನ್ನು ನೀವು ಹೇಳಿದ್ದೀರಿ. ಉತ್ತರ ಕನ್ನಡದ ಕಾಡಿನಲ್ಲಿ ಹರಿಯುವ ಜುಳು ಜುಳು ನದಿಯಂತೆ ನಿಮ್ಮ ವಿಫುಲ ಸಾಹಿತ್ಯ ಸೇವೆ ಇದೆ.

    ಪ್ರತಿಕ್ರಿಯೆ
    • ತಮ್ಮಣ್ಣ ಬೀಗಾರ

      ಆತ್ಮೀಯ ವಂದನೆಗಳು ಮೇಡಂ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: