ತಡವಾಗಿ ಶಿವರಾತ್ರಿಗೊಂದು ಹಾಡು

ತಡವಾಗಿ ಮಹಾಶಿವರಾತ್ರಿಗೊಂದು ಹಾಡು

ಕೆರೇಕೈ ರಜನಿ

 

ಮಹಾಶಿವರಾತ್ರಿ ………

shiva madubaniಬೆಳಿಗ್ಗೆಯಿಂದಲೇ ಶ್ರೀಗೌರಿಗೆ
ಕುಂಡೆ ತುರಿಸಲು ಪುರುಸೊತ್ತಿಲ್ಲ.
ಆಳು ಮಕ್ಕಳ ಹಿಡಿದು ಕೈಲಾಸದ
ಚಪ್ಪರ-ಚಾವಣಿಯಾಗಬೇಕು,
ಬಂದವರಿಗೆಲ್ಲ ಊಟ-
ಆಸರಿಗೆಯ ಉಪಚಾರವಾಗಬೇಕು,
ಬೂದಿರಾಶಿ ಅಡಗಿಸಿ
ಸೆಗಣಿ ಸಾರಿಸಿ
ಇಂದಾದರೂ
ಸುತ್ತೆಲ್ಲ ರಂಗವಲ್ಲಿಯನಿಕ್ಕಿ
ತಲೆಬುರುಡೆ-ಮೂಳೆ ಚಕ್ಕಳದಪಾತ್ರೆ
ಬೆಳಗಿಡಬೇಕು.
ರುದ್ರಾಕ್ಷಿ, ರುಂಡಮಾಲೆ, ಬಿಲ್ಪತ್ರೆಗಳ
ಹೊಂದಿಸಿಡಬೇಕು.
ಚರುಮಧಾರಿಗೆ
ಹೊಂದುವ ಬಣ್ಣಗಳ
ತರತರದ ಹಾವುಗಳು ಓಡದಂತೆ
ಸುತ್ತಿಡಬೇಕು ಮೂಲೆಯಲಿ,
ರುಂಡಮಾಲಿಯ ಕೆಲಸ ಎಷ್ಟೆಷ್ಟು
ಮುಗಿಯದಷ್ಟು.

ಮೆಲ್ಲನೆ ತಲೆಯಿಂದಿಳಿದು
ಕೆನ್ನೆಸವರಿ ಹಾಗೆ
ಹರನ ಮೈಯ ನೇವರಿಸುತ್ತ
ಗಂಗೆ ಉಲಿಯುತ್ತ ನಡೆದು
ಜಟಾಜೂಟನ ಹುಡುಕಿ
ಜಡೆಯ ಸಿಕ್ಕು ಬಿಡಿಸಿ
ಕಂಡಲ್ಲಿ ಭಸುಮ ಬಳಕೊಂಡವನ
ಮೈತಿಕ್ಕಿ ತಿಕ್ಕಿ
ಮೀಯಿಸಬೇಕೆಂದಳು

shiva-coupleಭೂತ-ಪ್ರೇತಗಣಗಳು
ಸಿಕ್ಕಂತೆ ಕಳ್ಳುಕುಡಿದು
ಡಮರುಗವ ಬಡಿದು-
ಬಾರಿಸಿ ಮಳ್ಳರಂತಾಡದಂತೆ
ಜಾಗರಣೆಗೆ ಬಂದವರನೆಲ್ಲ
ಸ್ವಾಗತ ಮಾಡಿರೆಂದು
ಕಡುಎಚ್ಚರಿಕೆ ನೀಡಿ
ಮೂಗು-ಮುಖ ಒಂದಾಗುವಂತೆ
ಬೂದಿಯಲ್ಲಾಡುವ
ಷಣ್ಮುಖ, ಸಣ್ಣ ಕರಿಮುಖನ
ಮೀಯಿಸಿ ಅಣಿಯ ಮಾಡಲು
ಶ್ರೀಗೌರಿ ಹಂಡೆಯೆಡೆ
ಎಳೆದೊಯ್ದಳು

ತನ್ನೊಳು ತಾಮಿಂದು
ನೀರಸೀರೆಯನುಟ್ಟು
ತಲೆಬಾಚಿ-ತುರುಬುಕಟ್ಟಿ
ಮುಖ ತಿದ್ದಿ ತೀಡಿ
ಸಿಂಗರಗೊಂಡಾಕೆ
ತಿರುಬೋಕಿ ಬೋಳೆಶಂಕರನ
ಕೈಲಾಸ ತುಂಬೆಲ್ಲ
ಹುಡುಕುತ್ತ ಗಂಗೆ ನಡೆದಳು.

shivaಭೃಂಗಿ-ನಂದಿಗಳೊಂದು ಕಡೆ
ಶಿವಗಣಗಳು ಇನ್ನೊಂದೆಡೆ
ಚಪ್ಪರದಲಿ ಒತ್ತರಿಸಿ ನಿಂತವು.
ಪಾಪಾತ್ಮರೆಲ್ಲ
ಪಾಪನಾಶಿನಿಯಲಿ
ಮಿಂದು ಪಾವನರಾದರೂ,
ಕಹಿಯ ನುಂಗಿ-
ನಗುವ ನಂಜುಂಡನ
ದರುಶನಕೆ ಬಂದರು.
ಭಕುತರೆಲ್ಲ ಕೊರಳಲಿಕ್ಕಿದ
ಹಾರ-ಹೂ-ತುರಾಯಿಗಳನೆಲ್ಲ
ಹೊರೆಕಟ್ಟಿ ನಂದಿಬೆನ್ನಿಗೆ ಹೊರಿಸಿ
ನಿನಗೇ ನಾಳೆಗೆ
ಮೇಯಲೆಂದು ಎನುತ
ಕೋಲೆಬಸವನನು
ಕೊಟ್ಟಿಗೆಗೆ ಅಟ್ಟಿದಳು ಶ್ರೀಗೌರಿ

ಸಂಗೀತ-ನೃತ್ಯ
ನಾಟಕ –ನಗೆಬಗೆಗಳು
ನಟನಾಲೋಲನ ಖುಷಿಗೆ
ಅವನುಂಟು-ಅವನ ಗಣಗಳುಂಟು
ಮೋಜುಮಜಕೆ.
ಕಣ್ಣಕೊನೆಯಲಿ ಕಿಡಿಹಾಯಿಸಿ
ಆಣೆಅಪ್ಪಣೆಯಂತೆ ನಡೆಸಲು
ಶ್ರೀಗೌರಿಯುಂಟು.
ದಿನವೂ ಹೊತ್ತುತಿರುಗುವ
ನನ್ನ ಲೆಕ್ಕವೆಲ್ಲಿ ಅವಗೆ?
ಮಂದಬೆಳಕಿನ ತುಂಡುಚಂದ್ರಮನ
ಮುಂದೆ ಕಣ್ಣಹನಿಗೂಡಿಸಿದಳು ಸಲಿಲೆ.

shiva2ಸಭೆಯೂ-ಸಮಾರಂಭವೂ
ಜಾತ್ರೆ ಉತ್ಸವವೂ
ಪಾನಗೋಷ್ಟಿಯೂ ಎಂದು
ದಿನವೂ ತಡರಾತ್ರಿ ಬಂದು
ಮೈಮೇಲೆ ಹಾವುಹರಿದರೂ
ಎಚ್ಚರಾಗದೆ ಬಿದ್ದು
ನಿದ್ದೆಮಾಡುವ ಪಶುಪತಿಗೆ
ಹೊದೆಸಿ ಶ್ರೀಗೌರ
ಬೈಯ್ಯುತ್ತ ನಿದ್ದೆಹೋದಳು.

ದಿನ-ರಾತ್ರಿ ತ್ರಿನೇತ್ರನ
ಜಡೆಯಲಿ ಕುಂತು
ಶ್ರೀಗೌರಿ ಕಣ್ತಪ್ಪಿಸಿ
ಈಶನೊಡನೆ ಸಲ್ಲಾಪ
ಮಾಡುವಾಕೆ ಆಕೆ
ನಿತ್ಯ ಅಭಿಸಾರಿಕೆ.
ಮತ್ತೊಮ್ಮೆ ಕನ್ನಡಿಯ ನೋಡಿ
ತನ್ನತಾ ನೇವರಿಸಿಕೊಳ್ಳುತ್ತ
ಮೈಯಮುರಿದು ಆಕಳಿಸಿ
ಕಾಯುತ್ತ ಕುಂತಳು ಗಂಗೆ
ಗಂಗಾಧರನೊಡನೆ ಕಳೆವ
ಜಾಗರಣೆಯ ರಾತ್ರಿ
ಮಹಾರಾತ್ರಿಗೆ…….

 

‍ಲೇಖಕರು Admin

March 12, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಣೆ

ಆಣೆ

6 ಪ್ರತಿಕ್ರಿಯೆಗಳು

  1. Anonymous

    Super ಕಂಡ್ರೀ, ಅದೆಷ್ಟು ಚೆನ್ನಾಗಿ ಹಿಡಿದಿಟ್ಟಿದ್ದೀರಾ ಶಬ್ದ ಭಂಡಾರದಲ್ಲಿ ವಣ೯ನೆಯ ಮಹಾಪೂರ !

    ಪ್ರತಿಕ್ರಿಯೆ
  2. Mallappa

    ನೀಳ್ಗತೆಯಹಾಗೆ ಸರಳ ಶಬ್ದಗಳಲ್ಲಿ ಶಂಭೊಶಂಕರನ ಸಂಸಾರದ ಸರಿಗಮ, ಸರಸ ವಿರಸ, ಸಮರ್ಪಕವಾಗಿ ಮೂಡಿದೆ. ಗ್ರಾಮೀಣ ಹಿನ್ನೆಲೆಯಲ್ಲಿ ಶ್ರೀ ಗೌರಿ ಗೃಹ ಕಾರ್ಯದಲ್ಲಿ ಗುನಗುಣಿಸುವ ಸ್ವಗತದಂತಿದೆ. ಒಟ್ಟಿನಲ್ಲಿ ನಿಮ್ಮ “ರಗಳೆ” ರಾಗವಾಗಿ ಮನದ ಮೂಲೆಯಲ್ಲಿ ರಿಂಗಣಿಸುತ್ತಿದೆ.

    ಪ್ರತಿಕ್ರಿಯೆ
  3. ಕಾವ್ಯಶ್ರೀ ಎಚ್

    ಎಷ್ಟು ಚೆನ್ನಾಗಿ ಬರೆದಿದ್ದೀರಿ ರಜನಿ! ಸಂಭ್ರಮಿಸುತಿರುವುದು ಗಂಗೆಯೇ ಆದರೂ ಆ ಪುಳಕ ನನ್ನ ಮೈಯೊಳಗೂ ಹನಿಹನಿಯಾಗಿ ಇಳಿಯುತಿದೆ!

    ಪ್ರತಿಕ್ರಿಯೆ
  4. ಲಲಿತಾ ಸಿದ್ಧಬಸವಯ್ಯ

    ಈ ಜಡೆ ಅಯ್ಯನನ್ನು ಕಟ್ಟಿಕೊಂಡು ಏಗುವ ಗೌರಮ್ಮನ ತಾಪತ್ರಯಗಳನ್ನ ಚೆನ್ನಾಗಿ ಹಿಡಿದಿಟ್ಡಿದ್ದೀರಿ. ಬಹಳ ಖುಷಿಯಾಯ್ತು .

    ಪ್ರತಿಕ್ರಿಯೆ
  5. Kiran

    WOW!!!
    Usually I can’t finish any poetry as I lose my way midway thru most of the times, but this one is an awesome experience and felt like out of the world to me…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: