ಡೈಲಿ ಬುಕ್ : ಉಮಾರಾವ್ ಬರೆದ ’ವನಜಮ್ಮನ ಸೀಟು’

 

ರಾಧಿಕಾ


ಈಗೆಲ್ಲ ‘My Choice’ ಕಾಲ. ಅದೇನು ಹೊಸದೇ? ಖ್ಯಾತ ತಾರೆಯಿಂದ ಉದ್ಗಾರಗೊಂಡಿದ್ದರಿಂದ ಹೊಸತೆನಿಸುವಂತೆ ಕೇಳಿಸುತ್ತಿದೆ. ಆದರೆ ಸುತ್ತ ಮುತ್ತ ಕಣ್ಣು ಹಾಯಿಸಿದರೆ ಅನೇಕ ದಿಟ್ಟ ’My Choice’ ಮಹಿಳೆಯರು ಕಾಣುತ್ತಾರೆ.
ಉಮಾ ರಾವ್ ಅವರ ಕಥೆಗಳನ್ನು ಆಗಾಗ ಮಯೂರ, ಕೆಂಡ ಸಂಪಿಗೆ ಯಲ್ಲಿ ಓದಿ ರೂಢಿ. ಅವರ ಕಾದಂಬರಿ ಬಿಡುಗಡೆಯಾಯ್ತು ಅಂದಾಗ ಕುತೂಹಲ ಮೂಡಿಸಿತ್ತು. ಪುಸ್ತಕ ಕೈಗೆ ಬಂದಾಗ, ಇಷ್ಟು ಚಿಕ್ಕದಾ ಅನಿಸಿತ್ತು. ಆದರೆ ಓದಿಯಾದಮೇಲೆ ಚಿಕ್ಕ, ಚೊಕ್ಕ ಪುಸ್ತಕದ ನಾಯಕಿ ವನಜೆಯ ಮೇಲೆ ಅಭಿಮಾನ ಮೂಡಿ ಬಂತು.
ನಗರದಲ್ಲಿ ಹುಟ್ಟಿ ಬೆಳೆದ ಸುಶಿಕ್ಷಿತ ಹುಡುಗಿ ವನಜ, ಹಳ್ಳಿ ಮನೆಗೆ ಸೊಸೆಯಾಗಿ ಬರುತ್ತಾಳೆ. ಹಬ್ಬ, ಆಚರಣೆ, ಅಡುಗೆಮನೆ, ಅಲಂಕಾರ ಇವುಗಳಾಚೆಯೂ ತನ್ನದೇ ಆದ ಒಂದು ಜಗತ್ತಿದೆ ಎಂದು ದೃಢವಾಗಿ ನಂಬಿದವಳು. ಹಳ್ಳಿ ಇರಲಿ, ನಗರದಲ್ಲೂ ಹೆಂಗಳೆಯರು ಒಂಟಿಯಾಗಿ ನಾಟಕ, ಸಿನಿಮಾಕ್ಕೆ ಹೋಗಲು ಹಿಂದೆ ಮುಂದೆ ನೋಡುವಾಗ, ವನಜ ಆ ಅಲಿಖಿತ ಪರಿಧಿಯನ್ನು ಮೀರಿ ನಾಟಕ ನೋಡಲು ಹೋಗುವವಳು. ಊರಾಚೆಗಿರುವ ಆಳು ಮಕ್ಕಳು ಖಾಯಿಲೆ ಬಿದ್ದು ನರಳುತ್ತಾ, ’ಅಮ್ಮ’ ನಿಗೆ ಹರಕೆ ಹೊರುತ್ತಿದ್ದಾಗ ಸ್ವಚ್ಛತೆ ಬಗ್ಗೆ ತಿಳಿಸಿ, ಔಷಧೋಪಚಾರ ದೊರಕುವಂತೆ ನೋಡಿಕೊಳ್ಳುವವಳು. ಮೇಲು-ಕೀಳೆಂಬುದಿಲ್ಲದೆ ಎಲ್ಲರಲ್ಲೂ ಮನುಷ್ಯತ್ವವನ್ನು ಮಾತ್ರ ಹುಡುಕುತ್ತ, ಊರಲ್ಲಿ ಠಿಕಾಣಿ ಹೂಡಿದ ನಾಟಕದ ಕಂಪನಿಯ ಪಾತ್ರಧಾರಿಯಲ್ಲಿ ಉತ್ತಮ ಗೆಳತಿಯನ್ನು ಕಾಣುವವಳು. ಮದುವೆಯಾಗಿ ಅನೇಕ ವರ್ಷಗಳಾದರೂ ತನಗೆ ಮಕ್ಕಳಾಗದ್ದರ ಬಗ್ಗೆ ಊರಿನವರ ಅನವಶ್ಯಕ ಆಸಕ್ತಿ ಕಂಡು ಅಸಹ್ಯ, ಸಿಟ್ಟು ಪಡುವವಳು. ತನಗನಿಸಿದ್ದನ್ನು ನೇರಾ ನೇರ ನುಡಿಯುವವಳು. ತನ್ನ ಮೇಲೆ ಆಸೆ ಪಡುವ ಮೈದುನನನ್ನು ಧೈರ್ಯವಾಗಿ ಎದುರಿಸುವುದರ ಜೊತೆಗೆ ಆತನ ಮಾನಸಿಕ ಆರೋಗ್ಯದ ಬಗ್ಗೆ ಮರುಕ ಪಡುವವಳು. ಅವನ ಅರೋಗ್ಯ ಉತ್ತಮ ಪಡಿಸುವುದರ ಬಗ್ಗೆ ಅನಾದರ ತೋರುವ ಅತ್ತೆ, ಗಂಡನ ಬಗ್ಗೆ ತಿರಸ್ಕಾರ ಪಡುವವಳು. ಸ್ವಂತ ಬುದ್ದಿಯೆಂಬುದರ ಲವಲೇಶವೂ ಇಲ್ಲದ ಗಂಡನೊಡನೆ ಮಾಡುವ ನೀರಸ ಸಂಸಾರದಿಂದ ರೋಸಿ ಹೋಗಿ ಮದುವೆಯ ಬಂಧನದಿಂದ ಹೊರಬಂದು ತನ್ನ ಸ್ವಂತ ಬದುಕನ್ನು ಕಟ್ಟಿಕೊಂಡವಳು. ಹೆಂಗಳೆಯರ ಮನದ ಅಳಲು, ತಾಕಲಾಟಗಳನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ ಉಮಾ ರಾವ್ ಅವರು. ’ಯಾರಂತೆ ಅಂದರೆ ಊರಂತೆ’ ಅನ್ನುವ ರೂಡಿ ಮಾತಿಗಿಂತ ಭಿನ್ನವಾಗಿ ತನ್ನ ಆತ್ಮಾಭಿಮಾನಕ್ಕೆ ಕುಂದು ಬರದಂತೆ ಸ್ವಂತಿಕೆಯನ್ನುಳಿಸಿಕೊಂಡು, ಸ್ವಂತ ಉದ್ದಿಮೆಯನ್ನು ಸ್ಥಾಪಿಸಿ ಅನೇಕ ಮಂದಿಯ ಜೀವನಕ್ಕೆ ದಾರಿಯಾಗುವ ವನಜೆಯ ಕಥೆಯನ್ನು ಓದಿದಾಗ ಮನದಲ್ಲಿ ಹುರುಪು, ಮಂದಹಾಸ ಮೂಡುತ್ತದೆ. ನೀವೂ ಪುಸ್ತಕವನ್ನು ಓದಿ.

‍ಲೇಖಕರು G

April 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. oduga

    neevu pustaka innomme odhi. vanajammana oorinalli d c offeice ide. adu halli alla .jilla kendra.

    ಪ್ರತಿಕ್ರಿಯೆ
  2. Vinod Bangalore

    ಮಾಹಿತಿಯುಳ್ಳ ಲೇಖನಕ್ಕೆ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: