’ಸಿಜಿಕೆ ಒಬ್ಬ ಜೀವಂತ ತಲ್ಲಣ ಜೀವಿ’ – ಕಿ ರಂ ಬರೆದಿದ್ದರು

ಹೊಸ ಸಾಧ್ಯತೆಗಳ ಶೋಧಕ


ಸಿ.ಜಿ.ಕೆ. ನಮ್ಮ ಸಾಂಸ್ಕೃತಿಕ ಸಂದರ್ಭದ ವಿಶಿಷ್ಟ ವ್ಯಕ್ತಿ. ಅವರ ಆಸಕ್ತಿ, ತೊಡುಗುವಿಕೆಗೆ ಹಲುವು ಆಯಾಮಗಳಿವೆ. ಅಷ್ಟೆ ಅಲ್ಲದೆ ಸದಾ ಭಿನ್ನ ಯೋಜನೆ, ಯೋಚನೆಗಳನ್ನು ಕಾರ್ಯರೂಪಕ್ಕೆ ತಂದೇ ತರಬೇಕೆಂಬ ಹಂಬಲ ಅವರದು. ನಮ್ಮ ಸುತ್ತಣ ಸಮಾಜಿಕ- ರಾಜಕೀಯ ಚಳವಳಿಗಳು, ರಂಗಭೂಮಿ,ಕಾವ್ಯ, ಆರ್ಥಿಕ ವಿಚಾರಗಳೂ, ಸ್ನೇಹ-ಸಂಬಂಧ, ವ್ಯಕ್ತಿಗಳ ಸಮಸ್ಯೆಗಳಿಗೆ ತಕ್ಷಣದ ಪರಿಹಾರ – ಹೀಗೆ ಹಲವು ಬಗೆಗಳಲ್ಲಿ ಸದಾ ತೊಡಗಿಕೊಂಡಿರುವ ಸೂಕ್ಷ್ಮ ವ್ಯಕ್ತಿತ್ವ ಅವರದು. ಅವರು ಹೇಳಬೆಕಾದದ್ದನ್ನು ಯಾವ ಆತಂಕಗಳೂ ಇಲ್ಲದೆ ಹೇಳುತ್ತಾರೆ. ಪ್ರಿಯವಾದದ್ದನ್ನೇ ಹೇಳುತ್ತ ತಮ್ಮ ವ್ಯಕ್ತಿತ್ವವನ್ನು ಜಾಗರೂಕತೆಯಿಂದ ರಕ್ಷಿಸಿಕೊಳ್ಳುವುದು ಅವರಿಗೆ ಬೆಕಿಲ್ಲ. ಹೀಗಾಗಿ ಸಿ.ಜಿ.ಕೆ. ಶತ್ರುಪಕ್ಷ ಹಾಗೂ ಮಿತ್ರಪಕ್ಷ ಇಬ್ಬರಿಗೂ ಸಮಾನವಾಗಿ ಇಷ್ಟವಾಗುತ್ತಾರೆ.
ಸಿ.ಜಿ.ಕೆ. ಪ್ರತಿಭೆ ಮೂಲತಃ ಪ್ರಾಗ್ಮಾಟಿಕ್ ಸ್ವರೂಪದ್ದು. ಯಾವುದೇ ಚಿಂತನೆ, ವಿಚಾರ, ತಾತ್ವಿಕ ನೆಲೆ ಇರಲಿ, ಅದನ್ನು ನಮ್ಮ ಸದ್ಯದ ವ್ಯಾವಹಾರಿಕ ಸಂದರ್ಭದೊಂದಿಗೆ ಸೂಕ್ಷ್ಮವಾಗಿ ಪರಿಶೀಲಿಸುವ ತುರ್ತು ಅವರದು. ಒಂದು ಕಾಲಮಾನದ ಲಯಕ್ಕೆ, ಜೀವಂತಿಕೆಗೆ ಮೈಕೊಡುವ ಧೋರಣೆ ಅವರ ಎಲ್ಲ ಕ್ರಿಯೆಗಳ ಹಿಂದೆ ಒಂದು ಸಮತೋಲದ ಶ್ರುತಿಯಾಗಿ ಕೆಲಸ ಮಾಡುತ್ತಿರುತ್ತದೆ. ನಾನು ಸಿ.ಜಿ.ಕೆ.ಯನ್ನು ಗ್ರಹಿಸುತ್ತ ಬಂದಿರುವುದು ಹೀಗೆ.
ಸಿ.ಜಿ.ಕೆ. ಅರ್ಥಶಾಸ್ತ್ರದ ಪ್ರಾಧ್ಯಾಪಕರು. ಅದರ ಜೊತೆಗೆ ರಂಗಭೂಮಿ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮುಖ್ಯ ಚಿಂತಕರು. ಈ ಹೊತ್ತಿನ ಸಾಸ್ಕೃತಿಕ ವಿದ್ಯಮಾನಗಳು ಹಾಗೂ ಆರ್ಥಿಕ ಸಂಬಂಧಗಳ ವಿಭಿನ್ನ ನೆಲೆಗಳನ್ನು ಕುರಿತು ಗಂಭೀರವಾಗಿ ವಿಚಾರ ಮಾಡುತ್ತಿರುವವರೂ ಕೂಡ. ಈ ಸಂಬಂಧವಾದ ಅಧ್ಯಯನದ ಕಡೆಗೆ ವಿಶಿಷ್ಟ ಚಿಂತನೆಯನ್ನು ನಡೆಸಲು ಅವರು ಮುಂದಾಗಿದ್ದರು. ಇಂಥ ಅಧ್ಯಯನ ಪ್ರಕಟಿತ ರೂಪವನ್ನು ಪಡೆಯಲಿಲ್ಲವಾದರೂ ಆ ಸಂಬಂಧಗಳನ್ನು ಕುರಿತು ನಮ್ಮ ಸಂದರ್ಭದಲ್ಲಿ ಕೇವಲ ತೇಲಿಕೆಯ ವಿವರಣೆಗಳು ಮಾತ್ರ ಅಷ್ಟಿಷ್ಟು ಹರಡಿಕೊಂಡಿವೆ. ಕಲೆಯಿಂದ ಅನಾವರಣಗೊಳ್ಳುವ ಸಂವೇದನಾಶೀಲ ವಿಶಿಷ್ಟ ಅನುಭೂತಿಗೂ, ಅದು ನಿರ್ಮಾಣಗೊಳ್ಳಲು ಬಳಕೆಯಾಗುವ ಶ್ರಮಶಕ್ತಿಗೂ ಇರುವ ಅಂತರ್ ಸಂಬಂಧಗಳು ನಮ್ಮ ಚರ್ಚೆಯ ಮುಖ್ಯ ಭಾಗ ಆಗದೇ ಹೋಗಿರುವುದು ಒಂದು ದೊಡ್ಡ ವಿಪರ್ಯಾಸ. ಕಲೆಯ ಪ್ರಪಂಚದಿಂದ ಪ್ರತೀತವಾಗುತ್ತದೆ ಎನ್ನಲಾಗುವ ವ್ಯಾಪಕವೂ, ವಿಶಿಷ್ಟವೂ ಆದ ಅನುಭವಲೋಕ ಹೇಗೆ ಮನುಷ್ಯ ಶ್ರಮದಿಂದ ರೂಪುಗೊಂಡದ್ದು ಎಂಬುದರ ತಿಳುವಳಿಕೆ ಕಲೆಯ ಗ್ರಾಹಕರಿಗೆ ಅಷ್ಟಾಗಿ ತಿಳಿಯದೇ ಹೋಗಿದೆ. ಅದರಲ್ಲಿಯೂ ನಾಟಕದಂಥ ಸಮುದಾಯ ವಿಶಿಷ್ಟ ಕಲಾನಿರ್ಮಿತಿಯಲ್ಲಿ ಇದೇ ಪ್ರಧಾನ ಎಂಬುದನ್ನು ನಾವು ಮರೆಯುವಂತಿಲ್ಲ. ಕಲೆಯ ಜಗತ್ತು ಹೆಚ್ಚು ಹೆಚ್ಚು ಯಾಂತ್ರಿಕಗೊಳ್ಳುತ್ತ ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ರಂಗಭೂಮಿಯಂಥ ಜೀವಕ್ಷೇತ್ರಗಳು ಆಧುನಿಕ ಮಾರುಕಟ್ಟೆಯ ಸ್ಪರ್ಧೆಯೊಂದಿಗೆ ಸೆಣಸಬೇಕಾಗಿ ಬಂದಿದೆ. ಈ ಸಮಸ್ಯೆ ಸವಾಲುಗಳಿಗೆ ಕನ್ನಡ ನಾಡಿನ, ಅಷ್ಟೇ ಏಕೆ ದೇಶದ ಎಲ್ಲ ಭಾಗಗಳರಂಗಭೂಮಿ ಅನೇಕ ಮಟ್ಟದ ಉತ್ತರಗಳನ್ನು ಕಂಡುಕೊಳ್ಳುವತ್ತ ಪ್ರಯತ್ನಿಸುತ್ತಿವೆ. ಇದು ಮುಂದಿನ ದಿನಗಳಲ್ಲಿ ಯಾವ ಫಲವನ್ನು ಕೊಡುತ್ತದೆಯೋ ನೋಡಬೇಕು. ಇಷ್ಟೆಲ್ಲ ಮಾತುಗಳನ್ನು ಏಕೆ ಹೇಳಬೇಕಾಯಿತೆಂದರೆ ಇಂಥ ಗಾಢ ಸಮಸ್ಯೆಯನ್ನು ಸಿ.ಜಿ.ಕೆ. ಎದುರಿಸುತ್ತ ಬಂದಿರುವುದು ಹಾಗೂ ನಿಭಾಯಿಸುವ ಹೊಣೆಯನ್ನು ಕಳೆದ ಎರಡು ದಶಕಗಳಿಂದ ನೋಡುತ್ತ ಬಂದಿರುವ ನನಗೆ ಇಂದಿಗೂ ತುಂಬ ಮುಖ್ಯ ಎನಿಸಿದೆ.
ಸಿ.ಜಿ.ಕೆ. ಅವರ ಈ ಪುಸ್ತಕ ಅವರ ಹುಟ್ಟಿನಿಂದ ಹಿಡಿದು ಈತನಕದ ಅಸಂಖ್ಯ ವಿವರಗಳೀಂದ ತುಂಬಿದೆ. ಸಿ.ಜಿ.ಕೆ. ತಮ್ಮ ದೈಹಿಕ ಊನಗಳನ್ನು ಕುರಿತು, ಆ ಸಂಬಂಧದ ಸಮಸ್ಯೆಗಳನ್ನು ಕೂಡ ನಿಚ್ಚಳವಾಗಿ ತಮ್ಮ ಬರಹದಲ್ಲಿ ಪ್ರಸ್ತಾಪಿಸಿದ್ದಾರೆ. ಮಂಡ್ಯದಂಥ ಜಗತ್ತಿನಿಂದ ವಿಸ್ತಾರವಾದ ಬೆಂಗಳೂರಿನ ಜಗತ್ತಿಗೆ ಬಂದು ಅವರು ತೊಡಗಿಕೊಂಡ ಕ್ರಮವನ್ನು ಅವರ ಈ ಜೀವನ ಕಥನ ನಿರೂಪಿಸಿದೆ. ಸಿ.ಜಿ.ಕೆ. ಶ್ರಮ ಜೀವನದಿಂದ ಲೋಕಾನುಭವಗಳನ್ನು ಕಂಡುಂಡ ಮನುಷ್ಯ. ಹೀಗಾಗಿ ಅನುಭವವೇ ಮುನುಷ್ಯನ ವ್ಯಕ್ತಿತ್ವ ಎಂಬುದಕ್ಕೆ ಅವರೊಬ್ಬ ಜ್ವಲಂತ ಸಾಕ್ಷಿ.
ಈ ಪುಸ್ತಕದ ತುಂಬ ಅಸಂಖ್ಯ ಪ್ರಸಂಗಗಳ ನಿರೂಪಣೆ ಇದೆ. ಈ ಒಂದೊಂದು ನಿರೂಪಣೆಯೂ ತನ್ನಿಂದ ತಾನೇ ಒಂದು ಕಥೆಯೋ, ನಾಟಕವೋ ಆಗುವ ಶಕ್ತಿಯನ್ನು ಪಡೆದುಕೊಂಡಿದೆ.
ಸಿ.ಜಿ.ಕೆ. ಸ್ಮರಣೆಗಳ ಜಗತ್ತನ್ನು ವರ್ತಮಾನಕ್ಕೆ ತಂದು ಅದಕ್ಕೆ ಕ್ರಿಯಾಶೀಲ ಸೂಕ್ಷ್ಮತೆಯನ್ನು ತಂದುಕೊಡುವ ಶಕ್ತಿ ಇರುವ ಗಂಭೀರ, ಗಟ್ಟಿ ನಿರ್ದೇಶಕರಲ್ಲಿ ಒಬ್ಬರು ಇದನ್ನು ‘ಮಹಾಚೈತ್ರ’, ‘ಒಡಲಾಳ’ದಂತಹ ರಂಗನಿರ್ಮಿತಿಯಲ್ಲಿ ಸಾಬೀತು ಮಾಡಿದ್ದಾರೆ.
ಸಿ.ಜಿ.ಕೆ.ಯವರ ಇಡೀ ಬರಹವನ್ನು ಓದಿದಾಗ ಅವರ ಸಾಂಸ್ಕೃತಿಕ ಕಾಳಜಿಗಳೇ ಅವರ ವೈಕ್ತಿಕ ಜೀವನ ವಿವರಗಳೋಂದಿಗೆ ಹೆಣೆದುಕೊಂಡಿರುವುದು ವ್ಯಕ್ತವಾಗಿದೆ. ಅವರ ಸಾರ್ವಜನಿಕ ಆಸಕ್ತಿ, ರಾಜಕೀಯದಲ್ಲಿ ತೊಡಗುವಿಕೆ, ಸಾಮಾಜಿಕ ಸಂಬಂಧೀ ಎಲ್ಲವುಗಳ ಸಮಗ್ರತೆ ನಮ್ಮ ಕಾಲದ ಗಾಂಭೀರ್ಯಗಳನ್ನು ಪ್ರತಿನಿಧಿಸುತ್ತವೆ.
ಸಿ.ಜಿ.ಕೆ. ವ್ಯಕ್ತಿತ್ವಕ್ಕೆ ಎರಡು ನೆಲೆಗಳಿವೆ. ಮೊದಲನೆಯದು ತುಂಬಾ ಖಾಸಗಿಯಾದದ್ದು. ಎರಡನೆಯದು ಬಹುಮುಖಿಯಾದದ್ದು. ಇವೆರಡನ್ನೂ ಕ್ರಿಯಾತ್ಮವಕವಾಗಿ ಸಂಯೋಜಿಸುವುದೇ ಅವರ ಪ್ರತಿಭೆ. ಎಲ್ಲ ಚಿಂತನೆಗಳನ್ನು ಗಂಭೀರವಾಗಿ ಕರಗಿಸಿ ಅದಕ್ಕೆ ತಕ್ಕ ರೂಪವನ್ನು ನಿರಂತರವಾಗಿ ನಿರ್ಮಿಸುವುದರಲ್ಲಿ ಅವರು ಪರಿಣಿತರು. ನಿರ್ಧಾರಿತ ಕಲ್ಪನೆಗಳನ್ನು ಒಡೆದು ಹೊಸ ಸಾಧ್ಯತೆಗಳನ್ನು ಶೋಧಿಸುವುದರಲ್ಲಿ ಅವರು ನಿರಂತರ ಆಸಕ್ತರು.
ಈಗಾಗಲೇ ಹೆಪ್ಪುಗಟ್ಟಿರುವ, ರಂಗಸಮಯವನ್ನು ಪ್ರಶ್ನಿಸುವ ಅವರ ಮನೋಧರ್ಮ ಕನ್ನಡ ರಂಗಭೂಮಿಯಲ್ಲಿ ಒಂದು ಹೊಸ ಬಗೆಯ ಮನೋಚಾಲನೆಯನ್ನು ನಿರ್ಮಾಣವಾಡಿದೆ. ಹೀಗಾಗಿ ಸಿ.ಜಿ.ಕೆ. ಅವರು ಬೇರೆಲ್ಲ ನಿರ್ದೇಶಕರಿಗಿಂತ ತಮ್ಮದೇ ಆದ ಹೊಸ ನಿರ್ದೇಶನದ ಕ್ರಿಯಾವಂತಿಕೆಯನ್ನು ಸ್ಥಾಪಿಸಿದ್ದಾರೆ. ಸಿ.ಜಿ.ಕೆ. ಯವರ ಈ ಕೃತಿ ಕೇವಲ ರಂಗಾಸಕ್ತಿಯ ಕೃತಿ ಅಲ್ಲ. ಸಾಸ್ಕೃತಿಕ ಸಂದರ್ಭದಲ್ಲಿ ನಿಜವಾಗಿ ದುಡಿದ ಜೀವಿಯೊಬ್ಬನ ತಲ್ಲಣ. ಎಂದರೆ ಅಂಥ ಎಲ್ಲರ ತಲ್ಲಣಗಳು.
ಸಿ.ಜಿ.ಕೆ. ಒಬ್ಬ ಜೀವಂತ ತಲ್ಲಣ ಜೀವಿ. ಕಲೆ ಸುತ್ತಲ ಜಗತ್ತನ್ನು ಅದೆಷ್ಟು, ಹೇಗೆ ಅರ್ಥಪೂರ್ಣವೂ ನಿಜವನ್ನಾಗಿಯೂ ಮಾಡಬಹುದೆಂಬ ತೊಡಗುವಿಕೆಯಲ್ಲಿ ಅವರಿದ್ದಾರೆ.
ಸಿ.ಜಿ.ಕೆ. ಯವರ ಆತ್ಮಕಥನ ಅವರ ವಿಶಿಷ್ಟ ವ್ಯಕ್ತಿತ್ವದ ಅನೇಕ ಸೂಕ್ಷ್ಮಗಳನ್ನು ದಾಖಲಿಸಿದೆ. ಒಂದು ರೀರಿಯಲ್ಲಿ ಇದೊಂದು ಸಾಹಸ ಕಥನ. ಗ್ರಾಮೀಣ ಪರಿಸರದಿಂದ ನಗರಕ್ಕೆ ಬಂದು ತನ್ನ ಅನನ್ಯತೆಯನ್ನು ಹುಡುಕಿಕೊಳ್ಳುವ ವ್ಯಕ್ತಿಯೊಬ್ಬನ ಸಂಕೀರ್ಣ ಹೋರಾಟದ ಕಥನ ಕೂಡಾ ಆಗಿದೆ. ಸಿ.ಜಿ.ಕೆ. ವ್ಯಕ್ತಿಗಳ ಮನಸ್ಸನ್ನು ಸೂಕ್ಷ್ಮವಾಗಿ ಅವಲೋಕಿಸುವ ಪರಿ ತುಂಬ ವಿಶಿಷ್ಟವಾದದ್ದು. ವ್ಯಕ್ತಿ ಸಂಬಂಧ ಹಾಗೂ ಸಾಮುದಾಯಕ ಸಾಸ್ಥಿಕ ಸಂಬಂಧ ಇವೆರಡೂ ಬೇರೆ ಎನಿಸದೆ ತೊಡಗಿಕೊಳ್ಳುವ ಅವರ ವ್ಯಕ್ತಿತ್ವದಲ್ಲಿ ಮಾನವೀಯ ಸ್ಪರ್ಶ ಸದಾ ಪುಟಿಯುತ್ತಿರುತ್ತದೆ.
ಸಿ.ಜಿ.ಕೆ. ನಾಡಿನ ಹಲವಾರು ಚಳವಳಿಗಳ ಮೂಲಕ ಹಾಯ್ದು ಬಂದವರು. ರಂಗನಿರಂತರ ಸಂಸ್ಥೆಯ ಮೂಲಕ ವಿಶಿಷ್ಟ ಪ್ರಯೋಗಗಳನ್ನು ರೂಪಿಸಿದರು. ಜಡತೆಯನ್ನು ಸಹಿಸದ ಸಿ.ಜಿ.ಕೆ. ಎಂಥ ಸೋಮಾರಿಯನ್ನೂ ಕ್ರಿಯಾಶಾಲಿಯನ್ನಾಗಿ ಮಾಡಬಲ್ಲ ಸಾಮರ್ಥ್ಯ ಅವರದು. ಈ ಆತ್ಮಕಥನದಲ್ಲಿ ದಾಖಲಾಗಿರುವ ಅನೇಕ ಸಂದರ್ಭ-ಸನ್ನಿವೇಶಗಳು ಈ ಮಾತಿಗೆ ಪುರಾವೆಯನ್ನು ಒದಗಿಸುತ್ತವೆ.
ಕಿ ರಂ ನಾಗರಾಜ
 
 
 

‍ಲೇಖಕರು G

April 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: