ಡಿ ಎಸ್ ರಾಮಸ್ವಾಮಿ ಕಂಡಂತೆ ವಾಸುದೇವ ನಾಡಿಗ್ ಕಾವ್ಯ

ನಾಸಿಕಕ್ಕಷ್ಟೇ ಅಲ್ಲದೆ ಬುದ್ಧಿ ಭಾವಗಳಿಗೂ ಅಂಟುವ ‘ಪರಿಮಳ’ದ ನಂಟು.

ವಾಸುದೇವ ನಾಡಿಗರ ೫೦ನೆಯ ಹುಟ್ಟುಹಬ್ಬ ನಿನ್ನೆ ಜರುಗಿತು. ಈ ಹಿನ್ನೆಲೆಯಲ್ಲಿ ಕವಿ ಡಿ ಎಸ್ ರಾಮಸ್ವಾಮಿ ತಮ್ಮ ಗೆಳೆಯನ ಕಾವ್ಯದ ಬಗ್ಗೆ ಬರೆದ ಟಿಪ್ಪಣಿ ಇಲ್ಲಿದೆ-

ಡಿ ಎಸ್ ರಾಮಸ್ವಾಮಿ

ನವ್ಯದ ಶಾಲೆಯ ಕಡೇ ಬ್ಯಾಚಿನ ಹಿಂದಿನ ಬೆಂಚಿನ ನಮ್ರ ವಿದ್ಯಾರ್ಥಿ ಈ ನಾಡಿಗ ಎಂದು ಆಗೀಗ ನಾನು ಹೇಳುತ್ತಲೇ ಇರುತ್ತೇನೆ. ಎಂಭತ್ತರ ದಶಕದ ಅರ್ಧ ಭಾಗ ಕಳೆದ ಮೇಲೆ ಕನ್ನಡದಲ್ಲಿ ಕವಿತೆ ಬರೆಯಲು ತೊಡಗಿದ ಎಲ್ಲರನ್ನೂ ನವ್ಯ ಕಳೆದ ಬಂಡಾಯದ ಕಾವು ಆಚೀಚೆಗೆ ನೋಡಲು ಬಿಡದೇ ಒಟ್ಟೂ ವ್ಯವಸ್ಥೆಯ ಅಂಕುಡೊಂಕನ್ನು ಮತ್ತಷ್ಟು ದೊಡ್ಡದು ಮಾಡಿ ಬೊಬ್ಬಿರಿಯುವಂತೆ ಮಾಡಿತ್ತು.

ಲಂಕೇಶ್ ಪತ್ರಿಕೆ ಓದದೇ ಇದ್ದರೆ ನೀನಾಸಂ ಶಿಬಿರದಲ್ಲಿ ಭಾಗವಹಿಸದೇ ಇದ್ದರೆ ತೇಜಸ್ವಿಯವರು ಆಗ ತಾನೆ ಬರೆಯಲು ಆರಂಭಿಸಿದ್ದ ಮಿಲೆನಿಯಂ ಸೀರೀಸಿನ ಪುಸ್ತಕಗಳನ್ನು ಖರೀದಿಸದೇ ಇದ್ದರೆ ತೊಂಭತ್ತರ ದಶಕದಲ್ಲಿ ಕವಿತೆ ಬರೆಯುವುದು ಸಾಧ್ಯವೇ ಇಲ್ಲ ಅನ್ನುವದರ ನಡುವೆಯೂ ಚಿ. ಶ್ರೀನಿವಾಸ ರಾಜು ಮೇಷ್ಟ್ರು ಬೇಂದ್ರೆಯವರ ಜನ್ಮ ದಿನಾಚರಣೆ ಕವಿದಿನಕ್ಕಾಗಿ ಕಾಲೇಜು ಹುಡುಗ ಹುಡುಗಿಯರ ಪದ್ಯಗಳ‌ನ್ನು ಶೋಧಿಸಿ ಕೈ ತುಂಬ ಪುಸ್ತಕ ಕೊಟ್ಟು ಕಳಿಸುತ್ತಿದ್ದರು.

ಹಾಗೆ ಪುಸ್ತಕ ಪರಿಚಾರಿಕೆಯ ಚಿ. ಶ್ರೀನಿವಾಸರಾಜು ರೂಪಿಸಿದ ಕವಿಗಳ ಪೈಕಿ ಈ ವಾಸುದೇವ ನಾಡಿಗರು ಅವರ ಜೊತೆಗೇ ಬರೆಯಲು ಆರಂಭಿಸಿದ್ದ ಉಳಿದವರಿಗಿಂತಲೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿದರು, ಬಹುಮಾನ ಮತ್ತು ಪ್ರಶಸ್ತಿಗಳನ್ನು ಪಡೆದುಕೊಂಡರು ಮತ್ತು ವಿಶೇಷವಾಗಿ ನವ್ಯೋತ್ತರ ಕಾಲದ ಬಂಡಾಯ ಮತ್ತು ದಲಿತ ಕಾವ್ಯದ ನೆರಳಾಚೆಗೆ ಉಳಿದೂ ನವ್ಯ ಕಾವ್ಯದ ಸಮರ್ಥಕರಾಗಿ ಇವತ್ತಿಗೂ ಕಾವ್ಯಕರ್ಮದಲ್ಲಿ ಕಾವ್ಯಕೃಷಿಯ ಸಹಜ ಬೆಳೆಗೆ ಕೈ ಹಾಕಿ ತಕ್ಕ ಮಟ್ಟಿಗೆ ಯಶಸ್ವಿಯೂ ಆದವರು.

೨೦೧೬ರಲ್ಲಿ ಪ್ರಕಟವಾದ ಅವರ ‘ಅಲೆ ತಾಕಿದರೆ ದಡ’ ಸಂಕಲನ ಕುರಿತು ಅಂತರ್ಜಾಲದ ‘ಅವಧಿ’ಯಲ್ಲಿ ನಾನೇ ಬರೆದಿದ್ದ ಲೇಖನದ ಕೆಲವು ಸಾಲುಗಳನ್ನು ಇಲ್ಲಿ ಬೇಕೆಂತಲೇ ಉಲ್ಲೇಖಿಸುತ್ತಿದ್ದೇನೆ.

ನವ್ಯದ ನೆರಳಿನಲ್ಲಿ ಅಂದರೆ ಅದರ ಪಳೆಯುಳಿಕೆಯಂತೆ ಬರೆಯುತ್ತಿರುವ ಕವಿಗಳಲ್ಲಿ ವಾಸುದೇವ ನಾಡಿಗರೂ ಒಬ್ಬರು. ನಾಡಿಗರ ಆರನೆಯ ಸಂಕಲನ ‘ಅಲೆ ತಾಕಿದರೆ ದಡ’ ತುಮಕೂರಿನ ಗೋಮಿನಿ ಪ್ರಕಾಶನ ಪ್ರಕಟಿಸಿದೆ. ೧೯೯೪ರಲ್ಲಿ ತಮ್ಮ ಮೊದಲ ಸಂಕಲನ ‘ವೃಷಭಾಚಲದ ಕನಸು’ ಪ್ರಕಟಿಸುವ ಮೂಲಕ ಪ್ರಸಿದ್ಧಿಗೆ ಬಂದ ಅವರ ಇತರ ಸಂಕಲನಗಳೆಂದರೆ ‘ಹೊಸ್ತಿಲು ಹಿಮಾಲಯದ ಮಧ್ಯೆ’ (೨೦೦೪) ‘ಭವದ ಹಕ್ಕಿ’ (೨೦೦೮) (ಹಸ್ತಪ್ರತಿಗೆ ಮುದ್ದಣ ಕಾವ್ಯ ಪ್ರಶಸ್ತಿ ದಕ್ಕಿದೆ  ಮತ್ತು ಜ್ಯೂರಿಯಲ್ಲಿ ನಾನೂ ಒಬ್ಬನಾಗಿದ್ದೆ) ‘ವಿರಕ್ತರ ಬಟ್ಟೆಗಳು’ (೨೦೧೨) ಮತ್ತು ಕಡೆಂಗೋಡ್ಲು ಪ್ರಶಸ್ತಿ ಪಡೆದ ‘ನಿನ್ನ ಧ್ಯಾನದ ಹಣತೆ’ (೨೦೧೪). ಇದೀಗ ಈ ಸಂಕಲನ (೨೦೧೬)

ಅವರ ಸಂಕಲಗಳನ್ನೂ ಅವು ಪ್ರಕಟವಾದ ವರ್ಷಗಳನ್ನೂ ನಮೂದಿಸುವುದಕ್ಕೂ ಕಾರಣಗಳಿವೆ. ಇವತ್ತು ಬರೆಯಲು ಪ್ರಾರಂಭಿಸಿ ಪ್ರಸಿದ್ಧಿ ಪಡೆದು ನಾಳೆಗೇ ಮುಗಿದು ಹೋಗುವ ಅಸಂಖ್ಯ ಸಂಖ್ಯೆಯ ಕವಿಗಳಿರುವ ಹೊತ್ತಿನಲ್ಲಿ ನಾಡಿಗರು ಇನ್ನೂ ತಮ್ಮ ಬರವಣಿಗೆಯನ್ನು ಕಾಪಿಟ್ಟುಕೊಂಡಿರುವುದಕ್ಕೆ ಮೊದಲು ಅಭಿನಂದಿಸಬೇಕು. 

ಸದ್ಯದ ಕನ್ನಡ ಕಾವ್ಯ ಕ್ರಿಯೆ ಯಾವ ಹಾದಿಯಲ್ಲಿದೆ ಎಂದು ಹುಡುಕ ಹೊರಟವರಿಗೆ ಅದರ ಅಬ್ಬರ ಸಾಮಾಜಿಕ ಜಾಲತಾಣಗಳಲ್ಲಷ್ಟೇ ಕಾಣುತ್ತಿದೆ. ಅನುಭವ ಸಾಂಧ್ರವಾಗುವ ಮೊದಲೇ ಮುಖ ಪುಸ್ತಕದಲ್ಲೋ, ಗುಂಪಿನಲ್ಲೋ ತೇಲಿಬಿಟ್ಟು ನಿರಾಳವಾಗುವ ಮನಸ್ಸುಗಳಿಗೆ ಅಲ್ಲಿ ಹುಟ್ಟುವ ಲೈಕುಗಳೇ ಮುಖ್ಯವಾಗಿ ಕಾವ್ಯ ಕ್ರಿಯೆಗೆ ಬೇಕಾದ ಅಸಲಿ ವ್ಯಾಯಾಮಗಳೇ ಗೌಣವಾಗುತ್ತಿವೆ. ಕವಿತೆ ಬೇಡುವ ಧ್ಯಾನಸ್ಥ ಸ್ಥಿತಿ  ಇಂಥವರಲ್ಲಿ ಮಾಯವಾಗಿರುವುದೂ ಈ ಹೊತ್ತಿನ ಸತ್ಯ. ಆದರೂ ಅಪರೂಪಕ್ಕೆ ಪತ್ರಿಕೆಗಳ ಪುರವಣಿಗಳಲ್ಲಿ ಅದೂ ಜಾಹೀರಾತಿನ ನಡುವೆ ನರಳುತ್ತಲೇ ಪ್ರಕಟವಾಗುವ ಕವಿತೆಯೊಂದು ಹಲವು ದಿನ ಉಳಿಯುವುದು ಅನುಮಾನ.

ಇಂಥ ಅನುಮಾನಗಳನ್ನೂ ಸದ್ಯೋವರ್ತಮಾನದ ಆತಂಕಗಳನ್ನೂ ಮೀರಿ ಬರೆಯುತ್ತಿರುವ ಮತ್ತು ಉಳಿಯುವಂತೆ ನಾಟುವಂತೆ ಬರೆಯುತ್ತಿರವವರಲ್ಲಿ ವಾಸುದೇವ ನಾಡಿಗರೂ ಒಬ್ಬರು. ಪ್ರಸ್ತುತ ಅವರ ಸಂಕಲನದ ಮುಖ್ಯ ಪದ್ಯಗಳಲ್ಲೊಂದರಲ್ಲಿ ಈ ಸಾಲುಗಳಿವೆ-

ಹೆಳವನ ಹೆಗಲು ಖಾಲಿ ಇದೆ
ಕುರುಡ ಕೂಡದಂತೆ ಕಾಯಬೇಕು

(ಅಡಿಗರ ಪದ್ಯ ನೆನಪಾಗಲೇ ಬೇಕು) ಅನ್ನುವುದು ಥಟ್ಟನೆ ನಮ್ಮನ್ನು ಆವರಿಸಿಬಿಟ್ಟರೂ ಮರು ಓದಿನಲ್ಲಿ ‘ಕೂಡುವುದು’ ಕೂಡ್ರುವುದು ಆಗಬೇಕಿತ್ತಲ್ಲವೇ ಅನ್ನುವ ಅನುಮಾನ ಕೂಡ ಕಾಡತೊಡಗುತ್ತದೆ. ಏಕೆಂದರೆ ಕಾವ್ಯ ಪರಂಪರೆ ಅರಿತವರಿಗೆ ಕೂಡುವುದಕ್ಕೂ ಕೂರುವುದಕ್ಕೂ ಇರುವ ವ್ಯತ್ಯಾಸ ಗೊತ್ತಿರುತ್ತದೆ. (ಅದು ಟೈಪಿಂಗ್ ತಪ್ಪಾಗಿರಲಿ ಎಂದು ಹಾರೈಸುತ್ತೇನೆ) 

ಸಂಕಲನಕ್ಕೆ ಮುನ್ನುಡಿ ಒದಗಿಸಿರುವ ಡಾ.ಮೂಡ್ನಾಕೂಡು ಚಿನ್ನಸ್ವಾಮಿಯವರಂತೂ ‘ಏಕಾಂತದ ಮಾತು ಸಂತೆಯಲ್ಲಿ ಬೆರೆತ ಬೆರಗು’ ಎನ್ನುವ ಶೀರ್ಷಿಕೆ ಕೊಟ್ಟು ಒಟ್ಟೂ ಸಂಕಲನದ ಬಗ್ಗೆ ಒಂದೇ ಸಾಲಿನ ವಿಮರ್ಶೆಯನ್ನೂ ಕೊಡಮಾಡಿದ್ದಾರೆ.

ಏಕಾಂತದಲಿ ಹುಟ್ಟುವ ನನ್ನ ಕವಿತೆಗಳು
ಗದ್ದಲಗಳ ನಡುವೆ ಮತಾಡುತ್ತಿವೆ
ತಕರಾರುಗಳ ಜೊತೆ ಹರಟೆಗೆ ಕೂತಿವೆ (ಜೀವ ಪ್ರಣಾಳಿಕೆ)

ನಿಜಕ್ಕೂ ಇವತ್ತಿನ ನಮ್ಮ ಕವಿತೆಗಳು ಗದ್ದಲಗಳ ಜೊತೆಯಲ್ಲೇ ಏಗಬೇಕು ಮತ್ತು ತಕರಾರುಗಳ ಜೊತೆಗೂ ಹರಟೆ ಹೊಡೆಯುವ ಮೂಲಕವೇ ಅವನ್ನು ಗೆಲ್ಲಬೇಕು ಅನ್ನುವ ಕವಿಯ ಕನಸು ಮೆಚ್ಚತಕ್ಕದ್ದೇ ಆಗಿದೆ.

ಹಿತ್ತಿಲನ್ನೇ ಮಾರಾಟಕ್ಕಿಟ್ಟ ಮನುಷ್ಯರು
ಮುಂದಂಗಳದ ಗೋಷ್ಠಿಗಳಲ್ಲಿ ತಲ್ಲೀನರಾಗಿದ್ದಾರೆ

(ಹಿತ್ತಿಲನು ನೆನೆವ ಹೊತ್ತು) ಪರಂಪರೆಯ ಕೊಂಡಿ ಕಳಚಿಕೊಳ್ಳಲು ಹೆಣಗಿ ಮತ್ತದೇ ಆಲದ ಮರಕ್ಕೆ ನೇತು ಬಿದ್ದವರ ಕತೆಯಂತೆ ವರ್ತಮಾನಕ್ಕೆ ಕೊಟ್ಟ ವಿಮರ್ಶೆಯಂತೆಯೂ ತೋರುತ್ತದೆ. 

ಸಂಕಲನದ ಕೆಲವು ಪದ್ಯಗಳಿಂದ ಆಯ್ದ ಸಾಲುಗಳನ್ನು ಕೋಟ್ ಮಾಡಿದರೆ ನಾಡಿಗರ ಕಾವ್ಯ ಕುಸುರಿ ಥಟ್ಟನೆ ಬೆಳಗುತ್ತದೆ.

ಕತ್ತಲೊಟ್ಟಿಗೆ ಕಿತ್ತಾಡಲೆಂದೇ ಹುಟ್ಟಿದ ಬೆಳಕಿಗೆ
ಕತ್ತಲನ್ನಗಲಿ ಅರ್ಥವಿಲ್ಲ (ಅಲೆ ತಾಕಿದರೆ ದಡ)
ಒಳ ಕೋಣೆಯ ಹಣತೆ 
ಬೀದಿಯಂಗಳದಲಿ ಪಳಗುವುದು
ಸರಳ ಮಾತಲ್ಲ (ಒಳಕೋಣೆಯ ಹಣತೆ)
ಪ್ರೀತಿಸುತ್ತಿದ್ದವರ ದ್ವೇಷ
ದ್ವೇಷಿಸುತ್ತಿದ್ದವರ ಪ್ರೀತಿ
ಅರ್ಥವಾಗುತ್ತಿದೆ ತಡವಾಗಿ (ಜಗಕೆ ಅನಾಕರ್ಷಕನಾಗುವ ಪರಿ)
ಆಕಾಶವ ಹೊದ್ದರೂ ನಕ್ಷತ್ರಕೆ ಪರದಾಡಿದವ ನೀನು
ಅರ್ಥವಾಗದ ಪದ್ಯದ ಕೊನೆಯ ಸಾಲು
(ತಂದೆ ನೆನಪ ತಂದೆ)
ನನ್ನ ಕವಿತೆಗಳೆಲ್ಲ
ದಣಿದ ಹಕ್ಕಿಯೊಂದು ಉದುರಿಸಿ ಹೋದ
ಬಣ್ಣದ ಗರಿಗೆ ಅಂಟಿಕೊಂಡ ಧೂಳು
(ಪ್ರತಿ ಕವನವೂ ಮತ್ತೊಂದು ಸೋಲು)

ವಾಸುದೇವ ನಾಡಿಗರು ಅಲೆ ತಾಕಿದ್ದೆಲ್ಲವನ್ನೂ ದಡವೆಂದು ಭಾವಿಸಿದರೆ ಅದು ತಪ್ಪಾಗುತ್ತದೆ. ಏಕೆಂದರೆ ಸಮುದ್ರದಲ್ಲಿ ತೇಲುತ್ತಲೇ ಇರುವ ಅದೆಷ್ಟೋ ವಸ್ತುಗಳಿಗೂ ಶವಗಳಿಗೂ ಅಲೆ ತಾಕುತ್ತಲೇ ಇರುತ್ತದೆ, ನಿರಂತರವಾಗಿ. ದಡವೆಂದು ಭಾವಿಸಿ ಅವರು ಈಜುವುದು ನಿಲ್ಲಿಸಿದರೆ ಕಷ್ಟ ಅವರಿಗೆ, ನಷ್ಟ ಓದುಗರಿಗೆ.

ಈಗ ಇದೇ ಸಂಕಲನದಲ್ಲಿ ಇರುವ ‘ಪರಿಮಳ’ ಕವಿತೆಯ ಪೂರ್ಣ ಪಾಠವನ್ನು ಮೊದಲು ನೋಡೋಣ;

ಪರಿಮಳ
ಮುಚ್ಚಿಹೋಗಿದ್ದ
ಕೋಣೆಯ ತುಂಬಾ
ಊದುಗಡ್ಡಿಯ ಕಂಪು
ಅದರ ಉದ್ದದ ಉರಿದ
ಬೂದಿ ಬಾಲ
ಬಳಿದು ಬೂದಿಯನು
ಹೂ ಗಿಡಕೆ ಸುರಿದೆ
ಮರು ಬೆಳಗಿನ ಮೊಗ್ಗೂ
ಅದೇ ಕಂಪು
ಕೋಣೆಯ ಹೊಗೆ
ಪಕಳೆಗಳಲಿ ಸೇರಿತೆ?
ಉದ್ದಬಾಲದ ಬೂದಿ
ಬೇರಿಗೆ ಸೋತಿತೆ?
ನಿರ್ಭಿಡೆ ಇವಳು
ಬಂದೇ ಬಿಟ್ಟಳು
ಕಿತ್ತು ಹೂಗಳ
ಹೆರಳಲಿ ಸಿಕ್ಕಿಸಿ
ಮುಡಿಯ ತುಂಬಾ
ಅದೆ ಕಂಪು
ಹೂಗಳದ್ದೋ
ಊದುಕಡ್ಡಿಯದ್ದೋ
ಈಗೆಲ್ಲಾ
ಊದುಕಡ್ಡಿ
ಮನೆಯ ತುಂಬಾ
ಓಡಾಡಲು ಶುರುವಿಟ್ಟಿದೆ….

‘ಅಲೆ ತಾಗಿದರೆ ದಡ’ದಲ್ಲಿ ಪ್ರಕಟವಾದ ‘ಪರಿಮಳ’ ಹೆಸರಿನ ಈ ಕವಿತೆ ನಾಡಿಗರು ಇಷ್ಟೂ ದಿನ ಕನಸಲ್ಲೂ ಕವಿತೆ ಕವಿತೆ ಎಂದು ಕನವರಿಸುತ್ತಲೇ ಇರುವ ಅವರ ಕಾವ್ಯ ಕರ್ಮದ ಅನಿರೀಕ್ಷಿತ ಬೆಳೆ ಎಂದೇ ನಾನು ಭಾವಿಸುತ್ತೇನೆ. ಏಕೆಂದರೆ ಈ ಕವಿತೆಯಲ್ಲೆಲ್ಲೂ ಭ್ರಮೆಯಾಗಲೀ, ಆವೇಶಕ್ಕೆ ತೊಟ್ಟ ವೇಷದ ಕೂಗಾಗಲೀ ಅಥವ ವ್ಯವಸ್ಥೆಯ ವಿರುದ್ಧ ಎತ್ತಿದ ದನಿಯಾಗಲೀ ಇಲ್ಲದೆಯೂ ಪದ್ಯವೆಂದರೆ ಹೀಗೂ ಇರಬಹುದು ಮತ್ತು ಇರಲಿಕ್ಕೂ ಸಾಧ್ಯ ಎಂಬುದರ ಸಮರ್ಥ ಉದಾಹರಣೆಯಾಗಿದೆ.

ನವ್ಯದ ಪ್ರತಿಮಾ ಲೋಕ ಕಲಿಸಿದ ಪಟ್ಟುಗಳು ಈ ಕವಿತೆಯ ಅಸ್ತಿವಾರವಾಗಿದ್ದರೆ ನವ್ಯೋತ್ತರ ಕಾವ್ಯ ಕ್ರಿಯೆಯು ಹೊರಳಿ ಅರಳಿಸಿದ ಸಹಜ ಸುಭಗ ನಡೆ ಈ ಕವಿತೆಯ ಆತ್ಮವಾಗಿದೆ. ಸಂವಾದಕ್ಕೆಳಸಿಯೂ ಬರಿಯ ಮಾತಾಗದೇ ಉಳಿದ ಸ್ವಗತದಲ್ಲೂ, ಲೋಕ ವ್ಯಾಪಾರದ ಗುಂಗಿನ ನಡುವೆಯೂ ಉಳಿವ ಸರಳ ತಾಂತ್ರಿಕತೆಯನ್ನು ಪದ್ಯವಾಗಿಸಬಹುದಾದ ಜಾಣ್ಮೆಗೂ ಈ ಕವಿತೆ ಪುರಾವೆ.

ಕವಿತೆಯ ಮೊದಲ ಸಾಲುಗಳನ್ನು ಹೀಗೂ ಓದಿಕೊಂಡರೆ;

ಮುಚ್ಚಿಹೋಗಿದ್ದ, ಕೋಣೆಯ ತುಂಬಾ, ಊದುಗಡ್ಡಿಯ ಕಂಪು, ಅದರ ಉದ್ದದ ಉರಿದ, ಬೂದಿ ಬಾಲ.

ನವ್ಯ ಕಾವ್ಯದ ಹೆಗಲೆಣೆಯಾಗಿ ಒಂದು ಸೀದಾ ಸಾದಾ ಊದು ಬತ್ತಿಯ ಬದುಕನ್ನು ಚಿತ್ರಿಸಿದ ಈ ಒಟ್ಟೂ ಸಾಲಲ್ಲಿ ಕವಿ ಕೊಟ್ಟ ಚಿತ್ರಣವೇ ಬೆರಗು ಗೊಳಿಸುತ್ತದೆ. ಯಾರೋ ಒಬ್ಬರು ತಮ್ಮ ಕೋಣೆಯ ಬಾಗಿಲು ಮುಚ್ಚಿಕೊಂಡು ಹೋಗುವ ಮೊದಲು ದೇವರಿಗೆಂದೋ ಪರಿಮಳಕ್ಕೆಂದೋ ಹಚ್ಚಿ ಹೋಗಿದ್ದ ಊದುಬತ್ತಿ ಅಷ್ಟೂ ಉರಿದು ಹೋಗಿ ಅದರಷ್ಟೇ ಉದ್ದದ ಬೂದಿಯಾಗಿ ಬಿದ್ದಿದೆ. ಇಲ್ಲಿ ಗಮನಿಸಲೇ ಬೇಕಾದ ಮಾತೆಂದರೆ ಆ ಬಾಗಿಲು ಹಾಕಿದ  ಕೋಣೆಗೆ ಗಾಳಿ ಬೀಸಿಲ್ಲ, ಹಾಗಾಗಿ ಪರಿಮಳವಾಗಲೀ ಉರಿದು ಹೋದ ಊದು ಬತ್ತಿಯ ಬೂದಿಯಾಗಲೀ ಕದಲಿಲ್ಲ.

ಬಳಿದು ಬೂದಿಯನು ಹೂ ಗಿಡಕೆ ಸುರಿದೆ ಮರು ಬೆಳಗಿನ ಮೊಗ್ಗೂ ಅದೇ ಕಂಪು ಕೋಣೆಯ ಹೊಗೆ ಪಕಳೆಗಳಲಿ ಸೇರಿತೆ? ಉದ್ದಬಾಲದ ಬೂದಿ ಬೇರಿಗೆ ಸೋತಿತೆ?

ಈಗ ಕವಿತೆಯ ಎರಡನೆಯ ಭಾಗವನ್ನು ಪರಿಶೀಲಿಸಿದರೆ;

ಉರಿದ ಬೂದಿಯನ್ನು ಗುಡಿಸಿ ಹೂ ಗಿಡಕ್ಕೆ ಸುರಿದ ಕವಿ ಮಾರನೆಯ ಬೆಳಿಗ್ಗೆ ಆ ಗಿಡದಲ್ಲಿನ ಹೂವಿನ ಮೊಗ್ಗಲ್ಲಿ ಊದು ಬತ್ತಿಯ ಘಮವನ್ನು ಕಾಣುತ್ತಾನೆ ಮತ್ತು ಘಮಕ್ಕೆ ಹೂವಿನ ಪಕಳೆಗಳಿಗೆ ಊದು ಬತ್ತಿಯ ಕಂಪು ಅಂಟಿತೋ ಅಥವ ಬೂದಿಯು ಗಿಡದ ಬೇರಿಗೇ ಪರಿಮಳವನ್ನು ಉಣಿಸಿ ಅರಳುವ ಹೂವಿಗೆ ವರ್ಗಾಯಿಸಿತೋ ಎಂದು ಕೇಳುತ್ತಾನೆ.

ಈಗ ಕವಿತೆಯು ಮುಟ್ಟಿಸುವ ಹಂತ (lift) ಬೇರೆಯದೇ ಎತ್ತರಕ್ಕೆ ಒಯ್ಯುತ್ತದೆ.  
ನಿರ್ಭಿಡೆ ಇವಳು ಬಂದೇ ಬಿಟ್ಟಳು ಕಿತ್ತು ಹೂಗಳ ಹೆರಳಲಿ ಸಿಕ್ಕಿಸಿ ಮುಡಿಯ ತುಂಬಾ ಅದೆ ಕಂಪು ಹೂಗಳದ್ದೋ
ಊದುಕಡ್ಡಿಯದ್ದೋ

ಕವಿಯ ಪತ್ನಿಯೋ ಪ್ರಿಯತಮೆಯೋ ಮುಲಾಜಿಲ್ಲದೇ ಹೀಗೆ ಅರಳಿದ ಹೂವನ್ನು ಕಿತ್ತು ತನ್ನ ಜಡೆಗೆ ಮುಡಿಯುತ್ತಾಳೆ. ಅವಳ ಮುಡಿಯಲ್ಲಿ ಇಟ್ಟ ಆ ಹೂವಿಗೆ ಇದ್ದ ಪರಿಮಳ ಹೂವಿನಿಂದ ಹೊರಟದ್ದೋ ಅಥವ ಹಿಂದಿನ ದಿನ ಸಂಜೆ ಹಚ್ಚಿಟ್ಟಿದ್ದ ಊದುಗಡ್ಡಿಯದೇ ಉಳಿದ ಘಮವೋ ಎಂಬ ಗೊಂದಲ ಕವಿಗೆ.

ಈಗೆಲ್ಲಾ ಊದುಕಡ್ಡಿ ಮನೆಯ ತುಂಬಾ ಓಡಾಡಲು ಶುರುವಿಟ್ಟಿದೆ… ಎಂದು ಮುಕ್ತಾಯವಾಗುವ ಕವಿತೆ ಓದಿನ ಮೂಲಕ ನಿರ್ಮಿಸಿ ಕೊಟ್ಟದ್ದಕ್ಕೆ ಉಳಿದದ್ದು ಘಮವೋ ಅಥವ ಬಣ್ಣದ ಚಿತ್ರವೋ ಎಂಬ ಉದ್ಗಾರ ಸಹಜ. ಇದು ಮೇಲ್ನೋಟದ ಓದಿಗೆ ಹೊಳೆಯುವ ಪರಿಮಿತ ಅರ್ಥ‌.

ಆದರೆ ಇದೇ ಕವಿತೆಯನ್ನು ಈಗ ಬೇರೆಯದೇ ಬಗೆಯಲ್ಲಿ ಬಗೆಯುತ್ತ ಹೋದರೆ ಆಗ ಹೊಳೆಯುವುದು ಅಡಿಗರು ಹೇಳಿದ ಹಾಗೆ ಸುಟ್ಟೂ ಸೋಸಿ ನಿರ್ಮಿಸಿಕೊಂಡ  ಇಷ್ಟ ದೇವತೆಯ ಚಿತ್ರ. 

ಮುಚ್ಚಿಹೋಗಿದ್ದ, ಕೋಣೆಯ ತುಂಬಾ, ಊದುಗಡ್ಡಿಯ ಕಂಪು, ಅದರ ಉದ್ದದ ಉರಿದ, ಬೂದಿ ಬಾಲ.

ಈ ಸಾಲುಗಳನ್ನು ಇತಿಹಾಸವನ್ನು ಬೇಕೆಂತಲೇ ಎಲ್ಲರಿಗೂ ಸಿಗದ ಹಾಗೆ ಮುಚ್ಚಿಟ್ಟಿದ್ದರೂ (ಬೇಕಾದಂತೆ ತಿರುಚಿ) ಆ ಇತಿಹಾಸವನ್ನು ಬಿಡಿಸಿದರೆ ಸಿಕ್ಕುವುದು ಪೂರ್ವಾರ್ಜಿತದ ಫಸಲು ಮತ್ತದರ ಘಮಲು. ಆ ಘಮವನ್ನು ಇತರರು ತೊಡೆಯದಿರಲೆಂದು ಸುಟ್ಟರೂ ಆ ಬೂದಿಯಲ್ಲೂ ಉಳಿದ ಉಳಿದಿರಬಹುದಾದ ಸತ್ವ.

ಬಳಿದು ಬೂದಿಯನು ಹೂ ಗಿಡಕೆ ಸುರಿದೆ ಮರು ಬೆಳಗಿನ ಮೊಗ್ಗೂ ಅದೇ ಕಂಪು ಕೋಣೆಯ ಹೊಗೆ ಪಕಳೆಗಳಲಿ ಸೇರಿತೆ? ಉದ್ದಬಾಲದ ಬೂದಿ ಬೇರಿಗೆ ಸೋತಿತೆ?

ಉತ್ಖನನದ ಪರಿಣಾಮ ಪುರಾತನದ ಪ್ರತಿಮೆಗೂ ಜೀವ ಬರುವಂತೆ, ಹಿಂದಣ ಇತಿಹಾಸವನ್ನು ಕೆದಕಿ ತೆಗೆದರೆ ಸಿಕ್ಕಬಹುದು ಆ ಕುರುಹುಗಳಲ್ಲೂ ಅಡಗಿರಬಹುದಾದ ಸತ್ಯ ಮತ್ತು ಕುರುಹುಗಳೇ ನಿರ್ಮಿಸಿರಬಹುದಾದ ಸತ್ವದ ಪ್ರತೀಕಗಳಲ್ಲಿ ಪುರಾತನರ ಅನುಭವದ ಸಾರ ಸರ್ವಸ್ವವೂ ಉಳಿದಿರಬಹುದಲ್ಲವೆ?

ನಿರ್ಭಿಡೆ ಇವಳು ಬಂದೇ ಬಿಟ್ಟಳು ಕಿತ್ತು ಹೂಗಳ ಹೆರಳಲಿ ಸಿಕ್ಕಿಸಿ ಮುಡಿಯ ತುಂಬಾ ಅದೆ ಕಂಪು ಹೂಗಳದ್ದೋ
ಊದುಕಡ್ಡಿಯದ್ದೋ

ವರ್ತಮಾನಕ್ಕೆ ಭೂತದ ಭಯವಾಗಲೀ ಭವಿಷ್ಯದ ಕನಸಾಗಲೀ ಇಲ್ಲದೇ ಇದ್ದಾಗ ಎಂಥ ಭಗ್ನ ಕಾರ್ಯಗಳಿಗೂ ಕೈ ಹಾಕುವುದು ಪ್ರಭುತ್ವವು ತನ್ನ ಹೆಚ್ಚುಗಾರಿಕೆ ಎಂದೇ ಭಾವಿಸುವುದರಿಂದಾಗಿ ಆಡಳಿತ ಅಥವ ಪ್ರಭುತ್ವ ಅಥವ ಭಿಡೆ/ ನಾಚಿಕೆ/ ಸಂಕೋಚಗಳೇ ಇಲ್ಲದ ಅಧಿಕಾರವು ಇತಿಹಾಸವು ಸೃಷ್ಟಿಸಿದ್ದ (ಹೂವಿನಂಥಾ) ಚಿತ್ರಗಳನ್ನು ಕಿತ್ತು ತನ್ನ ಮುಡಿಗೇರಿಸಿಕೊಳ್ಳುತ್ತದೆ. ಯಾರು ಯಾರೋ ನಿರ್ಮಿಸಿದ್ದ ಘಟನೆಗಳನ್ನು ಪುರಾವೆಗಳನ್ನು (ತಿರುಚಿ) ತನ್ನ ಸ್ವಂತದ್ದೆಂದು ಹೇಳಿಕೊಳ್ಳುವ (ತಿರುಚಿದ) ಮಾತಿಗೆ ಇರುವ ಕಂಪು ಹೊಸದೋ ಅಥವ ಪೂರ್ವಾಜಿತವೋ? 

ಈಗೆಲ್ಲಾ ಊದುಕಡ್ಡಿ ಮನೆಯ ತುಂಬಾ ಓಡಾಡಲು ಶುರುವಿಟ್ಟಿದೆ….

ಈಗ ಈ ಸಾಲುಗಳನ್ನು ಸದ್ಯ ಆಳುತ್ತಿರುವವರು ಪೂರ್ವ ಸೂರಿಗಳ ಶ್ರಮವನ್ನು ಅವರು ಕಂಡಿದ್ದ ಕನಸನ್ನು ಹೇಗೆ ತಮ್ಮದನ್ನಾಗಿಸಿಕೊಂಡು ವರ್ತಮಾನವನ್ನು ಶೋಷಿಸುತ್ತ ತಾವೇ ಸೃಷ್ಟಿಸಿದ ತಮ್ಮದೇ ಪರಿಮಳವೆಂದು ತಾವೇ ಸೃಷ್ಟಿಸಿದ ಸ್ವರ್ಗವೆಂದೂ ಹೇಳಿಕೊಳ್ಳುತ್ತಾರಲ್ಲ, ಅದು ನಿಜವೇ?

ಈಗ ಈ ಪದ್ಯದ ಆಂತರ್ಯ, ಅದು ವರ್ತಮಾನದಲ್ಲಿ ಬೆಳೆಯುವಾಗ ಪುರಾತನರ ಕಸುವನ್ನು ಹೀರಿಕೊಂಡ ಕ್ರಮ ಮತ್ತು ಹೀಗೆ ಬೆಳೆಯುತ್ತಲೇ ಪೂರ್ವಸೂರಿಗಳನ್ನು ಕಡೆ ಗಣಿಸುತ್ತಲೇ ಆ ಅಂಥ ಪೂರ್ವಿಕರ ಶ್ರಮವನ್ನು ತನ್ನದೆನ್ನುವ ಸ್ವಾರ್ಥ….

ಇನ್ನು ಹೆಚ್ಚು ಹೇಳಿದರೆ ಮತ್ತೆ ಮಾತನಾಡಿದರೆ ಸ್ವಾರಸ್ಯವು ಕೆಟ್ಟೀತು, ಪರಿಮಳವು ಕ‌ನಲೀತು. ಮತ್ತೆ ಪದ್ಯದ ಪೂರ್ಣ ಪಾಠವನ್ನು ಓದಿಕೊಂಡರೆ ‘ಪರಿಮಳ’ ಬರಿಯ ನಿಮ್ಮ ನಾಸಿಕಕ್ಕಷ್ಟೇ ಅಲ್ಲ ಬುದ್ಧಿ ಭಾವಗಳಿಗೂ ಮುಟ್ಟಿ ಸಾರ್ಥಕದ ಹೊನಲು ಹರಿಸೀತು.

‍ಲೇಖಕರು Admin

July 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: