‘ಡಿಯರ್  ಕಾಮ್ರೆಡ್’  ಡಿಯರ್ ಆಗುವಲ್ಲಿ ಸೋತಿದೆ.. 

ಬಿಡುಗಡೆಗೂ ಮುನ್ನವೇ ಟ್ರೈಲರ್, ಟೈಟಲ್ ಮತ್ತು  ಹಾಡುಗಳಿಂದ ಕುತೂಹಲ ಮೂಡಿಸಿದ್ದ, ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ  ಚಿತ್ರ `ಡಿಯರ್  ಕಾಮ್ರೆಡ್’.  ಈ ಚಿತ್ರದ ಮೊದಲ ದೃಶ್ಯವನ್ನು ನೋಡಿದಾಗ `ಅರ್ಜುನ್ ರೆಡ್ಡಿ’ ಪಾತ್ರದ ಹ್ಯಾಂಗೋವರ್ ನಲ್ಲಿಯೇ  ಬಾಬ್ಬಿಯ ಪಾತ್ರ ಕೂಡ ಇದ್ದಂತೆ  ಅನ್ನಿಸುತ್ತದೆ. ಆದರೆ  ಸಿನೆಮಾ ಮುಂದುವರಿದಂತೆ  ಬೇರೆಯದೇ  ಆಯಾಮವನ್ನು ಪಾತ್ರಕ್ಕೆ ನೀಡುವ ಪ್ರಜ್ಞಾಪೂರ್ವಕ  ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಕಥಾನಾಯಕ ಬಾಬ್ಬಿ ಸಮಾಜವಾದಿ ವಿಚಾರಗಳನ್ನು ಹೊತ್ತ ಕಾಕಿನಾಡ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ. ಈ ಚಿತ್ರದ ನಾಯಕಿ ಲಿಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಆಟಗಾರ್ತಿ ಮತ್ತು ಬಾಬ್ಬಿಯ ನೆರೆಮನೆಯವಳು. ಇವರಿಬ್ಬರೂ ಪ್ರೀತಿಯಲ್ಲಿ ಸಿಲುಕುತ್ತಾರೆ. ಆಕ್ರಮಣಕಾರಿ ಮನೋಭಾವ, ಎಲ್ಲ ಸನ್ನಿವೇಶಗಳಿಗೂ ಭಾವಾತಿರೇಕದ ಪ್ರತಿಕ್ರಿಯೆ ನೀಡುವ ಸ್ವಭಾವದಿಂದಾಗಿ ಬಾಬ್ಬಿ ಲಿಲ್ಲಿಯಿಂದ ದೂರವಾಗಬೇಕಾಗುತ್ತದೆ. ಈ ಮಧ್ಯೆ  ಲಿಲ್ಲಿಯ ವೃತ್ತಿ ಜೀವನದಲ್ಲಿ ನಡೆವ  ಒಂದು ಗಂಭೀರ ಘಟನೆ ಅವಳನ್ನು ಕಷ್ಟಕ್ಕೆ ತಳ್ಳುತ್ತದೆ.  ಅದನ್ನು ನಿಭಾಯಿಸಲು ಮತ್ತು ಅದರಿಂದ ಹೊರಬರಲು ಬಾಬ್ಬಿ ಪ್ರೇರಕಶಕ್ತಿಯಾಗುತ್ತಾನೆ. ಇದೇ ಕಥೆಯ ಸಾರಾಂಶ.

‘ಡಿಯರ್  ಕಾಮ್ರೆಡ್’ ಎನ್ನುವ ಚಿತ್ರದ ಶೀರ್ಷಿಕೆ ನಿಮ್ಮನ್ನು ದಾರಿತಪ್ಪಿಸಬಹುದು. ಶೀರ್ಷಿಕೆ ನಿಮ್ಮಲ್ಲಿ ಮೂಡಿಸಬಹುದಾದ ಕಲ್ಪನೆಗಳಿಗೆ  ಯಾವ ಸಮರ್ಥನೆಯೂ ಇಲ್ಲಿ ಸಿಕ್ಕುವುದಿಲ್ಲ. ಕೆಲವು ಕಮ್ಯುನಿಸ್ಟ್ ಪೋಸ್ಟರ್ ಗಳು, ಚೆಗೆವಾರನ ಚಿತ್ರಗಳು ಮತ್ತು ನಾಯಕನ ತಾತ ಕಮ್ಯುನಿಸ್ಟ್  ಸಿದ್ಧಾಂತಗಳ ಪ್ರತಿಪಾದಕರಾಗಿದ್ದರು ಎನ್ನುವುದನ್ನು ಬಿಟ್ಟರೆ ಕಮ್ಯುನಿಸಂ ಗೆ ಸಂಬಂಧಪಟ್ಟ ಮತ್ತೇನು ವಿಚಾರಗಳಿಲ್ಲ. ಇಲ್ಲಿ ‘ಕಾಮ್ರೆಡ್’ ಎನ್ನುವುದನ್ನು ಕಷ್ಟದಲ್ಲಿ ಜೊತೆಯಾಗಬಲ್ಲ ಗೆಳೆಯ ಅನ್ನುವ ಅರ್ಥದಲ್ಲಿ ಮಾತ್ರ ನಿರ್ದೇಶಕರು ಬಳಸಿದ್ದಾರೆ.

ನಿರ್ದೇಶಕ ಭರತ್ ಕಮ್ಮ ತಾವೇ ಕತೆಯನ್ನು ಬರೆದಿದ್ದಾರೆ. ಮೊದಲರ್ಧದಲ್ಲಿ  ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಜೋಡಿ ಆಹ್ಲಾದಕರವಾಗಿದೆ. ಬಾಬ್ಬಿ ಪಾತ್ರದ ನಿರ್ಭೀತ ನಡೆ, ನಾಯಕಿಯ ಬಗ್ಗೆ ಇರುವ ಬದ್ಧತೆ ಅತಿರಂಜಿತವಾಗಿದ್ದರೂ ಮನಸೆಳೆಯುತ್ತದೆ. ನಾಯಕಿಯ ಪಾತ್ರವೂ ಕೂಡ ಉಳಿದ ಅನೇಕ  ಚಿತ್ರಗಳ ಮೂರು ಮತ್ತೊಂದು ಪಾತ್ರದಂತಿಲ್ಲ. ಆದರೆ ಚಿತ್ರದ ದ್ವಿತೀಯಾರ್ಧ ಮಾನಸಿಕ ಆರೋಗ್ಯ, ಲೈಂಗಿಕ ಕಿರುಕುಳದಂತಹ ಮುಖ್ಯ ವಿಷಯಗಳ ಬಗ್ಗೆ ಮಾತನಾಡಲು ಯತ್ನಿಸಿದರೂ ಚಿತ್ರಕತೆ ದುರ್ಬಲವಾಗಿರುವುದರಿಂದ ಪರಿಣಾಮವನ್ನುಂಟು ಮಾಡುವುದಿಲ್ಲ.

ಸಿನೆಮಾವನ್ನು ಅನವಶ್ಯಕವಾಗಿ ಎಳೆದಿರುವುದರಿಂದ ಸಂಯಮವನ್ನು ಪರೀಕ್ಷಿಸುತ್ತದೆ. ನಿಧಾನಗತಿಯಲ್ಲಿ ಸಾಗುವ ಈ ಚಿತ್ರದ ಕತೆ ಹೀಗೆಯೇ ಸಾಗುತ್ತದೆ ಎನ್ನುವುದನ್ನು ಸುಲಭವಾಗಿ ಊಹಿಸುವಂತಿದೆ. ಅನೇಕ ವಿಷಯಗಳನ್ನು ಹೇಳಲು ಪ್ರಯತ್ನಿಸಿ ನಿರ್ದೇಶಕರು ವಿನಾಕಾರಣ  ಗೊಂದಲಕ್ಕೆಡೆಮಾಡಿಕೊಟ್ಟಿದ್ದಾರೆ.

ಮೊದಲಾರ್ಧದ ಪ್ರೇಮಕತೆಗೂ, ದ್ವಿತೀಯಾರ್ಧದ ನಾಯಕಿಯ ಸಮಸ್ಯೆಗಳಿಗೂ ಹೊಂದಿಕೆಯಾದಂತಿಲ್ಲ. ಹಾಗಾಗಿ ಅನೇಕ ಚಂದದ ಗಳಿಗೆಗಳು ಚೆಲ್ಲಾಪಿಲ್ಲಿಯಾದ ಚಿತ್ರಗಳಂತೆ ತೋರುತ್ತವೆ. ತಾತನ ಆಸಕ್ತಿದಾಯಕ ವ್ಯಕ್ತಿತ್ವಕ್ಕೂ, ತಾತನೊಂದಿಗಿನ ಬಾಬ್ಬಿಯ  ಸಂಬಂಧಕ್ಕೂ ಇರುವ   ಹಲವು ಪ್ರಮುಖ ಆಯಾಮಗಳನ್ನು ಮತ್ತಷ್ಟು ತೀವ್ರವಾಗಿ ಚಿತ್ರಿಸಬಹುದಿತ್ತು.

ನಾಯಕ-ನಾಯಕಿಯರು ಒಂದಾಗುವುದರ ಮೇಲೆಯೇ  ಚಿತ್ರವನ್ನು ಕೇಂದ್ರೀಕರಿಸಿ, ಸಿನಿಮಾದ ಪ್ರಮುಖ ಅಂಶವನ್ನು ಕೊನೆಯವರೆಗೂ ಕಾದಿರಿಸಿರುವುದರಿಂದ ಚಿತ್ರದ ನಡೆಗೆ ಏಟು ಬಿದ್ದಿದೆ. ಆದರೆ ಚಿತ್ರದ ನಾಯಕಿ ಲೈಂಗಿಕ ಕಿರುಕುಳಕ್ಕೆ ಒಳಗಾದಾಗ ಆಡುವ ಮಾತುಗಳು ಪುರುಷ ಪ್ರಧಾನ ಸಮಾಜದ ಮುಖವನ್ನು ಅನಾವರಣಗೊಳಿಸುತ್ತದೆ. ನಾಯಕ ತನ್ನನ್ನು ತಾನು ಕಂಡುಕೊಳ್ಳುವ ಪಯಣದ ಜೊತೆ ಜೊತೆಗೆ ನಾಯಕಿಯ ಖಿನ್ನತೆಯನ್ನು ನಿಸರ್ಗದ ಒಡನಾಟದಲ್ಲಿ ಪರಿಹರಿಸುವ ದೃಶ್ಯಗಳು ಪರಿಣಾಮಕಾರಿಯಾಗಿವೆ.

ಜಸ್ಟಿನ್ ಪ್ರಭಾಕರ್ ನೀಡಿರುವ  ಸಂಗೀತ ಸಂಯೋಜನೆ ಇತ್ತೀಚಿಗೆ ಬಂದಿರುವ ಚಿತ್ರಗಳಲ್ಲಿ ಎದ್ದು ಕಾಣುವಂತಿದೆ. ಹಾಡುಗಳು ಸುಮಧುರವಾಗಿದ್ದು, ಕತೆಯ ವಸ್ತುವಿಗೆ ಹೊಂದಿಕೊಂಡಂತಿದೆ. ಹಿನ್ನೆಲೆ ಸಂಗೀತ ಚಿತ್ರವನ್ನು ಹಲವು ಕಡೆ ಮೇಲೆತ್ತಿ ಹಿಡಿದಿದೆ.

ಸುಜಿತ್ ಸಾರಂಗ್ ಅವರ ಛಾಯಾಗ್ರಹಣ ಉತ್ತರ ಭಾರತದ ನೈಜ ಸೌಂದರ್ಯವನ್ನು ಹಿಡಿದಿಡುವಲ್ಲಿ ವಿಫಲವಾಗಿದೆ. ಬರೀ ಪ್ರವಾಸ ಕೇಂದ್ರಗಳನ್ನೇ ಗುರಿಯಾಗಿಟ್ಟುಕೊಂಡಂತೆ ಡ್ರೋನ್ ಶಾಟ್ ಗಳಿವೆ. ಸಂಕಲನ ಮತ್ತಷ್ಟು ಬಿಗಿಯಾಗಿರಬಹುದಿತ್ತು. ಹೀಗಾಗಿ ಈ ಚಿತ್ರ ಏಕಕಾಲಕ್ಕೆ ಆಹ್ಲಾದಕರವು, ಸಮಸ್ಯಾತ್ಮಕವೂ ಆಗಿ ಹಲವರ ಮೆಚ್ಚುಗೆಯನ್ನು ಗಳಿಸಿದರೆ ಮತ್ತೆ  ಹಲವರ ಟೀಕೆಯನ್ನು ಎದುರಿಸಬೇಕಾಗಬಹುದು. .

ಹೆಚ್ಚು ಕಮ್ಮಿ ಮೂರು ಗಂಟೆಗಳ ಈ ಚಿತ್ರವನ್ನು ಇನ್ನಷ್ಟು ಬಿಗಿಯಾಗಿ ಹೆಣೆದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರಿಗೆ ತಲುಪುತ್ತಿತ್ತೇನೋ. ಹೊಸ ನಿರ್ದೇಶಕರು ಚಿತ್ರಕ್ಕೆ ಕಾವ್ಯಾತ್ಮಕ ಸ್ಪರ್ಶ ನೀಡಿದ್ದರೂ  ಚಿತ್ರದ ಉದ್ದ,  ನಿಧಾನಗತಿ, ಕೃತಕವಾದ ಕ್ಲೈಮಾಕ್ಸ್ ದೃಶ್ಯಗಳಿಂದ ‘ಡಿಯರ್  ಕಾಮ್ರೆಡ್’  ಡಿಯರ್ ಆಗುವಲ್ಲಿ ಸೋಲುತ್ತದೆ.

‍ಲೇಖಕರು avadhi

July 27, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: