ಡಾ ಶಿವಾನಂದ ಕುಬಸದ ’ನೆನಪುಗಳ ಪೆಟ್ಟಿಗೆಯಿಂದ’ : ಅವಳು ಕಳೆದುಕೊಂಡವಳು…’

ಅದೊಂದು ರಾತ್ರಿ ಸುಮಾರು ಎರಡು ಗಂಟೆಯ ಸಮಯ. ನಮ್ಮ ಮನೆಯ ಫೋನ್ ರಿಂಗಣಿಸತೊಡಗಿತು. ವೈದ್ಯನಾದವನಿಗೆ ಇದು ನಿತ್ಯದ ಕಷ್ಟ. (ಅಥವಾ ಮಂಗಳ ನಾದ..!) ಅಂದು ನಿಜವಾಗಿಯೂ ಸುಸ್ತಾಗಿದ್ದೆ. ಬೆಳಿಗ್ಗೆಯಿಂದ ನಾಲ್ಕೈದು ಶಸ್ತ್ರಚಿಕಿತ್ಸೆಗಳನ್ನು ಮಾಡಿ, ನೂರಾರು ಹೊರರೋಗಿಗಳನ್ನು ಪರೀಕ್ಷಿಸಿ, ರೌಂಡ್ಸ್ ಮಾಡಿ ಮನೆಗೆ ಬಂದಾಗ ರಾತ್ರಿ ಹನ್ನೊಂದೂವರೆ. ಅಷ್ಟೊತ್ತಿಗೆ ಮನೆಯಲ್ಲಿ ಎಲ್ಲರ ಊಟ. (ಬಹುತೇಕ ವೈದ್ಯರ ಮನೆಯ ಜನರಿಗೂ ಇದು ರೂಢಿಯಾಗಿಬಿಟ್ಟಿರುತ್ತದೆ.) ನಂತರ ನನ್ನ ಓದು. ಎಂಥ ತಡವಾಗಿ ಬಂದರೂ ಮಲಗುವ ಮೊದಲು ಒಂದರ್ಧ ಗಂಟೆಯಾದರೂ ಯಾವುದಾದರೊಂದು ಪುಸ್ತಕ ಓದುವ ರೂಢಿ ಮಾಡಿಕೊಂಡಿದ್ದೇನೆ. ನಿತ್ಯದ ವೃತ್ತಿಯ ಏಕತಾನತೆಯ ಮಧ್ಯೆ ಅದೊಂದಿಷ್ಟು ಸಂತೋಷವನ್ನೂ ತೃಪ್ತಿಯನ್ನೂ ನೀಡುತ್ತದೆ, ಜೊತೆಗೇ ಮನೋವಿಕಾಸ ಎಂಬ ಬೋನಸ್.
ಅಂದು, ಓದುವುದೂ ‘ರುಚಿಸಿ’ ನಾನು ಮಲಗಿದಾಗ ರಾತ್ರಿಯ ಒಂದು ಗಂಟೆ. ಫೋನ್ ಎತ್ತಿದರೆ ಅತ್ತ ಕಡೆಯಿಂದ ನಮ್ಮ ಆಸ್ಪತ್ರೆಯ ನರ್ಸ್ ಧ್ವನಿ, ಒಬ್ಬ ಗರ್ಭಿಣಿ ಬಂದಿದ್ದಾಳೆಂದೂ, ತುಂಬ ಕಷ್ಟದಲ್ಲಿದ್ದಾಳೆಂದೂ,ನಾನೇ ಬಂದು ಪರೀಕ್ಷಿಸಬೇಕೆಂದು ಹಟ ಮಾಡುತ್ತಿದ್ದಾಳೆಂದೂ ಹೇಳಿದಳು. ಗತ್ಯಂತರವಿಲ್ಲ. ಏನು ಕಷ್ಟವೋ ನೋಡಲೇಬೇಕು. ನನ್ನ ವೃತ್ತಿಯ ಇಷ್ಟು ವರ್ಷಗಳಲ್ಲಿ ನಾನು ರಾತ್ರಿ ಕರೆಗಳನ್ನು ನಿರಾಕರಿಸಿದ್ದು ಬಹಳ ಕಡಿಮೆ. ಸರಿರಾತ್ರಿ ಅಷ್ಟೊತ್ತಿಗೆ ತಮ್ಮ ಮನೆಯಿಂದ ನಮ್ಮ ಆಸ್ಪತ್ರೆಯವರೆಗೂ ಬರಬೇಕಾದರೆ ಅವರಿಗೆ ಏನಾದರೂ ಕಷ್ಟವಿರಲೇಬೇಕು, ಎಂಬುದು ನನ್ನ ಅಭಿಪ್ರಾಯ. ಇಲ್ಲವಾದರೆ ಅಷ್ಟು ದೂರದಿಂದ ತಮ್ಮ ಮನೆಮಂದಿಯ ನಿದ್ದೆ ಕೆಡಿಸಿ, ವಾಹನ ತೆಗೆದುಕೊಂಡು ಆಸ್ಪತ್ರೆಯವರೆಗೆ ಬರಲು ಅವರಿಗೇನು ಹುಚ್ಚೆ? (ಅಕಸ್ಮಾತ್ ಹುಚ್ಚೆ ಇದ್ದರೂ ಅದೂ ಒಂದು ರೋಗವೇ ಅಲ್ಲವೇ?). ಅನೇಕ ಬಾರಿ ರಾತ್ರಿ ಎದ್ದು ಹೋಗಿ ನೋಡಿದರೆ ಅತೀ ಸಣ್ಣ ರೋಗಗಳು ಇದ್ದದ್ದನ್ನು ನಾನು ಗಮನಿಸಿದ್ದೇನೆ. ಆದರೆ ನಾವು ವೈದ್ಯರಾಗಿ ಅದನ್ನು ಸಾದಾ ರೋಗ ಎಂದು ಪರಿಗಣಿಸಿದರೂ ಆ ರೋಗಿಯ ಮಟ್ಟಿಗೆ ಅದು ದೊಡ್ಡದೇ. ಯಾಕೆಂದರೆ, ನೋವು ನೋವೆ ಅಲ್ಲವೇ? ಅದೂ ಅಲ್ಲದೆ ನಾವು ಪರೀಕ್ಷಿಸಿದ ನಂತರ ಮಾತ್ರ ಅದು ಸಾದಾ ರೋಗ ಎಂದು ಗೊತ್ತಾಗುವುದು.
ಅಲ್ಲಿ ನೋಡಿದರೆ ಆಸ್ಪತ್ರೆಯ ಎದುರು ಹತ್ತಾರು ಜನ. ಎಲ್ಲರ ಮುಖದಲ್ಲೂ ವಿಷಾದದ ಛಾಯೆ. ಎಲ್ಲ ಪರಿಚಿತ ಮುಖಗಳೇ. ಅದರಲ್ಲೊಬ್ಬ ನನ್ನೆದುರು ಕೈ ಮುಗಿದು ಹೇಳಿದ..
“ಸಾಹೇಬ್ರ, ಹೆಂಗರ ಮಾಡ್ರಿ, ನನ್ನ ಮಗಳಿಗಿ ಆರಾಮ ಮಾಡ್ರಿ. ಹರ್ಯಾಗಿಂದ ಭಾಳ ತ್ರಾಸ ಮಾಡ್ಕೋಳಾಕ ಹತ್ಯಾಳ್ರಿ. ನಿಮ್ಮನ್ನ ಜಪಿಸಿ ಇಲ್ಲಿ ಬಂದಾಳ್ರಿ…”
ಅವನ ಮುಖದಲ್ಲಿದ್ದ ದೈನ್ಯತೆ ನನ್ನನ್ನು ಹೈರಾಣ ಮಾಡಿತು. ಮಗಳಿಗಾಗುತ್ತಿರುವ ಇಡೀ ಕಷ್ಟವನ್ನೇ ತನ್ನಲ್ಲಿ ಆವಾಹಿಸಿಕೊಂಡಂತೆ ತೋರಿದ. ನೋಡೋಣ ಏನಿದೆಯೋ ಎಂದು ಒಳಗೆ ಹೋದರೆ, ಗುಡ್ಡದಂಥ ಹೊಟ್ಟೆ ಮಾಡಿಕೊಂಡು ನರಳುತ್ತ ಟೇಬಲ್ ಮೇಲೆ ಮಲಗಿದ, ಸುಮಾರು ಹದಿನಾರು ವರ್ಷಪ್ರಾಯದ ಕೃಶ ಶರೀರದ ಹುಡುಗಿ. ನನ್ನನ್ನು ನೋಡಿದವಳೇ ಧಡಕ್ಕನೆ ಟೇಬಲ್ ಮೇಲಿನಿಂದ ಇಳಿದು ನನ್ನ ಕಾಲಿಗೆರಗಿದಳು. ಹಳ್ಳಿ ಮತ್ತು ತಾಲೂಕಾ ಮಟ್ಟದ ಆಸ್ಪತ್ರೆಗಳಲ್ಲಿ ಕಾಲಿಗೆರಗುವ ಈ ಕ್ರಿಯೆ ಸಾಮಾನ್ಯವಾದರೂ ಅದು ನನ್ನನ್ನು ಗಲಿಬಿಲಿಗೊಳಿಸುತ್ತದೆ. ಅನೇಕ ಬಾರಿ ವಯಸ್ಸಿನಲ್ಲಿ ನನಗಿಂತ ದೊಡ್ಡವರೂ ಕಾಲಿಗೆರಗುವುದಿದೆ. ‘ಇದಕ್ಕೆ ನಾನು ಅರ್ಹನೇ..?’ ಎಂದು ಪ್ರತಿ ಬಾರಿಯೂ ಅಂದುಕೊಳ್ಳುತ್ತೇನೆ. ಯಾಕೆಂದರೆ ಈ ಕಾಲಿಗೆರಗುವ ಕ್ರಿಯೆ ಎರಗಿದವನಲ್ಲಿ ದೈನ್ಯತೆಯನ್ನೂ ಎರಗಿಸಿಕೊಂಡವನಲ್ಲಿ ಅಹಮಿಕೆಯನ್ನೂ ತುಂಬಿಬಿಡುತ್ತದೆ. ಹೀಗಾಗಿ ನನಗದು ಮುಜುಗರವೆನಿಸುತ್ತದೆ. ಆದರೂ ಅದು ನನ್ನೊಳಗಿನ ವೈದ್ಯನಿಗೆ ಸಂದ ಗೌರವ, ನನಗಲ್ಲ, ಎಂದು ಸಮಾಧಾನಿಸಿಕೊಳ್ಳುತ್ತೇನೆ.
“ಹಿಂಗ್ಯಾಕ ಅಳ್ತಿಯವಾ..ಸುಮ್ನಿರು. ಆರಾಮ ಮಾಡೂಣಂತ, ನಿನಗ ಏನ್ ತ್ರಾಸ ಐತಿ ಹೇಳು…..” ಅಂದೆ
“ಅಂಕಲ್, ನನ್ನ ನೆನಪ ಇಲ್ಲೇನ್ರೀ ನಿಮಗ? ನಾನ್ರೀ ಗೀತಾ….(ಹೆಸರು ಬದಲಿಸಿದ್ದೇನೆ..). ನೀವು ಲೋಕಾಪುರದಾಗ ಇದ್ದಾಗ ನಿಮ್ಮ ಮನಿ ಮುಂದ ಆಡಾಕ ಬರ್ತಿದ್ನಿ. ನಿಮ್ಮ ಮನ್ಯಾಗ ಊಟಾ ಮಾಡೂದು, ನೀರ್ ಕುಡಿಯೋದು ಮಾಡ್ತಿದ್ನೆಲ್ರಿ…” ಅಂದಳು.
ಸರಕಾರೀ ವೈದ್ಯನಾಗಿ ನಾನು ಲೋಕಾಪುರದಲ್ಲಿ ಇದ್ದದ್ದು ಮೂರು ವರ್ಷ. ಆ ಮೂರು ವರ್ಷಗಳು ನನ್ನ ವೈದ್ಯಕೀಯ ಜೀವನದ ಅತೀ ಮಹತ್ವದ ದಿನಗಳು. ಹಾಗೆ ನೋಡಿದರೆ ನನ್ನ ಜೀವನಕ್ಕೆ ‘ಅರ್ಥಪೂರ್ಣ’ ತಿರುವು ಕೊಟ್ಟ ಊರು ಲೋಕಾಪುರ. ಇತ್ತ ಹಳ್ಳಿಯೂ ಅಲ್ಲದ ಅತ್ತ ಪಟ್ಟಣವೂ ಅಲ್ಲದ ಊರು. ಗಿಜುಗುಡುವ ಆಸ್ಪತ್ರೆ, ಕೃತಜ್ಞತೆ ತೋರುವ ರೋಗಿಗಳು. ಕೈತುಂಬ ಕೆಲಸ, ಮನಸ್ಸು ತೃಪ್ತಿ ,ಹಾಗಿದ್ದವು ಆ ದಿನಗಳು. ಊರಿನ ಎಲ್ಲರೂ ಪರಿಚಯವಾಗಿಬಿಟ್ಟು ನಾನು ಆ ಊರಿನವನೇ ಆಗಿಬಿಟ್ಟಿದ್ದೆ.

ಮುಖ ದಿಟ್ಟಿಸಿದೆ. ಪೂರಾ ಬದಲಾದ ಆ ಮುಖದಲ್ಲಿ ಒಂದೆರಡು ಗುರುತಿನ ಗೆರೆಗಳು ಕಂಡವು. ಹೌದು, ಈಗ ಬರೀ ಎಂಟು ವರ್ಷಗಳ ಹಿಂದೆ ನಮ್ಮ ಮನೆಯೆದುರು ಚಟುವಟಿಕೆಯಿಂದ ಆಡಿಕೊಂಡಿದ್ದ ಲಂಗ ದಾವಣಿಯ ಚೆಂದನೆಯ, ಚೈತನ್ಯ ತುಂಬಿದ ಎಂಟೊಂಭತ್ತು ವರ್ಷದ ಮುಗ್ಧ ಹುಡುಗಿ. ತನ್ನ ಓರಗೆಯವರೊಡನೆ ಆಡುತ್ತಾ ನೀರಡಿಸಿದಾಗಲೆಲ್ಲ ಓಡೋಡಿ ನಮ್ಮ ಅಡುಗೆ ಮನೆಗೆ ನುಗ್ಗಿ ತನಗೆ ಬೇಕಾದ್ದೆಲ್ಲವನ್ನೂ ತಿಂದು ನೀರು ಕುಡಿದು ಜಿಂಕೆಯಂತೆ ಓಡುತ್ತಿದ್ದವಳು. ಆಗ ಅವಳ ಕಣ್ಣಲೊಂದು ಮಿಂಚಿತ್ತು, ಕುತೂಹಲವಿತ್ತು. ಆಟದಲ್ಲಿ ಗೆದ್ದಾಗಲೆಲ್ಲ ಜಗವ ಗೆದ್ದ ಸಂತಸವಿತ್ತು.
ಈಗ ನೋಡಿದರೆ ಹೀಗೆ, ಮೂಳೆಗಳ ಮೇಲೆ ಬರೀ ಚರ್ಮ ಹೊದ್ದುಕೊಂಡು ತನ್ನ ಹೊಟ್ಟೆಯೊಳಗೊಂದು ಮಗು ಬೆಳೆಸಿಕೊಂಡು ಒದ್ದಾಡುತ್ತಾ ಮಲಗಿದ್ದಾಳೆ. ಮನಸ್ಸು ವಿಹ್ವಲಗೊಂಡಿತು. ಬರೀ ಹದಿನಾರು ಹದಿನೇಳು ವರ್ಷ ಪ್ರಾಯದ ಆಕೆ ತುಂಬು ಗರ್ಭಿಣಿ…!! ಅಂದರೆ ಅವಳು ಹದಿನೈದು ವರ್ಷದವಳಿದ್ದಾಗಲೇ ಮದುವೆ ಮಾಡಿದ್ದಾರೆ. ಯಾವ ಕಾಲದ ಜನ ಇವರು ಎನಿಸಿತು.
‘ಏನಾಗಿದೆ ಇವಳಿಗೆ?’ ಎಂದು ಕೇಳಿದರೆ ಕರುಳು ಹಿಂಡುವ ಕಥೆ ಬಿಚ್ಚಿಟ್ಟ ಆ ಹುಡುಗಿಯ ತಂದೆ.
ಅವಳಿನ್ನೂ ಹೈಸ್ಕೂಲಿನ ಒಂಭತ್ತನೇ ವರ್ಗ ಕಲಿಯುತ್ತಿದ್ದಾಗಲೇ “ದೊಡ್ಡ ಮನೆತನ”ದವರು ನೋಡಲು ಬಂದು ಹುಡುಗಿಯನ್ನು ಮೆಚ್ಚಿಕೊಂಡಿದ್ದಾರೆ. ಮೊದಲೇ ಬಡತನದಲ್ಲಿದ್ದ ಇವಳ ತಂದೆ ಅಂತಹ ಒಳ್ಳೆಯ ಮನೆತನ ದೊರೆಯುತ್ತದೆಂದು ಹಿಂದು ಮುಂದು ವಿಚಾರಿಸದೆ ಮದುವೆಗೆ ಒಪ್ಪಿಕೊಂಡುಬಿಟ್ಟಿದ್ದಾನೆ. ತಾಯಿಯಿಲ್ಲದ ಹುಡುಗಿಗೆ ಶ್ರೀಮಂತ ಮನೆತನ ದೊರೆತದ್ದು ಅವನಿಗೂ ಸಂತೋಷ ತರಿಸಿತ್ತು. ಮದುವೆಯಾದೊಡನೆಯೇ ಗಂಡನ ಮನೆ ಸೇರಿದ್ದಾಳೆ. ನಿಸರ್ಗ ನಿಯಮದಂತೆ ಗರ್ಭಿಣಿಯಾಗಿದ್ದಾಳೆ. ಮೊದಲ ಆರು ತಿಂಗಳು ಎಲ್ಲರಿಗೂ ಖುಷಿಯ ವಿಷಯವೇ. ಅವಳ ತಂದೆಗಂತೂ ಆಕಾಶ ಮೂರೇ ಗೇಣು, ತಮ್ಮ ಮಗಳು ತಾಯಿಯಾಗುವುದ ತಿಳಿದು. ಮುಂದೆ ಅವಳಿಗೆ ಜ್ವರ, ಕೆಮ್ಮು, ಭೇದಿ ಕಾಡಿದಾಗ ಆಸ್ಪತ್ರೆಗೆ ಹೋದಾಗಲೇ ಬರಸಿಡಿಲೊಂದು ಬಗಲಲ್ಲಿ ಬಂದು ಕುಳಿತಂತಾಗಿತ್ತು.
ಅವಳ ರಕ್ತ ಪರೀಕ್ಷೆ ಮಾಡಿದ ವೈದ್ಯರು ಇವನನ್ನು ಬದಿಗೆ ಕರೆದು ತಿಳಿಸಿದ್ದು,…..
“ಅವಳಿಗೆ ಎಚ್.ಐ.ವಿ. ಇದೆ”…ಎಂದು…..!!
ಈ ಹುಡುಗಿಗಿಂತ ೧೨ ವರ್ಷ ದೊಡ್ಡವನಾದ ಆ “ದೊಡ್ಡ ಮನೆತನ”ದ ಹುಡುಗ ‘ಸರ್ವಗುಣ ಸಂಪನ್ನ’ನೆಂದೂ, ಅವನು ಮನೆಯಲ್ಲಿ ಮಲಗಿದ್ದಕ್ಕಿಂತ ಹೊರಗೆ ಮಲಗಿದ್ದೆ ಹೆಚ್ಚೆಂದೂ ಆಮೇಲೆ ವಿಚಾರಿಸಿದಾಗ ತಿಳಿದಿದೆ. ಆದರೆ ಕಾಲ ಮಿಂಚಿತ್ತು. ಅವನು ‘ತನ್ನ ಎಲ್ಲ’ವನ್ನೂ ಈ ಎಳೆಯ ಹುಡುಗಿಗೆ ‘ದೇಹಾಂತರ’ ಮಾಡಿಬಿಟ್ಟಿದ್ದ…
ಎಲ್ಲವನ್ನೂ ಕೇಳಿ ಬೇಸರವಾಯಿತು. ಅವಳನ್ನು ಪರೀಕ್ಷಿದರೆ ಮೈಯಲ್ಲಿ ರಕ್ತವೇ ಇಲ್ಲದ ಪರಿಸ್ಥಿತಿ. ಬೇರೆ ಕಡೆ ಮಾಡಿಸಿದ ಪರೀಕ್ಷೆಗಳಲ್ಲಿ ಇವಳ ರೋಗ ಅದಾಗಲೇ ಎಚ್.ಇ.ವಿ.ಯಿಂದ ಏಡ್ಸ್ ಗೆ ಪರಿವರ್ತನೆಗೊಂಡ ಲಕ್ಷಣಗಳಿದ್ದವು. ಎಂಥಾ ಔಷಧಿಗಳನ್ನು ಕೊಟ್ಟರೂ ಅವಳನ್ನು ಗುಣಪಡಿಸುವುದು ಕಷ್ಟವೇ ಅನ್ನುವ ಸ್ಥಿತಿ. ತಲೆ ಗಿರ್ರೆಂದಿತು.
“ಅಂಕಲ್ , ಎಲ್ಲಾ ಡಾಕ್ಟರೂ ನನಗೇನೋ ರೋಗ ಐತಿ ,ಆರಾಮ ಆಗೂದಿಲ್ಲ ಅಂದರ್ರೀ , ನಿಮ್ಮ ಕಡೆ ಆರಾಮ ಆಗ್ತೀನಿ ಅಂತ ಬಂದೀನಿ. ಆರಾಮ ಮಾಡ್ತೀರಲ್ರೀ…?” ಎಂದು ಆ ಹುಡುಗಿ ಕೇಳಿದಾಗಲೇ ನಾನು ನನ್ನ ವಿಚಾರಗಳಿಂದ ಹೊರಬಂದೆ.
“……………………”
ಏನೆಂದು ಉತ್ತರಿಸಲಿ, ಅವಳ ಮುಗ್ಧ ಪ್ರಶ್ನೆಗೆ…?
ಉತ್ತರಿಸುವ ಧೈರ್ಯ ಇರಲಿಲ್ಲ. ವೈದ್ಯಕೀಯ ಒಮ್ಮೊಮ್ಮೆ ನಮ್ಮನ್ನು ಅಸಹಾಯಕರನ್ನಾಗಿಸುತ್ತದೆ. ವೈದ್ಯಕೀಯ ವಿಜ್ಞಾನದ ಅದ್ಭುತ ಬೆಳವಣಿಗೆಗಳ ನಡುವೆಯೂ ಕೆಲವೊಂದು ರೋಗಗಳಿಗೆ ಪೂರ್ಣ ಗುಣಪಡಿಸುವ ಚಿಕಿತ್ಸೆ ಲಭ್ಯವಿಲ್ಲದೆ ನಾವು ಅನಿವಾರ್ಯವಾಗಿ ಕೈಚೆಲ್ಲಬೇಕಾಗುತ್ತದೆ. ನಿಜ ಹೇಳಿದರೆ ಅವಳಿಗೆ ಆಘಾತ, ಹೇಳದಿದ್ದರೆ ಅನ್ಯಾಯ. ಅದಕ್ಕೆ ಕೆಲವೊಮ್ಮೆ ಮೌನ ನಮ್ಮನ್ನು ಪಾರು ಮಾಡುತ್ತದೆ. ಅವಳೆಡೆಗೆ ನೋಡಿದೆ. ನಿಶ್ಚಿಂತೆಯಾಗಿ ಮಲಗಿದ್ದಾಳೆ. ತಾನು ಬಯಸಿದ ವೈದ್ಯನ ಆರೈಕೆಯಿಂದ ಗುಣವಾಗುತ್ತೇನೆಂಬ ಭರವಸೆ ಇದ್ದಿರಬಹುದೇ?
ಅವಳ ನೋವನ್ನು ಸ್ವಲ್ಪ ಕಡಿಮೆ ಮಾಡುವ, ದೇಹದಲ್ಲಿ ಒಂದಿಷ್ಟು ಚೈತನ್ಯ ತುಂಬುವ ಇಂಜೆಕ್ಷನ್, ಸಲೈನ್ ಗಳನ್ನು ಕೊಡಲು ನಮ್ಮ ಸಿಬ್ಬಂದಿಗೆ ತಿಳಿಸಿ ಮನೆಗೆ ಬಂದೆ. ತನ್ನದಲ್ಲದ ತಪ್ಪಿಗೆ ಅವಳು ಏನೇನೆಲ್ಲ ಕಳೆದುಕೊಂಡಳಲ್ಲ….ಎಂದು ಯೋಚಿಸುತ್ತ.
ತಂದೆಯ ಧಾವಂತಕೆ ತನ್ನ ಬಾಲ್ಯವನ್ನು,
ಗಂಡನೆನಿಸಿಕೊಂಡವನ ತಪ್ಪಿನಿಂದ ತನ್ನ ಆರೋಗ್ಯವನ್ನು,
ಸಮಾಜದ ತಪ್ಪಿನಿಂದ ತನ್ನ ಶಿಕ್ಷಣವನ್ನು,
ಭಯಂಕರ ರೋಗದಿಂದ ತನ್ನ ಭವಿಷ್ಯವನ್ನು,
ರೋಗ ಉಲ್ಬಣವಾದರೆ ತನ್ನ ಕರುಳಕುಡಿಯನ್ನು,
ಕೊನೆಗೆ ಜೀವವನ್ನೂ ?
ಹೀಗೆ ತನ್ನದೆನ್ನುವದೆಲ್ಲವನ್ನೂ, ಕಳೆದುಕೊಂಡಳಲ್ಲ …ಎನಿಸಿತು.
ಮಲಗಿದರೆ ನಿದ್ದೆ ಸನಿಹ ಸುಳಿಯುತ್ತಿಲ್ಲ. ಮೊನ್ನೆ ತಾನೇ ಆಟ ಆಡಿಕೊಂಡಿದ್ದ ಹುಡುಗಿ ಈಗ ಸಾವಿನ ಸಮೀಪ… ತನ್ನನ್ನು ಮೊದಲಿನಂತಾಗಿಸಲು ನನ್ನಲ್ಲಿ ಬೇಡಿದಂತೆ. ನಮ್ಮ ಮನೆಯ ಅಂಗಳದಲ್ಲಿ ಮತ್ತೆ ಆಡಿಕೊಂಡಂತೆ… ಎಲ್ಲ ಗೋಜಲು.
ಇದನ್ನು ತಪ್ಪಿಸಬಹುದಿತ್ತೆ? ಮದುವೆಗೆ ಮೊದಲು ರಕ್ತ ಪರೀಕ್ಷೆ ಕಡ್ಡಾಯವಾಗಬೇಕೆ? ಕಡ್ಡಾಯ ಮಾಡಿದರೂ ಮದುವೆಯಾದ ಮೇಲೆ ರೋಗ ಅಂಟಿಸಿಕೊಂಡು ಬಂದರೆ ಏನು ಮಾಡುವುದು? ಇತ್ಯಾದಿ ನೂರೆಂಟು ಪ್ರಶ್ನೆಗಳು ತಲೆತಿನ್ನತೊಡಗಿದವು…..
ನಿದ್ದೆ ಬರಲಿಲ್ಲ….
ಮುಂಜಾನೆಯ ವಾಕಿಂಗ್ ಗೆಂದು ಸೆಟ್ ಮಾಡಿದ ಅಲಾರ್ಮ್ ರಿಂಗಣಿಸತೊಡಗಿತು….
 

‍ಲೇಖಕರು G

November 6, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

18 ಪ್ರತಿಕ್ರಿಯೆಗಳು

  1. Anonymous

    Really heart breaking narration Shivu U R a wonderful author with a kindest feelings suited for a gentleman and a doctor

    ಪ್ರತಿಕ್ರಿಯೆ
  2. Dr.Ratna Kulkarni

    ಲೇಖನವನ್ನು ಓದಿ ಮನಸ್ಸು ಕಳವಳಗೊಂಡಿತು.ಮದುವೆಗೆ ಮೊದಲು ಜಾತಕದ ನೋಡುವ ಬದಲು ರಕ್ತಪರೀಕ್ಷೆ ಕಡ್ಡಾಯಗೊಳಿಸುವದು ಒಳ್ಳೆಯದೇನೋ.

    ಪ್ರತಿಕ್ರಿಯೆ
  3. ಭೀಮಪ್ಪ ಹುನಸೀಕಟ್ಟಿ.ಲೋಕಾಪುರ

    ಗ್ರಾಮೀಣ ಬದುಕಿನ ದುರಂತವೊಂದನ್ನು ಆಡುಭಾಷೆಯಲ್ಲಿ ಚನ್ನಾಗಿ ನಿರೂಪಿಸಿದ್ದೀರಿ.ಇತ್ತೀಚೆಗೆ ಅತೀ ಚಿಕ್ಕ ವಯಸ್ಸಲ್ಲೇ ಎಳೆಬಾಲೆಯರು ವಿಧವೆಯರಾಗುತ್ತಿರುವದಕ್ಕೆ ಕಾರಣ- ಒಂದು HIV,
    ಇನ್ನೊಂದು ಕುಡಿದು ಮಿತಿಮೀರಿದ ವೇಗದಲ್ಲಿ ಬೈಕ್ ಓಡಿಸಿ ಸಾಯುವವರದು. ಕೆಲವು ಪ್ರಕರಣಗಳಲ್ಲಿ ನಾನು ನೋಡಿದ್ದು, ಮದುವೆಯಾಗಿ ಗಂಡನ ಮನೆಗೆ ಬಂದ ಕೆಲವೇ ತಿಂಗಳಲ್ಲಿ ಹುಡುಗಿಯರು ವಿಧವೆಯರಾಗಿ ನರಳುವದು.ಮರುಮದುವೆಯ ಯೋಚನೆಯೂ ಇರದ ಈ ವಾತಾವರಣಗಳಲ್ಲಿ ಹೆಣ್ಣಿನ ಗೋಳು ಸಾಕ್ಷಾತ್ ನರಕ !

    ಪ್ರತಿಕ್ರಿಯೆ
  4. hema

    ತನ್ನದಲ್ಲದ ತಪ್ಪಿಗೆ ಅವಳು ಏನೇನೆಲ್ಲ ಕಳೆದುಕೊಂಡಳಲ್ಲ..
    ಮದುವೆಗೆ ಮೊದಲು ರಕ್ತ ಪರೀಕ್ಷೆ ಕಡ್ಡಾಯವಾಗಬೇಕೆ? ಕಡ್ಡಾಯ ಮಾಡಿದರೂ ಮದುವೆಯಾದ ಮೇಲೆ ರೋಗ ಅಂಟಿಸಿಕೊಂಡು ಬಂದರೆ ಏನು ಮಾಡುವುದು? ಇತ್ಯಾದಿ ನೂರೆಂಟು ಪ್ರಶ್ನೆಗಳು ತಲೆತಿನ್ನತೊಡಗಿದವು
    nija sir… hridaya hinduva prashnegalu samasyegalu

    ಪ್ರತಿಕ್ರಿಯೆ
  5. ಡಾ.ಶಿವಾನಂದ ಕುಬಸದ

    ಲೇಖನಕ್ಕೆ ಸುಂದರ,ಅರ್ಥಪೂರ್ಣ ಚಿತ್ರ ಬಿಡಿಸಿದ ಕಲಾವಿದರಿಗೆ ಧನ್ಯವಾದಗಳು.

    ಪ್ರತಿಕ್ರಿಯೆ
  6. ಸುಮನ್ ದೇಸಾಯಿ

    ನಮಸ್ತೆ ಸರ್… ನಿಮ್ಮ ಬರಹ ಓದಿ ಹನಿಯುವ ಕಣ್ಣಿರನ್ನ ತಡೆಯಲಾಗುತ್ತಿಲ್ಲ. ಮದುವೆಗೆ ಮುನ್ನ ರಕ್ತ ಪರಿಕ್ಷೆ ಒಂದು ರೀತಿಯಿಂದ ಸಮಂಜಸವೆನಿಸುತ್ತೆ, ಆದ್ರೆ ಆಗಿಹೋಗಿರುವ ಮದುವೆಯಿಂದ ಸೊಂಕಿತರಾದ ಹೆಣ್ಣು ಮಕ್ಕಳ ಗತಿ ಎನು, ಹೀಗೊಂದು ನನ್ನ ಕಣ್ಣೆದುರಿಗೆ ನಡೆದ ಘಟನೆ, ಸುಶಿಕ್ಷಿತ ಕುಟುಂಬವೊಂದರ ದಂಪತಿಗಳು, ಆ ಗರ್ಭಿಣಿ ಹೆಂಗಸು “ಹೆಚ್ ಐ ವ್ಹಿ” ಅಂತ ಗೊತ್ತಾದ ಮೇಲೆ ಖಾಸಗಿ ಆಸ್ಪತ್ರಯಲ್ಲಿ ಹೆರಿಗೆ ಆಗಲಿಲ್ಲ, ಸರ್ಕಾರಿ ಆಸ್ತತ್ರೆಗೆ ಹೋಗಿ ಎಂದ ಬಿಟ್ಟರು. ಹೀಗೆಂದು ಗೊತ್ತಾದಿಂದ ಆಸ್ಪತ್ರಯಲ್ಲಿ ಕೆಲಸ ಮಾಡುವ ಆಯಾಗಳಾದಿಯಾಗಿ, ವೈದ್ಯರ ವರೆಗು ಹೀನಾಯವಾದ ಕೀಳು ದೃಷ್ಠಿ ಅನುಭವಿಸಿದ ಅವಳು, ಕರುಳಕುಡಿಯನ್ನ ಬೆಳಕಿನ ಲೋಕಕ್ಕೆ ತರಲು, ಎಲ್ಲರ ಕಪ್ಪು ನೋಟಗಳನ್ನ ನುಂಗಿ, ಸರ್ಕಾರಿ ಆಸ್ಪತ್ರೆಗೆ ಕಾಲಿಟ್ಟಿದ್ದಳು. ಜೊತೆಯಲ್ಲಿ ಗಂಡನಾಸರೆ ಬಿಟ್ಟರೆ ಬೆರೆಲ್ಲರು ಪರಕೀಯರಾದರು, ಅಸ್ಪೃಷ್ಯರಂತೆ ನೊಡಲು ಶುರು ಮಾಡಿದ್ರು. ಕೊನೆಗೆ ಹೆರಿಗೆ ಆ ಕರಾಳ ಅನುಭವ, ಻ದನ್ನು ಕೇಳಿದರಂತು, ಈಗಲು ಕಣ್ಣಲ್ಲಿ ನೀರು ಬರುತ್ತೆ, ಬರ್ತಿದೆ, ನಾರ್ಮಲ್ ಡಿಲೇವರಿ ಆಗಲಿಲ್ಲ, ಸುಮಾರು ಮಧ್ಯರಾತ್ರಿ 3.45 ರ ಹೊತ್ತಿರ ಬಹುದು ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೆಟರ್ ನಲ್ಲಿ, ಮುಖ್ಯ ವೈದ್ಯರೊಬ್ಬರು, ಸುತ್ತಲು ಬಹುಷಃ ಹೌಸಮನ್ಶಿಪ್ ನ ಹುಡುಗ ಹುಡುಗಿಯರು ಇರಬಹುದು, ಇವಳ ನೋವಿಗೆ ಕುಚೇಷ್ಟೆಯ ನಗು, ಕೊನೆಗೆ ಆ ಮುಖ್ಯ ವೈದ್ಯನ ಆ ಮಾತುಗಳು ” ಮಾಡೊ ಹಲ್ಕಟ್ ಗಿರಿ ಮಾಡಿ, ನಮ್ಮ ಜೀವಾ ತಿನ್ನಲಿಕ್ಕೆ ಬರ್ತಾರ, ಯಾಕ ಬೇಕ ಇಂಥವರಿಗೆ ಮಕ್ಕಳು” ಅಂದಾಗ ಆ ಹೆಣ್ಣು ಒದ್ದಾಡಿದ ಆ ಘಳಿಗೆ, ಅಬ್ಬಾ ಎಂಥ ಕಠೋರ, ನಿಮಗೆ ಬರಿತಿದ್ದಿನಿ ಆದ್ರೆ ನನ್ನ ಕಣ್ಣಿಂದ ನೀರು ಹರಿತಿದೆ. ( ಇಲ್ಲಿ ಆ ಹೆಣ್ಣು ನಿಜವಾಗಲು ಮುಗ್ಧಳು, ಗಂಡ ತನ್ನದೆ ತಪ್ಪೆಂದು ಒಪ್ಪಿಕೊಂಡಿದ್ದ. ಹರೆಯ ಮೂಡೊ ಹೊತ್ತಲ್ಲಿ ಸ್ನೇಹಿತರೊಂದಿಗೆ ಸೇರಿ ಒಮ್ಮೆ ಆದ ತಪ್ಪೆಂದು.) ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸೊದು ಎಷ್ಟು ಘೋರ ಅಲ್ವಾ. ಯಾಕೆ ಇವರನ್ನು ಕರುಣೆಯಿಂದ ನೊಡೊಲ್ಲ .ಇಂಥ ಪರಿಸ್ಥಿತಿಯಲ್ಲಿ ತಪ್ಪು ಗಂಡಿನದಿದ್ದರು ಹೆಣ್ಣೆ ಯಾಕೆ ನೋವು, ಅವಮಾನವೆಂಬೊ ಶಿಕ್ಷಯೆನ್ನ ಅನುಭವಿಸಬೇಕು. ಗಂಡು ಯಾವಾಗಲು ಬಚಾವ್, ಹೀಗೇಕೆ?

    ಪ್ರತಿಕ್ರಿಯೆ
  7. ಲಕ್ಷ್ಮೀಕಾಂತ ಇಟ್ನಾಳ

    ಜಗತ್ತು ಅದೆಷ್ಟು ಕ್ರೂರ ಹೌದಲ್ಲವೇ. ಯಾವ ಅಪರಾಧ ಮಾಡದಿದ್ದರೂ ಹೀಗೆ ದಯನೀಯವಾಗಿ ಜೀವ ತೊರೆಯುತ್ತಿರುವ ಅಮಾಯಕ ಜೀವಗಳಿಗೆ ನಾವೇನೂ ಮಾಡದಿದ್ದುದಕ್ಕೆ ಹೃದಯಪೂರ್ವಕ ಕ್ಷಮೆ ಯಾಚಿಸುವೆ. ಡಾ. ಶಿವಾನಂದ ಜಿ, ತುಂಬಾ ಆಪ್ತ ಸಂಗತಿಯನ್ನು ಹಂಚಿಕೊಂಡಿದ್ದೀರಿ. ಬರಹ ಕೂಡ ಸೀದಾ ಎದೆಯಿಂದ ಎದೆಗೆ. ಇಷ್ಟವಾಯಿತು.

    ಪ್ರತಿಕ್ರಿಯೆ
  8. Anonymous

    ಇನ್ನೂ ಎಷ್ಟು ಅಮಾಯಕ ಎಳೇ ಜೀವಗಳು ಮೌಢ್ಯಕ್ಕೆ ಬಲಿಯಾಗಬೇಕಿದೆಯೋ?ದೇವರೇ!! ನಿಟ್ಟುಸಿರು ಬಂತು.. ನಿರೂಪಣೆ ಮನಸ್ಸಿಗೆ ಮುಟ್ಟುತ್ತದೆ..

    ಪ್ರತಿಕ್ರಿಯೆ
  9. ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ

    ತುಂಬಾ ಮನಸಿಗಿಳಿಯುವ ಬರಹ ಸರ್ ಅವಳ ಕಷ್ಟಕ್ಕೆ ಅವನು ಕಾರಣ, ಅವನನ್ನು ಎಷ್ಟು ಶಪಿಸಿದರೂ ಕಡಿಮೆನೆ ಹಾಗೇನೆ ಅವಳ ನೋವನ್ನು ಯಾವ ರೀತಿ ಹೇಳಿಕೊಂಡಿರಬೇಕು, ಸತ್ಯದ ಅರಿವಿಲ್ಲದೆಯೂ ಆ ನೋವು ಅಷ್ಟೋಂದು ಭೀಕರತೆಯನ್ನು ಪಡೆದಿದೆ ಸತ್ಯ ಅರಿವಾಗಿದ್ದಿದ್ದರೇ ….???
    ಅಬ್ಬಾ..!! ಓದಿದರೆ ಮೈ ನವಿರೇಳುವ ಬರಹ ಸರ್..
    ನಿಮ್ಮ ಅನುಭವದ ಬುತ್ತಿಯಲಿ ನೀವು ಸವಿದ ಒಂದೊಂದು ತುತ್ತೂ ಕೂಡಾ ಅದ್ಭುತ ಸರ್…

    ಪ್ರತಿಕ್ರಿಯೆ
  10. mmshaik

    kaNNiru tumbi banditu..uttama moulyayuta chintane..samaajika chintaneyinda kuudida baraha..

    ಪ್ರತಿಕ್ರಿಯೆ
  11. Arunkumar Habbu

    Really a pathetic story. Such cases are many. The innocent girls are made the victims. Pre-marriage blood test of course avoid such recurrences. But as it is told in the story if the person develops the diseases after the marriage? Any way such things should not happen. Only this much I can say. Thanks to Dr. Shivanand for his humane concern. Well narrated story.

    ಪ್ರತಿಕ್ರಿಯೆ
  12. Upendra

    ಮನ ಮಿಡಿಯಿತು.
    ಯಾರೋ ಮಾಡಿದ ತಪ್ಪಿಗೆ ಯಾರೋ ಬಲಿಯಾಗುವುದು… ಇನ್ಯಾರೋ ಜೀವನ ಪರ್ಯಂತ ನರಕಯಾತನೆ ಅನುಭವಿಸುವುದು… ಮತ್ಯಾರೋ ‘ ತಪ್ಪಿತಸ್ಥ ಮನೋಭಾವ’ದಿಂದ ನರಳುವುದು … ಇವೆಲ್ಲಾ ಅಲ್ಲಿ ಇಲ್ಲಿ ಎಲ್ಲೆಲ್ಲೂ ಇದ್ದದ್ದೇ. HIV/AIDS ಪೀಡಿತರ ಮತ್ತು ಅವರ ಸುತ್ತಮುತ್ತಲಿನ ಪರಿಸ್ಥಿತಿ ಇದೇ ಆದರೂ ಇನ್ನೂ ಸ್ವಲ್ಪ ಗಂಭೀರ.
    ಇಲ್ಲಿ ‘ಯಾರನ್ನು ದೂರುವುದು?’ ಅನ್ನುವ ಪಶ್ನೆಯ ಜೊತೆಗೆ ಇದಕ್ಕೆ ವೈದ್ಯಕೀಯವಲ್ಲದೇ ಮಾನವೀಯ ದೃಷ್ಟಿಯಿಂದ ಪರಿಹಾರ ಏನು?’ ಅನ್ನುವ ಪ್ರಶ್ನೆಯೂ ಭೂತವಾಗಿ ಬೆಳೆಯುತ್ತದೆ.
    ಇಷ್ಟೆಲ್ಲಾ ‘ಜಾಗೃತಿ ಜಾಥಾ’ (awareness) ಗಳನ್ನು ನಡೆಸಿದರೂ ನಮಗೆ HIV ಮತ್ತು AIDS ಗಳ ವ್ಯತ್ಯಾಸ ಕೂಡಾ ಗೊತ್ತಾಗುತ್ತಿಲ್ಲ.
    “HIV ಅಂದ್ರೆ AIDS. ಏಡ್ಸ್ ಅಂದ್ರೆ ಸಂಭೋಗದಿಂದ ಬಂದದ್ದು – ಗಂಡೋ ಹೆಣ್ಣೋ ಇಬ್ಬರಲ್ಲಿ ಒಬ್ಬವರು ‘ನೀತಿಗೆಟ್ಟವರು’ ” – ಇದು ನಾವು ಅವರಿಗೆ ಕೊಡುವ ಸರ್ಟಿಫಿಕೇಟ್!
    ಯಾರಿಗಾದರೂ HIV/AIDS ಇದೆ ಅಂದರೆ ನಮಗೆ ‘ಫಕ್ಕನೆ’ ಹೊಳೆಯುವುದು ಅದು ಸಂಭೋಗದಿಂದಲೇ ಬಂದದ್ದು ಅಂತ. ಇದು ನಮ್ಮ ತಪ್ಪು ಕಲ್ಪನೆ ಎಂದು ಒಪ್ಪಲು ನಾವು ತಯಾರಿಲ್ಲ. ಜನರಿಗೆ HIV ಸೋಂಕಿತರನ್ನು ನೋಡಿದಾಗ ಹೊಳೆಯುವುದೇ ಇದು. ಇದು ರೋಗ ಸೋಂಕಿತರಿಗೆ ಉಪಯೋಗಿಸಿದ ಸೂಜಿ ಸಿರಿಂಜುಗಳಿಂದಲೂ ಬರುತ್ತದೆ ಅನ್ನುವುದು ಪ್ರಾಯಶಃ ನನ್ನಂತಹ ಸಾಮಾನ್ಯ ಜನರ ತಲೆಗೆ ಹೊಳೆಯುವುದೇ ಇಲ್ಲ.
    ಸೋಂಕಿತರನ್ನು ಎಲ್ಲರೂ ಅಪರಾಧೀ ಸ್ಥಾನದಲ್ಲಿ ನಿಲ್ಲಿಸಿ ನಗುವವರೇ.
    ಅವರಿಗೆ ಬೇಕಾಗಿರುವುದು ‘ನೀವೂ ನಮ್ಮಂತೆ’ ಅನ್ನುವ ಭರವಸೆ ನೀಡುವ, ಅವರಲ್ಲಿ ಜೀವನೋತ್ಸಾಹ ತುಂಬುವ, ಇರುವಷ್ಟು ದಿನ ನೆಮ್ಮದಿಯಿಂದ ಬಾಳಲು ಅನುವು ಮಾಡಿ ಕೊಡುವ ಸಹೃದಯಗಳು.
    ನಾವು, ನೀವು…

    ಪ್ರತಿಕ್ರಿಯೆ
  13. Shantayya

    So
    Heart breaking
    Really things can be improved
    If there is a little forethought of a general health checkup as advised by dr mshanshtti
    One good thing is now hiv drugs are given free of cost
    Virus is loosing its propensity
    One more best
    By my best dr. Dr Kubsad

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: