ಡಾ ಶಿವಾನಂದ ಕುಬಸದ ’ನೆನಪುಗಳ ಪೆಟ್ಟಿಗೆಯಿಂದ’ : ಇದು ಗುಟಖಾ ಮಿಂಚು…


ಆತನ ಮುಖದಲ್ಲಿ ಮಿಂಚೊಂದು ಮೂಡಿ ಮರೆಯಾಯ್ತು…..!
ಪೂರ್ತಿ ತೆರೆಯಲು ಸಾಧ್ಯವಾಗದ ತನ್ನ ಬಾಯಿಯ ಒಂದು ಕೊನೆಯನ್ನು ಸಣ್ಣಗೆ ಒಂದೆಡೆ ಹಿಗ್ಗಿಸಿ ನನ್ನನ್ನು ನೋಡಿ ಮುಗುಳ್ನಕ್ಕ. ನಾನು ಕೇಳಿದ ಪ್ರಶ್ನೆಯಿಂದಾಗಿ “ಇವನೆಷ್ಟು ಅಜ್ಞಾನಿ” ಎಂಬ ಭಾವ ಅವನ ಮುಖದಲ್ಲಿ ಮಿನುಗುತ್ತಿತ್ತು.
ಆತ ೧೬ರ ಯುವಕ. ಇನ್ನೂ ಮೀಸೆ ಸರಿಯಾಗಿ ಮೂಡಿರಲಿಲ್ಲ.
ನನ್ನ ಆಸ್ಪತ್ರೆಯ ಕ್ಯಾಂಪಸ್ ನಲ್ಲಿ ಎರಡು ಚೀಟುಗಳನ್ನು ಹಲ್ಲಿನಿಂದ ಕಚ್ಚಿ ಹರಿದು, ಅವೆರಡನ್ನು ತನ್ನ ಅಂಗೈಯಲ್ಲಿ ಹಾಕಿ, ಕವರುಗಳನ್ನು ಅಲ್ಲೇ ಬಿಸಾಡಿ, ಕಣ್ಣಗಲಿಸಿ ತೃಪ್ತಿಯಿಂದ ನೋಡಿ, ಅವೆರಡನ್ನೂ ಹದವಾಗಿ ಮಿಶ್ರಣ ಮಾಡಿ, ಫಟ್ ಫಟ್ ಎಂದು ನಾಲ್ಕೈದು ಬಾರಿ ಚಪ್ಪಾಳೆಯ ಹಾಗೆ ಬಡಿದು, ಬಾಯಲ್ಲಿ ನೀರೂರಿಸಿಕೊಂಡು ಪರಮಾನ್ನದಷ್ಟೇ ಶ್ರದ್ಧೆಯಿಂದ ಇನ್ನೇನು ಬಾಯಿಯೊಳಗೆ ಹಾಕಬೇಕು, ಆಗ ನಾ ಕೇಳಿದ್ದೆ…
”ಇವೆರಡೂ ಕೂಡ್ಸಿದ್ರ ಮೊದಲಿನ ಗುಟಖಾದ ಹಂಗ ಆಗ್ತದೇನು?” ಎಂದು.
ಆತ ನನ್ನೆಡೆಗೆ ನೋಡಿದ.
ನಾನು ಅಲ್ಲಿಯ ವೈದ್ಯ ಎಂದಾತನಿಗೆ ಗೊತ್ತಿರಲಿಲ್ಲವೆನಿಸುತ್ತದೆ. ಸಣ್ಣಗೆ ಮುಗುಳ್ನಕ್ಕ. ಅತ್ಯಂತ ಖುಷಿಯಿಂದ, ಅದ್ಭುತವಾದದ್ದೇನನ್ನೋ ತಾನು ಸಂಶೋಧನೆ ಮಾಡಿದ್ದೇನೆ ಎಂಬ ಭಾವದೊಂದಿಗೆ
“ಹೌದ್ರಿ..ಸೇಮ್ ಟು ಸೇಮ್ ಗುಟಖಾನ ಆಗ್ತದರಿ…ನಿಮಗೂ ಬೇಕೇನ್ರಿ …” ಎಂದ.
“ಅಂದ್ರ ಸರಕಾರದವರು ಬ್ಯಾನ್ ಮಾಡಿದ್ದರಿಂದ ಏನು ತ್ರಾಸ ಆಗಿಲ್ಲಲ..” ಅಂದೆ.
“ಹೆ.. ಹೆ.. ಒಟ್ಟ ಆಗಿಲ್ಲ ಬಿಡ್ರಿ..ಅದು ಹಂಗ ಬಂದ್ ಆಯ್ತು..ತುಸು ದಿನಕ್ಕss ಇದು ಚಾಲೂ ಆಯ್ತು..” ಅಂದ…
ಆತನ ಮುಖದಲ್ಲಿ ‘’ಮಸ್ತ’’ ಆದ ಒಂದು ಭಾವನೆ ಕಂಡಿತು..
“ಸ್ಟಾsssರ್…ತಿಂನಿರಿ….maಮsssಸ್ತ …ಆಗಿರಿ…..”
ರಾಗವಾಗಿ ಯಾರೋ ನನ್ನ ಕಿವಿಯಲ್ಲಿ ಪಿಸುಗುಟ್ಟಿದಂತಾಯಿತು…ಈ ಯುವಕರ ಭಯಂಕರ ಚಟಕ್ಕೆ ತಲೆ ಧಿಮ್ಮೆನ್ನುತ್ತಿತ್ತು.
ಅದೇ ಗುಂಗಿನಲ್ಲಿ ಒಳಬಂದು ನನ್ನ ಚೇಂಬರ್ ನಲ್ಲಿ ಕುಳಿತೆ. ನಮ್ಮ ಸಹಾಯಕ ನಾಳಿನ ಆಪರೇಷನ್ ಗಳ ಲಿಸ್ಟ್ ತಂದಿಟ್ಟ. ಐದು ಕೇಸ್ ಗಳು. ಒಬ್ಬೊಬ್ಬರನ್ನಾಗಿ ಒಳಗೆ ಬರಲು ಹೇಳಿದೆ. ಎಂತಹ “ಶಸ್ತ್ರಚಿಕಿತ್ಸಾಪೂರ್ವ ಪರೀಕ್ಷೆ”ಗಳನ್ನು ಮಾಡಿದ್ದರೂ ಶಸ್ತ್ರಚಿಕಿತ್ಸೆಗಿಂತ ಮೊದಲು ಎಲ್ಲ ರೋಗಿಗಳನ್ನು ಮತ್ತೊಮ್ಮೆ ನೋಡುವ ಪರಿಪಾಠವಿಟ್ಟುಕೊಂಡಿದ್ದೇನೆ. ಇಲ್ಲವೇ ಅನಾಹುತಗಳಾಗುವ ಸಂಭವವಿರುತ್ತದೆ. ಎಷ್ಟೋ ಸಲ ಐದಾರು ತಿಂಗಳ ಹಿಂದೆ ಪರೀಕ್ಷೆಗೊಳಗಾದವರು ಬಂದು ಅಡ್ಮಿಟ್ ಆಗಿಬಿಟ್ಟಿರುತ್ತಾರೆ. ಆಗ ಮಾಡಿದ ಪರೀಕ್ಷೆಗಳು ಈಗ ಅಪ್ರಸ್ತುತವಾಗುತ್ತವೆ. ಅಥವಾ ಆಗ ಇಲ್ಲದ ಅನೇಕ ರೋಗಗಳು ಈಗ ಬಂದು ಸಣ್ಣಗೆ ಮನೆ ಮಾಡಿರುತ್ತವೆ, ಯಾವುದೂ ಸಂಜ್ಞೆ ನೀಡದೆ.
ಮೊದಲು ಇಬ್ಬರು ಮಹಿಳೆಯರು ಬಂದರು, ಎಂದಿನಂತೆ ವಿಧೇಯರಾಗಿ,ಕೈ ಮುಗಿದುಕೊಂಡು. ಮಹಿಳಾ ರೋಗಿಗಳು ಯಾವಾಗಲೂ “ಒಳ್ಳೆಯ” ರೋಗಿಗಳು. ಯಾವುದೇ ಚಟ ಮಾಡುವುದಿಲ್ಲ, ನೈಸರ್ಗಿಕವಾಗಿ ಹೃದಯದ ಕಾಯಿಲೆಗಳು ಕಡಿಮೆ. ಮತ್ತೆ ಅವರ ‘ನೋವು ಸಹಿಸುವ ಶಕ್ತಿ’ ಅಪರಿಮಿತ. ಅವರು ಗೊಣಗುವುದು, ಸುಮ್ಮನೆ ಕಿರಿ ಕಿರಿ ಮಾಡುವುದು ಕೂಡ ಕಡಿಮೆಯೇ.

ಆಮೇಲೆ ಬಂದದ್ದು ನಮ್ಮ “ಹೀರೋ”, ಜೊತೆಗೆ ಅವನ ಓರಗೆಯ ಒಬ್ಬ ಗೆಳೆಯ. ಬಾಯಿ ತುಂಬ ತಂಬಾಕು ತುಂಬಿಕೊಂಡು, ಮಾತಾಡಲು ಸಾಧ್ಯವಾಗದ ಹಾಗೆ ತುಟಿ ಬಿಗಿದುಕೊಂಡು ಒಳಗೆ ಪ್ರವೇಶಿಸಿದ. ನಾಳೆ ಆಪರೇಷನ್ ಗೆ ಒಳಗಾಗುವ ವ್ಯಕ್ತಿ ಇಷ್ಟೊಂದು ನಿರ್ಭಿಡೆಯಿಂದ, ಯಾವುದೇ ಭಯವಿಲ್ಲದೆ,ತನ್ನ ವೈದ್ಯನೆದುರಿಗೆ ಹೀಗೆ ಬಂದು ಠಳಾಯಿಸುವುದು, ನನಗೆ ಸಿಟ್ಟು ತರಿಸಿತು. ಆದರೂ ಬಯ್ಯುವ ಹಾಗಿಲ್ಲ. ರೋಗಿಗಳನ್ನು ಆದರದಿಂದ ಕಾಣಬೇಕೆಂಬ ಪಾಠವಾಗಿರುತ್ತದಲ್ಲ, ನಾವು ವೈದ್ಯಕೀಯ ಕಲಿಯುವಾಗ! ಆದರೆ ರೋಗಿಗಳಿಗೆ ಯಾತರ ಪಾಠ? ತಂದೆ, ತಾಯಿ,ಸಮಾಜ ಅವರಿಗೆ ಕಲಿಸುವುದನ್ನು ಮರೆತು ದಶಕಗಳಾಗಿರಬೇಕು. ನನಗೆ ಬಂದ ಸಿಟ್ಟನ್ನು ಅದುಮಿಟ್ಟು, ಶಾಂತವಾಗಿ, ಬಾಯಲ್ಲಿಯದನ್ನು ಉಗುಳಿ ಬರಲು ತಿಳಿಸಿದೆ. ಆತ ಉಗುಳಿ ಬೇಗನೆ ತಿರುಗಿ ಬಂದದ್ದನ್ನು ಗಮನಿಸಿದರೆ, ನನಗೆ ಗ್ಯಾರಂಟಿ ಯಾಯಿತು, ಬಾಯಲ್ಲಿಯ “ಕೆಂಪು ಬಣ್ಣ”ವನ್ನು ನಮ್ಮ ಆಸ್ಪತ್ರೆಯ ಮೂಲೆಗೆ ಪೇಂಟ್ ಮಾಡಲು ಬಳಸಿದನೆಂದು. ದೂಸರಾ ಮಾತಾಡದೇ ಅವನನ್ನು ಪರೀಕ್ಷಿಸಿದೆ. ನಾಲಿಗೆ ತೋರಿಸಲು, “ಆ” ಎನ್ನಲು ಹೇಳಿದರೆ, ಅರ್ಧ ಇಂಚಿಗಿಂತ ಸ್ವಲ್ಪ ಮಾತ್ರ ಹೆಚ್ಚಿಗೆ ತೆಗೆಯುವ ಬಾಯಿ. ಗಬ್ಬೆದ್ದ ನಾಲಿಗೆ, ಕಂದು ಬಣ್ಣದ ಹಲ್ಲುಗಳು. ಎಷ್ಟೋ ತಿಂಗಳುಗಳಿಂದ ತೊಳೆಯದ ‘ಪಾಯಖಾನೆ’ಯಲ್ಲಿ ಇಣುಕಿದಂತಾಯಿತು. ನಾಳೆ ಆತನಿಗೆ ಅರಿವಿಳಿಕೆ ಕೊಡುವುದು ಹೇಗೆ ಎಂದು ಚಿಂತೆಯಾಯಿತು, ನನಗೆ…. ಅವನು ಮಾತ್ರ ನಿರಾಳವಾಗಿದ್ದ.
ಅವನ ಜೊತೆ ಬಂದ ಗೆಳೆಯನಿಗೆ ಇದರ ಬಗ್ಗೆ ತಿಳಿಹೇಳಬೇಕೆಂದು ಅವನೆಡೆಗೆ ತಿರುಗಿದೆ. ಇದ್ದ ಪರಿಸ್ಥಿತಿಯನ್ನೆಲ್ಲ ಅವನಿಗೆ ವಿವರಿಸಿ, ಅವನಿಗೆ ಅರಿವಳಿಕೆ ಕೊಡುವುದು ಕಷ್ಟವಾಗಬಹುದು. ಈಗಲೇ ಬಾಯಿ ತೆಗೆಯಲು ಬರದಂತಿರುವ ಅವನಿಗೆ ಬಾಯಿಯ ಅರ್ಬುದ ಕಾಡಬಹುದು,ಇತ್ಯಾದಿ ನಾನು ಹೇಳುತ್ತಲೇ ಹೋದೆ. ಅವನಿಂದ ಯಾವ ಉತ್ತರವೂ ಇಲ್ಲ. ಕೊನೆಗೆ ನಾನು
“ಯಾಕ ಸುಮ್ಮ ಕುಂತೀಯಪಾ, ಏನಾದರೂ ಮಾತಾಡಲಾ..”
ಅಂದಾಗ ಸ್ವಲ್ಪ ಇರಿ ಎನ್ನುವಂತೆ ನನ್ನೆಡೆಗೆ ಕೈ ಮಾಡಿ ಹೊರಗೆ ಹೋದ…..
ಹೌದು,.. ಅವನ ಬಾಯಲ್ಲೂ ಗುಟಖಾ…!!
ಗಾಬರಿಯಾಯಿತು ನನಗೆ.
ನಮ್ಮ ಯುವಕರಿಗೆ ಏನಾಗಿದೆ? ಅವರಿಗೆ ಅಂಟಿದ “ಗುಟಖಾ” ಎಂಬ ಈ ಚಟವನ್ನು ಬಿಡಿಸಲು ಸಾಧ್ಯವೇ ಇಲ್ಲವೇ..? ಗುಟಖಾದಿಂದಾಗುವ ಅನಾಹುತಗಳ ಅರಿವಿದ್ದೂ ಸರಕಾರ, ಸಮಾಜ. ವೈದ್ಯರು ಏನೂ ಮಾಡದ ಸ್ಥಿತಿ ತಲುಪಿದ್ದೇವೆಯೇ?
“ಊಂಚೆ ಲೋಗ್.. ಊಂಚಿ ಪಸಂದ್…”
“ಇದರಲ್ಲಿ ಪುರುಷತ್ವ ಹೆಚ್ಚು ಮಾಡುವ ಕೇಸರ್ ಇದೆ…”
ಎನ್ನುವ ಜಾಹಿರಾತುಗಳಿಂದಲೋ, ಗೆಳೆಯರ ಒತ್ತಾಯದಿಂದಲೋ, ಗುಟಖಾದ ಘಮ್ಮನೆಯ ವಾಸನೆಯಿಂದಲೋ, ಡ್ರೈವ್ ಮಾಡುವಾಗ ನಿದ್ದೆ ಬರದಂತೆ “ಕಾಪಾಡುವ” ಅದ್ಭುತ ಸಾಧನ ಎಂದೋ ಶುರುವಾಗುವ ‘ಗುಟಖಾ ಮೆಲ್ಲುವ ಚಟ’ ಒಂದು ಪಿಡುಗಾಗುತ್ತದೆ. ಅದು ಮುಂದೆ ತಲುಪುವ ಮಟ್ಟ ನೋಡಿದರೆ ಗಾಬರಿಯಾಗುತ್ತದೆ. ಬಾಯಿಯೊಳಗಿನ ಲೋಳ್ಪೊರೆ ಮೆತ್ತಗಿದ್ದದ್ದು ಬಿರುಸಾಗಿ, ಕೆಂಪಗಿದ್ದದ್ದು ಬಿಳಿಯಾಗಿ ಬಾಯಿ ತೆರೆಯಲು ಸಾಧ್ಯವಾಗದಷ್ಟು ಗಡುಸಾಗಿ ಬಾಯಲ್ಲಿ ಅನ್ನದ ತುತ್ತನ್ನಂತು ಬಿಡಿ ತನ್ನದೇ ಒಂದು ಬೆರಳನ್ನು ಕೂಡ ಹಾಕಿಕೊಳ್ಳುವುದು ಅಸಾಧ್ಯವಾಗುತ್ತದೆ. ತೆರೆಯಲು ಸಾಧ್ಯವಾಗದ ಈ ಬಾಯಿಯೊಳಗೆ ಪ್ರಯಾಸಪಟ್ಟು ಒತ್ತೊತ್ತಿ ತುಂಬುತ್ತಾರೆ. ತುತ್ತನ್ನಲ್ಲ….ಗುಟಖಾವನ್ನು..!!
ಹೀಗಾಗಿ ನಮ್ಮ ಸರಕಾರ ಮೊನ್ನೆ ಮಾಡಿದ ಘನಂದಾರಿ ಕೆಲಸ ಎಂದರೆ ಒಂದೆರಡು ದಿನ ದಿನಪತ್ರಿಕೆಗಳ “ಹೆಡ ಲೈನ್”ನಲ್ಲಿ ಸುದ್ದಿ ಮಾಡಿದ್ದು ಹಾಗೂ ಟ.ವಿ.ಗಳ ಕೆಳಗೆ ಕೆಂಪಕ್ಷರಗಳ ಲೈನ್ ನಲ್ಲಿ “ಬ್ರೆಕಿಂಗ್ ನ್ಯೂಸ್” ಆದದ್ದು ಅಷ್ಟೇ….!! ಈಗಲೂ ಗುಟಖಾ ಸುಲಭವಾಗಿ ದೊರಕುತ್ತದೆ, ‘ಸುಧಾರಿತ್’ ಆವೃತ್ತಿಯಲ್ಲಿ. ಆದರೆ ಇನ್ನಷ್ಟು ಹೆಚ್ಚಿನ ದರದಲ್ಲಿ. ಕೊನೆಗೆ ಲಾಭವಾದದ್ದು ಅದನ್ನು ತಯಾರಿಸುವ ಕೆಟ್ಟ ಫ್ಯಾಕ್ಟರಿಗಳಿಗೆ. ಯಾಕೆಂದರೆ ಈಗ ಇನ್ನಷ್ಟು ಹೆಚ್ಚಿನ ಧಾರಣಿಗೆ ಅದನ್ನು ಮಾರಬಹುದು.
ಅನೇಕ ವರ್ಷಗಳ ಹಿಂದೊಮ್ಮೆ ಬೀಗರೆದುರಿಗೆ, ತನ್ನ ಶಾಲ್ ನೊಳಗಿಂದ ಅಭಿಮಾನದಿಂದ, ಹೆಮ್ಮೆಯಿಂದ, ಆದರದಿಂದ, ಹಿಂದಿಯ ಹಿರಿಯ ನಟ “ಅಶೋಕ ಕುಮಾರ್”, ಅದ್ಭುತವಾದದ್ದೆನನ್ನೋ ತೆಗೆಯುವಂತೆ ಸಾವಕಾಶವಾಗಿ ಹೊರತೆಗೆದು “ಶಮ್ಮಿ ಕಪೂರ್”ನ ಎದುರಿಗೆ ಚಾಚಿದ ನೀಲಿ ಬಣ್ಣದ ಡಬ್ಬಿಯಲ್ಲಿ ತುಂಬಿದ “ಪಾನ್ ಮಸಾಲಾ” ಎಂಬ ಬೀಗರ ಉಪಚಾರ, ಇಂದು ಭೂತವಾಗಿ ಬೆಳೆದು ಬಾಯಿಯ ಕ್ಯಾನ್ಸರ್ ಗಳ ಮೂಲ ಕಾರಣವಾಗುತ್ತದೆ, ಎಂದು ಯಾರೂ ಭಾವಿಸಿರಲಿಲ್ಲ. ಅದನ್ನು ನಿರ್ಮೂಲನೆ ಮಾಡಲು ಇಡೀ ಸಮಾಜ ಮತ್ತು ಪಾಲಕರು ಮನಸ್ಸು ಮಾಡದಿದ್ದರೆ, ತೆರೆಯಲು ಸಾಧ್ಯವಾಗದ ಬಾಯಿಗಳು, ಕ್ಯಾನ್ಸರ್ ನಿಂದಾಗಿ ಕಿರಿಯ ವಯಸ್ಸಿನಲ್ಲಿ ಸಾಯುವ ಯುವಕರು, ನಿತ್ಯದ ಸುದ್ದಿಯಾಗುತ್ತವೆ. ಅವರ ಮರಣದಿಂದ ದುಡಿಯುವ ಹರೆಯದ ಕೈಗಳು ಇಲ್ಲದಂತಾಗಿ ವಿತ್ತ ವಿಪತ್ತು ಸಾಮಾನ್ಯವಾಗುತ್ತದೆ…
ಎಚ್ಚೆತ್ತುಕೊಳ್ಳೋಣವೇ……??

‍ಲೇಖಕರು G

October 30, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

11 ಪ್ರತಿಕ್ರಿಯೆಗಳು

  1. Shantayya

    It is true
    Kubsad. Your observations are apt
    It starts as a giving company to friends
    Later no one gives company when
    Precancerous n cancer oro pharynx starts
    But slowly
    It is regressing
    Lack of education job opportunity
    Careless attitude ignorance all add to the problem
    V gud article

    ಪ್ರತಿಕ್ರಿಯೆ
  2. ಅಕ್ಕಿಮಂಗಲ ಮಂಜುನಾಥ

    ತಟಕ ಪಟಕ-ತಟಕ ಪಟಕ
    ಬಂದಿತಣ್ಣ ಜಟಕ
    ಬಂಡಿ ತುಂಬ ತುಂಬಿಕೊಂಡು
    ಮೂಟೆ ಮೂಟೆ ಗುಟಕ
    ಲಟಕ ಪಟಕ-ಲಟಕ ಪಟಕ
    ಹೋಯಿತಣ್ಣ ಜಟಕ
    ಬಂಡಿ ತುಂಬ ತುಂಬಿಕೊಂಡು
    ರಾಶಿ ರಾಶಿ ಬದುಕ.

    ಪ್ರತಿಕ್ರಿಯೆ
  3. Dr.Ratna Kulkarni

    ಬಹಳ ಉತ್ತಮ ಲೇಖನ.ಇದು ಇಂದಿನ ಅತಿ ದೊಡ್ಡ ಸಮಸ್ಯೆ.ಆದರೆ ನಿರ್ಮೂಲನೆ ಹೇಗೆ?
    ನಾನಂತೂ ನನ್ನಲ್ಲಿ ಬರುವ ಎಲ್ಲ ಹೆಂಗಸರಿಗೂ ಎಲಡಿಕೆ ಚಟವನ್ನು ಬಿಡಲು ಒತ್ತಿ ಹೇಳುತ್ತೇನೆ.ಅನೇಕರು ಬಿಟ್ಟಿದ್ದಾರೆ.
    ಗುಟಕಾ ಬೀಡಿ ಸರಾಯಿ ಚಟಗಳು ಹೆಂಗಸರಲ್ಲಿ ಅಷ್ಟಾಗಿ ಇಲ್ಲದೇ ಇರುವದು ನಮ್ಮ ದೇಶದ ಪುಣ್ಯ.

    ಪ್ರತಿಕ್ರಿಯೆ
  4. DRGCRAVI

    Hats off kubsad, you are one of the breed who are passionate about their patients
    problems. Your total involvement with regards to their health and wellness is appreciable.
    May your tribe increase

    ಪ್ರತಿಕ್ರಿಯೆ
  5. Upendra

    ಉತ್ತಮ ಲೇಖನ. ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಅದಕ್ಕಿಂತಲೂ ಮಖ್ಯವಾಗಿ ‘ನಾವು’, ಗೊತ್ತಿದ್ದೂ ಗೊತ್ತಿದ್ದೂ ಅದರ ಚಟಕ್ಕೆ ಬೀಳುವವರು, ಎಚ್ಚೆತ್ತುಕೊಳ್ಳಬೇಕು…

    ಪ್ರತಿಕ್ರಿಯೆ
  6. Ravi Jammihal

    Nicely depicted one of the most ‘difficult to eradicate’ addiction. A stage has come where the society has almost accepted Gutka chewing as normal behavior. We as medical professionals know the stark reality and it is our duty to establish and run a social awareness/education movement basically targeting children in school going age group.

    ಪ್ರತಿಕ್ರಿಯೆ
  7. kvtirumalesh

    ಪ್ರಿಯ ಡಾಕ್ಟರ್
    ಅಡಿಕೆ ಮತ್ತು ತಂಬಾಕುಗಳ ಹಿಂದೆ ದೊಡ್ಡ ಲಾಬಿಗಳಿವೆ. ಈಚೆಗೆ ಅಡಿಕೆಯನ್ನು ನಿ‍ಷೇಧಿಸಬೇಕೆಂಬ ತಥಾಕಥಿತ ವದಂತಿಯೊಂದು
    ಬಂದಾಗ ಅಡಿಕೆ ಲಾಬಿಯವರು ಎಬ್ಬಿಸಿದ ಗಲಾಟೆ ನಿಮಗೆ ನೆನಪಿರಬಹುದು. ಆಶ್ಚರ್ಯವೆಂದರೆ ಕೆಲವು ಪತ್ರಿಕಗಳೂ ಟೀವಿ ವಾಹಿನಿಗಳೂ ಆಡಿಕೆ ಬೆಳೆಗಾರರ `ಸಂಕಷ್ಟ’ಗಳನ್ನು ಬಣ್ಣಿಸಿ, ಒಂದು ಯುದ್ಧವನ್ನೇ ಸಾರಿದುವು. ಸಂಪಾದಕೀಯಗಳನ್ನು ಬರೆದುವು. ಕೆಲ ಚುನಾಯಿತ ಸಂಸದರೇ ಅಡಿಕೆ ಪರವಾಗಿ ನಿಂತವು–ಕೆಲವರು ಬಹುಶಾ ಪಾರ್ಲಿಮೆಂಟಿನಲ್ಲೂ ಈ ಪ್ರಶ್ನೆ ಎಬ್ಬಿಸಿದರು; ಗುಜರಾತಿಗೆ ಹೋಗಿಬಂದರು. (ಬೆಳೆ ನಷ್ಟವೆಂದು ಸರಕಾರದಿಂದ ಪರಿಹಾರವನ್ನೂ ಗಿಟ್ಟಿಸಿಕೊಂಡರು!) ಅಡಿಕೆಯನ್ನೊಂದು ಆಹಾರ ಪದಾರ್ಥವಾಗಿ, ಔಷಧೀಯ ಗುಣವುಳ್ಳದ್ದಾಗಿ ಬಿಂಬಿಸುವ ಪ್ರಯತ್ನ ನಡೆಸಲಾಯಿತು. ಯಾವುದೋ ಪ್ರಯೋಗಾಲಯದಲ್ಲಿ ನಡೆಸಿ ಕಂಡುಬಂದಿದೆ ಎನ್ನಲಾದ ಸದ್ಗುಣಗಳನ್ನು ಉದ್ಡರಿಸಲಾಯಿತು. ಅಡಿಕೆ ಕ್ಯಾನ್ಸರಿಗೆ ಕಾರಣವಾಗುತ್ತದೆ ಎಂದವರಿಗೆ ಛೀಮಾರಿ ಹಾಕಲಾಯಿತು. ಅದೊಂದು ವ್ಯಸನವಾಗುತ್ತದೆ ಎಂದವರನ್ನು `ಅಡಿಕೆ ವಿರೋಧ ವ್ಯಸನಿಗಳು’ಎಂದು ಲೇವಡಿ ಮಾಡಲಾಯಿತು. ಆದರೆ ಅಡಿಕೆ ಬೆಳೆಗಾರರ ಪರವಾಗಿರುವ ಇವರು ಯಾರೂ ನೀವು ಹೇಳುವ ರೋಗಿಗಳ ಕುರಿತು ಕಿಂಚಿತ್ತೂ ಯೋಚಿಸುವುದಿಲ್ಲ. ಜನಾರೋಗ್ಯದ ಬಗ್ಗೆ ಯೋಚಿಸಬೇಕಾದ ವಿದ್ಯಾವಂತರೇ ಈ ರೀತಿ ಆದರೆ ಈ ದೇಶದ ಗತಿಯೇನು? ಕುತರ್ಕದಿಂದ, ಕುತಂತ್ರದಿಂದ, ರಾಜಕೀಯ ಶಕ್ತಿಯಿಂದ ಸುಳ್ಳನ್ನು ಸತ್ಯವೆಂದು ಸಾಧಿಸುವ ಬದಲು ಈ ಬೆಳೆಗಾರರಿಗೆ ಪರ್ಯಾಯ ಯಾವುದು ಎಂಬ ಬಗ್ಗೆ ಯೋಚನೆ ನಡೆಸುವುದು ಒಳಿತಲ್ಲವೇ? ಸದ್ಯದ ಸ್ಥಿತಿಯಲ್ಲಿ ಯಾವ ರಾಜಕೀಯ ಪಕ್ಷವೂ ಇವರ ತಂಟೆಗೆ ಹೋಗುವುದಿಲ್ಲ, ಯಾಕೆಂದರೆ ಅಡಿಕೆ ಮತ್ತು ತಂಬಾಕು ಬೆಳೆಗಾರರು ವೋಟ್ ಬ್ಯಾಂಕ್ ಇದ್ದ ಹಾಗೆ! ಅಫ್ಘಾನದಲ್ಲಿ ಪಾಪ್ಪಿ, ಯೆಮೆನ್ ನಲ್ಲಿ ಖಾತ್ ಇರುವಂತೆ ಭಾರತದಲ್ಲಿ ಅಡಿಕೆ, ಹೊಗೆಸೊಪ್ಪು, ತಂಬಾಕು ಇತ್ಯಾದಿ. ದೇಶವೇ ಹೀಗಾದರೆ ಯಾರಿಗೆ ಬೇಕು ಜನಕ್ಷೇಮದ ಪ್ರಶ್ನೆ. ದೇಶದ ಉದ್ದಗಲ ತಿರುಗಾಡಿ ಬನ್ನಿ–ತಂಬಾಕಿನ ಕೆಂಪು ಬಣ್ಣ ಎಲ್ಲೆಡೆ ರಾರಾಜಿಸುತ್ತದೆ; ಈಗ ಗುಟ್ಕಾದ ರಸ!
    `ಸ್ವಚ್ಛ್ಛ ಭಾರತ’ದಲ್ಲಿ ಇವಕ್ಕೆ ಸ್ಥಾನವಿದೆಯೇ? ಇರಬೇಕೇ?
    ಕೆ.ವಿ. ತಿರುಮಲೇಶ್

    ಪ್ರತಿಕ್ರಿಯೆ
  8. Shashishekhar N

    ಖಂಡಿತವಾಗಿಯೂ ಇದೊಂದು ಉತ್ತಮ ಲೇಖನ, ಒಂದು ಬಾಗದ ಲಾಭಕ್ಕೆ ಆಸೆಪಟ್ಟು ಅದರಿಂದ ಬರುವ ಖಾಯಿಲೆಗೆ ಸರಕಾರ ಎರಡು ಪಟ್ಟು ಖರ್ಚು ಮಾಡುತ್ತಿದ್ದರೂ ಜನರಿಗೆ ಇದರ ಅರಿವೇ ಇಲ್ಲ ಸರ್ಕಾರ ಇದರ ಬಗ್ಗೆ ಚಿಂತಿಸದಿರುವುದು ವಿಪರ್ಯಾಸವೇ ಸರಿ…

    ಪ್ರತಿಕ್ರಿಯೆ
  9. Arunkumar Habbu

    Dear Editor, I really feel proud of Avadhi for trying to create awareness about Gutka effect. The younger generation in most parts of the nation have become prey for this evil and they are losing their valuable life just for momentary pleasure. It is known fact that the legislation can never eradicate such an evil. the lobbying of Gutka companies and lack of real effect of Gutka among those who write in the media had led to persist this kind of evil. Several statutory warnings also have also failed to contain this kind of habits among not only the youths but people of all ages. I express my cudos to Dr. Shivanand Kubasad who has depicted the real side of Gutka effect. Let us make it a movement. thanks Arunkumar Habbu

    ಪ್ರತಿಕ್ರಿಯೆ
  10. Gopaala Wajapeyi

    ನಾನು ಮತ್ತು ಹುಬ್ಬಳ್ಳಿಯ ಮಿತ್ರ ಮಧುಸೂದನ ಪಂಚಮುಖಿ ಸೇರಿಕೊಂಡು, ೧೯೯೬ರಲ್ಲಿ ‘ಗುಟುಕು’ ಎಂಬ ಒಂದು ಗಂಟೆಯ ಕಿರುಚಿತ್ರವನ್ನು ನಿರ್ಮಿಸಿದ್ದೆವು. ಅದು ವಿಎಚ್ಎಸ್ ಟೇಪಿನಲ್ಲಿ ಮಾಡಿದ್ದು. ಶಾಲಾ ವಿದ್ಯಾರ್ಥಿಗಳನ್ನು ಆವರಿಸುವ ‘ಗುಟಖಾ’ದ ಚಟದ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶ ನಮ್ಮದಾಗಿತ್ತು. ಕಥೆ-ಸಂಭಾಷಣೆ-ನಿರ್ದೇಶನ ನನ್ನದೇ. ತಾಂತ್ರಿಕ ಪರಿಕರಗಳು ಮತ್ತು ಇನ್ನಿತರ ನಿರ್ಮಾಣದ ಹೊಣೆ ಮಿತ್ರ ಪಂಚಮುಖಿಯದು. ಡಾಕ್ಟರುಗಳನ್ನು, ತಂದೆ-ತಾಯಂದಿರನ್ನು ಮತ್ತು ಗುಟಖಾ ಚಟಾಧೀನರಾದ ಹುಡುಗರನ್ನು ಸಂದರ್ಶಿಸಿದ್ದೆವು ಡಾಕ್ಟರುಗಳು ಅದರಲ್ಲಿ ಚಟದ ದುಷ್ಪರಿಣಾಮಗಳು ಮತ್ತು ಪೀಡೆಯ ವಿವಿಧ ಹಂತಗಳ ಕುರಿತು ಹೆಚ್ಚು ಒಟ್ಟು ನೀಡಲು ಸಲಹೆ ನೀಡಿದ್ದರು.
    ಆ ಒಂದು ಗಂಟೆಯ ಕಿರುಚಿತ್ರವನ್ನು ಹುಬ್ಬಳ್ಳಿಯಲ್ಲಿಯೇ ಸಂಕಲಿಸಿ, ಅದಕ್ಕೊಂದು ರೂಪ ಕೊಟ್ಟು ಮೊದಲು ಡಾಕ್ಟರುಗಳಿಗೆ ತೋರಿಸಿದೆವು. ಅವರ ಮೆಚ್ಚುಗೆ ಸಿಕ್ಕಿತು. ಆ ನಂತರ ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ಕಂಡು, ಅವರಿಗೆ ಈ ಕಿರುಚಿತ್ರವನ್ನು ತೋರಿಸಿದೆವು. ಅದು ”ಎಲ್ಲ ವಿದ್ಯಾರ್ಥಿಗಳೂ ನೋಡಲೇಬೇಕಾದ ಚಿತ್ರ” ಎಂದು ಎಲ್ಲೆಡೆಗೂ ಪ್ರದರ್ಶಿಸಲು ಅವರು ಶಿಫಾರಸು ಮಾಡಿದರು.
    ಮುಂದೆ ಒಂದು ವರ್ಷದ ತನಕ ಜಿಲ್ಲೆಯಾದ್ಯಂತದ ಶಾಲೆಗಳಲ್ಲಿ ‘ಗುಟುಕು’ ಪ್ರದರ್ಶಿಸಲ್ಪಟ್ಟಿತು.

    ಪ್ರತಿಕ್ರಿಯೆ
    • Kiran

      Then it should be digitized, re-edited if needed and made available on all possible digital media like Youtube wherever people have a chance of catching it.
      Just making is not enough if it doesn’t reach wider and target audience.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: