ಡಾ ಶಿವಾನಂದ ಕುಬಸದ ’ನೆನಪುಗಳ ಪೆಟ್ಟಿಗೆಯಿಂದ’ : ರೋಗಿಯೊಳಗೊಬ್ಬ ಯೋಗಿ…


“ನನ್ನ ಹೆಂಡ್ತಿ ಮಕ್ಕಳಿಗಿ ನಾ ಇದನ್ನ ಹೇಳಿಲ್ರಿ….ಸುಮ್ಮನೆ ಅವರಿಗಿ ಯಾಕ ತ್ರಾಸ ಕೊಡೂದು..”
ಒಬ್ಬ ರೋಗಿಯ ಬಾಯಿಂದ ಈ ಮಾತು ಕೇಳಿ ನಾನು ದಂಗಾಗಿ ಹೋದೆ. ಮಾತುಗಳೇ ಹೊರಡದ ಸ್ಥಿತಿ ನನ್ನದಾಯಿತು. ನನ್ನೆದುರಿಗೆ ಕುಳಿತವ ರೋಗಿಯೋ ಅಥವಾ ಯೋಗಿಯೋ ಅನಿಸತೊಡಗಿತು. ಮೌನ ಅಲ್ಲಿ ಮನೆ ಮಾಡಿತ್ತು. ಹೊರಗೆ ಸುಡುಬಿಸಿಲು ಕಾಯುತ್ತಿತ್ತು. ನನ್ನ ಚೇಂಬರ್ ವಾತಾನುಕೂಲಿತವಿದ್ದರೂ ನನಗೆ ಕಸಿವಿಸಿ. ಏರ್ ಕಂಡೀಶನರ್ ಸಪ್ಪಳ ಬಿಟ್ಟರೆ ಅಲ್ಲೇನು ಸಪ್ಪಳ ಇರದಂತಹ ರುದ್ರಮೌನ.. ಹೊರಗೆ ರೋಗಿಗಳ ಗದ್ದಲ ..ಒಳಗೆ ಸಮುದ್ರದಡಿಯಲ್ಲಿ ಇರುವಂಥ ಗಂಭೀರ ಶಾಂತತೆ.
೧೫ ವರ್ಷಗಳ ಹಿಂದೆ ನಾನು ಮುಧೋಳದಲ್ಲಿ ಪ್ರಾಕ್ಟೀಸ್ ಪ್ರಾರಂಭ ಮಾಡಿದಾಗಿನಿಂದ ತನಗೆ ಏನೇ ರೋಗ ಬಂದರೂ ಆತ ನನ್ನೆಡೆಗೆ ಬರುತ್ತಿದ್ದ. ಈಗ ಸುಮಾರು ೫೦ ವಯಸ್ಸಿನವನಾದ ಅವನು ಈ ಅವಧಿಯಲ್ಲಿ ಒಂದು ದಿನವೂ ಬೇರೆ ರೋಗಿಗಳ ಹಾಗೆ ಅವಸರ ಮಾಡುವುದಾಗಲೀ, ಗಾಬರಿಗೊಳ್ಳುವುದಾಗಲೀ ಮಾಡಿದವನಲ್ಲ. ಶಾಂತತೆ ಆತನ ಮುಖದಲ್ಲಿ ಎದ್ದು ಕಾಣುತ್ತಿತ್ತು. ಹಾಗೆ ನೋಡಿದರೆ ನನ್ನ ‘ಮೆಚ್ಚಿನ ರೋಗಿ’ ಅಂತಲೇ ಅನ್ನಬಹುದೇನೋ..! ಹೌದು,ರೋಗಿಗಳಲ್ಲೂ ಕೆಲವರು ಬಹು ಮೆಚ್ಚುಗೆಯಾಗುತ್ತಾರೆ. ನಾವು ಹೇಳಿದುದನ್ನೂ ಒಂದಿಷ್ಟೂ ತಪ್ಪದೇ ಪಾಲಿಸುತ್ತ, ಎಂಥ ಕಷ್ಟವಿದ್ದರೂ ಔಷಧಿಗಳನ್ನು ಸೇವಿಸುತ್ತ, ಆಸ್ಪತ್ರೆಗೆ ಬಂದಾಗ ಅವಸರ ಮಾಡದೆ ತಮ್ಮ ಸರತಿ ಬಂದಾಗಲೇ ತೋರಿಸಿ, ಯಾವ ವಶೀಲಿಬಾಜಿ ಮಾಡದೆ, ವಿಧೇಯರಾಗಿ ಇದ್ದುಬಿಡುತ್ತಾರೆ. ಇಂಥ ರೋಗಿಗಳೆಂದರೆ ವೈದ್ಯರಿಗೆ ಪ್ರೀತಿ. ವಿಪರ್ಯಾಸವೆಂದರೆ ಅಂತಹ “ಒಳ್ಳೆಯ” ರೋಗಿಗಳ ಸಂಖ್ಯೆ ಈಗ ಕಡಿಮೆ. ಇವನು ಅಂಥ ಒಳ್ಳೆಯವರಲ್ಲಿ ಒಬ್ಬ. ಆತನಿಗೆ ಚಿಕ್ಕ ಪುಟ್ಟ ಕಾಯಿಲೆಗಳನ್ನು ಬಿಟ್ಟರೆ ಒಳರೋಗಿಯಾಗುವಂಥ ಕಾಯಿಲೆ ಎಂದೂ ಕಾಡಿದ್ದಿಲ್ಲ. ವರ್ಷಕ್ಕೆ ಒಂದೆರಡು ಬಾರಿ ನನಗೆ ಕಾಣಿಸಿಕೊಳ್ಳುತ್ತಿದ್ದ ಅಷ್ಟೇ. ಅದೂ ನೆಗಡಿಯೋ, ಮೈ ಕೈ ನೋವೋ ಎನ್ನುವ ಸಣ್ಣ ಪುಟ್ಟ ಕಾಯಿಲೆಗಳಿಗೆ ಮಾತ್ರ. ಆಸ್ಪತ್ರೆಗೆ ಬರುವುದೆಂದರೆ ಬಂಧು ಬಾಂಧವರನ್ನು ಜೊತೆಯಾಗಿಸಿಕೊಂಡು,ಒಬ್ಬರ ರೋಗವನ್ನು ಇನ್ನೊಬ್ಬರೇ ಹೇಳುವ ‘ವಕೀಲಿ’ ಪರಿಪಾಠ ಇರುವ ನಮ್ಮ ಭಾಗದಲ್ಲಿ ಇವನು ಮಾತ್ರ ಯಾವಾಗಲೂ ಒಂಟಿಯಾಗಿಯೇ ಬರುತ್ತಿದ್ದ. ಹಾಗೆ ನೋಡಿದರೆ ಅವನು ನಿರೋಗಿಯೇ. ರಕ್ತದೊತ್ತಡವೋ ಮಧುಮೇಹವೋ ಆತನ ಸನಿಹ ಕೂಡ ಸುಳಿದಿರಲಿಲ್ಲ.
ಅಂದು ಅವನ ಮುಖ ಸ್ವಲ್ಪ ಕಳಾಹೀನವಾಗಿದ್ದರೂ ಅದೇ ಶಾಂತಭಾವ ಧರಿಸಿ ನನ್ನೆದುರಿಗೆ ಕುಳಿತ.
“ಏನಾಯ್ತ್ರೀ ಯಾಕೋ ಸಪ್ಪಗ ಅದೀರೆಲಾ…?” ಅಂದೆ.
“ಏನಿಲ್ರೀ ಸರ್ , ಸ್ವಲ್ಪ ಹೊಟ್ಟಿ ನೋಸ್ತೈತ್ರಿ, ಊಟ ಸೇರೋಲ್ದ್ರಿ, ಉಬ್ಬಳಿಕೆ ಬರ್ತಾವ್ರಿ …ಬ್ಯಾರೆ ಏನಿಲ್ರಿ ” ಅಂದ.
“ಯಾಕೋ ನನಗ ಸಂಶಯ. ಸ್ಕ್ಯಾನಿಂಗ್ ಮಾಡಿ ನೋಡ್ತೀನ್ರಿ” ಅಂದೆ ನಾನು
ಅವನು ಎಂದಿನಂತೆ ವಿಧೇಯನಾಗಿ ಹ್ಞೂ ಗುಟ್ಟಿದ.
ಪರೀಕ್ಷೆ ಮಾಡಿ ನೋಡಿದರೆ ಅವನ ಯಕೃತ್ತಿನ ತುಂಬೆಲ್ಲ “ಕ್ಯಾನ್ಸರ್ ಗಡ್ಡೆಗಳು”….!!

ದಿನಾಲೂ ರೋಗಗಳನ್ನೇ ನೋಡಿ ನೋಡಿ ಒಂದಿಷ್ಟು ಕಲ್ಲು ಮನಸ್ಸಿನವನಾಗುತ್ತಿರುವ ನನಗೇ ಸಂಕಟವಾಯಿತು. ಒಳ್ಳೆಯ ವ್ಯಕ್ತಿಗಳಿಗೆ ಹೀಗಾದಾಗೊಮ್ಮೆ ನಾನು ಸಂಕಟಪಟ್ಟಿದ್ದೇನೆ. ಯಾಕಾದರೂ ಇಂಥ ರೋಗಗಳು ಇವರನ್ನು ಕಾಡುತ್ತವೆಯೋ ಎಂದು ಹಲವು ಬಾರಿ ಅನಿಸಿದೆ. “ಸರ್ವ ಗುಣ ಸಂಪನ್ನ”ರಾದ ಹಲವರು ನಮ್ಮೆದುರಿಗೆ ಆರೋಗ್ಯವಂತರಾಗಿ, ‘ತುಂಬು ಜೀವನ’ ಬದುಕಿ, ಸುಖನಿದ್ರೆಯಲ್ಲಿಯೇ ಸಾಗಿ ಹೋದದ್ದನ್ನು ನೋಡಿದ್ದೇವೆ.. ಈಗಲೂ ಹಾಗೆ ಆಯಿತು. ಯಾವ ಚಟಗಳನ್ನೂ ಮಾಡದ, ಯಾವತ್ತೂ ಆರೋಗ್ಯವಂತನಾದ ಸೀದಾ ಸಾದಾ ಮನುಷ್ಯನಿಗೆ ಈ ಮಾರಣಾಂತಕ ರೋಗ. ಆದರೆ ಆತನೆದುರು ಅದನ್ನು ಹೇಳುವ ಮನಸ್ಸಾಗಲಿಲ್ಲ.
ಅದಕ್ಕೆ ಅವನಿಗೆ,“ಈಗ ಒಂದಿಷ್ಟು ಗುಳಿಗಿ ಔಷಧ ಬರದ ಕೊಡ್ತೀನಿ , ಮುಂದಿನ ಸಲ ಬರಾಗ ನಿಮ್ಮ ಪೈಕಿ ಯಾರ್ನರ ಕರಕೊಂಡ ಬರ್ರಿ..” ಅಂದೆ.
“ಹ್ಞೂನ್ರಿ “ ಅಂದು ಹೋಗಿಯೇ ಬಿಟ್ಟ.
ಒಂದು ವಾರ ಬಿಟ್ಟು ಮತ್ತೆ ಬಂದ . ಆದರೆ ಈ ಸಲವೂ ಒಬ್ಬಂಟಿಯಾಗಿಯೇ ಬಂದಿದ್ದ. ನನಗೋ ಧಾವಂತ, ಇವನಿಗೆ ಇನ್ನಷ್ಟು ಪರೀಕ್ಷೆಗಳನ್ನು ಮಾಡಿಸಿ ಸಾಧ್ಯವಿರುವ ಏನಾದರೂ ಆರೈಕೆ ಮಾಡಿಸಬೇಕೆಂದು. ಆದರೆ ಆತ ಶಾಂತಮೂರ್ತಿ. ಈ ಸಲ ತಾಕೀತು ಮಾಡಿದೆ, ಮುಂದಿನ ಬಾರಿ ಬರುವಾಗ ಒಬ್ಬನೇ ಬರಬಾರದೆಂದೂ,ಮುಖ್ಯ ವಿಷಯ ಹೇಳುವುದಿದೆಯೆಂದೂ ಅದಕ್ಕಾಗಿ ಮಗನನ್ನೂ ಹೆಂಡತಿಯನ್ನೂ ಜೊತೆಯಾಗಿಸಿಕೊಂಡು ಬರಲು ತಿಳಿಸಿ ಕಳಿಸಿದೆ. ಆದರೆ ಅವನು ಜಗ್ಗುವ ಆಸಾಮಿಯಲ್ಲ ಎಂದು ನನಗೆ ವಿದಿತವಾಗಿದ್ದು, ಮತ್ತೆ ಅವನೊಬ್ಬನೇ ಬಂದಾಗ. ಈ ಸಾರಿ ಬಯ್ದುಬಿಟ್ಟೆ, ಹೀಗೇಕೆ ಮಾಡುತ್ತೀಯೆಂದು.
“ಅವರನ್ನ ಯಾಕ ಕರಕೊಂಡ ಬರಬೇಕು, ಏನು ಅನ್ನೂದು ನನ್ನ ಮುಂದ ಹೇಳ್ರಿ “ ಅಂದ
“ಇಲ್ಲಪ, ನಿನ್ನ ಮುಂದ ಹೇಳುವಂಥದಲ್ಲ” ಅಂದೆ
“ ನನಗ ಗೊತ್ತೈತ್ರಿ , ನನಗ ಕ್ಯಾನ್ಸರ್ ಐತಿ, ಹೌದಲ್ರಿ” ಅಂದ.
ಈತನಿಗೆ ಹೇಗೆ ಗೊತ್ತಾಯಿತು,ಎಂದು ಆಶ್ಚರ್ಯವಾಯಿತು ನನಗೆ. ನಮ್ಮ ಹುಡುಗರು ಯಾರಾದರೂ ಹೇಳಿರಬಹುದೇ? ಅನೇಕ ಬಾರಿ ಹಾಗಾಗಿದೆ. ಯಾವುದನ್ನು ನಾವು ನಾಜೂಕಾಗಿ ಮುಚ್ಚಿಡಬೇಕೆಂದು ಬಯಸುತ್ತೇವೋ ಅದಕ್ಕೇ ನಮ್ಮವರು ಬಣ್ಣ ಕಟ್ಟಿ ಸುದ್ದಿ ಮಾಡುವುದೂ ಇದೆ. ಯಾಕೆಂದರೆ ಸುದ್ದಿ ಮಾಡುವುದೇ ಒಂದು ಖುಷಿಯ ಕೆಲಸ ಕೆಲವೊಬ್ಬರಿಗೆ. .
“ಹೌದು,ನಿಮಗ ಯಾರ ಹೇಳಿದ್ರು”ಅಂದೆ.
“ನಿಮ್ಮಲ್ಲಿ ಬರೂಕಿಂತ ಮೊದಲ ಮಿರಜ್ ದವಾಖಾನಿಗಿ ಹೋಗಿದ್ದಿನ್ರಿ. ಅಲ್ಲಿ ಆಗಲೇ ಹೇಳಿ ಬಿಟ್ಟಾರ್ರಿ. ಮತ್ತ ನಾ ಇನ್ನ ಭಾಳ ದಿನ ಬದುಕುದಿಲ್ಲಂತನೂ ನನಗ ಗೊತ್ತೈತ್ರಿ ….”
ಅವನ ಮನೋಸ್ಥೈರ್ಯಕ್ಕೆ, ಬಂದ ಕಷ್ಟಗಳನ್ನು ನಿರ್ಲಿಪ್ತನಾಗಿ ಸ್ವೀಕರಿಸಿದ ಅವನ ಮನಸ್ಥಿತಿಗೆ ನಾನು ದಂಗಾಗಿ ಹೋದೆ. ಸಣ್ಣ ಪುಟ್ಟ ರೋಗಗಳಿಗೆ ಬೋರಾಡಿ ಆಳುವವರನ್ನು ಕಂಡ ನನಗೆ ಅವನ ಧೈರ್ಯದ ಬಗ್ಗೆ ಬಗ್ಗೆ ಮೆಚ್ಚುಗೆಯೂ, ಅವನ ಬಗ್ಗೆ ಕರುಣೆಯೂ ಕೂಡಿಯೇ ಉದ್ಭವಿಸಿದವು.
ಒಂದು ಕ್ಷಣ ನನ್ನನ್ನೇ ನಾನು ಸಾವರಿಸಿಕೊಂಡು, ”ಎಲ್ಲಾ ಗೊತ್ತಿದ್ರೂ ನಿಮ್ಮವರನ್ನ ಯಾಕ ಕರಕೊಂಡ ಬರಲಿಲ್ಲ” ಅಂದದ್ದಕ್ಕೆ ಈ ಮೇಲಿನ ಉತ್ತರ ಕೊಟ್ಟ.
“ನನ್ನ ಹೆಂಡ್ತಿ ಮಕ್ಕಳಿಗಿ ನಾ ಇದನ್ನ ಹೇಳಿಲ್ರಿ….ಸುಮ್ಮನೆ ಅವರಿಗಿ ಯಾಕ ತ್ರಾಸ ಕೊಡೂದು..”
“ನಾ ಅಂತೂ ಸಾಯ್ತೀನ್ರಿ, ಎಷ್ಟ ದಿನ ಜಗ್ಗತೈತ್ಯೋ ಜಗ್ಗಲಿ ಈ ಗಾಡಿ. ಮಿಕ್ಕಿದ್ದಕ ಅವರಿಗೆ ಗೊತ್ತಾಗಲಿ. ಅವರ ದುಃಖ ಒಂದಿಷ್ಟು ಕಡಿಮಿ ಇಗಲಿ.ನಾನು ಸೀರಿಯಸ್ ಆಗೂತನಕನಾದ್ರೂ ಅವರು ಸುಖದಿಂದ ಇರ್ಲೆಲ್ರಿ. ಅದರೂ ಸಾಹೇಬ್ರ ನಾನೂ ಒಂದಿಷ್ಟು ಕನಸ ಕಂಡಿದ್ದೆ,ನಂದ ಸ್ವಂತ ಮನಿ ಇರ್ಲಿ ಅಂತ. ಅದಕ್ಕ ಒಂದ ಮನಿ ಕಟ್ಟಾಕ ಸುರು ಮಾಡಿದ್ದೆ, ಅದರ ಮ್ಯಾಲ ಒಂದಿಷ್ಟು ಸಾಲ ಇತ್ರಿ. ಈ ರೋಗ ಯಾವಾಗ ಗೊತ್ತಾಯ್ತೋ ಅವಾಗ ಎರಡ ಎಕರೆ ಹೊಲ ಮಾರಿ ಸಾಲ ಹರದೀನ್ರಿ, ಉಳದ ಆಸ್ತಿಯೆಲ್ಲ ಮಗನ ಹೆಸರಿಗೆ ಮಾಡಿ, ಆರಾಮ ಹೋಗಿ ಬಿಡ್ತೀನ್ರಿ. ಸಾಯೂದಕ ನನಗೇನೂ ಅಂಜಿಕಿ ಇಲ್ರಿ. ಎಲ್ಲಾರೂ ಒಂದ ದಿನ ಸಾಯೋದು ಇದ್ದದ್ದ. ಆದರ ಮನಿ ಓಪನಿಂಗ್ ಕ್ಕ ನಾ ಇರೂದಿಲ್ರಿ, ಸ್ವಲ್ಪ ಲಗೂನ ಹೊಂಟೆ, ಅದೊಂದ ಸಂಕಟ ನನಗ. ಸಾಹೇಬ್ರ. ಮನಿ ಓಪನಿಂಗ್ ಕ್ಕ ನಿಮ್ಮನ್ನ ಕರೀಲಾಕ ನನ್ನ ಮಗನಿಗಿ ಹೇಳ್ತೀನ್ರಿ , ಬಂದ ಹೋಗ್ರಿ ……..”
ಮುಂದಿನದನ್ನು ನಾನು ಕೇಳಿಸಿಕೊಳ್ಳುವುದಕ್ಕೂ ಮೊದಲೇ ನನ್ನ ಕಣ್ಣು ತೇವಗೊಂಡವು. ಶಿರ ಉಬ್ಬಿತು. ಅವನೆದುರು ಕುಳಿತುಕೊಳ್ಳಲಾಗಲಿಲ್ಲ. ರೌಂಡ್ಸ್ ಮಾಡುವ ನೆಪ ಮಾಡಿ ನಾನು ಎದ್ದುಬಿಟ್ಟೆ. ತಿರುಗಿ ಬಂದಾಗ ಆತ ನನ್ನ ಚೇಂಬರ್ ನಲ್ಲಿ ಇರಲಿಲ್ಲ.
ಮುಂದೆ ಅನೇಕ ತಿಂಗಳುಗಳ ನಂತರ ಅವನ ಮಗ ಬಂದು ಮನೆಯ ಓಪನಿಂಗ್ ಗೆ ಕರೆದ…..
 

‍ಲೇಖಕರು G

October 16, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

16 ಪ್ರತಿಕ್ರಿಯೆಗಳು

  1. Prabhakar M. Nimbargi

    A very touchy incidence. No wonder you were, why only you I too am, moved by STHITAPRAJNATE of this patient. You have written it, though the incidence is full of pathos, nicely. I look forward for your other experiences.

    ಪ್ರತಿಕ್ರಿಯೆ
  2. pundalik hugginavar

    ಸರ್ ನಮಸ್ತೆ…ಸಾಮಾಜಿಕ ಕಳಕಳಿ ಹೊಂದಿರುವ ವೈಧ್ಯರಾಗಿ ತಾವು ನೀಡಿದ ಸೇವೆ ಮತ್ತು ಬರಹ ಚೆನ್ನಾಗಿದೆ. ರೋಗಿಯ ಆತ್ಮಸ್ಥೈಯ ವೈಧ್ಯರ ಸ್ಪಂದನೆ ಮನಮಿಡಿಯುವಂತಿದೆ….ಧನ್ಯವಾದಗಳು

    ಪ್ರತಿಕ್ರಿಯೆ
  3. Kiran

    Sir,
    I have read about the Kubler Ross model of five stages of grief; this man seems to be either a fast mover or an exception!
    Sir, can I get your email id? A doctor friend of mine had something to discuss about your articles and forthcoming book. Would be ideal to reach you through email.
    Thank you

    ಪ್ರತಿಕ್ರಿಯೆ
  4. Sachin Kalyanashetti

    First of all my sincere salute to that great person… Very rare to see this kind of People.Finally my eyes got wet while finishing reading… 🙁
    I like your below lines and Personally i felt so many time same ri mama “ಒಳ್ಳೆಯ ವ್ಯಕ್ತಿಗಳಿಗೆ ಹೀಗಾದಾಗೊಮ್ಮೆ ನಾನು ಸಂಕಟಪಟ್ಟಿದ್ದೇನೆ. ಯಾಕಾದರೂ ಇಂಥ ರೋಗಗಳು ಇವರನ್ನು ಕಾಡುತ್ತವೆಯೋ ಎಂದು ಹಲವು ಬಾರಿ ಅನಿಸಿದೆ. “ಸರ್ವ ಗುಣ ಸಂಪನ್ನ”ರಾದ ಹಲವರು ನಮ್ಮೆದುರಿಗೆ ಆರೋಗ್ಯವಂತರಾಗಿ, ‘ತುಂಬು ಜೀವನ’ ಬದುಕಿ, ಸುಖನಿದ್ರೆಯಲ್ಲಿಯೇ ಸಾಗಿ ಹೋದದ್ದನ್ನು ನೋಡಿದ್ದೇವೆ.. ಈಗಲೂ ಹಾಗೆ ಆಯಿತು. ಯಾವ ಚಟಗಳನ್ನೂ ಮಾಡದ, ಯಾವತ್ತೂ ಆರೋಗ್ಯವಂತನಾದ ಸೀದಾ ಸಾದಾ ಮನುಷ್ಯನಿಗೆ ಈ ಮಾರಣಾಂತಕ ರೋಗ.” Thanks for sharing with us… Love you Regards Sachin Kalyanashetti

    ಪ್ರತಿಕ್ರಿಯೆ
  5. Dr.Ratna Kulkarni

    ಮನ ಕಲಕುವ ಕಥನ.
    ” ಕರುಣಾಕರ ನೀನೆನ್ನುವದ್ಯಾತಕೋ ಭರವಸವಿಲ್ಲೆನಗೆ…..”

    ಪ್ರತಿಕ್ರಿಯೆ
  6. Sachin Kalyanashetti

    My sincere salute that person..May his brave soul rest in peace… Finally my eyes got wet while finishing this article ri mama being in my mind running towards assigned work.. Thanks for sharing with us..The way you narration of story na it really making me like whether am reading ‘Ravi Belegere’article not our doctor mama.
    Best Regards,
    Sachin Kalyanashetti

    ಪ್ರತಿಕ್ರಿಯೆ
  7. Dr Sunilchandraಹ್ರ

    ನಲ್ಮೆಯ ಡಾ.ಶಿವಾನಂದರಿಗೆ,
    ನಿಮ್ಮ ಲೇಖನ ತುಂಬಾ ಹ್ರದಯಸ್ಪಷಿ೯ಯಾಗಿದೆ.ರೋಗಿಯ ಮನೋಸ್ಥೈಯ೯,ಸಂಬಂಧಿಗಳ ಬಗ್ಗೆ ತೋರುವ ಕಾಳಜಿ,ಬದುಕಿನ ಬಗೆಗಿನ ಧೋರಣೆ ಎಲ್ಲಕ್ಕೂ ಮಿಗಿಲಾಗಿ ವೈದ್ಯನ ತುಡಿತ ಮಿಡಿತ ಸಾಮಾಜಿಕ ಕಳಕಳಿ ಮತ್ತು ವೈದ್ಯ ಹಾಗೂ ರೋಗಿಯ ಆತ್ಮೀಯ ಸಂಬಂಧ ಅತ್ಯಂತ ಶ್ಲಾಘನೀಯ
    ಸರಸ್ವತಿಪುತ್ರರಾದ ನಿಮ್ಮ ಶೈಲಿಗೆ ದೀಘ೯ ಪ್ರಣಾಮಗಳು
    ಲೇಖನಿ,ಸ್ಟೆತೋಸ್ಕೋಪು ಹಾಗೂ ಕತ್ತರಿಗಳ ಅಪೂವ೯ ಕೂಡಲಸಂಗಮ ನೀವು**

    ಪ್ರತಿಕ್ರಿಯೆ
  8. Dr KAZI

    ಕಣ್ಣು ತೇವಗೊಂಡಿವೆ…
    ಶಿರ ಉಬ್ಬಿವೆ .. ಏನಂತ ಕಾಮೆಂಟ್ ಮಾಡುವದು !?

    ಪ್ರತಿಕ್ರಿಯೆ
  9. Gopaala Wajapeyi

    ಹೃದಯಸ್ಪರ್ಶಿ… ಡಾಕ್ಟ್ರೆ, ನಿಮಗೊಂದು ಸಲಾಮು… 🙂

    ಪ್ರತಿಕ್ರಿಯೆ
  10. ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ

    ಮನಮುಟ್ಟುವ ಅನುಭವ ಸರ್

    ಪ್ರತಿಕ್ರಿಯೆ
  11. Anonymous

    Asadhaarana vyaktiya bagge bareda asadharana kathana; obba asadhaarana vyaktiyindale ?!!

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ravi jammihalCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: