ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಶರೀರದ ‘ಸರ್ವಿಸಿಂಗ್’ ದಿನಾಂಕ ಅಮುಖ್ಯವಾಗುತ್ತದೆ

ಸಾಧಕನೊಬ್ಬನ ಕಥೆ…
ಆತ ವಯಸ್ಸಿನಲ್ಲಿ ನನಗಿಂತ ಒಂದು ವರ್ಷ ಸಣ್ಣವನು…..ಎತ್ತರಕ್ಕೆ ನನಗಿಂತ ಆರಿಂಚು ಎತ್ತರ ..ಸಾಧನೆಯಲ್ಲಿ ನನಗೆ ನಿಲುಕಲಾರದಷ್ಟು ಎತ್ತರ…ಸ್ಪುರದ್ರೂಪಿ…ಅಜಾನು ಬಾಹು.. ಟೈ ಹಾಕಿಕೊಂಡು ಎದುರಿಗೆ ಬಂದು ನಿಂತನೆಂದರೆ ಸಿನಿಮಾ ನಟನಂತೆ ಕಂಗೊಳಿಸುತ್ತಿದ್ದ. ಇದೆಲ್ಲದರ ಮೇಲೆ ಅವನೊಬ್ಬ ಅದ್ಭುತ ಸರ್ಜನ್.. ಶಸ್ತ್ರಚಿಕಿತ್ಸೆಯ ಉಪಕರಣಗಳನ್ನು ಕೈಯಲ್ಲಿ ಹಿಡಿದನೆಂದರೆ ತಪಸ್ವಿಯಾಗಿ ಮಾರ್ಪಾಟಾಗುತ್ತಿದ್ದ. ಆತನ ಕೈಬೆರಳುಗಳು ಚಾಕಚಕ್ಯತೆಯಿಂದ ಹರಿದಾಡಿ ರೋಗಗ್ರಸ್ತ ಭಾಗವನ್ನು ಸರಾಗವಾಗಿ ಕತ್ತರಿಸಿ ತೆಗೆಯುವದನ್ನು ನೋಡುವುದೇ ಒಂದು ರೋಮಾಂಚಕಾರಿ ಅನುಭವ. ಸರ್ಜನ್ ಆದ ನನ್ನನ್ನೇ ಇಷ್ಟೊಂದು ಆವರಿಸಿದ್ದನೆಂದರೆ ಆತನ ಕೌಶಲ್ಯ ಹೇಗಿರಬೇಡ..?
ನನಗೂ ನಮ್ಮ ಸಿಬ್ಬಂದಿಗೂ ಆತನ ಜೊತೆಗೂಡಿ ಆಪರೇಶನ್ ಮಾಡುವುದೆಂದರೆ ಒಂದು ಸಂಭ್ರಮ. ಆಪರೇಶನ್ ಮಾಡುವಾಗ ಕಟ್ಟು ನಿಟ್ಟು. ಹೇಗಿರಬೇಕೆಂದರೆ ಹಾಗೇ ಇರಬೇಕು. ನೂರೈವತ್ತು ಕಿಲೋಮೀಟರ ದೂರದ ನಗರದಿಂದ ನಮ್ಮಲ್ಲಿಗೆ ಶಸ್ತ್ರಚಿಕಿತ್ಸೆಗೆ ಬರುತ್ತಿದ್ದರೂ ಹೇಳಿದ ವೇಳೆಗಿಂತ ಒಂದು ನಿಮಿಷ ಕೂಡ ತಡಮಾಡುತ್ತಿರಲಿಲ್ಲ. ಬಂದವನೇ ಒಂದು ದೊಡ್ಡ ಮುಗುಳ್ನಗೆಯೊಂದಿಗೆ ಶಸ್ತ್ರಚಿಕಿತ್ಸಾ ಕೋಣೆ ಹೊಕ್ಕನೆಂದರೆ ಮುಗಿಯಿತು, ಅದೊಂದು ಮಂದಿರವಾಗಿ ಪರಿವರ್ತನೆಗೊಳ್ಳುತ್ತಿತ್ತು. ಮುಂದಿನ ಒಂದೆರಡು ಘಂಟೆ ನಮ್ಮ ಅಸಿಸ್ಟಂಟ್ ಗಳಿಗೆ ಕೆಲಸವೋ ಕೆಲಸ. ನನಗೋ ಅವನ ನೈಪುಣ್ಯ ನೋಡುವ ಸಡಗರ. ‘ಲೈಟ್ ಇಲ್ಲಿ ಬೇಕು, ಅಲ್ಲಿ ಬೇಕು. ಫ್ಯಾನ್ ಈ ಕಡೆ ಇರಲಿ. ಕಾಟರಿಯ (ಆಪರೇಶನ್ ಮಾಡುವಾಗ ಡಿಸೆಕ್ಷನ್ ಮಾಡಲು ಬಳಸುವ ವಿದ್ಯುತ್ ಉಪಕರಣ) ಪವರ್ ಸರಿಯಾಗಿ ಹೊಂದಿಸು, ಇತ್ಯಾದಿ’ “ಬೇಕು”ಗಳ ಸುರಿಮಳೆ.
‘ನೀನು ಇಷ್ಟೇಕೆ ಡಿಮ್ಯಾಂಡಿಂಗ್ ಇದ್ದೀ, ಮಾರಾಯಾ’
ಎಂದು ಕೇಳಿದರೆ ಆತ ಕೊಡುವ ಉತ್ತರ ,
“ಅಳುವ ಮಗುವಿಗೆ ಮಾತ್ರ ಬೇಗ ಹಾಲು ದೊರೆಯುತ್ತದೆ…!!”
ಆತನೊಂದಿಗಿನ ಏಳು ವರ್ಷಗಳ ನನ್ನ ಗೆಳೆತನ ಹಾಗೂ ಒಡನಾಟದಿಂದ ನಾನು ಕಲಿತದ್ದು ಬಹಳ. ರೋಗಿಗಳೊಂದಿಗೆ ವ್ಯವಹರಿಸುವ ರೀತಿಯಿಂದ ಹಿಡಿದು, ಹಣಕಾಸು ನಿರ್ವಹಣೆ, ಜನರೊಂದಿಗೆ ಚರ್ಚೆ ಮಾಡುವ ರೀತಿ, ಇತ್ಯಾದಿಗಳ ಬಗ್ಗೆ ನಿರರ್ಗಳವಾಗಿ ಮಾತಾಡುತ್ತಿದ್ದ. ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುವ ಶಕ್ತಿ ಇತ್ತು, ಅವನಲ್ಲಿ. ಆವಾಗಲೆಲ್ಲ ನಾನು ಅವನೆದುರು ತದೇಕ ಚಿತ್ತನಾಗಿ ಕುಳಿತು ಬಿಡುತ್ತಿದ್ದೆ, ಅವನ ಅಗಾಧ ಮೇಧಾವಿತನವನ್ನು ಮೆಚ್ಚಿಕೊಳ್ಳುತ್ತ. ಆತ ಯಾವ ವ್ಯಕಿತ್ವ ವಿಕಸನ ಗುರುವಿಗೂ ಕಡಿಮೆ ಇರಲಿಲ್ಲ.
ಈಗ ಸುಮಾರು ತಿಂಗಳುಗಳ ಹಿಂದೆ ಒಂದು ಬೆಳಿಗ್ಗೆ ಒಬ್ಬ ಪೇಶಂಟ್ ಬಗ್ಗೆ ವಿಚಾರಿಸಲು ನಾನು ಅವನಿಗೆ ಫೋನ್ ಮಾಡಿದ್ದೆ. ಹದಿನೈದಿಪ್ಪತ್ತು ನಿಮಿಷ ಮಾತಾಡಿದೆವು. ಅವನೊಡನೆ ಯಾವಾಗ ಮಾತಾಡಿದರೂ ಹಾಗೇನೆ. ಕನಿಷ್ಠ ಅರ್ಧ ಗಂಟೆಯ ಸಮಯವಿದ್ದರಷ್ಟೇ ಅವನಿಗೆ ಫೋನ್ ಮಾಡಬೇಕು. ನಮ್ಮ ಮಾತುಗಳು ಬರೀ ಪೇಶಂಟ್ ಗೆ ಮಾತ್ರ ಸೀಮಿತವಿರಲಿಲ್ಲ. ಆದರೆ ಅಲ್ಲಿ ಕಾಡು ಹರಟೆ ಎಂದಿಗೂ ಇರುತ್ತಿರಲಿಲ್ಲ. ಏನಿದ್ದರೂ ಅಭಿವೃದ್ಧಿಯ ಮಾತುಗಳೇ. ತನ್ನ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುತ್ತಿರುವ ಬಗ್ಗೆ, ಇನ್ನೆರಡು ದಿನಗಳಲ್ಲಿ ಮುಂಬೈಗೆ ಹೋಗುತ್ತಿರುವ ಬಗ್ಗೆ, ಅಲ್ಲಿಯ ಒಂದು ಹೈಟೆಕ್ ಆಸ್ಪತ್ರೆಯಲ್ಲಿರುವ ಹೊಸ ಉಪಕರಣಗಳನ್ನು ನೋಡಿ ಬರುತ್ತಿರುವ ಬಗ್ಗೆ ಮಾತಾಡಿದ. ತನ್ನ ಆಸ್ಪತ್ರೆಯ ಸಿಬ್ಬಂದಿಯನ್ನೂ ಜೊತೆಯಲ್ಲಿ ಕರೆದುಕೊಂಡು ಅವರಿಗೂ ತರಬೇತಿ ಕೊಡಿಸುವುದಾಗಿ ಹೇಳಿದ.
ಮುಂದೆ ಗೋವಾ, ವಿಜಾಪುರ, ಬಾಗಲಕೋಟೆಗಳಲ್ಲಿ ಆಸ್ಪತ್ರೆಗಳನ್ನು ತೆರೆಯುವ ವಿಚಾರ ಇಟ್ಟಿದ್ದ. ಒಬ್ಬನೇ ವ್ಯಕ್ತಿ ಇಷ್ಟೆಲ್ಲಾ ಮಾಡುತ್ತಿದ್ದನೆಂದರೆ ಆತನ ಕಾರ್ಯಕ್ಷಮತೆ, ದಕ್ಷತೆ, ಧೈರ್ಯ ಹೇಗಿದ್ದೀತು?
ಆತ ಇದ್ದದ್ದೇ ಹಾಗೆ. ಜೀವನದ ಪ್ರತಿ ನಿಮಿಷವನ್ನೂ ತೀವ್ರವಾಗಿ ಬದುಕಿದವ. ಪ್ರತಿ ದಿನವನ್ನೂ ಅಭಿವೃದ್ಧಿಗಾಗಿ, ಆಸ್ಪತ್ರೆಯನ್ನು ಸುಧಾರಿಸುವುದಕ್ಕಾಗಿ, ರೋಗಿಗಳಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ವಿನಿಯೋಗಿಸಿದವ. ಹಾಗೆಂದೇ ಯಾರೂ ಕನಸು ಕಾಣಲೂ ಸಾಧ್ಯವಾಗದ ಅದ್ಭುತ ಆಸ್ಪತ್ರೆಯೊಂದನ್ನು ಕಟ್ಟಿ ನಿಲ್ಲಿಸಿಬಿಟ್ಟ. ಎಂತೆಂಥ ಸಂಸ್ಥೆಗಳು ಮಾಡಲು ಸಾಧ್ಯವಾಗದ್ದನ್ನು ಒಬ್ಬನೇ ಮಾಡಿ ತೋರಿಸಿಬಿಟ್ಟ. ಉದ್ದೇಶ ಸ್ಪಷ್ಟ. ನಮ್ಮ ಭಾಗದ ರೋಗಿಗಳು ವೈದ್ಯಕೀಯ ಸೌಲಭ್ಯಗಳಿಲ್ಲದೆ ಕೊರಗಬಾರದು, ಎಂಬುದು. ಇಂತಹುಗಳನ್ನೇ ನಾವು ಫೋನಿನಲ್ಲಿ ವಾರಕ್ಕೊಮ್ಮೆಯಾದರೂ ಮಾತಾಡುತ್ತಿದ್ದೆವು. ಆತನೊಡನೆ ಮಾತಾಡುವುದೆಂದರೆ ಒಂದು ಪಾಠ ಹೇಳಿಸಿಕೊಂಡತ್ತೆ. ಹೊಸ ಜಗತ್ತಿಗೆ ತೆರೆದುಕೊಂಡಂತೆ.
ಹಾಗೇ ಮಾತಾಡುತ್ತ “ನಾನು ಬಾತ್ ರೂಂ ಗೆ ಹೊರಟಿದ್ದೇನೆ. ಆಮೇಲೆ ಆಸ್ಪತ್ರೆಗೆ ಹೋಗಿ ನಿನ್ನ ಪೇಶಂಟ್ ನೋಡಿ ಹನ್ನೊಂದು ಗಂಟೆಗೆ ಮತ್ತೆ ಮಾತಾಡುವೆ.” ಎಂದ….
ಹನ್ನೊಂದುವರೆಗೆ ಅವನ ಡ್ರೈವರ್ ಫೋನ್ ಮಾಡಿದ…
”ನಾನು ಡಾಕ್ಟರ್ ಅವರ ಡ್ರೈವರ್ ..” ಎಂದ. ನನ್ನ ಪೇಶಂಟ್ ಬಗೆಗೆ ಮಾತಾಡಲು ಫೋನ್ ಮಾಡಿರಬಹುದೆಂದು ತಿಳಿದು,
”ಹೌದಾ … ಅವರ ಕಡೆ ಕೊಡು ಮಾತಾಡುವೆ “ ಎಂದೆ.
ಅವನು ಒಂದು ನಿಮಿಷ ಸುಮ್ಮನಾದ. ಆಮೇಲೆ ಒಮ್ಮೆಲೇ ಗದ್ಗದಿತನಾಗಿ
“ಇಲ್ಲ ಸರ್..ಡಾಕ್ಟರ್ ತೀರಿಹೋದರು…” ಎಂದ …
ನನಗೆ ನಂಬಲಾಗಲಿಲ್ಲ….ಬರೀ ಒಂದು ಗಂಟೆಯ ಹಿಂದೆ ನನ್ನೊಡನೆ ಮಾತಾಡಿದ ಗೆಳೆಯ ಇನ್ನಿಲ್ಲವೆಂದರೆ ಹೇಗೆ ನಂಬಲಿ? ಅದೂ ಅದೇ ತಾನೇ ಜಿಮ್ ಮುಗಿಸಿ ವಾಕಿಂಗ್ ಮುಗಿಸಿ ಚಹಾ ಕುಡಿಯುತ್ತ ಮಾತಾಡಿದ್ದ. ಅವನು ಮಾತಾಡುವಾಗ ಒಂದಿಷ್ಟೂ ಅವನ ಆರೋಗ್ಯ ಏರು ಪೇರಾದ ಲಕ್ಷಣಗಳಿರಲಿಲ್ಲ. ಅದೇ ತಾನೇ ವಾಕಿಂಗ್ ಮುಗಿಸಿ ಚೈತನ್ಯದ ಚಿಲುಮೆಯಾಗಿ ಮಾತಾಡಿದ್ದ. ಅನೇಕ ಬಾರಿ ನನ್ನ ಆರೋಗ್ಯದ ಬಗೆಗೆ ಎಚ್ಚರವಹಿಸಲು ನನಗೇ ತಿಳಿಹೇಳಿದ್ದ. ಯಾವ ಖಾದ್ಯಗಳಲ್ಲಿ ಏನೇನು ಸತ್ವಗಳಿವೆ ಎಂಬುದನ್ನು ನಿಖರವಾಗಿ ಹೇಳಬಲ್ಲವನಾಗಿದ್ದ. ಅಂಥವನಿಗೆ ಹೀಗಾಯಿತೇ, ಎನಿಸಿತು.
ಬಾತ್ರೂಮ್ ಗೆ ಹೋದವನು ಬಹಳ ಹೊತ್ತು ಬರಲಿಲ್ಲವಾದ್ದರಿಂದ ಅವರ ಮನೆಯವರು ಬಾಗಿಲು ಬಡಿದಿದ್ದಾರೆ. ತೆರೆದಿಲ್ಲವಾದ್ದರಿಂದ ಬಾಗಿಲು ಮುರಿದು ನೋಡಿದರೆ ಅವನು ಇಹಲೋಕ ತ್ಯಜಿಸಿ ಬಹಳ ಹೊತ್ತಾಗಿತ್ತು. ಹಾಗಾದರೆ, ನನ್ನೊಡನೆ ಮಾತಾಡಿದ್ದೇ ಕೊನೆಯದೇನೋ…!
ನಮ್ಮ ಕುಟುಂಬ ಸದಸ್ಯನಂತೆಯೇ ಇದ್ದವನನ್ನು ಕಳೆದುಕೊಂಡ ದುಃಖ ಮನೆಯನ್ನೆಲ್ಲ ಆವರಿಸಿತು..ನಾನು, ನನ್ನ ಮಗ, ನನ್ನ ಹೆಂಡತಿ ಬೆಳಗಾವಿಗೆ ದೌಡಾಯಿಸಿದೆವು…ಹಾಲ್ ನ ತುಂಬ ಮಲಗಿದ್ದವನನ್ನು ನೋಡಿ ಕರುಳು ಕಿವುಚಿದಂತಾಯ್ತು…ಮುಖದಲ್ಲಿ ಎಂದಿನ ಶಾಂತ ಭಾವ..ನಿದ್ರೆ ಮಾಡುತ್ತಿದ್ದಾನೇನೋ ಎನ್ನುವಂಥ ನೋಟ… ನೂರು ವರ್ಷಗಳಲ್ಲಿ ಮಾಡಲಾಗದ್ದನ್ನು 54 ವರ್ಷಗಳಲ್ಲಿ ಸಾಧಿಸಿದೆನೆನ್ನುವ ತೃಪ್ತ ಭಾವ…
ತುಟಿಯ ಕೊನೆಯಲ್ಲಿ ಒಂದು ಸಣ್ಣನೆಯ ಮುಗುಳ್ನಗು ಇತ್ತೇ….?
ನನಗೆ, ನನ್ನ ಹೆಂಡತಿಗೆ, ಮಗನಿಗೆ ದುಃಖ ತಡೆಯಲಾಗಲಿಲ್ಲ…
ನಮ್ಮ ಮನೆಗೆ ಬಂದನೆಂದರೆ ಸೀದಾ ಡೈನಿಂಗ್ ಹಾಲ್ ಗೆ ಬಂದು ನೀಡಿದ್ದನ್ನು ಖುಷಿಯಿದ ಉಂಡು, ಇಲ್ಲವೇ ತನಗೆ ಬೇಕೆನಿಸಿದ್ದನ್ನು ಮಾಡಿಸಿ, ರುಚಿ ನೋಡಿ “ನಿಮ್ಮ ಅಡುಗೆ ಮನೆಯಲ್ಲೇನೋ ಜಾದೂ ಇದೆ …ನಿಮ್ಮ ಮನೆಯಲ್ಲಿನ ಅಡುಗೆ ಎಷ್ಟು ರುಚಿ..” ಎಂದು ಹೊಗಳಿ ಹೊಟ್ಟೆ ತುಂಬ ಉಂಡು..ಮನಮೆಚ್ಚುವಂತೆ ಮಾತಾಡುವ ಸ್ನೇಹಜೀವಿ ಇನ್ನಿಲ್ಲವಾದನೆಂಬ ವ್ಯಥೆ….
ಆತನದು ಖಂಡಿತ ಸಾಯುವ ವಯಸ್ಸಲ್ಲ..
ಯಾವುದೇ ರೋಗಗಳಿರಲಿಲ್ಲ,..ದಿನಾಲೂ ಜಿಮ್ ಮಾಡುತ್ತಿದ್ದ…
ಹಾಗಾದರೆ ಸತ್ತಿದ್ದೇಕೆ….?
ಗೊತ್ತಿಲ್ಲ….!!
ಮತ್ತೊಮ್ಮೆ….”Death is Never Predictable” ಎನ್ನುವುದು Prove ಆಯಿತು ಅಷ್ಟೇ….
ಈ ಸಾವು ನ್ಯಾಯವೇ…….??
ಕೊನೆಯ ಮಾತು:
ಅನೇಕ ವೈದ್ಯರು, ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದವರು, ಅಹರ್ನಿಶಿ ದುಡಿದು ಮುಂದೆ ಬಂದವರು, ಸೊನ್ನೆಯಿಂದ ಕೋಟಿ ಮುಟ್ಟಿದವರು, ಸಮಾಜಕ್ಕಾಗಿ ಜೀವ ತೇಯ್ದವರು ಈ ರೀತಿ ಅಕಾಲ ಮರಣ ಹೊಂದಿದ್ದನ್ನು ಹಲವು ಬಾರಿ ನಾವು ಕೇಳುತ್ತೇವೆ. ‘ವೈದ್ಯಕೀಯದಲ್ಲಿದ್ದೂ ತಮ್ಮ ಸ್ವಂತ ಆರೋಗ್ಯ ಹೇಗಿದೆ ಎಂಬುದನ್ನು ಪರೀಕ್ಷಿಸಿಕೊಂಡಿರಲಿಲ್ಲವೇ..?’ ಎನ್ನುವುದೊಂದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಇಂತಹ ಘಟನೆಯ ಸುದ್ದಿಗಳನ್ನು ಕೇಳಿದಾಗಲಾದರೂ ಪರೀಕ್ಷೆ ಮಾಡಿಸಿಕೊಳ್ಳಬೇಕು, ಎಂದು ಇನ್ನುಳಿದವರು ಅಂದುಕೊಳ್ಳುವುದಿಲ್ಲ. “ಬೇರೆಯವರ ವಾಹನಗಳಿಗಷ್ಟೇ ಅಪಘಾತಗಳಾಗುತ್ತವೆ, ತಮ್ಮದಕ್ಕೆ ಆಗುವುದಿಲ್ಲ” ಎಂಬ ಧೋರಣೆ ಹೇಗೆಯೋ, ಹಾಗೆಯೇ ಇದು ಕೂಡ. ವಾಹನಗಳ ಸರ್ವಿಸಿಂಗ್ ದಿನಾಂಕ ನಮಗೆ ಬಾಯಿಪಾಠ ಆಗಿರುತ್ತದೆ. ಇಲ್ಲವೇ ಮೊಬೈಲ್ ನಲ್ಲಿ ಮಹತ್ವದ ರಿಮೈಂಡರ್ ಗಳ ಲಿಸ್ಟ್ ನಲ್ಲಿ ಸ್ಥಾನ ಪಡೆದಿರುತ್ತದೆ. ಆದರೆ ಸ್ವಂತ ಶರೀರದ ‘ಸರ್ವಿಸಿಂಗ್’ ದಿನಾಂಕ ಅಮುಖ್ಯವಾಗುತ್ತದೆ.
ಎಲ್ಲರೂ ಅಂದುಕೊಳ್ಳುವುದು ತಾವು ಆರೋಗ್ಯವಾಗಿದ್ದೇವೆಂದೇ. ಆದರೆ ಒಂದು ಬಾರಿ ಆರೋಗ್ಯ ಪರೀಕ್ಷೆಗಳ ಪರಿಧಿಯನ್ನು ಸುತ್ತಿ, ಕೇಂದ್ರಬಿಂದುವಿನಲ್ಲಿ ನಿಂತು ಸುತ್ತ ಕಣ್ಣು ಹಾಯಿಸಿ ಬನ್ನಿ ಆಗ ಗೊತ್ತಾಗುತ್ತದೆ, ನಿಜವೇನೆಂದು. ವಯಸ್ಸು ನಲವತ್ತಾದೊಡನೆ ಒಮ್ಮೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ. ಏನೂ ಕೊರತೆಗಳಿಲ್ಲದಿದ್ದರೆ ಮತ್ತೆ ಇಮ್ಮಡಿ ಉತ್ಸಾಹದಿಂದ ದುಡಿಯಲು ಹೊರಡಿ. ಸಣ್ಣ ಕೊರತೆಗಳಿದ್ದರೆ ನಿವಾರಿಸಿಕೊಳ್ಳಿ. ದೊಡ್ದವಿದ್ದರೆ ಕಾಲ ಕಾಲಕ್ಕೆ ಪರೀಕ್ಷೆ ಮಾಡಿಸಿ ನಿಗಾ ವಹಿಸಿ. ಸಾವು ಯಾರನ್ನೂ ಬಿಟ್ಟಿಲ್ಲ. ಆದರೆ ಈ ಅಕಾಲಿಕ ಸಾವು ಎಂಬ “ಅನಿಷ್ಟ”ವನ್ನು ಹಲವು ಬಾರಿ ತಪ್ಪಿಸಬಹುದು. ತನ್ಮೂಲಕ ಮನೆಯವರಿಗೂ,ನಂಬಿದವರಿಗೂ ಕೊಡುವ ಶಾಕ್ ತಪ್ಪಿಸಬಹುದು..!

…..ಹಾಗೆ ವಿಚಾರಿಸಿದರೆ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ, ಹೆತ್ತವರಿಗೆ ಮಕ್ಕಳು ಅವರವರ ಜನ್ಮದಿನಗಳಂದು ಕೊಡುವ ಕೊಡುಗೆಗಳಾಗಬೇಕು, ಈ ಆರೋಗ್ಯ ಪರೀಕ್ಷೆಗಳು.

ಅದೆಲ್ಲ ಬಿಟ್ಟು ಹೀಗೆ ಕುಳಿತವರು ಹಾಗೆ ಎದ್ದು ಹೋಗಿಬಿಟ್ಟರೆ ಹೇಗೆ?

ಹೋದವರೇನೋ ಹೋಗಿಬಿಡುತ್ತಾರೆ, ಶಾಂತವಾಗಿ, ಇನ್ನಿಲ್ಲದ ಹಾಗೆ. ಆದರೆ ಹಾಗಾಗುವುದರಿಂದ ಇದ್ದವರಿಗೆ ಬಿಟ್ಟುಹೋಗುವ ದುಃಖ ಮತ್ತು ಹೊರೆ….?

ಅದಕ್ಕಿಂತ ಮುಖ್ಯವಾಗಿ ಇನ್ನೊಂದಿಷ್ಟು ವರ್ಷ ಈ ಸುಂದರ ಪ್ರಪಂಚದಲ್ಲಿ ಸುಖವಾಗಿ ಬದುಕಬಹುದು…!!
 

‍ಲೇಖಕರು G

November 13, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

11 ಪ್ರತಿಕ್ರಿಯೆಗಳು

  1. Prabhakar M. Nimbargi

    No death is ever untimely. It is destined, we however can’t predict its timing. Even medical postponement may also be predetermined. I too have experienced some ‘untimely’ deaths of friends. One was my contemporary, who died at the age of 22; he went home for vacation and at the beginning of the next year, the news of his death came. Another was that of my very close friend, who deeply involved in research at Ratnagiri had after a pretty long time sent me a greeting card with the message “Yes, I am still alive”, was no more after a month. His death was a shock to me. We have to bear the pain.That’s all.

    ಪ್ರತಿಕ್ರಿಯೆ
    • Anonymous

      Navellaru ondalla ondu divasa hogle beku , aadru hige iddakkidda Haagene hodre tumba Dukka aagutte . Yestondu janrige emergency operation maadi ulide iruvavarannu ulisida nimma friend ge yaaru help madalikke aaglilvalla ade bejaaru . Astu olle dr ge namma sraddanjali .

      ಪ್ರತಿಕ್ರಿಯೆ
  2. santhoshkumar LM

    ನನ್ನ ಹತ್ತಿರದ ಹಿರಿಯರೊಬ್ಬರು ಆಗಾಗ ಹೇಳುವ ಮಾತನ್ನು ನೀವು ಸ್ವಂತ ಅನುಭವದೊಂದಿಗೆ ಹೇಳಿದ್ದೀರ ಸರ್. ಇದರ ಅರಿವಿಲ್ಲದ ಒಬ್ಬರಿಗಾದರೂ ಈ ಲೇಖನ ಒಂದಷ್ಟು ಅರಿವು ಮೂಡಿಸಲಿ.

    ಪ್ರತಿಕ್ರಿಯೆ
  3. sudha Manjunath

    Doctor its touching n don’t know what to say. I pray god to give his family n well wishers including you strength to bear the loss. May his soul rest in peace

    ಪ್ರತಿಕ್ರಿಯೆ
  4. Prabhakar Koregol

    Very opt. Though not always close friend and friend and known people in the professionals we keep on hearing this but …, i see every week about 100 people who come for health check but hardly any doctors

    ಪ್ರತಿಕ್ರಿಯೆ
  5. ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ

    ಎಂಥೆಂತಹ ರೋಮಾಂಚಕ ಹಾಗೂ ವಾಸ್ತವಿಕ ಸನ್ನಿವೇಶಗಳನ್ನು ಅನುಭವಿಸಿದ್ದಿರಾ ಸರ್ ನೀವು? ನಿಜವಾಗಿಯೂ ನೀವು ಬರುವ ರೋಗಿಯ ಮನಸ್ಸನು ನೋಡಿ ಅರಿತು ತಿಳಿದುಕೊಂಡು ಪರಿಹಾರ ತಿಳಿಸಿ ಆಮೇಲೆ ಬಂದವರ ಸಮಾಧಾನಕ್ಕಾಗಿ ಒಂದು ಇಂಜಕ್ಷನ್ ಕೊಟ್ಟರೇ ಸಾಕು ನೋವೆಲ್ಲ ಮಾಯವಾಗಬಹುದು.. ಈ ಮಾತನ್ನು ಯಾಕೆ ಹೇಳಿದೆನೆಂದರೆ ನಿಮ್ಮಲ್ಲಿ ಸತ್ವಯುತವಾದ ಅನುಭವವಿದೆ ಸರ್ ಅದನ್ನು ನಮ್ಮೊಂದಿಗೆ ಅವಧಿಮೂಲಕ ಮುಕ್ತ ಮನಸ್ಸಿನಿಂದ ಹಂಚಿಕೊಳ್ಳುತ್ತಿದ್ದಿರಾ ನಿಮಗೆ ಧನ್ಯವಾದಗಳು. ಕಾರ್ಯಕ್ಷಮತೆ, ದಕ್ಷತೆ, ಧೈರ್ಯ ಇವು ಒಬ್ಬ ವ್ಯಕ್ತಿಯನ್ನು ಪರರ ಅಥವಾ ಹತ್ತಿರದವರ ಮನಸ್ಸಿನಲ್ಲಿ ತುಂಬಾ ಆಳವಾಗಿ ನೆಲೆಯೂರಿಸಿಬಿಡುತ್ತವೆ ಎಂಬುದು ನೂರಕ್ಕೆ ನೂರರಷ್ಟು ಸತ್ಯ ಸರ್

    ಪ್ರತಿಕ್ರಿಯೆ
  6. ಲಕ್ಷ್ಮೀಕಾಂತ ಇಟ್ನಾಳ

    ವೈದ್ಯ ಜಗತ್ತಿನ ಅನುಭವಗಳ ತಮ್ಮ ಮಾತುಗಳು ನಿಜಕ್ಕೂ ಕಣ್ಣು ತೆರೆಸುವಂತಿವೆ. ಸಾವು ಅದೆಷ್ಟು ಕ್ರೂರ ಎನ್ನುವುದು ಅರ್ಥವಾಗುತ್ತದೆ, ಬ್ರುಟಸ್ ನಂತೆ, ಸೀಜರ್ ನ ಪಕ್ಕದಲ್ಲಿಯೇ ಇದ್ದರೂ ಅರಿಯದೇ ಹೋಗುತ್ತೇವೆ.

    ಪ್ರತಿಕ್ರಿಯೆ
  7. ಇಂದಿರೇಶ ಜೋಶಿ

    ಕಾಲನ ದೂತರು ಕಾಯುವದಿಲ್ಲ ಯಾರಿಗೂ.ಅವರು ಬರುವ ಸಮಯ ಮುಂಚಿತವಾಗಿ ತಿಳಿಯುವದಿಲ್ಲ ನಮಗೆ.ಸಾರ್ಥಕ ಬಾಳನ್ನು ತೋರಿಸಿಕೊಟ್ಟ ಮಹಾನುಭಾವರು
    ಮನದಲ್ಲಿ ನಿಲ್ಲಬೇಕು,ಅವರ ಕಾರ್ಯವೈಖರಿ ದಾರಿದೀಪವಾಗಬೇಕು.

    ಪ್ರತಿಕ್ರಿಯೆ
  8. Sachin Kalyanashetti

    Thanks ri mama,,Very good lesson for all., Most of people will take care of their dear once but not themselves.. 🙁 🙁
    Anyway your friend and great doctor’s soul may rest in peace..

    ಪ್ರತಿಕ್ರಿಯೆ
  9. ಭೀಮಪ್ಪ ಹುನಸೀಕಟ್ಟಿ.ಲೋಕಾಪುರ

    ನನ್ನನ್ನೊಳಗೊಂಡ ಎಲ್ಲರ ಧೋರಣೆ ಒಂದೆ..ಸಾವು ಸಧ್ಯ ನನ್ನ ಬಾಗಿಲಬಳಿಯಂತೂ ಇಲ್ಲ !!ಸಂಧರ್ಭವನ್ನು ಮನಮುಟ್ಟುವ ಹಾಗೆ,ಎಲ್ಲರೂ ಒಂದು ಜಾಗೃತರಾಗುವ ಹಾಗೆ ನಿರೂಪಿಸಿದ್ದೀರಿ,ಧನ್ಯವಾದಗಳು ಸರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: