ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಚಟಾಧೀನತೆಯೆಂಬ ದೌರ್ಬಲ್ಯಕ್ಕೆ ಸಿಲುಕಿ


ನಾನಾಗ ಬಳ್ಳಾರಿಯ ವೈದ್ಯಕೀಯ ವಿದ್ಯಾಲಯದಲ್ಲಿ ಎಮ್.ಎಸ್. ಮಾಡುತ್ತಿದ್ದೆ. ಅಲ್ಲಿಯ ‘ಹತ್ತನೆಯ ಬ್ಲಾಕ್’ ಎಂದು ಕರೆಸಿಕೊಳ್ಳುವ ವಾರ್ಡಿನ ಜವಾಬ್ದಾರಿ ನನ್ನದಾಗಿತ್ತು. ಸಾಮಾನ್ಯವಾಗಿ ಮೊದಲನೆಯ ವರ್ಷದ ವಿದ್ಯಾರ್ಥಿಗಳಿಗೆ ಆ ವಾರ್ಡ್ ಕೊಡುವುದು ರೂಢಿ. ಯಾಕೆಂದರೆ ಆ ವಾರ್ಡನಲ್ಲಿ ನಂಜು ಇದ್ದಂಥ, ದಿನಾಲೂ ಡ್ರೆಸ್ಸಿಂಗ್ ಅವಶ್ಯವಿರುವಂಥ, ರೋಗಿಗಳನ್ನು ಅಡ್ಮಿಟ್ ಮಾಡುತ್ತಿದ್ದರು. ‘ಸ್ವಚ್ಛ’ ಹಾಗೂ ತುರ್ತುನಿಗಾ ಅವಶ್ಯವಿರುವ ಕೇಸುಗಳನ್ನೆಲ್ಲ ಮುಖ್ಯ ಕಟ್ಟಡದಲ್ಲಿ ಅಡ್ಮಿಟ್ ಮಾಡಿ ಸೀನಿಯರ್ ಸ್ನಾತಕೋತ್ತರ ವಿದ್ಯಾರ್ಥಿಗಳ ಸುಪರ್ದಿಗೆ ಬಿಡುತ್ತಿದ್ದರು. ಮೊದಲ ವರ್ಷ ಆ ವಾರ್ಡನ್ನು ನೋಡಿಕೊಳ್ಳುತ್ತಿದ್ದ ನಾನು ಸೀನಿಯರ್ ಆದ ಮೇಲೆ ಕೂಡ ಆ ವಾರ್ಡನ್ನು ನಾನೇ ಕೇಳಿ ಪಡೆದಿದ್ದೆ. ಯಾಕೆಂದರೆ ಇಂಥ ರೋಗಿಗಳನ್ನು ಆರೈಕೆ ಮಾಡುವುದರಲ್ಲಿ ನನಗೆ ಅದೇನೋ ತೃಪ್ತಿ. ನಂಜು, ಕೀವು ಇತ್ಯಾದಿಗಳಿಂದ ಕೀಳರಿಮೆ ಹೊಂದಿ ತಮ್ಮನ್ನು ತಾವೇ ಶಪಿಸಿಕೊಳ್ಳುತ್ತಿರುವ ಅವರಿಗೆ ಸಾಂತ್ವನ ಹೇಳುವುದು, ಅವರೊಂದಿಗೆ ಒಂದಿಷ್ಟು ಕಾಲ ಕಳೆಯುವುದು ನನ್ನ ಉದ್ದೇಶವಾಗಿತ್ತು.
ಒಂದು ದಿನ, ಸುಮಾರು ನಲವತ್ತೈದು ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಕಾಲಿಗೆ ‘ಗ್ಯಾಂಗ್ರೀನ್’ ಮಾಡಿಕೊಂಡು ಬಂದು ಅಡ್ಮಿಟ್ ಆದ. ಆತನ ಕಾಲಿನ ಐದೂ ಬೆರಳುಗಳು ಕರ್ರಗಾಗಿದ್ದವು. ಅವನ ಒಂದು ಕಾಲನ್ನು ಮೊದಲೇ ತೆಗೆಯಲಾಗಿತ್ತು. ಈಗ ಈ ಕಾಲನ್ನೂ ತೆಗೆಯಬೇಕಾದ ಪರಿಸ್ಥಿತಿ. ಅತೀವ ನೋವಿನಿಂದ ಚಡಪಡಿಸುತ್ತಿದ್ದ. ಆದಷ್ಟು ಬೇಗ ಆ ಕಾಲನ್ನೂ ತೆಗೆಯುವಂತೆ ಗೋಗರೆಯುತ್ತಿದ್ದ. ಅನೇಕ ವರ್ಷಗಳ ಅವಿರತ ಧೂಮ್ರಪಾನದ ದುಷ್ಪರಿಣಾಮದಿಂದ ರಕ್ತನಾಳಗಳು ಸಣ್ಣದಾಗಿ ಕಾಲಿಗೆ ರಕ್ತ ಸರಬರಾಜು ಇಲ್ಲದಂತಾಗಿ ಸಂಭವಿಸುವ ಗ್ಯಾಂಗ್ರೀನ್ ಅದು. ಮುಟ್ಟಿ ನೋಡಿದರೆ ಕಾಲು ತಣ್ಣಗಿತ್ತು. ರಕ್ತನಾಳಗಳು ಕಟ್ಟಿಕೊಂಡು ನಾಡಿಮಿಡಿತ ಇರಲಿಲ್ಲ. ಬೆರಳುಗಳು ಕೊಳೆತು ಅಸಾಧ್ಯ ದುರ್ವಾಸನೆ ಬೀರುತ್ತಿದ್ದವು. ಅವನೊಂದಿಗೆ ಬಂದ ಅವನ ಹೆಂಡತಿ, ಮಗ ಕೈಮುಗಿದು ಕರುಣಾಜನಕ ಸ್ಥಿತಿಯಲ್ಲಿ ನಿಂತಿದ್ದರು. ಆತನ ರೋಗದ ‘ಇತಿಹಾಸ’ ಕೇಳಿದಾಗ ಗೊತ್ತಾಯಿತು, ಈಗ ಸುಮಾರು ಆರು ತಿಂಗಳ ಹಿಂದಷ್ಟೇ ಇದೇ ಕಾರಣಕ್ಕಾಗಿ ಒಂದು ಕಾಲು ತೆಗೆಯಲಾಗಿದ್ದು, ಈಗ ಮತ್ತೆ ಈ ಕಾಲಿಗೆ ಅಂಥದೇ ಪರಿಸ್ಥಿತಿ. ಅವನ ಗೋಳನ್ನು ನೋಡಲಾಗುತ್ತಿಲ್ಲ. ಇಂಥ ಸ್ಥಿತಿಯಲ್ಲಿ ತಡೆಯಲಾರದಷ್ಟು ನೋವು ಇರುತ್ತದೆ. ಕಾಲನ್ನು ಹಾಸಿಗೆಯಿಂದ ಕೆಳಗೆ ಜೋತು ಬಿಟ್ಟರೆ, ಒಂದಿಷ್ಟು ರಕ್ತ, ಕಾಲ ಕಡೆಗೆ ಹರಿದು ಸ್ವಲ್ಪ ನೋವು ಕಡಿಮೆಯಾಗುತ್ತಿರುತ್ತದೆ. ಅದೂ ಕೂಡ ಮೊದಲಿನ ಕೆಲವು ದಿನ ಮಾತ್ರ. ಬರ ಬರುತ್ತಾ ರಕ್ತನಾಳಗಳು ಪೂರ್ಣ ಕಟ್ಟಿಕೊಂಡು ಹಗಲು ರಾತ್ರಿ ಬಿಡದೆ ನೋವು ಕಾಡುತ್ತದೆ. ಈ ರೋಗದಲ್ಲಿ ಕಾಲಿನ ರಕ್ತನಾಳಗಳು ಮಾತ್ರ ಕಟ್ಟಿಕೊಂಡಿರುತ್ತವೆ, ನೋವಿನ ಜ್ಞಾನವನ್ನು ಮೆದುಳಿಗೆ ತಲುಪಿಸುವ ನರಮಂಡಲ ವ್ಯವಸ್ಥೆ ಸಹಜ ಸ್ಥಿತಿಯಲ್ಲಿಯೇ ಇರುತ್ತದೆ. ರಕ್ತ ಸಿಗದ ನರಗಳು ಚೀರುತ್ತಿರುತ್ತವೆ. ಹೀಗಾಗಿ ರಕ್ತವಿಲ್ಲದೆ ಕಾಲು ನಿಷ್ಪ್ರಯೋಜಕವಾದರೂ ಕೂಡ ನೋವು ನಿರಂತರ. ಈಗ ಇಲ್ಲಿ ಬರುವ ಮುಖ್ಯ ಪ್ರಶ್ನೆಯೆಂದರೆ ಒಂದು ಕಾಲನ್ನು ತೆಗೆದರೂ ಕೂಡ ಬೀಡಿ ಸೇದುವುದನ್ನು ಬಿಡದ ಆತನ ಮನಸ್ಥಿತಿ. ಆತನಿಗೆ ಈ ವಿಷಯವಾಗಿ ಕೇಳಿದರೆ ನೋವಿನಿಂದ ಒದ್ದಾಡುತ್ತ, ಇನ್ನು ಮೇಲೆ ಖಂಡಿತ ಬಿಡುತ್ತೇನೆಂಬ ‘ಭರವಸೆ’ ಕೊಟ್ಟ. ಆದರೂ ನನಗೆ ಗೊತ್ತಿತ್ತು, ಚಟಗಳನ್ನು ಬಿಡುವುದು ಹೇಳಿದಷ್ಟು ಸುಲಭದ ಕೆಲಸವಲ್ಲ, ಎಂದು.
ಇಡೀ ಜನಸಮುದಾಯಕ್ಕೆ ಚಟಗಳನ್ನು ತೊರೆಯುವುದರ ಬಗ್ಗೆ ಅಥವಾ ಚಟ ಮಾಡದಿರುವ ಬಗ್ಗೆ ತಿಳಿಹೇಳುತ್ತ ಆದರ್ಶಪ್ರಾಯರಾಗಿರಬೇಕಾದ ವೈದ್ಯರಲ್ಲಿಯೇ ಕೆಲವರಿಗೆ ಇವುಗಳಿಂದ ದೂರವಿರಲು ಸಾಧ್ಯವಿಲ್ಲವೆಂದ ಮೇಲೆ ಸಾಮಾನ್ಯರ ಪಾಡೇನು? ಅದೇ ವೈದ್ಯಕೀಯ ವಿದ್ಯಾಲಯದಲ್ಲಿಯೇ ಪ್ರೊಫೆಸರ್ ಒಬ್ಬರು, ಕೈಯಲ್ಲಿ ಸಿಗರೇಟ್ ಹಿಡಿದೇ ರೋಗಿಗಳನ್ನು ಪರೀಕ್ಷೆ ಮಾಡುವುದನ್ನೂ ನಾನು ಕಂಡಿದ್ದೆ. ಮತ್ತೆ ಸಂಜೆಯಾದೊಡನೆ ಪ್ರತಿನಿತ್ಯ ‘ಮದ್ಯಾರಾಧನೆ’ ಇಲ್ಲದೆ ಅವರು ಮಲಗುತ್ತಲೇ ಇರಲಿಲ್ಲ. ಅವರು ಕೈಯಲ್ಲಿ ಪೆನ್ ಹಿಡಿದರೆ ಕೈ ನಡುಗುತ್ತಿತ್ತು. ಇಂದಿನ ಸಿಗರೇಟ್ ಹಾಗೂ ಹಿಂದಿನ ರಾತ್ರಿ ಕುಡಿದ ಮದ್ಯ ಎರಡೂ ಕೂಡಿಕೊಂಡು ಅವರ ಉಸಿರಿಗೆ ವಿಚಿತ್ರ ವಾಸನೆ ನೀಡುತ್ತಿದ್ದವು. ಅಕ್ಷರ ಬರೆಯಬೇಕಾದರೆ “ವೈಬ್ರೇಶನ್ ಮೋಡ್” ನಲ್ಲಿ ಬರೆದಂಥ ಅಕ್ಷರಗಳು. ಆಪರೇಶನ್ ಮಾಡುವಾಗ ನೈಫ್ ಹಿಡಿದರೆ ಅವರ ಕೈಯನ್ನು ಇನ್ನೊಬ್ಬರು ಹಿಡಿಯಬೇಕೇನೋ ಅನ್ನುವಂಥ ಪರಿಸ್ಥಿತಿ..!! ಇಷ್ಟೆಲ್ಲ ಇದ್ದೂ ಇವರು ಆ ದಿನಗಳಲ್ಲಿ ವಿದ್ಯಾರ್ಥಿಗಳ ‘ನೆಚ್ಚಿನ ಪ್ರೊಫೆಸರ್’ ಕೂಡ ಆಗಿದ್ದು ವಿಪರ್ಯಾಸ. ಪ್ರತಿದಿನ ರಾತ್ರಿ ಇವರ ನಿತ್ಯದ ‘ಡೋಜ್’ ನ್ನು ಗ್ಲಾಸಿನಲ್ಲಿ ಹಾಕಿಕೊಟ್ಟು , ಅವರ ನೆಚ್ಚಿನ ಕುರುಕಲುಗಳನ್ನು ಮುಂದಿಟ್ಟು, ಅವರ ಕಾಲು ನೀವುತ್ತಾ ಕುಳಿತಿರುತ್ತಿದ್ದರಂತೆ ಅವರ ಹೆಂಡತಿ, ಪಾಪದ ಹೆಂಗಸು. ಒಂದು ಬಾರಿ ನಾನು ಈ ವಿಷಯವಾಗಿ ನನ್ನ ಹೆಂಡತಿಯ ಮುಂದೆ ತಿಳಿಸುತ್ತ, “ಅವರ ಹೆಂಡತಿ, ಎಷ್ಟು ಒಳ್ಳೆಯವಳು, ನೋಡು. ತನ್ನ ಗಂಡನ ಬೇಕು-ಬೇಡಗಳನ್ನು ಚೆನ್ನಾಗಿ ಅರ್ಥೈಸಿಕೊಂಡು, ಸೇವೆ ಮಾಡುತ್ತಾಳೆ” ಎಂದೆ. ಅದಕ್ಕೆ ನನ್ನವಳು ಕೊಟ್ಟ ಉತ್ತರ ತಾರ್ಕಿಕ ಮತ್ತು ಅರ್ಥಪೂರ್ಣ ಎನಿಸಿತು. ಇವಳು ಹೇಳಿದ್ದೇನೆಂದರೆ, “ದಿನಾಲೂ ಗ್ಲಾಸಿನಲ್ಲಿ ‘ವಿಷ’ ಹಾಕಿಕೊಟ್ಟು, ಅವನು ಸ್ವಲ್ಪ, ಸ್ವಲ್ಪವಾಗಿ ಸಾವಿಗೆ ಸಮೀಪವಾಗುತ್ತಿರುವುದನ್ನು, ಮೌನವಾಗಿ ನೋಡುತ್ತಾ ಕುಳಿತ ಅವಳೆಂಥ ಒಳ್ಳೆಯ ಹೆಂಡತಿ” ಎಂದು. ಆ ತರ್ಕ ನನಗೆ ಸರಿಯೆನಿಸಿತು. ಆದರೆ ಅವಳ ಪರಿಸ್ಥಿತಿ ಏನಿತ್ತೋ ಏನೋ.? ಆದರೂ ಸಹ ಹೆಂಡತಿ ಅಥವಾ ಮನೆಯಲ್ಲಿರುವ ಇನ್ನಿತರರು ಚಟ ಕಲಿಯುವ ಮೊದಲ ದಿನಗಳಲ್ಲೇ ಅವರನ್ನು ಬೆದರಿಸಿ, ತಿಳಿಹೇಳಿ ಅಥವಾ ವಿನಂತಿ ಮಾಡಿಕೊಂಡು ಹದ್ದುಬಸ್ತಿನಲ್ಲಿಟ್ಟರೆ ಅನೇಕರು ‘ಚಟಾಧೀನ’ರಾಗುವುದನ್ನು ತಪ್ಪಿಸಬಹುದು. ಯಾಕೆಂದರೆ ಒಂದು ಬಾರಿ ಮನಸ್ಸಿನೊಂದಿಗೆ, ಶರೀರ ಕೂಡ ಚಟಕ್ಕೆ ಆಧೀನವಾದರೆ ಅವರು ತಿರುಗಿಬಾರದ ದಾರಿಯಲ್ಲಿರುತ್ತಾರೆ. ಸಾಮಾನ್ಯವಾಗಿ ಯಾವುದೇ ಚಟ ಪ್ರಾರಂಭವಾದಾಗ ಬರೀ ಒಂದು ಕುತೂಹಲವಾಗಿರುತ್ತದೆ. ಬರಬರುತ್ತ ಅಭ್ಯಾಸವಾಗುತ್ತದೆ. ಕೊನೆಗೆ ವ್ಯಸನವಾಗಿ ಆಂಟಿಕೊಂಡುಬಿಡುತ್ತದೆ. ವ್ಯಸನದ ಹಂತ ಮುಟ್ಟಿದಾಗ ಮನಸ್ಸಷ್ಟೇ ಅಲ್ಲ ಶರೀರದ ಜೀವಕೋಶಗಳೂ ಕೂಡ ಅವಲಂಬಿತವಾಗುತ್ತವೆ. ಇದು “ಚಟಾಧೀನತೆ”ಯ ಪರಮಾವಧಿ. ಈ ಸ್ಥಿತಿಯಲ್ಲಿ ಮನುಷ್ಯ ವ್ಯಸನಮುಕ್ತನಾಗಬೇಕೆಂದು ಮನಸ್ಸು ಮಾಡಿದರೂ ಶರೀರ ಅದನ್ನು ಅಪೇಕ್ಷಿಸುತ್ತದೆ.

ಬೀಡಿ ಸೇದಿ ಕಾಲು ಕೊಳೆತ ಈ ಮನುಷ್ಯ ಆರ್ತನಾಗಿ ನನ್ನೆಡೆಗೆ ನೋಡುತ್ತಿದ್ದ, ಮೊದಲು ಆತನಿಗೆ ನೋವು ನಿವಾರಕ ಚುಚ್ಚುಮದ್ದು ನೀಡಿ, ಆತನ ರಕ್ತಪರೀಕ್ಷೆ ಇತ್ಯಾದಿಗಳನ್ನೆಲ್ಲ ಮಾಡಿಸಿ ಅಂದೇ ರಾತ್ರಿ ಆತನ ಕಾಲು ತೆಗೆದೆವು. ಶಸ್ತ್ರಚಿಕಿತ್ಸಾ ಕೋಣೆಯಿಂದ ಹೊರಬಂದಾಗ ಆತನ ಮುಖದ ಮೇಲೆ ಸಂತೋಷದ ಭಾವ. ಎಂಥ ವಿಪರ್ಯಾಸ.! ಯಾವ ಕಾಲಿನ ಸಹಾಯದಿಂದ ಊರು ಕೇರಿ ಸುತ್ತಿದ್ದನೋ, ಯಾವ ಕಾಲಿನಿಂದ ತಿರುಗಾಡಿ ತನ್ನ ಅನ್ನ ಸಂಪಾದಿಸಿದ್ದನೋ ಆ ಕಾಲನ್ನು ತೆಗೆದಾಗ ಸಂತಸ.!! ಮುಂದೆ ಮತ್ತದೇ ಔಷಧಿ, ಇಂಜೆಕ್ಷನ್, ಡ್ರೆಸ್ಸಿಂಗ್ ಇತ್ಯಾದಿಗಳ ‘ರಿಚುವಲ್’ಗಳು, ಅಷ್ಟೇ. ಬರೀ ಹತ್ತೇ ದಿನಗಳಲ್ಲಿ ಗಾಯ ಮಾಯ್ದು ಮನೆಗೆ ಹೊರಟ. ಬರುವಾಗ ಬಗಲಲ್ಲಿ ಬಡಿಗೆ ಹಿಡಿದುಕೊಂಡು ನಡೆಯುತ್ತ ಬಂದವ ಹೋಗುವಾಗ ಗಾಲಿ ಕುರ್ಚಿಯಲ್ಲಿ ಕುಳಿತಿದ್ದ. ಬದಿಯಲ್ಲಿ ಹರಿದ ಸೀರೆ ಉಟ್ಟ ದುಃಖತಪ್ತ ಹೆಂಡತಿ, ಹಿಂದೆ ಗಾಲಿ ಕುರ್ಚಿ ನೂಕುವ ಹಿರಿಮಗ.
ಮುಂದೆ ಆಗಾಗ ಬೇರೆ ಬೇರೆ ಕಾರಣಗಳಿಗಾಗಿ ಆಸ್ಪತ್ರೆಗೆ ಬರುತ್ತಿದ್ದ. ಬೀಡಿ ಬಿಟ್ಟ ಬಗ್ಗೆ ಕೇಳಿದರೆ ‘ಹ್ಞೂ’ ಅನ್ನುತ್ತಿದ್ದನಾದರೂ ಅವನು ಉತ್ತರಿಸಿದ್ದ ರೀತಿಯಿಂದ, ಬಿಟ್ಟಿಲ್ಲ ಎಂಬುದು ಸ್ಪಷ್ಟವಾಗುತ್ತಿತ್ತು. ಮತ್ತೆ ತಿಳಿಹೇಳಿ ಕಳಿಸುತ್ತಿದ್ದೆ. ನಾಲ್ಕೈದು ತಿಂಗಳ ನಂತರ ಅವನು ಮತ್ತೆ ಬಂದ. ಈ ಬಾರಿ ಎಡಗೈಯ ನಾಲ್ಕು ಬೆರಳುಗಳು ಕರ್ರಗಾಗಿದ್ದವು. ಹೆಬ್ಬೆರಳೊಂದು ಮಾತ್ರ ಉಳಿದಿತ್ತು. T.A.O.(Thromboangitis obliterans) ಎಂದು ವೈದ್ಯಕೀಯವಾಗಿ ಕರೆಸಿಕೊಳ್ಳುವ ಈ ರೋಗ ಪ್ರಮುಖವಾಗಿ ಕಾಲಿನ ರಕ್ತನಾಳಗಳನ್ನು ಆವರಿಸಿಕೊಳ್ಳುತ್ತದೆ. ಆದರೆ ಕೆಲವೊಬ್ಬರಲ್ಲಿ ಕೈಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ. ಈ ರೋಗಕ್ಕೆ ನಿಜವಾದ ಕಾರಣಗಳು ಪೂರ್ತಿಯಾಗಿ ತಿಳಿದಿಲ್ಲವಾದರೂ ಧೂಮಪಾನ ಮಾಡುವವರಲ್ಲಿ ಮಾತ್ರ ಸಂಭವಿಸುತ್ತದೆ. ಧೂಮಪಾನ ತ್ಯಜಿಸಿದರೆ ಮಾತ್ರ ಹತೋಟಿಗೆ ಬರಹುದಾದ ಈ ರೋಗಕ್ಕೆ ಆ ದಿನಗಳಲ್ಲಿ ಪರಿಣಾಮಕಾರಿಯಾದ ಚಿಕಿತ್ಸೆಗಳು ಲಭ್ಯವಿರಲಿಲ್ಲ. ಈಗ ಕೆಲವೊಂದು ಔಷಧಿಗಳು ಲಭ್ಯವಿದ್ದರೂ ಕೂಡ ಧೂಮಪಾನ ಮುಂದುವರಿಸಿದವರಲ್ಲಿ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಿಲ್ಲ. ಆಗ ಉಳಿದ ಒಂದೇ ಮಾರ್ಗವೆಂದರೆ ಕೊಳೆತ ಭಾಗವನ್ನು ಕತ್ತರಿಸಿ ತೆಗೆಯುವುದು. ಮತ್ತೆ ಅವನನ್ನು ಬಯ್ಯಬೇಕೆಂದುಕೊಂಡೆ. ಬಯ್ಯುವುದು ವ್ಯರ್ಥವೆಂದು ಗೊತ್ತಿತ್ತು. ಆದರೂ ಇದೇ ರೀತಿ ಮುಂದುವರಿದರೆ ಇನ್ನೊಂದು ಕೈ ಕೂಡ ನಿರುಪಯುಕ್ತವಾಗುತ್ತದೆಂದು ಎಚ್ಚರಿಕೆ ನೀಡಿ, ಕೊಳೆತ ನಾಲ್ಕು ಬೆರಳುಗಳನ್ನು ತೆಗೆದು ಉಪಚಾರ ಮಾಡಿ ಕಳಿಸಲಾಯಿತು. ಈ ಬಾರಿ ಅವರ ಮನೆ ಮಂದಿಯ ಮುಖದ ಮೇಲಿನ ನಿರಾಸೆ ಸ್ಪಷ್ಟವಾಗಿ ತೋರುತ್ತಿತ್ತು. ಅವರ ಯಾವ ಉಪದೇಶಕ್ಕೂ ಕಿವಿಗೊಡದೆ, ನಮ್ಮ ಬೆದರಿಕೆಗೂ ಜಗ್ಗದೆ ಅವನು ತನ್ನ ಚಟವನ್ನು ಮುಂದುವರಿಸಿದ್ದ.
ಅರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿದ್ದುಕೊಂಡು, ಸರಕಾರದಿಂದಲೇ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಬಳ್ಳಾರಿಯ ವೈದ್ಯಕೀಯ ವಿದ್ಯಾಲಯಕ್ಕೆ ನಿಯೋಜನೆಗೊಂಡಿದ್ದ ನಾನು ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿ ಅಲ್ಲಿಯೇ ಅಸಿಸ್ಟಂಟ್ ಸರ್ಜನ್ ಆಗಿ ಮುಂದುವರಿದೆ. ನಾನು ಎಮ್.ಎಸ್. ಮಾಡಿದ ಯೂನಿಟ್ ನಲ್ಲೆ ಕೆಲಸ ಮುಂದುವರಿಸಿದೆ. ಒಂದು ದಿನ ಓ.ಪಿ.ಡಿ. ಯಲ್ಲಿದ್ದಾಗ ಅದೇ ವ್ಯಕ್ತಿ ಬಂದು ನನ್ನೆದುರು ನಿಂತ. ನನಗೂ ಅವನಿಗೂ ಎಂಥ ಸಂಬಂಧ ಬೆಳೆದಿತ್ತೆಂದರೆ ತಮ್ಮ ಮನೆಯವರಿಗೆ ಏನೇ ಆದರೂ ನನ್ನನ್ನು ಹುಡುಕಿಕೊಂಡು ನನ್ನೆದುರು ಬಂದು ನಿಲ್ಲುತ್ತಿದ್ದರು. ಈಗ ಮತ್ತೆ ಬಂದಿದ್ದ, ಯಥಾರೀತಿ ದೈನ್ಯತೆಯ ಭಾವ ತುಂಬಿಕೊಂಡು. ಜೊತೆಗೆ ಅವನ ಕಿರಿಯ ಮಗ ಮತ್ತು ಹೆಂಡತಿ ಮಾತ್ರ. ದೊಡ್ದ ಮಗನೆಲ್ಲಿ ಎಂದು ಕೇಳಿದರೆ, ಇವನಿಗಾಗಿ ಬೇಸತ್ತು ಬೇರೆ ಮನೆ ಮಾಡಿಕೊಂಡಿದ್ದಾನೆ, ಎಂದು ಅವನ ಹೆಂಡತಿ ಹೇಳಿದಳು. ಮಗನಿಗೆ ಬೇಸರಿಸಿಕೊಂಡು ಹೋಗುವ ಅಧಿಕಾರ ಅವಕಾಶ ಇದೆ, ಆದರೆ ಹೆಂಡತಿಗೆ? ಈಗ ನೋಡಿದರೆ ಉಳಿದ ಒಂದು ಕೈಯನ್ನೂ ಕರ್ರಗಾಗಿಸಿಕೊಂಡು ಬಂದಿದ್ದ. ನನಗೆ ಅವನ ಕಷ್ಟ ನೋಡಲಾಗಲಿಲ್ಲ. ಈ ಬಾರಿ ಬೀಡಿ ಬಿಟ್ಟಿಲ್ಲದುದರ ಬಗ್ಗೆ ನಾನು ಕೇಳಲಿಲ್ಲ, ಅವನ ಹೆಂಡತಿಯೂ ಹೇಳಲಿಲ್ಲ. ಅದು ಗೊತ್ತಿದ್ದ ವಿಷಯವೇ ಆಗಿತ್ತಲ್ಲ. ಕೈ ಕಾಲುಗಳನ್ನು ಕತ್ತರಿಸಿ ಹಾಕಿದರೂ ಚಟ ಬಿಡಲು ಸಾಧ್ಯವಾಗದ ಹಂತ ತಲುಪಿಬಿಟ್ಟಿದ್ದವು, ಅವನ ಮನಸು ಹಾಗೂ ಶರೀರ. ಅವನ ದೇಹದ ಪ್ರತಿಯೊಂದು ಜೀವಕೋಶ ಕೂಡ ನಿಕೋಟಿನ್ ಗಾಗಿ ಹಂಬಲಿಸತೊಡಗಿತ್ತು. ತನ್ನನ್ನೇ ತಾನು ಬೈಯ್ದುಕೊಳ್ಳುವ ಸ್ಥಿತಿಯಲ್ಲಿ ಇದ್ದವನಿಗೆ ನಾನೂ ಬೈಯ್ದು ಅವನ ಕ್ಲೇಶವನ್ನು ಹೆಚ್ಚಿಸಬಾರದೆಂದು ನಿರ್ಧರಿಸಿ, ಸುಮ್ಮನೆ ಅಡ್ಮಿಟ್ ಮಾಡಿ, ಅಂದೇ ರಾತ್ರಿ ಅವನ ಕೈ ಕತ್ತರಿಸಿದೆವು.
ಅಂದು ನನಗಾದ ಸಂಕಟ ಅಷ್ಟಿಷ್ಟಲ್ಲ. ಇಂಥ ಸಂದರ್ಭಗಳಲ್ಲಿ ಜನರ ನೋವನ್ನು ‘ನಿಜವಾದ ಅರ್ಥದಲ್ಲಿ’ ಶಮನ ಮಾಡಲು ಸಾಧ್ಯವಾಗದಿರುವ ಈ ವೈದ್ಯಕೀಯದ ಬಗ್ಗೆ ಬೇಸರವಾಗುತ್ತದೆ. ಅಂದು ತುಂಬ ಬೇಸರಗೊಂಡು ಇನ್ನು ಮುಂದೆ ಕನಿಷ್ಟ ಒಂದು ವರ್ಷದವರೆಗೆ ಕೈ ಕಾಲು ಕತ್ತರಿಸಿ ಹಾಕುವ ಇಂಥ ಕೇಸುಗಳನ್ನು ನನಗೆ ದಯವಿಟ್ಟು ಕೊಡಬೇಡಿರೆಂದು ನಮ್ಮ ಪ್ರೊಫೆಸರ್ ಗೆ ಕೇಳಿಕೊಂಡೆ. ನಮ್ಮ ಪ್ರೊಫೆಸರ್ ನನ್ನೆಡೆ ನೋಡಿ ಅರ್ಥಗರ್ಭಿತವಾಗಿ ನಕ್ಕರಷ್ಟೇ. ಅವರ ಮುಖದಲ್ಲಿ ಹಲವು ವರ್ಷ ಇಂಥ ನೋವುಗಳನ್ನು ನೋಡಿದ, ಶಮನ ಮಾಡಿದ, ಕೆಲವೊಮ್ಮೆ ಅಸಹಾಯಕರಾದ ಅನುಭವದ ಭಾವ ಕಾಣುತ್ತಿತ್ತು. ಅಂದು ರಾತ್ರಿ ನನಗೆ ನಿದ್ರೆ ಬರಲಿಲ್ಲ. ಎರಡೂ ಕೈ, ಎರಡೂ ಕಾಲು ಕತ್ತರಿಸಿಕೊಂಡು ಅಸಯಾಕನಾದ ಅವನ ಮುಖ, ಬದಿಯಲ್ಲಿ ಅಳುತ್ತ ನಿಂತ ಅವನ ಹೆಂಡತಿ ಹಾಗೂ ಅಮಾಯಕ ಮಗನ ದೃಶ್ಯ ಕಣ್ಮುಂದೆ ಬರತೊಡಗಿತ್ತು.
ಮರುದಿನದಿಂದ ಯಥಾ ರೀತಿ ಔಷಧೋಪಚಾರ, ಡ್ರೆಸ್ಸಿಂಗ್ ಎಂಬ ‘ನಿತ್ಯಸತ್ಯ’.
ಏಳನೆಯ ದಿನ ನಾನು ಓ.ಪಿ.ಡಿ.ಯಲ್ಲಿದ್ದಾಗ ಹತ್ತನೇ ವಾರ್ಡಿನ ನರ್ಸ್ ಫೋನ್ ಮಾಡಿ, ಅರ್ಜೆಂಟಾಗಿ ವಾರ್ಡಿಗೆ ಬಂದು ಹೋಗಲು ತಿಳಿಸಿದಳು. ನನಗೆ ಸ್ವಲ್ಪ ಗಾಬರಿಯಾಯಿತು, ಆತನಿಗೆ ಏನಾದರೂ ಆಗಿರಬಹುದೇ, ಎಂದು. ಯಾಕೆಂದರೆ ಈ ಮೂರು ವರ್ಷಗಳಲ್ಲಿ ಅವನೊಂದಿಗೆ ಸ್ವಲ್ಪಮಟ್ಟಿನ ಅಟ್ಯಾಚ್ ಮೆಂಟ್ ಬೆಳೆದುಬಿಟ್ಟಿತ್ತು. ಅಲ್ಲಿ ಹೋದೊಡನೆ ನನ್ನನ್ನು ವಾರ್ಡಿನ ಬಾಗಿಲಲ್ಲಿ ನಿಲ್ಲಿಸಿ ಆ ನರ್ಸ್ ತೋರಿಸಿದ ದೃಶ್ಯದಿಂದ ನಾನು ಅವಾಕ್ಕಾಗಿ ಹೋದೆ.
…ಎರಡೂ ಕೈಗಳಿಲ್ಲದ ಅವನು ಬೀಡಿ ಸೇದುತ್ತಿದ್ದ !
ಹತ್ತು ವರ್ಷದ ಅವನ ಮಗ ತನ್ನ ಕೈಯಿಂದ ಇವನ ಬಾಯಿಗೆ ಬೀಡಿ ಇಡುತ್ತಿದ್ದ….!!
 

‍ಲೇಖಕರು G

January 1, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

13 ಪ್ರತಿಕ್ರಿಯೆಗಳು

  1. Prabhakar M. Nimbargi

    AS A REGULAR READER OF YOUR COLUMN, WHOLEHEARTEDLY I WISH YOU A HAPPY & PROSPEROUS NEW YEAR. By the way, I am also a chronic smoker; I know it is very difficult to stop it. I at least wish to reduce it. Thanks for the article.

    ಪ್ರತಿಕ್ರಿಯೆ
  2. ಭೀಮಣ್ಣ ಹುಣಸೀಕಟ್ಟಿ

    ಬೀಡಿಯಿಂದಾಗೇ
    ಕಳಕೊಂಡರೂ,
    ಸರ್ವಸ್ವ
    ಕೊನೆಗೂ
    ಬೀಡಿಯೇ ಆಯಿತೇ
    ಸರ್ವಸ್ವ !!

    ಪ್ರತಿಕ್ರಿಯೆ
  3. ಬಸ ವರಾಜ

    ಸರ್ ನಾನು ನಮ್ಮ ಚಿಕ್ಕಪ್ಪ ನವರಿಗೆ ಬಾಳ ವರ್ಷದಿಂದ ಕೇಳತಾಯಿದಿನಿ ಸಿಗರೇಟು ಬಿಟ್ಟು ಬಿಡಿ ಅಂತಾ ಮೊನ್ನೆ ವೆಕೆಶನ್ ಹೋದಾಗ ಹೇಳಿದಾರೆ ನೀನು ಮುಂದಿನವರ್ಷ ಬರುವದರೊಳಗೆ ಬೀಡತಿನಿ ಅಂತ …..ಭಯಾನಕವಾದ ಬರವಣಿಗೆ ಓದಲಿಕ್ಕೆಭಯ ಇನ್ನು ಅನುಭವ ಹೇಗಿರಬೇಕು ಅಬ್ಬಾ..

    ಪ್ರತಿಕ್ರಿಯೆ
  4. ಅಕ್ಕಿಮಂಗಲ ಮಂಜುನಾಥ

    ದೂಮ ಪಾನ ಮಾಡಬಾರದು ಅಂತ ಗೊತ್ತಿದ್ದೂ ಮತ್ತೆ ಮತ್ತೆ ಮಾಡುತ್ತಾರೆಂದ ಮೇಲೆ ಅದು ಚಟವೇ ಸರಿ.ನೀವು ತಿಳಿ ಹೇಳುತ್ತೀರಿ, ಆದರೆ ಜನ ಬೇಜವಾಬ್ದಾರಿ ತನದಿಂದ ಸತ್ತರೆ ಏನು ಕಮ್ಮಿ ಬಿತ್ತು ಅಂತ ಸೇದುತ್ತಲೇ ಇರುತ್ತಾರೆ. ಕಾರಣ ಅದು ಚಟ. ಅದನ್ನು ತಿಳಿ ಹೇಳಿದ ಮಾತ್ರಕ್ಕೆ ಬಿಟ್ಟುಬಿಡುವಷ್ಟು ಸುಲಬವಾದ ವಿಷಯವಾಗಿದ್ದಿದ್ದರೆ ಈ ವೇಳೆಗಾಗಲೇ ಪ್ರಪಂಚ ಧೂಮ ಪಾನ ಮುಕ್ತವಾಗುತ್ತಿತ್ತು ಮತ್ತು ಸುಮಾರು ಅರ್ದದಷ್ಟು ಮಾರಣಾಂತಿಕ ರೋಗಗಳು ಆ ಧೂಮ ಪಾನದಿಂದಲೇ ಬರುತ್ತವೆಂದು ಹೇಳುವುದರಿಂದ ಇಡೀ ಪ್ರಪಂಚವೇ ಬಹಳಷ್ಟು ಆರೋಗ್ಯ ಪೂರ್ಣ ವಾಗಿರುತ್ತಿತ್ತು. ಇಷ್ಟೆಲ್ಲಾ ಗೊತ್ತಿದ್ದೂ ತಂಬಾಕನ್ನು ಬೆಳೆಯಲೇ ಬಾರದೆಂಬ ಕಾನೂನು ಏಕಿಲ್ಲ? ಅಕಸ್ಮಾತ್ ಮದ್ಯವನ್ನೋ ತಂಬಾಕನ್ನೋ ನಿಶೇದಿಸಿದರೆ ಸರ್ಕಾರಗಳು ಉಳಿಯಲಾರವೆಂಬ ತಂತ್ರಗಾರಿಕೆ ಇರಬಹುದೇ? ಅಥವಾ ಸಿಗರೇಟು ತಯಾರಿಸುವ ಮದ್ಯ ತಯಾರಿಸುವ ಕಂಪೆನಿಗಳ ದೊಡ್ಡ ದೊಡ್ಡ ಕುಳಗಳು ತಮಗೆ ನೀಡುವ ಕೋಟ್ಯಂತರ ರೂ ಕಮೀಷನ್ ನಿಂತು ಹೋಗಿ ಬಿಡಬಹುದೆಂಬ ಆತಂಕ ವಿರ ಬಹುದೇ? ಅಥವಾ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಿ ಬಿಟ್ಟರೆ, ಔಷದಿ ತಯಾರಿಸುವ ಕಂಪೆನಿಗಳು ಮತ್ತು ದೊಡ್ಡ ದೊಡ್ಡದಾಗಿ ಓದಿ ದೊಡ್ಡ ದೊಡ್ಡ ಡಾಕ್ಟರುಗಳೆನಿಸಿ ಕೊಂಡವರು ಪಾಪರ್ರಾಗಿ ಬಿಡ ಬಹುದೆಂಬ ಹುನ್ನಾರವಿರ ಬಹುದೇ ಹೇಳಿ ಡಾಕ್ಟರೇ? ಗಾಂಜಾ ಅಫೀಮನ್ನು ನಿಷೇದಿಸಿದಂತೆ ನಿಷೇದಿಸಿದರೆ ಎಷ್ಟೇ ಕಳ್ಳತನದಲ್ಲಿ ಬಳಸಿದರೂ ಶೇಖಡಾ ಹತ್ತರಷ್ಟು ಜನರೂ ಉಪಯೋಗಿಸಲಿಕ್ಕೆ ಸಾದ್ಯವಾಗುತ್ತಿರಲಿಲ್ಲ. ಎಲ್ಲವೂ ಸರಕಾರದ ಕೈಯಲ್ಲೋ,ಅರಿತಿರುವ ಬುದ್ಧಿವಂತರ ಕೈಯಲ್ಲೇ ಇರುವಾಗ, ಕಲಿತ ಚಟವನ್ನು ಬಿಡಲಾಗದೆ ನರಳುತ್ತಿರುವ ಸಾಮಾನ್ಯ ಮಾನವರನ್ನು ದೂರುವುದರಿಂದ ಅವರಿಗೆ ಬುದ್ಧಿ ಹೇಳುವುದರಿಂದ ಸಾದ್ಯವಾದೀತೆ? ಯಾರೆಷ್ಟೇ ಹೇಳಿದರೂ ವ್ಯಸನಕ್ಕೆ ಬಿದ್ದವರನ್ನು ದಾರಿಗೆ ತರಲಿಕ್ಕೆ ಸಾದ್ಯವಿಲ್ಲದ ಮಾತು. ಅರಿತವರೆಲ್ಲ ಒಂದಾಗಿ ಬಹುಸಂಖ್ಯಾತರಾಗಿ ಸರ್ಕಾರದ ಮೇಲೆ ಕಾನೂನಿನ ಮೇಲೆ ಒತ್ತಡ ತಂದರೆ ಏನಾದರೂ ಫಲ ಸಿಗಬಹುದೆಂಬ ದೂರದ ಆಸೆಯನ್ನಾದರೂ ಇಟ್ಟು ಕೊಳ್ಳಬಹುದು.ಅದು ಬಿಟ್ಟು ಬುದ್ಧಿವಾದ ಹೇಳಿ ಬದಲಾವಣೆ ತರುತ್ತೇವೆಂದರೆ ಅದು ನಿಜಕ್ಕೂ ಹಾಸ್ಯಾಸ್ಪದವೇ ಸರಿ. ತಾವು ಸಮಾಜದ ಜನರ ಆರೋಗ್ಯದ ಬಗ್ಗೆ ಇಷ್ಟೊಂದು ಕಾಳಜಿ ಇಟ್ಟಿದ್ದೀರೆಂದ ಮೇಲೆ ನಿಮ್ಮ ಸೇವೆ ಮಾಡಿಸಿ ಕೊಳ್ಳುತ್ತಿರುವ ಆ ರೋಗಿಗಳೇ ಧನ್ಯರು.

    ಪ್ರತಿಕ್ರಿಯೆ
  5. G B SALAKKI

    Majoroty of .poor families are being targeted for such type of assassination.How ever your concern about this type of self crime is apricited. CONGTS FOR YOUR EFFORT

    ಪ್ರತಿಕ್ರಿಯೆ
  6. Jayashree B kadri

    Oh God. You are a very compassionate individual and write in such a moving manner Sir. Happy new year .

    ಪ್ರತಿಕ್ರಿಯೆ
  7. pundalik hugginavar

    ಸರ್ ನಮಸ್ತೇ….ಅತ್ಯಂತ ರೋಚಕವಾಗಿ ಬರೆದಿದ್ದೀರಿ. ನಿಮ್ಮ ಅಂಕಣಗಳ ರೆಗುಲರ್ ಓದುಗನಾದ ನಾನು ನಿಮ್ಮ ಬರಹವನ್ನು ತುಂಬಾ ಇಷ್ಟಪಡುತ್ತೇನೆ. ಆ ರೋಗಿಯ ಗೋಳಿಗೆ ನಿಮ್ಮ ತಾಳ್ಮೆಯ ಸೇವೆ ಪರಿಣಾಮಕಾರಿಯಾಗಲಿ ಎಂದು ಕೊನೆಯ ಸಾಲಿನವರೆಗೂ ಬೇಡಿಕೊಂಡೆ. ಆದ್ರೆ ತಾವು ಕೊನೆಗೆ ನೀಡಿದ Climax ನಗು ತರಿಸಿತು….ಚಟಕ್ಕೆ ಚಟ್ಟವೇ ಔಷಧಿಯೆನ್ನುವುದು prove ಆಯ್ತು…

    ಪ್ರತಿಕ್ರಿಯೆ
  8. ಅಂಗಡಿ ಇಂದುಶೇಖರ

    ಸರ್, ನಮ್ಮ ತಂದೆಯವರಿಗೂ ಬೀಡಿ ಸೇದುವ ಚಟವಿತ್ತು. ನಾವು ಎಷ್ಟೇ ಹೇಳಿದರೂ ಬಿಡುತ್ತಿರಲಿಲ್ಲ. “ಈ ಚುಟ್ಟಾ ಸೇದ್ಲಿಲ್ಲಾ ಅಂದ್ರ, ನಂಗ ಮುಂಜಾನಿ ಬಯಲ್ಕಡೇನ ಬರೊದಿಲ್ಲಲೇ” ಅಂತಿದ್ರು. ಸೊಸೆಯಂದಿರು ಬಂದ ಮೇಲೆ ಬಹಳ ಪ್ರಯತ್ನ ಪಟ್ಟು, ಆ ಚಟವನ್ನು ಬಿಡಿಸಿದ್ದರು..

    ಪ್ರತಿಕ್ರಿಯೆ
  9. krishnaR

    I am a regular reader of your column and your articles are very interesting. You have seen so much in life. Thanks for sharing all your memories.

    ಪ್ರತಿಕ್ರಿಯೆ
  10. lakshmikanth itnal

    ಮನಕಲಕುವ ಸಂವೇದನಾಶೀಲ ಬರಹ. ಈ ವ್ಯಸನವು ಅದೆಷ್ಟು ಅಮಾಯಕ ಜೀವಗಳನ್ನು ಬಲಿ ಪಡೆಯುವುದೋ ! ಈ ಹ್ಯಾಬಿಟ್ ಬಗ್ಗೆ ಹಿಂದೊಮ್ಮೆ I have written in a small book, ‘bhavya badukige divya sutragalu’ for students.In that book, HABIT: If you remove, H from it, A bit will remain,, if you again remove a from it, again ‘bit’ of it will remain,. if you remove, b’ from it, then again ‘it’ will remain, if you remove ‘i’ from ‘it’ then trace of it always remain. … ಮನಕಲಕುವ ಬರಹ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: