ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಹೀಗೊಬ್ಬ ಆಪದ್ಭಾಂದವನ ಕಥೆ


“ಜಟ್ಟಿಂಗಪ್ಪ ವಡ್ದರ್…. ಜಟ್ಟಿಂಗಪ್ಪ ವಡ್ದರ್….”
ಈಗ್ಗೆ ಸುಮಾರು ಏಳೆಂಟು ವರ್ಷಗಳ ಹಿಂದೆ, ಒಂದು ದಿನ ಬಾಗಲಕೋಟ ಜಿಲ್ಲೆಯ ಬೇಸಗೆಯ ಸುಡುಬಿಸಿಲನ ಮಧ್ಯಾಹ್ನ ನನ್ನ ಚೇಂಬರ್ ಬಾಗಿಲಲ್ಲಿ ನಿಂತು ನಮ್ಮ ಆಸ್ಪತ್ರೆಯ ಹುಡುಗ ಕೂಗುತ್ತಿದ್ದ. ಆಸ್ಪತ್ರೆಯ ನಿರೀಕ್ಷಣಾ ಕಕ್ಷೆಯಲ್ಲಿ ಕುಳಿತ ರೋಗಿಗಳು ಒಂದೇ ಕೂಗಿಗೆ ಓಗೊಡುವುದೇ ಇಲ್ಲ. ತಮ್ಮ ತಮ್ಮಲ್ಲೇ ದೊಡ್ಡ ದನಿಯಲ್ಲಿ ಮಾತಾಡುತ್ತಲೋ, ಒಬ್ಬರಿನ್ನೊಬ್ಬರ ಕಷ್ಟ ಸುಖ ಕೇಳುತ್ತಲೋ, ಕುಳಿತುಬಿಟ್ಟಿರುತ್ತಾರೆ. ತಮ್ಮ ರೋಗಗಳಿಗೆ ಪರಿಹಾರದ ಜೊತೆಗೆ ಬೇರೆ ಹಳ್ಳಿಗಳ “ಕಥೆ’ ಕೇಳುವ ಸೌಭಾಗ್ಯ. ಅಲ್ಲದೆ ನಮ್ಮಂಥ ಆಸ್ಪತ್ರೆಗಳಲ್ಲಿ ಶಾಂತತೆಯಿಂದ ಕುಳಿತು ತಮ್ಮ ಸರತಿ ಬಂದಾಗ ಒಳಬಂದು ತೋರಿಸಿಕೊಳ್ಳುವವರು ಕಡಿಮೆ.
ಏನಿದ್ದರೂ ಅವಸರ, ಧಾವಂತ. ಜೊತೆಗೇ ಗೌಜು ಗದ್ದಲ. ಶಿಸ್ತಿನ ಕೊರತೆ ಎದ್ದು ಕಾಣುತ್ತದೆ. ಇಂತಹದರಲ್ಲಿ ದಿನಾಲೂ ಬರುವ ನೂರಾರು ರೋಗಿಗಳನ್ನು ನೋಡಿ, ಪರೀಕ್ಷಿಸಿ, ಅವರ ಕಷ್ಟ ಸುಖಗಳನ್ನು ವಿಚಾರಿಸಿ, ಅವರ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸಿ ಔಷಧಿಗಳನ್ನು ಬರೆದು ಕೊಟ್ಟು ಅವರನ್ನು ಸಮಾಧಾನಿಸುವುದರಲ್ಲಿ ಸಾಕಾಗುತ್ತದೆ. ಕಷ್ಟ ಸುಖಗಳನ್ನು ವಿಚಾರಿಸದೆ ಬರೀ ರೋಗ ಪರೀಕ್ಷಿಸಿ ಔಷಧಿ ಬರೆದು ಕೊಟ್ಟರೆ, “ಡಾಕ್ಟರ್, ಈಗ ಮೊದಲಿನ ಹಾಂಗ ಇಲ್ಲ ಬಿಡಪ.. ನಿಷ್ಕಾಳಜಿ ಮಾಡತಾನ..” ಅನ್ನುವ ಮಾತುಗಳನ್ನು ತೇಲಿಬಿಡುತ್ತಾರೆ. ಈ ವಿಷಯದಲ್ಲಿ ಪೇಟೆಯಲ್ಲಿರುವ ವೈದ್ಯರು ಪರಮ ಸುಖಿಗಳು, ಎನಿಸುತ್ತದೆ. ಅಲ್ಲಿ ಬರುವ ಬಹಳಷ್ಟು ರೋಗಿಗಳು ಶಿಸ್ತಿನಿಂದ, ಶಾಂತರಾಗಿ ಕುಳಿತು, ತಮ್ಮ ಸರದಿ ಬಂದಾಗ “ಮೇ ಐ ಕಮಿನ್…” ಎನ್ನುತ್ತಾ ಒಳಬಂದು, ಹೇಳಿದ್ದನ್ನೆಲ್ಲ ಬೇಗನೆ ಅರ್ಥೈಸಿಕೊಂಡು, ತಮ್ಮ ರೋಗವಾಯಿತು ಉಪಚಾರವಾಯಿತು, ಎಂಬಂತೆ ಜಾಗೆ ಖಾಲಿ ಮಾಡುತ್ತಾರೆ. ಹೆಚ್ಚೆಂದರೆ ‘ಗೂಗಲ್’ ನಲ್ಲಿ ನೋಡಿದ ಒಂದೆರಡು ಪ್ರಶ್ನೆಗಳನ್ನು ಎಸೆದು ತಮ್ಮ ಪಾಂಡಿತ್ಯ ಪ್ರದರ್ಶನ ಮಾಡಿ, ಖುಷಿಪಟ್ಟು ಹೊರಡುತ್ತಾರೆ, ಏನೂ ‘ಬಾರ್ಗೇನ್’ ಮಾಡದೆ ದುಡ್ಡು ಕೊಟ್ಟು.
“ಜಟ್ಟಿಂಗಪ್ಪ ವಡ್ದರ್…”
ಮತ್ತೊಮ್ಮೆ ಜೋರಾಗಿ ಕರೆದಾಗ, ಸುಮಾರು ಅರವತ್ತೈದು ವಯಸ್ಸಿನ ವ್ಯಕ್ತಿಯೊಬ್ಬ ಒಳಬಂದ. ನೋಡಿದರೆ ಎಲ್ಲೋ ನೋಡಿದ ನೆನಪು. ಹೌದು, ಅವನು ನಮ್ಮೂರಿನವನೇ. ಅಂದರೆ ಸುಮಾರು ಎಂಭತ್ತು ಕಿಲೋಮೀಟರ್ ದೂರದಿಂದ ನನಗೆ ತೋರಿಸಲು ಬಂದಿದ್ದ. ನಾನು ಅವನನ್ನು ನೋಡದೆ ಅದಾಗಲೇ ಇಪ್ಪತ್ತೈದು ವರ್ಷಗಳಾದ್ದರಿಂದ ಬೇಗನೆ ಗುರುತು ಸಿಗಲಿಲ್ಲ. ಒಂದಿಷ್ಟು ಸಮಯದ ಮೇಲೆ ಗುರುತು ಸಿಕ್ಕಿ, ಅವನ ಮನೆ, ಮಕ್ಕಳು ಇತ್ಯಾದಿಗಳ ಬಗ್ಗೆ ವಿಚಾರಿಸಿ, ಪರೀಕ್ಷಿಸಲು ಪ್ರಾರಂಭಿಸಿದೆ. ಅಂತಹ ಗಂಭೀರ ಕಾಯಿಲೆಗಳಿರದಿದ್ದರೂ ವಯಸ್ಸಿಗನುಸಾರ ಕಾಡುವ ಕೆಮ್ಮು, ಉಬ್ಬಸ ಇತ್ಯಾದಿಗಳಿದ್ದವು. ಅವನ ರಕ್ತ, ಮೂತ್ರ ಇತ್ಯಾದಿಗಳನ್ನು ಪರೀಕ್ಷೆ ಮಾಡಿಸಿ, ಎಕ್ಸ್ ರೇ ತೆಗೆಯಿಸಿ, ಒಂದು ರೀತಿಯ ಸಂಪೂರ್ಣ ಚೆಕ್ ಅಪ್ ಗಳನ್ನೂ ಮುಗಿಸಿದೆ. ಎಲ್ಲ ಮುಗಿಸಿ ಅವನಿಗೆ ಅವಶ್ಯವಿದ್ದ ಔಷಧಿಗಳನ್ನು ನಮ್ಮ ಮೆಡಿಕಲ್ ಶಾಪ್ ನಿಂದಲೇ ಕೊಡಿಸಿದೆ.
ಎಲ್ಲ ಕೂಡಿ ಸುಮಾರು ಎರಡು ಸಾವಿರ ರೂಪಾಯಿಗಳಾದದ್ದನ್ನು ಅವನು ಕೊಡಲು ಬಂದಾಗ , ನಾನು ‘ಬೇಡ’ ಎಂದೆ.
ಅವನಿಗೆ ಅಚ್ಚರಿ.
“ಯಾಕ್ರೀ ಸಾಹೇಬ್ರ, ಬಿಲ್ ಯಾಕ ಬ್ಯಾಡ ಅಂತೀರಿ, ಔಷಧ ಏನ್ ನಿಮ್ಮ ಹೊಲದಾಗ ಬೆಳಿತಾವೆನ್ರಿ..” ಅಂದ.
“ಇಲ್ಲ, ಜಟ್ಟಿಂಗಪ್ಪ, ನೀ ನಮಗ ಮೊದಲ ಮಾಡಿದ ಉಪಕಾರಕ್ಕ , ನಾ ಬಿಡ್ತಿರೋ ಈ ಬಿಲ್ ಭಾಳ ಏನೂ ಅಲ್ಲ..” ಅಂದೆ.
“ನನಗ ನೆನಪ ಇಲ್ಲರೀ, ಸಾಹೇಬ್ರ , ನಿಮಗ ನಾ ಯಾವಾಗ ಉಪಕಾರ ಮಾಡೀನ್ರೀ…” ಅಂದ, ಹಳ್ಳಿ ಜನರ ಅದೇ ಮುಗ್ಧತೆಯಿಂದ.

ನನ್ನ ನೆನಪು ನನ್ನ ಎಂ.ಬಿ.ಬಿ.ಎಸ್. ದಿನಗಳಿಗೆ ಓಡಿತು. ಆಗ ನಾನು ಹುಬ್ಬಳ್ಳಿಯ ಕೆ.ಎಂ.ಸಿ.ಯಲ್ಲಿ ಕೊನೆಯ ವರ್ಷ ಎಂ.ಬಿ.ಬಿ.ಎಸ್. ಕಲಿಯುತ್ತಿದ್ದೆ. ನಮ್ಮದು ನಡುಮಧ್ಯಮ ವರ್ಗದ ಕುಟುಂಬ. ನಮ್ಮಪ್ಪ ನೂರಾರು ಎಕರೆ ಜಮೀನಿನ ಮಾಲೀಕ. ಆದರೆ ವಿಜಯಪುರ ಜಿಲ್ಲೆಯಲ್ಲಿ ಏನೂ ಇರದಿದ್ದರೂ ಬರಗಾಲವಂತೂ ಇದ್ದೆ ಇರುತ್ತದೆ. ಒಂದು ವರ್ಷ ಮಳೆಯಾದರೆ ಮೂರು ವರ್ಷ ಆಗುವುದೇ ಇಲ್ಲ. ಹೆಸರಿಗೆ ಜಮೀನುದಾರರಾದ ನಮ್ಮಪ್ಪನಂಥವರಿಗೆ ಮಕ್ಕಳಿಗೆ ಶಾಲೆ ಕಲಿಸುವುದು ಅತೀ ಕಷ್ಟದ ಕೆಲಸ. ಹೆಸರಿಗೆ ‘ಸಾಹುಕಾರ’ ಆದರೆ ಕೈಯಲ್ಲಿ ದುಡ್ಡಿರುತ್ತಿರಲಿಲ್ಲ. ನಡು ಮಧ್ಯಮ ವರ್ಗದವರ ಕಷ್ಟವೆಂದರೆ, ಬೇರೆಯವರಲ್ಲಿ ಕೆಲಸಕ್ಕೆ ಹೋದರೆ ಜನ ಮೂಗು ಮುರಿಯುತ್ತಾರೆ, ಹೋಗದಿದ್ದರೆ ಸಂಸಾರ ನಡೆಸುವುದು ಕಷ್ಟವಾಗುತ್ತದೆ. ಹೀಗಾಗಿ ಖರ್ಚು ನಿಭಾಯಿಸಲಿಕ್ಕೆ ಸಾಲ ಮಾಡುವುದು, ಸಾಲಕ್ಕೆ ಬಡ್ಡಿ ಕಟ್ಟುವುದು, ಮತ್ತೆ ಈ ಸಾಲ ಅದರ ಬಡ್ಡಿ ತೀರಿಸಲು ಇದ್ದ ಹೊಲಗಳನ್ನು ಮಾರುವುದು ಅನಿವಾರ್ಯವಾಗಿ ಬಿಡುತ್ತದೆ. ಅಂಥದರಲ್ಲಿ ಕಷ್ಟಪಟ್ಟು ತನ್ನ ಆರು ಜನ ಮಕ್ಕಳಿಗೂ ಶಿಕ್ಷಣಕ್ಕೆ ಯಾವುದೇ ಅಡಚಣಿಯಾಗದಂತೆ ನಿಭಾಯಿಸಿದ ಅಪ್ಪನನ್ನು ಆತ ಗತಿಸಿದ ಇಪ್ಪತ್ತೈದು ವರ್ಷಗಳ ನಂತರವೂ ನಾವೆಲ್ಲ ನೆನೆಯುತ್ತೇವೆ. ಅಷ್ಟು ಕಷ್ಟಪಟ್ಟು ನಮ್ಮನ್ನೆಲ್ಲ ಓದಿಸಿದ ಅಪ್ಪ ಈಗಿರಬೇಕಿತ್ತು, ಒಂದಿಷ್ಟು ಹಾಯಾಗಿ ನಮ್ಮೊಡನಿದ್ದು ಸುಖಪಡಲು, ಎಂದು ಹಲವು ಬಾರಿ ಅನಿಸುತ್ತದೆ. ಆದರೆ ನಾವು ಅಂದುಕೊಂಡಿದ್ದೆಲ್ಲ ನಡೆಯುವುದಿಲ್ಲವಲ್ಲ.
ನನ್ನ ವೈದ್ಯಕೀಯ ಕಲಿಕೆಯ ಮೊದಲ ಮೂರು ವರ್ಷಗಳನ್ನು ಕಷ್ಟ ಪಟ್ಟು ಹೇಗೋ ನಿಭಾಯಿಸಿದ ಅಪ್ಪನಿಗೆ ನಾನು ಕೊನೆಯ ವರ್ಷ ಬರುವುದರೊಳಗೆ ಸಾಲ ಹೆಚ್ಚಾಗಿಬಿಟ್ಟಿತ್ತು. ಅಲ್ಲದೆ ಎರಡು ವರ್ಷ ಭೀಕರ ಬರಗಾಲ, ಬೇರೆ. ಹೀಗಿರುವಾಗ ನನ್ನ ಖರ್ಚಿಗೆಂದು ನೂರು ರೂಪಾಯಿ ಕಳಿಸಲು ನಾನು ಪತ್ರ ಬರೆದಿದ್ದೆ. ಈಗಿನವರಿಗೆ ವಿಚಿತ್ರ ಎನಿಸಬಹುದು, ಆಗ ನನ್ನ ತಿಂಗಳ ಖರ್ಚಿಗೆ ಬೇಕಾಗುತ್ತಿದ್ದದ್ದು ಬರೀ ಒಂದು ನೂರು ರೂಪಾಯಿ ಮಾತ್ರ. ಆಗಿನ ದಿನಗಳಲ್ಲಿ ನನ್ನ ತಿಂಗಳ ಮೆಸ್ ಬಿಲ್ ೮೦ ರೂಪಾಯಿಗಳು. ಉಳಿದ ಇಪ್ಪತ್ತು ರೂಪಾಯಿಗಳಲ್ಲಿ ನನ್ನ ಇನ್ನುಳಿದ ಖರ್ಚು ನಿಭಾಯಿಸುತ್ತಿದ್ದೆ. ಪುಸ್ತಕ ಹಾಗೂ ಫೀಸ್ ಎಲ್ಲ ನನ್ನ ಸ್ಕಾಲರ್ಷಿಪ್ ನಲ್ಲಿ ಸಾಂಗವಾಗುತ್ತಿತ್ತು. ಅಪ್ಪ ಊರೆಲ್ಲ ಕೇಳಿದರೂ ಅಂದು ನೂರು ರೂಪಾಯಿ ದೊರಕಲಿಲ್ಲವಂತೆ. ಅದೇ ಕೊರಗಿನಲ್ಲಿ ಮನೆಗೆ ಬರುತ್ತಿರುವಾಗ ದಾರಿಯಲ್ಲಿ ಈ “ ವಡ್ಡರ ಜಟ್ಟಿಂಗಪ್ಪ” ನ ಭೆಟ್ಟಿ. ಆ ದಿನಗಳಲ್ಲಿ ಅವನು ಹಳ್ಳಿಮನೆಗಳನ್ನು ಕಟ್ಟುವುದರಲ್ಲಿ ಎತ್ತಿದ ಕೈ. ಅವನು ಕೈಯಲ್ಲಿ ಚಾಣ-ಸುತ್ತಿಗೆ ಹಿಡಿದು ಕಟೆಯತೊಡಗಿದನೆಂದರೆ ದಿನಕ್ಕೆ ಎಂಟ್ಹತ್ತು ಮೂಲೆಗಲ್ಲುಗಳನ್ನು ಸಲೀಸಾಗಿ ಕಟೆಯಬಲ್ಲವನಾಗಿದ್ದ. ಕಷ್ಟ ಪಟ್ಟು ದುಡಿದು ಚೆಂದದ ದೃಢವಾದ ಕತೆದ ಕಲ್ಲಿನ ಮನೆಗಳನ್ನು ಎಬ್ಬಿಸಿ ನಿಲ್ಲಿಸಿಬಿಡುತ್ತಿದ್ದ. ಜೊತೆಗೆ ಒಂದಿಷ್ಟು ದುಡ್ಡನ್ನೂ ಮಾಡಿದ್ದ. ಅಲ್ಲದೇ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು ಅವನ ಸ್ವಭಾವವೇ ಆಗಿತ್ತು.
“ಯಾಕ್ರೀ ಸಾವ್ಕಾರ್ರ, ಮಾರಿ ಸಣ್ಣದ ಮಾಡೀರಿ..” ಅಂತ ಕೇಳಿದಾಗ, ನಮ್ಮಪ್ಪ ಇದ್ದ ವಿಷಯ ಹೇಳಿದ್ದಾನೆ.
ತಾನು ಸ್ವತಹ ‘ಕೂಲಿ’ಯವನಾದ ಜಟ್ಟಿಂಗಪ್ಪ ದೊಡ್ಡ ಮನಸ್ಸು ಮಾಡಿ,
“ತಗೊಳ್ರಿ, ನೂರ್ ರೂಪಾಯಿ ಏನ್ ದೊಡ್ಡದು..” ಎಂದು, ತನ್ನ ಅಂಗಿಯ ಒಳಜೇಬಿನಿಂದ ನೂರು ರೂಪಾಯಿ ತೆಗೆದು ನಮ್ಮಪ್ಪನ ಕೈಯಲ್ಲಿಟ್ಟಿದ್ದಾನೆ. ಅಪ್ಪನ ಸಂತೋಷಕ್ಕೆ ಪಾರವೇ ಇರಲಿಲ್ಲ. ಎಂದೂ ತನ್ನ ಮಗನಿಗೆ ಇಲ್ಲ ಅಂದಿರದ ಅಪ್ಪನಿಗೆ ಈಗಲೂ ‘ಇಲ್ಲ’ ಅನ್ನದಂತೆ ಮಾಡಿದ ಈ “ಆಪತ್ಬಾಂಧವ”ನಿಗೆ ಕೃತಜ್ಞತೆ ತಿಳಿಸುತ್ತ,
”ನಿನ್ನ ಉಪಕಾರ ಭಾಳ ಆಯ್ತು ಜೆಟ್ಟಿಂಗ ” ಅಂದರೆ
“ಇರ್ಲಿ ಬಿಡ್ರೀ ಸಾವಕಾರ್ರ, ನಿಮ್ಮ ಮಗ ಡಾಕ್ಟರಾಗಿ ಬಂದ ಮ್ಯಾಲ ಒಂದ್ ಗುಳಿಗಿ ಕೊಟ್ರ ಸಾಕ್ರಿ, ಎಲ್ಲಾ ತೀರತೈತ್ರಿ..” ಅನ್ನುವ ವಿಶಾಲ ಹೃದಯದ ಮಾತಾಡಿದ್ದ.
ಅಂದು ಮನಿಯಾರ್ಡರ್ ಫಾರ್ಮ್ ನಲ್ಲಿ ನಡೆದ ಎಲ್ಲ ವಿಷಯವನ್ನು ಅಪ್ಪ ಬರೆದು ನನಗೆ ತಿಳಿಸಿದಾಗ ಜಟ್ಟಿಂಗಪ್ಪನ ಬಗೆಗೆ ನನ್ನ ಮನದ ಮೂಲೆಯಲ್ಲೊಂದು ಗೌರವದ, ಕೃತಜ್ಞತೆಯ ಸ್ಥಾನ ಭದ್ರವಾಗಿ ಕುಳಿತುಬಿಟ್ಟಿತ್ತು. ಇಂಥ ವಿಷಯಗಳನ್ನೆಲ್ಲ ಆಪ್ಪ ನನಗೆ ಪತ್ರ ಮುಖೇನ ಅಥವಾ ಮುಖತ: ನನಗೆ ಆಗಾಗ್ಯೆ ತಿಳಿಸುತ್ತಿದ್ದ. ಬಹುಶ: ಅವುಗಳನ್ನು ನೆನಪಿಟ್ಟು ಸಮಯ ಬಂದಾಗ ಅವರ ಋಣ ತೀರಿಸಲೆಂದೇ ಸೂಚ್ಯವಾಗಿ ಅಪ್ಪ ನನಗೆ ಇದನ್ನೆಲ್ಲಾ ತಿಳಿಸುತ್ತಿದ್ದನೇನೋ ಅನಿಸುತ್ತದೆ. ಅದಕ್ಕೆಂದೇ ಅಂದು ದುಡ್ಡು ಕೊಟ್ಟ ವ್ಯಕ್ತಿ ಇಂದು ನನ್ನೆದುರಿಗೆ ನಿಂತಾಗ ಅದೆಲ್ಲ ಮರುಕಳಿಸಿ ಅವನಿಗೆ ಕೃತಜ್ಞತೆ ಸಲ್ಲಿಸಲು ಸರಿಯಾದ ಅವಕಾಶ ಅನಾಯಾಸವಾಗಿ ದೊರೆಕಿಬಿಟ್ಟಿತ್ತು.
ಇದೆಲ್ಲವನ್ನೂ ಅವನಿಗೆ ನೆನಪಿಸಿ, ಆ ಕಾರಣಕ್ಕಾಗಿ ನಿನ್ನಿಂದ ನಾನು ಬಿಲ್ ಪಡೆಯುವುದಿಲ್ಲ, ಅಂದಾಗ,
“ಅದೇನ್ ದೊಡ್ಡ ಮಾತು, ಸಾಹೇಬ್ರ. ಅವತ್ತ ನನ್ನ ಹತ್ತೇಕ್ ರೊಕ್ಕ ಇದ್ವು. ನಿಮ್ಮ ತಂದಿಯವರೂ ನಮಗ ರಗಡ ಸರ್ತಿ ರೊಕ್ಕ ಕೊಟ್ಟಿದ್ರು. ಅದೂ ಅಲ್ಲದ ಆ ನೂರ್ ರೂಪಾಯಿನ ಮುಂದ ಒಂದ ತಿಂಗಳಿಗೆ ನಿಮ್ಮ ತಂದಿಯವರು ನನಗೆ ತಿರಗಿ ಕೊಟ್ಟಾರ್ರೀ…” ಅಂದ.
ನಾ ಅಂದೆ “ಹಂಗಲ್ಲ, ಜಟ್ಟಿಂಗಪ್ಪ, ಅವತ್ತಿನ ದಿನ ನೀ ಕೊಟ್ಟಿರಲಿಲ್ಲಂದ್ರ ನಮ್ಮಪ್ಪಗ ಭಾಳ ಕಷ್ಟ ಆಗ್ತಿತ್ತು. ಅದನ್ನ ನೀ ತಪ್ಪಿಸಿದೆಯಲ್ಲ, ಅದು ಮುಖ್ಯ ಅದ.. ಆ ಕಷ್ಟ ತಪ್ಪಿಸಿದ ನಿನಗ ಏನ್ ಕೊಟ್ರೂ ಕಡಿಮೀನ ..”
“ ಸಾಹೇಬ್ರ, ಎಷ್ಟ ನೆನಪ ಇಟ್ಟೀರಿ…? ಇಪ್ಪತ್ತೈದ ವರ್ಷದ ಹಿಂದ ಮಾಡಿದ ಒಂದ ಸಣ್ಣ ಉಪಕಾರನ ಇನ್ನ ನೆನಪ ಇಟ್ಟೀರಿ….ಇಂಥ ಗುಣ ಈಗಿನ ಕಾಲದ ಮಂದೀಗೆ ಎಲ್ಲೆದರೀ …ನಿಮಗ ಮುಂದ ಭಾಳ ಛಲೋ ಆಗತೈತ್ರಿ ..” ಎಂದು ನನ್ನನ್ನು ಹೊಗಳಲು ಶುರುಮಾಡಿದಾಗ ನನಗೂ ಸ್ವಲ್ಪ ಮುಜುಗರವೇ.
ಅಂದು ಅವನು ನೂರು ರೂಪಾಯಿ ಕೊಟ್ಟಾಗ ‘ನೂರು’ ಆತನಿಗೆ ದೊಡ್ಡದಾಗಿರಲಿಲ್ಲ, ಆದರೆ ಅದು ನಿಭಾಯಿಸಿದ ಕೆಲಸ ದೊಡ್ಡದಾಗಿತ್ತು. ಇಂದು ಕೂಡ ‘ಎರಡು ಸಾವಿರ’ ನನಗೆ ಖಂಡಿತ ದೊಡ್ಡದಲ್ಲ ಆದರೆ ಕೃತಜ್ಞತೆಯನ್ನು ತೋರಿಸಲು ಬಳಕೆಯಾದ ಸಂದರ್ಭ ದೊಡ್ಡದಿತ್ತು. ಅನೇಕ ನಿಮಿಷಗಳವರೆಗೆ ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ಇದ್ದುಬಿಟ್ಟೆವು. ನನ್ನ ಕೈಗಳಲ್ಲಿ ಆತನ ಕೈಗಳು. ನನ್ನ ಕಣ್ಣುಗಳಲ್ಲಿ ಕೃತಜ್ಞತೆ, ಆತನ ಕಣ್ಣುಗಳಲ್ಲಿ ಮೆಚ್ಚುಗೆ, ಗೌರವ. ಇಬ್ಬರ ಕಣ್ಣಲ್ಲೂ ವಿವರಿಸಲಾಗದ ಇನ್ನೂ ಯಾವುದೋ ಒಂದು ಭಾವದ ನೀರಿನ ತೆಳುಪೊರೆ. ಅನೇಕ ದಿನಗಳಿಂದ ಬಾಕಿ ಇದ್ದ ಎಂಥದೋ ಭಾರವನ್ನು ಕೆಳಗಿಳಿಸಿದ ಭಾವ ನನ್ನಲ್ಲಿತ್ತು.
ಈ ದಿನಕ್ಕಾಗಿ ನಾನು ಕಾಯುತ್ತಿದ್ದೆನೆ?
ಅಥವಾ
ಅಕಸ್ಮಾತ್ ಅವನು ಎದುರು ಬಂದು ನಿಂತಾಗ ಹಳೆಯದೆಲ್ಲಾ ಮರುಕಳಿಸಿ ಹೀಗಾಯಿತೇ?
ಗೊತ್ತಾಗಲಿಲ್ಲ.
ಅಲ್ಲಿ ಮಾತು ಮೌನವಾಗಿತ್ತು. ಮೌನಕ್ಕೊಂದು ಮೌಲ್ಯವಿತ್ತು….!!
 

‍ಲೇಖಕರು G

November 27, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

10 ಪ್ರತಿಕ್ರಿಯೆಗಳು

  1. Dr.Ratna Kulkarni

    ಕೃತಜ್ಞತಾ ಭಾವವೇ ಮರೆಯಾಗುತ್ತಿರುವ ಈಗಿನ ದಿನಗಳಲ್ಲಿ ಇಂಥದೊಂದು ಲೇಖನ ಓದಿ ಸಂತೋಷವಾಯಿತು.

    ಪ್ರತಿಕ್ರಿಯೆ
  2. Prabhakar M. Nimbargi

    ಅನೇಕ ದಿನಗಳಿಂದ ಬಾಕಿ ಇದ್ದ ಎಂಥದೋ ಭಾರವನ್ನು ಕೆಳಗಿಳಿಸಿದ ಭಾವ ನನ್ನಲ್ಲಿತ್ತು. Can we ever repay the help received in our dire conditions? No, never. No amount can be equal to that. But I have experience of having helped some to pay their examination fees when I was a research student, one boy didn’t fill the exam application form that time and not bothered to repay it; on the other hand he vacated my neighbourhood without intimating me.Behaviour of people varies from person to person.

    ಪ್ರತಿಕ್ರಿಯೆ
  3. ಅಕ್ಕಿಮಂಗಲ ಮಂಜುನಾಥ

    ತಾವು ಮಾಡಿದ ಅಲ್ಪ ಸ್ವಲ್ಪ ಸಹಾಯಗಳನ್ನೇ ಮಹಾಕಾರ್ಯಗಳೆಂದು ಜಾಹೀರುಪಡಿಸುವ ಇಂದಿನ ದಿನಗಳಲ್ಲಿ ಅಥವಾ ಏನೂ ಮಾಡದೆಯೇ ಮಹಾ ಪೋಟು ಪಡಿಸಿ ಬಿಟ್ಟಿದ್ದೇವೆಂದು ಬೊಂಬಡಾ ಬಾರಿಸುವ ನಮ್ಮ ನಾಯಕರುಗಳ ನಡುವೆ ಈ ಜಟ್ಟಿಂಗಪ್ಪ ವಡ್ಡರ್ ವಿಶಿಷ್ಟ ವ್ಯಕ್ತಿಯಾಗಿ ನಿಲ್ಲುತ್ತಾನೆ.ಹಾಗೆಯೇ ದಶಕಗಳ ಹಿಂದಿನ ಸಹಾಯವನ್ನೂ ಮರೆಯದೆ ವಾಪಸ್ಸು ತೀರಿಸುವ ನಿಮ್ಮ ಕೃತಜ್ಞತಾಭಾವವೂ ಅಷ್ಟೇ ಮುಖ್ಯವಾದದ್ದು. ಇಂತಹ ಮಾನವೀಯ ಗುಣಗಳನ್ನು ಹೊಂದಿರುವ ಲೇಖನವನ್ನು ನಮಗೆ ಉಣಬಡಿಸಿದ್ದಕ್ಕೆ ತಮಗೆ ಅಭಿನಂದನೆಗಳು.

    ಪ್ರತಿಕ್ರಿಯೆ
  4. Dr. S.R . Kulkarni.

    This is one incident that can happen in anybody’s life. In one or the other way we are under the debt of somebody. Question is how we remember it, how we repay it& how we enjoy the scenario. Further the story tells about the wonderful culture you have developed & the values your holy father has tried to add in your life without making a fuss.
    At this juncture I am reminded of a quote. ‘Debts are usually a burden. It is not an ordinary debt & no burden except the feeling of warm gratitude which may ache in one until expressed’.

    ಪ್ರತಿಕ್ರಿಯೆ
  5. Shevanti

    It’s a lovely write up of a very routine experience in many a lives. It made me recall a few incidents in my own life but I can’t narrate them as beautifully !

    ಪ್ರತಿಕ್ರಿಯೆ
  6. DRGCRAVI

    Very good morning kubsad
    You are under the wrong impression about the “well to do and Google educated” patients we see.
    Actually many of them are too knowledgeable

    ಪ್ರತಿಕ್ರಿಯೆ
  7. Anonymous

    ಅಲ್ಲಿ ಮಾತು ಮೌನವಾದಾಗ ಮೌನದಲ್ಲಿಯೂ ಮಾತಿಿನ ಧ್ವನಯಿತ್ತು!.. ತುಂಬಾ ಚೆನ್ನಾಗಿ ಬರೆದಿದ್ದಿರಿ.. ಓದಿ ಖುಷಿಯಾಯಿತು.

    ಪ್ರತಿಕ್ರಿಯೆ
  8. Avinash R N

    ಅಲ್ಲಿ ಮಾತು ಮೌನವಾದಾಗ, ಮೌನದಲ್ಲಿಯೂ ಮಾತಿಿನ ಧ್ವನಿಯಿತ್ತು!.. ತುಂಬಾ ಚೆನ್ನಾಗಿ ಬರೆದಿದ್ದಿರಿ.. ಓದಿ ಖುಷಿಯಾಯಿತು.

    ಪ್ರತಿಕ್ರಿಯೆ
  9. ravi jammihal

    Nice presentation of an uncommon virtue of present day mechanical life. One need not be rich to help but one needs to be mentally rich to remember the help.

    ಪ್ರತಿಕ್ರಿಯೆ
  10. ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ

    ಮೌನದೊಳಗಿನ ಸಂಧೇಶ ಮನದೊಳಗಿಳಿಯಿತು.
    ತುಂಬಾ ಚೆನ್ನಾಗಿದೆ ಸರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: