ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಅವನನ್ನು ಉಳಿಸಿಕೊಳ್ಳಲಾಗಲೇ ಇಲ್ಲ

ವ್ಯರ್ಥಗೊಂಡ ಒಂದು ಯತ್ನ..

ಒಂದು ಬೆಳಗಿನ ಜಾವ, ವಾಕಿಂಗ್ ಡ್ರೆಸ್ ಹಾಕಿಕೊಂಡು ಇನ್ನೇನು ಮನೆಯಿಂದ ಹೊರಡಬೇಕು, ಆಗ ನಮ್ಮ ಆಸ್ಪತ್ರೆಯಿಂದ ಕರೆ ಬಂದಿತು. ಒಬ್ಬ ವಿಷ ಸೇವಿಸಿದವ ಬಂದಿದ್ದಾನೆಂದೂ, ಸೀರಿಯಸ್ ಇದ್ದಾನೆಂದೂ, ಬದುಕುವ ಲಕ್ಷಣಗಳು ಕಡಿಮೆ ಇವೆಯೆಂದೂ ಒಂದೇ ಉಸಿರಿನಲ್ಲಿ ನಮ್ಮ ಸಹಾಯಕ ಹೇಳಿದ. ಅಂದಿನ ವಾಕಿಂಗ್ ಗೆ ಅನಿವಾರ್ಯವಾಗಿ ವಿದಾಯ ಹೇಳಿ, ಬಟ್ಟೆ ಬದಲಾಯಿಸದೆ ಆಸ್ಪತ್ರೆಯೆಡೆಗೆ ದೌಡಾಯಿಸಿದೆ.
ಅನೇಕ ಬಾರಿ ಹೀಗಾಗುತ್ತದೆ. ಬೆಳಿಗ್ಗೆಯಿಂದ ಏನೇನೊ ಯೋಜನೆಗಳನ್ನು ಹಾಕಿಕೊಂಡು ಈ ದಿನ ಇಂತಿಂಥದನ್ನು ಮಾಡೋಣ ಎಂದುಕೊಂಡಿರುತ್ತೇವೆ. ಆದರೆ ಹೀಗೆ ಏನೋ ಒಂದು ತುರ್ತು ರೋಗಿ ಬಂದು ನಮ್ಮ ಎಲ್ಲ ಯೋಜನೆ- ಯೋಚನೆಗಳು ತಲೆಕೆಳಗಾಗುತ್ತವೆ. ನಮ್ಮ ಮನೆ ಮಂದಿಯೂ ಇಂಥ ಧಿಡೀರ್ ಬದಲಾವಣೆಗೆ ಹೊಂದಿಕೊಂಡು ಬಿಟ್ಟಿರುತ್ತಾರೆ. ಅನೇಕ ಬಾರಿ ನಮ್ಮ ಹತ್ತಿರದವರ ಶುಭಕಾರ್ಯಗಳನ್ನೂ ತಪ್ಪಿಸಿ ಅವರ ಕೆಂಗಣ್ಣಿಗೆ ತುತ್ತಾಗಿದ್ದೂ ಇದೆ. ಆದರೆ ಅದು ಅನಿವಾರ್ಯ ಕೂಡ. ಯಾಕೆಂದರೆ ಕೆಲವೊಮ್ಮೆ ನಮ್ಮ ಸ್ವಂತ ಸುಖ ಸಂತೋಷಕ್ಕಿಂತಲೂ ಒಂದು ಜೀವ ಮುಖ್ಯವಾಗುತ್ತದೆ.
ನಾನು ಹುಬ್ಬಳ್ಳಿಯ ಕೆ.ಎಂ.ಸಿ.ಯಲ್ಲಿ ಮೊದಲ ವರ್ಷ ವೈದ್ಯಕೀಯ ಕಲಿಯುವಾಗ ನಮ್ಮ ಕಾಲೇಜ್ ನಲ್ಲಿ ಒಂದು ಸೆಮಿನಾರ್ ನಡೆಯಿತು. ಅದು ವೈದ್ಯರು, ವಕೀಲರು, ಪೋಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದ ಚರ್ಚಾಸಭೆ. ಆಲ್ಲಿ ಮಾತಾಡಿದ ಬಹುತೇಕ ವೈದ್ಯರು, ತಾವು ರಾತ್ರಿ ಹಗಲೆನ್ನದೆ ಕೆಲಸ ಮಾಡಬೇಕಾಗುತ್ತದೆಂದೂ, ವೈಯಕ್ತಿಕ ಜೀವನವೇ ಇಲ್ಲವೆಂದೂ ಪ್ರತಿಪಾದಿಸಿದ್ದರು. ಆಗ ಪೋಲೀಸ್ ಅಧಿಕಾರಿಯೊಬ್ಬರು ಹೇಳಿದ ಒಂದು ಮಾತು ನನ್ನ ಮನದಲ್ಲಿ ಅಚ್ಚಳಿಯದೆ ಉಳಿಯಿತು. ಅವರು ತಮ್ಮ ಭಾಷಣದಲ್ಲಿ, “ನಿಮಗೆ ವೈದ್ಯರಾಗಲು ಸಮಾಜ, ರೋಗಿಗಳು, ಪೊಲೀಸರು, ವಕೀಲರು ಅಥವಾ ಮತ್ತಾರಾದರೂ ವಿನಂತಿ ಮಾಡಿಕೊಂಡಿದ್ದರೇ? ನಿಮಗೇ ಬೇಕಾಗಿ, ನಿಮ್ಮ ಸ್ವಂತ ನಿರ್ಧಾರದಿಂದ ಈ ವೃತ್ತಿಯನ್ನು ಆರಿಸಿಕೊಂಡಿದ್ದೀರಿ, ಹೀಗಾಗಿ ಗೊಣಗುವುದನ್ನು ಬಿಟ್ಟು ಸಂತೋಷದಿಂದ ಈ ವೃತ್ತಿಯ ಸಾಧಕ ಬಾಧಕಗಳನ್ನು ಸ್ವೀಕರಿಸಬೇಕು” ಅಂದರು. ಅಂದೇ ನಾನು ನಿರ್ಧರಿಸಿಬಿಟ್ಟೆ, ‘ರೋಗಿ ಯಾವಾಗ ಬಂದರೂ ಸಮಾಧಾನದಿಂದ ನೋಡುವುದು. ನನ್ನ ಪ್ರತಿದಿನದ ಎಲ್ಲ ಸಮಯವೂ ಅವರದೆ, ಅವರಾಗಿ ಬಿಟ್ಟುಕೊಟ್ಟ ವೇಳೆಯಷ್ಟೇ ನನ್ನದು.’ ಎಂದು. ಅದು ನನಗೆ ಮಾನಸಿಕ ಶಾಂತಿಯನ್ನೂ, ರೋಗಿಗಳಿಗೆ ಅನುಕೂಲವನ್ನೂ ಮಾಡಿಕೊಟ್ಟಿದೆ. ಜೊತೆಗೆ ಬದ್ಧತೆಯನ್ನೂ ನೀಡಿದೆ.
ಆಸ್ಪತ್ರೆ ತಲುಪಿದರೆ ಅಲ್ಲಿ ಜನ ಜಾತ್ರೆ. ನೂರಾರು ಜನ ಸೇರಿ ನನ್ನ ಬರುವಿಕೆಗೆ ಕಾಯುತ್ತಿದ್ದರು. ಅಷ್ಟೊತ್ತಿಗೆ ನಮ್ಮ ಸಿಬ್ಬಂದಿ ವರ್ಗದವರು ರೋಗಿಯನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಸಾಗಿಸಿ ಅವನ ಹೊಟ್ಟೆಯಿಂದ ವಿಷ ತೆಗೆಯಲು ನಳಿಯನ್ನು ಹಾಕತೊಡಗಿದ್ದರು. ಅವನು ಇಪ್ಪತ್ತು ಇಪ್ಪತ್ತೆರಡರ ಕಟ್ಟುಮಸ್ತಾದ ಆರೋಗ್ಯಪೂರ್ಣ ಯುವಕ. ಅವನ ತಂದೆ ತಾಯಿ ದೀನರಾಗಿ ಕೈಮುಗಿದು ನಿಂತಿದ್ದಾರೆ. ಅವರ ಬಾಯಿಂದ ಮಾತು ಹೊರಡುತ್ತಿಲ್ಲ. ನಾನು ಪರೀಕ್ಷೆ ಮಾಡಿದರೆ ಅವನು ಪ್ರಜ್ಞಾಹೀನನಾಗಿದ್ದ, ಆತನ ಮೈಯೆಲ್ಲಾ ತಣ್ಣಗಾಗಿ, ನಾಡಿ ಕ್ಷೀಣವಾಗಿ, ರಕ್ತದೊತ್ತಡ ಸಿಗದ ಸ್ಥಿತಿ ತಲುಪಿದ್ದ. ಕಣ್ಣು ಪಾಪೆಯನ್ನು ಪರೀಕ್ಷಿದರೆ ಅದು ಸೂಜಿ ಮೊನೆಯಷ್ಟಾಗಿತ್ತು. ಉಸಿರು ನಿಲ್ಲುವ ಸ್ಥಿತಿ ತಲುಪಿದ್ದ. ಅಂದರೆ ಆತ ಸೇವಿಸಿದ ವಿಷದ ಪ್ರಮಾಣ ಹೆಚ್ಚಾಗಿತ್ತಲ್ಲದೆ, ಅವನನ್ನು ಆಸ್ಪತ್ರೆಗೆ ತರುವುದನ್ನೂ ತಡಮಾಡಿದ್ದಾರೆ ಎನಿಸಿತು. ಎಂದಿನಂತೆ ನಮ್ಮ ಆಸ್ಪತ್ರೆಯ ಸಿಬ್ಬಂದಿಯೊಡಗೂಡಿ ಅವನನ್ನು ಹೇಗಾದರೂ ಉಳಿಸಲೇಬೇಕೆಂದು ಧೃಡ ನಿರ್ಧಾರದೊಂದಿಗೆ ಕಾರ್ಯಪ್ರವೃತ್ತನಾದೆ. ಮೊದಲು ಅವನನ್ನು ಕೃತಕ ಉಸಿರಾಟ ಯಂತ್ರಕ್ಕೆ ಜೋಡಿಸಿ ಅವನ ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಹೆಚ್ಚಿಸಲು ಶುರುವಿಟ್ಟುಕೊಂಡೆವು. ಮೂಗಿನ ಮುಖಾಂತರ ನಳಿ ತೂರಿಸಿ ಅವನ ಹೊಟ್ಟೆಯಲ್ಲಿ ಇನ್ನೂ ಉಳಿದಿರಬಹುದಾದ ವಿಷವನ್ನು ತೊಳೆದು ತೆಗೆದು, ಬಟ್ಟೆ ಬದಲಾಯಿಸಿ,ತೀವ್ರ ನಿಗಾ ಘಟಕದಲ್ಲಿ ಇಟ್ಟು, ವಿಷ ವಿರೋಧಿ ಇಂಜೆಕ್ಷನ್ ಪ್ರಾರಂಭಿಸಿದೆವು.

ಪೊಲೀಸರಿಗೆ ತಿಳಿಸುವುದು, ಅವರ ಬಂಧುಗಳಿಗೆ ಆತನ ಸ್ಥಿತಿಯ ಬಗೆಗೆ ವಿವರಿಸುವುದು ಇತ್ಯಾದಿಗಳೆಲ್ಲ ಮುಗಿದ ಮೇಲೆ ಸ್ವಲ್ಪ ನಿರಾಳವಾಗಿ ಕುಳಿತು ಅವನ ತಂದೆ ತಾಯಂದಿರನ್ನು ಕರೆದು ಅವನು ವಿಷ ಸೇವಿಸಿದ ಕಾರಣ ಕೇಳಿದೆ. ನಾವು ಕೊಡುವ ಔಷಧೋಪಚಾರಕ್ಕೂ ಅವನು ವಿಷ ಸೇವಿಸಲು ಕಾರಣವಾಡ ಸಂದರ್ಭಕ್ಕೂ ಯಾವುದೇ ರೀತಿಯ ಸಂಬಂಧವಿರದಿದ್ದರೂ ಅದು ಆಮೇಲೆ ಕೌನ್ಸೆಲ್ಲಿಂಗ್ ಗೆ ಉಪಯೋಗವಾಗುತ್ತದೆ. ನಡೆದದ್ದಿಷ್ಟು. ಅವನು ತಮ್ಮ ಜಾತಿಯದಲ್ಲದ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ, ಅವಳೂ ಇವನನ್ನು ಪ್ರೀತಿಸುತ್ತಿದ್ದಾಳೆ. ಆದರೆ ಹುಡುಗಿಯ ಅಣ್ಣಂದಿರು ಇದನ್ನು ವಿರೋಧಿಸಿದ್ದರಿಂದ ಈಗ ಹುಡುಗಿ ಹಿಂಜರಿದಿದ್ದಾಳೆ. ಅಷ್ಟಕ್ಕೇ ಇವನು ಸಾಯುವ ನಿರ್ಧಾರ ತೆಗೆದುಕೊಂಡು ಸುಲಭವಾಗಿ ದೊರಕುವ ಕೀಟನಾಶಕದ ಇಡೀ ಬಾಟಲಿಯನ್ನು ಆಪೋಶನಗೈದು ತೋಟದಲ್ಲಿ ಮಲಗಿ ಬಿಟ್ಟಿದ್ದಾನೆ. ಬದಿಯಲ್ಲಿನ ಜನ ಇವನನ್ನು ನೋಡಿ ಆಸ್ಪತ್ರೆಗೆ ಕರೆತಂದಿದ್ದಾರೆ.
ಕೆಲವೊಮ್ಮೆ ಎಂಥ ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆಗೆ ಶರಣಾಗುತ್ತಾರೆ, ಈ ಯುವಜನಾಂಗ ಎನಿಸುತ್ತದೆ. ಹಾಗೆ ನೋಡಿದರೆ ಕಾರಣ ಕ್ಷುಲ್ಲಕವೋ, ದೊಡ್ಡದೋ ಆತ್ಮಹತ್ಯೆ ಎಂದಿಗೂ ಪರಿಹಾರವಲ್ಲ. ವಿಪರ್ಯಾಸವೆಂದರೆ ಇದು ಆತ್ಮಹತ್ಯೆಗೆ ಶರಣಾಗುವವರಿಗೂ ಗೊತ್ತಿರುತ್ತದೆ.! ಆದರೆ ಆ ಕ್ಷಣದಲ್ಲಿ ಮನಸ್ಸು ವ್ಯಗ್ರವಾಗಿ ಯಾವುದನ್ನೂ ಯೋಚಿಸದ ಸ್ಥಿತಿ ತಲುಪಿರುತ್ತದೆ. ಬಹುತೇಕ ಜನ ತಮ್ಮ ಜೀವನದ ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಒಂದಿಲ್ಲ ಒಂದು ಬಾರಿ ಆತ್ಮಹತ್ಯೆಯ ಕೂಪದಲ್ಲಿ ಇಣುಕಿರುತ್ತಾರೆ.. ಗಟ್ಟಿ ಮನಸ್ಸಿನವರು ಆ ಸ್ಥಿತಿಯನ್ನು ಗೆದ್ದು ಹೊರಬರುತ್ತಾರೆ. ದುರ್ಬಲ ಮನಸ್ಸಿನವರು ಸೋತು ಮುಳುಗಿಬಿಡುತ್ತಾರೆ. ದುರಂತವೆಂದರೆ ಆತ್ಮಹತ್ಯೆಯ ಪಿಡುಗು ಸ್ಥಿತಿವಂತರು, ಬಡವರು, ಸಣ್ಣವರು, ವಯಸ್ಸಾದವರು ಮುಂತಾದ ಯಾರನ್ನೂ ಬಿಟ್ಟಿಲ್ಲ. ಅದು ಎಲ್ಲರನ್ನೂ ಸಮಾನವಾಗಿ ಕಾಡಿದೆ. ಹತ್ತು ವರ್ಷದ ಹುಡುಗರಿಂದ ಮುಪ್ಪಾನ ಮುದುಕರು ಆತ್ಮಹತ್ಯೆಗೆ ಯತ್ನಿಸಿದ್ದನ್ನು ನಾನು ನೋಡಿದ್ದೇನೆ. ಅವರವರಿಗೆ ಅವರದೇ ಆದ “ಸಕಾರಣಗಳು”.
ಇಡೀ ದಿನ ಅವನೊಂದಿಗೆ ನಾನು, ನಮ್ಮ ಸಿಬ್ಬಂದಿ ನಿಂತು ಮುತುವರ್ಜಿಯಿಂದ ಉಪಚಾರಮಾಡಿದಾಗ ಆತನ ಸ್ಥಿತಿ ಒಂದು ತಹಬಂದಿಗೆ ಬಂದಿತಾದರೂ ಪ್ರಜ್ಞೆ ಮರುಕಳಿಸಲಿಲ್ಲ. ಕೃತಕ ಉಸಿರಾಟ ಯಂತ್ರ ಅವನ ಪುಪ್ಪುಸದೊಳಗೆ ಗಾಳಿ ತುಂಬುವುದನ್ನೂ, ರಕ್ತನಾಳಗಳಲ್ಲಿ ಹರಿದ ದ್ರಾವಣಗಳು ಅವನಿಗೆ ಶಕ್ತಿ ತುಂಬುವುದನ್ನೂ ಮುಂದುವರಿಸಿದ್ದವು. ಜೊತೆಗೆ ಅನೇಕ ರಕ್ತ ಪರೀಕ್ಷೆ, ನಾಡಿ ಬಡಿತ, ರಕ್ತದೊತ್ತಡ, ಕಣ್ಣು ಪಾಪೆ ಪರೀಕ್ಷೆಗನುಸಾರ ವಿಷ ನಿರೋಧಕ ಔಷಧೋಪಚಾರಗಳು ಸಾಗಿದ್ದವು. ಇಂಥ ಪ್ರತಿಯೊಬ್ಬ ರೋಗಿಯೂ ನಮಗೊಂದು ‘ಚಾಲೆಂಜ್’ ಇದ್ದಂತೆ. ರೋಗಿಯ ಬಗೆಗಿನ ಸ್ವಲ್ಪವೇ ಅಲಕ್ಷ ಆತನ ಪ್ರಾಣಕ್ಕೆ ಸಂಚಕಾರ ತರಬಹುದೆನ್ನುವ ಚಿಂತೆಯ ಜೊತೆಗೆ, ಐದು ನಿಮಿಷಕ್ಕೊಮ್ಮ ರೋಗಿಯ ಸಂಬಂಧಿಕರ ಆತಂಕದ ಪ್ರಶ್ನೆಗಳು, ಅವರು ನಮ್ಮೆಡೆ ಬೀರುವ ಸಂಶಯಾತ್ಮಕ ದೃಷ್ಟಿ, ಎಲ್ಲೆಡೆಯಿಂದ ಹರಿದು ಬರುವ “ಲೀಡರ್” ಗಳು ನೀಡುವ ವಿಚಿತ್ರ, ಉಚಿತ ಸಲಹೆಗಳು ನಮ್ಮ ಮಾನಸಿಕ ತಲ್ಲಣಕ್ಕೆ ಕಾರಣವಾಗುತ್ತವೆ. ಮೊದಲೇ ಗಂಭೀರ ಸ್ಥಿತಿಯಲ್ಲಿರುವ ರೋಗಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ ಒಂದು ಜೀವ ಹೋಗುತ್ತದಲ್ಲ ಎಂಬ ಆತಂಕದೊಂದಿಗೆ, ಹಾಗಾದಾಗ ನಮ್ಮ ಗತಿಯೇನು ಎನ್ನುವ ಚಿಂತೆ ಕೂಡ ಕಾಡುತ್ತದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ರೋಗಿ ಮರಣಿಸಿದರೆ ಹಿಂದು ಮುಂದು ವಿಚಾರಿಸದೆ, ಹಲ್ಲೆ ಮಾಡುವುದು ಒಂದು ‘ಫ್ಯಾಶನ್’ ಆಗಿದೆ. (ನನಗೆ ಆ “ಭಾಗ್ಯ” ದೊರಕಿಲ್ಲ ಎಂಬುದೇ ಒಂದು ಸಮಾಧಾನ..!!) ಅಂಥದರಲ್ಲಿ ಎಲ್ಲಿಂದಲೋ ಯಾರೋ ಫೋನ್ ಮಾಡಿ “ ನಿಮಗೆ ನೀಗುತ್ತದೆಯೇ..?” ಎಂದು ಪ್ರಶ್ನಿಸಿ ನಮ್ಮ ನೈತಿಕತೆಯನ್ನೇ ನಡುಗಿಸಿಬಿಡುತ್ತಾರೆ. ಮೂವತ್ನಾಲ್ಕು ವರ್ಷದ ವೈದ್ಯಕೀಯದಲ್ಲಿ ಇಂಥವನ್ನು ನಾನು ಹಲವು ಬಾರಿ ಎದುರಿಸಿರುವೆನಾದ್ದರಿಂದ ಧೃತಿಗೆಡದೆ ರೋಗಿಯನ್ನು ಗುಣಮುಖ ಮಾಡುವ ಪ್ರಾಮಾಣಿಕ ಪ್ರಯತ್ನದೆಡೆಗೆ ಮಾತ್ರ ಗಮನ ಹರಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಉಳಿದದ್ದಕ್ಕೆಲ್ಲ ನನ್ನ ಉತ್ತರ ಒಂದು ದೊಡ್ಡ ಮುಗುಳ್ನಗೆ ಮಾತ್ರ..!!
ಮುಂದಿನ ಮೂರು ದಿನಗಳು ನಮಗೆ ಆತಂಕದ ಕ್ಷಣಗಳು. ನಮ್ಮ ಉಪಚಾರಕ್ಕೆ ಸ್ಪಂದಿಸುತ್ತಿದ್ದನಾದರೂ ಎಚ್ಚರವಾಗಿರಲಿಲ್ಲ. ನಮ್ಮ ಅವಿರತ ಪ್ರಯತ್ನ ಸಾಗಿಯೇ ಇತ್ತು. ಮೂರನೆ ದಿನಕ್ಕೆ ಕಣ್ಣು ಬಿಟ್ಟ, ನಾವು ಸಮಾಧಾನದ ಸಂತೋಷದ ನಿಟ್ಟುಸಿರು ಬಿಟ್ಟೆವು. ಒಂದು ಯುದ್ಧ ಗೆದ್ದವರ ಮುಖಭಾವ ನೆಲೆಸಿತ್ತು, ನಮ್ಮ ಮುಖದ ಮೇಲೆ. ಸಾವಿನ ಬಾಗಿಲು ತಟ್ಟಿ ಅದಾಗಲೇ ಒಂದು ಕದ ತೆರೆಸಿದ್ದವನನ್ನು ಕೈ ಹಿಡಿದು ಜಗ್ಗಿ ಮತ್ತೆ ನೆಲಕ್ಕೆ ಎಳೆದು ತಂದ ಖುಷಿ . ನಾಲ್ಕನೆಯ ದಿನ ಉಸಿರಾಟ ಯಂತ್ರಕ್ಕೆ ವಿಶ್ರಾಂತಿ..! ಅವನ ತಂದೆ ತಾಯಿಯರ ಮುಖದಲ್ಲಿ ಸಂತೋಷ ನಮಗೆ ಶಾಂತಿ. ಯಾರಿಗುಂಟು ಇಂಥ ಧನ್ಯತೆಯ ಕ್ಷಣ..?
ಹೋಗುವ ದಿನ ಅವನನ್ನು ನನ್ನ ಛೇಂಬರಿನಲ್ಲಿ ಕುಳ್ಳಿರಿಸಿ, ತಿಳಿಹೇಳಿದೆ. ಸಾವು ಯಾವ ಸಮಸ್ಯೆಗೂ ಪರಿಹಾರವೇ ಅಲ್ಲ. ಸಾಧ್ಯವಿದ್ದರೆ ಆ ಹುಡುಗಿಯನ್ನು ಮದುವೆಯಾಗು. ಸಾಧ್ಯವಿರದಿದ್ದರೆ ಅವಳ ಪ್ರೀತಿಯನ್ನು ನಿನ್ನ ಜೀವನದ ‘ಮಧುರ ಕ್ಷಣಗಳ’ ಅಕೌಂಟಿಗೆ ಹಾಕಿ, ಮತ್ತೊಂದು ಮದುವೆಯಾಗಿ ಸುಖದಿಂದಿರು, ಅವಳಿಗೂ ಅದನ್ನೇ ತಿಳಿಹೇಳು, ಎಂಬಂಥ ಮಾತುಗಳನ್ನು ಹೇಳಿದೆ. ಅವನು ಸಣ್ಣಗೆ ನಕ್ಕು ನನ್ನೆಡೆಗೆ ತನ್ನ ಎಡ ಮುಂದೋಳನ್ನು ಚಾಚಿದ, ಅದರ ಮೇಲೆ ಸ್ಪಷ್ಟವಾಗಿ ಹಚ್ಚೆ ಹಾಕಲಾದ ಅವನ ಪ್ರೇಮಿಯ ಹೆಸರು..!! ಅವನು ಹೆಚ್ಚು ಮಾತಾಡಲಿಲ್ಲ. ಏನನ್ನೋ ದೃಢ ನಿರ್ಧಾರ ಮಾಡಿದಂತೆ ಎದ್ದವನೇ ನನ್ನ ಕಾಲು ಮುಟ್ಟಿ ನಮಸ್ಕಾರ ಮಾಡಿ ಹೊರಟ.
ಅನೇಕ ತಿಂಗಳುಗಳು ಉರುಳಿದವು. ನಾನು ನನ್ನ ನಿತ್ಯದ ಕರ್ತವ್ಯದಲ್ಲಿ ಅವನನ್ನು ಮರೆತೇಬಿಟ್ಟೆ. ಹೀಗೆಯೇ ಆಗುತ್ತದೆ. ಗಂಭೀರ ಸ್ಥಿತಿಯಲ್ಲಿ ಇರುವ ಅನೇಕ ರೋಗಿಗಳು ಬಹಳ ಸಮಯದವರೆಗೆ ನಮ್ಮ ಮನಸ್ಸನ್ನು ಆಕ್ರಮಿಸಿದರೂ ಹಲವು ದಿನಗಳ ನಂತರ ಮನಸ್ಸಿನಿಂದ ಮರೆಯಾಗುತ್ತಾರೆ. ಅದು ಸ್ವಾಭಾವಿಕ ಕೂಡ.
ಅದೊಂದು ದಿನ ಸಾಯಂಕಾಲ ಏಳು ಗಂಟೆಯ ಸಮಯ. ವಾಕಿಂಗ್ ಮುಗಿಸಿ ಮನೆಯೆಡೆಗೆ ಬರುತ್ತಿದ್ದೆ. ನಮ್ಮ ಮನೆಯ ಹತ್ತಿರದ ಸರ್ಕಲ್ ನಲ್ಲಿ ಜನ ಜಂಗುಳಿ. ಎಲ್ಲರೂ ಏನನ್ನೋ ಸುತ್ತುವರಿದು ಕಾಲೆತ್ತರಿಸಿ ಒಬ್ಬರ ಮೇಲೊಬ್ಬರು ಬಿದ್ದು ಇಣುಕುತ್ತಿದ್ದರು. ಸಮೀಪ ನಿಂತವನೊಬ್ಬನನ್ನು ಏನಾಗಿದೆಯೆಂದು ಕೇಳಿದೆ. ಯುವಕನೊಬ್ಬನನ್ನು ಯಾರೋ ಕೊಚ್ಚಿ ಹಾಕಿದ್ದಾರೆ, ಎಂದು ಹೇಳಿದ. ಸಂಕಟವಾಯಿತು. ಒಬ್ಬನನ್ನು ಇನ್ನೊಬ್ಬ ಕೊಲ್ಲುವುದೆಂದರೆ ಎಂಥ ನೀಚ ಕೃತ್ಯವಲ್ಲವೇ? ಅದೂ ಹಾಡು ಹಗಲೇ ಮುಖ್ಯ ಸರ್ಕಲ್ ನಲ್ಲಿ ಕೊಚ್ಚಿ ಕೊಂದಿದ್ದಾರೆಂದರೆ ಎಷ್ಟು ಸಿಟ್ಟಿನಿಂದ ಮಾಡಿರಬಹುದು, ಅಲ್ಲದೆ ಕಾನೂನಿನ ಹೆದರಿಕೆಯೂ ಇಲ್ಲದಾಯ್ತಲ್ಲ ..!! ಕುತೂಹಲಕ್ಕೆಂದು ಸಮೀಪ ಹೋಗಿ ನೋಡಿದೆ. ಕಟ್ಟು ಮಸ್ತಾದ ಯುವಕ. ಮುಖ ಆ ಕಡೆ ತಿರುಗಿದೆ. ಎಡಗೈಯನ್ನು ಕತ್ತರಿಸಿ ಇತ್ತ ಬಿಸಾಡಿದ್ದಾರೆ. ಕೈಯೆಡೆಗೆ ದಿಟ್ಟಿಸಿದೆ,
“ಪ್ರೇಮಿಯ ಹೆಸರನ್ನು ಹಚ್ಚೆ ಹಾಕಿಸಿಕೊಂಡ ಅದೇ ಕೈ…”
ನನಗೆ ಅಲ್ಲಿ ನಿಲ್ಲಲಾಗಲಿಲ್ಲ. ಎಷ್ಟೊಂದು ಕಷ್ಟ ಪಟ್ಟು, ಮೂರ್ನಾಲ್ಕು ದಿನ ನಿದ್ದೆಗೆಟ್ಟು, ಆತಂಕವನ್ನೆದುರಿಸಿ ಅವನನ್ನು ಉಳಿಸಿದ್ದೆವು. ಅಂಥ ಒಂದು ಜೀವವನ್ನು ಕ್ಷಣಾರ್ಧದಲ್ಲಿ ಮುಗಿಸಿಬಿಟ್ಟರಲ್ಲ ಎಂದು ಕಸಿವಿಸಿಯಾಯಿತು. ಆಮೇಲೆ ವಿಚಾರಿಸಿದರೆ ಅವನು ಹಟಕ್ಕೆ ಬಿದ್ದು ಅದೇ ಹುಡುಗಿಯನ್ನೇ ಮದುವೆಯಾದನೆಂದೂ ಅವಳ ಅಣ್ಣಂದಿರು ಇದರಿಂದ ಕ್ರುಧ್ಧರಾಗಿ ಇವನನ್ನು ಕೊಲ್ಲಲು ಹೊಂಚು ಹಾಕಿದ್ದರೆಂದೂ, ಸರ್ಕಲ್ ನಲ್ಲಿ ಒಬ್ಬನೇ ಬರುತ್ತಿದ್ದುದನ್ನು ನೋಡಿ “ಬೇಟೆ”ಯಾಡಿದರೆಂದೂ, ಗೊತ್ತಾಯಿತು.
ಜೀವ ಉಳಿಸಿದ ನಮ್ಮ ಒಂದು ಪ್ರಯತ್ನ ಹೀಗೆ ವ್ಯರ್ಥವಾಯಿತು…
 
 
 

‍ಲೇಖಕರು G

November 20, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

18 ಪ್ರತಿಕ್ರಿಯೆಗಳು

  1. Prabhakar M. Nimbargi

    The effort didn’t go in vain. You did your job well, it was the brothers of the girl that decided the end. They didn’t realize that their own sister would become a widow. A sort of honour killing in our state too!

    ಪ್ರತಿಕ್ರಿಯೆ
  2. ravi jammihal

    Very good. It requires medical training, team work and lots of sincere efforts to help a person too over come illness and survive , but to kill any body no traing is needed as it is guided byonly irrational thinking. Another issue is love between a girl and a boy is never treated by our society as their personal matter but belongs to caste community religion etc. Thses issues have been brought forth nicely in subtle way.

    ಪ್ರತಿಕ್ರಿಯೆ
  3. Dr.Ratna Kulkarni

    ಲೇಖನ ತೀವ್ರವಾಗಿ ಮನಸ್ಸನ್ನು ತಾಕಿತು.
    ವೈದ್ಯರ ತಳಮಳವೇನೋ ಅರ್ಥವಾಯಿತು.
    ಆದರೆ ಆ ತಂದೆತಾಯಿರ ತಳಮಳ?
    ” ಜೊ ಅಫಸಾನಾ ಜಿಸೆ ಅಂಜಾಮತಕ
    ಲಾನಾ ನ ಹೊ ಮುಮಕಿನ
    ಉಸೆ ಏಕ ಖೂಬಸೂರತ ಮೋಡ ದೇಕರ
    ಛೋಡನಾ ಅಚ್ಛಾ”.

    ಪ್ರತಿಕ್ರಿಯೆ
  4. Dr. S.R . Kulkarni.

    Saheb, I read your article. The eyes just got moistened. The whole life of many lives has percolated into the experience .Ofcourse by choice we have chosen this profession but then we were not aware that the world is so diverse. Your one story kindles so many memories. Thanks a lot.

    ಪ್ರತಿಕ್ರಿಯೆ
  5. ಕೆ ಎಸ್ ನವೀನ್

    ಮನಕಲಕುತ್ತದೆ, ಸರ್. ಆತ್ಮಹತ್ಯೆ ಎಂದ ಕೂಡಲೆ ಹೇಡಿ ಎಂದು ಬಿಡುತ್ತಾರೆ. ನನ್ನ ಜೀವನದಲ್ಲಿ ಇದನ್ನು ತುಂಬ ಹತ್ತಿರದಿಂಧ ಕಂಡಿದ್ದಾನೆ. ಒಮ್ಮೆ ಸಾಯಲು ಬೇಕಾಧ ಧೈರ್ಯದಲ್ಲಿ ಹತ್ತು ಜನ್ಮ ಜೀವನ ಮಾಡಿಬಿಡಬಹುದು. ಪರಿಸ್ಥಿತಿ ನಿಭಾಯಿಸಲಾಗದೆ ಇದಕ್ಕೆ ಶರಣಾಗುತ್ತಾರೆಯೇ? ಕೌನ್ಸಲಿಂಗ್‍ ಸುತ್ತಲಿನ ಜನಕ್ಕೆ, ಸಮಾಜಕ್ಕೆ ನೀಡಬೇಕೆ? ಅರ್ಥವಾಗುವುದಿಲ್ಲ.

    ಪ್ರತಿಕ್ರಿಯೆ
  6. Jayashree Ingale

    ಕಣ್ಣಾಲಿಗಳು ತೇಲಿ ಬಂದವು ಡಾಕ್ಟ್ರೇ….ಮನುಷ್ಯತ್ವ ಮರೆತ ಮೃಗಗಳಿಗೆ ನಿಮ್ಮ ಪ್ರಯತ್ನ ಬಲಿಯಾದದ್ದು ಇನ್ನೂ ನೋವು ತಂದಿತು…!!

    ಪ್ರತಿಕ್ರಿಯೆ
  7. Reeta Biliangady

    Well written article.Shivanand.
    Incidentally today itself on NDTV there was a report of 2 honour killings in North India.It amounts to utter ignorance. India still has a long ,long way to go before such stupidity disappears from the society.Law and order matters.But,More than that there is a need for total inner transformation of human beings.In the name of religion,caste,creed,language etc so many atrocities happen in a country which boasts of culture and spirituality.Somewhere we have failed miserably.Having said that,we need to keep up hopes and compared to earlier days things are better.Media and educational institutions play a major role in highlighting human values.Each one of us also need to take every opportunity that we get to talk of human values.

    ಪ್ರತಿಕ್ರಿಯೆ
  8. ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ

    ಹಿಡಿಸಿತು ಸರ್ .. “ಕೆಲವೊಮ್ಮೆ ನಮ್ಮ ಸ್ವಂತ ಸುಖ ಸಂತೋಷಕ್ಕಿಂತಲೂ ಒಂದು ಜೀವ ಮುಖ್ಯವಾಗುತ್ತದೆ.” ಈ ಮಾತು ನಿಮ್ಮ ಕರ್ತವ್ಯದ ಕನ್ನಡಿ ಸರ್. ಪ್ರಯತ್ನಕ್ಕೆ ಫಲ ಆ ದೇವರು ಕೊಡುತ್ತಾನೆ ಎಂಬುದೊಂದಿಷ್ಟು ಸುಳ್ಳಿರಬಹುದೆಂದು ಅನಿಸುತ್ತಿದೆ.. ಮನುಷ್ಯನ ಿಂತಹ ವರ್ತನೆಯಿಂದ ದೇವರಿಗೂ ಬೇಸರವಾಗಿರಬಹುದು ಅಲ್ವ ಸರ್.. ನಿಮ್ಮ ಲೆಖನದ ತಿರುಳು ಇಂದಿನ ಯುವ ಜನಾಂಗವನ್ನು ಎಚ್ಚರಿಸುವಂತಿದೆ.

    ಪ್ರತಿಕ್ರಿಯೆ
  9. Arathi ghatikar

    Bhahala maarmika vaagide ii ghatane . Pranavanne nuguva ii jyathi vyavaste hege eshtu janara bali to togolluvudu yaarug gottu . Nimma anubhavagalu estella bhaavagalinda tumbide

    ಪ್ರತಿಕ್ರಿಯೆ
  10. ಅಕ್ಕಿಮಂಗಲ ಮಂಜುನಾಥ

    ನಿಜ, ಹೀಗೂ ಒಂದೊಂದು ಸಾರಿ ಆಗಿಬಿಡುತ್ತೆ. ನಾನೂ ತೋಟದಲ್ಲಿ ಅನೇಕ ಮರಗಳನ್ನು ಬೆಳೆಸಿದ್ದೇನೆ.ಮೊನ್ನೆ ಸಿಡಿಲು ಬಡಿದು , ಎತ್ತರಕ್ಕೆ ಬೆಳೆದ ತೆಂಗಿನ ಮರವೊಂದನ್ನು ಉರುಳಿಸಿ ಬಿಟ್ಟಿತು.ಆ ಸಿಡಿಲಿಗೇನು ಗೊತ್ತು , ಆ ಮರವ ಬೆಳೆಸಲು ನಾನು ಪಟ್ಟಿರುವ ಪಾಡು ? ಒಂದಿಷ್ಟು ದಿನ ಬಹಳ ನೋವು ಪಟ್ಟೆ , ನನ್ನ ಸಾಕಿ ಬೆಳಸಿದ ಮರ ನನಗೆ ಪ್ರತಿಫಲ ನೀಡದೇ ಹೋಯಿತೆಂದು.ಈಗ ಅದನ್ನು ಮರೆತು ಆ ಜಾಗದಲ್ಲಿ ಬೇರೊಂದು ಗಿಡವನ್ನು ನೆಟ್ಟಿದ್ದೇನೆ. ಇದು ಕ್ರಿಯಾಶೀಲ ಜನರ ನಿರಂತರ ಕ್ರಿಯೆ ಎಂದು ಬಗೆದು.ನೀವೂ ಹಾಗೇ ಅಲ್ಲವೆ ? ಅಕ್ಕಿಮಂಗಲ ಮಂಜುನಾಥ.

    ಪ್ರತಿಕ್ರಿಯೆ
  11. Gopaala Wajapeyi

    ಪ್ರತಿಯೊಂದು ಪ್ರಸಂಗವೂ ಕಣ್ಣ ಮುಂದೆ ಕಟ್ಟುವಂತೆ ಇದೆ ಡಾಕ್ಟ್ರೆ ನಿಮ್ಮ ಬರಹದ ಶೈಲಿ. ಇದು ಖಂಡಿತ ಮನದಾಳದಿಂದ ಉಕ್ಕಿ ಬಂದ ಭಾವಗಳು ಅಕ್ಷರಗಳಾಗಿ ಮೂಡಿನಿಂತ ಪರಿ.

    ಪ್ರತಿಕ್ರಿಯೆ
  12. ಡಾ.ಶಿವಾನಂದ ಕುಬಸದ

    ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

    ಪ್ರತಿಕ್ರಿಯೆ
  13. Manjunatha

    ಎಂಥಾ ಜನ ಸಾರ್,,,,,,, ಜೀವ ಕೊಡಲು ತಾಕತ್ತಿಲ್ಲದ ಜನರಿಗೆ ಜೀವ ತೆಗೆಯುವ ಹಕ್ಕು ಯಾರು ಕೊಟ್ಟವರು ? ನಿಮ್ಮ ಲೇಖನ ಹಲವು ವರ್ಷಗಳ ಹಿಂದೆ, ಪ್ರೇಮ ವೈಫಲ್ಯದಿಂದ ನೊಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನನ್ನ ಆತ್ಮೀಯ ಸ್ನೇಹಿತನನ್ನು ನೆನಪಿಸಿ ಕಣ್ಣುಗಳು ಒದ್ದೆಯಾದವು.

    ಪ್ರತಿಕ್ರಿಯೆ
  14. Ganapathi Magalu

    ಮಾನ್ಯರೇ ಪೋಲೀಸ್ ಆಫೀಸರ್ ಹೇಳಿದ ಮಾತು ಆ ಸಂದರ್ಭಕ್ಕೆ ವೈದ್ಯರಿಗೆ ಸರಿ ಹೊಂದಿದರೂ ಸಹ ಜೀವನದ ಎಲ್ಲಾ ರಂಗಗಳಲ್ಲಿ ಸೇವೆ ಸಲ್ಲಿಸುವವರಿಗೆ ಸರಿಹೊಂದುವ ಮಾತು.ನಿಮ್ಮ ಬರಹಕ್ಕೆ ಧನ್ಯವಾದಗಳು

    ಪ್ರತಿಕ್ರಿಯೆ
  15. udayakumar habbu

    I really appreciate Dr. Shivanand Kubsada’s dedication to his noble profession. He saved the life of a youth who had gone astray due to his blind love. But the society is sill conservative as regards to caste and blind beliefs. Oh! God! When can our country free itself from this horrible malady. Hats off to Dr. Shivanand Kubsada.

    ಪ್ರತಿಕ್ರಿಯೆ
  16. Upendra

    ‘ಹತ್ಯೆ’ ಮತ್ತು ‘ಆತ್ಮಹತ್ಯೆ’ ಇವೆರಡೂ ವಿಕಾರ ಮನಸ್ಸಿನ ವಿಕೃತಿಗಳು. ಇವುಗಳನ್ನು ತಡೆಯುವುದು ಹೇಗೆ ಎಂಬುದು ಬಹುಶಃ ಯಕ್ಷಪ್ರಶ್ನೆಯಾಗಿಯೇ ಉಳಿಯಬಹುದು.
    ನಿಮ್ಮ ಬರಹಕ್ಕೆ, ಜನಪರ ಕಾಳಜಿಗೆ, ನಿಮ್ಮೊಳಗಿನ ನಿಜವೈದ್ಯನಿಗೆ ನಮನಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: