ಯೋಗರಾಜ್ ಭಟ್, ದಯಾನಂದ್ ಜುಗಲ್‌ಬಂದಿ ಕಥೆ

ವಾಸ್ನೆ


ಕಥೆ : ಯೋಗರಾಜ ಭಟ್
ನಿರೂಪಣೆ : ಟಿ ಕೆ ದಯಾನಂದ್
ಇದಕ್ಕೆ ಸರಿಯಾಗಿ ಎರಡು ದಿನಗಳ ಹಿಂದಷ್ಟೇ ಪತ್ತೇಕಾನಿನ ಬಂದೂಕು ರಿಪೇರಿ ಕೆಲಸದ ಪಟ್ಟೆಸಾಬರ ಮಗ ಇಬ್ರಾಹಿಮನು ಕಣ್ಣಿರುವ ಯಾರಿಗೂ ಕಾಣಿಸದಂತೆ ಹೇಳ ಹೆಸರಿಲ್ಲದಂತೆ ಮಟಾಮಾಯವಾಗಿ ಹೋಗಿದ್ದ ಸಮಯದೊಳಗೆ, ಪಕ್ಕದ ಅಂಬಾಡಿಯ ಕುಲುಮೆನಾಗಪ್ಪನ ಮಗಳು ಕುಮುದೆಯೂಇಬ್ರಾಹಿಮನದೇ ವಿವರಗಳ ಸಮೇತ ನಾಪತ್ತೆಯಾಗಿದ್ದುದು ಸಂಭವಿಸಿತ್ತು. ಅಕ್ಕಪಕ್ಕದೂರಿನ ಎರಡು ಮನೆಗಳಿಂದ ಎರಡು ಜೀವಗಳು ಹೀಗೆ ಒಂದೇಏಟಿಗೆ ಪೊಸುಕ್ಕನೆ ಕಾಣದಂತಾಗುವುದರ ಹಿಂದಿನ ಸಂಭವನೀಯತೆಗಳನ್ನು ಅದು ಹೇಗೋ ಒಂದಕ್ಕೊಂದು ಲಿಂಕು ಮಾಡಿಕೊಂಡ ಊರವರು ‘ಪಟ್ಟೇಸಾಬರ ಮಗನು ಕುಲುಮೆನಾಗನ ಮಗಳನ್ನ ಹಾರಿಸಿಕೊಂಡು ಹೋಗವನಂತೆ’ ಎಂದು ಚಪ್ಪರಿಸಿಕೊಂಡು ತಮ್ಮತಮ್ಮೊಳಗೆ ಗುಸ ಮತ್ತು ಪಿಸ ಅಂತ ಅನ್ನುವುದೂ ಈಗೀಗ ನಡೆಯುತ್ತಿತ್ತು.
ಅದರಪಾಡಿಗದು ಎಂಬಂತೆ ಪಿಯುಸಿಗೆ ಹೋಗುತ್ತಿದ್ದ ಕುಮುದೆಯನ್ನು ಅದ್ಯಾವ ಮೀಸೆ ಕೆರಳಿದ ಟೈಮಿನಲ್ಲಿ ಇಬ್ರಾಹಿಮ ನೋಡಿದ್ದನೋ, ಆವತ್ತಿನಿಂದಲೇ ಮೋಹ ಎಂಬ ಚೀಜು ಅವನ ಕಾಲ ಕಿರುಬೆರಳಿಂದ ಹಿಡಿದು ನಡುನೆತ್ತಿನವರೆಗೂ ಪ್ರವಹಿಸಲುತೊಡಗಿತ್ತು. ಅಂಬಾಡಿಯ ವಯಸ್ಸು ಹುಡುಗರ ತೂತುಬಲೆಗಳಿಗೆ ಸಿಕ್ಕದೆ ಬಚಾವುಗೊಂಡು ಇದ್ದ ಕುಮುದೆಯ ಬಂಡೆ ಮನಸ್ಸನ್ನೂ ಅದ್ಯಾವುದೋ ಮಾಯದೊಳಗೆ ಜೇಬಿಗೆ ಕೆಡವಿಕೊಂಡಿದ್ದ ಇಬ್ರಾಹಿಮನುಸುತ್ತ ಜಿಲ್ಲೆಯಲ್ಲೆಲ್ಲೂ ಕಾಣಸಿಗದ ಅಪರೂಪದ ಸುಂದರಿಯೊಬ್ಬಳು ತನ್ನ ಪ್ರೇಮದೊಳಗೆ ನಡೆದು ಬಂದ ಖುಷಿಯನ್ನು ಕಡುಹೆಮ್ಮೆಯಿಂದ ಅನುಭವಿಸುತ್ತಿದ್ದನು. ಕೆಳಗೆ ಬಿದ್ದೋ, ಮತ್ತೇನಕ್ಕೋ ನೆಗ್ಗುಬಿದ್ದ ಬಂದೂಕು ನಳಿಗೆಯನ್ನು ಬದಲಿಸಲು ಕೊಳವೆ ತಟ್ಟಿಸಿಕೊಳ್ಳಲು ಪಟ್ಟೇಸಾಬರು ಕುಲುಮೆ ನಾಗಪ್ಪನ ಕುಲುಮೆಗೆ ಆಗಾಗ್ಗೆ ಬರುತ್ತಿದ್ದರು. ಇಬ್ಬರ ಅಪ್ಪಂದಿರೂ ವೃತ್ತಿಸಂಬಂಧಿ ಕೆಲಸಗಳಿಗಾಗಿ ಒಬ್ಬರನ್ನೊಬ್ಬರು ಆಶ್ರಯಿಸಿದ್ದರಿಂದ ಆ ನೆಪ, ಈ ನೆಪವೆಂದು ಒಬ್ಬರೊಬ್ಬರ ಮನೆಯೊಳಗೂ ಈ ಎರಡು ತಾರುಣ್ಯದ ಸುಡುದೇಹಿಗಳಿಗೂ ಪ್ರವೇಶವಿದ್ದಿತು. ಕೈಲಿದ್ದ ಚೈನಾಸೆಟ್ಟು ಮೊಬೈಲಿಗೆ ಸಿಡಿಅಂಗಡಿ ತುಕ್ಕೋಜಿಯು ಹಾಕಿಕೊಟ್ಟಿದ್ದ ನೀಲೋನೀಲಿ ಪಿಚ್ಚರುಗಳನ್ನು ಕದ್ದುಮುಚ್ಚಿ ಕಂಡೂಕಂಡೂ, ತಡೆಯಲಾರದೆ ಕಾನೂನು ಕೈಗೆತ್ತಿಕೊಂಡು ಯಾರ ಮೇಲಾದರೂ ಪ್ರಯೋಗಿಸಲೇಬೇಕೆಂದು ಪಿತೂರಿ ಹೊಸೆೆಯುತ್ತಿದ್ದ ಇಬ್ರಾಹಿಮನಿಗೆ ಕುಮುದೆಯು ತನ್ನ ಲವ್ ಪ್ರಸ್ತಾಪಕ್ಕೆ ಹ್ಞೂಂ ಅಂದಿದ್ದು ಪರೋಟ ಜಾರಿ ಶೇರುವಕ್ಕೆ ಬಿದ್ದಂತಾಗಿತ್ತು.
ಕುಮುದೆಯ ಕಾಲೇಜು ಮುಗಿಯುವ ವೇಳೆಗೆ ತನ್ನ ಲಟಾಸು ದೇಹವೆಳೆದುಕೊಂಡು ಯಾಕೂಬ ಸಾಬರ ನೀರುದೋಸೆ ಕೆಂಟೀನಿನ ಮುಂದೆ ನಿಲ್ಲುತ್ತಿದ್ದ ಅವನು ಅವಳ ಮುಖ ಕಂಡೊಡನೆ ಅವಳಿಗಿಂತ ಮುಂಚೆಯೇ ಸೇಂದಿಕಪ್ಪಣ್ಣನ ಮನೆಯ ಹಿಂದಿನ ತೊರೆಪಕ್ಕದ ಮರದ ಬುಡಕ್ಕೆ ಹೋಗಿಬಿಡುತ್ತಿದ್ದನು. ಕುಮುದೆಯೂ ಹಿಂಬಾಲಿಸಿ ಮೆತ್ತಗೆ ಬಂದು ಇವನ ಪಕ್ಕ ಕೂರುತ್ತಿದ್ದಳು. ಒಂದಷ್ಟು ಹೊತ್ತು ಅವರಿಬ್ಬರನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ನಾಲಿಗೆಗೆಳೆದುಕೊಂದು ಜಗಿಯುತ್ತಿದ್ದ ಅವರು ಇನ್ನೇನು ಬಿಸಿಲುಸಾಯುವ ಹೊತ್ತಿಗೆ ತಮ್ಮ ಪ್ರೇಮಪ್ರವರಕ್ಕೆ ಕೊನೆಯಿಟ್ಟು ಎದ್ದು ಮನೆಗೆ ಬರುತ್ತಿದ್ದರು. ಸೇಂದಿಕಪ್ಪಣ್ಣನ ಮನೆಯ ಬಳಿ ಬರುವುದಕ್ಕೂ ಮೊದಲು ಕೈಕೈ ಹಿಡಿದುಕೊಂಡು ಬರುತ್ತಿದ್ದ ಕುಮುದೆಯು, ಕಪ್ಪಣ್ಣನ ಮನೆ ಕಾಣುತ್ತಿದ್ದಂತೆಯೇ ಇಬ್ರಾಹಿಮನ ಕೈ ಬಿಟ್ಟು ‘ಯಾವನೋ ನೀನು ಬೇಕೂಫ’ ಎಂಬಂಥ ಮುಖಚಹರೆಯನ್ನು ಮುಖಕ್ಕೆ ತಂದುಕೊಂಡು ರಸ್ತೆಗೆ ಬಿದ್ದು ಅಂಬಾಡಿಯ ಮನೆ ಸೇರುತ್ತಿದ್ದಳು. ಇಂಥವೇ ಕದ್ದುಸೇರುವ ದಿನಗಳ ನಡುವೆ, ಏನೋ ಮಾತನಾಡುತ್ತಿದ್ದ ಕುಮುದೆಯನ್ನು ಒಂದೇ ಸವನೆ ನೋಡುತ್ತಿದ್ದ ಇಬ್ರಾಹಿಮನು ಪುಚುಕ್ಕನೆ ಅವಳ ಕೆನ್ನೆಗೆ ನಾಲಿಗೆ ಹಾಕಿ ಚೊರ್ರೆ….ಂದು ನೆಕ್ಕಿಬಿಟ್ಟಿದ್ದನು. ಅವನು ಕೊಡಲೆತ್ನಿಸಿದ್ದು ಮುತ್ತು ಎಂಬುದನ್ನು ತಲೆಗೆ ತಂದುಕೊಳ್ಳಲು ಇವಳಿಗೆ ಕೊಂಚ ಹೊತ್ತು ಬೇಕಾಗಿತ್ತು. ಆವತ್ತಿನಿಂದ ಅವನು ಕುಮುದೆಯ ಪಕ್ಕ ಇದ್ದಾಗಲೆಲ್ಲ ಕಿವಿಹಾಳೆಗಳ ಹಿಂಬಾಗದಲ್ಲಿ ಸಣ್ಣಗೇನೋ ನಡುಗುವಂತಾಗುತ್ತಿದ್ದುದು ಅವಳ ಗಮನಕ್ಕೂ ಬಂದಿತ್ತು.
ಇವೆಲ್ಲದರ ನಡುವೆ ಅದೇನಾಯಿತೋ ಏನೋ ಒಂದು ದಿನ ಯಾಕೂಬಸಾಬರ ಕೆಂಟೀನಿನಿಂದ ತನ್ನನ್ನು ಹಿಂಬಾಲಿಸಲು ಹೇಳಿದ್ದ ಇಬ್ರಾಹಿಮನುಮೊಂಟಾವಿನ ಬಸ್ ಹತ್ತಿದ್ದ. ಇವಳೂ ಹತ್ತಿದ್ದಳು. ಸೀದ ಮೊಂಟಾವಿನ ಪರಮ ಕುಖ್ಯಾತ ಹೊಯ್ಸಳಲಾಡ್ಜಿಗೆ ಕರೆದೊಯ್ದವನೇ ಅಲ್ಲಿಯವರೆಗೂ ಅವಳು ಊಹಿಸಿಯೂ ಇರದಿದ್ದ ಜಗತ್ತೊಂದರಲ್ಲಿ ದಿನವಿಡೀ ತೇಲಾಡಿಸಿಬಿಟ್ಟಿದ್ದನು.ಕುತೂಹಲದ ಏಣಿ ಹತ್ತುವವರೆಗೂ ಆಗಿದ್ದಾಗಲೆಂದು ಬಿಗಿಯಾಗೇ ಇದ್ದ ಕುಮುದೆಯು ಏಣಿಯ ತುತ್ತುದಿಯಲ್ಲಿ ಕಾಲ ಕಿರುಬೆರಳಿನಲ್ಲಿ ನಿಂತ ಅನುಭವ ದಕ್ಕಿದ ಮೇಲೆ ಥರಗುಟ್ಟಿಹೋಗಿದ್ದಳು.ಹಗಲು ಸೆಟೆದು ರಾತ್ರಿ ಅಮರಿಕೊಂಡದ್ದನ್ನೂ ಮರೆತು ಏಣಿಯ ಮೇಲೆ ಇದ್ದದ್ದು ಇಬ್ಬರಿಗೂ ಗೊತ್ತಾಗಲಿಲ್ಲ. ಈಗ ವಾಪಸ್ಸು ಹೋಗುವುದು ಹೇಗೆ, ಮನೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಕೊಡುವ ಉತ್ತರ ಏನು ಎಂದು ಯೋಚಿಸಿ ಕುಲುಮೆನಾಗಪ್ಪನ ಬಟ್ಟೆಬೆಲ್ಟಿನ ಏಟುಗಳನ್ನು ನೆನೆದು ಕುಸಿಯುವಂತಾದ ಕುಮುದೆಗೆ ಇಬ್ರಾಹಿಮನೇ ಸಮಾಧಾನಪಡಿಸಿದ್ದ. ಯಾವತ್ತಾದರೊಂದು ಮದುವೆಯಾಗಿ ಇದು ಆಗಲೇಬೇಕಿದ್ದು ಎರಡುದಿನ ಮುಂದೆ ನಡೆದಿದೆ, ನಾನು ಯಾವ ಕಾರಣಕ್ಕೂ ನಿನ್ನ ಕೈ ಬಿಡುವುದಿಲ್ಲವೆಂದು, ಆಗಿದ್ದಾಗಲಿ ಇಬ್ಬರೂ ಮನೆಗೆ ಹೋಗದೆ ಮದುವೆ ಮಾಡಿಕೊಳ್ಳೋಣವೆಂದು ಒಪ್ಪಿಸಿದ್ದನು. ಮೊದಲಿಗೆ ಏನಾಗುವುದೋ ಏನೋ ಎಂದು ಗಾಬರಿಬಿದ್ದಿದ್ದ ಕುಮುದೆಗೆ ಮದುವೆಯ ಪ್ರಸ್ತಾಪ ಬಂದಿದ್ದು ಇಬ್ರಾಹಿಮನ ಮೇಲೆ ಚೂರು ನಂಬಿಕೆ ಹುಟ್ಟಿಸಿತ್ತು.
ಇವರಿಬ್ಬರೂ ಊರು ಬಿಟ್ಟ ಹಿಂದೆಯೇ, ಪತ್ತೇಕಾನಿಗೆ ಅದೆಲ್ಲಿಂದ ಈ ಕಟುವಾಸನೆ ಅಮರಿಕೊಂಡಿತೋ ಗೊತ್ತಿಲ್ಲ, ಪುರಾಣದ ಹಿರಣ್ಯಕಶ್ಯಪನು ಹುಡುಕಿ ಹುಡುಕಿ ತನ್ನನ್ನು ಎಲ್ಲೆಲ್ಲೆಲ್ಲ್ಲ ಜೀವ ತೆಗೆಯಬಾರದೆಂದು ಮಹಾವಿಷ್ಣುವಿನ ಬಳಿ ವರ ಕಸಿದಿದ್ದನೋ, ಕರೆಕ್ಟಾಗಿ ಅಲ್ಲೆಲ್ಲ ಈ ವಾಸನೆ ಪತ್ತೇಕಾನಿನಲ್ಲಿ ಕೈಬೀಸಿಕೊಂಡು ತಿರುಗಿಕೊಂಡಿತ್ತು. ಜನುಮದಲ್ಲೆಲ್ಲೂ ಈ ಬಗೆಯದೊಂದು ವಾಸನೆಗೆ ಮೂಗು ಅಡವಿಟ್ಟು ಗೊತ್ತಿರದ ಊರವರು, ಬರುಬರುತ್ತ ಈ ವಾಸನೆ ಕುಡಿಯುವುದಕ್ಕಿಂತ ಆರಡಿ ಹಳ್ಳ ತೋಡಿಕೊಂಡು ತಮ್ಮೆದೆಯ ಮೇಲೆ ತಾವೇ ಮಣ್ಣೆಳೆದುಕೊಂಡು ಜೀವಸಮಾಧಿಯಾಗುವುದು ಒಳಿತು ಎಂದು ನಶ್ವರತೆಯತ್ತ ಮುಖ ಮಾಡುವಷ್ಟು ಆ ವಾಸನೆಯ ಏಟು ಇದ್ದುದನ್ನುಮೂಗು ಅಂತ ಇರುವವರೆಲ್ಲ ಇಲ್ಲ್ಲಿ ಗಮನಿಸಬೇಕು.
ಬೆಳಗೆದ್ದರೆ ತಾವಾಯಿತು ತಮ್ಮ ಕೊರಳಿಗೆ ತಮ್ಮ ಹಿರೀಕರು ಸುತ್ತಿಹೋದ ಪರಂಪರಿಕ ಕೆಲಸಗಳಾಯಿತು ಎಂದು ಬೀಸಿ ಒಗೆದ ಬುಗುರಿಯಂತೆ ತಿರುಗಿಕೊಂಡಿದ್ದವರಿಗೆ ಇದೊಂದು ವಾಸನೆಯ ವರಾತಕ್ಕೆ ರೋಸತ್ತುಹೋಗಿತ್ತು.ಏನಾದರೂ ಸತ್ತಿರಬಹುದೇ ಎಂದು ಊರಿನ ಮೂಲೆಮುಡುಕು, ಹಳ್ಳಪಳ್ಳ, ಪೊದೆಗಿದೆ ಎಲ್ಲವನ್ನೂ ಬೆದಕಿದ ಮೇಲೂ ಅವರಿಗೆ ಎಲ್ಲಿಯೂ ಒಂದು ಸತ್ತ ಬೆಕ್ಕೂ ಕಾಣಸಿಕ್ಕಿರಲಿಲ್ಲ. ಮೊದಮೊದಲಿಗೆ ಮೂಗು ಕೊಯ್ಯುತ್ತಿದ್ದ ವಾಸನೆಯ ಘಾಟು ತಡೆಯಲು ಮನೆಯೊಳಗೆ ಸಾಂಬ್ರಾಣಿ-ಕರ್ಪೂರದ ಹೊಗೆ ಹಾಕಿಕೊಂಡು ಮನೆಯನ್ನು ಘಮಗುಟ್ಟಿಸಲು ನಡೆಸಿದ ಪ್ರಯತ್ನಗಳು ಸಾಂಬ್ರಾಣಿ ಬೂದಿಯಾಗುತ್ತಿದ್ದಂತೆಯೇ ವಿಫಲಗೊಳ್ಳುತ್ತಿದ್ದವು. ಒಂದಷ್ಟು ದಿನ ಮೂಗಿಗೆ ಟವೆಲ್ಲೋ, ಶಾಲೋ, ಕರ್ಚೀಫನ್ನೋ ಕಟ್ಟಿಕೊಂಡು ಓಡಾಡುತ್ತಿದ್ದ ಪತ್ತೇಕಾನಿಗೆ ಹೊಸಬರೇನಾದರೂ ಬಂದರೆ ಚೈನೀಸು ಸಿನಿಮಾಗಳ ನಿಂಜಾ ವಾರಿಯರ್ಗಳು ಹೊಳೆಯುವ ಕತ್ತಿಗಳ ಹೊರತಾಗಿ ಗುಂಪುಗುಂಪಾಗಿ ಓಡಾಡುತ್ತಿದ್ದಾರಲ್ಲ ಎಂದು ಆಶ್ಚರ್ಯವಾಗುವಷ್ಟು ಊರಿನ ಕತೆ ಕುಲಗೆಟ್ಟುಹೋಗಿತ್ತು. ಒಟ್ಟಿನಲ್ಲಿ ಆ ಊರಿನಲ್ಲಿ ಹೆಮ್ಮೆಯಿಂದ ಮೂಗೆತ್ತಿಕೊಂಡು ತಿರುಗುವುದೂ, ಪ್ರಜ್ಞಾಶೂನ್ಯತೆಯನ್ನು ಟಿಕೆಟ್ಟು ಕೊಟ್ಟು ಆಹ್ವಾನಿಸುವುದೂ.. ಹೆಚ್ಚುಕಮ್ಮಿ ಒಂದೇ ಎಂಬಂತಾಗಿ ಹೋಗಿತ್ತು. ಇದು ಸಾಲದೆಂದು ಒಂದರಹಿಂದೊಂದು ಚಿಕ್ಕಪುಟ್ಟ ಖಾಯಿಲೆಗಳೂ ಎಲ್ಲರ ಮನೆಯ ಬಾಗಿಲು ಬಡಿದು ಅಧಿಕೃತವಾಗಿಯೇ ಒಳಗೆ ನುಗ್ಗಿ ಒಬ್ಬೊಬ್ಬರ ದೇಹದೊಳಗೂ ಕುರ್ಚಿ ಹಾಕಿಕೊಂಡು ಕುಳಿತಿದ್ದವು. ವಾಸನೆ ಮತ್ತು ಖಾಯಿಲೆ ಎರಡೂ ಪತ್ತೇಕಾನನ್ನು ಬೇರೆ ಊರಿನವರು ಗುಮಾನಿಯಿಂದ ದೂರವುಳಿಯುವಂತೆಯೂ ಮಾಡಿಟ್ಟಿದ್ದವು.
ಇಬ್ರಾಹಿಮ ಮತ್ತು ಕುಮುದೆ ಇಬ್ಬರ ನಾಪತ್ತೆಯ ಬಗ್ಗೆ ಎರಡೂ ಮನೆಯವರು ತಲೆಕೆಡಿಸಿಕೊಂಡು ಇದ್ದಬದ್ದ ನೆಂಟರುಪಂಟರ ಮನೆಗಳೆಲ್ಲವನ್ನೂ ಸೋಸಿದರೂ ಎಲ್ಲಿಯೂ ಇವರಿಬ್ಬರ ಸುಳಿವು ಸಿಗದೆ ಅತ್ತ ಪಟ್ಟೇಸಾಬರು, ಇತ್ತ ಕುಲುಮೆನಾಗಪ್ಪ ಇಬ್ಬರ ಮನೆಯವರೂ ಮನೋವಿಹ್ವಲತೆಯ ಕೆಂಡವನ್ನು ಮುಖದಲ್ಲೂ ಹೊತ್ತುಕೊಂಡು ತಿರುಗುತ್ತಿದ್ದರು. ಅಷ್ಟರಲ್ಲಿ ಶುರುವಾದ ಗಬ್ಬುವಾಸನೆಯ ಕಾಟದೊಂದಿಗೆ ನಾಪತ್ತೆಯಾಗಿರುವ ಇಬ್ಬರ ಬಗ್ಗೆಯೂ ಲಿಂಕಪ್ಪುಗಳನ್ನು ಬೆರೆಸಿ ಊರಜನ ಮಾತನಾಡುವ ವಾಸನೆಯು ಇಬ್ಬರ ಕಿವಿಗೂ ಬಿದ್ದುಕುದ್ದು ಹೋಗಿದ್ದರು. ಒಂದು ಬೆಳಿಗ್ಗೆ ರಿಪೇರಿಗೆಂದು ಯಾರೋ ಕೊಟ್ಟಿದ್ದ ಪುಗಸಟ್ಟೆ ಕೋವಿಯನ್ನೆತ್ತಿಕೊಂಡು ಸೀದ ಕುಲುಮೆನಾಗಪ್ಪನ ಅಂಗಡಿಯ ಮನೆಗೆ ಹೋದ ಪಟ್ಟೇಸಾಬರು ನಾಗಪ್ಪನನ್ನು ಅವನ ಮಗಳನ್ನೂ ಒಟ್ಟುಸೇರಿಸಿ ತಾರುಮಾರು ಬೈದುಬಿಟ್ಟಿದ್ದರು. ನಾಗಪ್ಪನೂ ‘ಸಾಬರುಡುಗರು ಸರಿಗಿಲ್ಲ, ಹುಷಾರಾಗಿರೇ ಅಂತ ಬಡ್ಕಂಡೆ ನನ್ ಮಗಳಿಗೆ.. ಅದೇನ್ ಸಾಂಬ್ರಾಣಿ ಊದಿ ನನ್ ಮಗಳನ್ನ ಎತ್ತಕಂಡು ಹೋಗವ್ನೋ ನಿನ್ನ ಮಗಾ.. ಅವನೇನಾದ್ರೂ ಕೈಗೆ ಸಿಕ್ಕಿದ್ರೆ ತಿದಿ ಕುಲುಮೇಲಿ ಹಾಕಿ ಬೇಯಿಸಿಬಿಡ್ತೀನಿ’ ಎಂದು ಒಂದು ದುರ್ಬಲ ಅವಾಜು ಹಾಕಿದ್ದನು.
ಇದು ಮಾತಿಗೆ ಮಾತು ಬೆಳೆದು ಇಬ್ಬರೂ ಒಬ್ಬರ ಮೇಲೊಬ್ಬರು ಮಕ್ಕಳ ಅಪಹರಣದ ಪೊಲೀಸು ಕಂಪ್ಲೇಂಟು ದಾಖಲು ಮಾಡುವ ಮಟ್ಟಿಗೆ ಬೆಳೆದಿತ್ತು. ಮೊದಲೇ ಒಂದೇ ಜಾತಿಯ ಪ್ರೇಮಪ್ರಕರಣಗಳನ್ನೂ ಒಪ್ಪದೆ ತಲೆತಲೆ ಕಡಿದುಕೊಳ್ಳುತ್ತಿದ್ದ ಪತ್ತೇಕಾನು ಮತ್ತು ಅಂಬಾಡಿಯ ಹುಂಬರ ಕೈಗೆ ಹಿಂದೂ-ಮುಸ್ಲಿಂ ಪ್ರೇಮ ಪ್ರಕರಣ ಸಿಕ್ಕರೆ ಎರಡು ಊರಿನವರೂ ಹಬ್ಬ ಮಾಡಾಕುವುದು ನಿಶ್ಚಯವೆಂದರಿತ ಎಸ್ಸೈ ಬಲದೇವನು,ಯಾವುದಕ್ಕೂ ಇರಲೆಂದು ಎರಡೂ ಊರುಗಳ ಬಂದೋಬಸ್ತು ಡ್ಯೂಟಿಗೆ ದಫೇದಾರ್ ಕುಪ್ಪುಸಾಮಿಯನ್ನು ಹಾಕಿದ್ದನು. ಅದರಂತೆ ಕುಪ್ಪುಸಾಮಿಯು ತನ್ನ ಲಟಾಸು ಟಿವಿಎಸ್ಸಿನಲ್ಲಿ ಪತ್ತೇಕಾನಿಗೆ ಬಂದಿಳಿದಿದ್ದನು. ಬಂದವನು ಮೂಗಿಗೆ ಬಡಿದ ಗಬ್ಬುನಾತಕ್ಕೆ ಮುಖ ಸಿಂಡರಿಸಿಕೊಂಡುಟಿವಿಎಸ್ಸಿಗೆ ಸ್ಟಾಂಡು ಹಾಕಿ ನಿಲ್ಲಿಸಿ ಇತ್ತ ತಿರುಗುತ್ತಿದ್ದಂತೆಯೇ ಯಾವುದೋ ಒಂದು ಜೀವಿಯು ಅವನ ಕಪ್ಪಾಲಕ್ಕೆ ಥೇಯ್ಡ್.. ಎಂದು ಬಾರಿಸಿ ಹಿಂತಿರುಗಿಯೂ ಸೈತ ನೋಡದೆ ಓಡಿ ಹೋಗಿತ್ತು. ನಡೆದದ್ದೇನೆಂದು ಪ್ರಜ್ಞೆಗೆ ನಿಲುಕುವುದರೊಳಗೆ ನಡೆದುಹೋದ ಈ ಕಪಾಳಮೋಕ್ಷ ಕ್ರಿಯೆಯ ಬಗ್ಗೆ ಕುಪ್ಪುಸಾಮಿಯೂ ಒಂದು ಸೆಕೆಂಡು ಬೆವೆತು ಹೋಗಿದ್ದನು. ಹಾಗೆ ಬಡಿದು ಹೋದವನು ಇನ್ನು ಮುಂದೆ ತನ್ನ ಬೆನ್ನುಬಿದ್ದು ಕಾಡುತ್ತಾನೆಂದು ಅವನಿಗೆ ಆಗ ತಿಳಿಯಲೇ ಇಲ್ಲ.

ಪತ್ತೇಕಾನಿನಲ್ಲಿ ತುಂಬ ಹಿಂದಿನಿಂದ ನೀರುಗಂಟಿ ಕೆಲಸ ಮಾಡುತ್ತ ಹೊಟ್ಟೆ ಹೊರೆಯುತ್ತಿದ್ದ ಅಲೀಮನೆಂಬ ಆಸಾಮಿಗೆ ಆ ಪರಿ ಹುಚ್ಚು ಹಿಡಿದಿದ್ದೇಕೆಂದು ತುಂಬ ಜನಕ್ಕೆ ತಿಳಿದಿರಲಿಲ್ಲ ಬಿಡಿ. ಊರಾಚೆಗಿನ ಗುಡ್ಡದ ನೀರು ಜಿನುಗುವ ಜಾಗದಲ್ಲಿ ಗ್ರಾಮಪಂಚಾಯ್ತಿಯವರು ಕಟ್ಟಿದ್ದ ಬಾವಿಯಂಥಹ ವ್ಯವಸ್ಥೆಯ ಮೋಟರನ್ನು ಆನುಆಫು ಮಾಡಿಕೊಂಡು ನೀರುಸಪ್ಲೈ ಮಾಡುತ್ತಿದ್ದ ಇದೇ ಅಲೀಮನು ಬಸುರಿಹೆಂಡ್ತಿಯ ಜೊತೆಗೆ ಒಂದುಕಾಲಕ್ಕೆ ಪೊಗದಸ್ತಾಗಿಯೇ ಬದುಕುವನಾಗಿದ್ದನು. ಬೆಳೆದ ಶುಂಠಿಗೆ ರೇಟುಬಿದ್ದು, ಬೆಂಬಲ ಬೆಲೆ ಘೋಷಿಸಬೇಕೆಂದು ರೊಚ್ಚಿಗೆದ್ದು ಬೀದಿಯಲ್ಲಿ ಕಂಡಕಂಡ ವಾಹನಗಳಿಗೆಲ್ಲ ಕಲ್ಲು ಹೊಡೆಯುತ್ತಿದ್ದ ಶುಂಠಿ ರೈತರನ್ನು ಚದುರಿಸಲು ಪೊಲೀಸರು ಹಾರಿಸಿದ ರಬ್ಬರು ಗುಂಡೊಂದು ಅಪ್ಪಿತಪ್ಪಿ ಅಲ್ಲಿದ್ದ ಅಲೀಮನ ಬಸುರಿ ಹೆಂಡತಿಗೆ ಬಿದ್ದು, ಆಕೆ ಓಡಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಹೊಟ್ಟೆಕೆಳಗಾಗಿ ಬಿದ್ದು ಅಲ್ಲೇ ರಕ್ತಸ್ರಾವವಾಗಿ ಅಸುನೀಗಿದ್ದಳು. ಪೊಲೀಸರ ಗುಂಡೇಟಿಗೇ ಹೆಂಡತಿ ಸತ್ತಿದ್ದಾಳೆಂದು ಅಂದುಕೊಂಡ ಅಲೀಮನಮತಿಯು ಆವತ್ತಿನಿಂದ ಇಷ್ಟ ಬಂದಂತೆ ವರ್ತಿಸುತ್ತ ಪೊಲೀಸರೆಡೆಗೆ ಅಪರಿಮಿತ ದ್ವೇಷವನ್ನು ಬೆಳೆಸಿಕೊಂಡಿತ್ತು.
ಇವನಿಗೆ ತಿಕ್ಕಲು ಅಮರಿಕೊಂಡಮೇಲೆ ಗುತ್ತೇಕಾನಿಗೆ 300 ಅಡಿ ಎತ್ತರದ ನೀರುಟ್ಯಾಂಕೂ ಬಂದು ಅಲೀಮನಿಗಿದ್ದ ನೀರುಗಂಟಿ ಕೆಲಸವೂ ಚಾಪೆ ಸುತ್ತಿಕೊಂಡು ಶುಭಂ ಎಂದು ಹೊರಟುಹೋಗಿತ್ತು. ದಫೇದಾರ್ ಕುಪ್ಪುಸಾಮಿಯ ಕಪ್ಪಾಳಕ್ಕೆ ಬಿದ್ದ ಊಹಿಸಲಾಗದ ಏಟು ಇದೇ ಅಲೀಮ ಕೊಟ್ಟುದುದೇ ಆಗಿತ್ತು.
ಖಾಕಿ ಬಟ್ಟೆ-ಟೋಪಿಯವರನ್ನು ಕಂಡರೆ ಇದ್ದಕ್ಕಿದ್ದಂತೆ ಗಂಡಸಾಗುತ್ತಿದ್ದ ಅಲೀಮನು ತನ್ನ ಆಸುಪಾಸಿನಲ್ಲೆಲ್ಲಾದರೂ ಒಂದು ಪೊಲೀಸುಪ್ರಾಣಿ ಕಾಣಿಸಿಕೊಂಡರೆ ಅದಕ್ಕೆ ಕೊಡಬಾರದ ವರಾತವನ್ನೆಲ್ಲ ಕೊಟ್ಟು ತನ್ನ ಪೊಲೀಸು ದ್ವೇಷವನ್ನು ಕಂತು ಕಂತಿನಲ್ಲಿ ತೀರಿಸಿಕೊಳ್ಳುತ್ತಿದ್ದನು. ಎದುರಿಗೆ ಬರುವ ಜನರೆದುರು ‘ಯುವರ್ ಅಂಡರರೆಸ್ಟ್’ಅಂತ ಅವನೇ ಎರಡೂ ಕೈಯೆತ್ತಿಕೊಂಡು ನಿಂತುಬಿಡುತ್ತಿದ್ದ. ಅವನಾಗಿ ಅವನೇ ಹೋಗುವವರೆಗೂ ಎದುರಿಗಿದ್ದವರು ಕಾಯಲೇ ಬೇಕಿತ್ತು. ಅದಕ್ಕೆ ಮುಂಚೆಯೇನಾದರೂ ತೆರಳಲು ನಿಂತವರು ಮಿಸುಗಾಡಿದರೋ.. ನಿಜವಾಗಿಯೂ ಅವರು ಅಲೀಮನ ಅಂಡರಿನಲ್ಲಿ ಅರೆಸ್ಟಾಗಿ ಕಪ್ಪ ಕಪ್ಪಾಳಕ್ಕೆ ಏಟು ತಿಂದು ಹೋಗುತ್ತಿದ್ದರು. ಪತ್ತೇಕಾನಿನ ಪಶು ಚಿಕಿತ್ಸಾಲಯದ ವೆಟರ್ನರಿ ಡಾಕ್ಟರು ಲೋಕೇಶಪ್ಪನಿಗೆ ಇವನು ಕೊಡುತ್ತಿದ್ದ ಕಾಟಗಳು ಒಂದೆರಡರ ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ಯಾವು ಯಾವುದೋ ಕಸಾಲೆ ಬಂದ ಎತ್ತುದನಗಳ ಕುಂಡಿಯೊಳಗೆ ಭುಜದವರೆಗೂ ಕೈ ತೂರಿಸಿ ಕಸ ಕಲ್ಮಶ ತೆಗೆದು ಪರೀಕ್ಷಿಸುತ್ತಿದ್ದ ಲೋಕೇಶಪ್ಪನ ಕೆಲಸವನ್ನೇ ಧ್ಯಾನಸ್ಥನಂತೆ ನೋಡುತ್ತಿದ್ದ ಅಲೀಮನು ನೋಡೋತನಕ ನೋಡಿ ಅದ್ಯಾಕಷ್ಟು ಕಷ್ಟಬೀಳ್ತೀಯೋ ಲೋಕೇಸ, ಎತ್ತಿನ ಕುಂಡಿ ಒಳಕ್ಕೆತೋಳುಮಟ ಕೈ ತೂರ್ತದೆ ಅಂದ್ರೆ, ನಿನ್ ತಲೇನೇ ಕುಂಡಿ ಒಳಕ್ಕೆ ತೂರಿಸಿಬುಟ್ಟು..ಹೊಟ್ಟೆ ಒಳಗೆ ಏನೇನ್ ಡ್ಯಾಮೇಜಾಗೈತೆ ಅಂತ ನೋಡಬೋದಲ್ವ, ತಲೆ ಇಡೋ ತಳ್ತೀನಿ ಒಳಕ್ಕೆ? ಅಂತಪ್ರಶ್ನೆ ಒಗಾಯಿಸುತ್ತಿದ್ದ.
ವೆಟರನರಿ ಸೈನ್ಸನ್ನೇ ತಲೆಕೆಳಗು ಮಾಡಿ ಕೊಡವುತ್ತಿದ್ದ ಅಲೀಮನ ಪ್ರಶ್ನೆಗಳಿಗೆ ಲೋಕೇಶಪ್ಪನಿಗೆ ಗೋಳಾಡುವಷ್ಟು ದುಃಖವಾಗುತ್ತಿತ್ತು.ಇಂಥ ಅಲೀಮನಿಗೂ ಕುಮುದೆಯನ್ನು ಕದ್ದೊಯ್ದ ಇಬ್ರಾಹಿಮನಿಗೂ ಅದೆಂಥ ಬಾಂಧವ್ಯವಿತ್ತೋ ಏನೋ, ಅವನೊಬ್ಬನ ಮಾತನ್ನಷ್ಟೇ ಅಲೀಮ ಕೇಳುತ್ತಿದ್ದ. ಇವನೊಬ್ಬನಿಗೆ ಮಾತ್ರ ಅಂಡರ್ ಅರೆಸ್ಟ್ ಪನಿಷ್ಮೆಂಟು ಕೊಡಲು ಅಲೀಮ ಮುಂದಾಗುತ್ತಿರಲಿಲ್ಲ. ಅದು ಯಾವ ಲೆವೆಲ್ಲಿಗಿತ್ತೆಂದರೆ ಅಲೀಮ ಯಾರನ್ನಾದರೂ ಹೀಗೆ ಗೋಳು ಹುಯ್ದುಕೊಳ್ಳುತ್ತಿದ್ದರೆ ಪಟ್ಟೇಸಾಬರ ಮನೆಗೆ ಇಬ್ರಾಹಿಮನನ್ನು ಕೂಡಲೇ ಕಳುಹಿಸಲು ಬುಲಾವು ಹೋಗುತ್ತಿತ್ತು. ಇಬ್ರಾಹಿಮ ಬಂದವನೇ, ಎದುರಿಗೊಬ್ಬರನ್ನು ನಿಲ್ಲಿಸಿ ಎರಡೂ ಕೈಯೆತ್ತಿಕೊಂಡು ಗೊಂಬೆಯಂತೆ ನಿಂತುಕೊಂಡ ಅಲೀಮನ ಭುಜದ ಮೇಲೆ ಕೈಹಾಕಿ ಮೆತ್ತಗೆ ಪಕ್ಕಕ್ಕೆ ಎಳೆದೊಯ್ಯುತ್ತಿದ್ದನು. ಅವನೊಡನೆ ಏನೋ ಮಾತಾಡಿ ಅವನ ಪೊಲೀಸು ಕೋಪವನ್ನು ಕಮ್ಮಿಗೊಳಿಸಿ ಸಮಾಧಾನವನ್ನೂ ಮಾಡುತ್ತಿದ್ದನು. ಇದೀಗ ಅಂತಹ ಇಬ್ರಾಹಿಮನೂ ಇಲ್ಲದೆ ಅಲೀಮನನ್ನು ಕಟ್ಟಿಹಾಕುವವರೇ ಇಲ್ಲದಂತಾಗಿಗೋಗಿತ್ತು. ಅಕ್ಷರಶಃ ಬೆದೆಗೆ ಬಂದ ಗೂಳಿಯಂತಾಡುತ್ತಿದ್ದ ಇವನಿಂದ ತಮ್ಮನ್ನು ರಕ್ಷಿಸಿಕೊಳ್ಳುವುದೋ, ಊರಿಗೆ ಅಮರಿಕೊಂಡಿರುವ ಗಬ್ಬುನಾತದಿಂದ ತಮ್ಮನ್ನು ಕಾಪಾಡಿಕೊಳ್ಳುವುದೋ, ಕುಮುದೆ, ಇಬ್ರಾಹಿಮರ ಪಲಾಯನದ ಕಾರಣಕ್ಕೆ ಯಾವುದೇ ಸಮಯದಲ್ಲಾದರೂ ಸರಿಭುಗಿಲ್ಲೆನ್ನಲು ಸಿದ್ಧವಿದ್ದ ಹಿಂದು-ಮುಸ್ಲಿಂ ಗಲಾಟೆಯಿಂದ ರಕ್ಷಿಸಿಕೊಳ್ಳುವುದೋ ಎಂಬ ಸಂದಿಗ್ಧತೆಯೊಳಗಿದ್ದ ಪತ್ತೇಕಾನು ಇತ್ತೀಚೆಗಂತೂ ವಿಪರೀತ ಗೊಂದಲಗೊಂಡಿತ್ತು.
ಅಲೀಮನಿಂದ ತಪರಾಕಿ ಸ್ವೀಕರಿಸಿ ಪತ್ತೇಕಾನು ಮತ್ತು ಅಂಬಾಡಿಗಳಲ್ಲಿ ಕುಮುದೆ ಇಬ್ರಾಹಿಮರ ನಾಪತ್ತೆಯ ಕಾರಣಕ್ಕೆ ಗಲಾಟೆಬ್ಬಿಸಲು ಯಾರ್ಯಾರು ಏನೇನು ಸಂಚು ಹೊಸೆಯುತ್ತಿದ್ದಾರೆಂದು ತನಿಖೆಗಿಳಿದಿದ್ದ ಕುಪ್ಪುಸಾಮಿಗೆ ತಕ್ಷಣಕ್ಕೆ ಇವೆರಡೂ ಊರುಗಳು ಬೂದಿ ಊದಿದ ಕೆಂಡದಂತೆ ಕೆಂಪಗೆ ಏನಕ್ಕೋ ಕಾಯುತ್ತಿರುವಂತೆ ಅನಿಸುತ್ತಿತ್ತು. ಇದರ ನಡುವೆ ಒಮ್ಮೆ ತನ್ನ ಟಿವಿಎಸ್ಸನ್ನು ದೂರದಲ್ಲೆಲ್ಲೋ ನಿಲ್ಲಿಸಿ ಪತ್ತೇಕಾನಿನ ಅಂಗಡಿಯವನೊಡನೆ ಏನೋ ಮಾತನಾಡಿ ಒಂದು ಧಮ್ಮು ಹೊಡೆದು ಬರುವುದರೊಳಗೆ ಯಾವುದೋ ಮಾಯದಲ್ಲಿ ಅಲೀಮನು ಕುಪ್ಪುಸಾಮಿಯ ಟಿವಿಎಸ್ಸಿನ ಸೀಟಿನ ಮೇಲೆ ಹೇತು ಹೋಗಿಬಿಟ್ಟಿದ್ದ. ಒಂದಷ್ಟು ಬೈದು-ಕೂಗಿ ತನ್ನ ಸಿಟ್ಟು ಇಳಿಸಿಕೊಂಡ ಕುಪ್ಪುಸಾಮಿಯು ಅಳುಮುಖದಲ್ಲಿ ಆ ಗಲೀಜನ್ನು ಶುಚಿಗೊಳಿಸಿತಳ್ಳಿಕೊಂಡೇ ಹೋಗಿದ್ದ. ಇದಾಗಿ ಬೇರೆ ಬೇರೆ ಮೂರು ಸಲವೂ ಅಲೀಮ ದಪೇದಾರ್ ಕುಪ್ಪುಸಾಮಿಯ ಟಿವಿಎಸ್ಸಿನ ಸೀಟಿನ ಮೇಲೆ ಹೇತು ಓಡಿ ಹೋಗಿದ್ದನು. ಒಟ್ಟು ಬದುಕಿನ ಮೇಲೆಯೇ ಜಿಗುಪ್ಸೆ ಹುಟ್ಟಿದವನಂತಾಗಿ ಹೋದ ಕುಪ್ಪುಸಾಮಿಯು ಇದೇ ಬೇಸರದಲ್ಲಿ ಪಟ್ಟೇಸಾಬರ ಹೆಂಡತಿಯ ಕೋಪಕ್ಕೂ ತುತ್ತಾಗಿದ್ದ. ಮಗನ ಅಪಹರಣದ ಕೇಸು ಏನಾಗಿದೆಯೆಂದು ನಡುರೋಡಲ್ಲಿ ಜಗಳಕ್ಕೆ ಬಿದ್ದ ಪಟ್ಟೇಸಾಬರ ಹೆಂಡತಿ ಸಲ್ಮಮ್ಮನಿಗೆ ಯಾವುದೋ ಗ್ಯಾನದಲ್ಲಿ ಇವನೂ ಬೈದುಬಿಟ್ಟಿದ್ದ. ಈ ವಾಸನೆ ಊರಿಗೆ ಬಂದಿದ್ದೂ ಅಲ್ಲ ಕಂಡಕಂಡವರ ಕೈಲಿ ಅಪಮಾನಕ್ಕೀಡಾಗುವಂತಾಯಿತಲ್ಲ ಎಂಬುದು ಇವನ ಪಾಲಿನ ದುಃಖವಾಗಿತ್ತು. ಇವನ ದುಃಖಕ್ಕೆ ಕವಡೆಕಾಸಿನ ಕಿಮ್ಮತ್ತೂ ಕೊಡದ ಸಲ್ಮಮ್ಮಳು ಮಗನನ್ನು ಕಳೆದುಕೊಂಡ ತನಗೇ ತಿರುಗಿಸಿ ಬೈದ ಕುಪ್ಪುಸಾಮಿಗೆ ಚಪ್ಪಲಿಯಲ್ಲಿ ಬೀಸಿ ಹೊಡೆದು ಮುಂದೆ ಹೋಗಿದ್ದಳು. ಹೀಗೆ ತನ್ನಬದುಕನ್ನು ಪತ್ತೇಕಾನಿನ ಸರ್ವರೂ ಬಿಡಿಬಿಡಿಯಾಗಿ ಬಡಿಯುತ್ತಿರುವುದನ್ನು ಸಹಿಸಲಾರದೆ ಹೋದ ಕುಪ್ಪುಸಾಮಿಯು ಪಟ್ಟೇಸಾಬರಿಗೆ ನಿಮ್ಮ ಮಗನೇನಾದರೂ ಕೈಗೆ ಸಿಕ್ಕರೆ ಅವನು ತನಗೆ ತಂದಿಟ್ಟಿರುವ ಗತಿಗೆ ಕೈಯೋ ಕಾಲೋ ಮುರಿಯುತ್ತೇನೆಂದು ಕೂಗಿ ಸಿಟ್ಟು ತೋಡಿಕೊಂಡಿದ್ದ.
ಇವೆಲ್ಲವೂ ಒಂದರ ಹಿಂದೊಂದರಂತೆ ನಡೆಯುತ್ತಿರುವಾಗ ಆ ಕಡೆಯಲ್ಲಿ, ಊರಿಗೂ ಹೋಗದೆ, ಮೊಂಟಾವಿನ ಹೊಯ್ಸಳ ಲಾಡ್ಜಿನಲ್ಲಿ ಇಷ್ಟ ಬಂದಷ್ಟು ಸಲ ಕುಮುದೆಯೆನ್ನೋ ಬೆಂಕಿ ಕುದುರೆಯನ್ನು ಹತ್ತಿಳಿಯುತ್ತಿದ್ದ ಇಬ್ರಾಹಿಮನಿಗೆ ತಮ್ಮಿಬ್ಬರಿಗೆ ಸಂಬಂಧಿಸಿದಂತೆ ಊರಲ್ಲೆದ್ದಿರುವ ರಂಕುಲಾಟಗಳ ಬಗ್ಗೆ ಯಾವ ಪರಿವೆಯಿದ್ದಂತೆ ಇರಲಿಲ್ಲ. ಅವನ ‘ಕಾನೂನು ಸುವ್ಯವಸ್ಥೆಯು’ ಹತೋಟಿಗೆ ಬಂದ ಮೇಲೆ ಇದ್ದಕ್ಕಿದ್ದಂತೆ ಜ್ಞಾನದ ಬಲ್ಪು ಫಳಾರನೆ ಹೊತ್ತಿಕೊಂಡವಂತೆ ಒಂದು ರಾತ್ರಿ ಕುಮುದೆಗೆ ಒಂದು ಮಾತೂ ಹೇಳದೆ ಹೊಯ್ಸಳಲಾಡ್ಜಿನಿಂದ ಎದ್ದುಬಂದು ವಾಪಸ್ಸು ಪತ್ತೇಕಾನಿನ ತನ್ನ ಮನೆಗೆ ಬಂದು ಬಿದ್ದಿದ್ದ. ಬಂದೂಕದ ಹಿಡಿಯೆತ್ತಿಕೊಂಡು ಮಗನಿಗೆ ಸಮಾ ಬಡಿದಿದ್ದ ಪಟ್ಟೇಸಾಬರು ಇನ್ನೊಂದು ಸಂಕಟಕ್ಕೆ ಸಿಕ್ಕಿಕೊಂಡಿದ್ದರು. ಒಂದೆಡೆ ಮಗನ ಅಪಹರಣದ ಕೇಸು ಉಲ್ಟಾ ಹೊಡೆದದ್ದು, ಇನ್ನೊಂದು ಕುಪ್ಪುಸಾಮಿಯ ಕೈಗೆ ಮಗ ಸಿಕ್ಕರೆ ಒಂದು ಗತಿಯಾಗಿ ಹೋಗುತ್ತಾನಲ್ಲ ಎಂಬ ಭಯ. ಇವೆರಡಕ್ಕೂ ಒಂದೇ ಕಲ್ಲಲ್ಲಿ ಉತ್ತರಿಸಲು ಪಟ್ಟೇಸಾಬು ಸಿದ್ದಗೊಂಡಿದ್ದನು. ಮಗನನ್ನು ಕೋಣೆಯಲ್ಲಿ ಕೂಡಿಹಾಕಿ ಅವನು ಮನೆಗೆ ಬಂದೇ ಇಲ್ಲವೆಂಬಂತೆ ವರ್ತಿಸುತ್ತ ಇದ್ದುಬಿಟ್ಟನು. ಈ ಕಡೆಬೆಳಗೆಲ್ಲ ಮೊಂಟಾವಿನ ಲಾಡ್ಜಿನಲ್ಲಿ ಇಬ್ರಾಹಿಮನಿಗೆ ಕಾದ ಕುಮುದೆಗೆ ತಾನು ಸಾರಾಸಗಟಾಗಿ ಅವನ ಖೆಡ್ಡದೊಳಗೆ ಉರುಳಾಡಿ ಎದ್ದಿರುವುದು ಸ್ವಲ್ಪ ತಡವಾಗಿಯೇ ಅರ್ಥವಾಗಿತ್ತು. ಕಿವಿಗಿದ್ದ ಬೆಂಡೋಲೆಯನ್ನೇ ಹೊಯ್ಸಳ ಲಾಡ್ಜಿನ ಮ್ಯಾನೇಜರಿಗೆ ಕೊಟ್ಟು ಕೆಟ್ಟಧೈರ್ಯ ಮಾಡಿ ಅಂಬಾಡಿಯ ತನ್ನ ಮನೆಯೊಳಗೆ ಹೆಜ್ಜೆಯಿಟ್ಟಿದ್ದಳು. ಇಲ್ಲೂ ಅದೇ ಪುನರಾವರ್ತನೆಗೊಂಡು ಅಪಹರಣದ ಕೇಸು ಉಲ್ಟಾ ಹೊಡೆದು ಮರ್ಯಾದೆ ಕೆಡುವ ಭಯದಲ್ಲಿ ಕುಲುಮೆ ನಾಗಪ್ಪನು ಮಗಳನ್ನು ಒಂದು ಕೋಣೆಯಲ್ಲಿ ಕೂಡಿ ಬೀಗ ಜಡಿದು ಪಟ್ಟೇಸಾಬರಂತೆಯೇ ಏನೂ ಅರಿಯದ ಮಗುವಿನಂತೆ ಹೊರಗೆ ದುಃಖ ನಟಿಸುತ್ತ ಮಗಳನ್ನು ಹುಡುಕಿಕೊಡುವಂತೆ ದಫೇದಾರ್ಕುಪ್ಪುಸಾಮಿಯ ಜೀವತಿನ್ನುತ್ತ ಇದ್ದು ಬಿಟ್ಟನು.
ಮೊದಲೆಲ್ಲ ಲವ್ಜಿಹಾದು ಲೊಟ್ಟೆ ಜಿಹಾದು ಎಂದು ಕಂಡಕಂಡಲ್ಲಿ ತವುಡು ಕುಟ್ಟುತ್ತ ಧರ್ಮವೀರನೆನಿಸಿ ಕೊಂಡು ಹೆಂಗಾದರೂ ಮಾಡಿ ದೇಶಭಕ್ತರ ಪಾರ್ಟಿಯ ಜಿಲ್ಲಾಸಮಿತಿಯಲ್ಲಿ ಜಾಗ ಹಿಡಿಯಲು ತವಕಿಸುತ್ತಿದ್ದ ಒಬ್ಬ ದೇವಪ್ಪಸೆಟ್ಟಿಗೆ ಈ ಪ್ರಕರಣದಿಂದ ಒಂದು ಹುಲುಸಾದ ಕೇಸು ಸಿಕ್ಕಿದಂತಾಗಿದ್ದು ತುಂಬು ನಿರೀಕ್ಷಿತವೇ. ಅಪರೂಪಕ್ಕೆ ಅನ್ನ ಕಂಡ ಕಾಲಾಪಾನಿ ಖೈದಿಯಂತೆ ಎಷ್ಟುಬೇಕೋ ಅಷ್ಟು ಖುಷಿಯಾದ ಸೆಟ್ಟಿಯು ಸೈನ್ ಬೋರ್ಡ್ ಬರೆಯುವ ಕರುವಿನಂಥ ಹುಡುಗ ಅಣ್ಣೇಶನಿಂದ ‘ಲವ್ ಜಿಹಾದ್ಗೆ ಧಿಕ್ಕಾರ, ಸಾಬರೇ.. ಪತ್ತೇಕಾನು ಬಿಟ್ಟು ತೊಲಗಿ ಅಂಥದೇನೋ ಬ್ಯಾನರು ಬರೆಸಿಕೊಂಡು ತನ್ನಂಥವೇ ಇನ್ನೊಂದಷ್ಟು ಪುಗಸಟ್ಟೆ ಕೇಸುಗಳನ್ನು ಒಟ್ಟುಹಾಕಿಕೊಂಡು ಊರೆಲ್ಲ ಕಿರುಚಾಡಿಕೊಂಡು ದಾಂಧಲೆಯೆಬ್ಬಿಸಿಕೊಂಡು ಇದ್ದನು. ಊರಬೀದಿಗಳಲ್ಲಿ ಒಂದು ಹಂತಕ್ಕಿರುತ್ತಿದ್ದ ಇವರ ಕೂಗಾಟವು ಸಾಬರ ಏರಿಯಾ ಮತ್ತು ಮಸೂದಿ ಬಳಿ ಬಂದಾಗಲೆಲ್ಲ ತಾರಕಕ್ಕೇರುತ್ತಿದ್ದವು. ಮೆರವಣಿಗೆ, ಕೂಗಾಟ ಎಲ್ಲವೂ ಮುಗಿದ ಮೇಲೂ ಜಿಲ್ಲಾಸಮಿತಿಯ ಗಮನ ಸೆಳೆಯಲು ಮತ್ತೇನಾದರೂ ಕಿತಾಪತಿ ಬೇಕೆಂಬುದೂ ಸೆಟ್ಟಿಯ ಸಂಕಟಕ್ಕೆ ಡೀಜಲ್ಲು ಸುರಿಯುತ್ತಿತ್ತು. ಅನ್ನಿಸಿದ ತಕ್ಷಣವೇ ಮಕಾಮೂತಿ ನೋಡದೆ ಸಾಬರ ಕೇರಿಗೆ ತನ್ನ ಪುಂಡಸೇನೆಯೊಂದಿಗೆ ನುಗ್ಗಿಕಲ್ಲು ತೂರುತ್ತ, ಬಾಯಿಗೆ ಬಂದಂತೆ ಬೈಯುತ್ತಮಸೂದಿ ಗೇಟನ್ನು ಅಲ್ಲಾಡಿಸಿ ಕಿತ್ತೆಸೆದು ರಂಪವೆಬ್ಬಿಸಿಯೂ ಬಿಟ್ಟಿದ್ದನು. ಸುಮ್ಮನಿದ್ದವರನ್ನು ಯಾರದ್ದೋ ಪ್ರೇಮಪಲಾಯನ ಪ್ರಕರಣಕ್ಕೆ ಹೊಣೆಯಾಗಿಸಿ ಕೆಣಕಿದ್ದು ಸಾಬರಿಗೂ ಸರಿ ಬರದೆ ಅವರೂ ಸೆಟ್ಟಿಗ್ಯಾಂಗಿನ ವಿರುದ್ಧ ತಿರುಗಿಬಿದ್ದು ನೋಡನೋಡುತ್ತಲೇ ಪತ್ತೇಕಾನು ಉರಿಯುವ ಒಲೆಯಾಗಿ ಧಗಧಗಿಸತೊಡಗಿತ್ತು. ಸುದ್ದಿ ತಿಳಿದೊಡನೆಜೀಪು ಹಾಕಿಕೊಂಡುಪತ್ತೇಕಾನಿಗೆ ಬಂದಿಳಿದ ಎಸ್ಸೈ ಬಲದೇವನು ‘ಇದ್ಯಾವ ಪುಟಗೋಶಿ ಊರು ಅಂತ ಸರ್ಕಾರವು ಅವನ ಸ್ಟೇಷನ್ನಿಗೆ ಟಿಯರ್ ಗ್ಯಾಸ್ ಸಪ್ಲೈ ಕೊಡದೇ ಇದ್ದುದರಿಂದ’ ಖಾಲಿಪೀಲಿ ಲಾಠಿಚಾರ್ಜ್ ಗೆ ಇಳಿದನು. ನಾಮವೂ ನನ್ನದೇ, ಟೋಪಿಯೂ ನನ್ನದೇ ಎಂಬಂತೆ ಸಿಕ್ಕವರನ್ನೆಲ್ಲ ಎಳೆದೆಳೆದು ಬಡಿದ ಬಲದೇವ ಮತ್ತು ದಫೇದಾರ್ ಕುಪ್ಪುಸಾಮಿಗೆ ತಾವೆಣಿಸಿದ್ದು ನಡೆದೇ ಹೋಗಿದ್ದರ ಬಗ್ಗೆ ಆಶ್ಚರ್ಯವಿತ್ತು. ಒಂದಷ್ಟು ಜನರನ್ನು ಒಂದೆಡೆ ಕೂಡಿಸಿ ಇವರನ್ನೆಲ್ಲ ಬಸ್ಸು ಹತ್ತಿಸಿಕೊಂಡು ಸ್ಟೇಷನ್ನಿಗೆ ತರಲು ದಪೇದಾರನಿಗೆ ಆಜ್ಞಾಪಿಸಿ ಜೀಪು ಹತ್ತಲು ಬಂದ ಬಲದೇವನಿಗೆ ಒಂದು ಕ್ಷಣ ಅವನ ಕಣ್ಣೆರಡೂ ಕಿವಿಯೊಳಗಿನಿಂದ ಪುಳುಕ್ಕನೆ ಹೊರಗೆ ಬಂದಂತಾಗಿ ಹೋಯಿತು. ಪೊಲೀಸು ಜೀಪಿನ ಡ್ರೈವರ್ ಸೀಟಿನ ಮೇಲೆ ಯಾವುದೋ ಮಾಯದಲ್ಲಿ ಬಂದಿದ್ದ ದ್ರಾಬೆ ಅಲೀಮನು ಹೇತು ಓಡಿಹೋಗಿದ್ದನು..
ಸರಿ ಸುಮಾರು ಈ ಪೇಚಾಟಗಳೆಲ್ಲವೂ ಹಾಗೆಯೇ ಉಳಿದುಕೊಂಡಿದ್ದ ಸಂದರ್ಭದಲ್ಲಿಯೇ ದೇವಪ್ಪಸೆಟ್ಟಿ ಹೊಸತೊಂದು ರೂಮರನ್ನು ಕಂಡಕಂಡವರ ಕಿವಿಯೊಳಗೆ ಊದಿ ಆರುತ್ತಿರುವ ಬೆಂಕಿಯನ್ನು ಇನ್ನಷ್ಟು ದೇದೀಪ್ಯಮಾನವಾಗಿ ಬೆಳಗಿಸಲು ಯತ್ನಿಸುತ್ತಿದ್ದ. ಪಟ್ಟೇಸಾಬರ ಮಗನು ಕುಮುದೆಯನ್ನು ಮಜಾಮಾಡಿ ಕತ್ತುಹಿಸುಕಿ ಕೊಂದುಇಲ್ಲೇಎಲ್ಲೋ ಹೂತಾಕಿ ಭಯಬಿದ್ದು ಓಡಿಹೋಗಿದ್ದಾನೆಂದೂ, ಅವಳ ಹೆಣ ಕೊಳೆತು ಈ ಪರಿಯ ಗಬ್ಬುವಾಸನೆಯು ಊರು ತುಂಬಿಕೊಂಡಿದೆಯೆಂದೂ ಕಂಡಕಂಡವರೆದುರು ಒದರುತ್ತ ಬರುತ್ತಿದ್ದ. ಈ ಪಟ್ಟಿನಲ್ಲಾದರೂ ಸಾಬರಕುಲಕ್ಕೆ ಒಂದು ಗತಿ ಕಾಣಿಸಿ ಹೈಲೈಟಾಗಿಬಿಡಬೇಕೆಂದು ಹಂಚಿಕೆಯಲ್ಲಿದ್ದ ಇದೇ ಟೈಮಿನಲ್ಲೇ ಮನೆಯೊಳಗೆ ಯಾವುದೋ ಗ್ಯಾನದಲ್ಲಿ ಹಲ್ಲುಜ್ಜಿಕೊಂಡು ನಿಂತಿದ್ದ ಇಬ್ರಾಹಿಮನು ಅಲೀಮನ ಕಣ್ಣಿಗೆ ಅಪ್ಪಿತಪ್ಪಿ ಬಿದ್ದು, ಅವನ ಕೊಳಪಟ್ಟಿ ಹಿಡಿದು ದರದರನೆ ಊರೊಳಗೆ ಎಳೆತಂದು ರಸ್ತೆನಡುವಲ್ಲಿ ನಿಲ್ಲಿಸಿಕೊಂಡು ಗಬಗಬನೆ ಮುತ್ತುಕೊಡುತ್ತ ತನ್ನ ಪ್ರೀತಿ ತೋರಿಸಿದ್ದೇ ತಡ, ಇಲ್ಲಿಯತನಕ ನೆಟ್ಟಗೆ ಓಡುತ್ತಿದ್ದ ಪಟ್ಟೇಸಾಬರ ಭೋಂಗುಕತೆಯು ಪತ್ತೇಕಾನೊಳಗೆ ಚೆಡ್ಡಿ ಉದುರಿದಂತೆ ಬಹಿರಂಗವಾಗಿತ್ತು.
ಹಂಗಾಡಿ ಹಿಂಗಾಡಿ ಕುಮುದೆಯನ್ನೂ ಹೆಚ್ಚುದಿನ ಬಚ್ಚಿಡಲು ಸಾಧ್ಯವಾಗದೆ ಅತ್ತ ಕುಲುಮೆ ನಾಗಪ್ಪನೂ ಅಂಗಾಡಿಯ ಜನರಿಗೆ ಸಿಕ್ಕುಬಿದ್ದಿದ್ದ. ಇಬ್ರಾಹಿಮನ ಜುಟ್ಟಿಡಿದು ಟೇಸನ್ನಿಗೆ ಎಳೆದೊಯ್ದ ಕುಪ್ಪುಸಾಮಿಯ ಬಾಂಬೆಕಟ್ಟು ಹೊಡೆತಗಳಿಗೆ ಬೇರೆದಾರಿಯಿಲ್ಲದೆ ಬಾಯಿಬಿಟ್ಟ ಇಬ್ರಾಹಿಮನು ನಡೆದದ್ದೆಲ್ಲವನ್ನೂ ಇನ್ಸ್ಪೆಕ್ಟರ್ ಬಲದೇವನ ಮುಂದೆ ವದರಿದ್ದೂ ನಡೆಯಿತು. ಎರಡೂರುಗಳೂ ಹತ್ತಿ ಉರಿದೇಬಿಡುತ್ತವಲ್ಲ ಎಂದು ಗಾಬರಿಗೊಂಡಿದ್ದ ಬಲದೇವನು ಕುಲುಮೆನಾಗಪ್ಪನ ಮನೆಯಿಂದ ಕುಮುದೆಯನ್ನು ಸ್ಟೇಷನ್ನಿಗೆ ಕರೆಸಿ ಇಬ್ಬರಿಗೂ ಹಾರ ಬದಲಿಸಿಕೊಂಡು ಮದುವೆಯಾಗಲು ವ್ಯವಸ್ಥೆಗೊಳಿಸಿದ್ದನು. ಈ ವಿಷಯ ಈ ಕಿವಿನುಗ್ಗಿ ಆ ಕಿವಿನೆಗೆದು ಅಂಬಾಡಿ ಮತ್ತು ಪತ್ತೆ ಕಾನಿನ ಪೂರ ಗುಲ್ಲೆದ್ದುಹೋಗಿತ್ತು. ಸಾಬರೊಟ್ಟಿಗೆ ಮಲಗೆದ್ದು ಬಂದವಳೆಂದು ಊರೆಲ್ಲ ಗುಲ್ಲೆದ್ದ ಮೇಲೆ ಇನ್ಯಾರು ತಾನೇ ಇವಳನ್ನು ಮದುವೆ ಮಾಡಿಕೊಳ್ಳುವರೆಂದು ಕುಲುಮೆನಾಗಪ್ಪನೂ ಒಪ್ಪಿಕೊಂಡಿದ್ದ, ಪಟ್ಟೇಸಾಬರು ಮಾತ್ರ ಮೊದಲು ವರಾತವೆತ್ತಿದರೂ ನಂತರ ರೇಪುಕೇಸು ಜಡಿದು ಮಗನನ್ನು ಜೈಲಿಗೆ ನೂಕುತ್ತೇನೆಂದು ಬಲದೇವನು ಗದರಿಕೊಂಡ ಮೇಲೆ ಇಷ್ಟವಿಲ್ಲದೆಯೂ ಒಪ್ಪಿಕೊಂಡನು. ಹಂಗೂ ಕುಮುದೆಯು ಇಸ್ಲಾಮಿಗೆ ಮತಾಂತರವಾಗಬೇಕೆನ್ನುವವಿಶೇಷ ಕಂಡೀಷನನ್ನು ಇಟ್ಟಿದ್ದನಾದರೂ, ಅದನ್ನೂಸೇರಿಸಿ ಕೇಸು ಜಡಿಯುತ್ತೇನೆಂದು ಬಲದೇವನು ಬೆದರಿಸಿದ ಮೇಲೆ ಅದಕ್ಕೂ ತೆಪ್ಪಗಾದನು. ಸ್ಟೇಷನ್ನಿನೊಳಗೆಯೇ ಇಬ್ರಾಹಿಮನಿಗೂ ಕುಮುದೆಗೂ ಬಲದೇವನು ಮದುವೆಮಾಡಿ, ಪ್ಲಾನುಮಾಡಿ ರಿಜಿಸ್ಟರೇಷನನ್ನೂ ಮುಗಿಸಿಬಿಟ್ಟನು.
ದೇವಪ್ಪಸೆಟ್ಟಿಯ ಅಷ್ಟೂ ಪ್ಲಾನಿಗೆ ತನಗೆ ಗೊತ್ತಿಲ್ಲದೆಯೇ ಇಬ್ರಾಹಿಮನನ್ನು ಮನೆಯಿಂದ ಹೊರಗೆಳೆತಂದು ಮಣ್ಣು ಹುಯ್ದಿದ್ದ ತಲೆಕೆಟ್ಟ ಅಲೀಮನು ದೇವಪ್ಪಸೆಟ್ಟಿಗೇ ‘ಯುವಾರಂಡರ್ ಅರೆಸ್ಟ್’ ಮಾಡಿ ಅವನ ಅಷ್ಟೂ ಪಿತೂರಿಯನ್ನು ಚರಂಡಿಪಾಲು ಮಾಡಿ ಹಾಕಿಯಾಗಿತ್ತು. ಮದುವೆಯಾದ ಮೇಲೆ ಇದ್ದಕ್ಕಿದ್ದಂತೆಯೇ ಪತ್ತೇಕಾನನ್ನು ಪೀಡಿಸುತ್ತಿದ್ದ ಗಬ್ಬುವಾಸನೆಯು ಯಾರೋ ಹೇಳಿಕೊಟ್ಟಂತೆ ಮಟಾಮಾಯವಾಗಿ ಹೋಗಿತ್ತು. ಸುಳಿವಿಲ್ಲದೆಯೇ ಬಂದೊಕ್ಕರಿಸಿ ಸುಳಿವಿಲ್ಲದೆಯೇ ತೊಲಗಿದ ಈ ವಾಸನೆ ಹೇಗಾದರೂ ಎಲ್ಲಿಂದ ಬಂತೆಂಬ ರಹಸ್ಯ ಯಾರೊಬ್ಬರಿಗೂ ಗೊತ್ತಾಗಲಿಲ್ಲ. ಅತ್ತ ಕುಮುದೆ ಮತ್ತು ಇಬ್ರಾಹಿಮನಿಗೆ ಸ್ಟೇಷನನ್ನಿನೊಳಗೆ ಮದುವೆಯಾಗುತ್ತಿದ್ದಾಗ ಎಂಥದೋ ಡೌಟು ಬಂದು ಪತ್ತೇಕಾನಿಗೆ ನೀರುಸಪ್ಲೈ ಆಗುತ್ತಿದ್ದ ವಾಟರ್ ಟ್ಯಾಂಕು ಹತ್ತಿ ಬಗ್ಗಿನೋಡಿದ್ದ ಅಲೀಮನಿಗೆ ವಾಸನೆಯ ಮೂಲ ಗೊತ್ತಾಗಿಹೋಗಿತ್ತು. ಅರ್ಧತುಂಬಿದ್ದ ನೀರಿನ ಟ್ಯಾಂಕಿನೊಳಗೆ ಹತ್ತು ಹನ್ನೆರಡು ಕೋತಿಗಳು ಬಿದ್ದು ಸತ್ತು ಕೊಳೆತು ತೇಲುತ್ತಿದ್ದವು. ಮೊದಲಿಗೆ ಎರಡೇ ಕೋತಿ ಬಿದ್ದು ಸತ್ತಿದ್ದವಾದರೂ, ಅವನ್ನು ಉಳಿಸಲು ಟ್ಯಾಂಕಿನೊಳಗೆ ಇಳಿದಿದ್ದ ಇನ್ನಿತರ ಕೋತಿಗಳೂ ಟ್ಯಾಂಕಿನೊಳಗೆಯೇ ಮುಳುಗಿ ಅಲ್ಲೆ ಸತ್ತುಬಿದ್ದು ಇನ್ನೂ ತೇಲುತ್ತಲೇ ಇದ್ದವು. ದಿನಕಳೆದಂತೆ ಕೊಳೆತು ಗಬ್ಬುವಾಸನೆ ಹೊಡೆಯುತ್ತಿದ್ದ ಅದೇ ಕೋತಿಗಳಿದ್ದ ಕೊಳೆತ ನೀರನ್ನೇ ಪತ್ತೇಕಾನಿನ ಜನರು ಗೊತ್ತಿಲ್ಲದೆ ಕುಡಿಯುತ್ತಿದ್ದುದರಿಂದ ಬರಬಾರದ ಖಾಯಿಲೆಗಳೂ ಊರಿಗೆ ಹತ್ತಿಕೊಂಡಿದುದು ಆಗಿತ್ತು. ಟ್ಯಾಂಕಿನಿಂದ ಕಿತ್ತುಕೊಂಡು ಬರುತ್ತಿದ್ದ ಗಬ್ಬುನಾತವು ಊರೆಲ್ಲ ಪಸರಿಸಿಕೊಂಡು ಇಡೀ ಊರು ಗಬ್ಬು ಹೊಡೆಯುತ್ತಿದ್ದುದು ಅಲೀಮನೊಬ್ಬನಿಗೆ ಗೊತ್ತಾಗಿ, ಸೀದ ಒಳಗಿಳಿದವನೇ ಅಷ್ಟೂ ತೇಲುತ್ತಿದ್ದ ಕೋತಿಗಳ ಹೆಣದ ಬಾಲಗಳನ್ನು ಒಟ್ಟು ಮಾಡಿಕೊಂಡು ಹೊರತೆಗೆದು ಟ್ಯಾಂಕು ಇಳಿದು ಅದೆತ್ತಲೋ ನಡೆಯುತ್ತ ಯಾರನ್ನೋ ಬೈದುಕೊಂಡು ಹೋಗಿ ಊರಾಚೆ ಹಳ್ಳತೆಗೆದು ಹೂತು ಬಂದಿದ್ದ. ಇದಾದಮೇಲೆ ಏನಾಯಿತು ಎತ್ತಾಯಿತೆಂದು ಯಾರೂ ಅವನನ್ನು ಕೇಳಲೂ ಇಲ್ಲ, ಅವನೂ ಯಾರಿಗೂ ಬಾಯಿಬಿಟ್ಟು ಏನನ್ನೂ ಹೇಳಲೂ ಇಲ್ಲ.

***

 

‍ಲೇಖಕರು G

November 20, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

  1. Chinmay

    ಹಾಹಾ…ನಿರೂಪಣೆ ಸಕ್ಕತ್ತಾಗದೆ.. ಅಲೀಮಂಗೊಂದು ದೀರ್ಘದಂಡ ನಮಸ್ಕಾರ
    ಕಥೆಗೆ ಏಳೆಂಟು ಮುಖ. ಅವರವರ ಜರೂರತ್ತು ಅವರವರಿಗೆ…..ಜೊತೆಗೊಂದು ವಾಸ್ನೆ ಥ್ರಿಲ್ಲರ್ರು..
    ಮಜಾ ಇದೆ..ವಂದನೆಗಳು ಅಭಿನವ ವ್ಯಾಸರಿಗೆ,ಮಾಡರ್ನ್ ಗಣಪನಿಗೆ 😛

    ಪ್ರತಿಕ್ರಿಯೆ
  2. jeevan

    ಸೂಕ್ಷ್ಮ ವಿಷಯವನ್ನು ನವಿರಾಗಿ ನಿರೂಪಿಸಿದ್ದೀರ.

    ಪ್ರತಿಕ್ರಿಯೆ
  3. ಶಿವಿ ಮನಂ

    ಅಣ್ಣ, ಪರೋಟ ಜಾರಿ ಶೇರುವಕ್ಕೆಬಿದ್ದಿದ್ದು ಹೊಸದಿತ್ತು.ಮೂಗಿದ್ದವರು ಮೂಸಲೇಬೇಕಾದ ವಾಸ್ನೆ!!! ಭಾಷೆ ಸಲಾಮ್ ಹೊಡೆದಿದೆ.ಕಥೆ ಓದಿಸಿದ್ಕ ಇಬ್ರಿಗೂ ಟೆಂಕೂ ಟೆಂಕೂ

    ಪ್ರತಿಕ್ರಿಯೆ
  4. vaishali

    simple kathena heLida reeti tumba ishta aytu. Loved the style, language flow and narration. Bhatrige bhatre saati.

    ಪ್ರತಿಕ್ರಿಯೆ
  5. Sowmya

    ಚೆನ್ನಾಗಿದೆ ಜುಗಲ್ ಬಂದಿ ಕಥೆ. ಇಷ್ಟ ಆಯಿತು.

    ಪ್ರತಿಕ್ರಿಯೆ
  6. mm shivaprakash

    ಕಥೆ ಬಹಳ ಚನ್ಣಾಗಿದೆ.ಭಟ್ರನ್ನ ಸಿನಿಮಾ ಅವತಾರದಲ್ಲಿ ನೋಡಿದ್ದೆವು ಈಗ ಕಥೆ ಅವತಾರದಲ್ಲಿ ನೋಡಿದೆವು.
    ಎಂಎಂ.ಶಿವಪ್ರಕಾಶ ಹಂಪಿ.

    ಪ್ರತಿಕ್ರಿಯೆ
  7. ಮಂಜಿನ ಹನಿ

    ಭಟ್ರ ಕಥೆ ದಯಣ್ಣನ ನಿರೂಪಣೆಯಲ್ಲಿ.. ಸಕ್ಕತ್, ವಾರಾಂತ್ಯಕ್ಕೊಂದೊಳ್ಳೆ ಓದು.. 🙂
    – ಪ್ರಸಾದ್.ಡಿ.ವಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: