ಭಿನ್ನ ತಾತ್ವಿಕತೆಯ ಪ್ರವಾಸ ಕಥನಃ ಬಾಬಾಸಾಹೇಬರ ಲಂಡನ್ ಮನೆಯಲ್ಲಿ

ಡಾ. ರಾಜಶೇಖರ ಹಳೆಮನೆ
*
ಪ್ರೊ. ಎಚ್. ಟಿ. ಪೋತೆ ಅವರು ಧಮನಿತರ, ಶೋಷಿತರ, ಅಪಮಾನಿತರ, ಹಿಂಸೆಗೊಳಗಾದವರ ನೆಲೆಯಲ್ಲಿ ನಿಂತು ಲೋಕವನ್ನು ನೋಡುತ್ತಾರೆ. ಅವರ ಅಭಿವ್ಯಕ್ತಿ ವಿಧಾನ ಮತ್ತು ನಿರೂಪಣೆಯಲ್ಲಿ ಈ ಧ್ವನಿಯನ್ನು ಕಾಣುತ್ತೇವೆ. ಅವರ ಬರಹದ ಉಸಿರೇ ಈ ಸಾತತ್ಯ ಆಗಿರುವುದರಿಂದ ನೋವುಂಡವರ ನೆನಪುಗಳೇ ಮತ್ತೆ ಮತ್ತೆ ಗಾಢವಾಗಿ ಕಾಡುತ್ತವೆ. ಎಂತಹ ಸಂಭ್ರಮದ ಕ್ಷಣದಲ್ಲೂ ಸಂಕಟದ ನರಳಿಕೆ ಕಾಣಿಸಿಕೊಳ್ಳುತ್ತದೆ. ಪರಂಪರೆಯ ಚಲನೆಯಲ್ಲಿ ಉಳ್ಳವರ ಕ್ರೌರ್ಯ, ದಬ್ಬಾಳಿಕೆಗೆ ಒಳಗಾದವರ ಜೀವಗಳು ಇವರ ಕಥನದಲ್ಲಿ ಮೈ ಪಡೆಯುತ್ತವೆ. ಹೀಗಾಗಿ ಇವರ ಭಾಷೆ ಮತ್ತು ಅಭಿವ್ಯಕ್ತಿಗೆ ಸಹಜವಾದ ನುಡಿನೋಟಕ್ರಮವೊಂದು ಸಾಧ್ಯವಾಗಿದೆ. ಬೆಂದವರ ಒಡಲಾಳದ ಅಸ್ಮಿತೆ ಮತ್ತು ಚೈತನ್ಯವನ್ನು ಶೋಧಿಸುವ, ಜಾಗೃತಿಗೊಳಿಸುವ ನಿಲುವುಗಳು ಇವರ ಬರಹಗಳಲ್ಲಿ ಮುಖ್ಯವಾಗಿವೆ. ಅದು ವಾಚ್ಯರೂಪ ಪಡೆಯದೆ ಆಕೃತಿಯಾಗುವ ಕಥನಕ್ರಮದ ನೆಲೆಯಲ್ಲಿ ಅವರ “ಬಾಬಾಸಾಹೇಬರ ಲಂಡನ್ ಮನೆಯಲ್ಲಿ” ಕೃತಿ ರಚನೆಗೊಂಡಿದೆ.
ಪ್ರೊ. ಎಚ್. ಟಿ. ಪೋತೆ ಅವರ ಸಾಹಿತ್ಯ ರಚನೆ, ಚಿಂತನೆ, ವ್ಯಕ್ತಿತ್ವವನ್ನು ರೂಪಿಸಿದವರು ವಿಶ್ವಾತ್ಮಕ ಚಿಂತಕ ಬಾಬಾಸಾಹೇಬ ಅಂಬೇಡ್ಕರ್ ಅವರು. ಅವರ ಹೋರಾಟ, ಚಿಂತನೆಯ ದಾರಿಯಲ್ಲಿ ನಡೆಯುತ್ತಿರುವ ಇವರು ಲೋಕಕ್ಕೆ ಹೊಸ ಅರಿವನ್ನು ತುಂಬುವ ಪ್ರಯತ್ನ ಮಾಡುತ್ತಾರೆ. ದೊಡ್ಡ ಹುದ್ದೆಗಳನ್ನು ಅಲಂಕರಿಸಿದರೂ ಉಳ್ಳವರ ಜಾತೀಯತೆ, ಮೈಲಿಗೆಯ ವ್ಯಸನ ಬೆಂಬತ್ತಿದರ ಬಗ್ಗೆ ಗಾಢವಾಗಿ ಚಿಂತನೆಗೆ ಒಳಪಡಿಸುತ್ತಾರೆ. ಅವರ ಪ್ರವಾಸ ಕಥನದಲ್ಲಿಯೂ ಸಮುದಾಯಗಳ ಗಾಯಗೊಂಡ ಬೇರುಗಳೇ ನೆನಪಾಗುತ್ತವೆ. ತಳ ಸಮುದಾಯಗಳು ಅನುಭವಿಸುತ್ತಿರುವ ಅಪಮಾನಿತ ಬವಣೆಗಳು ಕಾಡುತ್ತವೆ. ಈ ಸಮುದಾಯಗಳನ್ನು ಮೇಲ್ವರ್ಗದ ಅಧಿಕಾರ ರಾಜಕಾರಣ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಬಗೆಯನ್ನು ತೀವ್ರವಾಗಿ ನಿಕಷಕ್ಕೆ ಒಡ್ಡುತ್ತಾರೆ. ಉಳ್ಳವರ ಹುನ್ನಾರಗಳನ್ನು ಅರ್ಥ ಮಾಡಿಕೊಂಡು, ಘನತೆಯ ಬದುಕನ್ನು ಕಟ್ಟಿಕೊಳ್ಳುವುದು ತಳ ಸಮುದಾಯದ ಆದ್ಯತೆಯಾಗಬೇಕೆಂಬ ತುಡಿತ ಕಾಣುತ್ತೇವೆ. ಹೀಗಾಗಿ ಅವರ ಲಂಡನ್-ಐರಿಸ್ ಪಯಣದ ಪ್ರವಾಸ ಕಥನ ರಸಾನಂದವನ್ನು ನೀಡುವುದಿಲ್ಲ. ಗಾಯಗೊಂಡವರ ಸಂಕಟಗಳು ಪ್ರತಿ ಕಥನದಲ್ಲಿ ಹಂತದಲ್ಲಿಯೂ ಕಾಣುತ್ತೇವೆ.
ಕಥನ ಓದುತ್ತಾ ಹೋದಂತೆ, ಆಕ್ರೋಶ, ವಿಷಾದ ಉಂಟಾಗುತ್ತದೆ. ವ್ಯವಸ್ಥೆಯ ದುಸ್ಥಿತಿಯ ಬಗ್ಗೆ ಚಿಂತನೆಗೆ ಹಚ್ಚುತ್ತದೆ. ಇಂತಹ ಸಂದರ್ಭಗಳನ್ನು ಮೆಟ್ಟಿನಿಂತು ಜಗತ್ತಿಗೆ ಹೊಸ ಅರಿವು ಮೂಡಿಸಿದ ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರ ಚಿಂತನೆಗಳೇ ಲೋಕಕ್ಕೆ ಮಹಾಬೆಳಕು ಎಂಬ ಧ್ವನಿಯನ್ನು ಈ ಕಥನದಲ್ಲಿ ಕಾಣುತ್ತೇವೆ. ಅವರೇ ಹೇಳುವಂತೆ ‘ಈ ಪ್ರವಾಸ ಕಥನ ಕೇವಲ ರಸಾನಂದವನ್ನು ಮಾತ್ರ ನೀಡುವುದಿಲ್ಲ. ಬದಲಾಗಿ ಮತ್ತಷ್ಟು ಚಿಂತನೆಗೆ ಹಚ್ಚುತ್ತದೆ ಎಂದು ಭಾವಿಸಿದ್ದೇನೆ.’ ಆದ್ದರಿಂದ ಈ ಪ್ರವಾಸ ಕಥನ ನೋಡಿದ್ದನ್ನು ಮಾತ್ರ ದಾಖಲಿಸುವುದಿಲ್ಲ. ನೋಡುವಿಕೆಯನ್ನು ಶೋಧಕ್ಕೆ ಒಳಪಡಿಸುತ್ತದೆ. ಲಂಡನ್, ರ‍್ಲೆಂಡ್ ಪ್ರವಾಸ ಸಂದರ್ಭದಲ್ಲಿ ನನಗೆ ಸ್ಪಷ್ಟವಾದ ಇನ್ನೊಂದು ಸಂಗತಿಯೆಂದರೆ ನಾನು ಎಲ್ಲಿಯೇ ಇದ್ದರೂ, ಯಾವುದೋ ಪ್ರದೇಶದ ಗಾಳಿಯನ್ನು ಸೇವಿಸುತ್ತಿದ್ದರೂ, ಮತ್ತಾವುದೋ ನದಿಯ ನೀರನ್ನು ಕುಡಿಯುತ್ತಿದ್ದರೂ, ಸೂರ್ಯಮುಳುಗದ ನಾಡಿನಲ್ಲಿ ಸೂರ್ಯನ ರಶ್ಮಿಗಳ ಸ್ಪರ್ಶವಾಗುತ್ತಿದ್ದರೂ ನನ್ನ ಬದುಕು ರೂಪುಗೊಂಡ ಬೇರುಗಳು ಸದಾ ನನ್ನನ್ನು ಕಾಡುತ್ತಿರುತ್ತವೆಯೆನ್ನುವುದು. ಅದಕ್ಕಾಗಿಯೇ ನಾನು ಅಲ್ಲಿನ ವಾತಾವರಣವನ್ನು, ಅಲ್ಲಿನ ನೀರನ್ನು, ಅಲ್ಲಿನ ಸೂರ್ಯ ಚಂದ್ರನನ್ನು ವರ್ಣಿಸುವ ಗೋಜಿಗೆ ಹೋಗಿಲ್ಲ. ನನ್ನ ನೆಲದ ಗಾಳಿ, ನನ್ನ ನೆಲದ ನೀರು, ನನ್ನ ನೆಲದ ಸೂರ್ಯ ಕಿರಣಗಳನ್ನು ಅವುಗಳೊಂದಿಗೆ ಮುಖಾಮುಖಿಯಾಗಿಸಿದ್ದೇನೆ. ಅವಕಾಶ ಸಿಕ್ಕಾಗ ಅನುಸಂಧಾನವನ್ನೂ ಮಾಡಿದ್ದೇನೆ. ಆ ಮೂಲಕ ನನ್ನ ಆಲೋಚನೆಗಳನ್ನು ಅರ್ಥಪೂರ್ಣವಾಗಿಸಿ ಕೊಳ್ಳಲು ಪ್ರಯತ್ನಿಸಿದ್ದೇನೆ. ಹಾಗಾಗಿ ಕೇವಲ ನಿಂತ ನೆಲವನ್ನು ಮಾತ್ರ ಅವಲೋಕಿಸದೆ ನಡೆದ ನೆಲವನ್ನೂ ಪರಾಮರ್ಶಿಸಿದ್ದೇನೆ. ಇದು ಪ್ರವಾಸ ಕಥನದಂತಹ ಬರಹಗಳಲ್ಲಿ ಸಾಧ್ಯವೇ? ಎಂದು ಕೇಳಿದವರಿಗೆ ನನ್ನ ಅನುಭವಗಳೇ ಉತ್ತರಗಳು. ಅದಕ್ಕೂ ಮಿಕ್ಕಿದ ವಿಶ್ಲೇಷಣೆ ಓದುಗರಿಗೆ ಬಿಟ್ಟದ್ದು. ದಕ್ಕಿದ ಅನುಭವಗಳ ನಿರೂಪಣೆ ಮಾತ್ರ ನನ್ನದು.’ ಎಂದು ತಮ್ಮ ಪ್ರವಾಸ ಕಥನದ ಆಶಯವನ್ನು ಸ್ಪಷ್ಟಪಡಿಸಿದ್ದಾರೆ.

ಇಡೀ ಕಥನದಲ್ಲಿ ಕೇವಲ ಸಂಬ್ರಮ ಮಾತ್ರವಿಲ್ಲ. ಜೊತೆಗೆ ವಿಷಾದ, ದುಃಖ, ಜಾಗೃತಿ, ಚಿಂತನೆ, ಭವಿಷ್ಯದ ಎಚ್ಚರ ಇದೆ. ಇಗ್ಲೆಂಡ್ ಮತ್ತು ರ‍್ಲೆಂಡ್‌ನ ಯಾವುದೇ ಪ್ರದೇಶಕ್ಕೆ ಹೋದರೂ ಕಾಣುವುದು ಅಲ್ಲಿಯ ಸುಂದರ ತಾಣಗಳ ಪ್ರತಿಬಿಂಬದ ಜೊತೆಗೆ ತನ್ನತನದ ಬೇರುಗಳ ಪ್ರತಿಬಿಂಬವೂ ಪ್ರತಿಧ್ವನಿಯಾಗಿ ಬರುತ್ತದೆ. ನನ್ನ ಪ್ರತಿಬಿಂಬವನ್ನು ಕಾಣುವಲ್ಲಿಯೇ ನನ್ನ ಬದುಕನ್ನೂ ಕಂಡೆ, ಆ ಬದುಕಿನ ಪರಂಪರೆಯನ್ನೂ ಕಂಡೆ. ಆ ಪ್ರತಿಬಿಂಬದಲ್ಲಿ ಲಂಡನ್ನಿನ ನೀಲಿ ಆಕಾಶದೊಂದಿಗೆ ನನ್ನೂರಿನ ಹಟ್ಟಿ, ಕೇರಿಗಳೂ ಥಟ್ಟನೆ ಕಣ್ಣೆದುರಿಗೆ ಬಂದವು. ಅಲ್ಲಿ ಈಜಾಡುವ ಸ್ವಚ್ಛಂದ ಜಲಚರಗಳೊಂದಿಗೆ ನನ್ನ ನೆಲದಲ್ಲಿ ಬಂಧಿತವಾದ ಬದುಕುಗಳ ದರ್ಶನವೂ ಆಯಿತು. ಆ ನದಿಯ ತಣ್ಣನೆಯ ಹರಿಯುವಿಕೆಯಲ್ಲಿ ನನ್ನವರ ನೊಂದ ಆಕ್ರಂದನಗಳು ಕೇಳಿಸಿದವು. ಹೀಗಾಗಿ ಈ ಪ್ರವಾಸ ಕಥನವನ್ನು ನೋಡಿದ ಸ್ಥಳಗಳ ಪರಿಯಚವೆಂದು ಭಾವಿಸಿ ಓದಲು ತೊಡಗಬೇಡಿ. ಅದು ನಿರಾಸೆಯನ್ನು ತರಿಸಬಹುದು. ಆದರೆ ಅದಕ್ಕೂ ಮಿಗಿಲಾದ ಭಾವದಲ್ಲಿ ಓದಿದರೆ ಒಂದಷ್ಟು ಭಿನ್ನ ನೆಲೆಯ ಚಿಂತನೆ ಮೂಡಬಲ್ಲದು ಎನ್ನುವುದೇ ನನ್ನ ಕಳಕಳಿ’ ಎಂಬ ಲೇಖಕರ ಮಾತುಗಳನ್ನು ಮನಸ್ಸಲ್ಲಿಟ್ಟುಕೊಂಡು ಈ ಕಥನವನ್ನು ಗಮನಿಸಬೇಕು.
ಇಂಗ್ಲೆಂಡ್ ನಲ್ಲಿ ಯಾವುದೇ ಸ್ಥಳ, ಕಾಲೇಜು, ಗ್ರಂಥಾಲಯ, ಲೇಖಕರ ಮನೆ ನೋಡಲಿ ಅಲ್ಲಿ ಭಾರತೀಯ ಸಮುದಾಯದ ಅಪಮಾನಿತ ಸಂಕಟಗಳೇ ಕಾಣುತ್ತವೆ.ನಾವ್ಯಾಕೆ ಹೀಗೆ’ ಎಂಬ ಪ್ರಶ್ನೆ ಕಾಡುತ್ತದೆ. ಇಂತಹ ಸಂಕಟ ಅನುಭವಿಸಿದ ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರ ಚಿಂತನೆಗಳೇ ಲೇಖಕರಿಗೆ ನೆನಪಾಗುತ್ತವೆ. ಆ ನೆನಪು, ಚಿಂತನೆಗಳು ಸಕಾಲಿಕವೂ ಆಗಿವೆ. ಬಾಬಾಸಾಹೇಬ ಅಂಬೇಡ್ಕರ್ ಅವರ ಬದುಕಿನ ಘಟನೆಗಳನ್ನು ಈ ಪ್ರವಾಸ ಕಥನದಲ್ಲಿ ದಾಖಲಿಸಿದ್ದಾರೆ. ‘ಹಿಂದೂ' ಆಂಗ್ಲ ದೈನಿಕ ಪತ್ರಿಕೆಯ ಸಂಪಾದಕರು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಭೇಟಿಯಾಗಿ ಒಂದು ಪ್ರಶ್ನೆ ಕೇಳುತ್ತಾರೆ. ನೀವು ಅಸ್ಪೃಶ್ಯ ಸಮುದಾಯದ ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದವರು. ಆದರೆ, ನೀವು ಮಾತ್ರ ಯಾವ ಮಹಾರಾಜನಿಗೂ ಕಡಿಮೆ ಇಲ್ಲದಂತೆ ದುಬಾರಿ ಸೂಟನ್ನು ಹಾಕುತ್ತೀರಿ, ಇಂತಹ ಸ್ಟಾರ್ ಹೋಟೆಲಿನಲ್ಲಿ ತಂಗುತ್ತೀರಿ. ಆದರೆ, ಗಾಂಧೀಜಿಯವರು ವೈಶ್ಯರಾಗಿ ಉನ್ನತ ಜಾತಿಯ ಕುಟುಂಬದಲ್ಲಿ ಜನಿಸಿದ್ದರೂ ಸರಳವಾದ ಉಡುಪು ಧರಿಸುತ್ತಾರೆ. ಅಸ್ಪೃಶ್ಯರ ಕಾಲೋನಿಯಲ್ಲಿ ತಂಗುತ್ತಾರೆ. ನಿಮ್ಮಿಬ್ಬರ ಮಧ್ಯ ಇರುವ ಈ ವಿರೋಧಾಭಾಸವು ನನಗೇಕೊ ಅರ್ಥವಾಗುತ್ತಿಲ್ಲ, ತಿಳಿಸಿ ಎನ್ನುತ್ತಾರೆ.
ಆಗ ಬಾಬಾಸಾಹೇಬ ಅಂಬೇಡ್ಕರ್ ಅವರು ‘ನೀವು ಹೇಳುವುದು ಸತ್ಯ. ನನ್ನ ಸಮುದಾಯದವರು ಸಾವಿರಾರು ವರ್ಷಗಳಿಂದ ಬಡತನದಲ್ಲಿಯೆ ಬಂದಿದ್ದಾರೆ. ಜಾತಿಕಾರಣಕ್ಕಾಗಿ ಅವಮಾನಕ್ಕೊಳಗಾಗಿದ್ದಾರೆ. ಅವರಿಗೆ ಉಡಲು ಸರಿಯಾದ ಬಟ್ಟೆ ಸಿಕ್ಕಿರುವುದಿಲ್ಲ. ಒಳ್ಳೆಯ ಆಹಾರ ಕೂಡ ಸಿಕ್ಕಿಲ್ಲ. ಆದರೆ, ನಾನು ದುಬಾರಿ ಬಟ್ಟೆ ಹಾಕುತ್ತೇನೆ. ರಾಜಗೃಹದಂತಹ ಬಂಗಲೆ ಕಟ್ಟಿಸಿದ್ದೇನೆ. ಕಾರಣವೇನೆಂದರೆ, ಗಾಂಧಿ ಸಮುದಾಯ ಗಾಂಧಿಯನ್ನು ಅನುಸರಿಸುವುದಿಲ್ಲ. ತನ್ನ ಸಮುದಾಯ ತನ್ನಂತೆ ಫಕೀರರಾಗಬೇಕೆಂಬ ಉದ್ದೇಶ ಗಾಂಧಿಗೂ ಇಲ್ಲ. ಆದರೆ, ನನ್ನ ಸಮುದಾಯ ನನ್ನಂತೆಯೆ ಬದುಕಬೇಕೆಂಬುದು ನನ್ನ ಮಹತ್ವಾಕಾಂಕ್ಷೆಯಾಗಿದೆ. ನಾನು ನನ್ನ ಸಮುದಾಯದ ಕಾಲೋನಿಗೆ ಹೋಗುವುದಿಲ್ಲ, ಅವರನ್ನೇ ನಾನಿರುವ ಸ್ಥಳಕ್ಕೆ ಕರೆಸಿಕೊಳ್ಳುತ್ತೇನೆ. ನನ್ನನ್ನು ಕಾಣಲು ಬಂದ ಅವರು ಜೀವನದಲ್ಲಿ ಮೊಟ್ಟ ಮೊದಲ ಬಾರಿ ಇಂಥ ಐಶಾರಾಮಿ ಪಂಚತಾರಾ ಹೊಟೇಲ್ ನೋಡುತ್ತಾರೆ. ಇರುವ ಬಟ್ಟೆಗಳಲ್ಲಿಯೆ ಶುದ್ಧವಾದ ಬಟ್ಟೆ ಹಾಕಿಕೊಂಡು ಬರುವ ನನ್ನವರು ಇಲ್ಲಿನ ಸೌಂದರ್ಯವನ್ನು ನೋಡಿ, ಇಂಥ ಸುಖವನ್ನು ಅನುಭವಿಸಬೇಕೆಂಬ ಸಣ್ಣ ಆಸೆ ಅವರಲ್ಲಿ ಹುಟ್ಟುತ್ತದೆ. ಹಾಗೇ ನನ್ನ ನೋಡಿದ ಮೇಲೆ ನಾವೂ ಹೀಗೆ ಆಗಬೇಕೆಂಬ ಸಣ್ಣ ಸಣ್ಣ ಆಲೋಚನೆಗಳು ಅವರಲ್ಲಿ ಹೊಳೆಯುತ್ತವೆ. ನಮ್ಮ ಸಮುದಾಯದಲ್ಲಿ ಹುಟ್ಟಿದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಇಂತಹ ಸ್ಥಾನಕ್ಕೆ ಹೋಗುವುದಾದರೆ, ನಾವೂ ಅವರ ಹಾಗೆ ಆಗಬಹುದುಲ್ಲವೆ? ನಾವು ಓದಲಿಲ್ಲ, ಪರವಾಗಿಲ್ಲ. ನಮ್ಮ ಮಕ್ಕಳಾದರೂ ಓದಲಿ ಎಂಬ ವಿಚಾರಗಳು, ಆಲೋಚನೆಗಳು ಅವರಲ್ಲಿ ಗರಿಗೆದರುತ್ತವೆ. ಆದರೆ ಗಾಂಧಿ ಇಂತಹ ಸಣ್ಣ ಆಸೆಯೂ ಹುಟ್ಟದ ಹಾಗೆ ನನ್ನ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ. ನನ್ನ ಸಮುದಾಯಗಳ ಕಾಲೋನಿಗೆ ಹೋಗಿ ಭಂಗಿ ಕೆಲಸ, ಕಸಗುಡಿಸುವ ಕೆಲಸ ಮಾಡುತ್ತಾರೆ. ಇದನ್ನು ನೋಡುವ ನನ್ನ ಜನರು ‘ಇಂತಹ ಉನ್ನತ ಕುಲದಲ್ಲಿ ಹುಟ್ಟಿದ ಗಾಂಧಿಯೇ ಭಂಗಿ ಕೆಲಸ ಮಾಡುತ್ತಿರಬೇಕಾದರೆ ನಾವ್ಯಾಕೆ ಮಾಡಬಾರದು? ಗಾಂಧಿಯೇ ಚಿಂದಿಬಟ್ಟೆ ಉಟ್ಟು ಫಕೀರನಂತೆ ಓಡಾಡಬೇಕಾದರೆ, ಒಳ್ಳೆಯ ಬಟ್ಟೆಗಳು ನಮಗ್ಯಾಕೆ ಬೇಕು? ಎಂದು ಭಾವಿಸುತ್ತಾರೆ. ಗಾಂಧಿ ಮಾಡುತ್ತಿರುವ ಮೋಸವಿದು. ನನ್ನ ಜನರಲ್ಲಿ ಮಹತ್ವಾಕಾಂಕ್ಷೆಯೇ ಹುಟ್ಟದ ಹಾಗೆ ಮಾಡುತ್ತಿದ್ದಾರೆ' ಎಂದು ಹೇಳಿದ್ದಲ್ಲದೆ, ‘ಮಹತ್ವಾಕಾಂಕ್ಷೆ ಇಲ್ಲದ ಸಮುದಾಯವನ್ನು ಆಯುಧಗಳಿಲ್ಲದೆ ಗೆಲ್ಲಬಹುದು' ಗಾಂಧಿ ನನ್ನ ಸಮುದಾಯವನ್ನು ಅದೇ ಹಾಳು ಕೊಂಪೆಯಲ್ಲಿ ಬಂಧಿಸಿಡುವ ಹುನ್ನಾರ ಮಾಡುತ್ತಿದ್ದಾರೆ. ನನ್ನ ಜನ ಹೇಗಿರಬೇಕೆಂದರೆ, ನನ್ನ ಹಾಗೆಯೇ ಇರಬೇಕು. ನಾನೇ ಅವರಿಗೆ ರೋಲ್ ಮಾಡಲ್' ಎಂದು ಅಂಬೇಡ್ಕರ್ ಹೇಳಿದ್ದಾರೆ ಎನ್ನುತ್ತಿದ್ದಂತೆ ಎದುರಿಗಿದ್ದ ಗೆಳೆಯರು ಬೆಕ್ಕಸಬೆರಗಾದರು. ಬಾಬಾಸಾಹೇಬರಿಗೆ ಖಚಿತ ನಿಲುವಿತ್ತು, ಸ್ಪಷ್ಟ ಗುರಿಯೂ ಇತ್ತು ಎಂದು ವಿಕ್ರಮ ವಿಸಾಜಿ ಹೇಳಿದರು.’
ಇಂತಹ ಚಿಂತನೆಗಳನ್ನು ಸಂದರ್ಭೋಚಿತವಾಗಿ ಕಥನದಲ್ಲಿ ತಂದಿದ್ದಾರೆ. ಇದರಿಂದ ಕಥನಕ್ಕೆ ತಾತ್ವಿಕತೆಯ ಆಯಾಮ ದಕ್ಕಿದೆ. ಥಾಮ್ಸ್ ವಿಲಿಯಂ ಜಾನ್, ರವೀಂದ್ರನಾಥ್ ಟಾಗೋರ್, ವರ್ಜೀನಿಯಾ ವೂಲ್ಫ್, ಲಂಡನ್ ಸ್ಕೂಲ್ ಆಫ್ ಓರಿಯಂಟಲ್, ಬಸವ ಪ್ರತಿಮೆ, ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಕೇಂಬ್ರಿಜ್ ವಿಶ್ವವಿದ್ಯಾಲಯ, ವಿಲಿಯಂ ಶೇಕ್ಸ್ ಪಿಯರ್, ವಿಲಿಯಂ ಬಟ್ಲರ್ ಯೇಟ್ಸ್, ಜೇಮ್ಸ್ ಹೆನ್ರಿ ಕಸಿನ್ಸ್, ಜೇಮ್ಸ್ ಆಗಸ್ಟೀನ್ ಅಲೋಸಿಯಸ್ ಜಾಯ್ಸ್, ಆಸ್ಕರ್ ಫಿಂಗಲ್ ಓಫ್ಲಾಹೆರ್ಟಿ ವಿಲ್ಡ್ ವೈಲ್ಡ್, ಎಡ್ಮಂಡ್ ಜಾನ್ ವಿಲ್ಲಿಂಗ್ಟನ್ ಸಿಂಜ್, ಜಾರ್ಜ್ ಬರ್ನಾಡ್ ಶಾ, ಡಬ್ಲಿನ್ ಸಿಟಿ ವಿಶ್ವವಿದ್ಯಾಲಯ ಈ ಸ್ಥಳ, ವ್ಯಕ್ತಿಗಳ ಮನೆ, ವಿಭಾಗಗಳನ್ನು ನೋಡಿದ ಲೇಖಕರು. ಇವುಗಳ ಚರಿತ್ರೆಯನ್ನು ದಾಖಲಿಸಿದ್ದಾರೆ. ಈ ಪ್ರದೇಶಗಳನ್ನು ನೋಡುತ್ತಾ ಭಾರತದ ಪರಸ್ಥಿತಿಯನ್ನು ಅವಲೋಕಿಸುತ್ತಾರೆ.ನಮ್ಮ ದೇಶದಲ್ಲಿ ಮಹಾ ವ್ಯಕ್ತಿಗಳ ತತ್ವಗಳನ್ನು ನಿರಂತರ ಕೊಲ್ಲುತ್ತಿರುವುದು, ಅಸ್ಪೃಶ್ಯತೆ ಕಾರಣಕ್ಕಾಗಿ ದಲಿತರನ್ನು ನಿರಂತರ ಶೋಷಣೆಗೊಳಪಡಿಸುತ್ತಿರುವುದು; ಸಂವಿಧಾನ ಬದಲಿಸುವ ಸಲುವಾಗಿಯೆ ನಾವು ಅಧಿಕಾರಕ್ಕೆ ಬಂದಿದ್ದು ಎಂದು ಹೇಳುತ್ತ ಅಂಬೇಡ್ಕರ್ ತತ್ವಚಿಂತನೆ, ಅವರ ರಾಷ್ಟ್ರೀಯ ಬದ್ಧತೆಯನ್ನು ಪ್ರಶ್ನಿಸುವುದು ನೆನೆದು ಎಲ್ಲರೂ ಮಮ್ಮಲ ಮರುಗಿದೆವು. ಬುದ್ಧ-ಗಾಂಧಿ-ಅಂಬೇಡ್ಕರ್ ಅವರಿಂದಲೆ ಜಾಗತಿಕ ಮಟ್ಟದಲ್ಲಿ ದೇಶದ ಘನತೆ, ಗೌರವ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿರುವುದು ನಾವೆಲ್ಲ ಮರೆತಂತಾಗಿದೆ. ವಿದೇಶಕ್ಕೆ ಬಂದರೆ ಬುದ್ಧನ ನಾಡಿನಿಂದ ಬಂದವರು ನಾವು, ನಮ್ಮದು ಗಾಂಧಿ ನಾಡು ಎಂದು ಬಿಂಬಿಸಿಕೊಳ್ಳುವ ನಮ್ಮ ರಾಜಕಾರಣಿಗಳ ಬೂಟಾಟಿಕೆ ಒಂದೆಡೆಯಾದರೆ, ಇನ್ನೊಂದೆಡೆ ದೇಶೀ ನೆಲೆಯಲ್ಲಿ ಬಾಯಿ ತುಂಬ ರಾಮನೆಂದು ಹೇಳಿ ಬಗಲಲ್ಲಿ ಚೂರಿ ಇಟ್ಟುಕೊಳ್ಳುವ ರಾಜಕೀಯ ನಾಯಕರ ಈ ದ್ವಂದ್ವನೀತಿ ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾದವುಗಳೆ. ವರ್ತಮಾನದ ಈ ಬಗೆಯ ಎಲ್ಲ ತವಕ ತಲ್ಲಣಗಳೇ ನಮ್ಮೆಲ್ಲರ ಆಂತರ್ಯದಲ್ಲಿ ಬಹುವಾಗಿ ಸಂಘರ್ಷ ಮಾಡುತ್ತಿದ್ದವು, ಅವುಗಳಿಗೆ ಉತ್ತರ ಕಂಡುಕೊಳ್ಳುತ್ತ ನಡೆದೆವು.’
ಲೇಖಕರು ತಮ್ಮ ವೃತ್ತಿ ಜೀವನದಲ್ಲಿ ಅನುಭವಿಸಿದ ಅಸ್ಪೃಷ್ಯತೆಯ ಕರಾಳ ಅಪಮಾನವನ್ನು ದಾಖಲಿಸಿದ್ದಾರೆ. ಜಾತ್ಯತೀತರಾಗಬೇಕಾದ ಅಧ್ಯಾಪಕರೇ ಹೇಗೆ ಅಸ್ಪೃಷ್ಯತೆಯನ್ನು ಆಚರಿಸುತ್ತಿದ್ದರು ಎಂಬುದನ್ನು ವಿಷಾದದಿಂದ ಹೇಳಿಕೊಂಡಿದ್ದಾರೆ. ಲೇಖಕರು ಕುಳಿತ ಖುರ್ಚಿಯನ್ನು ತೆಗೆಸಿ ಬೇರೊಂದು ಖುರ್ಚಿಯನ್ನು ಹಾಕಿಸಿಕೊಳ್ಳುತ್ತಾರೆ. ಯಾಕೆ ಎಂದು ನೋಡಿದರೆ, ಅದು ಅಸ್ಪೃಷ್ಯರು ಬಳಸಿದ ಖುರ್ಚಿ ಎಂಬುದು ಗೊತ್ತಾಗುತ್ತದೆ. ಇಂತಹ ಮೂರ್ಖರ ನಡುವೆ ಅಸ್ಪೃಷ್ಯತೆಯ ನಾಶ ಹೇಗಾಗುತ್ತದೆ ಎಂಬ ಪ್ರಶ್ನೆಯನ್ನು ಎತ್ತುತ್ತಾರೆ. ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ಇದು. ವಿದ್ಯಾರ್ಥಿಗಳಿಗೆ ಜಾತ್ಯತೀತೆಯ ಪಾಠ ಹೇಳಬೇಕಾದ ಅಧ್ಯಾಪಕರೇ ಅಸ್ಪೃಷ್ಯರ ಬಗ್ಗೆ ಇಷ್ಟೊಂದು ಮಡಿವಂತಿಕೆ ಇದ್ದರೆ ಹೇಗೆ ಎಂಬ ಪ್ರಶ್ನೆಯೂ ಕಾಡುತ್ತದೆ. ಈ ಕಾಲದಲ್ಲಿಯೇ ಈ ಸ್ಥಿತಿ ಇದೆ. ಇನ್ನೂ ಬಾಬಾಸಾಹೇಬ ಅಂಬೇಡ್ಕರ್ ಕಾಲ ಅಸ್ಪೃಷ್ಯರ ಪಾಲಿಗೆ ಇನ್ನೆಷ್ಟೂ ಕರಾಳವಾಗಿತ್ತು ಎಂಬುದನ್ನು ಯೋಚಿಸಬೇಕಾಗುತ್ತದೆ. ತಮ್ಮ ಜ್ಞಾನದ ಮೂಲಕ ಇದೆಲ್ಲವನ್ನು ದಾಟಿ ಬಂದ ಬಾಬಾಸಾಹೇಬ ಅಂಬೇಡ್ಕರ್ ಅವರೇ ನಮಗೆಲ್ಲಾ ಮಾದರಿಯಾಗಬೇಕೆಂದು ಹೇಳುತ್ತಾರೆ.
ಈ ಕಥನದಲ್ಲಿ ಹೃದಯ ಕಲುಕುವ ಸಂಗತಿಯೊAದಿದೆ. ಇವರನ್ನು ವಿಮಾನ ನಿಲ್ದಾಣದಿಂದ ಹೊಟೇಲ್ ಗೆ ಕರೆದುಕೊಂಡು ಹೋಗುವ ವಾಹನ ಚಾಲಕ ಬಿಹಾರದವನು. ಆತ ಲೇಖಕರಿಗೆ ತನ್ನ ಜೀವನ ಹಿನ್ನಲೆ ಕುರಿತು ಹೇಳುವ ದುರಂತ ಕಥನ ಹೃದಯವನ್ನು ಒದ್ದೆಯಾಗಿಸುತ್ತದೆ. ನಮ್ಮ ದೇಶ ಪಾಲಿಸಿಕೊಂಡು ಬಂದ ಅಸ್ಪೃಷ್ಯತೆಯ ಭಯಾನಕ ಚಿತ್ರಣವನ್ನು ಕಣ್ಣೆದುರಿಗೆ ತರುತ್ತದೆ.
‘ಇರ್ಲಿ ಹೇಳು! ನಾನು ಕೇಳಬೇಕು’ ಎಂದು ಜೋರು ಮಾಡಿ ಅವನತ್ತ ನೋಡಿದೆ.
‘ನಾನಿಲ್ಲದ ಊರಲ್ಲಿ ಏನಾಯಿತು ಅನ್ನುವುದು ನಮ್ಮ ಮಾಲಿಕ ಕುಲಕರ್ಣಿಯವರು ಪತ್ರ ಬರೆದು ತಿಳಿಸಿದ್ದರು. ಅದು ನನ್ನ ಬಾಯಲ್ಲಿ ಹೇಳಲಾರೆ, ನನ್ನಿಂದ ದುಃಖ ತಡೆಯಲು ಆಗಲಾರದು. ಅದಕ್ಕಾಗಿ ನೀವೇ ಓದಿ ಸರ್’ ಎಂದು ಪತ್ರ ನನ್ನ ಕೈಗಿಟ್ಟ, ಪತ್ರ ಕೈಗೆ ಕೊಡುವಾಗ ಅವನ ಕೈ ನಡುಗುತ್ತಿತ್ತು. ಕಣ್ಣು ತುಂಬಿಕೊAಡಿದ್ದವು.
‘ಯಾಕಪ್ಪಾ ಹೀಗೆ’
‘ಸಾರಿ, ಸರ್ ನೀವೇ ಓದಿ…..’
ಎಂದು ಮನದಲ್ಲಿ ಕ್ರೋಧ ತುಂಬಿಕೊAಡಿದ್ದರೂ ತೋರಗೊಡದೆ ಮೌನಿಯಾದ.
‘ಭೀಮಾ! ಈ ಸುದ್ದಿ ತಿಳಿಸಲು ನನಗೆ ತುಂಬ ನೋವಾಗುತ್ತದೆ. ಹೇಳದೆ ವಿಧಿಯಿಲ್ಲ. ನಮ್ಮಂಥ ಉಚ್ಚ ಜಾತಿಯವರು ಮಾಡಿದ ಹೀನಕೃತ್ಯ ಬರೆಯಲು ಹೇಸಿಗೆಯಾಗುತ್ತಿದೆ. ಆದರೂ ಬರಿಯಲೇಬೇಕು, ವಿಧಿಯಿಲ್ಲ. ಒಂದು ದಿನ ಊರಿನ ಪ್ರಮುಖ ನಿಮ್ಮ ಕೇರಿಗೆ ಕೂಲಿ ಆಳುಗಳನ್ನು ಕೆಲಸಕ್ಕೆ ಕರೆಯಲು ಹೋಗಿದ್ದ. ಆಳುಗಳಿಗೆ ಗೊತ್ತು ಮಾಡಿ, ಕೆಲಸಕ್ಕೆ ಬೇಗ ಬರಲು ಹೇಳಿ ಹೊರಡುವಾಗ ನಿಮ್ಮ ಮನೆಯ ಮುಂದೆ ಹಾದು ಹೊರಟಿದ್ದನಂತೆ. ನಿಮ್ಮ ನಾಯಿಗಳು ಅವನನ್ನು ಕಂಡು ಬೊಗಳಿವೆ. ಆಗ ನಿಮ್ಮಪ್ಪ ಅಲ್ಲೇ ಕೂತಿದ್ದನಂತೆ. ‘ಏನಲೆ ಮಗನೆ, ನಿನ್ನ ನಾಯಿ ನನ್ನ ನೋಡಿ ಬೊಗಳುತ್ತಿದೆ, ಹೀಗಿದ್ದು ಸುಮ್ಮನಿದ್ದೀಯಾ! ಸೊಕ್ಕಾ ಮಕ್ಕಳಾ! ಮೈಯಾನ ತಿಂಡಿಯೇನು?’ ಎಂದು ಗದರಿಸಿದಾಗ, ‘ಇಲ್ಲ ಒಡೆಯಾ, ಅದು ನಾಯಿ, ನಾನ್ಹೇಗೆ ಬೊಗಳಲು ಹೇಳಲಿ? ಅದು ಮೊದಲು ನಿಮ್ಮ ನಾಯಿ’ ಎಂದು ಹೇಳುತ್ತಿದ್ದಂತೆ. ‘ಯಲಾ ಮಗನೆ, ನನ್ನ ನಾಯಿ ಎಂದು ಅವಮಾನಿಸಬೇಕೆಂದು ಹೇಳ್ತಿಯಾ? ಅದು ಎಂದು ನಿಮ್ಮೆಂಜಲು ತಿಂತು ಅಂದೇ ನಿಮ್ಮ ನಾಯಿ!’ ಎಂದು ಹೊಡೆಯಲು ಮುಂದಾದಾಗ ನಿನ್ನ ತಂಗಿ ಅಡ್ಡ ಬಂದಿದ್ದಾಳೆ, ‘ಹೊಡಿಯಬೇಡಿ, ನಮ್ಮ ತಂದೆ ಕಾಲಿಲ್ಲದ ಅಸಹಾಯಕ, ವಯಸ್ಸಾದವನು’ ಎಂದು ಬೇಡಿಕೊಂಡಿದ್ದಾಳೆ. ದುರಹಂಕಾರದಿAದ ನೋಡಿದ್ದಲ್ಲದೆ ಅವಳನ್ನು ಎಳದಾಡಿ ದುರ್ವರ್ತನೆ ತೋರಿ, ‘ನೋಡಕೊಳ್ತಿನಿ ಮಗನೆ’ ಎಂದು ಗದರಿ ಹೋಗಿದ್ದಾನೆ.
ಕೇರಿಯವರು ನಿಂತು ನೋಡುವುದು ಬಿಟ್ಟರೆ ಬೇರೇನು ಮಾಡಲು ಸಾಧ್ಯ? ಹೇಳು ಭೀಮಾ!. ಇಡೀ ದಿನ ಭಯದಲ್ಲಿ ಕಳೆದು ಆತಂಕದಲ್ಲಿಯೆ ಮಲಗಿದ್ದಾರೆ. ಸವರಾತ್ರಿ ಹೊತ್ತಿನಲ್ಲಿ ಸದ್ದಿಲ್ಲದೆ ಬಂದ ಕ್ರೂರಿಗಳು ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ, ನಡೆಯಲಾಗದ ನಿಮ್ಮ ತಂದೆ, ಅಸಹಾಯಕ ತಂಗಿ ಘಳಿಗಿ ಹೊತ್ತಿನಲ್ಲಿ ಸುಟ್ಟು ಬೂದಿಯಾಗಿದ್ದಾರೆ. ಊರಿಂದ ಬಂದ ನಿಮ್ಮ ಅಕ್ಕ, ಮಾವನ ರೋದನ ನನ್ನಿಂದ ನೋಡಲಿಕ್ಕಾಗಲಿಲ್ಲ. ಮುಂದಿನದು ಏನು ಹೇಳಲಿ? ನನ್ನ ಕಣ್ಣೀರು ಒತ್ತರಿಸಿ ಬಂದಿವೆ. ಏನು ಮಾಡಲಿ? ನ್ಯಾಯ ಕೊಡಿಸಲು ಕೋರ್ಟಿನಲ್ಲಿ ದಾವೆ ಹೂಡಿದೆ. ಆದರೆ ಸಾಕ್ಷಿಗಳಾಗಿದ್ದ ನಿಮ್ಮಕ್ಕ-ಮಾವನನ್ನೂ ಕತ್ತಲರಾತ್ರಿಯಲ್ಲಿ ಕೊಂದಿದ್ದಾರೆ….’ ಎಂಬ ಪದಕ್ಕೆ ಪತ್ರದ ಒಕ್ಕಣಿಕೆ ಮುಗಿದಿತ್ತು.
ಭೀಮ ಅಳುತ್ತ ಗಾಡಿ ನಡಿಸಲಾಗದೆ ರಸ್ತೆಯ ಬದಿಗೆ ನಿಲ್ಲಿಸಿದ್ದಾನೆ. ‘ಇದು ನನ್ನ ದುರಂತ ಕಥೆ ಸಾರ್’ ಎಂದಾಗ ತಾಳಲಾರದೆ ನಾನು ಅವನನ್ನು ತೆಕ್ಕೆಗೆ ಹಾಕಿಕೊಂಡು ರೋದಿಸಿ, ನನ್ನಷ್ಟಕ್ಕೆ ನಾನು ಸಮಾಧಾನ ಮಾಡಿಕೊಂಡು ಡ್ರೈವರ್ ಭೀಮನಿಗೆ ನೀರು ಕೊಟ್ಟು, ಮುಖ ತೊಳೆದುಕೊಳ್ಳಲು ಹೇಳಿದೆ. ಜೊತೆಗಿದ್ದ ಗೆಳೆಯರೆಲ್ಲರೂ ಭಾವುಕರಾದರು, ಭೀಮನನ್ನು ಸಂತೈಸಿ ಅಪ್ಪಿಕೊಂಡರು. ‘ಇದು ನಮ್ಮವರ ಗೋಳಿನ ಕಥೆ ಸರ್’ ಎಂದು ಮತ್ತೊಮ್ಮೆ ಹೇಳಿದ. ಅಮಾಯಕರ ಸ್ಥಿತಿಗಾಗಿ ನನ್ನ ರಕ್ತ ಕುದಿಯಹತ್ತಿತ್ತು.’ ಎಂದು ಲೇಖಕರು ಆಕ್ರೋಶಗೊಳ್ಳುತ್ತಾರೆ. ಆ ಭೀಮ ಲೇಖಕರಿಗೆ `ಸಾರ್ ನೀವು ಎಲ್ಲರಿಗೆ ಬಾಬಾಸಾಹೇಬ ಅಂಬೆಡ್ಕರ್‌ರನ್ನು ಓದಿಸಿ’ ಎಂಬ ಮಾತು ಈ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ.
ಈ ಪ್ರವಾಸ ಕಥನ ಈ ತಾತ್ವಿಕತೆಯಿಂದ ಕನ್ನಡದಲ್ಲಿ ವಿಭಿನ್ನವಾಗಿದೆ. ಇದು ಗಾಯಗಳೊಂದಿಗೆ ಅರಿವನ್ನು ಬಿತ್ತುವ ಪಯಣವೂ ಆಗಿದೆ.






0 Comments