ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ನಾ ಮೊಗಸಾಲೆ ಕವಿತೆಗಳು

ಡಾ ನಾ ಮೊಗಸಾಲೆ

1. ಕುದಿ ಎಸರು ಮತ್ತು ತೊಳೆದಿಟ್ಟ ಅಕ್ಕಿ

ಕೂಲಿ ಹೆಂಗಸು ಅವಳು ಅವರಿವರ ಮನೆಗೆಲಸ
ಮಾಡಿ ಬದುಕ ಕಟ್ಟಿದ್ದಾಳೆ ಕಚ್ಛೆ ಬಿಗಿದು
ಅವಳಿಗೊಬ್ಬಳು ಮಗಳು, ಗಂಡ ಆಗಲೆ ಸತ್ತು
ಹೋದರೂ, ಮಗಳಲ್ಲಿ ಜೀವವಿಟ್ಟು

ಮಗಳು ಶಾಲೆಗೆ ಹೋಗಿ ಓದಿ ದೊಡ್ಡವಳಾಗಿ
ಆಡಳಿತ ನಡೆಸಬೇಕೀ ದೇಶದಲ್ಲಿ
ಎನುವ ಕನಸಿನ ಬೆಟ್ಟದಲಿ ಮೂಡುವ ಸೂರ‍್ಯ
ಬಂದು ನಿಲ್ಲುವನವಳ ಅಂಗಳದಲಿ

ಬರಲಿಲ್ಲ ಇಂದೇಕೆ? ಎಂದು ಆ ದಿನ ಅವಳು
ಕೊರಳುದ್ದ ಮಾಡಿ ಕುಳಿತಳು ಸಂಜೆ ತನಕ
ಮಗಳ ಸಹಪಾಠಿಗಳ ಮನೆಗಳಿಗೆ ಓಡಾಡಿದರು
ಸಿಗಲಿಲ್ಲವಳ ಯಾವೊಂದು ವಿಷಯ

ಬಂದೇ ಬಂದಾಳೆಂಬ ಧೈರ್ಯದಲಿ ಒಲೆಯಲ್ಲಿ
ಎಸರಿಟ್ಟು ಮುಷ್ಠಿಯಕ್ಕಿಯ ತೊಳೆದು ಬದಿಯಲ್ಲಿ
ಕುಳಿತು ಧೇನಿಸಿದಳು ಪತಿಯ. ಇದ್ದರವನೀಗ
ಹೋಗಿ ಹುಡುಕುತ್ತಿದ್ದ ಆತಂಕದಲ್ಲಿ

ಇನ್ನೇನು ಕವಿದು ಕತ್ತಲು ಎನುವ ಕತ್ತಲಲಿ
ಓಡಿ ಬಂದವನೊಬ್ಬ ಅವಳ ಕರೆದು
ಹೇಳಿದನು. ‘ಕಡಿದಿದೆ ಅಕ್ಕ, ನಿಮ್ಮ ಮಗಳಿಗೆ ಹಾವು
ಹೇಗೆ ಹೇಳಲಿ ಈ ಬಾಯಿಂದ ನಾನು!’

ನೀರು ಕುದಿದುಕ್ಕಿತು ಒಲೆಯ ಮೇಲೆ, ಅವಳೊಳಗಿದ್ದ
ನೋವು ಒಲೆಯಾಗಿ ಹೋಯಿತು ಹೊತ್ತಲಿಕ್ಕೆ
ಎಸರುಕ್ಕಿ ಬೆಂಕಿ ನಂದಿತು. ಅಲ್ಲಿ ತೊಳೆದಿಟ್ಟ
ಅಕ್ಕಿ ಅಕ್ಕಿಯಾಗಿಯೆ ಇತ್ತು, ಅನ್ನವೂ ಆಗದೆ!

2. ಕಲಾಯಿ ಗಾಬ್ರು ಮತ್ತು ಹಳೆಚೊಂಬು

ಕಲಾಯಿ ಗಾಬ್ರು ಅಂದರೆ ಹಳೆ ಹಿತ್ತಾಳೆ
ಪಾತ್ರೆಗಳಿಗೆ ಕಲಾಯಿ ಹಾಕುವ ಚತುರ!
ಸಿಕ್ಕಿದ ಮೊನ್ನೆ ಸಂತೆಯಲಿ ಮೆತ್ತಗೆ ಮುಟ್ಟಿ ನನ್ನ
‘ಹೇಗಿದ್ದೀರಿ ಸ್ವಾಮಿ, ನೀವು?’ ಎನ್ನುತ್ತ

‘ಚೆನ್ನಾಗಿದ್ದೇನೆ; ನೀನು?’ ಎಂದು ವಿಚಾರಿಸಿದೆ
ಮೆಲ್ಲನೆ ನೀವಿ ಅವನ ಬೆನ್ನು
ಕೊಪ್ಪರಿಗೆಯೊಳಗೆ ತವರ ಕರಗಿ ಬೆಳಗುವ ಹಾಗೆ
ನಗುತ್ತ ಎಂದ ‘ಚೆನ್ನಾಗಿದ್ದೇನೆ ನಾನೂ’

‘ಬಾ ಮನೆಗೆ ಹೋಗುವ’ ಎಂದು ಒತ್ತಾಯಿಸಿ
ಕರೆತಂದೆ ಮನೆಗೆ, ಅವನ ಪರಿಚಯವ
ಮಾಡಬೇಕಿತ್ತು ನನ್ನವಳಿಗೆ, ಅವಳು ಹಳೆಚೊಂಬು
ಯಾಕೆಂದು ಕೇಳುವುದಕ್ಕೆ ಆಗಾಗ!

‘ಓ! ಇವನೊ! ನಾನೂ ನೋಡಿದ್ದಿದೆ ಸಂತೆಯಲಿ
ಒಮ್ಮೊಮ್ಮೆ’ ಎಂದು ವಿಚಾರಿಸಿದವಳವಳು ಅವನ
ಅವನಿಗೂ ಖುಷಿ ‘ಈಯಮ್ಮನೇ ನಿಮ್ಮವಳೊ?’
ಎಂದು ಒರೆದೂ ಕೊರೆದ ತನ್ನ ಪ್ರವರ

ಇಬ್ಬರೂ ಉಪಚರಿಸಿದೆವು ತಿಂಡಿತೀರ್ಥವ ಕೊಟ್ಟು
ಹೊರಟಾಗ, ಅವನ ಬಳಿ ಸಾರಿ
ಕೈ ಎತ್ತಿ ಕೊಡಲು ಮುಂದಾದೆ, ಆದರೆ ಆತ
ಕೈ ಮುಗಿದು ಹೇಳಿದ ಹಣವ ನಿರಾಕರಿಸಿ

‘ಇರಬೇಕಲ್ಲ, ನಿಮ್ಮ ಮನೆಯಲ್ಲಿ ಇನ್ನೂ
ನಾನೇ ಕಲಾಯಿ ಹಾಕಿರುವ ವಸ್ತು?’
ಹೌದೆಂದ ನಾನು, ತಂದು ತೋರಿಸಿದೆ
ಕಲಾಯಿ ಹಾಕಿಟ್ಟಿರುವ ಹಳೆಯ ಚೊಂಬು!!

ಗಾಬ್ರು ನಕ್ಕ ಮೋಡದೆಡೆಯಲಿ ಇರುವ ಹಾಗೆ
ಹೇಳಿದನು ‘ಬಾಲ್ಯದಲಿ ನೀವು ನನ್ನ
ಜೊತೆ ಇದ್ದು ತಿದಿ ಒತ್ತಿದ್ದು ಇದೆ. ಆ ಮೋಡ
ಇಳಿದು ತುಂಬುತ್ತಿದೆ ನನ್ನ ಮನೆಯ ಹಳೆ ಚೊಂಬು!

‍ಲೇಖಕರು Avadhi

5 May, 2021

2 Comments

  1. Vasundhara k m

    ತುಂಬಾ ಚೆನ್ನಾದ ಕವಿತೆಗಳು.

    • Prathibha

      ತೂಕದ ಕವಿತೆಗಳು , ಮಾತೇ ಕವಿತೆಯಾದಂತೆ ಸರಳ ಭಾಷೆಯಲ್ಲಿ ಸುಂದರ ಭಾವಗಳನ್ನು ಪ್ರಸ್ತುತ ಪಡಿಸಲಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading